ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಪಾದದ ಗುರುತು ಹುಡುಕುತ್ತಾ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

6

ಜೋಳದ ಹೊಲದಲ್ಲಿ ಪ್ರಾಣಿಗಳ ಪಾದದ ಗುರುತು ಹುಡುಕುತ್ತಾ

ಹಿತವಾದ ತಣ್ಣನೆಯ ಗಾಳಿ ಬಯಲಲ್ಲಿ ಆಡುತ್ತಾ ನಮ್ಮನ್ನು ತಾಕುತಿತ್ತು. ಅಟ್ಟಣೆಯ ಮೇಲಿನ ಬತ್ತದ ಹುಲ್ಲ ಸುಂಕು ಮೈಗೆ ತಗುಲು ನವೆ ಹುಟ್ಟಿಸುತ್ತಿತ್ತು. ತಾತ ಮೈಯೆಲ್ಲಾಆ ಕಡೀತ ಇದೆ ಎಂದದ್ದಕ್ಕೆ ತನ್ನ ಪಂಚೆಯನ್ನೆ ಚಿಚ್ಚಿ ಹಾಕಿ ಮಲಗು ಎಂದಿದ್ದ. ಸವರಿಹೋದ ಕುರಿಯ ತುಪ್ಪಳ, ಮೈಮೇಲೆ ಕೂರುತ್ತಿದ್ದ ಆಡುಮರಿಗಳ ಶಿಂಡು, ಕುಡಿದು ಮೈಮೇಲೆ ಅಚಾನಾಕ್ ಆಗಿ ಬಿದ್ದ ಸಾರಾಯಿಯ ಹನಿಗಳು ತಾತನ ಪಂಚೆಗೆ ಎಂಥಾದ್ದೋ ಘಮಲು ತುಂಬಿತ್ತು. ಆ ವಾಸನೆಯ ಈಗಲೂ ಹುಡುಕುತ್ತಿದ್ದೇನೆ. ಹೇಗೆ ಸಿಗಬೇಕು! ಅವನ ಹೃದಯದ ಬಡಿತ ನನ್ನ ಕಿವಿಗೆ- ನಾನವನ ಎದೆಮೇಲೆ. ಸತೀಶನ ಎದೆ, ಸಹಾರ ಎದೆ ನೀಡಲಾಗದ ಯಾವ ಸೌಖ್ಯಭಾವವನ್ನು ತಾತ ನೀಡಿದ್ದ. ಬಲಿಷ್ಠವಲ್ಲದ ಅವನ ಎದೆ ನನಗೆ ಯಾವ ಧೈರ್ಯವನ್ನು ಕೊಟ್ಟಿತ್ತು. ಆ ದಿನಗಳನ್ನು ನೆನೆಸಿಕೊಂಡರೆ ಬಿಕ್ಕಬೇಕು ಅನ್ನಿಸುತ್ತೆ.

ತಲೆಯ ಮೇಲೆ ಚಂದ್ರಮನಿಲ್ಲದ ಬಾನ ಸೂರು. ನಕ್ಷತ್ರಗಳ ಮಂದ ಬೆಳಕು. ತಾತ ಟಾರ್ಚ್ ಆರಿಸಿದ. ‘ನಾನು ತಾತ ಬೆಳಕೇ ಇಲ್ಲ. ನಂಗೆ ಭಯ ಆಗುತ್ತೆ’ ಅಂದಿದ್ದೆ. ‘ಮಗಾ ಕಣ್ಣು ಬಿಟ್ಟು ನೋಡು ಈ ಕತ್ತಲೆಯಲ್ಲೂ ಒಂದು ಬೆಳಕಿದೆ’ ಎಂದ. ಕತ್ತಲಲ್ಲಿ ಬೆಳಕಾ? ತಾತ ತಿಳ್ಯೋ ಹಂಗ್ ಮಾತಾಡು. ಗೋಗರೆದಿದ್ದೆ. ತಾತ ನಕ್ಕಿದ್ದ. ಬಯಲಲ್ಲಿ ಅವನ ನಗೆ ಮಾರ್ದನಿಗೊಂಡಿತ್ತು. ಇದೆ ಮಗಾ ಇದೆ. ಅದನ್ನ ಕಾಣಬೇಕು ಅಂದ್ರೆ ಕತ್ತಲೆಯೇ ಬೇಕು. ಅದಕ್ಕೆ ನಮ್ಮ ಕಣ್ಣು ಹೊಂದಿಕೊಳ್ಳಬೇಕು. ಇದೆಲ್ಲಾ ಈಗ ನಿನಗೆ ಗೊತ್ತಾಗಲ್ಲ ಸ್ವಲ್ಪ ದೊಡ್ಡವಳಾಗು ಅರ್ಥ ಆಗುತ್ತೆ’ ಎಂದಿದ್ದ. ‘ದೊಡ್ಡವಳಾದ ಮೇಲೆ ಅರ್ಥ ಆಗದಿದ್ದರೆ’ ಎಂದ ನನ್ನ ಮಾತಿಗೆ, ‘ದೊಡ್ಡವಳಾಗುತ್ತಾ, ಆಗುತ್ತಾ ಎಲ್ಲಾ ಅರ್ಥ ಆಗಲೇ ಬೇಕು. ನಿನ್ನ ಅಜ್ಜನಿಗೂ ಹೀಗೇ ಅರ್ಥ ಆಗಿದ್ದು’ ಎಂದು ನಕ್ಕಿದ್ದ.

ಸೂರ್ಯಾನೂ ಮುಳುಗಿದ್ದಾನೆ ಚಂದ್ರನೂ ಇಲ್ಲ, ತಾತ ಈ ಬೆಳಕು ಎಲ್ಲಿರುತ್ತೆ? ಎಂದೆ ಅವನಿಗೆ ಇನ್ನಷ್ಟು ಹತ್ತಿರಾಗುತ್ತಾ. ಅಪ್ಪನಿಗೆ ಹೀಗೆ ಯಾವತ್ತೂ ಹತ್ತಿಕೊಂಡವಳೇ ಅಲ್ಲ. ಆವನು ಮನೆಗೇ ಬರುತ್ತಿರಲಿಲ್ಲ. ಬಂದರೂ ಸಾವಿರದೆಂಟು ವ್ಯವಹಾರ. ನಮ್ಮ ಹತ್ತಿರ ಮಾತಾಡಲಿಕ್ಕೂ ಟೈಂ ಇರ್ತಿರಲಿಲ್ಲ. ನನಗೆ ತಾತನೇ ಪ್ರಪಂಚ ಆಗಿದ್ದು ಹೀಗೆ. ನನ್ನ ಪ್ರಶ್ನೆಗಾಳಿಗೆ ಅವನ ನಂಬಿಕೆಯ ಲೋಕ ತೆರೆದುಕೊಳ್ಳುತ್ತಿತ್ತು. `ಹುಚ್ಚಕ್ಕ ಮಾಯಕ್ಕ ಇಬ್ರೂ ನಮ್ಮನ್ನ ಕಾಪಾಡ್ತಾರೆ. ಅವುö್ರ ಕಣ್ಣೆ ಮುಚ್ಚಲ್ಲ. ಅವರ ಕಣ್ಣಿ೦ದ ಬೆಳಕು ನಮ್ಮನ್ನು ಕಾಪಾಡ್ತಾನೆ ಇರುತ್ತೆ. ಅದೇ ಬೆಳಕು ಕತ್ತಲಲ್ಲಿರೋದು…’ ಅವನ ಮಾತಿಗೆ ನನ್ನ ಹುಂಗುಡುವಿಕೆ ನಿದ್ದೆಗೆ ಜೋಗುಳ ಎನ್ನುವ ಹಾಗಿರುತ್ತಿತ್ತು. ನನಗೆ ದೇವರು ಎಂದರೆ ಅಂಥಾ ದೊಡ್ದ ನಂಬಿಕೆಯೇನೂ ಇಲ್ಲವಾದರೂ ಹುಚ್ಚಕ್ಕ ಮಾಯಕ್ಕ ತಾತನ ಆಪ್ತ ನೆನಪಾಗಿ ನನ್ನ ಕಾಡುತ್ತಾರೆ. ಅಲ್ಲಿಗೆ ಹೋಗಬೇಕು ಅನ್ನಿಸುತ್ತೆ. ಸಹಾ ಈ ವಿಷಯಕ್ಕೆ ‘ನಾವೆಲ್ಲಾ ದೇವರೇ ಇಲ್ಲ ಅಂತ ವಾದ ಮಾಡ್ತಾ ಇದ್ರೆ ದೇವರೇ ಶೋಷಣೆಯ ಕೇಂದ್ರ ಅಮ್ತ ಹೇಳುತ್ತಿದ್ದರೆ. ನೀವು ಹೋಗ್ಗಿ ಅದ್ಯಾರೋ ಗುಡ್ಡೆಪ್ಪನ ಹತ್ತಿರ ಪ್ರಸಾದ ತೀರ್ಥ ತಗೊಂಡ್ ಬರ್ತೀರಲ್ಲಾ ಅಂತ ಅಣಕಿಸುತ್ತಲೇ ಇರುತ್ತಾರೆ. ನಿಜ ಒಂದೊ೦ದು ಸಲ ವಿಚಾರವಂತಿಕೆ ಬರೀ ವಿಚಾರವಂತಿಕೆ ಆಗಿ ಕಾಣುತ್ತೆ. ಆದರೆ ನಂಬಿಕೆ ನಮ್ಮ ವಿಚಾರಗಳ ಆಚೆಗೂ ಇರುವ ಯಾವ ಯಾವದೋ ಸಂಗತಿಗಳನ್ನು ನೆನಪಿಸಿಬಿಡುತ್ತವೆ.
ಆ ರಾತ್ರಿ ಹೊಲದ ಮಧ್ಯೆಯ ಅಟ್ಟಣೆಯಲ್ಲಿ ಮಲಗಿ ಕೇಳುತ್ತಿದ್ದ ಜೀರುಂಡೆಗಳ ಜಿವ್ವೆನ್ನುವ ಸದ್ದು, ಕಣ್ಣೂ ಪಿಳುಕಿಸಿದ ಹಾಗೆ ನೋಡಿದರೂ ನಕ್ಷತ್ರಗಳ ಮಿಣುಗುಡುವಾಟ ನಾವು ಬೇರೆಯದೇ ಲೋಕಕ್ಕೆ ಹೋಗಿದ್ದೆವು. ರಾತ್ರಿ ನಾನು ಕಥೆಗೆ ಹುಂಗುಡುತ್ತಾ ನಿದ್ದೆ ಮಾಡಿದೆ. ಛಳಿಗೆ ಥರಗುಟ್ಟುವಂತಾದಾದಾಗ ಪಕ್ಕದಲ್ಲಿ ತಡಕಿದೆ. ತಾತ ಹೊಲದ ಮಧ್ಯೆ ಹಂದಿಯನ್ನೋ ಏನನ್ನೋ ಓಡಿಸುತ್ತಿದ್ದ. ಬೆಳೆ ಬರುವ ಕಾಲಕ್ಕೆ ಪ್ರಾಣ ಗಳು ಆಹಾರಕ್ಕಾಗಿ ಹುಡುಕಿ ಬರುವುದು ಸಾಮಾನ್ಯವೂ ಆಗಿರುತ್ತಿತ್ತು. ಅಚಾನಕ್ ಆಗಿ ನಿದ್ದೆ ಹತ್ತಿಬಿಟ್ಟರೆ ಬೆಳಗ್ಗೆ ಮುರಿದ ಜೋಳದ ತೆನೆಗಳ ಮಧ್ಯೆ ತಾತ ಬಂದ ಪ್ರಾಣ ಯ ಹೆಜ್ಜೆ ಗುರುತನ್ನು ಹುಡುಕುತ್ತಾ, ಬಾ ಇವತ್ತು ನಿನಗೆ ಗತಿ ಕಾಣ ಸಿಬಿಡುವೆ ಎನ್ನುತ್ತಿದ್ದ. ಓಡಾಡುತ್ತಿದ್ದ ತಾತ ಮಂಕಾಗುತ್ತಾ ಮತ್ತೆ ಕಣ್ಣು ಹತ್ತಿತ್ತು.

ನನಗೆ ಎಚ್ಚರ ಆದಾಗ ತಾತ ಕೂಗಾಡುತ್ತಿದ್ದ. ಅವನ ತಲೆಯಿಂದ ರಕ್ತ ಒಸರುತ್ತಿತ್ತು. ನಾನು ಏನಾಯಿತೋ ಎಂದು ಕಣ್ಣುಗಳನ್ನು ಹೊಸಕಿ ನೋಡುವಾಗ, ಯಾರೋ ನಾಲ್ಕು ಜನ ಅಟ್ಟಣೆಯ ಮೇಲೆ ಬಂದು ತಾತನನ್ನು ಹೊಡೆಯುತ್ತಿದ್ದುದು ಕಾಣ ಸಿತು, ನಾನು ‘ತಾತಾ’ ಎಂದು ಅಳಹತ್ತಿದ್ದೆ. ಅವನನ್ನು ಹಿಗ್ಗಾ ಮುಗ್ಗ ಹೊಡೆದು ಅವನ ಕೈಗಳಿಂದ ರೆಡಿಯೋವನ್ನೂ, ಟರ್ಚ್ ಅನ್ನು ಕಸಿದುಕೊಂಡು, ಪ್ರತಿಭಟಿಸುತ್ತಿದ್ದ ತಾತನ ತಲೆಗೊಂದು ಏಟನ್ನು ಕೊಟ್ಟು ಅಟ್ಟಣೆಯಿಂದ ಜಿಗಿದು ಓಡಿದ್ದರು. ಎಲ್ಲ ಮಿಂಚಿನ ಹಾಗೆ ನಡೆದುಹೋಗಿತ್ತು. ನಾನು ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೆ.

ತಾತ ತೇಲುಗಣ್ಣು ಮಾಡುತ್ತಾ ಪ್ರಜ್ಞೆ ತಪ್ಪಿ ಅಟ್ಟಣೆಯ ಮೇಲೆ ಬಿದ್ದಿದ್ದ. ಅವನನ್ನು ಏಳಿಸಲು ಎಲ್ಲಾ ಪ್ರಯತ್ನ ಮಾಡಿ ಕೊನೆಗೆ ಕತ್ತಲನ್ನೂ ಲೆಕ್ಕಿಸದೆ ಮನೆಯ ಕಡೆಗೆ ಓಡಿದ್ದೆ. ಆ ವೇಳೆಯಲ್ಲಿ ಮನೆ ಬಾಗಿಲು ತಟ್ಟಿದ ನನ್ನ ನೋಡಿ ಮನೆಯಲ್ಲೇ ಮಲಗಿದ್ದೇನೆ ಎಂದುಕೊ೦ಡಿದ್ದ ಅಮ್ಮನಿಗೆ ಆಘಾತ.

ತಲೆಯ ಗಾಯಕ್ಕೆ ಪಟ್ಟಿ ಕಟ್ಟುತ್ತಾ ಅಜ್ಜಿ ಅಜ್ಜನ ಶೋಕೀತನದ ಬಗ್ಗೆ ಮಾತಾಡುತ್ತಾ, ‘ಮನೇ ವಸ್ತು ಮನೇಲಿರಬೇಕು ತಾನೆ ಅದನ್ನ ಬಿಟ್ಟು ಊರೆಲ್ಲಾ ನೋಡಲಿ ಅಂತ ತಗೊಂಡು ಹೋದ್ರೆ ಹೀಗೇ ಆಗೋದು. ಅಲ್ಲಯ್ಯ ಯಾವಾನಾದ್ರೂ ತಳ್ಳಿದ್ರೆ ಬೀಳೋ ಹಾಗಿದ್ದೀಯಾ? ಈ ಹುಡುಗೀನೂ ಕರಕೊಂಡು ಹೋಗಿದ್ದೀಯಲ್ಲಾ! ರೇಡಿಯೋ ಹೋದ್ರೆ ಹೋಗಲಿ ಈ ಹುಡುಗೀಗೇನಾದ್ರೂ ಆಗಿದ್ರೆ ಏನು ಗತಿ?’ ಎಂದು ವಾಚಾಮಗೋಚರ ಬೈದಿದ್ದಳು. ತಾತನಿಗೆ ಏನೂ ಅರ್ಥ ಆಗ್ತಾ ಇರಲಿಲ್ಲವೇನೋ. ಅಜ್ಜಿಯನ್ನೇ ನೋಡುತ್ತಾ ಸುಮ್ಮನೆ ಕುಳಿತುಬಿಟ್ಟಿದ್ದ. ‘ಮಾಡೋದೆಲ್ಲಾ ಮಾಡಿ ಹರ ಇಲ್ಲ ಶಿವ ಇಲ್ಲ ಕೂತಿರೋದು ನೋಡು’ ಎಂದು ಅಸಹನೆಯ ನಡುವೆಯೂ ಕಣ್ಣಿರು ಹಾಕಿದ್ದಳು. ಅಜ್ಜಿಯ ಎದುರು ಬೈಯ್ಯಲಾಗದೆ ನನ್ನ ರೂಮಿನೊಳಗೆ ಎಳೆದು ತಂದು ಅಮ್ಮ, ‘ಅಲ್ಲ ಕಣೆ ರೂಮಲ್ಲಿ ಮಲಗಿದವಳು, ಯಾವ ಮಾಯದಲ್ಲಿ ನಿನ್ನ ತಾತನ ಜೊತೆ ಹೋದೆ?’ ಎಂದು ಬೆನ್ನ ಮೇಲೆ ಗುದ್ದಿದ್ದಳು. ನಾನು ತಾತನಿಗೆ ಬೈದದ್ದಕ್ಕೋ ಅಮ್ಮನ ಹೊಡೆತದ ನೋವನ್ನು ಸಹಿಸಲಾಗದ್ದಕ್ಕೋ ಅತ್ತಿದ್ದೆ.

ಅಪ್ಪ ಮೌನವಾಗಿದ್ದ, ‘ಇನ್ನೊಂದು ಸಲ ಹೀಗೆ ತೋರಿಕೆಯ ವಸ್ತುಗಳನ್ನು ತರಬೇಡಿ’ ಎಂದು ಅಮ್ಮ ತಾಕೀತು ಮಾಡಿದ್ದಳು. ತಮ್ಮಲ್ಲಿ ಇಲ್ಲದ್ದು ಯಾರ ಹತ್ತಿರವೂ ಇರಬಾರದು ಎನ್ನುವ ಗೌಡರ ಖರಾಮತ್ತೇ ಇದು ಎಂದು ಊರ ಎಲ್ಲರಿಗೂ ಗೊತ್ತಿದ್ದರೂ ಯಾರೂ ಮಾತಾಡಲಿಲ್ಲ. ಮಾತಾಡಿದರೆ ತಾತನಿಗಿಂತಲೂ ಅಧ್ವಾನದ ಸ್ಥಿತಿ ಬರಬಹುದೆಂಬ ಭಯ ಕೂಡಾ ಇತ್ತು. ನಿಮ್ಮ ಮನೆಯ ರೇಡಿವೋ ಊರ ಗೌಡರು ಇಟ್ಟುಕೊಂಡಿರುವ ಪಕ್ಕದ ಊರಿನ ಹೆಂಗಸಿನ ಮನೆಯಲ್ಲಿ ಹಾಡ್ತಾ ಇದೆ. ನಾನೇ ಕಣ್ಣಾರೆ ಕಂಡೆ’ ಎಂದು ಕಂಡವರು ಹೇಳಿದರು. ಅಪ್ಪ ಕೇಳಲಿಲ್ಲ ಎಂದು ಓಡಾಡಿದ ಅಮ್ಮ ಕೈತಪ್ಪಿ ಹೋದ ವಸ್ತುವಿನ ಬಗ್ಗೆ ಯೋಚನೆ ಮಾಡುವುದರಲ್ಲಿ ಪ್ರಯೋಜನವಿಲ್ಲ ಎಂದಿದ್ದಳು. ಆದರೆ ಅಪ್ಪ ಮತ್ತೆ ರೇಡಿಯೋವನ್ನು ತರಲಿಲ್ಲ.

ಇದಾದ ಸ್ವಲ್ಪ ದಿನಗಳಲ್ಲಿ ತಾತ ಕಣ್ಣು ಕಾಣ ಸದೆ ಒದ್ದಾಡಿದ. ತಲೆಗೆ ಪೆಟ್ಟುಬಿದ್ದಿದ್ದರಿಂದ ಕ್ರಮೇಣ ನೆನಪಿನ ಶಕ್ತಿ ಕಳಕೊಂಡ. ಬಾಯಿ ಹೋದ ಹಾಗೆ ಮಾತಾಡುತ್ತಿದ್ದ. ಇದ್ದಕ್ಕಿದ್ದ ಹಾಗೆ ತನ್ನ ಮೇಲೆ ಯಾರೋ ಆಕ್ರಮಣ ಮಾಡ್ತಾರೆ ಎನ್ನುವ ಹಾಗೆ ಕೂಗುತ್ತಿದ್ದ. ಮೊದ ಮೊದಲು ಗಾಬರಿಯಾಗುತ್ತಿದ್ದರೂ ನಂತರ ಇದ್ದದ್ದೇ ಎಂದು ಕೇಳಿಸಿಕೊಂಡು ಸುಮ್ಮನಾಗುವ ಸ್ಥಿತಿ ಮನೆಯಲ್ಲಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಆದ ಮೇಲೆ ತಾತ ಅಜ್ಜಿ ಹೇಳಿದ ಹಾಗೆಲ್ಲಾ ಕೇಳುತ್ತಿದ್ದ. ಅವನಿಗೆ ಬೈದಿದ್ದಕ್ಕೂ, ಹೊಗಳಿದ್ದಕ್ಕೂ, ಹೇಳಿದ್ದಕ್ಕೂ ಯಾವುದಕ್ಕೂ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಮಗುವಿನ ಹಾಗೆ ಆಗಿಬಿಟ್ಟಿದ್ದ. ಊಟ ಮಾಡು ಎಂದರೆ ಊಟ ಮಾಡುತ್ತಿದ್ದ. ಮಲಗು ಎಂದರೆ ಮಲಗುತ್ತಿದ್ದ, ಬಾ ಇಲ್ಲಿ ಎಂದರೆ ಬರುತ್ತಿದ್ದ. ಅವನಿಗೆ ಈಗ ಯಾವುದೂ ನೆನಪೇ ಇರಲಿಲ್ಲ, ಆಗ ತಾನೇ ಊಟ ಮಾಡಿದ್ದರೂ, ‘ಊಟ ಆಯ್ತಾ ತಾತ’ ಎಂದರೆ, ‘ಇನ್ನೂ ಏನೂ ಕೊಟ್ಟೇ ಇಲ್ಲ ಎಂದು ಕೆನ್ನೆಯುಬ್ಬಿಸಿ ತಲೆ ಆಡಿಸುತ್ತಿದ್ದ. ಮತ್ತೆ ಅನ್ನ ಕೊಟ್ಟರೆ ತಿನ್ನುತ್ತಿದ್ದ. ಅಜ್ಜಿ ಆಗೆಲ್ಲಾ ಗೊಳೋ ಎನ್ನುತ್ತಿದ್ದಳು. ನನಗೂ ಖೇದ ಅನ್ನಿಸುತ್ತಿತ್ತು. ‘ಇನ್ನೊಂದು ಸಲ ತಿಂದರೆ ಮನೆಯಲ್ಲಿರೋದೆಲ್ಲಾ ಖಾಲಿ ಆಗಲ್ಲ ಬಿಡು ತಿನ್ನಲಿ ಏನೀಗ?’ ಎಂದು ಅಪ್ಪ ರೇಗುತ್ತಿದ್ದ. ಆರೋಗ್ಯ ಹಾಳಾದರೆ ಎನ್ನುವ ಕಾಳಜಿ ಅಮ್ಮನದ್ದು. ಹೀಗೆ ಒಬ್ಬೊಬ್ಬರದ್ದೂ ಒಂದೊ೦ದು ನಿಲುವು. ಮಾತೂ ಅಷ್ಟೇ ಎಲ್ಲಾ ಮರೆತಿದ್ದರಿಂದಲೋ ಏನೋ ಆ ಕ್ಷಣಕ್ಕೆ ಏನು ತೋಚುತ್ತಿತ್ತೋ ಅದನ್ನೇ ಮಾತಾಡುತ್ತಿದ್ದ. ಅವನನ್ನು ನೆನೆಸಿಕೊಂಡರೆ ಮಾತು ಕಲಿಯುವ ಗಮ್ಮತ್ತೇ ಬೇರೆ, ಮರೆತುಹೋಗುವ ಸುಖವೇ ಬೇರೆ ಎಂದು ಈಗ ಅನ್ನಿಸುತ್ತದೆ. ಚಿಕ್ಕವರಾಗಿದ್ದ ನಮಗೆಲ್ಲಾ ತಾತನ ಈ ರೀತಿ ತಮಾಷಿ ಅನ್ನಿಸುತ್ತಿತ್ತಾದರೂ ನಗಬೇಕು ಅನ್ನಿಸುತ್ತಿದ್ದರೂ ಅಮ್ಮನ ಭಯದಿಂದ ನಗುತ್ತಿರಲಿಲ್ಲ. ಅಷ್ಟು ಶಕ್ತಿಶಾಲಿಯಾಗಿದ್ದ ಅಜ್ಜಿ ಮೆತ್ತಗಾಗಿ ಅಳುತ್ತಿದ್ದಳು. ಇದು ನನಗೆ ಆಶ್ಚರ್ಯ ಎನ್ನಿಸುತ್ತಿತ್ತು – ಈಗ ತಾತ ಎಲ್ಲ ಕೇಳುತ್ತಿದ್ದಾನಲ್ಲಾ ಆದರೂ ಅಜ್ಜಿ ಯಾಕೆ ಅಳಬೇಕು? !

ಒಂದು ದಿನ ತಾತ ಸ್ನಾನ ಮಾಡಿಸು ಎಂದು ಹಟ ಹಿಡಿದ. ಇನ್ನೊಂದು ದಿನ ಎಂದು ಅಜ್ಜಿ ಮುಂದೂಡಿದರೂ, ‘ಇಲ್ಲ ಇವತ್ತೇ ಬೇಕು’ ಎಂದು ತಪ್ಪು ತಪ್ಪಾಗಿ ಮಗುವಿನ ಹಾಗೆ ಮಾತಾಡಿದ. ಅವನ ವರಾತ ತಡಿಯಲಾರದೆ ಅಜ್ಜಿ ಅವನನ್ನು ಅಂಗಳದಲ್ಲಿ ಕೂಡಿಸಿ ಒಳ್ಳೆಯ ಬಿಸಿನೀರು ಕಾಸಿ ಎರಡು ಚೊಂಬು ಹಾಕಿ ಮೈಯುಜ್ಜಿ ಚೆನ್ನಾಗಿ ಸ್ನಾನ ಮಾಡಿಸುತ್ತಿದ್ದರೆ. ತಾತ ಸುಖವನ್ನು ಅನುಭವಿಸುತ್ತಿದ್ದ. ‘ತಾತ ಲಕ ಲಕ ಹೊಳೀತಾ ಇದ್ದೀಯಲ್ಲಾ!’ ಎಂದು ನಾವೆಲ್ಲಾ ತಮಾಷಿ ಮಾಡಿದ್ದೆವು. ‘ಹೋಗ್ರಿ ಆಚೆಗೆ ಸುಮ್ಮನೆ ಹಾಗೆ ಸಾನ ಮಾಡೋರ್ನ ನೋಡ್ಬಾರ್ದು’ ಎಂದು ಅಜ್ಜಿ ಅಟ್ಟಿದ್ದಳು. ಇನ್ನೇನು ತಂಬಿಗೆ ನೀರು ನೀವಾಳಿಸಿ ಹಾಕಿ ಸ್ನಾನ ಮುಗಿಸಬೇಕು ಎನ್ನುವಾಗ ತಾತ ‘ಹಾ’ ಎಂದು ಬಾಯಿ ತೆರೆದ. ಅಜ್ಜಿಯ ಕಡೆಗೆ ಒಂಥರಾ ನೋಡಿದ. ‘ಅದ್ಯಾಕೆ ಹಂಗ್ ನೋಡ್ತಾ ಇದೀಯ?’ ಎಂದು ಅಜ್ಜಿ ಕೇಳುವುದರೊಳಗೆ ದಢಕ್ಕೆಂದು ನೆಲಕ್ಕುರುಳಿಬಿದ್ದ. ಏನಾಯಿತು ಎನ್ನುವುದರೊಳಗೆ ಜೀವ ಹೊರಟೇ ಹೋಗಿತ್ತು.

ತಾತ ಹೀಗೆ ನಮ್ಮನ್ನು ಅಗಲಿ ಹೋಗುತ್ತಾನೆ ಎಂದು ಯಾರೂ ಊಹೆ ಕೂಡಾ ಮಾಡಿರಲಿಲ್ಲ. ಎಲ್ಲರೂ ಕುಗ್ಗಿ ಹೋದೆವು. ಊರವರೆಲ್ಲಾ ದೇವರಂಥಾ ಮನುಷ್ಯ ಎಂದರು. ಅಜ್ಜಿಗೆ ಕಾಣದೆ ಮಾಂಸದ ತುಣುಕುಗಳನ್ನು ಸಾರಿನ ಜೊತೆ ಬೆರೆಸಿಕೊಡುತ್ತಿದ್ದ, ಬೀಡಿಯನ್ನೂ, ಸರಾಯಿಯ ಹನಿಗಳನ್ನೋ ಲೋಟಕ್ಕೆ ಬಿಟ್ಟು ಕೈದಾಟಿಸುತ್ತಿದ್ದ ತಾತ ಕೆಲವರಿಗೆ ದೇವರೇ ಆಗಿದ್ದ. ತಾತನ ಇಂಥಾ ಕಲ್ಯಾಣ ಗುಣಗಳು ಊರ ತುಂಬಾ ಹರಿದಾಡಿ ನಮ್ಮನ್ನೆಲ್ಲಾ ದಂಗು ಬಡಿಸಿತ್ತು. ದೊಡ್ಡ ಗುಂಪು ತಾತನ ಗುಣಗಾನ ಮಾಡುತ್ತಿದ್ದರೆ ಆ ಗುಣಗಾನ ಸತ್ತು ಮಲಗಿದ್ದ ತಾತನಿಗೋ ದೇವರೇನೋ ಎನ್ನುವ ಭ್ರಮೆ ಹುಟ್ಟಿಸುತ್ತಿದ್ದ.

ತಾತನನ್ನು ಮಣ್ಣಲ್ಲಿಟ್ಟು ಬಂದ ದಿನ ಯಾರಿಗೂ ಮಾತಾಡುವ ಮನಸ್ಸಿರಲಿಲ್ಲ. ದುಡ್ಡಿರುವವರ, ದೊಡ್ಡವರ ದುರಹಂಕಾರಕ್ಕೆ ತಾತನನ್ನು ಕಳೆದುಕೊಳ್ಳಬೇಕಾದ ನೋವು ಆಕ್ರೋಶ ನನ್ನೊಳಗೆ ಮಡುಗಟ್ಟಿತ್ತು. ಇಂಥವರನ್ನು ಏನು ಮಾಡಲಿ ನನ್ನ ತಾನನಿಗೆ ಆದ ಗತಿಯನ್ಣೇ ಅವರಿಗೂ ಮಾಡಬೇಕು. ಊರ ಮಧ್ಯದಲ್ಲಿ ನಿಲ್ಲಿಸಿ ಯಾವ ದೊಡ್ದ ಮನುಷ್ಯ ಎಂತಲೂ ನೋಡದೆ ಬೈಯ್ಯಬೇಕು. ಮತ್ತೊಮ್ಮೆ ಇನ್ಯಾರ ವಿಷಯದಲ್ಲೂ ಇಂಥಾ ತಪ್ಪು ಮಾಡದಂತೆ ತಾಕೀತು ಮಾಡಬೇಕು ಎಂದೆಲ್ಲಾ ಕುದ್ದು ಹೋಗಿದ್ದೆ. ಒಳಗೇ ಮಡುಗಟ್ಟಿದ್ದ ದುಃಖ ರೋಷವಾಗಿ ಬೆಳೆಯುತ್ತಲೇ ಇತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: