ಪಿ ಪಿ ಉಪಾಧ್ಯ ಸರಣಿ ಕಥೆ 11- ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ..

ಪಿ ಪಿ ಉಪಾಧ್ಯ

11

ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ.

ಅದೇ ವರ್ಷ ಎರಡನೇ ಮಹಾಯುದ್ಧ ಪ್ರಾರಂಭವಾಗಿತ್ತು. ಶಾಲೆಯಲ್ಲಿ ಮೇಷ್ಟರುಗಳು ಅದೇನೇನೋ ಹೇಳುತ್ತಿದ್ದರು. ಅಲ್ಲಿ ಜರ್ಮನರು ಬಾಂಬು ಹಾಕಿದರು ಇಲ್ಲಿ ಜಪಾನಿನವರು ಸೇತುವೆ ಕೆಡವಿ ಸಾವಿರಾರು ಸೈನಿಕರನ್ನು ಸೆರೆ ಹಿಡಿದರು ಎಂದು ಏನೇನೋ.. ನಮ್ಮನ್ನು ಆಳುವವರು ಎಂದು ಬ್ರಿಟಿಷರ ಜೊತೆ ನಮ್ಮ ದೇಶ ಸೇರಿದ್ದು ತಪ್ಪೆಂದು ಕೆಲವರೂ … ಹಾಗೆ ಸೇರದೆ ಬೇರೆ ದಾರಿಯೇ ಇಲ್ಲವೆಂದು ಇನ್ನು ಕೆಲವರೂ ಮಾತಾಡಿಕೊಳ್ಳುತ್ತಿದ್ದರು. ಯಾರೂ ತಾವು ನೇರವಾಗಿ ಪಾಲ್ಗೊಳ್ಳದಿದ್ದರೂ ಒಬ್ಬರಿಗಿಂತ ಹೆಚ್ಚು ಸೇರಿದಲ್ಲೆಲ್ಲ ಅದೇ ಮಾತು.

ಬಾಯಿಂದ ಬಾಯಿಗೆ ಹಬ್ಬುತ್ತಿದ್ದ ಸುದ್ದಿಯ ಮೂಲವನ್ನು ಮಾತ್ರ ಯಾರೂ ಹುಡುಕಲು ಹೋಗುತ್ತಿರಲಿಲ್ಲ. ಬದಲಿಗೆ ತಮ್ಮ ಕಿವಿಯ ಮೇಲೆ ಬಿದ್ದ ಸುದ್ದಿಗೆ ಇನ್ನೊಂದಿಷ್ಟು ಬಣ್ಣ ಹಚ್ಚಿ ಕೇಳುವವರಿಗೆ ರಂಗಾಗುವ೦ತೆ ಹೇಳುತ್ತಿದ್ದರು. ಹೆಚ್ಚಿನ ಸಲ ಅದರಲ್ಲಿ ಈ ಯುದ್ಧ ಮುಗಿಯುವುದು ಊರೆಲ್ಲ ನಾಶವಾದ ಮೇಲೆಯೇ ಎನ್ನುವ ನಿರಾಶೆ ತುಂಬಿದ ಭಯವೇ ಇರುತ್ತಿತ್ತು.

ಮುಂಚೆ ಅಪರೂಪಕ್ಕೊಮ್ಮೆ ಊರಿನ ಮೇಲೆ ಹಾರಾಡುತ್ತಿದ್ದ ವಿಮಾನವನ್ನು ನೋಡಲು ತರಗತಿಯನ್ನೂ ಬಿಟ್ಟು ಹೊರಗೋಡುತ್ತಿದ್ದ ಮಕ್ಕಳೆಲ್ಲ ಈಗ ದಿನಕ್ಕೆರಡು ಮೂರು ಬಾರಿ ಹಾರಾಡುತ್ತಿದ್ದ ವಿಮಾನದ ಸದ್ದು ಕೇಳಿದರೇ ಅಡಗಿಕೊಳ್ಳಲು ಪ್ರಾರಂಭಿಸಿದ್ದವು. ಶಾಲೆಯಲ್ಲಿದ್ದರೆ ಬೆಂಚಿನಡಿ, ಮನೆಯಲ್ಲಿದ್ದರೆ ಮನೆಯ ಕೋಣೆಗಳ ಮೂಲೆಯಲ್ಲಿ ಅವಿತುಕೊಳ್ಳುತ್ತಿದ್ದರು. ಎಲ್ಲಿಯಾದರೂ ಹೊರಗಡೆಯಿದ್ದು ಆ ವಿಮಾನದ ಕಣ್ಣಿಗೆ ಬಿದ್ದರೆ ತಮ್ಮ ಮೇಲೇ ಬಾಂಬು ಹಾಕಿಯಾರೇನೋ ಎನ್ನುವ ಹೆದರಿಕೆ ಮಕ್ಕಳಿಗೆಲ್ಲ.

ಶಾಲೆಯಲ್ಲಿ ಮೇಷ್ಟ್ರೋಬ್ಬರು ಹೆಡ್ ಮಾಷ್ಟರ ಹತ್ತಿರ ಬೈಸಿಕೊಂಡೂ ಯಾವಾಗಲೂ ಗಾಂಧಿಯ ಬಗ್ಗೆ ಹೇಳುತ್ತಿದ್ದರು. ಸಾಯಂಕಾಲ ಮನೆಗೆ ಹೋಗುವಾಗ ತಮ್ಮ ಮನೆಯ ದಾರಿಯಾಗಿಯೇ ಹೋಗುತ್ತಿದ್ದ ಅವರು ಮನೆಯೊಳಗೆ ಕ್ಷಣ ಹೊತ್ತು ಕುಳಿತು ಅಮ್ಮ ಲೋಟ ತುಂಬ ಕೊಡುತ್ತಿದ್ದ ಹೆಸರು ಕಾಳಿನ ನೀರನ್ನು ಕುಡಿಯುತ್ತ ಹೆಡ್ ಮೇಷ್ಟ್ರು ಬೈದದ್ದರ ಬಗ್ಗೆ ಹೇಳಿದರೆ ಅಲ್ಲ ಮೇಷ್ಟ್ರೇ.. ಸಂಬಳ ಕೊಡುವ ಸರಕಾರದ ವಿರುದ್ಧ ಮಾತನಾಡಿದರೆ ಹೆಡ್ ಮೇಷ್ಟ್ರು ಬೈಯ್ಯದೆ ಇನ್ನೇನು ಮಾಡುತ್ತಾರೆ' ಎಂದು ಸಮಾಧಾನ ಮಾಡುತ್ತಿದ್ದರು ಅಪ್ಪ. ಅದೇ ಅಪ್ಪ ಮನೆಯೊಳಗೆ ಬಂದವರಿಗೆ ಎದುರಿಗೆ ಕಾಣದಂತೆ ಗಾಂಧಿಯ ದೊಡ್ಡ ಫೋಟೋ ಒಂದನ್ನು ಒಳಗಡೆ ಗೋಡೆಗೆ ನೇತು ಹಾಕಿದ್ದನ್ನು ಇವ ನೋಡಿದ್ದಾನೆ.

ಯುದ್ಧದ ಬಿಸಿ ಎಲ್ಲರ ಬದುಕಿಗೂ ತಟ್ಟ ತೊಡಗಿತ್ತು. ಎಲ್ಲಿಯೋ ಯಾರೋ ಹೊಡೆದಾಡುತ್ತಿದ್ದರೆ ನಾವು ಯಾಕೆ ಅದನ್ನು ತಲೆಗೆ ಹಚ್ಚಿಕೊಳ್ಳಬೇಕೆಂದು ನಿರ್ಲಿಪ್ತತೆಯಿಂದ ಇದ್ದವರನ್ನೂ ಜನ ಮಾತಿಗೆಳೆಯುತ್ತಿದ್ದರು. ನಮ್ಮ ದೇಶ ಬ್ರಿಟಿಷರ ಜೊತೆ ಸೇರಬಾರದು. ಅವರಿಂದ ಸ್ವಾತಂತ್ರ್ಯ ಪಡೆಯಬೇಕೆಂದು ಹೋರಾಡುವ ನಾವು ತಮ್ಮ ಲಾಭಕ್ಕಾಗಿ ಅವರು ಮಾಡುವ ಯುದ್ಧದಲ್ಲಿ ಅವರಿಗೆ ಯಾಕೆ ಸಹಾಯ ಮಾಡಬೇಕು ಎನ್ನುವವರು ಇದ್ದ ಹಾಗೆಯೇಅಲ್ಲಪ್ಪ ಅವರು ನಮ್ಮನ್ನು ಆಳುವವರು. ಅವರು ಯಾವ ಪಕ್ಷ ವಹಿಸುತ್ತಾರೋ ಅದೇ ಪಕ್ಷದಲ್ಲಿ ನಾವೂ ಇರುವುದು ನ್ಯಾಯವಲ್ಲವೇ’ ಎನ್ನುವವರೂ ಇದ್ದರು. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಗೊತ್ತಿಲ್ಲ.

ನಮ್ಮವರೆಲ್ಲ ಎದುರಿಗೆ ಬ್ರಿಟಿಷರ ಪಾರ್ಟಿ ಎಂದು ಅವರ ಜೊತೆ ಸೇರಿಕೊಂಡವರು ಒಳಗಿದ್ದುಕೊಂಡೇ ಅವರನ್ನು ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಕಳ್ಳರಿಗೆ ಹಾಗೇ ಆಗಬೇಕು. ಅವರ ಎದುರು ನಿಂತು ಅವರನ್ನು ಸೋಲಿಸಲಿಕ್ಕುಂಟೇ' ಎಂದೂ ಹೇಳುತ್ತಿದ್ದರು. ಶಾಮನಿಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಅವನಿಗೆ ತಿಳಿದದ್ದೆಂದರೆ ಯುದ್ಧ ಮುಗಿಯುತ್ತ ಬಂದಾಗ ಬರಗಾಲ ಉಂಟಾಗಿ ತಿನ್ನಲು ಅನ್ನವಿಲ್ಲದೆ ಜನ ಹಾಹಾಕಾರವೆಬ್ಬಿಸಿದ್ದು ಮತ್ತು ಆಳುವ ಸರಕಾರ ದಿನದ ಊಟಕ್ಕೆ ಬೇಕಾದ್ದಕ್ಕಿಂತ ಹೆಚ್ಚು ಅಕ್ಕಿಯನ್ನು ಯಾರೂ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಾರದು ಎನ್ನುವ ಆಜ್ಞೆ ಹೊರಡಿಸಿದ್ದರ ಫಲವಾಗಿ ಊರಿನ ಚಿಕ್ಕ ಪುಟ್ಟ ಬೆಳೆಗಾರರೆಲ್ಲ ಕಂಗೆಟ್ಟು ಹೋದದ್ದು.

ವರ್ಷಕ್ಕೊಮ್ಮೆ ಬರುವ ಬೆಳೆಯನ್ನು ಇಡೀ ವರ್ಷಕ್ಕೆ ಬರಲಿ ಎಂದು ಅರ್ಧ ಹೊಟ್ಟೆ ತಿಂದು ಮುಡಿ ಕಟ್ಟಿ ಜೋಪಾನವಾಗಿ ಇಟ್ಟ ಅಕ್ಕಿಯನ್ನು ಸರ್ಕಾರದವರು ಬಂದು ವಶಪಡಿಸಿಕೊಂಡು ಹೋಗುತ್ತಿದ್ದುದನ್ನು ಕಣ್ಣಾರೆ ಕಂಡದ್ದು. ಅದರಲ್ಲಿ ಬುದ್ಧಿವಂತರಾದವರು ಜಪ್ತಿಗೆ ಬರುತ್ತಾರೆನ್ನುವ ಸುಳಿವು ಸಿಕ್ಕದೊಡನೆಯೇ ಮನೆಯೊಳಗಿದ್ದ ಅಕ್ಕಿ ಮುಡಿಗಳನ್ನು ಹುಲ್ಲು ಕುತ್ತರಿಯೊಳಗೆ ಅಡಗಿಸಿಟ್ಟು ಅವರ ಕಣ್ಣು ತಪ್ಪಿಸುವ ಯತ್ನ ಮಾಡಿದ್ದು. ಅದೂ ಗಮನಕ್ಕೆ ಬಂದ ಅಧಿಕಾರಿಗಳು ದೊಡ್ಡ ದೊಡ್ಡ ಭರ್ಚಿಯಂತಹ ಕೋಲುಗಳಿಂದ ಆ ಹುಲ್ಲು ಕುತ್ತರಿಗಳನ್ನೂ ತಿವಿದು ತಿವಿದು ನೋಡಿ ಅವಿತಿಟ್ಟ ಅಕ್ಕಿ ಮುಡಿಗಳನ್ನೂ ಹೊತ್ತುಕೊಂಡು ಹೋಗಿದ್ದು. ಅವನಿಗೆ ನೆನಪಿತ್ತು. ಆ ಅಧಿಕಾರಿಗಳು ತಮ್ಮ ಮನೆಗೂ ಬಂದಿದ್ದರು. ಮಾಮೂಲಿಯಂತೆ ಅಪ್ಪ ಎಲ್ಲರಿಗೂ ಅಮ್ಮನಿಂದ ಆಸರಿಗೆ ಕೊಡಿಸಿದ್ದ ಮತ್ತು ಹಾಗೆ ಕುಡಿದವರಿಗೆ ಮನೆಯೊಳಗಿನ ಅಕ್ಕಿ ಮುಡಿಗಳನ್ನು ತೆಗೆದುಕೊಂಡು ಹೋಗಲು ತಾನೇ ಹೇಳಿದ್ದ. ಆದರೆ ಕೆಲಸ ಮಾಡಿದವರಿಗೆ ಕೊಡಲಿಕ್ಕೆಂದು ಹೊರಗಡೆಯಿಟ್ಟಿದ್ದ ಇಪ್ಪತ್ತು ಇಪ್ಪತ್ತೈದು ಅಕ್ಕಿ ಮುಡಿಗಳನ್ನು ಮಾತ್ರ ಮನೆಯ ಅಂಗಳದ ಮೂಲೆಯಲ್ಲಿದ್ದ ಹುಲ್ಲು ಕುತ್ತರಿಯೊಳಗೆ ಅಡಗಿಸಿಟ್ಟಿದ್ದು ಯಾರಿಗೂ ಗೊತ್ತಿರಲಿಲ್ಲ.

ರಾತ್ರಿಯೆಲ್ಲ ಅಪ್ಪ ಒಬ್ಬನೇ ಅವುಗಳನ್ನೆಲ್ಲ ಸಾಗಿಸಿ ಹುಲ್ಲುಕುತ್ತರಿಯೊಳಗೆ ತೂರಿಸುತ್ತಿದ್ದುದನ್ನು ಮಧ್ಯ ರಾತ್ರಿಯಲ್ಲಿ ಒಮ್ಮೆ ಎಚ್ಚತ್ತ ಶ್ಯಾಮನೇ ನೋಡಿದ್ದ. ಈಗ ಮನೆಯೊಳಗಿನ ಅಕ್ಕಿ ಮುಡಿಗಳೆಲ್ಲವನ್ನು ತೆಗೆದುಕೊಂಡ ಮೇಲೆಯೂ ಆ ಅಧಿಕಾರಿಗಳು ತಮ್ಮ ಮಾಮೂಲಿ ಕೆಲಸವಾದ ಹುಲ್ಲು ಕುತ್ತರಿಯನ್ನು ತಿವಿಯುವ ಕೆಲಸ ಮಾಡಿದ್ದರು. ತಮ್ಮ ಉದ್ದ ಕೋಲುಗಳಿಂದ ಸಾಧ್ಯವಾದಷ್ಟು ಒಳಗಡೆ ತೂರಿಸುತ್ತ ಹುಡುಕಿದ್ದರು. ಅಪ್ಪ ನಿರ್ಲಿಪ್ತನಾಗಿ ನಿಂತಿದ್ದರೆ ಶ್ಯಾಮ ಮಾತ್ರ ಉಸಿರು ಬಿಗಿ ಹಿಡಿದು ಒಮ್ಮೆ ಅಪ್ಪನ ಮುಖವನ್ನು ಮತ್ತೊಮ್ಮೆ ಆ ಅಧಿಕಾರಿಗಳ ಕಡೆ ನೋಡುತ್ತಿದ್ದ. ಎಲ್ಲಿಯಾದರೂ ಆ ಅಕ್ಕಿ ಮುಡಿಗಳು ಅವರಿಗೆ ಸಿಕ್ಕಿದರೆ....! ಅದೃಷ್ಟ. ಏನೂ ಸಿಕ್ಕಿರಲಿಲ್ಲ.

ಹುಲ್ಲು ಕುತ್ತರಿಯನ್ನು ಚುಚ್ಚಿ ಚುಚ್ಚಿ ಸುಸ್ತಾಗಿ ಬರಿ ಕೈಯ್ಯಲ್ಲಿ ಅವರು ಈಚೆ ಬಂದ ಮೇಲೆಯೇ ಶ್ಯಾಮ ಬಿಗಿ ಹಿಡಿದ ಉಸಿರನ್ನು ಬಿಟ್ಟದ್ದು. ಅವರೆಲ್ಲ ಹೋದ ಮೇಲೆ ಅಪ್ಪ ಅಮ್ಮನೊಂದಿಗೆ ಹೇಳುತ್ತಿದ್ದಅಲ್ಲ, ನಮ್ಮ ಅಕ್ಕಿ ತೆಗೆದುಕೊಂಡು ಹೋದರೆ ಹೋಗಲಿ. ನಾವು ಏನಾದರೂ ಮಾಡಿಕೊಂಡೇವು.. ಪಾಪ ಕೆಲಸದವರಿಗೆ ಕೊಡಬೇಕೆಂದು ಇಟ್ಟುಕೊಂಡ ಅಕ್ಕಿ ಎಲ್ಲಿಯಾದರೂ ಸಿಕ್ಕಿಬಿಡುತ್ತೇನೋ ಎಂದು ಹೆದರಿದ್ದೆ. ದೇವರ ದಯ ಸಿಗಲಿಲ್ಲ ಬಿಡು’ ಅಮ್ಮ ಮಾಮೂಲಿಯಂತೆ ಉತ್ತರಿಸಿರಲಿಲ್ಲ. ಆದರೆ ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ. ಅಂದಿನಿ೦ದ ಅಪ್ಪ ಯಾವತ್ತೂ ಕಥೆಯಲ್ಲಿನ ರಾಕ್ಷಸನಾಗಲೇ ಇಲ್ಲ ಶ್ಯಾಮನಿಗೆ.

ಅಪ್ಪ ಕಲಿತದ್ದು ಕಡಿಮೆ ಎಂದು ಶಾಮನಿಗೆ ಗೊತ್ತಿತ್ತು. ಆದರೆ ಎಲ್ಲಿಯವರೆಗೆ ಶಾಲೆಗೆ ಹೋಗಿದ್ದರು ಎನ್ನುವುದು ತಿಳಿದಿರಲಿಲ್ಲ. ಓದು ಬರಹವನ್ನು ಚನ್ನಾಗಿಯೇ ತಿಳಿದಿದ್ದ ಅಪ್ಪ ದಸ್ತಾವೇಜನ್ನು ಓದುತ್ತಿದ್ದ ರೀತಿ ಮತ್ತು ಸಲಹೆ ಕೇಳಲು ಬಂದವರಿಗೆ ಲಾ ಪಾಯಿಂಟು ಹೇಳುತ್ತಿದ್ದ ರೀತಿ ದಿಗ್ಬ್ರಮೆ ಮೂಡಿಸುತ್ತಿತ್ತು. ಎಂಟನೇ ತರಗತಿ ವರೆಗೆ ಓದಿದ್ದು ಅಲ್ಪ ಸ್ವಲ್ಪ ಇಂಗ್ಲೀಷೂ ಬರುತ್ತಿದ್ದ ತನಗೂ ಅರ್ಥವಾಗದ ವಿಷಯಗಳನ್ನು ಸಲೀಸಾಗಿ ವಿವರಿಸುತ್ತಿದ್ದರು ಅಪ್ಪ. ಊರಿಗೆ ಬರುತ್ತಿದ್ದ ಒಂದೇ ಒಂದು ಕನ್ನಡ ಪತ್ರಿಕೆ ತಮ್ಮ ಮನೆಗೆ ಬರುತ್ತಿದ್ದುದು. ಟಪಾಲಿನ ಮೂಲಕವೇ ಬರಬೇಕಿದ್ದ ಅದು ಇವರನ್ನು ತಲುಪುತ್ತಿದ್ದುದು ಮಾರನೆಯ ದಿನವೇ.

ಯುದ್ಧ ಜೋರಾದ ದಿನಗಳಲ್ಲಿ ಕೆಲ ಸಮಯ ಸ್ಥಗಿತ ಗೊಂಡಿದ್ದರೂ ಮುಂದೆ ಯುದ್ದ ವಿರಾಮ ಸಾರಲ್ಪಟ್ಟು ಸಾಮಾನ್ಯ ಸ್ಥಿತಿ ಮರುಕಳಿಸಿದ ನಂತರ ಪುನಃ ಬರಲು ಪ್ರಾರಂಭವಾಗಿತ್ತು. ಶಾಲೆಗೆ ಹೋಗುವಷ್ಟು ದಿನವೂ ಶಾಮ ತಪ್ಪಿಯೂ ಆ ಪೇಪರನ್ನು ಓದುತ್ತಿರಲಿಲ್ಲ. ರಾಜಕೀಯ ಅವನ ತಲೆಗೆ ಹತ್ತುತ್ತಿರಲಿಲ್ಲ ಎನ್ನುವುದು ಒಂದಾದರೆ ದೇಶೀಯ ಭಾವನೆಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದ ಆ ಪತ್ರಿಕೆ ಇನ್ನೂ ಶಾಲೆಗೆ ಹೋಗುತ್ತಿದ್ದ ಮಗನಿಗೆ ಬೇಡ ಎಂದು ಅಪ್ಪ ನಿರ್ಧರಿಸಿದ್ದೂ ಇನ್ನೊಂದು.

। ಇನ್ನು ನಾಳೆಗೆ ।

‍ಲೇಖಕರು Admin

May 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: