ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಶಾಪಿಂಗ್ ಅನುಭವ..

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

6

ಶಾಪಿಂಗ್ ಅನುಭವ

ಇಂಗ್ಲಂಡಿನಂತಹ ದೇಶದಲ್ಲಿ ಶಾಪಿಂಗ್ ಮಾಡುವುದೇ ಒಂದು ಅನುಭವ. ಅದೂ ದೊಡ್ದ ದೊಡ್ಡ ಅಂಗಡಿಗಳಲ್ಲಿ ಆಗಾಗೊಮ್ಮೆ ರಿಯಾಯಿತಿ ದರದ ಮಾರಾಟವನ್ನು ಘೋಷಿಸಿದಾಗಲಂತೂ ಅಗ್ಗದ ದರದಲ್ಲಿ ಸಿಗುತ್ತದೆಂದು ಬೇಡದ ಸಾಮಾನುಗಳನ್ನು ಹೊರೆ ಹೊರೆಯಾಗಿ ಕೊಂಡುಕೊಳ್ಳುವುದರ ಮೋಜೇ ಬೇರೆ. ಇಂತಹ ರಿಯಾಯಿತಿ ದರದ ಮಾರಾಟಗಳಿಗಾಗಿ ಕಾಯುವವರಲ್ಲಿ ಭಾರತಿಯರೇ ಅಗ್ರಗಣ್ಯರು ಎನ್ನುವಂತಹ ಮಾತುಗಳನ್ನು ಈ ಹಿಂದೆ ಅಮೆರಿಕ ಮತ್ತು ಇಂಗ್ಲೆಂಡುಗಳನ್ನು ಭೇಟಿ ಮಾಡಿ ಬಂದವರು ಹೇಳಿ ಭಾರತೀಯರ ವ್ಯಾಪಾರ ಏನಿದ್ದರೂ ಇಂತಹ ಸಂದರ್ಭಗಳಲ್ಲಿಯೇ ಎನ್ನುವ ಅಭಿಪ್ರಾಯವನ್ನು ಸೃಷ್ಟಿ ಮಾಡಿದ್ದರ ಹಿನ್ನೆಲೆಯಲ್ಲಿ ನಾವೂ ಅಳುಕುತ್ತಲೇ ಅಂತಹ ಅಂಗಡಿಗಳಿಗೆ ಹೋದರೆ ಅಲ್ಲಿ ಎಲ್ಲಿಯ ಭಾರತೀಯರು? ಬಿಳಿಯರು ಮತ್ತು ಕಪ್ಪಿನವರ ನಡುವೆ ಈ ಕಂದಿನವರ ಸುಳಿವೇ ಇರುತ್ತಿರಲಿಲ್ಲ.

ಮ್ಯಾಕ್ರೋ ಎನ್ನುವುದೊಂದು ದೊಡ್ಡ ಅಂಗಡಿಗಳ ಸರಪಣಿ. ಸಗಟು ದರದಲ್ಲಿಯೇ ಚಿಲ್ಲರೆ ವ್ಯಾಪಾರ ಮಾಡುವಂತಹ ಅಂಗಡಿ. ಅವರ ಯಾವುದೇ ಒಂದು ಅಂಗಡಿಯನ್ನು ಹೊಕ್ಕರೂ ಪೂರ್ತಿ ಸುತ್ತಿ ಏನನ್ನು ತೆಗೆದುಕೊಳ್ಳದಿದ್ದರೂ ವಾಪಾಸು ಹೊರಗೆ ಬರಲು ಕನಿಷ್ಠ ಎರಡು ಗಂಟೆಯೇ ಬೇಕು. ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ಜನರಿಗೆ ಬೆಕಾದಂತಹ ಮಾಲುಗಳೆಲ್ಲವು ಹೋಲ್ ಸೇಲ್ ದರದಲ್ಲಿಯೇ ದೊರೆಯುತ್ತಿದ್ದ ಆ ಅಂಗಡಿಗೆ ಪ್ರವೇಶ ಮಾತ್ರ ಅವರದ್ದೇ ಸದಸ್ಯತನದ ಕಾರ್ಡಿನ ಮೂಲಕ.

ಆ ಅಂಗಡಿಯಲ್ಲಿ ಒಮ್ಮೆ ಹದಿನೈದು ಪೌಂಡು ಬೆಲೆಯ ಟೈ ಒಂದರ ಮೇಲೆ ಕಡಿತಗೊಳಿಸಿದ ದರ 3.99 ಎಂದು ನಮೂದಿಸಿದ್ದನ್ನು ತೆಗೆದುಕೊಂಡು ಕೌಂಟರಿನ ಬಳಿಗೆ ಹೋದರೆ ಅಂಗಡಿಯ ನೌಕರ ತಕರಾರೆತ್ತಿದ್ದ. ಅದರ ಬೆಲೆ ಕಡಿಮೆ ಮಾಡಿಲ್ಲ. ಕಣ್ತಪ್ಪಿನಿಂದಾಗಿ ಅದು ಹಾಗಾಗಿದೆ ಎಂದೆಲ್ಲ ವಾದಕ್ಕಿಳಿದಿದ್ದ. ಇದನ್ನು ಗಮನಿಸುತ್ತಿದ್ದ ಇನ್ನೊಬ್ಬ ನೌಕರ ಹತ್ತಿರಕ್ಕೆ ಬಂದು ಏನೆಂದು ಕೇಳಿದವ ಎರಡನೇ ಮಾತನಾಡದೆ ವಾದ ಮಾಡುತ್ತಿದ್ದ ಅವನ ಕೈಯಿಂದ ಕಿತ್ತು 3.99 ಕ್ಕೇ ಬಿಲ್ಲು ಮಾಡಿ `ಸಾರಿ’ ಎಂದು ಎರಡೆರಡು ಬಾರಿ ಹೇಳಿ ಕಳುಹಿಸಿದ್ದ. ಮೊದಲು ತಕರಾರೆತ್ತಿದ ಆ ನೌಕರ ಭಾರತೀಯ ಮೂಲದವನಿದ್ದ! ಒಂದು ವೇಳೆ ಗಿರಾಕಿ ನಾನಾಗಿರದೆ ಒಬ್ಬ ಬಿಳಿಯನಾಗಿದ್ದಿದ್ದರೆ ವಿನೀತನಾಗಿ ಬಿಲ್ಲು ಮಾಡುತ್ತಿದ್ದನೋ ಏನೋ.

ಫ್ರೀ ಟ್ರಯಲ್, ಖರೀದಿಸಿದ ಮಾಲು ನಿಮಗೆ ಹಿಡಿಸದಿದ್ದರೆ ವಾರದೊಳಗೆ ಎರಡು ಮಾತಿಲ್ಲದೆ ಅದನ್ನು ವಾಪಾಸು ಪಡೆದುಕೊಂಡು ನಿಮ್ಮ ಹಣವನ್ನು ನಿಮಗೆ ವಾಪಾಸು ಕೊಡುವುದು ಇದೆಲ್ಲ ಮಾಮೂಲು. ಇಂತಹ ಸೌಲಭ್ಯವನ್ನು ಜನ ಹೆಚ್ಚಾಗಿ ದುರ್ಬಳಕೆ ಮಾಡುವುದಿಲ್ಲ ಅಲ್ಲಿ. ಆದರೆ ನನಗೆ ತಿಳಿದ ಹಾಗೆ ನನ್ನ ಕೆಲ ಸಹೋದ್ಯೋಗಿಗಳಿದ್ದರು. ಇಂಡಿಯಾದಿಂದಲೇ ಬಂದವರು. ಅವರು ಕೆಲವರು ಮಾತ್ರ ಇದನ್ನೊಂದು ಉದ್ಯೋಗವನ್ನೇ ಮಾಡಿಕೊಂಡಿದ್ದರು. ಮತ್ತೆ ಅವರ ದೌಲತ್ತಿಗೆ ಮಾಕ್ರ್ಸ್ ಎಂಡ್ ಸ್ಪೆನ್ಸರ್ ನಂತಹ ಅಂಗಡಿಯೇ ಆಗಬೇಕು. ಯಾವುದೇ ವಿಶೇಷ ಸಮಾರಂಭವಿದ್ದರೆ ಮುನ್ನಾ ದಿನ ಅವರು ಮಾಕ್ರ್ಸ್ ಎಂಡ್ ಸ್ಪೆನ್ಸರ್ ಅಂಗಡಿಯಲ್ಲಿ ತಪ್ಪದೇ ಹಾಜರ್. ತಮಗೆ ಬೇಕಾದ ಅತೀ ಬೆಲೆ  ಬಾಳುವ ಡ್ರೆಸ್ ಮತ್ತು ಸೂಟನ್ನು ಖರೀದಿಸುವುದು. ಸಮಾರಂಭದ ದಿನ ಚೆನ್ನಾಗಿ ಬಳಸಿಕೊಳ್ಳುವುದು ಮತ್ತು ಮಾರನೇ ದಿನ ಅದೇ ಅಂಗಡಿಗೆ ಹೋಗಿ ಅವರು ಕೇಳದಿದ್ದರೂ (ಅವರು ಕೇಳುವುದೇ ಇಲ್ಲ ಬಿಡಿ)ಏನಾದರೂ ಒಂದು ಸಬೂಬು ಹೇಳಿ ವಾಪಾಸು ಕೊಟ್ಟು ಬರುವುದು. ಪದೇ ಪದೇ ಹೀಗೆ ಮಾಡಿದಾಗ ಅಲ್ಲಿನ ಕೆಲಸದವರಿಗೇನು ಮೆನೇಜರರಿಗೆ ಗೊತ್ತಾದರೂ ಅವರೇನೂ ಮಾಡುವಹಾಗಿರಲಿಲ್ಲ. ಯಾಕೆಂದರೆ ಅದು ಅವರ ಕಂಪೆನಿಯ ನೀತಿ! ಈ ನೀತಿಯ ದುರುಪಯೋಗದ ಪರಾಕಾಷ್ಟೆಗೊಂದು ಉದಾಹರಣೆ. ಅದೇ ನಮ್ಮ ಸಹೋದ್ಯೋಗಿಯೊಬ್ಬ ಯೂರೋಪಿನ ಟೂರ್ ಹೋಗುವಾಗ ದೊಡ್ಡ ಅಂಗಡಿಯೊಂದರಿಂದ ಅತ್ಯುತ್ತಮ ಕ್ಯಾಮರಾವನ್ನು ಕೊಂಡಿದ್ದ. ವಾರದ ಅವಧಿಯ ಟೂರಿನಲ್ಲಿ ಆ ಕ್ಯಾಮರಾವನ್ನು ಚನ್ನಾಗಿ ಬಳಸಿಕೊಂಡು ತಿರುಗಿ ಬಂದವನೇ ಆ ಕ್ಯಾಮರಾವನ್ನು ಅಂಗಡಿಯವರಿಗೆ ವಾಪಾಸು ಕೊಟ್ಟು ಬಂದಿದ್ದ. ಒಂದೇ ಒಂದು ಪೆನ್ನಿಯ ಖರ್ಚೂ ಇಲ್ಲದೆ ಅವನ ಪ್ರವಾಸದ ಫೋಟೋಗಳು ತಯಾರಾಗಿದ್ದುವು!

ಸೇನ್ಸ್ ಬರಿ ಎನ್ನುವುದು ಆಹಾರ ಪದಾರ್ಥ ಮತ್ತು ದಿನಬಳಕೆಯ ವಸ್ತುಗಳನ್ನು ಮಾರುವ ಇನ್ನೊಂದು ಸರಪಳಿ ಅಂಗಡಿ. ಅಪ್ಪಟ ಬ್ರಿಟಿಶ್ ಸಂಸ್ಥೆ. ಸೇಲ್ಸ್ ಪ್ರಮೋಷನ್ ಎಂದು ಬಿಸ್ಕಿಟ್ ಡಬ್ಬವೊಂದಕ್ಕೆ 19 ಪೌಂಡಿನಿಂದ 9ಪೌಂಡಿಗೆ ಇಳಿಸಿದ ದರದ ಲೇಬಲ್ ಹಾಕಿ ಶೆಲ್ಫ್‍ನಲ್ಲಿ ಇದ್ದುದನ್ನು ಕೌಂಟರಿಗೆ ಒಯ್ದರೆ ಟಿಲ್ಲರ್ ಮಶೀನಿನಲ್ಲಿ 19 ಪೌಂಡುಗಳನ್ನೇ ತೋರಿಸಿ ಬಿಲ್ಲೂ ಅಷ್ಟಕ್ಕೇ ಪ್ರಿಂಟಾಗಿತ್ತು. ಅದನ್ನು ಕ್ಯಾಶಿಯರ್ ಗಮನಕ್ಕೆ ತಂದಾಗ ಆಕೆ ಬಿಲ್ಲಿನಲ್ಲಿನ ಇಡೀ ಐಟಮನ್ನೇ ಹೊಡೆದು ಹಾಕಿದ್ದಳು. `ಇಲ್ಲ ಅದು ನನಗೆ ಬೇಕು’ ಎಂದಿದ್ದೆ. `ಕ್ಷಮಿಸಿ. ಖಂಡಿತಾ ಇದು ನಿಮಗೇ..ಇದಕ್ಕೆ ನಾವು ಬಿಲ್ ಮಾಡುವುದಿಲ್ಲ’ ಎನ್ನಬೇಕೇ. `ಯಾಕೆ…? ಒಂಭತ್ತು ಪೌಂಡುಗಳನ್ನು ತೆಗೆದುಕೊಳ್ಳಿ. ನನಗೆ ನಿಮ್ಮ ಫ್ರೀ ಬಿಸ್ಕಿಟ್ ಬೇಡವೇ ಬೇಡ’ ಎಂದು ನಾನು ಅಗ್ರಹ ಪಡಿಸಿದರೆ ಆಕೆ ಇನ್ನೂ ವಿನೀತಳಾಗಿ `ಸಾರಿ…ಇದು ನಮ್ಮ ತಪ್ಪಿಗೆ ನಾವೇ ವಿಧಿಸಿಕೊಂಡ ಶಿಕ್ಷೆ. ನೀವು ಇದನ್ನು ಸ್ವೀಕರಿಸಲೇಬೇಕು’ ಎಂದಿದ್ದಳು. ಬೇರೆ ದಾರಿಯೇ ಇಲ್ಲದೆ ನಾನದನ್ನು ತೆಗೆದುಕೊಂಡಿದ್ದೆ. ಇದು ಅವರ ವ್ಯಾಪಾರ ನೀತಿ.

ಬೆಂಗಳೂರಿನಲ್ಲಿ ಪ್ರಸಿದ್ಧ ಅಂಗಡಿಯೊಂದಕ್ಕೆ ಏನನ್ನೋ ಖರೀದಿಸಲು ಹೋಗಿದ್ದೆವು. ಅಂಗಡಿಯೊಳಗೆ ಕಾಲಿಟ್ಟ ಕ್ಷಣದಿಂದ ನಕ್ಷತ್ರಕನಂತೆ ನಮ್ಮ ಹಿಂದೆ ಬಿದ್ದಿದ್ದ ಸೇಲ್ಸ್ ಮನ್ ಒಬ್ಬ ನಮ್ಮ ಹಿಂದೆ ಮುಂದೆ ತಿರುಗುತ್ತ ನಮ್ಮ ಪೂರ್ಣ ಸ್ವಾತಂತ್ರ್ಯವನ್ನು ಹರಣ ಮಾಡಿದ್ದ. `ನೀನ್ಯಾಕೆ ನಮ್ಮ ಹಿಂದೆ ಬಿದ್ದಿದ್ದೀಯ’ ಎಂದು ಕೇಳಿದರೆ ನಮ್ಮನ್ನು ವಿಚಿತ್ರವಾಗಿ ನೋಡುತ್ತ `ಇವರನ್ನು ಹೀಗೇ ಬಿಟ್ಟರೆ ಖಂಡಿತವಾಗಿ ಅಪಾಯವಿದೆ’ ಎಂದು ತನ್ನ ಕಾವಲನ್ನು ಭದ್ರಪಡಿಸಿದ್ದ. ಅಂತೂ ಇಂತೂ ಬಹಳ ಪ್ರಯಾಸಪಟ್ಟು ನಮಗೆ ಬೇಕಾದ ವಸ್ತುವೊಂದನ್ನು ಹುಡುಕಿ ಅದರ ಬೆಲೆಯೆಷ್ಟೆಂದು ವಿಚಾರಿಸಿ ಅವನಿಂದಲೇ ತಿಳಿದುಕೊಂಡು ಪರವಾಯಿಲ್ಲ ಅನ್ನಿಸಿ `ಸ್ವಲ್ಪ ಕಡಿಮೆ ಮಾಡಿಕೊಳ್ಳಪ್ಪ’ ಎಂದರೆ ಅವನು `ಕ್ಯಾಷಿನಲ್ಲಿ ಯಜಮಾನರಿದ್ದಾರೆ ಅವರು ಸ್ವಲ್ಪ ಕಡಿಮೆ ಮಾಡಿದರೂ ಮಾಡಬಹುದು’ ಎಂದು ನಮ್ಮನ್ನು ಸಾಗ ಹಾಕಿದ್ದ. ಸರಿ ಎಂದು ಕೌಂಟರಿಗೆ ಹೋಗಿ `ಸ್ವಲ್ಪ ಕಡಿಮೆ ಮಾಡಿ’ ಎಂದು ಕೇಳಿದರೆ ಆಚೆ ಆ ಹುಡುಗ ಹೇಳಿದ ಬೆಲೆಯ ಮೂರರಷ್ಟು ಹೇಳುವುದೆ? `ಅಲ್ಲ ಆ ಹುಡುಗ…’ ಎಂದರೆ `ಅವನಿಗೆ ಗೊತ್ತಿಲ್ಲ ತಪ್ಪಾಗಿ ಹೇಳಿದ್ದಾನೆ’ ಎಂದುಬಿಟ್ಟಿದ್ದ. ನಾವೂ ಹಿಡಿದ ಪಟ್ಟು ಬಿಡಲಿಲ್ಲ. `ಎಲ್ಲಿ ಕರೆಯಿರಿ ಆ ಹುಡುಗನನ್ನ’ ಎಂದಿದ್ದೆವು. ಇಲ್ಲಿನ ಸಮಸ್ಯೆಯ ಸುಳಿವು ಹತ್ತಿ ತಲೆ ಮರೆಸಿಕೊಳ್ಳಲು ನೋಡುತ್ತಿದ್ದ ಹುಡುಗನನ್ನು ನಾವೇ ಹುಡುಕಿ ಎಳೆದುಕೊಂಡು ಬಂದರೆ ಅವ `ನನಗೆ ಗೊತ್ತೇ ಇಲ್ಲ. ನಾನು ಹೇಳಿಯೇ ಇಲ್ಲ..’ ಎನ್ನುವುದೇ?

`ಅಲ್ಲ ನೀವು ಸಾಮಾನಿನ ಮೇಲೆ ಚೀಟಿ ಅಂಟಿಸದಿದ್ದುದು ಒಂದು ತಪ್ಪು. ನಿಮ್ಮ ಸೇಲ್ಸ್ ಮನ್ ಗಳಿಗೆ ತರಬೇತಿ ಕೊಡದಿದ್ದುದು ಇನ್ನೊಂದು ತಪ್ಪು’ ಎಂದೆಲ್ಲ ಹೇಳಲು ಹೊರಟ ನಮ್ಮನ್ನು ಅರ್ಧಕ್ಕೇ ತಡೆಯುತ್ತ ಅವ ಗಂಟು ಮುಖ ಹಾಕಿಕೊಂಡ ಯಜಮಾನ `ಬೇಕಿದ್ದರೆ ತೆಗೆದುಕೊಳ್ಳಿ. ಇಲ್ಲವಾದರೆ ಬಿಡಿ.. ಅದರ ಬೆಲೆ ಅಷ್ಟೇ’ ಎಂದು ನಮ್ಮ ಮುಖದಮೇಲೆ ಹೊಡೆದ ಹಾಗೆ ಹೇಳಿ ಇನ್ನೊಂದು ಕಡೆಗೆ ತಿರುಗಿಕೊಂಡಿದ್ದ. ಅಷ್ಟು ಹೊತ್ತು ಅವನ ಅಂಗಡಿಯಲ್ಲಿ ನಮಗೆ ಬೇಕಿದ್ದ ಸಾಮಾನನ್ನು ಹುಡುಕುತ್ತ ಕಳೆದ ನಮ್ಮ ಸಮಯ ಮತ್ತು ಶ್ರಮದ ಬೆಲೆ! ಅಂಗಡಿ ಮೆಟ್ಟಲಿಳಿಯುತ್ತ ನನ್ನ ಹೆಂಡತಿ ಸೇನ್ಸ್ ಬರಿಯನ್ನು ನೆನಪು ಮಾಡಿಕೊಂಡಿದ್ದಳು. ನಾನಂದಿದ್ದೆ `ನಾವೀಗ ಇದ್ದದ್ದು ಇಂಡಿಯಾದಲ್ಲಿ ಮತ್ತು ಇದು ಬೆಂಗಳೂರು’ ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

January 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This