ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಕನಸುಗಳು ಕಳೆದುಹೋಗುತ್ತಲೇ ಇರುತ್ತವೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

9

ನನ್ನ ಹತ್ತಿರ ಅವತ್ತು ದುಡ್ಡಿರಲಿಲ್ಲ ಆದರೆ ಸಂತೋಷವಿತ್ತು. ಜವಾಬ್ದಾರಿ ಇರಲಿಲ್ಲ ಆದರೆ ಪ್ರೀತಿಯಿತ್ತು. ತಿನ್ನಲು ಊಟ ಇರದ ಹೊತ್ತಲ್ಲೂ ಆಡುಗಳನ್ನು ಬಿಟ್ಟು ಅವು ತಿನ್ನುತ್ತಿದ್ದ ಎಲ್ಲ ಸೊಪ್ಪುಗಳನ್ನೂ ನಾನೂ ಹೆರೆದು ತಂದು ಅಡುಗೆ ಮಾಡಿ ಅದನ್ನೇ ಅಮೃತ ಎನ್ನುವ ಹಗೆ ತಿನ್ನುತ್ತಿದ್ದೆವಲ್ಲ ಅವತ್ತು ನಮಗಿದ್ದ ಕೊರತೆ ತಿನ್ನಲಿಕ್ಕೆ ಇಲ್ಲ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ಅಲ್ಲ. ಆದರೆ ಇವತ್ತು ಎಲ್ಲಾ ಇದೆ. ಅದರೊಂದಿಗೆ ಅಹಮ್ಮುಗಳದ್ದೆ ಮೇಲಾಟ. ಪ್ರತಿಷ್ಠೆಯದ್ದೆ ಪ್ರಶ್ನೆ. ನನ್ನ ಅಸ್ತಿತ್ವವನ್ನು ಹುಡುಕುತ್ತಾ ಹುಡುಕುತ್ತಾ ನಾನೇ ಇಲ್ಲವಾಗಿಬಿಡುತ್ತೇನೋ ಎನ್ನುವ ಭೀತಿ ಎಲ್ಲವೂ ಹಿಂಡಿಹಿಪ್ಪೆ ಮಾಡುತ್ತಿವೆ.

ನಾನು ನಿಮ್ಮೊಂದಿದೆ ಕಾಡು ರಾಮನ ಹಳ್ಳಿಗೆ ಬರಲ್ಲ ಅಂದೆ ಅಲ್ಲವೇ? ಆ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಹೇಗೆ? ಊರು ಸತೀಶ ಅತ್ತೆ ಮಾವ ಅಂತ ಎಲ್ಲಾ ನೆನಪಾದ ಮೇಲೆ ಹೋಗಿಯೇ ಬಿಡಬೇಕು ಎನ್ನುವ ಅದಮ್ಯವಾದ ಕಾಂಕ್ಷೆ ನನ್ನನ್ನು ಆವರಿಸಿಕೊಳ್ಳತೊಡಗಿದೆ. ಕಡೆಯ ಪಕ್ಷ ಸತೀಶನ ಸಮಾಧಿಗೆ ಕಾಮ್ರೇಡ್ ಎಂದು ಒಂದು ಲಾಲ್ ಸಲಾಂ ಮಾಡಬೇಕು, ನಿನ್ನಪ್ಪ ಎಂದು ಆಶಾಗೆ ತೋರಿಸಬೇಕು… ಅದಕ್ಕಾಗಿ ಈಗ ಬರಬೇಕೆನ್ನಿಸುತ್ತಿದೆ ಸಹಾ ಬರುವೆ ಎನ್ನಬೇಕು ಅನ್ನಿಸಿತ್ತು. ಆದರೆ ಕೇಳಲಿಕ್ಕೆ ಆತ್ಮಾಭಿಮಾನ ಅಡ್ದಿ ಬಂದಿತ್ತು. ಈ ಸಂಕಟದಿ೦ದ ಪಾರು ಮಾಡಿದ್ದು ಸಹಾರ ಆ ಮಾತು. ಅವರಿಗೆ ಈ ಈಗೋ ಕಾಡುವ ಹಾಗಿರಲಿಲ್ಲ, ತಣ ದಿತ್ತು. ಕಾರಣ ಅವರು ಗೆದ್ದಿದ್ದರು- ತಾನೇ ಆಡಿದ ತನ್ನ ಆಟವನ್ನು ಮುಗಿಸಿದ ಉತ್ಸಾಹದಲ್ಲಿ, ಎಲ್ಲವೂ ಸರಿಯಾಯಿತು ಎನ್ನುವ ಆತ್ಮವಿಶ್ವಾಸದಲ್ಲಿ ‘ಚೈತನ್ಯ ನಾಳೆ ನಿಮ್ಮೂರಿಗೆ ಹೊರಡಬೇಕು, ತಯಾರಾಗಿರಿ’ ಎಂದು ಹೇಳಿ ಮನೆಗೆ ಹೊರಟರು. ಇದ್ದಕ್ಕಿದ್ದ ಹಾಗೆ ಯಾಕೋ ಒಂಟಿತನ ಕಾಡಿಸಿತ್ತು.

ಇವತ್ತು ಬೆಳಗಿನ ತನಕ ಸಹಾರ ಮೇಲಿದ್ದ ಅಸಹನೆ ಎಲ್ಲಿ ಹೋಯಿತು? ಅವರ ತಪ್ಪುಗಳ ಲೆಕ್ಕವನ್ನು ಇಡಲಿಕ್ಕಾಗದ ಸ್ಥಿತಿ ನನಗ್ಯಾಕೆ ಬಂತು? ಆದರೂ ಮನಸ್ಸಿನ ಆಳದಲ್ಲಿ ಕೊರೆಯುತ್ತಿದ್ದ ‘ಕಡೆಗೂ ಸೋತೆಯಾ ಚೈತನ್ಯ’ ಎನ್ನುವ ಮಾತೊಂದು ಮಾತ್ರ ಹಾಗೇ ಉಳಿದು ಅಣಕಿಸಿತ್ತು. ನನಗದು ಅಭ್ಯಾಸವಾಗಿದೆ ಗೊಣಗಿಕೊಂಡೆ. ನನ್ನ ಹಟ, ನಿಲುವು ಹೋರಾಟ ಎಲ್ಲವೂ ಒಂದು ಕ್ಷಣ ಮಣ್ಣಿಗೆ ಸೇರಿತ್ತು. ಗಂಡಸು ತನಗೆ ಹೇಗೆಬೇಕೋ ಹಾಗೆ ವ್ಯವಸ್ಥೆಯನ್ನು ತಿರುಗಿಸಿಕೊಳ್ಳಬಲ್ಲವನಾಗಿರುತ್ತಾನೆ. ಹೆಣ್ಣು ಅದಕ್ಕೆಲ್ಲಾ ಬಗ್ಗಲೇಬೇಕು. ಯಾಕೆಂದರೆ ವ್ಯವಸ್ಥೆಯೇ ಅವನು.

ಸಹಾರಲ್ಲಿ ಅದೊಂದು ಬಗೆಯ ಚಾಣಾಕ್ಷತನವಿದೆ. ಹೇಳುವುದನ್ನು ತನಗೆ ಅಲ್ಲ ವಿಶ್ವಕ್ಕೆ ಹೊಂದಿಕೆಯಾಗುವುದೇನೋ ಎನ್ನುವ ಹಾಗೇ ತಿರುಗಿಸಿಬಿಡುತ್ತಾರೆ. ಲಲಿತಕ್ಕನ ವಿಷಯದಲ್ಲಿ ಆದದ್ದೂ ಇದೇ. ನನಗೆ ಈಗಲೂ ಆ ವಿಷಯಕ್ಕೆ ಪಾಪಪ್ರಜ್ಞೆ ಕಾಡಿಸುತ್ತೆ. ಲಲಿತಕ್ಕನಿಗೆ ನಮ್ಮಿಬ್ಬರ ವಿಷಯ ಗೊತ್ತಾದ ಕ್ಷಣ ಉಸಿರೇ ನಿಂತು ಹೋಗಿತ್ತು. ನಂತರ ನನ್ನೊಂದಿಗೆ ಆದ ಎಲ್ಲವೂ ಈ ಜನ್ಮ ಮಾತ್ರವಲ್ಲ ಏಳೇಳು ಜನ್ಮಗಳು ಕಳೆದರೂ ಮರೆಯಲಾಗದ ಅವಮಾನಗಳೇ. ಅವರಿಗೂ ಹಾಗೇ ಅನ್ನಿಸಿದ್ದಿರಬಹುದು. ಲಲಿತಕ್ಕ ಮೊದಲು ನಮ್ಮ ಈ ಸಂಬ೦ಧವನ್ನು ವಿರೋಧಿಸಿ, ಸಹಾಗೆ ‘ನೋಡಿ ಇದೆಲ್ಲಾ ಸರಿಯಿರಲ್ಲ' ಎಂದಿದ್ದರು.‘ನಾನು ಮಾಡುವ ಗಲಾಟೆಯಿಂದ ನಿಮ್ಮ ಮರ್ಯಾದೆ ಹೋಗುತ್ತದೆ’ ಎಂದರು-ಗ೦ಡಸಿಗೆ ಮರ್ಯಾದೆ ಎನ್ನುವುದು ಅಂಗಿಯ ಹಾಗೆ ಎಂದು ತಿಳಿದಿದ್ದರೂ ಕೂಡಾ. ಯಾವುದೂ ನಡೆಯದೆ ಇದ್ದಾಗ ತಡಿಯಲಾಗದೆ ಮನೆಗೆ ಬಂದು ನನ್ನ ಜುಟ್ಟನ್ನು ಹಿಡಿದು ಎಳೆಯುತ್ತಾ ಬೆನ್ನಿಗೆ, ಹೊಟ್ಟೆಗೆ, ಕೆನ್ನೆಗೆ ಸಿಕ್ಕ ಸಿಕ್ಕ ಕಡೆಗೆಲ್ಲಾ ಹೊಡೆದರು. ನೋವಾದರೂ ಕಿರುಚಿಕೊಳ್ಳದೆ ಎಲ್ಲವನ್ನೂ ಸಹಿಸಿಕೊಂಡೆ, ದೀನಳಾಗಿ ಬೇಡಿಕೊಂಡೆ, ಕಂಕಳಲ್ಲಿದ್ದ ಆಶಾಳನ್ನು ತೋರಿಸಿ ನನಗೆ ಯಾರೂ ಗತಿಯಿಲ್ಲವೆಂದೆ. ನಿನ್ನ ಬಗ್ಗೆ ಯೋಚನೆ ಮಾಡು ಅಂತ ಕೇಳ್ತೀಯಲ್ಲಾ, ನನ್ನ ಗಂಡನನ್ನು ನಿನ್ನ ಕೈಗೆ ಹಾಕಿಕೊಂಡು ನನ್ನ ಜೀವನ ನಾಶ ಮಾಡಿ! ನನ್ನ ಬಗ್ಗೆ ಯೋಚನೆ ಮಾಡೋರು ಯಾರು? ಗಂಡನಾದವನಿಗ೦ತೂ ಮೊದಲೇ ಇಲ್ಲ. ಅವರಿಗೇನು ಮೋಜು. ನಿಭಾಯಿಸಬಲ್ಲೆ ಎನ್ನುವ ಅಹಂ. ಆದರೆ ನಿನ್ನ ಬುದ್ದಿ ಏನು ತಿನ್ನುತ್ತಿತ್ತು? ಬರುವಾಗ ಒಂದು ಕ್ಷಣ ತುಂಬಿದ ಮನೆಯೊಂದನ್ನು ಹಾಳು ಮಾಡ್ತಾ ಇದೀನಿ ಅಂತ ಯೋಚನೆ ಕೂಡಾ ಬೇಡವಾಗಿತ್ತಾ ನಿನಗೆ?’ ಎನ್ನುತ್ತಾ ಕೋಪ ಎಲ್ಲಾ ತೀರಿದ ಮೇಲೆ ಅಂಗಳದಲ್ಲಿ ಕುಳಿತು ಅಳುತ್ತಾ ತನ್ನ ನೋವನ್ನು ತೀರಿಸಲಿಕ್ಕೆ ನೋಡಿದರು. ಎಮೋಷನಲ್ ಬ್ಲಾಕ್ ಮೇಲ್ ಮಾಡಲಿಕ್ಕೆ ನೋಡಿದರು. ನನಗೆ ಹೋಗಬೇಕು ಅನ್ನಿಸಲಿಲ್ಲ ಅಂತ ಅಲ್ಲ. ಹೋಗಲಿಕ್ಕೆ ಬೇರೆ ದಾರಿ ಇರಲಿಲ್ಲ. ನನಗೂ ಮನಸ್ಸು ಅಂತ ಇತ್ತಲ್ಲ. ಯಾವುದೂ ವರ್ಕ್ ಆಗಲಿಲ್ಲ. ಸಹಾರ ಮೇಲೆ ಕೋಪ ಮಾಡಿಕೊಳ್ಳಲಿಕ್ಕಾಗದ ಅಸಹಾಯಕತೆ ನನ್ನ ಮೇಲೆ ಹೀಗೆ ಸೇಡು ತೀರಿಸಿಕೊಳ್ಳುವಂತೆ ಮಾಡಿತ್ತು. ಅವತ್ತು ನಮ್ಮ ಮನೆಯಿಂದ ಹೋಗುತ್ತಾ ದಾರಿಯುದ್ದಕ್ಕೂ ನನ್ನ ಮತ್ತು ಸಹಾರ ಸಂಬ೦ಧದ ಬಗ್ಗೆ ಮಾತಾಡುತ್ತಾ, ಸಿಕ್ಕವರ ಬಳಿ ಹೇಳುತ್ತಾ ಹೋದರಲ್ಲ! ಅಲ್ಲಿಗೂ ಅವರ ಸಂಕಟ ತೀರಲಿಲ್ಲ. ಅದು ತೀರುವುದಲ್ಲ ಎಂದು ನನಗೂ ಗೊತ್ತಿತ್ತು. ನಾನು ಸಹಾಗೆ, ‘ವಾಪಾಸು ಹೋಗಿಬಿಡ್ತೀನಿ, ನಿಮಗೆ ನನ್ನಿಂದ ತುಂಬಾ ನೋವಾಗ್ತಾ ಇದೆ’ ಎಂದೆ. ನಾನು ಹಾಗೆ ಹೇಳಿದೆನೇ. ನನಗೆ ಇದೆಲ್ಲಾ ಗೊತ್ತಿಲ್ಲದೆಯೇ ನಿಮ್ಮನ್ನು ಕರೆದುಕೊಂಡು ಬಂದೆನೇ. ಚೇತೂ ನೀವು ನನ್ನ ಜೊತೆ ಬಂದಾಗಿದೆ, ವಾಪಾಸು ಹೋಗಲಾರದಷ್ಟು ದೂರ. ಆ ಮಾತೆಲ್ಲಾ ಈಗ ಬೇಡ. ಈಗ ನಿಮ್ಮನ್ನು ನಾನು ವಾಪಾಸು ಕಳಿಸಿದ್ರೆ ಜಗತ್ತಿನ ಕಣ್ಣಿಗೆ ಹೇಡಿಯಾಗ್ತೇನೆ. ಅದು ನನ್ನ ಆಡಿಕೊಂಡು ನಗುತ್ತೆ. ನಗಲಿ ಎಂದು ನಿಮಗನ್ನಿಸಿದ್ರೆ ಹೊರಟು ಬಿಡಿ’ ಎಂದರು. ಅವತ್ತು ಮಾತ್ರವಲ್ಲ ಇವತ್ತಿನ ವರೆಗೂ ಯಾವತ್ತೂ ಸಹಾ ನನ್ನನ್ನು ಬಿಡುವ ಮಾತನ್ನು ಆಡಿಲ್ಲ. ನಾನು ಪದೇ ಪದೆ ಬಿಡುವ ಮಾತನ್ನು ಆಡ್ತೇನೆ. ಒಂದೊ೦ದು ಸಲ ನನ್ನ ಮನಸ್ಸಿನ ಆಳದಲ್ಲಿ ಈ ಸಂಬ೦ಧ ತಪ್ಪುಎನ್ನುವುದೇ ಇದೆಯಾ ಅದಕ್ಕಾಗಿ ನಾನು ಹೀಗೆಲ್ಲ ಮಾತಾಡ್ತೀನಾ ಎಂದೆನ್ನಿಸುತ್ತೆ. ಸಂಬ೦ಧ ತಪ್ಪು ಅನ್ನಿಸಿಬಿಟ್ಟರೆ ನಮ್ಮ ಕೆಲಸಗಳಿಗೆ ಅರ್ಥಗಳು ಕಳೆದುಹೋಗುತ್ತವೆ ಆದ್ದರಿಂದ ಹೀಗೆಲ್ಲಾ ಅಂದುಕೊಳ್ಳಬಾರದು ಎಂದುಕೊಳ್ಳುತ್ತೇನೆ. ನನಗಾಗಿ ನೋವನ್ನು ವಿಷಕಂಠನ ಹಾಗೆ ಸಹಿಸಿಕೊಳ್ಳುತ್ತಿರುವ ಸಹಾರ ಮಾತನ್ನು ತೆಗೆದುಹಾಕಲಿಕ್ಕೆ ನನಗೆ ಮನಸ್ಸಾಗಲಿಲ್ಲ. ಆಗಲೇ ಅವರು, ‘ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ಹೋಗಬಹುದು’ ಎಂದಿದ್ದರು.’ ಕಡೆಯ ದಾಳ ಉರುಳಿಸಿದ ಮೇಲೆ ಒಂದು ಕಡೆಗೆ ಸೋಲು, ಇನ್ನೊಂದು ಕಡೆಗೆ ಗೆಲುವು ಆಗಲೇ ಬೇಕಲ್ಲ! ಇನ್ನು ಮುಂದೆ ನೀವು ಎಲ್ಲಿಗೂ ಹೋಗುವಂತಿಲ್ಲ, ಅದೇನು ಬಂದರೂ ನಾನೇ ಎದುರಿಸುತ್ತೇನೆ’ ಎಂದು ಖಂಡತು೦ಡವಾಗಿ ಹೇಳಿಬಿಟ್ಟಿದ್ದರು. ಎಲ್ಲವನ್ನೂ ತೊರೆದುಕೊಂಡು ಬಂದ ಮೇಲೆ ನಾನಾದರೂ ಹೋಗುವುದು ಎಲ್ಲಿಗೆ? ನಂತರ ಲಲಿತಕ್ಕ ತನ್ನ ಕೈಲಾಗಲಿಲ್ಲ ಎಂದು ಅವರಪ್ಪ, ಅಮ್ಮ, ಅಣ್ಣ, ತಮ್ಮ ಎಲ್ಲರನ್ನೂ ಕರೆತಂದರು. ಅವರ ತಾಯಿ ನನ್ನ ಕೆಟ್ಟ ಮಾತುಗಳಲ್ಲಿ ಬೈದರು. ಹಳ್ಳಿಯಲ್ಳೇ ಬೆಳೆದರೂ, ಅಂಥಾ ಮಾತುಗಳನ್ನು ನಾನು ಎಂದೂ ಕೇಳಿರಲಿಲ್ಲ. ನನ್ನನ್ನು ಎಲ್ಲರೂ ಪ್ರೀತಿಯಿಂದಲೇ ನೋಡಿದ್ದರು. ‘ಎರಡನೇ ಹೆಂಡತಿ ಆಗಿ ಹೋಗುವುದೆಂದರೆ ಸುಮ್ಮನೆ ಮಾತಲ್ಲ’ ಎಂದು ಅತ್ತೆ ಒತ್ತಿ ಹೇಳಿದ್ದರ ಹಿಂದೆ ಇದೆಲ್ಲಾ ಇತ್ತೇನೋ? ಅನುಭವ ದೊಡ್ಡದಲ್ಲವೇ. ಲೋಕಜ್ಞಾನಕ್ಕೆ ಎಲ್ಲವೂ ಹೊಳೆಯುತ್ತದೆ. ನನಗೆ ನಾನೇ ಸಮ್ಮಾಧಾನ ಹೇಳಿಕೊಳ್ಳುವಂತೆ, ‘ಎಲ್ಲಾ ಸಹಾ ನಿಭಾಯಿಸುತ್ತಾರೆ’ ಎನ್ನುವ ಧೈರ್ಯವನ್ನು ಕೊಟ್ಟುಕೊಂಡಿದ್ದೆ. ಲಲಿತಕ್ಕನ ಕಡೆಯ ಎಲ್ಲರೂ ಸಹಾರ ಎದುರೇ ಪಂಚಾಯಿತಿ ಮಾಡಿದರು. ನನ್ನನು ಬಿಟ್ಟು ಬಿಡುವಂತೆ ಕೇಳಿಕೊಂಡರು ಹೆದರಿಸಿದರು. ಸಹಾ ನನ್ನ ನಂಬಿಕೆಯ೦ತೆ ಅವರ್ಯಾರನ್ನೂ ಕೇರ್ ಮಾಡಲಿಲ್ಲ. ‘ನನ್ನ ಹೆಂಡತಿಯನ್ನು ನಾನು ಒಪ್ಪಿಸ್ಕೊಳ್ಳುತ್ತೇನೆ. ಇದಕ್ಕೂ ನಿಮಗೂ ಸಂಬ೦ಧವಿಲ್ಲ, ಎಲ್ಲರೂ ಸುಮ್ಮನಿದ್ದುಬಿಡಿ’ ಎಂದಿದ್ದರು. ಸಹಾರನ್ನು ಬಗ್ಗಿಸಲಾಗದೆ ಇದ್ದಾಗ ನನ್ನ ಒಂಟಿಯಾಗಿ ಕಂಡು ಹೆದರಿಸಿದರು, ಹೀನಾಮಾನ ಬೈದರು. ಲಲಿತಕ್ಕನ ತಮ್ಮ ಮಾರುತಿ ನನ್ನ ಮೇಲೆ ಕೈ ಮಾಡಲು ಬಂದಾಗ. ಪುಟ್ಟ ಕೂಸು ಆಶಾನ್ನ ಅವಚಿಕೊಂಡು ಗುಬ್ಬಿ ಮರಿಯಂತೆ ಮೂಲೆಯಲ್ಲಿ ಕೂತೆ. ‘ನಿನ್ನ ನಾನು ಏನು ಬೇಕಾದರೂ ಮಾಡಬಲ್ಲೆ, ಕಡೆಗೆ ಅತ್ಯಾಚಾರವನ್ನು ಕೂಡಾ. ನೀನು ಹೆಂಗಸು ಎನ್ನುವುದನ್ನು ನೆನಪಿಟ್ಟುಕೋ’ ಎಂದಿದ್ದರು. ಕಾಡಿನ ದಾರಿಯಿಲ್ಲದ ಕಡೆಗಳಲ್ಲಿ ಕೈಲಿದ್ದ ಕುಡಲುಗಳಿಂದ ಪೊದೆ ಬಳ್ಳಿಗಳನ್ನು ಕಡಿದು ದಾರಿ ಮಾಡುತ್ತಾ, ಶತ್ರು ನಮ್ಮ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆಗಳನ್ನು ಅಂದಾಜಿಸಿ, ಬರುವ ಕೆಲವೇ ಇಂಗ್ಲೀಷ್ ಪದಗಳಲ್ಲಿ ಒಂದಾಗಿದ್ದ ‘ಫಾಲೋ ಮೀ’ ಎಂದು ಕೈಗಳ ಸನ್ನೆ ಮಾಡುತ್ತಾ, ಗುಂಪೊ೦ದನ್ನು ನಿರ್ದೇಶಿಸುತ್ತಿದ್ದ ನಾನು ಆತ್ಮ ವಿಶ್ವಾಸದಿಂದ ಹೆಜ್ಜೆ ಇರಿಸುತ್ತಿದ್ದೆನಲ್ಲಾ? ಅದೆಲ್ಲಿ ಹೋಯಿತು? ಕಾಡು ಕೊಡುವ ದೃಢತೆಯನ್ನು ನಾಡು ನನಗೆ ಯಾವತ್ತು ಕೊಡಲೇ ಇಲ್ಲ. ತಮಗೆ ತೊಂದರೆ ಆಗಬಹುದು ಎನ್ನುವ ಸೂಚನೆ ಸಿಗದೆ ಯಾವ ಪ್ರಾಣ ಗಳು ಮೇಲೆರಗುತ್ತಿರಲಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅವುಗಳು ನಮ್ಮ ಮೇಲೆ ಕರುಣೆ ತೋರುತ್ತಿದ್ದವು. ಆದರೆ ಮನುಷ್ಯ ಅವನ ಜಗತ್ತೇ ಬೇರೆ. ತಾನು ಮಾತ್ರ ಮುಖ್ಯವಾದ ತನಗೆ ಮಾತ್ರ ಒಳಿತಾಗಲಿ ಎನ್ನುವ ಅಪೇಕ್ಷೆಯಿಂದ ಹೊರಡುವ ಅವನು ಅಪಾಯವಲ್ಲ ಅದರ ಕಲ್ಪನೆಯಿಂದಲೇ ಕೆರಳಿಬಿಡುತ್ತಾನೆ. ಒಂದು ಹಂತಕ್ಕೆ ಹೀಗೆ ನನಗೆ ಆಗುತ್ತಿದ್ದ ಅವಮಾನಕ್ಕೆ ಮತ್ತೆ ನನ್ನ ಊರಿಗೆ ತಿರುಗಿ ಹೋಗಬೇಕು ಎನ್ನಿಸಿತ್ತಲ್ಲ! ಆದರೆ ಯಾವ ಮುಖ ಹೊತ್ತು ಹೋಗಲಿ? ಅತ್ತೆ ಮಾವನಿಗೆ ಏನೆಂದು ಹೇಳಲಿ? ನನಗೆ ಸಹಾ ಜೊತೆ ಬದುಕುವುದು ಸಾಧ್ಯವಾಗುತ್ತಿಲ್ಲ, ಅವರ ಮನೆಯವರೆಲ್ಲಾ ನನ್ನ ಮೇಲೆ ಆಕ್ರ‍್ರಮಣ ಮಾಡ್ತಾ ಇದಾರೆ ಎನ್ನಲಾ? ತಲೆಕೆಟ್ಟು ಹೋಗಿತ್ತು. ಮಾಡಿದ್ದ ನಿರ್ಧಾರವನ್ನು ಪಕ್ಕಕ್ಕೆ ಇಟ್ಟು ಸುಮ್ಮನೆ ಕುಳಿತುಬಿಟ್ಟೆ.

ದಿನ ಬೆಳಗಾದರೆ ಲಲಿತಕ್ಕನದ್ದು ಒಂದೇ ವರಾತ, ತನ್ನ ಮಕ್ಕಳಿಗೂ ತನಗೂ ಯಾರು ದಿಕ್ಕು ಎಂದು. ಕೊರಗಿನಲ್ಲಿ ಊಟ ತಿಂಡಿ ಎಲ್ಲವನ್ನು ಬಿಟ್ಟೆ. ಆಶಾ ಕಣ್ಣೆದುರಿಲ್ಲದಿದ್ದಾಗ ಸತ್ತು ಹೋಗಿಬಿಡಬೇಕು ಅನ್ನಿಸುತ್ತಿತ್ತು. ಅವಳ ಮುಖ ನೋಡಿದ ತಕ್ಷಣ ಅಪ್ಪನನ್ನು ಕಳಕೊಂಡಿದೆ, ಇನ್ನು ನಾನೂ ‘ಇವಳನ್ನು ಬಿಟ್ಟರೆ ಯಾರು ಗತಿ?’ ಎನ್ನಿಸಿ ಸಾಯುವ ನನ್ನ ನಿರ್ಧಾರದಿಂದ ದೂರ ಸರಿಯುತ್ತಿದ್ದೆ. ನನ್ನೊಳಗಿನ ಗೊಂದಲ ಸಹಾಗೆ ಗೊತ್ತಾಗ್ತಾ ಇರಲಿಲ್ಲ ಅಂತ ಅಲ್ಲ. ಅವರೂ ಏನು ಮಾಡಬಹುದು ಎಂದು ಹತ್ತು ದಿಕ್ಕುಗಳಿಂದ ಯೋಚಿಸುತ್ತಿದ್ದರು. ಸಹಾರಿಗೂ ಎಲ್ಲರೊಂದಿಗೆ ಮಾತಾಡಿ ಮಾತಾಡಿ ಸಾಕಾಗಿತ್ತು. ಸಮಾಧಾನ ಮಾಡುವುದಕ್ಕೆ ಅವರ ಹತ್ತಿರ ಯಾವ ಪದಗಳೂ ಉಳಿದಿರಲಿಲ್ಲ. ಒಂದು ದಿನ ಎಲ್ಲರನ್ನು ಕೂಡಿಸಿಕೊಂಡು ಸಹಾ ಒಂದೇ ಮಾತನ್ನ ಹೇಳಿದರು. ‘ಚೈತನ್ಯರನ್ನು ನನ್ನೊಂದಿಗೆ ಕರೆದುಕೊಂಡು ಬಂದಿರುವುದು ನನ್ನ ಗೆಳೆಯ ಸತೀಶನಿಗೆ ಕೊಟ್ಟ ಮಾತನ್ನ ನೆರವೇರಿಸಲಿಕ್ಕೆ. ನಾನು ಲಲಿತಾಗೆ ಯಾವ ಅನ್ಯಾಯವನ್ನೂ ಮಾಡಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಚೈತನ್ಯ ದೊಡ್ಡ ಕಲಾವಿದೆ. ಅವರನ್ನು ನನ್ನ ಜೊತೆ ಇದ್ದಾರೆ ಎನ್ನುವ ಕಾರಣಕ್ಕೆ ಅಗೌರವಿಸಬೇಡಿ. ಆಕೆಗೆ ಹಾಡಿನಿಂದ ಜನರನ್ನು ಒಲಿಸಿಕೊಳ್ಳುವ ಕಲೆ ಒಲಿದಿದೆ. ನನ್ನ ಹೋರಾಟಕ್ಕೆ ಇಂಥಾದ್ದೊ೦ದು ಸಪೋರ್ಟ್ ಬೇಕು. ಈ ನಮ್ಮ ಸಂಬ೦ಧದಲ್ಲಿ ಎಲ್ಲವೂ ಇದೆ – ಸಾಂಗತ್ಯ, ಸಾಹಚರ್ಯ, ಸಂತೈಕೆ, ಸಪೂರ್ಟ್… ಎಲ್ಲವೂ. ಉದ್ದೇಶ ಸ್ಪಷ್ಟ. ಸಂಸಾರಕ್ಕೆ ಅಂತ ಬಂದರೆ ಲಲಿತ ನನ್ನ ಜವಾಬ್ದಾರಿ. ಅವಳು ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದವಳು. ನಾನು ಊರುಬಿಟ್ಟು ಹೋದಾಗ ಒಬ್ಬಳೇ ಮಕ್ಕಳನ್ನೂ ನಿಭಾಯಿಸಿದವಳು. ಅವಳಿಲ್ಲ ಅಂದಿದ್ದರೆ ನಾನು ಈ ಸ್ಥಿತಿಗೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ಇರುವ ಮನೆ ಚೂರುಪಾರು ಜಮೀನು ಎಲ್ಲವನ್ನೂ ಅವಳ ಹೆಸರಿಗೇ ಬರೆದುಬಿಡುವೆ. ನೀವು ಕೇಸು ಹಾಕಿದರೂ ಇದಕ್ಕಿಂತ ಹೆಚ್ಚಿನದ್ದು ದೊರಕದು. ಇನ್ನು ದುಡಿಯುವ ಶಕ್ತಿ ಚೈತನ್ಯಗಿದೆ. ಇವರಿಗೆ ನಾನು ಏನನ್ನೂ ಕೊಡಲಾರೆ- ಜೊತೆಗಿರುವೆ ಎನ್ನುವ ಒಂದು ಭರವಸೆಯನ್ನು ಬಿಟ್ಟರೆ. ನೀವು ನಮ್ಮ ಸಂಬ೦ಧವನ್ನು ಅಕ್ಸೆಪ್ಟ್ ಮಾಡಿಲ್ಲ ಅಂದರೆ ನಿನಗೇ ಕಷ್ಟ’ ಎಂದು ಖಂಡತು೦ಡವಾಗಿ ಹೇಳಿಬಿಟ್ಟಿದ್ದರು. ಕೇಸ್ ಹಾಕ್ತೀವಿ ಅದೂ ಇದೂ ಎಂದೆಲ್ಲಾ ಮಾತಾಡುತ್ತಿದ್ದವರು ತೆಪ್ಪಗಾಗಿಬಿಟ್ಟರು. ಸಹಾರ ಕಡೆಯಿಂದ ಇಂಥಾದ್ದೊ೦ದು ನಿರ್ಧಾರವನ್ನು ಅವರು ನಿರೀಕ್ಷಿಸಿಯೂ ಇರಲಿಲ್ಲ. ಇನ್ನು ಈ ಮಾತಿಗೆ ಎದುರಾಡುವುದು ಅವರಿಂದ ಸಾಧ್ಯವೂ ಇರಲಿಲ್ಲ.

‘ಇನ್ನೇನು ಮಾಡುವುದು ಲಲಿತ ನಿನ್ನ ಗಂಡ ಈಕೆಯನ್ನು ಬಿಡಲ್ಲ ಅಂತ ಇದ್ದಾರೆ. ಬುದ್ಧಿ ಇಲ್ಲದಿರುವವರಿಗಾದರೆ ಹೇಳಬಹುದು, ಬುದ್ಧಿಶಕ್ತಿಯಿಂದ ಜಗತ್ತನ್ನೆ ಗೆಲ್ಲಬಲ್ಲ ಮನುಷ್ಯನಿಗೆ ನಾವಾದರೂ ಏನು ಹೇಳಲು ಸಾಧ್ಯ? ಇದನ್ನೆಲ್ಲಾ ಕೋರ್ಟಿಗೆ ಹೋಗಿ ಇತ್ಯರ್ಥ ಮಾಡಬಹುದು. ಅವರಿಬ್ಬರಿಗೂ ಸಂಬ೦ಧ ಇಲ್ಲ ಎನ್ನಿಸಬಹುದು. ಆದರೆ ಇದು ಮನಸ್ಸಿಗೆ ಸಂಬ೦ಧಿಸಿದ್ದು. ಅದರ ಇಚ್ಚೆಯ ಹಾಗೆ ನಡೆಯುವವರಿಗೆ ಏನು ಮಾಡಲು ಸಾಧ್ಯ? ಇಡೀ ಜಗತ್ತು ಗೌರವಿಸುವವರಿಗೆ ತಮ್ಮಿಂದ ಅವಮಾನ ಆಗುವುದು ಬೇಡ’ ಎಂದು ಎಲ್ಲರೂ ಲಲಿತಕ್ಕನಿಗೆ ಬುದ್ದಿ ಹೇಳಿದ್ದರು. ಲಲಿತಕ್ಕ ನನ್ನ ಹಣೇಬರ ಎಂದು ಅತ್ತಿದ್ದರು. ನನಗೂ ಅದು ಕೆಟ್ಟದನ್ನಿಸಿತ್ತು. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಅವರ ಪರವಾಗಿ ಮಾತಡಲಿಲ್ಲ ಅಷ್ಟೇ. ಲಲಿತಕ್ಕನಿಗೆ ನನ್ನ ಮೇಲೆ ಕೋಪ ಕಡಿಮೆ ಆಗಿರಲಿಲ್ಲ. ಹೋಗುವಾಗ, ‘ಇವರಿಗೆ ನೀನೇನು ಮೊದಲನೆಯವಳಲ್ಲ, ನನಗೆ ಗೊತ್ತು ಕೊನೆಯವಳೂ ಅಲ್ಲ ಅಂತ. ಆದರೂ ಹೇಳ್ತಾ ಇದೀನಿ ಈ ಮನುಷ್ಯನನ್ನು ನಂಬಿ ಬಂದಿದ್ದೀಯಲ್ಲಾ? ನನ್ನ ಹೊಟ್ಟೆ ಉರಿಸುತ್ತಿದ್ದೀಯ, ನಿನಗೂ ಮಗು ಇದೆ ನೋಡ್ತಾ ಇರು, ನನ ಮಕ್ಕಳಿಗೆ ಅನ್ಯಾಯ ಮಾಡ್ತಾ ಇದೀಯ. ಇದಕ್ಕೆಲ್ಲಾ ತಕ್ಕ ಶಾಸ್ತಿಯನ್ನು ಅನುಭವಿಸಿಯೇ ಅನುಭವಿಸುತ್ತೀಯ’ ಎಂದಿದ್ದರು. ನಾನು ಮೊದಲ ಬಾರಿಗೆ ಭಯದಿಂದ ಕಂಗಾಲಾಗಿ ಕುಳಿತೆ, ಅಪ್ಪ ಅಜ್ಜ ಕಡೆಗೆ ಸತೀಶ ಬಿಟ್ಟು ಹೋದಾಗ ಕೂಡಾ ನನಗೆ ಇಷ್ಟು ಭಯ ಆಗಿರಲಿಲ್ಲ. ಈ ಕ್ಷಣ ಯಾವ ಹೆಣ್ಣಿಗೂ ಬರದೇ ಇರಲಿ. ಯಾವ ಶಾಪದ ಜ್ವಾಲೆ ಯಾರನ್ನು ಹೇಗೆ ನುಂಗುತ್ತದೋ ತಿಳಿಯದು ಇದು ಅರಿಯದ ನನ್ನ ಕಂದಮ್ಮನ ಮೇಲೆ ಬೀಳದಿದ್ದರೆ ಸಾಕು ಎನ್ನಿಸಿತ್ತು. ಅರೆ! ಜಗತ್ತನ್ನು ಮೌಢ್ಯದಿಂದ ಬಿಡುಗಡೆ ಮಾಡುವ ದೊಡ್ಡ ಆಶಯದೊಂದಿಗೆ ಚಳುವಳಿಗೆ ಬಂದವಳಲ್ಲವೇ ನಾನು? ಆದ್ರೆ ಇದೇನಿದು ಶಾಪ ಗೀಪ ಅಂತೆಲ್ಲಾ ಭಯ ಪಡುವುದು? ನಿಜ ಮಕ್ಕಳ ವಿಷಯಕ್ಕೆ ಬಂದರೆ ಎಲ್ಲಾ ತಾಯಂದಿರ ಪಾಡೇ ಇಷ್ಟು. ಅಷ್ಟಕ್ಕೂ ಆಶಾಳನ್ನ ಬಿಟ್ಟರೆ ನನಗಾದರೂ ಯಾವ ಆಸರೆ ಇದೆ ಗೊತ್ತಾಗುತ್ತಿಲ್ಲ. ಅದರ ಜೊತೆಗೆ ನನ್ನೊಳಗೆ ಮೊಳೆತ ಭಯ ಸಹಾರ ಜೊತೆಗೆ ಎಷ್ಟು ದಿನಗಳ ಸಂಬ೦ಧ ನನ್ನದಾಗಬಹುದು ಎನ್ನುವುದು. ಆದರೆ ಸಹಾ ಮಾತ್ರ ನನ್ನ ಅನುಮಾನಕ್ಕೆ ಆತಂಕಕ್ಕೆ ಯಾವ ಕಾರಣವೂ ಇಲ್ಲ ಎನ್ನುವ ಹಾಗೆ ನಡೆದುಕೊಂಡರು. ಹಾಗಂತ ಅವರು ಬೇರೆ ಸಂಬ೦ಧಕ್ಕೆ ಬೀಳಲಿಲ್ಲ ಅಂತ ಅಲ್ಲ. ಅದು ಕೇವಲ ಆಕರ್ಷಣೆ ಮಾತ್ರ ಆಗಿತ್ತು. ಅಲ್ಲೆಲ್ಲಾ ಅವರು ವಿರಮಿಸಲಿಲ್ಲ.

ಇದೆಲ್ಲಾ ಆದ ಮೇಲೂ ಲಲಿತಕ್ಕ ಸಹಾ ಮನೆಗೆ ಹೋಗದೇ ಉಳಿದಾಗ ಫೋನ್ ಮಾಡಿ ನನ್ನ ಗಂಡನನ್ನು ಕಳಿಸು ಎನ್ನುತ್ತಿದ್ದರು. ಅವರು ಮನೆಯಲ್ಲಿ ಇಲ್ಲ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಚಿಕ್ಕ ಮಗ ಮಿಹಿರನನ್ನು ಕಳಿಸುತ್ತಿದ್ದರು. ಅವತ್ತು ನಮ್ಮ ಅಪ್ಪನನ್ನು ಯಾಕೆ ನೀವು ಇರಿಸಿಕೊಳ್ಳುತ್ತೀರ ಕಳಿಸಿಕೊಡಿ ಎಂದು ತಾಯಿ ಹೇಳಿದ ಮಾತನ್ನು ಪುಟ್ಟ ಮಿಹಿರ ಹೇಳಿದಾಗ ನನ್ನ ಕಣ್ಣುಗಳು ತುಂಬಿತ್ತು. ಜಗತ್ತಿನ ಅರ್ಥವೇ ಗೊತ್ತಿಲ್ಲದ ಪುಟ್ಟ ಹುಡುಗನ ಪ್ರಶ್ನೆಗೆ ಏನು ಉತ್ತರ ಕೊಡಲಿ? ಎಲ್ಲವನ್ನೂ ಗಮನಿಸಿದ ಸಹಾ ಅವನನ್ನು ನಿಲ್ಲಿಸಿ, ‘ಇವರು ನಿನ್ನ ಚಿಕ್ಕಮ್ಮ ಹಾಗೆಲ್ಲಾ ಮಾತಾಡಬಾರದು’ ಎಂದಿದ್ದರು. ಆ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಮಿಹಿರ ಯಾವತ್ತೂ ಅದನ್ನು ಮೀರಲಿಲ್ಲ. ಅವತ್ತಿನಿಂದ ನನ್ನ ಕಂಡ ತಕ್ಷಣ ಕೈಮುಗಿದು,ಹೇಗಿದ್ದೀರಿ?’ ಎಂದೇ ಮಾತಾಡುತ್ತಾನೆ.

ದೊಡ್ಡ ಹುಡುಗಿ ಲಾವಣ್ಯಾಗೆ ತನ್ನ ಅಪ್ಪನಿಂದ ಕೆಲಸ ಮಾಡಿಸಿಕೊಳ್ಳಲು ನನ್ನ ಸಾಧನವಾಗಿ ಮಾಡಿಕೊಳ್ಳುವ ಮಧ್ಯಮಮಾರ್ಗವನ್ನು ಕಂಡುಕೊ೦ಡಿದ್ದರಿ೦ದ ನನ್ನ ಬಗ್ಗೆ ಅಂಥಾ ದ್ವೇಷವೇನೂ ಇರಲಿಲ್ಲ. ಮೇಲಾಗಿ ತುಂಬಾ ನೆನಪಿಟ್ಟುಕೊಂಡು ಸಾಧಿಸುವ ಹುಡುಗಿಯೂ ಅವಳಲ್ಲವಾದ್ದರಿಂದ ನನ್ನ ಜೊತೆ ಚೆನ್ನಾಗೇ ಇದ್ದಳು. ಆಶಾ ಜೊತೆ ಕೂಡಾ ಸ್ನೇಹದಿಂದ ಇರುತ್ತಿದ್ದ ಲಾವಣ್ಯಾ ಅವಳನ್ನು ಪುಟ್ಟಮ್ಮ ಎಂದೇ ಕರೆಯುತ್ತಿದ್ದಳು. ತನ್ನ ಒಳಕುದಿಯನ್ನೆಲ್ಲಾ ತನಗಿಂತ ಐದಾರು ವರ್ಷ ಚಿಕ್ಕವಳಾಗಿದ್ದ ಆಶಾಳಲ್ಲಿ ಹೇಳಿಕೊಳ್ಳುತ್ತಿದ್ದಳು. ಆಶಾ ಎಲ್ಲವನ್ನು ಗಂಭೀರವಾಗಿ ಕೇಳಿಸಿಕೊಂಡು ದೊಡ್ಡವಳ ಹಾಗೆ ಉತ್ತರಿಸುತ್ತಿದ್ದಳು.

ಮಧ್ಯದ ಹುಡುಗಿ ಅರುಣ ಮಾತ್ರ ಯಾವತ್ತೂ ನನಗೆ ಹೊಂದಿಕೊಳ್ಳಲೇ ಇಲ್ಲ. ನೀವು ನಮ್ಮಪ್ಪನಿಗೆ ಏನು ಬೇಕಾದರೂ ಆಗಿರಿ, ಆದರೆ ನನಗೆ ಮಾತ್ರ ಏನೂ ಅಲ್ಲ. ನನ್ನ ಅಮ್ಮನ ಕಣ್ಣಲ್ಲಿ ನೀರು ತರಿಸಿದ ನಿಮ್ಮನ್ನು ನಾನು ಮಾತ್ರ ಯಾವತ್ತು ಕ್ಷಮಿಸಲ್ಲ ಎಂದು ಎದುರು ನಿಂತು ಹೇಳಿದಾಗ ಏನು ಹೇಳಲೂ ಸಾಧ್ಯವಾಗದೆ ಬಿಕ್ಕಿದ್ದೆ. ಸಹಾರ ಹಿಂದೆ ಬರುವಾಗ ಹೊಸಬದುಕಿನ ಹಂಬಲದ ಆವೇಶಕ್ಕೆ ಬಿದ್ದಿದ್ದ ನನಗೆ, ಹಾಗೆ ಬರುವುದರ ಮೂಲಕ ನೈತಿಕವಾಗಿ ಮಾತಾಡುವ ಹಕ್ಕನ್ನು ಕಳಕೊಳ್ಳುತ್ತೇನೆ ಎನ್ನುವುದು ಮರೆತೇ ಹೋಗಿತ್ತು. ಅರುಣ ಪುಟ್ಟ ಹುಡುಗಿ ನನಗೆ ಎಂಥಾ ದೊಡ್ಡ ಸತ್ಯವನ್ನು ಹೇಳಿದ್ದಳು. ಏನಾದರೂ ಆಗಿರು ಎಂದರೆ ಅರ್ಥ ಯಾರೂ ಕಲ್ಪಿಸಲಾರದ್ದೇನಾಗಿರಲಿಲ್ಲ. ಈ ಜಗತ್ತಿನ ಎದುರು ನಾನು ಸಹಾ ಇಟ್ಟುಕೊಂಡ ಹೆಂಗಸು ಮಾತ್ರವಾಗಿದ್ದೆ. ನನ್ನ ಅಸ್ತಿತ್ವದ ಭಾಗವೇ ಆದ ಹೋರಾಟ ಎಲ್ಲಿ ಹೋಯಿತು? ಸಮಾನತೆಯ ಕನಸನ್ನು ಕಂಡಿದ್ದ ಅವತ್ತಿನ ಚೈತನ್ಯ ಎಲ್ಲಿ ಹೋದಳು?

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This