ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನೊಣ ತಿನ್ನೋ ಗೊರವಯ್ಯ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

5

ಬಾಲ್ಯದಿಂದಲೂ ಹೀಗೆ ಅಸೀಮ ಸಾಹಸಕ್ಕೆ ಹೆಸರಾದವಳು ನಾನು. ಊಟ ಬೇಡ ಅಂದರೆ ಬೇಡ ಅದನ್ನ ತಪ್ಪಿಸಿಕೊಳ್ಳಲು ಮರವನ್ನೇರಿ ಯಾರೂ ಮುಟ್ಟಲಾರದ ತುದಿಯಲ್ಲಿ ಕೂತು ಎಲ್ಲರನ್ನೂ ಅಣುಕಿಸಿತ್ತಿದ್ದವಳು. ‘ಅಮ್ಮೂ ಬಾ’ ಎಂದು ಅಜ್ಜಿ ಕೂಗಿದರೂ, ಅವ್ವ ಬೇಡಿದರೂ ಇಳಿಯದವಳು. ನಾನು ಬಗ್ಗುತ್ತಿದ್ದುದು ತಾತನಿಗೆ ಮಾತ್ರ. ಅವನು, ‘ಸುಕ್ಕಿ ತೋರಿಸ್ತೀನಿ ರಾತ್ರಿ ಬಾ ಮಗಾ ಈಗ ಉಂಡುಬಿಡು’ ಎಂದ ತಕ್ಷಣ ಇಳಿದು ಬರುತ್ತಿದ್ದೆ. ತಾತ ರಾತ್ರಿಗಳಲ್ಲಿ ಹೊಲದ ಮಧ್ಯ ಮರದ ಮೇಲೆ ಮಂಚಿಕೆ ಹಾಕಿ ಅಲ್ಲಿ ಮಲಗಿಸಿಕೊಂಡು ಚುಕ್ಕಿಗಳನ್ನು ತೋರಿಸುತ್ತಿದ್ದ. ಜೊತೆಗೆ ಒಂದಿಷ್ಟು ಕಥೆಗಳನ್ನು ಕೂಡಾ ಹೇಳುತ್ತಿದ್ದ. ನಮ್ಮಿಬ್ಬರಿಗೂ ಅದೊಂದು ಸಂಭ್ರಮ. ಆಕಾಶ ತೋರಿಸುತ್ತಾ, ತನ್ನ ಅಪ್ಪ, ಅವನ ಅಪ್ಪ, ಅವನ ಅಪ್ಪ ಎಲ್ಲರೂ ಹೇಗೆ ಮಿನುಗುತ್ತಿದ್ದಾರೆ ಎಂದು ತೋರಿಸಿದ್ದ. ಅವರು ಚುಕ್ಕಿ ಆಗಲಿಕ್ಕೆ ಏನು ಮಾಡಿದರು ಎನ್ನುವುದು ನನ್ನ ಪ್ರಶ್ನೆಯಾಗಿರುತ್ತಿತ್ತು. ತಾತ ಅದಕ್ಕೆ ಒಂದೊ೦ದು ದಿನ ಒಂದೊ೦ದು ಕಥೆ ಹೇಳುತ್ತಿದ್ದ.

ಒಂದು ದಿನ ಊರಿಗೆ ನುಗ್ಗಿ ಕೋಳಿಗಳನ್ನು ಕದ್ದೊಯ್ಯುತ್ತಿದ್ದ ನರಿಯನ್ನು ಹೊಡೆದರೆ ನಾಯಿ ಕುರಿಗಳನ್ನು ಎತ್ತೊಯ್ಯುತ್ತಿದ್ದ ಚಿರತೆಯನ್ನು ಕೊಂದಿದ್ದನ್ನು ಹೇಳುತ್ತಿದ್ದ. ಊರಿಗೆ ಕಾಟ ಕೊಡುತ್ತಿದ್ದ ಮನುಷ್ಯರೂಪದ ರಾಕ್ಷಸರನ್ನು, ರಾಕ್ಷಸ ರೂಪದ ಮನುಷ್ಯರನ್ನು ಊರ ತಾಯಿಯರಾದ ಹುಚ್ಚಮ್ಮ ಮಾಯಮ್ಮರ ಆಣತಿಯ ಮೇರೆಗೆ ಕೊಂದಿದ್ದಕ್ಕೆ ಚುಕ್ಕಿಯ ಪದವಿ ಸಿಕ್ಕಿತೆಂದು ಹೇಳುತ್ತಿದ್ದ ರಾಕ್ಷಸರೇನೋ ಮನುಷ್ಯ ರೂಪ ಧರಿಸಿ ಮೋಸ ಮಾಡುತ್ತಿದ್ದುದನ್ನು ಸಣ್ನ ವಯಸ್ಸಿನಿಂದ ಕಥೆಗಳಿಂದ ತಿಳಿದಿದ್ದೆ ಇದ್ಯಾವುದಪ್ಪಾ ಮನುಷ್ಯ ರೂಪದ ರಾಕ್ಷಸರು? ಎನ್ನುವಾಗ ತಾತ, ‘ಸ್ವಲ್ಪ ದೊಡ್ದವಳಾಗು ಮಗಾ ನಿನ್ನ ಅನುಭೋಗಕ್ಕೆ ಬರುತ್ತೆ’ ಎನ್ನುತ್ತಿದ್ದ. ಇನ್ನೂ ಕುತೂಹಲ ಎಂದರೆ ತಾತ ಹೇಗೆ ತನ್ನ ಪೂರ್ವಜರನ್ನು ಆಕಾಶದಲ್ಲಿ ಗುರುತಿಸುತ್ತಿದ್ದ ಎನ್ನುವುದು. ತಾತ ಅವರು ಚಿಕ್ಕಿಯೇ ಆಗಿದ್ದಾರೆಂದ ನಿನಗೆ ಹೇಗೆ ಗೊತ್ತಾಯಿತು? ಆ ನಕ್ಷತ್ರಗಳೆಲ್ಲಾ ಅವರೇ ಎಂದು ಹೇಗೆ ಹೇಳುತ್ತೀಯ? ಎಂದು ಕೇಳಿದರೆ ಎದೆಯ ಮೇಲೆ ಕೈ ಇಟ್ಟುಕೊಂಡು, ‘ಇಲ್ಲಿ ಮಿಡಿಯುತ್ತಲ್ಲಾ ಇದಕ್ಕೆ ಗೊತ್ತಾಗುತ್ತೆ ಮಗಾ’ ಎನ್ನುತ್ತಿದ್ದ. ನನ್ನ ಮನಸ್ಸು ಹಿಂದೇ ಇನ್ನೊಂದೇ ಬಗೆಯಲ್ಲಿ ಯೋಚಿಸುತ್ತಿತ್ತು. ‘ತಾತ, ನಿನ್ನ ಅಮ್ಮ, ಅಜ್ಜಿ, ಮುತ್ತಜ್ಜಿ ಸುಕ್ಕಿ ಆಗಲಿಲ್ಲವಾ! ಅವರೆಲ್ಲಿ?’ ಎಂದಿದ್ದೆ. ತಾತ ನನ್ನ ಬಾಯಿಯ ಮೇಲೆ ಬೆರಳಿಟ್ಟು, ‘ಹೆಣ್ಣುಮಕ್ಕಳು ಸುಕ್ಕಿ ಆಗಲ್ಲ’ ಎಂದಿದ್ದ. ನನಗೆ ಹಟ, ‘ತಾತ ನಾನೂ ಆಗಲ್ವ’ ಎಂದು ಕೇಳಿದ್ದಕ್ಕೆ, ‘ಹೆಣ್ಣುಮಕ್ಕಳು ಸುಕ್ಕಿ ಆದರೆ ಸುಟ್ಟು ಓಯ್ತಾರೆ’ ಎಂದು ಬಾಯಿ ಮುಚ್ಚಿಸಿದ್ದ. ಹಳ್ಳಿಯ ಜನರ ಕಲ್ಪನೆಗಳೇ ವಿಚಿತ್ರ. ಆದರೆ ಆಗಿಂದಲೂ ಆಸೆ ನಾನು ಒಂದು ಚುಕ್ಕಿ ಆಗಬೇಕೆಂದು.

ನಾನು ಹುಟ್ಟಿದ್ದೆ ವಿಚಿತ್ರ ಸನ್ನಿವೇಶದಲ್ಲಿ. ಅಪ್ಪ ಅವ್ವರಿಗೆ ವಯಸ್ಸು ಮುದುರಿ, ಮುಖದ ನೆರಿಗೆಗಳು ಬಲವಾಗತೊಡಗಿದಾಗ. ನನ್ನ ಮೇಲೆ ಮೂವರು ಅಕ್ಕ ಸುಧಾ, ಅಣ್ಣಂದಿರು ಹರೀಶ, ಗಿರೀಶ, ಪೇಟೆ ಸುತ್ತುತ್ತಿದ್ದ ಅಪ್ಪನಿಗೆ ಹೊಸ ಹೆಸರುಗಳಲ್ಲಿ ಆಸಕ್ತಿ. ಊರ ತುಂಬಾ ಮಲ್ಲಣ್ಣ, ತಿಮ್ಮಣ್ಣ, ವೆಂಕಣ್ಣಗಳೇ ಇದ್ದ ಕಾಲದಲ್ಲಿ ಅಪ್ಪ ತನ್ನ ಮಕ್ಕಳಿಗೆ ಇಂಥಾ ಹೆಸರುಗಳನ್ನು ಇಟ್ಟಿದ್ದ. ನಾನು ಹುಟ್ಟಿದಾಗ ಮಾತ್ರ ಅಜ್ಜಿ ಹಟ ಹಿಡಿದು ರಾಜ್ಯಲಕ್ಷ್ಮಿ ಎಂದು ಹೆಸರಿಟ್ಟಳಂತೆ. ಮನೆಯಲ್ಲಿ ರಾಜ್ಯ ಎಂತಲೆ ಕರೆಯುತ್ತಿದ್ದರು. ಅಮ್ಮ ಮಾತ್ರ ರಾಜಿ ಎನ್ನುತ್ತಿದ್ದಳು. ನಾನು ಮಾತ್ರ ಜೀವನದಲ್ಲಿ ರಾಜಿ ಮಾಡಿಕೊಳ್ಳಲಾರೆ ಎನ್ನುವಂತೆ ಬೆಳೆದೆ. ಮದುವೆಯಾದ ಮೇಲೆ ಸತೀಶ ಕೂಡಾ ನನ್ನ ಹಾಗೆ ನೋಡಿಕೊಂಡ. ಅತ್ತೆ ಮಾವ ಕೂಡಾ ‘ನಾವು ಹೇಳಿದ ಹಾಗೆ ನೀನು ಕೇಳು’ ಎಂದು ಯಾವತ್ತೂ ಹೇಳಲಿಲ್ಲ. ಎಂದಾದರೂ ತಮಾಷಿಯಾಗಿ, ‘ನೀವು ನನಗೆ ಯಾಕೆ ಏನೂ ಹೇಳುವುದಿಲ್ಲ, ಸೊಸೆಗೆ ಏನಾದರೂ ಹೇಳಬೇಕಲ್ಲವೇ?’ ಎಂದು ಕೇಳಿದರೆ, ನಾವು ಹೇಳಿ ನೀನು ಕೇಳಲಿಕ್ಕೆ ನೀನು ಸಣ್ಣ ಹುಡುಗಿಯಲ್ಲ. ನಿರ್ಧಾರವನ್ನು ತೆಗೆದುಕೊಳ್ಳಲು ನೀನು ಸ್ವತಂತ್ರಳು. ಮೇಲ್ಲಾಗಿ ನೀನು ಸೊಸೆ ಅಲ್ಲ ನಮ್ಮ ಸಹ ಜೀವ’ ಎಂದಿದ್ದರು. ಸತೀಶ ಅರ್ಥವಾಯಿತಾ ಎನ್ನುವಂತೆ ನಕ್ಕಿದ್ದ.

ಅಮ್ಮನ ಮನೆ ತುಂಬಾ ಕುರಿ, ಕೋಳಿ, ದನ, ಕರು. ಉಣ್ಣುವುದಕ್ಕೆ ಯಾವತ್ತೂ ಕೊರತೆ ಆಗಿದ್ದನ್ನು ನಾನು ನೋಡಲೇ ಇಲ್ಲ. ಈ ಇನ್ನು ಅಜ್ಜಿ ಊರವರ್ಯಾರ ಬಳಿಯೂ ಇಲ್ಲದ, ಆದರೆ ತನ್ನ ಬಳಿಯಿದ್ದ ಸೊಂಟದ ಬೆಳ್ಳಿ ಪಟ್ಟಿಗೆ ಎಲೆಡಿಕೆ ಚೀಲವನ್ನು ಸಿಕ್ಕಿಸಿ ಜಗುಲಿಗೆ ಕೂತರೆ ಎಲ್ಲರ ವಿಷಯಗಳನ್ನು ಎಲಡಿಕೆಯ ಜೊತೆ ಅಗಿದು ರಂಗಾಗಿಸುತ್ತಿದ್ದಳು. ಅಜ್ಜಿಗೆ ತಾತನೂ ಹೆದರುತ್ತಿದ್ದ. ಅಪ್ಪ ತನ್ನ ಸೆಕೆಂಡ್ ಹ್ಯಾಂಡ್ ಬಜಾಜ್ ಚೇತಕ್ ಗಾಡಿಯಲ್ಲಿ ಹೊರಟ ಎಂದರೆ ಮನೆಗೆ ವಾರಗಟ್ಟಲೆ ಬರುತ್ತಿರಲಿಲ್ಲ. ಮೊದ ಮೊದಲು ಅಮ್ಮನನ್ನು ಅಪ್ಪನಿಗಾಗಿ ಪೀಡಿಸುತ್ತಿದ್ದೆವು. ನಮಗೆ ಪ್ರತಿ ದಿನ ಮನೆಗೆ ಬರುವಾಗ ಬಿಸ್ಕೆಟ್ಟೋ, ಸಕ್ಕರೆಯ ಕಡ್ಡಿಯೋ ಇಲ್ಲ ಕಾರಾಸೇವೆಯೋ ತರುತ್ತಿದ್ದನಲ್ಲ ಅದು ತಪ್ಪಿದ್ದು ಒಂದಾದರೆ, ರಾತ್ರಿಗಳಲ್ಲಿ ಅವನ ಎದೆಗೊರಗಿ ಮಲಗುವ ಸುಖ ಇಲ್ಲವಾಗಿದ್ದು ಇನ್ನೊಂದು.

ಅಪ್ಪ ಹತ್ತಿರದ ಊರುಗಳಲ್ಲಿ ಎಲ್ಲೆಲ್ಲಿ ಮಾಂಸದ ಅಂಗಡಿಗಳಿದ್ದಾವೋ ಅಲ್ಲೆಲ್ಲಾ ಹೋಗಿ ಚರ್ಮವನ್ನು ಕೊಂಡುಕೊ೦ಡು ಫ್ಯಾಕ್ಟರಿಗೆ ತಲುಪಿಸುತ್ತಿದ್ದ. ಕಮಾಯಿ ತುಂಬಾ ಚೆನ್ನಾಗಿದ್ದರಿಂದ ಬರುವಾಗ ನಮಗೆ ಬೇಕಾದ ಬಣ್ಣದ ಆಟಿಕೆಗಳನ್ನು ರಾಶಿ ತಿಂಡಿಗಳನ್ನೂ ತರುತ್ತಿದ್ದ. ವಾರ ಕಳೆದು ಮತ್ತೆ ಅಪ್ಪ ಬರುವಾಗಲೂ ತಿಂಡಿಗಳು ಡಬ್ಬದಲ್ಲಿ ಇನ್ನೂ ಉಳಿದಿರುತ್ತಿದ್ದವು. ಇದೇನು ಅಪ್ಪನಿಗೆ ತಲತಲಾಂತರದಿ೦ದ ಬಂದ ವ್ಯಾಪಾರ ಅಲ್ಲ. ಬದುಕಿಗಾಗಿ ಅವನೇ ಕಂಡುಕೊ೦ಡ ಹೊಸ ದಾರಿಗಳಲ್ಲಿ ಒಂದಾಗಿತ್ತು. ಒಂದೇ ಸಮನೆ ಅಜ್ಜಿ ಕೊಡುತ್ತಿದ್ದ ಕಾಟ ತಡೆಯಲಾಗದೆ, ಗಂಡ ತನ್ನೊಂದಿಗಿದ್ದರೆ ಅತ್ತೆ ಸ್ವಲ್ಪವಾದರೂ ಸುಮ್ಮನಿದ್ದಾಳು ಎಂದೆನ್ನಿಸಿ ಅಮ್ಮ, ‘ಇದೆಲ್ಲಾ ಬೇಕಾ? ಲಕ್ಷಣವಾಗಿ ಮನೆಯ ಮುಂದೆ ಏನು ಆಗುತ್ತೋ ಅದನ್ನ ನೋಡಿಕೊಂಡು ಮಾಡಿಕೊಂಡಿದ್ದರೆ ಆಗದೇ?’ ಎಂದು ಗೊಣಗಿದ್ದನ್ನ ಕೇಳಿಸಿಕೊಂಡ ಅಜ್ಜಿ, ‘ಇಬ್ಬರು ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ದುಡೀದೇ ಇದ್ರೆ ನಿಮ್ಮಪ್ಪನ ಮನೆಯಿಂದ ತರ್ತೀಯಾ?’ ಎಂದು ಕೇಳಿದ್ದಳು. ಈ ಮಾತನ್ನ ಕೇಳಿದ್ದೇ ತಡ ಅಮ್ಮ, ‘ನಮ್ಮಪ್ಪನ ಮನೆಯಿಂದ ಯಾಕೆ ತರಲಿ? ಕೊಡಬೇಕಾದ ಬಂಗಾರಾನ ಎಲ್ಲಿ ಎತ್ತಿ ಹಾಕಿಬಿಡ್ತಾರೋ ಅಂತ ಹೆರಿಗೆಗೆ ಕರಕೊಂಡು ಹೋಗಲು ಬಂದ ಅಪ್ಪನಿಗೆ, ‘ತಾಯೀ ಮಗೂ ಜೊತೆ ಕೊಡಬೇಕಾದ ಬಂಗಾರವನ್ನೂ ಕೊಟ್ಟು ಕಳಿಸಿ’ ಅಂತ ಹೇಳಿದ್ರಲ್ಲಾ. ನಮ್ಮಪ್ಪ ಅದಕ್ಕೋಸ್ಕರ ಎಷ್ಟು ಕಷ್ಟ ಪಟ್ಟಿದ್ರು ಅಂತಾ ನಿಮಗೆ ಗೊತ್ತಾ? ಈಗ ಮತ್ತೆ ಹೋಗಿ ನನಗೆ ಕಷ್ಟ ಇದೆ ಅಂತ ಕೇಳ್ಲಾ?’ ಎಂದು ಸಿಡಿದೆದ್ದಿದ್ದಳು. ‘ಕೇಳೋಕ್ಕಾಗಲ್ಲ ಅಂದ್ರೆ ಮತ್ತೆ ಬಾಯಿ ಮುಚ್ಚಿಕೊಂಡು ಸುಮ್ಮನಿರು. ಸಂಸಾರ ಮಾಡೋ ಹೆಂಗ್ಸು, ಗಂಡ್ಸಿನ ವಿಷಯಕ್ಕೆ ಬರದೇ ಇದ್ರೆ ಒಳ್ಳೇದು. ಅದು ಲಕ್ಷಣ’ ಎಂದು ಅಜ್ಜಿ ರೇಗಿದ್ದಳು. ಇಷ್ಟೆಲ್ಲಾ ನಡೆಯುತ್ತಿದ್ದರೂ ತಾತ ತನಗೂ ಅದಕ್ಕೂ ಸಂಬ೦ಧವೇ ಇಲ್ಲ ಎನ್ನುವಂತೆ ಬಿದಿರು ಸೀಳಿ ಕೋಳಿಗಳನ್ನು ಕೌಂಚಿ ಹಾಕಲಿಕ್ಕೆ ಬುಟ್ಟಿಯನ್ನು ಹೆಣೆಯುತ್ತಲೋ, ಇಲ್ಲಾಂದ್ರೆ ಎಷ್ಟು ಬೆಳೆದಿದೆ ಎಂದು ಕುರಿ ತುಪ್ಪಳವನ್ನು ನೋಡುತ್ತಲೋ ಕೂತುಬಿಡುತ್ತಿದ್ದ. ಜಗಳ ತಾರಕಕ್ಕೆ ಏರುತ್ತಿದೆ ಇನ್ನು ಅಜ್ಜಿ ಬಂದು ತನಗೆ ನೋಡು ಎಂದು ಒಪ್ಪಿಸಲಿಕ್ಕೆ ಆರಂಭಿಸ್ತಾಳೆ ಎನ್ನುವ ಸೂಚನೆ ಸಿಕ್ಕ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿಬಿಡುತ್ತಿದ್ದ. ಮತ್ತೆ ಬರುತ್ತಿದ್ದುದು ಸ್ವಲ್ಪ ಸೆರೆಯನ್ನು ಏರಿಸಿಕೊಂಡು ರಂಗು ರಂಗಾಗಿ. ಹೇಳಿದ್ದೇ ಹೇಳುತ್ತ ಹತ್ತು ಸಲ ತಿರುಗಾ ಮುರುಗಾ ಆಡುವಾಗಲೇ ಅರ್ಥವಾಗಿಬಿಡುತ್ತಿತ್ತು. ಸ್ವಲ್ಪ ಹೆಚ್ಚಾದರೆ ಪ್ಪದಗಳ ಮೇಲೆ ಪದ ಹಾಡುತ್ತಿದ್ದ. ಏರಿದ್ದ ಅಮಲಿಗೆ ಮುಕ್ತಿ ಸಿಗುತ್ತಿದ್ದುದು ಅಜ್ಜಿ ಏನು ಎಂದು ಗದರಿದಾಗಲೆ. ಅಮಲಿಳಿಸಿಕೊಂಡು ‘ಕಣ್ಣ್ ಬಿಡಬೇಡ ಕಣೆ ಹುಚ್ಚಮ್ಮ ಮಾಯಮ್ಮ ಕಂಡ್ ಬಿಡ್ತಾರೆ’ ಎನ್ನುತ್ತಿದ್ದ.

ನನಗೂ, ಅಕ್ಕನಿಗೂ ಹದಿನೈದು ವರ್ಷಗಳ ಅಂತರ ಇದ್ದುದ್ದರಿಂದ ನನಗೆ ಐದಾರು ವರ್ಷಗಳಾಗುವಾಗ ಅಕ್ಕನಿಗೆ ಮದುವೆ ಸಂಬ೦ಧ ನೋಡುತ್ತಿದ್ದರು. ಅವಳ ಮದುವೆಯಲ್ಲೂ ನಾನು ಬೇಕಾದ ಹಾಗೆ ಆಟವಾಡುತ್ತಾ ಕಾಲ ಕಳೆದಿದ್ದೆ, ಯಾವಾಗಲೂ ನನಗೆ ಅಣ್ಣಂದಿರೇ ಜೊತೆ. ಅವರಿಗೂ ನಾನು ಆಟದ ವಸ್ತು. ಅವರ ಜೊತೆ ಸೇರಿ ಎಲ್ಲಾ ಗಂಡು ಹುಡುಗನ ಹಾಗೇ ಆಡುವುದು ಅಭ್ಯಾಸವಾಗಿ ಹೋಗಿತ್ತು. ಒಮ್ಮೆಯಂತೂ ನನಗೂ ಪ್ಯಾಂಟು ಬೇಕು ಎಂದು ಹಟ ಹಿಡಿದಿದ್ದೆ. ಹೈಸ್ಕೂಲು ದಾಟಿದ ಮೇಲೂ ಪ್ಯಾಂಟು ಕಾಣದ ನಮ್ಮೂರಿನಲ್ಲಿ ಅಪ್ಪ ಒಬ್ಬನೇ ಹೈಸ್ಕೂಲಿನ ತನ್ನ ಗಂಡು ಮಕ್ಕಳಿಗೆ ಪ್ಯಾಂಟನ್ನು ತಂದುಕೊಟ್ಟು ತನ್ನ ಘನತೆಯನ್ನು ಏರಿಸಿಕೊಂಡಿದ್ದ. `ಹೆಣ್ಣು ಹುಡುಗಿ ಎಲ್ಲಾದರೂ ಪ್ಯಾಂಟನ್ನು ಹಾಕಿಕೊಳ್ಳುವುದೇ? ಇಲ್ಲವೇ ಇಲ್ಲ’ ಎನ್ನುವ ಮನೆಯವರ ವಿರೋಧವನ್ನೂ ಮೀರಿ ಹಟಕ್ಕೆ ಬಿದ್ದವಳಂತೆ, ಅಟ್ಟದ ಮೇಲೆ ಕಟ್ಟಿಟ್ಟಿದ್ದ ಗಂಟನ್ನು ಇಳಿಸಿ ಅಣ್ಣನ ಹಳೆಯ ಪ್ಯಾಂಟನ್ನು ಏರಿಸಿಕೊಂಡು, ಜಾರುತ್ತಿದ್ದ ಅದನ್ನು ಕೈಲಿ ಹಿಡಿದು ಸ್ವಲ್ಪ ದೂರ ಹೋಗಿ, ಇನ್ನು ಆಗಲ್ಲ ಎಂದು ಅನ್ನಿಸಿದಾಗ ನನ್ನ ಮಾನ ಕಾಪಾಡಿಕೊಳ್ಳಲು ಅಲ್ಲೆ ಬೆಳೆದಿದ್ದ ಯಾವುದೋ ಬಳ್ಳಿಯನ್ನು ಸೊಂಟಕ್ಕೆ ಸುತ್ತಿಕೊಂಡು ಊರೆಲ್ಲಾ ರಾಜಾರೋಷವಾಗಿ ಅಡ್ಡಾಡಿ ಬಂದಿದ್ದೆ. ಮೂಗಿನ ಮೇಲೆ ಬೆರಳೇರಿಸಿಕೊಂಡ ಊರವರು, ‘ನಾಳೆ ನಿನ್ನ ಗಂಡ ಬರಲಿ ಅವನಿಗೆ ಹೇಳದೇ ಇರುತ್ತೇವಾ?’ ಎಂದಿದ್ದಕ್ಕೆ, ‘ನಾನೇನು ಇಂಥಾ ಹಳ್ಳಿ ಹುಡುಗನ್ನ ಮದುವೆ ಆಗ್ತೀನಿ ಅಂದುಕೊ೦ಡ್ರಾ? ದಿನಾ ಪ್ಯಾಂಟ್ ಇಕ್ಕೊಳ್ಳೋ ಹುಡ್ಗನ್ನೇ ಮದ್ವೆ ಆಗೋದು’ ಎನ್ನುತ್ತಿದ್ದೆ. ಊರವರ ಮುಸಿಮುಸಿ ನಗು, ಅಜ್ಜಿಯ ‘ಗಂಡುಬೀರಿ’ ಎನ್ನುವ ಬೈಗುಳ ಯಾವುದೂ ನನ್ನ ತಟ್ಟಿರಲಿಲ್ಲ.

ಇಷ್ಟಾಗಿಯೂ ಅಜ್ಜಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಯಾಕೆಂದರೆ ನಾನು ಹಾಡನ್ನು ಚೆನ್ನಾಗಿ ಹಾಡುತ್ತಿದ್ದೆ. ಸೋಬಾನೆಯೋ, ಪದಗಳೋ, ಹಾಡಿನ ಸಂಗತಿಗಳನ್ನೋ ಯಾರಾದರೂ, ಎಲ್ಲಿಯಾದರೂ ಹಾಡುತ್ತಾರೆ ಎಂದರೆ ಅಲ್ಲಿಯೇ ನನ್ನ ಠಿಕಾಣಿ. `ಕೆರೆಯ ಏರಿಯ ಮೇಲೆ ಮಾಯಕ್ಕ ಕಾದು ಕುಳಿತಿದ್ದಾಗ ಹುಚ್ಚಮ್ಮ ದೇವಿ ತನ್ನ ಮಗನ ಜೊತೆ ಬಂದೋಳೋ ಅವಳೆಂಗೆ ಬಂದಳೂ ಅಂದ್ರೆ – ಜಗ್ಗುತ್ತಾಳೆ ಜಂಬ ಮಾಡುತ್ತಾಳೆ, ವಾಲುತ್ತಾಳೆ ಗುಡಿಗೆ ಓಗುತ್ತಾಳೆ ಎಂದು ಪದ ಮುಗಿದ ಮೇಲೆ ಪಲ್ಲಕ್ಕಿ ಮಾತ್ರಾ ಹೇಳವ್ವ’ ಎಂದು ನನ್ನ ಕೂಡಿಸಿಕೊಳ್ಳುತ್ತಿದ್ದರು. ನಾನು ಕಡು ನಿಷ್ಠೆಯಿಂದ ಅದನ್ನು ಮಾತ್ರ ಹೇಳುತ್ತಾ ಕುಳಿತಿರುತ್ತಿದ್ದೆ. ಒಂದೊಮ್ಮೆ ಅವರ ಹಾಡು ಕೇಳುತ್ತಾ, ಕೇಳುತ್ತಾ ಆವೇಶಕ್ಕೆ ಒಳಗಾಗುತ್ತಿದ್ದೆ. ಮನೆಗೆ ಬಂದ ಮೇಲೂ ಪದ ನೆನಪಿರುತ್ತಿರಲಿಲ್ಲ ಜಗ್ಗುತ್ತಾಳೆ ಜಂಭ ಮಾಡುತ್ತಾಳೆ ವಾಲುತ್ತಾಳೆ ಗುಡಿಗೆ ಓಗುತ್ತಾಳೆ ಎಂದು ರಾಗವಾಆಗಿ ಹಾಡುತ್ತಿದ್ದರೆ, ಅಜ್ಜಿ ನನ್ನ ಮಣೆ ಮೇಲೆ ಕೂರಿಸಿ ಕಡ್ಡಿ ಪರಕ್ಕೆಯಿಂದ ನೀವಾಳಿಸಿ ಹಾಕುತ್ತಿದ್ದಳು. ಹಾದಿ ಬೀದಿಯವರ ಹತ್ತಿರ, ‘ನಮ್ಮ ರಾಜ್ಯ ಎಷ್ಟು ಚೆನ್ನಾಗಿ ಹಾಡ್ತಾಳೆ ಗೊತ್ತಾ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದಳು.

ಕುರಿ ಕಾಯುತ್ತಲೋ, ಕಟ್ಟಿಗೆ ಆಯುತ್ತಲೋ ಏರುಸ್ಥಾಯಿಯಲ್ಲಿ ಹಾಡುವುದುೆ ಇಷ್ಟವಾಗುತ್ತಿತ್ತು. ನನ್ನ ಧ್ವನಿ ಕಾಡಿನ ಅಂಚಿಗೂ ಮುಟ್ಟಿ ವಾಪಾಸು ಬರುತ್ತಿದ್ದರೆ ಎಂಥದ್ದೋ ಖುಷಿ. ಯಾರಾದರೂ ‘ಪಾಪ ಒಂದು ಹಾಡನ್ನ ಹೇಳಿಬಿಡು’ ಎಂದುಬಿಟ್ಟರ೦ತೂ ಸಾಕೇ ಸಾಕು. ನನ್ನ ಉತ್ಸಾಹ ಹೇಳತೀರದು. ‘ಇನ್ನ ಸಾಕು ಬಿಡವ್ವ’ ಎನ್ನುವವರೆಗೂ ಹಾಡುತ್ತಲೇ ಇರುತ್ತಿದ್ದೆ.

ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಅಜ್ಜಿ ದಿನಾ ನಾಟಿ ಕೋಳಿಮೊಟ್ಟೆಯನ್ನು ಬೇಯಿಸುವಂತೆ ಅಮ್ಮನಿಗೆ ಹೇಳುತ್ತಿದ್ದಳು. ಬೇಯಿಸಿದ್ದರಲ್ಲಿ ಮೊಮ್ಮಕ್ಕಳಿಗೆ ಎರಡು ಪಾಲು ದೊಡ್ಡವರಿಗೆ ಒಂದು ಪಾಲು. ಬೇಕೆಂದಾಗ ಕೋಳಿ ಆಗೀಗ ಮಾಂಸವನ್ನು ಮಾಡಿಸುತ್ತಿದ್ದಳು. ಇನ್ನು ಅಕ್ಕ ಬಂದರೆ ಅಂತೂ ಹಬ್ಬವೇ ಹಬ್ಬ. ರಾತ್ರಿಗಳಲ್ಲಿ ತಾತ ಬೆಳೆದ ಹೊಲಗಳನ್ನು ಕಾಯಲಿಕ್ಕೆ ಹೋಗುತ್ತಿದ್ದ. ಇಂಥಾ ಹೊತ್ತಿಗೆಂದೇ ದೊಡ್ಡದೊಂದು ರೇಡಿಯೋವನ್ನು, ಒಂದು ಟಾರ್ಚನ್ನು ಅಪ್ಪ ತಂದುಕೊಟ್ಟಿದ್ದ. ಇದರಿಂದ ಅಪ್ಪನ ವರ್ಚಸ್ಸು ಊರಲ್ಲಿ ಹೆಚ್ಚಾಗಿತ್ತು. ಊರ ಗೌಡರ ಮನೆಯಲ್ಲಿ ಬಿಟ್ಟರೆ ರೇಡಿಯೋ ಇದ್ದದ್ದು ನಮ್ಮ ಮನೆಯಲ್ಲೇ. ಊರವರ ಎದುರಲ್ಲಿ ಅದು ನಮ್ಮ ಅಂತಸ್ತನ್ನು ಹೆಚ್ಚಿಸಿತ್ತೋ ಗೌಡರ ಅಂತಸ್ತನ್ನು ತಗ್ಗಿಸಿತ್ತೋ ತಿಳಿಯದು. ಗೌಡರ ಮಗಳು ನನಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳು, ನಾನು ಎದುರು ಸಿಕ್ಕಾಗೆಲ್ಲಾ ತನ್ನ ಸ್ನೇಹಿತೆಯರಿಗೆ, ‘ಇವಳಿಗೆ ಜಂಭ ಕಣ್ರೇ ತಮ್ಮ ಹತ್ತಿರವೇ ರೇಡಿವೋ ಇದೆ ಎನ್ನುವ ಜಂಭ. ನಮ್ಮಪ್ಪ ಊರಗೌಡ ನಮ್ಮಪ್ಪನ ಹತ್ತಿರ ಇರುವಷ್ಟು ಬೇರೆ ಯಾರ ಹತ್ತಿರವೂ ಇಲ್ಲ. ನೆನ್ನೆ ಮೊನ್ನೆ ಬೆಳ್ಳು ಸೀಪ್ಕೊಂಡಿರೋರೆಲ್ಲಾ ಇಂಗೆ ಎದ್ದು ನಿಂತ್ಬಿಟ್ಟಾರೆ’ ಎಂದಿದ್ದಳು. ನಾನು ಮನೆಗೆ ಬಂದು ಹೇಳಿದರೆ, ‘ಔದಾ ಮಗಾ ಅಂಗ೦ದಳಾ ಆ ಶಾರಿ, ಪ್ರಪಂಚದಾಗಿರೋದೆಲ್ಲಾ ಅವಳಪ್ಪನಾ ಆಸ್ತೀನಂತಾ. ನನ್ನ ಮಗಾನೂ ಸಾವ್ಕಾರಾನೇ’ ಎಂದು ಅಜ್ಜಿ ಗುರುಗುಟ್ಟಿದ್ದಳು. ಅಮ್ಮ ‘ಇವೆಲ್ಲಾ ಆಡಂಬ್ರ ನಮಗ್ಯಾಕೆ?’ ಎಂದು ಗೊಣಗಿದ್ದಳು.

ತಾತ ಹೊಲಕ್ಕೆ ಹೊರಟಿದ್ದ ನನ್ನನ್ನೂ ಕರೆದೊಯ್ಯುವಂತೆ ಅವನಿಗೆ ದುಂಬಾಲು ಬಿದ್ದಿದ್ದೆ. ‘ಪಾಪ ಹುಡುಗಿ ಆಸೆ ಪಡ್ತಾಳೆ’ ಎಂದು ತಾತ ಎಷ್ಟೇ ಹೇಳಿದರೂ ಅಜ್ಜಿ ಕೇಳಲಿಲ್ಲ. ‘ನೀನು ಹೋಗಿ ಮಲಗಿಕೋ’ ಎಂದು ಬಾಯಲ್ಲಿ ಹೇಳಿದರೂ ಅವನ ಕಣ್ಣುಗಳು ಮತ್ತೇನನ್ನೋ ಹೇಳುತ್ತಿದ್ದವು. ನಾನು ನನ್ನ ಕೋಣೆಗೆ ಹೋದೆ ತಾತ ಹೊಲಕ್ಕೆ ಹೋಗುವವನ ಹಾಗೇ ಹೋಗಿ ಕಿಟಕಿಯಲ್ಲಿ ಕಾಣಿಸಿ ಟರ್ಚನ್ನು ಬಿಟ್ಟು ಆ ಬೆಳಕಲ್ಲಿ ರೇಡಿಯೋವನ್ನು ತೆಗೆದುಕೊಂಡು ಬರುವಂತೆ ಹೇಳಿದ್ದ. ನಾವಿಬ್ಬರೂ ಮನೆಯಲ್ಲಿ ಯಾರಿಗೂ ಕಾಣದೆ ಹೊಲಕ್ಕೆ ಹೋಗಿದ್ದೆವು. ಅಟ್ಟಣೆಯ ಮೇಲೆ ಮಲಗಿ ಹಾಡನ್ನು ಕೇಳುತ್ತಾ, ಹಾಡನ್ನು ಹೇಳುತ್ತಾ ಖುಷಿ ಪಟ್ಟೆವು. ತಾತ ಕಥೆ ಹೇಳಿದ. ಪುಟ್ಟ ಹುಡುಗಿಯಾಗಿದ್ದ ನಾನು ಅವನ ಕಥೆ ಕೇಳುತ್ತಾ ಅವನ ಜೋಲುಬಿದ್ದ ಚರ್ಮವನ್ನು ನೀವುತ್ತಾ, ‘ಇದನ್ನೆಲ್ಲಾ ಕೊಟ್ಟುಬಿಡು ಇದರಿಂದ ಚಪಾತಿ ಮಾಡುತ್ತೇನೆ’ ಎಂದಿದ್ದೆ. ‘ಹೌದಾ ಆ ಚಪಾತೀನ ನನಗೇ ತಿನ್ನಿಸ್ತೀಯ ಅಲ್ಲವಾ? ಅದಕ್ಕೆ ನಾನು ಕೊಡಲ್ಲ’ ಎಂದು ನಕ್ಕಿದ್ದ. ನಾನೂ ತಮಾಷಿಯಾಗಿ ತಾತನ ಕಿವಿಗಳನ್ನು ಹಿಡಿದು ಎಳೆಯುತ್ತಾ, ‘ನೊಣ ತಿನ್ನೋ ಗೊರವಯ್ಯ, ಈಗ ನಿನ್ನ ಕಿವಿ ಎಷ್ಟು ದೊಡ್ಡದಾಗಿದೆ. ಎಳ್ದೂ ಎಳ್ದೂ ಇನ್ನೂ ದೊಡ್ದದು ಮಾಡ್ತೀನಿ’ ಎಂದಿದ್ದೆ. ‘ಎಷ್ಟುದ್ದ ಏಳು ಪುಟ್ಟಮ್ಮ ಇಲ್ಲಿಂದ ದೇವರ ತನಕ ಹೋಗುವಷ್ಟ’ ಎಂದಿದ್ದ ಅಜ್ಜ. ಸತ್ತವರು ಮಾತ್ರ ದೇವರ ಹತ್ತಿರ ಹೋಗುವುದು ಎಂದು ತಿಳಿದಿದ್ದ ನಾನು `ನೀನು ದೇವರ ಹತ್ತಿರ ಹೋಗಬೇಡ’ ಎಂದು ಕೇಳಿದ್ದಕ್ಕೆ ತಾತ ನಕ್ಕಿದ್ದ, ‘ನನಗೂ ನಿನಗೂ ಯಾಕೆ? ಈ ಜಗತ್ತಿನ ಸಮಸ್ತರಿಗೂ ಅಲ್ಲಿ ಮಾತ್ರ ಜಾಗ ಇರೋದು’. ನನಗೂ ಸಾವಿರ ಪ್ರಶ್ನೆಗಳು, ‘ದೇವರು ನಿನ್ನ ಮುದ್ದು ಮಾಡುತ್ತಾನಾ?, ಅವನ ಪಕ್ಕ ಕುಳಿತುಕೊಳ್ಳುವುದಕ್ಕಾಗುತ್ತಾ? ದೇವರು ಹೇಗಿದ್ದಾನೆ? ಅವನಿರುವುದು ಎಲ್ಲಿ?’ ಇಂಥಾ ಪ್ರಶ್ನೆಗಳಿಗೆ ತಾತ ಸ್ವಲ್ಪವೂ ಬೇಸರಿಸದೆ ಉತ್ತರಿಸಿ ನನ್ನೊಳಗೆ ಬೆರಗಿನ ಲೋಕವನ್ನು ಹುಟ್ಟು ಹಾಕಿದ್ದ. ತೀರದ ನನ್ನ ಪ್ರಶ್ನೆಗಳಿಗೆ, ‘ಅಯ್ಯ ಅದೆಷ್ಟು ಪ್ರಶ್ನೆ ಕೇಳುತ್ತೀಯೇ?’ ಎಂದು ತಲೆಮೇಲೆ ಮೊಟಕಿದ್ದ.

ರಾತ್ರಿ ಮನೆಯವರ ಕಣ್ಣು ತಪ್ಪಿಸಿ ದಿನಾ ಹೋಗುತ್ತಿದ್ದ ನಮ್ಮ ಈ ಸಾಹಸಗಾಥೆ ಅವತ್ತು ಆ ಘಟನೆ ನಡೆದಿಲ್ಲ ಅಂದಿದ್ದರೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಜೊತೆಗೆ ತಾತ ಇನ್ನಷ್ಟು ಕಾಲ ನಮ್ಮ ಜೊತೆಯೇ ಇರುತ್ತಿದ್ದ ಮತ್ತು ನನಗೆ ಲೋಕದ ಅನ್ಯಾಯವೂ ಗೊತ್ತಾಗುತ್ತಿರಲಿಲ್ಲ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

March 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: