ಪಿ ಪಿ ಉಪಾಧ್ಯ ಸರಣಿ ಕಥೆ 12- ಕಣ್ಣಂಚು ಒದ್ದೆಯಾಗಿತ್ತು…

ಪಿ ಪಿ ಉಪಾಧ್ಯ

12

ಕಣ್ಣಂಚು ಒದ್ದೆಯಾಗಿತ್ತು…

ಆ ಪತ್ರಿಕೆ ಅಪ್ಪನ ಮೇಲೆ ಎಂತಹ ಪ್ರಬಾವ ಬೀರಿತ್ತು ಎನ್ನುವುದೂ ಶಾಮನಿಗೆ ತಿಳಿದಿರಲಿಲ್ಲ. ಹಾಗೆ ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆಯೂ ಅವನಲ್ಲಿ ಇರಲಿಲ್ಲ ಎನ್ನುವುದು ಬೇರೆ ವಿಷಯ. ಅಷ್ಟು ಬುದ್ಧಿವಂತ ಅಪ್ಪನಿಗೆ ಇಂತಹ ಮಗನೇ ಎಂದು ಜನ ಸಂಶಯಪಡಬೇಕು ಅಷ್ಟು ಸಾಮಾನ್ಯರಲ್ಲಿ ಸಾಮಾನ್ಯದವನಾಗಿದ್ದ ಶ್ಯಾಮ. ಒಬ್ಬನೇ ಮಗ ಬೇರೆ.

ಈ ಅಪ್ಪನ ನಂತರ ಈ ಎಲ್ಲ ವ್ಯವಸ್ಥೆಯನ್ನು ನೋಡಿಕೊಂಡು ಹೋದಾನೆಯೇ ಎಂದು ಸಂದೇಹ ಪಟ್ಟಿದ್ದರು ಹತ್ತಿರದವರು. ಚಿಕ್ಕವನಿದ್ದಾಗ ಅಪ್ಪನೆಂದರೆ ಹೆದರಿಕೆ, ಬೆಳೆಯುತ್ತ ಬಂದ೦ತೆ ಆ ಹೆದರಿಕೆಯ ಜೊತೆ ಬೆರೆತ ಗೌರವ ಸೇರಿ ಅವನನ್ನು ಅಪ್ಪನಿಂದ ದೂರವೇ ಉಳಿಸಿದ್ದವು. ಅಷ್ಟೇ ಅಲ್ಲ ಅಪ್ಪನಿಂದ ಮಗ ಕಲಿತುಕೊಳ್ಳಬೇಕಾಗಿದ್ದ ವ್ಯವಹಾರದ ಜ್ಞಾನವೂ ಅವನಿಗೆ ಸಿಗದಂತೆ ಆಗಿತ್ತು. ಈ ಹೆದರಿಕೆ ಮತ್ತು ಗೌರವದ ಹೊರತಾಗಿಯೂ ಅವ ಅಪ್ಪನನ್ನು ದೂರದಿಂದಲೇ ನೋಡುತ್ತ ಮೆಚ್ಚುತ್ತಲೇ ಬಂದಿದ್ದ.

ಹಾಗೆಯೇ ಅಪ್ಪನಿಲ್ಲದ ವೇಳೆ ಅಪ್ಪ ಓದಿ ಮಡಿಸಿಟ್ಟಿರುತ್ತಿದ್ದ ಆ ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದ. ಮೊದ ಮೊದಲು ಅಲ್ಲಿ ಬರೆದದ್ದರ ತಲೆ ಬುಡವೇ ಅರ್ಥವಾಗಿರಲಿಲ್ಲ. ಕ್ರಮೇಣ ಅರ್ಥವಾಗತೊಡಗಿದಾಗ ಅದ್ಭುತ ಪ್ರಪಂಚವೊ೯ದೇ ಎದುರಾಗಿತ್ತು. ಆಗಾಗ್ಗೆ ಶಾಲೆಯಲ್ಲಿ ಮೇಷ್ಟರುಗಳು ಹೇಳಿದ್ದು ಮತ್ತು ಈಗ ಓದಿದ್ದರ ಜೊತೆಗೆ ತಾಳೆ ಹಾಕಿದಾಗ ಹೊರಗಡೆ ನಡೆಯುತ್ತಿದ್ದುದರ ಅರಿವು ಸ್ವಲ್ಪ ಸ್ವಲ್ಪವೇ ಆಗಿತ್ತು.

ತಾನು ಎರಡನೇ ತರಗತಿಯಲ್ಲಿದ್ದಾಗ ನಡೆದ ಮಹಾಯುದ್ಧ ಅದರ ನಂತರ ನಾಲ್ಕನೇ ತರಗತಿಯಲ್ಲಿದ್ದಾಗ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ.. ಒಂದೇ ಎರಡೇ.. ಹಾಗಾದರೆ ತಾನು ಎರಡರಿಂದ ನಾಲ್ಕಕ್ಕೆ ಬರಲು ಎರಡು ವರ್ಷದ ಬದಲು ನಾಲ್ಕು ವರ್ಷಗಳನ್ನೇ ತೆಗೆದುಕೊಂಡೆನೇ.. ಆಶ್ಚರ್ಯವಾಗಿತ್ತು. ಈಗಂತೂ ಎಂಟನೆಯ ತರಗತಿಯಲ್ಲಿದ್ದ. ಈ ವರ್ಷ ಪಬ್ಲಿಕ್ ಪರೀಕ್ಷೆ ಬರೆದರೆ ಸಾಕು ಇನ್ನು ಮುಂದೆ ಓದಬೇಕೆಂದಿಲ್ಲ ಮಾಣಿ. ಅವನೇನು ದಿವಾನಗಿರಿ ಮಾಡಬೇಕೇ. ಆಸ್ತಿ ಮನೆ ನೋಡಿಕೊಂಡರೆ ಸಾಕು.' ಎನ್ನುತ್ತಿದ್ದರು ಅಪ್ಪಯ್ಯ.

ಮುಂದೆ ಓದಬೇಕೆಂಬ ಮನಸ್ಸು ಇವನಿಗೂ ಇರಲಿಲ್ಲ. ಸ್ವಾತಂತ್ರö್ಯ ಬಂದ ಹೊಸತರಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರಭಾತ ಫೇರಿಗಳನ್ನು ನಡೆಸಿದ್ದನ್ನು ಕಂಡಿದ್ದಾನೆ. ಅಂತಹ ಮೆರವಣಿಗೆಗಳಲ್ಲಿ ಭಾಗವಹಿಸಿದ ಜನರನ್ನು ಅಪ್ಪ ಮನೆಗೆ ಕರೆಸಿ ಬೆಲ್ಲ ನೀರು ಕೊಟ್ಟು ಉಪಚರಿಸಿದ್ದನ್ನೂ ನೋಡಿದ್ದಾನೆ. ಹಾಗೆಂದು ಇವನೂ ಅಂತಹ ಒಂದು ಮೆರವಣಿಗೆಯಲ್ಲಿ ಭಾಗವಹಿಸಿ ಮನೆಗೆ ಬಂದರೆ ಅಪ್ಪ ಬೈದಿದ್ದರು.ಈ ವಯಸ್ಸಿಗೆ ಅದೆಲ್ಲ ಬೇಡ ನಿನಗೆ. ಮನೆ ವ್ಯವಹಾರ ನೋಡಿಕೊಳ್ಳುವುದನ್ನು ಕಲಿ’ ಎಂದು. ಅಂತಹ ಕಠಿಣರಾಗಿರಲಿಲ್ಲ ಅಪ್ಪ ಎನಿಸಿದರೂ ಅವರ ಆ ನಿಲುವು ಮತ್ತು ಸ್ವಾಭಾವಿಕವಾಗಿಯೇ ಇರುತ್ತಿದ್ದ ಆ ಸ್ವರದಲ್ಲಿನ ಗತ್ತು ಇವನನ್ನು ಹೆದರಿಸಿತ್ತು. ಅಂದಿನಿ೦ದ ಪ್ರಭಾತ ಫೇರಿಯ ಹೆಸರೆತ್ತಿದರೂ ನಡುಗುತ್ತಿದ್ದ.

ಅದೇ ಸ್ವಾತಂತ್ರ್ಯ ಬಂದು ಎಲ್ಲ ಬಿಸಿ ಅಡಗಿ ಜನ ಆಡಳಿತದ ಬಗ್ಗೆ ಗಮನ ಹರಿಸತೊಡಗಿದ್ದರು. ಉರೂರಲ್ಲೂ ಪಂಚಾಯಿತಿ ಕಚೇರಿಗಳು ಪ್ರಾರಂಭವಾಗಿದ್ದುವು. ಇವನಪ್ಪನೂ ಪಂಚಾಯಿತಿಯ ಮೆಂಬರೋ ಛೇರ್ಮನ್ನೋ ಆಗಿದ್ದರೆಂದು ನೆನಪು ಇವನಿಗೆ. ಆದರೆ ಅದಕ್ಕಿಂತ ಇವನ ನೆನಪಿನಲ್ಲಿ ಸ್ಥಾಯಿಯಾಗಿ ಉಳಿದದ್ದು ಅಪ್ಪ ಒಂದು ದಿನ ತನಗೆ ಗೇಣಿ ಕೊಡುತ್ತಿದ್ದವರನ್ನೆಲ್ಲ ಮನೆಗೆ ಕರೆಸಿದ್ದು.

ವರ್ಷಕ್ಕೊಮ್ಮೆ ತಪ್ಪದೆ ಆಳುಗಳ ತಲೆಯ ಮೇಲೆ ಹೊರಿಸಿಕೊಂಡು ಅಥವಾ ತಾವೇ ಹೊತ್ತುಕೊಂಡು ತರುತ್ತಿದ್ದ ಅಕ್ಕಿ ಮುಡಿಗಳನ್ನು ಮನೆಯ ಚಾವಡಿಯ ಮೇಲಿಟ್ಟು ಅಪ್ಪನೆದುರಿಗೆ ಕೈ ಕಟ್ಟಿ ನಿಂತುಕೊಳ್ಳುತ್ತಿದ್ದ ಅವರಲ್ಲಿ ಹೆಚ್ಚಿನವರ ಗುರುತು ಈ ಶ್ಯಾಮನಿಗೂ ಇತ್ತು.

ಅಪ್ಪ ಹೂಂಕರಿಸುತ್ತ ಕೈ ಮೇಲೆ ಹಾಕುತ್ತಿದ್ದ ಎಲೆ ಅಡಿಕೆಯನ್ನು ಮಹಾ ಪ್ರಸಾದವೇನೋ ಎನ್ನುವಂತೆ ಸ್ವೀಕರಿಸುತ್ತ ಆಸರಿಗೆ ಏನಾದರೂ ಬೇಕಿತ್ತೋ' ಎಂದು ಕೇಳುವುದರೊಳಗೆ ಅಮ್ಮ ಒಳಗಿಂದ ಬೆಲ್ಲದ ಪಾನಕ ಮಾಡಿ ತರುತ್ತಿದ್ದುದು. ಅವರೆಲ್ಲ ಅದನ್ನೇ ತೀರಾ ವಿನೀತರಾಗಿ ಸ್ವೀಕರಿಸಿ ಹೋಗುತ್ತಿದ್ದುದು. ಅಂತಹವರಲ್ಲಿ ದೂರದ ಸಂಬAಧಿಗಳು ಯಾರಾದರೂ ಇದ್ದರೆ ಅಪ್ಪ ಅದೇ ಹೂಂಕರಿಸುವ ಧ್ವನಿಯಲ್ಲಿಹೂಂ.. ಬೆಳಿಗ್ಗೆ ಸ್ನಾನ ಗೀನ ಆಗಿದೆಯೋ ಹೇಗೆ.. ಆಗದಿದ್ದರೆ ಇಲ್ಲೇ ಕೆರೆಯಲ್ಲಿ ಒಂದು ಮುಳುಗು ಹಾಕ್ಕಂಡು ಬಾ. ಉಂಡ್ಕ೦ಡೇ ಹೋಗು’ ಎಂದು ಹೇಳಬೇಕು. ಅದು ಅಪ್ಪನ ಆಹ್ವಾನವಲ್ಲ. ಆಣತಿ. ಅವರೆಲ್ಲ ಅದನ್ನು ಶಿರಸಾವಹಿಸಿ ಹಿತ್ತಿಲಿಗೆ ಹೋಗಿ ತಾವೇ ಕೊಯ್ದುಕೊಂಡು ಬಂದ ಬಾಳೆ ಎಲೆಯನ್ನು ಹರವಿಕೊಂಡು ಅಮ್ಮ ಬಡಿಸಿದ್ದನ್ನು ಊಟ ಮಾಡಬೇಕು.

ಅಂತಹವರದ್ದೆಲ್ಲ ಪರಿಚಯವಿತ್ತು ಶ್ಯಾಮನಿಗೆ. ಅವರೆಲ್ಲ ಈಗ ಚಾವಡಿಯಲ್ಲಿ ನೆರೆದಿದ್ದಾರೆ. ತಬ್ಬಿಕೊಳ್ಳಲು ಇಬ್ಬರು ಬೇಕಾಗಿದ್ದ ಆ ಚಾವಡಿಯ ಕಂಬಕ್ಕೆ ಒರಗಿಕೊಂಡು ಕುಳಿತ ಅಪ್ಪ ಒಂದೊ೦ದೇ ಎಲೆಯನ್ನು ಮಡಚಿ ಬಾಯೊಳಗೆ ಇಡುತ್ತಾ ಅಲ್ಲ ನಿಮ್ಮನ್ನೆಲ್ಲ ಕರೆಸಿದ್ದು ಯಾಕೆಂದರೆ.. ನೋಡಿ ಕಾಲ ಒಂದೇ ತರ ಇರುವುದಿಲ್ಲ. ನೀವೆಲ್ಲ ಕಾಲ ಕಾಲದಿಂದ ನಮ್ಮ ಗದ್ದೆಗಳನ್ನು ಬೇಸಾಯ ಮಾಡಿಕೊಂಡು ಬಂದಿದ್ದೀರಿ. ಇನ್ನೂ ಎಷ್ಟು ದಿನ ಅಂತ ಹೀಗೇ ಇರುತ್ತೀರಿ. ನೀವು ಮಾಡಿಕೊಂಡು ಬಂದ ಗದ್ದೆಗಳಲ್ಲಿ ಅರ್ಧದಷ್ಟು ನನಗೆ ಬಿಡಿ.

ಉಳಿದದ್ದನ್ನು ನೀವೇ ತೆಗೆದುಕೊಂಡು ಬಿಡಿ. ನಮ್ಮ ಮನೆಗೆ ಹತ್ತಿರವಾದದ್ದನ್ನು ಬಿಟ್ಟು ನಿಮಗೆ ಹತ್ತಿರವಾದದ್ದನ್ನು ನೀವು ಇಟ್ಟುಕೊಳ್ಳಿ. ಅದಕ್ಕೆಂದು ನನಗೇನೂ ಕೊಡಬೇಕಾದದ್ದಿಲ್ಲ. ಇಷ್ಟು ವರ್ಷ ನಿಯತ್ತಿನಿಂದ ಗೇಣಿ ಕೊಟ್ಟುಕೊಂಡು ಬಂದಿದ್ದೀರಿ ಅದೇ ಸಾಕು' ನೆರೆದವರಿಗೆ ಅಪ್ಪ ಹೇಳಿದ್ದನ್ನು ಅರಗಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಕಾಗಿತ್ತು.

ಕೆಲವರಿಗೆ ಇವರು ಏನು ಹೇಳುತ್ತಾರೆಂಬುದು ಅರ್ಥವೇ ಆಗದೆ ಅಕ್ಕ ಪಕ್ಕದವರೊಂದಿಗೆ ಕೇಳಿದ್ದರು. ಗುಜು ಗುಜು ಜಾಸ್ತಿಯಾದಾಗ ಅಪ್ಪ ಪುನಃ ಮಾತನಾಡಲು ಸ್ವರ ಸರಿ ಮಾಡಿಕೊಂಡೊಡನೆಯೇ ಶಬ್ದವೆಲ್ಲ ನಿಂತಿತ್ತು.ಅದಕ್ಕೆ ಬೇಕಾದ ಕಾಗದ ಪತ್ರವನ್ನೆಲ್ಲ ರೆಡಿ ಮಾಡಿ ಇನ್ನೊಂದೆರಡು ವಾರದಲ್ಲಿಯೇ ರಿಜಿಸ್ತಿç ಮಾಡಿಸಿಬಿಡೋಣ’ ಎಂದಿದ್ದರು. ಎಲ್ಲರಿಗೂ ಈಗ ಅರ್ಥವಾಗಿತ್ತು. `ಇಂತಹವರೂ ಇರುತ್ತಾರೆಯೇ ಈ ಕಾಲದಲ್ಲಿ’ ಎಂದು ಮಾತಾಡಿಕೊಳ್ಳುತ್ತ ಹೋಗುತ್ತಿದ್ದ ಆ ಜನರಲ್ಲಿ ಕೆಲವರದ್ದಾದರೂ ಕಣ್ಣಂಚು ಒದ್ದೆಯಾಗಿತ್ತು.

ಅಪ್ಪ ತರಿಸುತ್ತಿದ್ದ ಪೇಪರಿನಲ್ಲಿ ವಿನೋಬಾ ಬಾವೆಯವರ ಭೂದಾನ ಚಳುವಳಿಯ ಬಗ್ಗೆ ಬರುತ್ತಿದ್ದುದನ್ನು ನೋಡುತ್ತಿದ್ದ ಶ್ಯಾಮ ಅಲ್ಲಲ್ಲಿ ಜನ ತಮ್ಮ ಜಮೀನುಗಳನ್ನು ಬಿಟ್ಟು ಕೊಡುತ್ತಿದ್ದುದರ ಬಗ್ಗೆಯೂ ಓದುತ್ತಿದ್ದ. ಅಲ್ಲಿ ಆಂಧ್ರದ ರೆಡ್ಡಿಯವರು ಅಷ್ಟು ಜಮೀನನ್ನು ದಾನ ಮಾಡಿದರು ಇಲ್ಲಿ ಮದ್ರಾಸಿನ ತೇವರ್ ಅವರು ಇಷ್ಟು ಜಮೀನು ಬಿಟ್ಟುಕೊಟ್ಟರು ಎಂದು ಎಲ್ಲರ ಹೆಸರೂ ಬರುತ್ತಿದ್ದ ಪೇಪರಿನಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನ ಸ್ವಂತ ಜಮೀನನ್ನು ದಾನ ಮಾಡಿದ ಅಪ್ಪನ ಹೆಸರೂ ಬರಬಹುದೇನೋ ಎಂದು ಕಾದಿದ್ದ. ಊಹೂಂ…. ಬರಲೇ ಇಲ್ಲ.

। ಇನ್ನು ನಾಳೆಗೆ ।

‍ಲೇಖಕರು Admin

May 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: