ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.
ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು.
14
ಡ್ರೈವಿಂಗ್ ಟೆಸ್ಟ್
`PLAB ಟೆಸ್ಟ್ ಆದರೂ ಪಾಸು ಮಾಡಬಹುದು ಆದರೆ ಈ ಡ್ರೈವಿಂಗ್ ಟೆಸ್ಟ್ ಅಲ್ಲಪ್ಪ’ ಎನ್ನುವುದು ಎಫ್.ಆರ್.ಸಿ.ಪಿ., ಎಫ್.ಆರ್.ಸಿ.ಎಸ್. ಮಾಡಲೆಂದು ಇಂಗ್ಲೆಂಡಿಗೆ ಬರುವ ನಮ್ಮ ಬ್ರಿಲಿಯಂಟ್ ಯುವ ಡಾಕ್ಟರುಗಳು ಹೇಳುವ ಮಾತು. ಅಲ್ಲಿನ ಅಗಲ ರಸ್ತೆಗಳಲ್ಲಿ ಓಡಾಡುವ ದೊಡ್ಡ ದೊಡ್ಡ ಕಾರುಗಳನ್ನು ಅದೂ ಆಸ್ಪತ್ರೆಯಲ್ಲಿನ ದಾದಿಯರೂ ಸಹ ತಮ್ಮದೇ ಕಾರುಗಳಲ್ಲಿ ಬರುವುದನ್ನು ನೋಡುವಾಗ ನಮ್ಮ ಯುವ ಡಾಕ್ಟರುಗಳಲ್ಲಿ ಆಸೆ ಉದ್ಭವಿಸುವುದು ಸಹಜವೇ.
ಅದೂ ಆರ್ಥಿಕ ಸಹಾಯ ಒದಗಿಸಲು ನಾ ಮುಂದು ತಾ ಮುಂದು ಎಂದು ಬರುವ ಸಂಸ್ಥೆಗಳು ಹಲವು ಇರುವಾಗ ಉತ್ತಮ ಸ್ಥಿತಿಯಲ್ಲಿರುವ ಒಳ್ಳೇ ಬ್ರ್ಯಾಂಡಿನ ಕಾರನ್ನು ಕೊಳ್ಳುವುದೇನೂ ಕಷ್ಟವಲ್ಲ ನಮ್ಮ ಡಾಕ್ಟರುಗಳಿಗೆ. ಅವರ ಸಮಸ್ಯೆಯೆಂದರೆ ಆ ಕಾರುಗಳನ್ನು ಅಲ್ಲಿನ ರಸ್ತೆಗಳಲ್ಲಿ ಓಡಿಸುವುದು. ಅದಕ್ಕೆ ಲೈಸೆನ್ಸ್ ಬೇಕು. ಇಂಡಿಯಾದಿಂದ ಹೊರಡುವಾಗ ಇಂತಹ ಸುಂದರ ಕನಸನ್ನೇನೂ ಹೊಂದಿರದಿದ್ದ ಅವರು ಇಲ್ಲಿಗೆ ಬಂದ ಕೂಡಲೇ ತಮ್ಮ ಸೀನಿಯರ್ಸ್ ಈ ಡ್ರೈವಿಂಗ್ ಮಜಾದ ಬಗ್ಗೆ ಹೇಳುವುದನ್ನು ಕೇಳುತ್ತಿದ್ದ ಹಾಗೆಯೇ ಅವರಲ್ಲೂ ಕನಸು ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ಆದರೆ ಲೈಸೆನ್ಸ್‍ನದೇ ಸಮಸ್ಯೆ.
ನಮಗಂತೂ ಸ್ವಂತ ಕಾರುಗಳನ್ನಿಟ್ಟುಕೊಳ್ಳುವುದು ಕಡ್ಡಾಯ. ಇಂಗ್ಲೆಂಡಿನಂತಹ ಊರಿನಲ್ಲಿ ನಮ್ಮಂತಹ ಸಾಮಾನ್ಯ ಮನುಷ್ಯರು ಡ್ರೈವರುಗಳನ್ನಿಟ್ಟುಕೊಳ್ಳುವುದಂತೂ ದೂರದ ಮಾತು. ಅಂದ ಮೇಲೆ ಸ್ವಂತಕ್ಕೆ ಡ್ರೈವಿಂಗ್ ಲೈಸೆನ್ಸ್ ಪಡೆದು ಕೊಳ್ಳದೆ ಬೇರೆ ದಾರಿಯೇ ಇಲ್ಲ. ಆ ನೆಲಕ್ಕೆ ಕಾಲಿಟ್ಟಕೂಡಲೇ ಅಲ್ಲಿ ರೆಡಿಯಾಗಿ ಕುಳಿತಿದ್ದ 2000 CC ಯ ಕಾರು ಕೈ ಬೀಸಿ ಕರೆಯುತ್ತಿತ್ತು.
ಭಾರತದಿಂದ ಹೊರಡುವಾಗಲೇ ಮುಂಜಾಗ್ರತೆಯ ಕ್ರಮವಾಗಿ ಪಡಕೊಂಡಿದ್ದ ಇಂಟರ್ನ್ಯಾಷನಲ್ ಲೈಸೆನ್ಸ್ ಒಂದು ವರ್ಷ ಕಾಲ ಇತರೇ ತಲೆನೋವಿಲ್ಲದೆ ಆ ರಸ್ತೆಗಳಲ್ಲಿ ಕಾರುಗಳನ್ನು ಓಡಿಸಲು ಪರವಾನಗಿ ಕೊಟ್ಟಿತ್ತು. ಆದರೂ ಹಿಂದೆ ಭಾರತದಲ್ಲಿ ಹತ್ತು ವರ್ಷಗಳ ಕಾಲ ಡ್ರೈವ್ ಮಾಡಿದ ಅನುಭವವಿದ್ದುದರಿಂದ ಅಲ್ಲಿ ಡ್ರೈವ್ ಮಾಡುವುದೇನೂ ಕಷ್ಟವಾಗಲಿಕ್ಕಿಲ್ಲ ಎನ್ನುವ ನನ್ನ ಅನಿಸಿಕೆ ಎಷ್ಟು ಹುಂಬತನದ್ದೆಂದು ಮೊದಲ ದಿನ ಸ್ಟಿಯರಿಂಗ್ ವೀಲ್ ಹಿಡಿದಾಗಲೇ ಗೊತ್ತಾಗಿದ್ದು.
ಭಾರತದಲ್ಲಿ ಮಾಡುವ ಡ್ರೈವಿಂಗ್ ಡ್ರೈವಿಂಗೇ ಅಲ್ಲ ಎನ್ನುವ ಭಾವನೆ ಬರಹತ್ತಿತ್ತು. ಆದರೂ ಪುಸ್ತಕ ನೋಡಿಕೊಂಡು ಮತ್ತು ನಡು ನಡುವೆ ಆಗಲೇ ಇಂತಹ ಸಂಕಟವನ್ನು ಅನುಭವಿಸಿದ್ದ ಹಿರಿಯ ಸಹೋದ್ಯೋಗಿಗಳ ಉಪದೇಶವನ್ನೂ ತೆಗೆದುಕೊಳ್ಳುತ್ತ ಕಾರನ್ನು ಓಡಿಸಿದ್ದೇ ಓಡಿಸಿದ್ದು. ಆರು ತಿಂಗಳು ಕಳೆಯುವ ಹೊತ್ತಿಗೆ ಡ್ರೈವ್ ಮಾಡುವ ಧೈರ್ಯ ಬಂದಿದ್ದರೂ ಲೈಸೆನ್ಸ್ ಪಡಕೊಳ್ಳುವತ್ತ ಗಂಭೀರವಾಗಿ ಆಲೋಚಿಸಿರಲೇ ಇಲ್ಲ.
ನಮ್ಮ ಲೋಕಲ್ ಬಾಸ್ ಪರೋಕ್ಷವಾಗಿ ಸೂಚನೆ ಕೊಡಲು ಪ್ರಾರಂಭಿಸಿದವರು ಒಮ್ಮೆಯಂತೂ ನೇರವಾಗಿಯೇ ಹೇಳಿದ್ದರು `ಸಮಯ ಮೀರುತ್ತಿದೆ’ ಎಂದು. ಅವರ ಚಿಂತೆ ಡ್ರೈವಿಂಗ್ ಲೈಸೆನ್ಸ್ ಇಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಒಳ್ಳೆಯ ಕೆಲಸ ಮಾಡುವ ಅಧಿಕಾರಿಯನ್ನು ಕಳೆದುಕೊಳ್ಳ ಬಾರದಲ್ಲ ಎನ್ನುವುದು. ಅವರ ಹೆದರಿಕೆ ಕೆಲಸ ಮಾಡಿತ್ತು.
ನಾನು ಈವರೆಗೆ ರೂಢಿಸಿಕೊಂಡ ಡ್ರೈವಿಂಗ್ ಅಲ್ಲಿ ಟೆಸ್ಟ್ ಪಾಸು ಮಾಡಲು ಸಾಕಾಗುತ್ತದೆಂದು ದೃಢವಾಗಿ ನಂಬಿದ್ದರೂ ಯಾವುದಾದರೂ ಡ್ರೈವಿಂಗ್ ಸ್ಕೂಲಿನ ಮೂಲಕ ಹೋದರೆ ಸುಲಭವಾಗುತ್ತದೆ ಮತ್ತು ಪೇಪರ್ ವರ್ಕ್ ಎಲ್ಲ ಅವರೇ ಮಾಡಿಕೊಡುತ್ತಾರೆ ಎನ್ನುವ ಕಾರಣಕ್ಕಾಗಿ ಗೆಳೆಯರ ಸಲಹೆಯ ಮೇರೆಗೆ ಒಬ್ಬ ಡ್ರೈವಿಂಗ್ ಇನ್ಸ್‍ಟ್ರಕ್ಟರ್ ಗೆ ಫೋನ್ ಮಾಡಿದ್ದೆ. ವಾರಕ್ಕೆ ಒಂದು ಗಂಟೆ ಪಾಠ. ಗಂಟೆಯ ಪಾಠಕ್ಕೆ ಹದಿನೈದು ಪೌಂಡುಗಳು. ಒಪ್ಪಿದ್ದೆ. ಫೋನಿನಲ್ಲಿ ವಿಳಾಸ ತೆಗೆದುಕೊಂಡಿದ್ದ ಆಸಾಮಿ ಮಾರನೇ ದಿನ ಬೆಳಿಗ್ಗೆ ನಿಗದಿತ ವೇಳೆಗೆ ನಿಮಿಷದಷ್ಟೂ ವ್ಯತ್ಯಾಸವಿಲ್ಲದೆ ಮನೆ ಮುಂದೆ ಕಾರಿನೊಂದಿಗೆ ಹಾಜರ್.
ಹೊರ ಬಂದು ಕಾಯುತ್ತಿದ್ದ ಕಾರಿನಲ್ಲಿ ಕುಳಿತು ಸ್ಟಾರ್ಟ್ ಮಾಡಿದಾಗಲೆ ಬಿತ್ತು ಮೊದಲ ಹೊಡೆತ ನನ್ನ ಅಹಂಗೆ. ಸ್ಟಾರ್ಟ್ ಮಾಡುವ ಮೊದಲು ಸೀಟ್ ಬೆಲ್ಟ್ ಹಾಕಿಕೊಳ್ಳಿ.ಸೀಟ್ ಅಜಸ್ಟ್‍ಮೆಂಟ್…ಮಿರರ್ ಅಜಸ್ಟ್‍ಮೆಂಟ್…ಮಾಡಿಕೊಳ್ಳಿ. ಎದುರಿನ ಮತ್ತು ಬಲದ ಮಿರರ್ ನೋಡಿ ಸ್ಟಾರ್ಟ್ ಮಾಡಿ. ಸಿಗ್ನಲ್ ಕೊಡಿ. ಬಲಕ್ಕೆ ಸಿಗ್ನಲ್ ಕೊಟ್ಟು ನಿಧಾನವಾಗಿ ಕ್ಲಚ್ಚನ್ನು ರಿಲೀಸ್ ಮಾಡುತ್ತ ಮುಂದೆ ಹೋಗಿ. ಇಟಾಲಿಯನ್ ಇನ್ಸ್ಟ್ರಕ್ಟರ್. `ಇದೆಲ್ಲ ಚಾ ಚೂ ತಪ್ಪದೆ ನಡೆಯಲೇ ಬೇಕು’ ಎಂದಿದ್ದ. `ಛೆ, ಇದೆಲ್ಲ ಏನು ಮಹಾ’ ಎಂದು ಮಾಡದೆ ಬಿಟ್ಟಿದ್ದೆವೊ ಅದೆಲ್ಲವನ್ನೂ ಮಾಡಲೇ ಬೇಕು. `ಇವತ್ತು ಕಲಿಯುವಾಗ ಮಾತ್ರವಲ್ಲ.
ಮುಂದೆ ಲೈಸೆನ್ಸ್ ಪಡೆಯುವಾಗ ಮತ್ತೆ ಎಂದೆಂದಿಗೂ ನೀವು ಈ ದೇಶದಲ್ಲಿ ಕಾರನ್ನು ಓಡಿಸುವವರೆಗೆ’. ಮೊದಲ ಭೇಟಿ. ನಯವಾಗಿಯೇ ಹೇಳಿದ್ದ. ಪ್ರಾರಂಭವಾದ ಪಾಠ ಮುಂದಿನ ಒಂದು ಗಂಟೆಯ ವರೆಗೆ ಬಿಡದೇ ಮುಂದುವರೆದಿತ್ತು. ಗಂಟೆ ಮುಗಿದು ವಾಪಾಸು ಮನೆಯ ಹತ್ತಿರ ತಂದು ಬಿಟ್ಟ ಅವನಿಗೆ ಹದಿನೈದು ಪೌಂಡುಗಳನ್ನು ತೆತ್ತು ಕಾರಿನಿಂದ ಕೆಳಗಿಳಿಯುವಾಗ ಸುಸ್ತು. ಬೆಳಿಗ್ಗೆ ಮನೆಯಿಂದ ಹೊರಡುವಾಗಿದ್ದ ಉತ್ಸಾಹದ ಹತ್ತರಲ್ಲಿ ಒಂದು ಪಾಲೂ ಉಳಿದಿರಲಿಲ್ಲ. ಡಾಕ್ಟರುಗಳು ಹೇಳುತ್ತಿದ್ದ ಮಾತಿನ ಅರ್ಥವಾಗತೊಡಗಿತ್ತು.
ಈ ದೇಶಕ್ಕೆ ಕಾಲಿಟ್ಟಂದಿನಿಂದ ಆರು ತಿಂಗಳಿಗೂ ಮೀರಿದ ಈ ಅವಧಿಯಲ್ಲಿ ಮಾಡುತ್ತಿದ್ದುದು ಏನು ಎನ್ನುವ ಸಂಶಯ ಬರಲಿಕ್ಕೆ ಆರಂಭವಾಗಿತ್ತು. ಒಂದೋ ಎರಡೋ ಕ್ಲಾಸುಗಳಿಗೆ ಹೋಗಿ ಟೆಸ್ಟ್ ತೆಗೆದುಕೊಳ್ಳುವುದೆಂದು ಲೆಕ್ಕ ಹಾಕುತ್ತಿದ್ದವನನ್ನು ಆ ಇನ್ಸ್‍ಟ್ರಕ್ಟರ್ ಹೇಳಿದ `ನೀವು ಮೊದಲು ಇಂಡಿಯಾದಲ್ಲಿ ಕಲಿತದ್ದನ್ನು ಮರೆಯಬೇಕು. ಅನಂತರವೇ ಇಲ್ಲಿನ ಡ್ರೈವಿಂಗ್ ಕ್ಲಾಸುಗಳು’ ಎನ್ನುವ ಮಾತುಗಳು ಭೂಮಿಗಿಳಿಸಿದ್ದುವು. ಆದರೆ ಬೇರೆ ದಾರಿಯೇ ಇರಲಿಲ್ಲವಲ್ಲ!
ಹಾಗೇಯೇ ಕ್ಲಾಸುಗಳು ಮುಂದುವರಿದಿದ್ದುವು. ಒಂದು … ಎರಡು… ಮೂರು…ಹತ್ತನೇ ಕ್ಲಾಸು ಮುಗಿದರೂ ನಮ್ಮ ಇನ್ಸ್‍ಟ್ರಕ್ಟರ್ ಮಹಾಶಯ ಗ್ರೀನ್ ಸಿಗ್ನಲ್ ಕೊಡಲು ತಯಾರೇ ಇಲ್ಲ. ಬಾಯಿ ತುಂಬಾ ಮಾತಾಡುತ್ತಿದ್ದವನಲ್ಲಿ ಜೋಕುಗಳಿಗೇನೂ ಕೊರತೆಯಿದ್ದಿರಲಿಲ್ಲವಾದರೂ ಡ್ರೈವಿಂಗ್‍ನಲ್ಲೇನಾದರು ತಪ್ಪು ಕಂಡರೆ ತೀರ ಕ್ರೂರವಾಗಿ ಬೈದು ಬಿಡುತ್ತಿದ್ದ. ಭಾರತದ ಅತೀ ದೊಡ್ಡ ಆರ್ಥಿಕ ಸಂಸ್ಥೆಯ ಸಾವಿರಾರು ಆಫೀಸರುಗಳಲ್ಲಿ ಆಯ್ಕೆಯಾಗಿ ಈ ದೇಶದಲ್ಲಿನ ಇಂತಹ ಹುದ್ದೆಗೆ ಸಾಮಾನ್ಯರಿಗೆ ಬರಲಿಕ್ಕಾಗುವುದಿಲ್ಲ. ಅಂತಹದರಲ್ಲಿ ಇಲ್ಲಿಗೆ ಬಂದ ನಾನು ನೀನೆಣಿಸಿದ ಹಾಗೆ ಸಾಮಾನ್ಯ ಮನುಷ್ಯ ಅಲ್ಲ ಎನ್ನುವ ಮಾತುಗಳನ್ನು ಸುತ್ತಿ ಬಳಸಿ ಹೇಳಿ ಅವನನ್ನು ಪ್ರಭಾವಿತನನ್ನಾಗಿ ಮಾಡುವ ನನ್ನ ಎಲ್ಲ ಪ್ರಯತ್ನಗಳು ವ್ಯರ್ಥವಾಗಿದ್ದುವು. ಅವನ ಮಟ್ಟಿಗೆ ನಾನೊಬ್ಬ ಡ್ರೈವಿಂಗ್ ಕಲಿಯುವ ಅಭ್ಯರ್ಥಿ.
ಜೊತೆಗೆ ಅಂತಹ ಸಾಮಾನ್ಯ ಯೂರೋಪಿಯನ್ನೊಬ್ಬನ ಮನಸ್ಸಿನಲ್ಲಿ ಇನ್ನೂ ಇದ್ದ `ಇಂಡಿಯಾದಂತಹ ಹಿಂದುಳಿದ ದೇಶದಿಂದ ಬಂದ ಒಬ್ಬ ಅನಾಗರಿಕ!’. ಹಾಗಾಗಿ ಆರಡಿಯಷ್ಟಿದ್ದ ದೇಹವನ್ನು ನನಗಿಂತ ತುಂಬ ಕುಳ್ಳನಿದ್ದ ಅವನೆದುರು ಕುಗ್ಗಿಸುವಂತೆ ಮಾಡುತ್ತಿದ್ದ. ಭಾರತದ ಪಟ್ಟಣಗಳಲ್ಲಿ ಬಹಳಷ್ಟು ಜನ ಇಂಗ್ಲಿಷ್ ಮಾತಾಡುತ್ತಾರೆ ಎಂದ ನನ್ನ ಮಾತನ್ನು ಅರ್ಧ ನಂಬಿಕೆಯಿಂದಲೇ ಕೇಳುತ್ತ `ಇಟೆಲಿಯಲ್ಲಿ ಹಾಗಿಲ್ಲವಲ್ಲ’ ಎನ್ನುತ್ತ `ಮಹಾರಾಯರೆ ನನ್ನ ಹತ್ತಿರ ಡ್ರೈವಿಂಗ್ ಕಲಿತ ಯಾರೂ ಇದುವರೆಗೆ ಡ್ರೈವಿಂಗ್ ಟೆಸ್ಟಿನಲ್ಲಿ ಫೈಲ್ ಆಗಿಲ್ಲ. ನೀವೂ ಅಷ್ಟೆ. ನನ್ನ ಮಾರ್ಯಾದೆ ಉಳಿಸಬೇಕು’ ಎಂದು ನಗುತ್ತಲೇ ವ್ಯಂಗ್ಯದ ಬಾಣವನ್ನು ಬಿಡುತ್ತಿದ್ದ.
ಮಕ್ಕಳೆಲ್ಲ ಒಳ್ಳೆ ಉದ್ಯೋಗದಲ್ಲಿ ಸೆಟ್ಲ್ ಆಗಿದ್ದಾರೆ. ಹೆಂಡತಿ ಎಲ್ಲೋ ಸೂಪರ್ ಸ್ಟೋರ್‍ನಲ್ಲಿ ಕೆಲಸ ಮಾಡುತ್ತಿದ್ದವಳು ಇತ್ತೀಚೆಗೆ ಎರಡು ಮೂರು ವಾರಾಂತ್ಯಗಳನ್ನು ಬೇರೆ ಯಾರೊಂದಿಗೋ ಕಳೆಯುವ ಸಲುವಾಗಿ ಓವರ್ ಟೈಮ್‍ನ ನೆವ ಹೇಳುತ್ತಿದ್ದಾಳೆ. ಬಹುಶಃ ಇನ್ನೊಂದೆರಡು ವಾರಗಳಲ್ಲಿ ತಾವು ಬೇರೆಯಾದರೂ ಆಗಬಹುದು ಎಂದು ತನ್ನ ತೀರ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಅವ ಮಧ್ಯದಲ್ಲಿಯೇ ಪೆನ್ಶನ್ ಪ್ಲಾನುಗಳಲ್ಲಿ ಯಾವುದು ಒಳ್ಳೆಯದೆಂದು ಕೇಳುತ್ತಿದ್ದ.
ಪರ್ಸನಲ್ ಇನ್‍ವೆಸ್ಟ್‍ಮೆಂಟ್ ಅಥಾರಿಟಿ (ಈಗ ಎಫ್. ಎಸ್. ಎ. ಎಂದು ಬದಲಾಗಿದೆಯಂತೆ ಅದು) ಎನ್ನುವ ರೆಗ್ಯುಲೇಟಿಂಗ್ ಸಂಸ್ಥೆಯ ಕಪಿ ಮುಷ್ಟಿಯಲ್ಲಿ ಸಿಕ್ಕಿಬಿದ್ದು ವಿಮೆ ಮತ್ತು ಪೆನ್ಶನ್ ಸಂಸ್ಥೆಗಳು ವಿಲ ವಿಲ ಒದ್ದಾಡುತ್ತಿದ್ದ ಕಾಲ. ಪೆನ್ಶನ್ ಸ್ಕೀಮು ಮತ್ತು ಅವುಗಳ ಸ್ಕ್ಯಾಂಡಲುಗಳ ಬಗ್ಗೆ ಪೇಪರುಗಳಲ್ಲಿ ಅರ್ಧ ಭಾಗದಷ್ಟು ತುಂಬಿರುತ್ತಿದ್ದುವು. ಅವುಗಳ ಬಗ್ಗೆ ಮಾತಾಡಿದರೂ ತಪ್ಪು. ಮಾತಾಡದಿದ್ದರೂ ತಪ್ಪು. ಯಾರು ಯಾವ ವೇಷದಲ್ಲಿ ಬಂದು ನಿಮ್ಮನ್ನು ಹಿಡಿದು ಹಾಕುತ್ತಾರೆಂದು ಹೇಳಲೂ ಸಾಧ್ಯವಿರದಂತಹ ಪರಿಸ್ಥಿತಿ.
ಒಂದು ವೇಳೆ ಅವ ಕೇಳಿದೆನೆಂದು ನಾನು ಯಾವುದೋ ಮೂಡಿನಲ್ಲಿ ತಪ್ಪು ಹೇಳಿ ಅವ ಅದನ್ನು ರೆಗ್ಯುಲೇಟರಿಗೆ ವರದಿ ಮಾಡಿದರೆ ನನಗೂ ನನ್ನ ಕಂಪೆನಿಗೂ ಇಬ್ಬರಿಗೂ ಕುತ್ತು. ಹಾಗಾಗಿ ಅವನ ಪ್ರಶ್ನೆಗೆ ನಾ ಮಾಡುತ್ತಿದ್ದ ಡ್ರೈವಿಂಗ್‍ನಷ್ಟೇ ಜಾಗ್ರತೆಯಾಗಿ ಉತ್ತರಿಸಬೇಕಿತ್ತು. ಆದರೆ ನಾನು ಹಾಗೆ ಅಲೋಚಿಸಿ ಉತ್ತರ ಕೊಡುವ ಮೊದಲೇ ಬೇರೆ ಬೇರೆ ಸ್ಕೀಮುಗಳ ಬಗ್ಗೆ ಅವ ಹೇಳಿದ ವಿವರಗಳನ್ನು ಕೇಳಿ ನಾನೇ ಸ್ತಂಭೀಭೂತ.
ಅಂತೂ ಹದಿನಾಲ್ಕು ಕ್ಲಾಸುಗಳ ನಂತರ `ಸರಿ, ಟೆಸ್ಟಿಗೆ ದಿನ ತೆಗೆದುಕೊಳ್ಳೋಣ’ ಎಂದಿದ್ದ. ಆ ಟೆಸ್ಟಿನ ಫೀಸು ನೂರಾ ಐವತ್ತು ಪೌಂಡುಗಳು. ಒಬ್ಬರು ಟ್ರಾಫಿಕ್ ಇನ್‍ಸ್ಪೆಕ್ಟರು ಪಕ್ಕದಲ್ಲಿಯೇ ಕುಳಿತು ಕಾರನ್ನು ಓಡಿಸಲು ಹೇಳುತ್ತಾರೆ. ಅವರು ಹೇಳುವ ದಾರಿಯಲ್ಲಿ ಅವರು ಹೇಳುವ ತೆರನಲ್ಲಿ ಓಡಿಸಬೇಕು. ನಮ್ಮ ಇನ್‍ಸ್ಟ್ರಕ್ಟರ್ ಜತೆಯಲ್ಲಿ ಬರುವ ಹಾಗಿಲ್ಲ. ನಾವು ತಪ್ಪು ಮಾಡಿದ ಹಾಗೆಲ್ಲ ಅವರ ಕೈಯಲ್ಲಿನ ರೇಟಿಂಗ್ ಶೀಟಿನಲ್ಲಿ ಅಡ್ಡಗೆರೆ ಬೀಳುತ್ತ ಹೋಗುತ್ತದೆ. ಪ್ರಾರಂಭದಿಂದ ಹಿಡಿದು ಹೆಜ್ಜೆ ಹೆಜ್ಜೆಗೂ ಪರಿಶೀಲಿಸುತ್ತಾರೆ. ನನ್ನ ಕ್ಷೇಮದ ಸಲುವಾಗಿ ಕೆಂಪು ಮೂತಿಯ ಆ ಇನ್‍ಸ್ಪೆಕ್ಟರನೊಂದಿಗೆ ಮೊದಲೇ ಹೇಳಿದ್ದೆ. `ನಿಮ್ಮ ಮಾತುಗಳು ನನಗೆ ಫಕ್ಕನೆ ಅರ್ಥವಾಗಲಿಕ್ಕಿಲ್ಲ. ಯಾಕೆಂದರೆ ಉಚ್ಚಾರಣೆಯಲ್ಲಿ ವ್ಯತ್ಯಾಸವಿದೆ ನೋಡಿ’ ಎಂದರೆ `ನೋ ಪ್ರಾಬ್ಲಮ್’ ಎನ್ನುವ ಅವನ ವಿಶ್ವಾಸ ತುಂಬುವ ಆಶ್ವಾಸನೆ!
ಸಂದಿ ಗೊಂದಿಗಳ ತಿರುವುಗಳಲ್ಲಿ ನನ್ನನ್ನು ಕರೆದುಕೊಂಡು ಹೋಗುವಾಗ ಅವನು ಗಮನಿಸುತ್ತಿದ್ದುದು MSM ಮಿರರ್ ಸಿಗ್ನಲ್ ಮ್ಯಾನೀವರ್. ಇದೇ ಕ್ರಮದಲ್ಲಿ ಕಾರ್ಯ ನಡೆಯಬೇಕು ಪ್ರತೀ ಸಲವೂ, ಪ್ರತೀ ತಿರುವಿನಲ್ಲಿಯೂ. ತಪ್ಪಿದರೆ ಅಡ್ಡಗೆರೆ. ರಸ್ತೆಯನ್ನು ಬಳಸುವ ಇತರೆಯವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ. ನಿಮ್ಮ ಗಮನ ರಸ್ತೆಯ ಮೇಲಿದೆಯೇ, ಮುಂದಿನ ವಾಹನದಿಂದ ಎಷ್ಟು ದೂರವಿದ್ದೀರಿ ಮತ್ತು ಆ ದೂರವನ್ನು ಹಾಗೆಯೇ ಮೈಂಟೈನ್ ಮಾಡುತ್ತೀರಾ ಎಂದೆಲ್ಲ ಗಮನಿಸುತ್ತಾನೆ. ಇವೆಲ್ಲ ಎಲ್ಲಾ ದೇಶಗಳ ಡ್ರೈವಿಂಗ್ ಮ್ಯಾನುವಲ್‍ಗಳಲ್ಲಿಯೂ ಇರುತ್ತವೆಂಬುದು ಆಕಾಶವಾಣಿಯಲ್ಲಿ ನಮ್ಮ ರಸ್ತೆ ಸಾರಿಗೆ ಕಾರ್ಯದರ್ಶಿಯವರು ನಡೆಸಿಕೊಟ್ಟ ಕಾರ್ಯಕ್ರಮದಿಂದಾಗಿ ತಿಳಿಯಿತು. ವ್ಯತ್ಯಾಸವೆಂದರೆ ಆ ದೇಶಗಳಲ್ಲಿ ಪ್ರತಿಯೊಬ್ಬರು ಆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಮತ್ತು ಹಾಗೆ ಪಾಲಿಸುವುದರಲ್ಲಿ ಹೆಮ್ಮೆ ಪಡುತ್ತಾರೆ. ಅದೇ ನಮ್ಮಲ್ಲಿ ಕಾನೂನು ಮುರಿಯುವುದರಲ್ಲಿಯೇ ಹೆಮ್ಮೆ!
ಅಲ್ಲಿ ಡ್ರೈವಿಂಗ್ ಟೆಸ್ಟಿನ ಕಷ್ಟದ ಭಾಗವೆಂದರೆ ಅವರ ವ್ಯವಸ್ಥೆಯಲ್ಲಿರುವ ಐದು ಮ್ಯಾನೀವರ್‍ಗಳಲ್ಲಿ ಮೂರನ್ನು ನೀವು ಕಡ್ಡಾಯವಾಗಿ ಮಾಡಿ ತೋರಿಸಲೇಬೇಕು. ಒಂದರಲ್ಲಿ ಸ್ವಲ್ಪ ತಪ್ಪಿದರೂ ಟೆಸ್ಟಿನಲ್ಲಿ ಫೈಲ್. ಒಂದರ ಹಿಂದೆ ಒಂದರಂತೆ ಪಾರ್ಕ್ ಮಾಡಿದ ಎರಡು ಕಾರುಗಳ ನಡುವೆ ರಿವರ್ಸ್‍ನಲ್ಲಿ ತಂದು ನಿಮ್ಮ ಕಾರನ್ನು ನಿಲ್ಲಿಸುವುದು. ಅಚ್ಚುಕಟ್ಟಾಗಿ ಕಟ್ಟಿದ ರಸ್ತೆಯ ಮೂಲೆಯಲ್ಲಿ ಅದರ ಅಂಚಿನಗುಂಟ ರಿವರ್ಸ್‍ನಲ್ಲಿ ಬಂದು ಕಾರನ್ನು ನಿಲ್ಲಿಸುವುದು. ಮೂರನೆಯದು ತ್ರೀ ಪಾಯಿಂಟ್ ಟರ್ನ್. ನಮ್ಮಲ್ಲಿಯ `U’ ಟರ್ನ್‍ನ ಹಾಗೆ. ಹೆಚ್ಚು ಅಗಲವಿಲ್ಲದ ರಸ್ತೆಯಲ್ಲಿ ಹಿಂದೆ ಮುಂದೆ ತಿರುಗಿಸುತ್ತ ಕಾರನ್ನು ವಿರುದ್ಧ ದಿಕ್ಕಿಗೆ ತಿರುಗಿಸುವುದು.
ಈ ಯಾವ ತೆರದ ಮ್ಯಾನೀವರ್‍ನಲ್ಲು ಕಾರಿನ ಟಯರು ಫುಟ್ ಪಾತಿನ ದಂಡೆಗೆ ತಗಲಬಾರದು. ಕಿಂಚಿತ್ತು ತಗಲಿದರೂ ಫೈಲ್. ಕಾರು ನಿಲ್ಲಿಸುವಾಗಲೂ ಅಷ್ಟೆ. ದಂಡೆಗೆ ಸಮಾನಾಂತರವಾಗಿ ತೀರ ದೂರವೂ ಅಲ್ಲದೆ ತೀರ ಹತ್ತಿರಕ್ಕೂ ಹೋಗದೆ ನಿಲ್ಲಿಸಬೇಕು. ಓರೆ ಕೋರೆಯಾಗಿ ನಿಲ್ಲಿಸಿದರೂ ಫೈಲ್. ಅಂತೂ ನರ್ವಸ್ ಆಗಿದ್ದರೂ ಯಾವುದೇ ತೊಂದರೆಯಿಲ್ಲದೆ ಎಲ್ಲಾ ಕಸರತ್ತನ್ನೂ ಮುಗಿಸಿ ವಾಪಾಸು ಬಂದಿದ್ದೆವು. ನಿಲ್ಲಿಸಿದ ಕಾರಿನಿಂದ ಇಳಿಯುವ ಮೊದಲೇ ರೇಟಿಂಗ್ ಶೀಟಿನಲ್ಲಿ ನನ್ನ ಸಹಿ ತೆಗೆದುಕೊಂಡು ರಿಸಲ್ಟ್‍ನೊಂದಿಗೆ ನನಗೆ ಕೊಟ್ಟೇ ಬಿಟ್ಟಿದ್ದ `ಕಂಗ್ರಾಟ್ಸ್’ ಎಂದು ಹೇಳುತ್ತ.
ಕಾತರದಿಂದ ಕಾಯುತ್ತಿದ್ದ ಇನ್‍ಸ್ಟ್ರಕ್ಟರ್ ಹತ್ತಿರ ಬರುತ್ತ `ನನಗೆ ಗೊತ್ತಿತ್ತು ನನ್ನ ಹತ್ತಿರ ತರಬೇತಾದವರು ಯಾರೂ ಫೈಲ್ ಆಗುವುದಿಲ್ಲವೆಂದು’ ಎಂದು ಹೇಳಿ ಕೈಕುಲುಕುತ್ತ ಕಂಗ್ರಾಟ್ಸ್ ಹೇಳಿ ಇನ್ನೊಂದು ವಾರದೊಳಗೆ ಲೈಸೆನ್ಸ್ ಬರುತ್ತೆ ಎಂದಿದ್ದ. ದೊಡ್ಡ ಕುತ್ತಿನಿಂದ ಪಾರಾದೆನೆಂದು ನಿಟ್ಟುಸಿರು ಬಿಟ್ಟು ಮೊದಲು ನನ್ನ ಬಾಸ್‍ಗೆ ನಂತರ ಮನೆಯವರಿಗೆ ಫೋನ್ ಮಾಡಿದ್ದೆ. ಮತ್ತೆ ಚಿಂತೆ ಶುರುವಾಗಿತ್ತು ಈ ಸಂಭ್ರಮವನ್ನು ಆಫೀಸಿನವರೊಂದಿಗೆ, ಪರಿಚಯದವರೊಂದಿಗೆ ಮತ್ತು ಮನೆ ಮಂದಿಯೊಂದಿಗೆ ಹಂಚಿಕೊಳ್ಳಲು ಖರ್ಚು ಎಷ್ಟು ಬರಬಹುದು ಎಂದು. ಇಂಗ್ಲಂಡಿನಲ್ಲಿ ಡ್ರೈವಿಂಗ್ ಟೆಸ್ಟ್ ಪಾಸಾಗುವುದೆಂದರೆ ಅಷ್ಟು ದುಬಾರಿ.
ಅದೇ ಸ್ವಲ್ಪ ದಿನಗಳಲ್ಲಿ ಗಲ್ಫ್ ದೇಶದಲ್ಲಿದ್ದ ನನ್ನ ಸ್ನೇಹಿತರೊಬ್ಬರು ಬಂದವರು ಅಲ್ಲಿನ ಡ್ರೈವಿಂಗ್ ಟೆಸ್ಟ್ ಬಗ್ಗೆ ಹೇಳಿ ಎರಡು ಡ್ರಮ್ಮುಗಳನ್ನು ಹತ್ತಿರ ಹತ್ತಿರ ನಿಲ್ಲಿಸಿ ಎಂಟರ ಆಕಾರದಲ್ಲಿ ಕಾರನ್ನು ಹಿಂದೆ ಮುಂದೆ ಮಾಡಲು ಹೇಳಿ ಟೆಸ್ಟ್‍ನಲ್ಲಿ ಫೈಲ್ ಮಾಡುವ ಕುರಿತು ಹೇಳಿದಾಗ ಮತ್ತು ಕಳೆದ ಹದಿನೈದು ವರ್ಷಗಳಿಂದ ಅಲ್ಲಿಯೇ ಇದ್ದ ಅವರಿಗೆ ಇನ್ನೂ ಲೈಸೆನ್ಸ್ ತೆಗೆದು ಕೊಳ್ಳುವುದು ಸಾಧ್ಯವಾಗಲಿಲ್ಲ ಎನ್ನುವುದನ್ನು ಕೇಳಿ ಇಂಗ್ಲೆಂಡೇ ಎಷ್ಟೋ ವಾಸಿ ಎನ್ನಿಸಿತ್ತು.
। ಇನ್ನು ಮುಂದಿನ ವಾರಕ್ಕೆ ।
ಆಸಕ್ತಿದಾಯಕವಾಗಿದೆ