
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
16
ಅತ್ತೆ ಒಳಮನೆಯಲ್ಲಿ ಹಾಸಿಗೆಯನ್ನು ಹಾಸಿದ್ದರು. ಸತೀಶ ಇದ್ದಾಗ ಅದು ನನ್ನ ಅವನ ಕೋಣೆ. ಸತೀಶನ ಜೊತೆ ಕಳೆದ ಕ್ಷಣಗಳು ಕಣ್ಣೆದುರು ಬಂದಂತಾಗಿ ಆಪ್ತವಾದ ಆ ಕ್ಷಣವೂ ಹಿಂಸೆ ಅನ್ನಿಸತೊಡಗಿತು. ಇಲ್ಲಿ ಮಲಗುವುದು ಬೇಡ ಅನ್ನಿಸಿ ಹೊರಬಂದೆ. ಆಶಾ ಆಗಲೇ ತಾತನ ಕಥೆಗಳಿಗೆ ಕಿವಿಯಾಗಿ ಮಗುವೇ ಆಗಿಬಿಟ್ಟಿದ್ದಳು. ʻಆಗೆಲ್ಲಾ ಇಲ್ಲಿ ಸಿಂಹಗಳು ಇದ್ದವು ಅಂತೀನಿ. ನಾನು ಹೂಂ ಎಂದರೆ ಬೆಕ್ಕಿನ ಹಾಗೆ ಮೀಸೆ ಒರೆಸಿಕೊಂಡು ಓಡುತ್ತಿದ್ದವು ಪುಟ್ಟಮ್ಮಾʼ ಎನ್ನುತ್ತಾ ಅವಳಿಗೆ ಏನನ್ನೋ ಹೇಳುತ್ತಿದ್ದರೆ, ಅತ್ತೆ ಮುಸಿಮುಸಿ ನಗುತ್ತಾ, ʻನಾನೇ ಜೋರು ಮಾಡಿದ್ರೆ ನಿಲ್ಲಲ್ಲ, ಇನ್ನು ಆ ಸಿಂಹದ ಎದುರು ನಿಲ್ತಾರಾ ನಿನ್ನ ತಾತ?ʼ ಎಂದಿದ್ದರು. ಮೊಮ್ಮಗಳ ಎದುರು ಹೀರೋ ಆಗಲಿಕ್ಕೆ ಹೊರಟಿದ್ದ ಮಾವನಿಗೆ ಭಾರೀ ಕೋಪ ಬಂದಿತ್ತು. ʻಮಾತಾಡು, ಮಾತಾಡು. ಇವತ್ತು ನಿನ್ನ ಸಪೋರ್ಟ್‌ಗೆ ಸೊಸೆ ಇದ್ದಾಳೆ ಅಂತ ತಾನೆ, ನಾಳೆಯಿಂದ ನಾನೂ ನೀನು ಇಬ್ಬರೆ ನೆನಪಿಟ್ಟುಕೋʼ ಎಂದರು. ʻನಾವಿಬ್ಬರೇ ಅನ್ನೋದು ನಂಗೂ ಗೊತ್ತು, ಜೊತೆಗೆ ನೀವು ಸಿಂಹ ಅಲ್ಲ ಅನ್ನೋದು ಕೂಡಾʼ ಎಂದರು. ನಾನು ನೋಡಿದ ಅತ್ತೆ ಮಾವ ಇವರೇನಾ? ಯಾಕೋ ಎಲ್ಲಾ ಮರೆತು ಹೋಗಿತ್ತು. ವಯಸ್ಸಾಗ್ತಾ ಆಗ್ತಾ ಇಬ್ಬರೂ ಮಕ್ಕಳೇ ಆಗಿಬಿಟ್ಟಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರೋಕ್ಕೆ ಆಗಲ್ಲ, ಆದರೆ ಸುಮ್ಮನೆ ಇರೋಕೂ ಆಗಲ್ಲ. ಜಗಳ ಆಡುತ್ತಲೇ, ಆಡುತ್ತಲೇ ಇನ್ನಷ್ಟು ಹತ್ತಿರ ಆಗಿಬಿಟ್ಟಿದ್ದರು. ಸತೀಶ ಇದ್ದಿದ್ದರೆ ನಾನೂ ಅವನೂ ಹೀಗೆ ಇರುತ್ತಿದ್ದೆವೋ ಏನೋ ಅನ್ನಿಸಿತ್ತು. ನಾನು ಒಳಮನೆಯಿಂದ ಹಜಾರಕ್ಕೆ ಬಂದದ್ದನ್ನು ಕಂಡು ʻಯಾಕೆ ನಿದ್ದೆ ಬರಲಿಲ್ಲವೇ?ʼ ಎಂದರು ಅತ್ತೆ. ಇಲ್ಲ ಎನ್ನುವಂತೆ ತಲೆ ಆಡಿಸಿದೆ. ಸತೀಶ ಸಹಿ ಮಾಡಿದ ಪುಸ್ತಕ ಎಂದು ಮಾವ ತೋರಿಸಿದ್ದಿರಬೇಕು. ಪುಸ್ತಕವನ್ನು ಹಿಡಿದು ಓಡಿಬಂದ ಆಶಾ, ʻಅಮ್ಮಾ ನಿನ್ನ ಹೆಸರು ರಾಜ್ಯಲಕ್ಷ್ಮೀಯಾ?ʼ ಎಂದಳು. ಹುಟ್ಟಿದಾಗಿನಿಂದ ರಾಜ್ಯಲಕ್ಷ್ಮೀ ಆಗಿದ್ದ ನಾನು ಚೈತನ್ಯ ಆಗಿದ್ಡಾದರೂ ಯಾವಾಗ?
ಈ ನೆನಪುಗಳೇ ಹೀಗೆ, ಅಮೃತ ಬಾಂಢವನ್ನೇ ಕುಡಿದು ಸಾವೇ ಇಲ್ಲದೆ ನಮ್ಮ ಸುತ್ತಾ ಸುಳಿಯುತ್ತಲೇ ಇರುತ್ತವೆ. ಕುತೂಹಲದಿಂದ ಕಣ್ಣರಳಿಸಿದ್ದ ಆಶಾಳನ್ನು ನೋಡುತ್ತಾ, ʻಅದು ನಿನ್ನ ಅಪ್ಪ ಕೊಟ್ಟ ಹೆಸರುʼ ಎಂದೆ. ʻಅಪ್ಪ ನಿನಗೆ ಮತ್ತೆ ಹೆಸರಿಟ್ಟರಾ? ಯಾಕೆ?ʼ ಎಂದಳು. ತನಗೇ ಗೊತ್ತಿಲ್ಲದ ಅಮ್ಮನ ಗುಟ್ಟುಗಳು ಇವೆಯಲ್ಲ ಎನ್ನುವ ಬೇಸರವೂ ಅವಳಲ್ಲಿ ಇದ್ದಂತಿತ್ತು. ಆದರೆ ಅವಳು ಕೆಣಕಲಿಲ್ಲ. ಅಷ್ಟರಲ್ಲಿ ಮಾವ ಅವಳನ್ನು ಕರೆದಿದ್ದರಿಂದ ಮತ್ತೆ ಒಳಗೆ ಓಡಿದಳು. ಈಗ ನನ್ನ ಸರದಿ, ನಾನೆ ಹುಡುಕತೊಡಗಿದೆ ಯಾವಾಗಿನಿಂದ ನಾನು ಚೈತನ್ಯ ಆಗಿದ್ದು?
ನಾಗಿ ಸತ್ತ ದಿನ ಊರವರು ಯಾರೂ ಮುಂದೆ ಬರದೇ ಇದ್ದಾಗ, ಸತೀಶನ ಜೊತೆ ನಾನು ಸ್ಟೇಷನ್‌ಗೆ ಕಂಪ್ಲೇಂಟ್ ಕೊಡಲಿಕ್ಕೆ ಹೋಗಿದ್ದೆನಲ್ಲ, ಅವತ್ತು ಅಮ್ಮ ನನ್ನ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಳು. ಸತೀಶ ನನ್ನನ್ನು ಮನೆಗೆ ಬಿಡಲು ಬಂದಾಗ ಯಾರಿದ್ದಾರೆ, ಯಾರಿಲ್ಲ ಎಂದು ನೋಡದೆ ಬಾಯಿಗೆ ಬಂದಂತೆ ಬೈದಿದ್ದಳು. ಜೊತೆಗೆ ಸತೀಶನಿಗೆ, ʻಇನ್ನುಮುಂದೆ ನನ್ನ ಮಗಳ ವಿಷಯಕ್ಕೆ ಬರಬೇಡ. ಅವಳನ್ನು ಎಲ್ಲಿಗೂ ಕರೆದೊಯ್ಯಬೇಡʼ ಎಂದು ರೇಗಿದ್ದಳು. ʻಅಮ್ಮಾ ಇದೇನಿದು?ʼ ಎಂದು ನಾನು ಏನೋ ಹೇಳಲು ಹೋಗಿದ್ದಕ್ಕೆ, ʻನೀನು ಬಾಯಿಮುಚ್ಚಿಕೊಂಡು ಒಳಗೆ ಹೋಗುʼ ಎಂದು ಬಿಟ್ಟಿದ್ದಳು. ನನಗೆ ಅವಮಾನವಾದಂತಾಗಿ ತಲೆತಗ್ಗಿಸಿದ್ದೆ. ಸತೀಶ ಅಮ್ಮನಿಗೆ ಸಮಾಧಾನ ಮಾಡಲಿಕ್ಕೆ ನೋಡಿದನಾದರೂ ಅಮ್ಮ ಯಾವುದಕ್ಕೂ ಬಗ್ಗಲಿಲ್ಲ. ʻಅಯ್ಯಾ ನಿಮ್ಮ ಪಾಡಿಗೆ ನೀವು ಹೋಗಿ, ನಮ್ಮ ಹುಡುಗಿಯನ್ನು ನಮಗೆ ಬಿಟ್ಟುಬಿಡಿʼ ಎಂದಿದ್ದಳು. ಇನ್ನು ನಾನು ಯಾವ ಹೋರಾಟಕ್ಕೂ ಹೋಗಲಾರೆ ಎಂದೆನ್ನಿಸಿಬಿಟ್ಟಿತ್ತು.
ಅಂದು ಯಾರೂ ಊಟ ಮಾಡಲಿಲ್ಲ. ಅಜ್ಜಿ ಕೂಡಾ ಮಂಕಾಗೇ ಇದ್ದಳು. ನಾನೇ ಅಡುಗೆ ಮಾಡಿ ಊಟ ತೆಗೆದುಕೊಂಡು ಹೋಗಿದ್ದೆ. ಅಮ್ಮ ಅಳುತ್ತಲೇ ಇದ್ದಳು. ನನಗೆ ಗೊತ್ತು ಅಮ್ಮನಿಗೆ ನಾನೇ ಸರ್ವಸ್ವ ಅಂತ. ಆದ್ದರಿಂದಲೇ ಅವಳಿಗೆ ಸಮಾಧಾನ ಆಗಲಿ ಎಂದು, ʻತಗೋ ಊಟ ಮಾಡು. ಇನ್ನು ಮುಂದೆ ಈ ಹೋರಾಟಕ್ಕೆಲ್ಲಾ ಹೋಗುವುದಿಲ್ಲʼ ಎಂದಿದ್ದೆ. ʻಇಲ್ಲ ರಾಜಿ ನಿನಗೆ ಪ್ರಪಂಚ ಗೊತ್ತಿಲ್ಲ. ನೀನು ನನ್ನ ಕಣ್ಣಳೆತೆಯಲ್ಲಿ ಇಲ್ಲ ಅಂದ್ರೆ ಎಂಥಾ ಗಾಬರಿಯಾಗುತ್ತೆ ಗೊತ್ತಾ? ನಾಗಿಗಾದ ಗತಿ ನಿಂಗೂ ಆದರೆ ನಾವು ಬದುಕುವುದಾದ್ರೂ ಹೇಗೆ? ಅವರಪ್ಪನ ಸಾಲ ಬರೀ ನೆಪ, ಮುದ್ದಾಗಿ ಅರಳಿದ್ದ ಹುಡುಗಿ, ಹೊತ್ತುಕೊಂಡು ಹೋದರು… ಈಗ ನೀನು ಪೊಲೀಸ್ ಸ್ಟೇಷನ್ನು ಅಂತೆಲ್ಲ ಹೋಗಿದ್ದು ಆ ಸ್ವಾಮಣಪ್ಪನಿಗೆ ಗೊತ್ತಾಗದೆ ಇರುತ್ತಾ? ಹಾಗೇನಾದ್ರೂ ನಿನ್ನ…ʼ ಎಂದು ಬಿಕ್ಕಳಿಸಿದ್ದಳು. ನನಗಿಂತ ಕಿರಿಯ ವಯಸ್ಸಿನ ನಾಗಿ ಕೆಳಗಿನ ಕೇರಿಯವಳು. ಸೀಬೆಕಾಯಿಗಾಗಿಯೋ, ನೇರಲೆಹಣ್ಣಿಗೋ ಆಸೆ ಬಿದ್ದು ಸುಳಿಯುವಾಗ, ಮರಹತ್ತಿ ಊಹೆಯೂ ಮಾಡದ ವೇಗದಲ್ಲಿ ಹಣ್ಣುಗಳನ್ನು ಕಿತ್ತು ಕೊಡುತ್ತಿದ್ದಳು. ಅವಳನ್ನು ನೆನೆಸಿಕೊಂಡು ಸಂಕಟಪಟ್ಟೆ. ʻಎಲ್ಲಾ ರಾಕ್ಷಸರು ರಾಜಿ, ನೀನು ಮಾತ್ರಾ ಹುಷಾರಾಗಿರು. ಯಾರ ಕಣ್ಣಿಗೂ ಬೀಳಬೇಡʼ ಎಂದು ಅಕ್ಕರೆಯಲ್ಲಿ ಹೇಳಿದ್ದಳು. ನಾನೂ ಹುಂಗುಟ್ಟಿದ್ದೆ. ಇದನ್ನೆಲ್ಲಾ ಕೇಳಿಸಿಕೊಂಡ ಅಜ್ಜಿ ʻಆಯ್ತಾ ಅಮ್ಮ ಮಗಳ ನೌಟಂಕಿ ಆಟ. ಅಲ್ಲ ಕಣೆ ಬೈಯೋದೂ ನೀನೇ, ಅಳೋದೂ ನೀನೇ ಚೆನ್ನಾಗಿದೆʼ ಎಂದು ಅನ್ನ ಕಲಿಸಿ ಇಬ್ಬರಿಗೂ ತುತ್ತು ಮಾಡಿ ತಿನ್ನಿಸಿದ್ದಳು.

ಇಷ್ಟೆಲ್ಲಾ ಆದರೂ ಸತ್ತ ನಾಗಿಯ ಕೇಸಲ್ಲಿ ಪೋಲೀಸರು ಎಫ್‌ಐಆರ್ ಮಾಡಲೆ ಇಲ್ಲ. ಅವರು ಬರುವಷ್ಟರಲ್ಲಿ ಜಮೀನುದಾರರ ಕಡೆಯವರು ಹೆಣವನ್ನೇ ಇಲ್ಲವಾಗಿಸಿಬಿಟ್ಟಿದ್ದರು. ಕಡೆಗೆ ಮನೆಯವರಿಗೆ ಕೂಡಾ ಅವಳೆಲ್ಲಿ ಮಲಗಿದ್ಡಾಳೆ ಎಂದು ತಿಳಿಯದಂತೆ ಗುಟ್ಟನ್ನು ಕಾಪಾಡಿದ್ದರು. ಯಾರನ್ನ ಕೇಳಿದರೂ, ʻದೊಡ್ಡವರ ವಿಷಯ ನಮಗ್ಯಾಕೆ?ʼ ಅನ್ನುತ್ತಿದ್ದರು. ʻಎಲ್ಲರೂ ಹಾಗೇ ಅಂದರೆ ನಾಳೆ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಹೀಗೆಲ್ಲಾ ಆಗಲ್ಲ ಅಂತ ಏನು ಗ್ಯಾರೆಂಟಿ?ʼ ಎಂದರೆ, ʻಇಲ್ಲ ನಮ್ಮಮನೆಯ ಮಕ್ಕಳಿಗೆ ಏನೂ ಆಗಲ್ಲ. ನಾವು ಸಾಲಕ್ಕೆ ಸರಿಯಾಗಿ ಬಡ್ಡಿಕಟ್ತಾ ಇದೀವಲ್ಲಾ?ʼ ಎಂದಿದ್ದರು. ʻನಿಮ್ಮ ಹೆಣ್ಣುಮಕ್ಕಳ ದೇಹ ಅವರ ಕಾಮನೆಗಳನ್ನು ಕೆಣಕಿದರೆ ನೀವು ಕಟ್ಟುವ ಬಡ್ಡಿಯನ್ನು ಅವರು ಗಣಿಸುತ್ತಾರೆಯೇ?ʼ ಎಂದರೆ, ಉತ್ತರ ಯಾರ ಹತ್ತಿರವೂ ಇಲ್ಲ. ಅಲ್ಲಿಗೆ ನಾಗಿ ಸತ್ತಿದ್ದು ಬರಿಯ ಬಡ್ಡಿಗಾಗಿ ಮಾತ್ರ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ನಿಜ ಅವರ ಮಕ್ಕಳ ರಕ್ತಕ್ಕೆ ಬೆಲೆ ಕಟ್ಟುವ ದಿನ ಬರಬೇಕು ಎಂದು ಗೊಣಗುತ್ತಾ ಕೂತಿದ್ದೆ. ಅಮ್ಮ ಏನನ್ನೂ ಕೆದಕದೆ ʻಆ ದಿನ ಬಂದರೆ ಅದು ಸ್ವರ್ಗʼ ಎಂದು ಒಳ ನಡೆದಿದ್ದಳು.
ಬಯಲಲ್ಲಿ ಹೆಣವಾಗಿ ಹೋಗಿದ್ದ ನಾಗಿಯ ಮುಖ ಪದೇಪದೆ ನೆನಪಾಗುತ್ತದೆ. ಪಾಪದ ಹುಡುಗಿ ಏನು ಮಾಡಿದ್ದಳು? ಮೈಮೇಲಿನ ಬಟ್ಟೆ ಅಸ್ತವ್ಯಸ್ತವಾಗಿ ಹೋಗಿತ್ತಲ್ಲ. ಎಷ್ಟಾದರೂ ಹೆಣ್ಣು ದೇಹ, ಕಾಣುತ್ತಿದ್ದರೆ ನನ್ನ ಮೈಯ್ಯೇ ಕಾಣುತ್ತಿದೆ ಅನ್ನಿಸಿ ಬಟ್ಟೆ ಹೊದೆಸಬೇಕು ಅನ್ನಿಸಿ ಮುಂದೆ ಹೆಜ್ಜೆ ಇಟ್ಟಾಗ, ʻಯಾರೂ ಮುಟ್ಟುವುದು ಬೇಡ, ಎಲ್ಲಾ ನಿಮ್ಮ ನಿಮ್ಮ ಮನೆಗೆ ನಡೆಯಿರಿʼ ಎಂದುಬಿಟ್ಟಿದ್ದರು ಸ್ವಾಮಣಪ್ಪನ ಆಳು ಮಕ್ಕಳು. ಅವರಿಗೆ ಸ್ವಾಮಣಪ್ಪನಿಗಿಂತ ಹೆಚ್ಚು ಧಿಮಾಕು. ಮತ್ತು ಹೆಚ್ಚು ಕ್ರೂರಿಗಳು ಕೂಡಾ. ಅಲ್ಲಿಗೂ ನಾಗಿಯ ಮುಖದ ಮೇಲೆ ಆಡುತ್ತಿದ್ದ ನೊಣವನ್ನು ಓಡಿಸಲು ಮುಂದಾಗಿದ್ದೆ. ʻಏಯ್ ನಿಂಗೆ ಹೇಳಿದ್ದು ಗೊತ್ತಾಗಲಿಲ್ಲವಾ ನಡೀ ಆಚೆಗೆʼ ಎಂದಿದ್ದರು. ಆಮೇಲೆ ಯಾವ ನೊಣವನ್ನು ನೋಡಿದರೂ ಅವಳ ಮುಖದ ಮೇಲೆ ಆಡುತ್ತಿದ್ದ ಆ ನೊಣ ಇದೇನೇನೋ ಎನ್ನಿಸಿದಾಗ ಭಯಗೊಳ್ಳುತ್ತಿದ್ದೆ.
ʻಭಯ ನಮ್ಮ ಮೊದಲ ಶತ್ರು. ಅದನ್ನು ಹೊಡೆದೋಡಿಸಿದರೆ ನಮ್ಮನ್ನು ನಾವೇ ಗೆದ್ದಂತೆ, ನಮ್ಮನ್ನು ಒಮ್ಮೆ ಗೆಲ್ಲಲಿಕ್ಕೆ ಸಾಧ್ಯವಾದರೆ ಜಗತ್ತನ್ನು ಗೆದ್ದ ಹಾಗೆʼ ಸತೀಶನ ಮಾತುಗಳನ್ನು ಕೇಳಿದಾಗ ನನ್ನ ಒಳಗೆ ಪುಳಕವುಂಟಾಯಿತು. ಎಂದೂ ಕೇಳದ ಯಾರೂ ಹೇಳಿಕೊಡದ ಮಾತೊಂದನ್ನು ಕಲಿತ ಖುಷಿ ಇರುತ್ತಲ್ಲ ಅದನ್ನ ಅನುಭವಿಸಿದೆ. ಆ ಹುಕಿಯಲ್ಲೇ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದು. ಹಾಡಿನಿಂದ ಶುರುವಾದ ಪಯಣ ಹೋರಾಟದವರೆಗೆ ಹೀಗೆ ಬಂದು ನಿಂತಿದ್ದು.
ಅಮ್ಮ ತನ್ನ ಬಿಗುವನ್ನು ಸಡಿಲಿಸಲೇ ಇಲ್ಲ. ಆದರೆ ಹೋರಾಟ ಮಾಡಿ ಸರ್ಕಾರದಿಂದ ಊರಲ್ಲಿರುವ ಮನೆಯಿಲ್ಲದವರಿಗೆ ಸಿಕ್ಕಂತೆ ನಮಗೂ ಮನೆಗೆ ಜಾಗ ಸಿಕ್ಕಿತಲ್ಲ ಅಲ್ಲಿಯವರೆಗೂ. ʻನಿಮ್ಮ ರಾಜ್ಯ ನೋಡಿ ಎಂಥಾ ಒಳ್ಳೆ ಕೆಲಸಕ್ಕೆ ಕೈಜೋಡಿಸಿದ್ದಾಳೆʼ ಎಂದು ಸುತ್ತಮುತ್ತಲಿನವರು ಹೊಗಳುತ್ತಿದ್ದರೆ ಅಮ್ಮನ ಹೃದಯ ಉಬ್ಬಿ ಬಂದಿತ್ತು. ಎಲ್ಲಕ್ಕೂ ಕಾರಣ ಸತೀಶ ಎಂದು ಮನವರಿಕೆ ಆದಮೇಲೆ ಅವನನ್ನು ಹುಡುಕಿ ಕೃತಜ್ಞತೆ ಹೇಳಿ ಬಂದಿದ್ದಳು. ʻಅಮ್ಮಾ ನೀವು ತುಂಬಾ ಭಯ ಬೀಳಬೇಡಿ, ನಾವೆಲ್ಲಾ ಇದ್ದೇವೆ. ನಮ್ಮನ್ನು ಯಾರೂ ಮುಟ್ಟಲಾರರು, ಹೋರಾಟಗಾರರನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲʼ ಎಂದೆಲ್ಲಾ ಧೈರ್ಯ ಹೇಳಿದ ಮೇಲೆ ಮತ್ತೆ ನನಗೆ ಹೋಗಲು ಅನುಮತಿ ಸಿಕ್ಕಿದ್ದು.
ಮೊದಮೊದಲು ಈ ಹುಡುಗಿಯನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುವುದೇ? ಎನ್ನುವ ಗುಸುಗುಸು ಕೇಳಿ ಬಂದಿತ್ತಾದರೂ, ತಪ್ಪೇನು ಎನ್ನುವ ಉತ್ತರವೂ ಕೆಲವರ ಬಳಿ ಇದ್ದದ್ದರಿಂದ, ಎಲ್ಲಕ್ಕಿಂತ ಹೆಚ್ಚಾಗಿ ಸತೀಶನ ಬೆಂಬಲದಿಂದ ನಾನು ಹಾಡಿನ ಗುಂಪಿಗೆ ಸೇರಿದೆ. ಹೊಸ ಹೊಸ ಹಾಡುಗಳನ್ನು ತಂಡದವರು ಹೇಳಿಕೊಡುತ್ತಿದ್ದರು. ಬಡವರ ಸಂಕಟ, ಶ್ರೀಮಂತರ ದಬ್ಬಾಳಿಕೆ, ಹೆಣ್ಣಿನ ನೋವು, ಗಂಡಿನ ದರ್ಪ, ಮುಟ್ಟಿಸಿಕೊಳ್ಳಬಾರದವರ ಆವೇಶ… ಎಲ್ಲವೂ ಆ ಹಾಡುಗಳಲ್ಲಿ ಇರುತ್ತಿದ್ದವು. ಇನ್ನೂ ನೆನಪಿದೆ ಬರೆದವರು ಯಾರೋ ತಿಳಿಯದು. ಆದರೆ ಆ ಹಾಡಿನ ಸಾಲನ್ನು ಕೇಳಿದರೆ ಖಂಡಿತಾ ಅದು ಯಾರೋ ನೊಂದ ಹೆಣ್ಣುಮಗಳೇ ಬರೆದಿರಬೇಕು ಅನ್ನಿಸಿತ್ತು. ʻನನ್ನ ಗಂಡನ ಕೊಂದ ಕೈಗಳ ಹಿಡಿದವಳ ಕೈ ಬಳೆ ಎಂದೂ ಒಡೆಯದಿರಲಿ…ʼ ಆ ಹಾಡನ್ನು ಹಾಡುವುದು ಬೇಡ ಎಂದು ಕೆಲವರು ವಿರೋಧಿಸಿದ್ದರು. ಸತೀಶ. ʻಅದರಲ್ಲಿ ವ್ಯಂಗ್ಯ ಬೆಂಕಿಯ ಹಾಗಿದೆ ಇರಲಿʼ ಎಂದಿದ್ದ. ಇಡೀ ಕವಿತೆ ಹಾಡುವಾಗ ಮೈ ಝುಂ ಎಂದಿತ್ತು.

ಜೊತೆ ಜೊತೆಗೆ ಅನೇಕ ಯೋಜನೆಗಳ ಬಗ್ಗೆ ಮಾತು ಕಥೆ ಕೂಡಾ ನಡೆಯುತ್ತಿದ್ದವು. ಅಕ್ಷರ ಬಲ್ಲವರು ಜಾತಿಯನ್ನು ನೋಡದೆ ಎಲ್ಲ ಬಡವರಿಗೆ ಅಕ್ಷರವಂಚಿತರಿಗೆ ಕಲಿಸಬೇಕು. ಈ ಸಮಾಜದ ಯಾರೂ ಅಕ್ಷರ ಗೊತ್ತಿಲ್ಲದೆ ಶೊಷಣೆಗೆ ಒಳಗಾಗಬಾರದು ಎನ್ನುವುದು ಅವರ ಮುಖ್ಯ ಧ್ಯೇಯವಾಗಿತ್ತು. ಕಡೆಯಲ್ಲಿ ಸಮಾಜವಾದಿ ಗುಂಪಿನ ದೊಡ್ಡವರೆಲ್ಲರೂ ಕೂಡಿ ನಡೆಸುತ್ತಿದ್ದ ಪತ್ರಿಕೆಯಲ್ಲಿ ಸಮಾಜದಲ್ಲಿ ಆಗುತ್ತಿದ್ದ ಅನ್ಯಾಯ, ಅದಕ್ಕೆ ಪ್ರತಿಭಟನೆ ಮತ್ತು ಸಿಕ್ಕ ಪರಿಹಾರದ ಬಗ್ಗೆ ಇದ್ದುದ್ದನ್ನು ತಿಳಿಸಿ ಹೇಳಲಾಗುತ್ತಿತ್ತು. ಅದನ್ನು ಊರ ಜನರಿಗೆ ಓದಿ ಹೇಳಬೇಕಾಗುತ್ತಿತ್ತು. ಮೊದಮೊದಲು ಇದೇನಪ್ಪಾ ಎಂದೆನ್ನಿಸಿದರೂ ಬರಬರುತ್ತಾ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳೆಡೆಗೆ ಮೆಲ್ಲಮೆಲ್ಲಗೆ ಆಕರ್ಷಿತಳಾದೆ. ಮನೆಯಿಲ್ಲದವರಿಗೆ ಮನೆ, ಜಮೀನಿಲ್ಲದವರಿಗೆ ಜಮೀನು! ಎಂಥಾ ಸುಂದರವಾದ ಕನಸನ್ನು ಈ ಜನ ಕಾಣ್ತಾ ಇದ್ದಾರೆ ಅನ್ನಿಸತೊಡಗಿತು. ʻಇಂಥಾ ಸಮಾಜವು ಒಮ್ಮೆ ನಿರ್ಮಾಣವಾದರೆ…! ಅರೆ ಆಗ ಜಮೀನುದಾರನ ಕಾಲನ್ನು ಯಾರೂ ಹಿಡಿಯುವಂತಿಲ್ಲ, ಬಡ್ಡಿ ವಸೂಲಿಗೆ ಯಾವನೂ ಮನೆಯ ಮುಂದೆ ಬರುವಂತಿಲ್ಲ. ರಕ್ಕಸರ ಹಾಗೆ ಮೈಮೇಲೆ ಬಿದ್ದು ಹೆಣ್ಣುಮಕ್ಕಳ ಮಾನ ಮುಕ್ಕುವುದಿಲ್ಲ. ಎಲ್ಲರೂ ಅವರವರ ಮನೆಯಲ್ಲಿ ಉಂಡು ಉಟ್ಟು ಸುಖವಾಗಿರಬಹುದುʼ. ಆ ಕಲ್ಪನೆಯ ಸುಖವೇ ಕಣ್ಣಂಚಲ್ಲಿ ಒಂದು ಹನಿ ನೀರು ಮೂಡಿಸಿತು.
ಅಮ್ಮ ಅಜ್ಜಿಗೆ ಯಾವುದೋ ನಂಬಿಕೆ ಬಂದುಬಿಟ್ಟಿತ್ತು. ಆದರೆ ಹರೀಶ, ʻಇದೆಲ್ಲಿ ಆಗುವ ಮಾತಾ? ಕನಸು ಕಾಣಬೇಕು ನಮ್ಮಂಥವರು. ಅದೃಷ್ಟದಾಟ ನಮ್ಮನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಆದರೂ ನಿನಗೆ ಒಂದು ಮಾತನ್ನು ಹೇಳುತ್ತೇನೆ, ನಾಳೆ ನೀನು ಈ ಜನರ ಜೊತೆ ಹೋದರೆ ನಿನ್ನ ಮದುವೆ ಆಗುವುದಾದರೂ ಹೇಗೆ?ʼ ಎಂದಿದ್ದ. ಈಚೆಗೆ ಗಿರೀಶ ಹುಂಜದ ಕಾಲಿಗೆ ದುಡ್ಡನ್ನ ಕಟ್ಟಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಗೊತ್ತಾಗಿತ್ತು. ಆದರೆ ಅವನೂ ಏನೂ ಮಾಡುವಂತಿರಲಿಲ್ಲ. ಹರೀಶ ಬೆಳಗ್ಗೆ ಎದ್ದು ಹೊರಟರೆ ಬರುತ್ತಿದ್ದುದು ಯಾವಾಗಲೋ. ದುಡಿಮೆ ಎಂದರೆ ಅವನದ್ದೇ. ಆಶ್ಚರ್ಯ ಎಂದರೆ ನಮ್ಮ ಶಕ್ತಿಯ ಮೇಲೆ ನಂಬಿಕೆ ಇಟ್ಟ ನಾವು ಮೂರೂ ಜನ ಹೆಣ್ಣುಮಕ್ಕಳು ಮಾತ್ರ ಗಟ್ಟಿಯಾಗಿ ನಿಲ್ಲುವ ಛಲಕ್ಕೆ ಬಿದ್ದಿದ್ದೆವು.
ಈ ಮಧ್ಯೆ ಒಂದರ ಹಿಂದೆ ಒಂದರಂತೆ ಕಾರ್ಯಕ್ರಮಗಳು. ನಾನೂ ಸತೀಶ ಜೊತೆಯಾಗಿ ಪಯಣಿಸುತ್ತಿದ್ದೆವು. ಕೆದರಿದ ಕೂದಲು ಸುಕ್ಕಾದ ಜುಬ್ಬಾ ಹೆಗಲಿಗೊಂದು ಚೀಲ. ತೆಳ್ಳನೆಯ ದೇಹದಲ್ಲಿ ವಯಸ್ಸಿಗೂ ಮೀರಿದ ಗಾಂಭೀರ್ಯತೆ ಎಲ್ಲಕ್ಕಿಂತ ಮಿಗಿಲಾಗಿ ಕಣ್ಣುಗಳಲ್ಲಿನ ಕಾಂತಿ ನನ್ನ ಸೆಳೆಯತೊಡಗಿತು. ವಯಸ್ಸೂ ಕಾರಣ ಇರಬಹುದು. ಅಥವಾ ನನ್ನ ಕಡೆಗೆ ಅವರು ತೋರುತ್ತಿದ್ದ ಅಕ್ಕರೆಯೂ ಇರಬಹುದು. ಮನೆಯ ದಾರುಣತೆಯ ನಡುವೆ ನಾವು ಬೇರೆಯವರಿಗಾಗಿ ಕೂಡಾ ಯೋಚಿಸಬೇಕು ಹೋರಾಡಬೇಕು ಎನ್ನುವ ಯೋಚನೆಯೇ ನನ್ನಲ್ಲಿ ರೋಮಾಂಚನವನ್ನು ಹುಟ್ಟುಹಾಕುತ್ತಿತ್ತು. ನಾನೇನೋ ಸಾಧಿಸಬೇಕಿದೆ ಅದಕ್ಕೆ ರಮೇಶನನ್ನು ವಿಧಿ ನನಗೆ ಪರಿಚಯಿಸಿರಬೇಕು ಎಂದು ಬಲವಾಗಿ ನಂಬಿದೆ.
ಸರಕಾರಕ್ಕೆ ಅರ್ಜಿ ಸಲ್ಲಿಸಿ ಮಂಜೂರಾಗಿದ್ದ ನಮ್ಮ ಜಾಗಕ್ಕೆ ತಾಂತ್ರಿಕವಾಗಿ ತೊಂದರೆಯಿತ್ತು. ಜಮೀನುದಾರ ನಮ್ಮ ಚಟುವಟಿಕೆಯಿಂದ ಕೆರಳಿದ್ದ. ಗೋಮಾಳವಾಗಿದ್ದ ಆ ಜಾಗದ ದಾಖಲೆಗಳನ್ನೇ ಬದಲಿಸಿ ಸ್ವಾಮಣಪ್ಪ ತನ್ನದೆಂದು ಕೋರ್ಟಿಗೆ ಹೋಗಿದ್ದರಿಂದ ಮತ್ತೆ ಜಾಗ ನಮಗೆ ಇಲ್ಲ ಎನ್ನುವಂತಾಗಿತ್ತು. ಈಗ ಬೇರೆ ದಾರಿಯೇ ಇಲ್ಲ. ಡಿಸಿ ಬೇರೆ ಜಾಗ ನೋಡಿ ಮಂಜೂರು ಮಾಡುತ್ತೇನೆ ಎಂದಿದ್ದರಿಂದ ಅವತ್ತು ಸಂಜೆ ನಡೆದ ಮೀಟಿಂಗ್‌ನಲ್ಲಿ ಕಾಡನ್ನು ಸವರಿ ಮನೆಗಾಗಿ ಜಾಗವನ್ನು ಗುರುತು ಮಾಡಬೇಕಿರುವ ಕುರಿತು ಮಾತುಕಥೆ ಆಯಿತು. ʻಕಾಡುಗಳು ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಸುಪರ್ದಿಯಲ್ಲಿರುವುದು ತಾನೆ. ನಮ್ಮನ್ನು ಬಿಡುವರೇ?ʼ ಎಂದಾಗ, ʻಮುಂಚೇನೆ ಎಲ್ಲಾ ಮಾತಾಗಿದೆ. ಡಿಸಿ ಹೇಳಿದ್ದಾರೆ. ಈಗ ಜಾಗ ಗುರುತು ಮಾಡಿ ರಾತ್ರೋರಾತ್ರಿ ಅಲ್ಲಿನ ಕುರುಚುಲು ಗಿಡವನ್ನು ಕಡೆದು ನಾಳೆ ಅವರು ನೋಡಲು ಬರುವುದರ ಒಳಗೆ ಕೆಲಸ ಮುಗಿಸಬೇಕು. ಮನೆಯಿಲ್ಲ ಅಂತ ಯಾರೂ ಇರಬಾರದು. ಹಸಿವಿಂದ ಯಾರೂ ಸಾಯಬಾರದು. ಜಾತಿಯ ಕಾರಣಕ್ಕೆ ಯಾರೂ ಅವಕಾಶ ವಂಚಿತರಾಗಬಾರದು. ನಮ್ಮ ಸಮಾಜದ ಬದಲಾವಣೆಗೆ ನಾವೆಲ್ಲರೂ ಕೈಜೋಡಿಸಲೇಬೇಕುʼ ಎಂದು ಭಾವುಕನಾಗಿ ಸತೀಶ ಮಾತಾಡಿದ್ದ. ಆ ಕ್ಷಣಕ್ಕೆ ಅನ್ನಿಸಿತ್ತು, ಈ ಮನುಷ್ಯ ನಿಜಕ್ಕೂ ನಮ್ಮ ಸಮಾಜವನ್ನು ಬದಲಿಸುವ ದೊಡ್ಡಶಕ್ತಿ ಹೊಂದಿದ್ದಾನೆ, ಮತ್ತು ಇಡೀ ದೇಶವೇ ಬದಲಾವಣೆಯ ಹೊಸಗಾಳಿಯಲ್ಲಿ ತೇಲಲು ಸಿದ್ಧವಾಗಿದೆ ಎಂದು.
ಅಂದು ರಾತ್ರಿ ಕಾಡನ್ನು ಕಡೆಯಲು ಕೈಲಿ ಕುಡುಗೋಲುಗಳನ್ನು ಹಿಡಿದು ಹೊರಟಾಗ ಎಂಥಾ ವೀರತ್ವದ ಭಾವ. ಊರ ಜನರನ್ನೆಲ್ಲಾ ಒಟ್ಟುಗೂಡಿಸಿದ್ದು ಯಾವ ಮಾಯಕಶಕ್ತಿ! ರಾತ್ರಿಯಿಡೀ ಕುರುಚುಲು ಕಾಡನ್ನು ಕಡಿದೆವು. ಅದೇ ಪುರಲೆಯಿಂದ ಕಾಫಿಯನ್ನೂ ಕಾಸಿಕೊಂಡೆವು. ರಾತ್ರಿಯ ತಣ್ಣನೆಯ ಗಾಳಿಯನ್ನೂ ಮೀರಿ ಹನಿಯೊಡೆದ ನಮ್ಮ ಹಣೆಯ ಬೆವರು ನೆಲಕ್ಕೆ ಬೀಳುವಾಗ ಸೂರ್ಯ ಖುಷಿಯಿಂದ ಎದ್ದು ಬಂದಿದ್ದ. ಧನ್ಯತೆಯ ಭಾವ ನಮ್ಮ ಮೈ ಮನಗಳಲ್ಲಿ ತುಂಬಿದ್ದವು.
ಅಮ್ಮ ಭಯಗೊಂಡಿದ್ದಳು ಮದುವೆಯಾಗುವ ಹುಡುಗಿ ಹೀಗೆ ರಾತ್ರಿಯಿಡೀ ಸುತ್ತಿದರೆ ಹೇಗೆಂದು. ʻನಾನು ಕೊನೆಯವರೆಗೂ ನಿನ್ನ ಜೊತೆಯೇ ಇರುತ್ತೇನೆ. ಮದುವೆಯೂ ಬೇಡ ಏನೂ ಬೇಡʼ ಎಂದಿದ್ದೆ. ಅಜ್ಜಿ ನನ್ನ ಕೆನ್ನೆ ಸವರಿ ʻಹುಚ್ಚು ಹುಡುಗಿʼ ಎಂದಿದ್ದಳು. ಅಮ್ಮ, ʻನೀವೇ ಇವಳನ್ನ ಹಾಳು ಮಾಡ್ತಾ ಇದೀರಾ?ʼ ಎಂದಿದ್ದಳು. ಅಪ್ಪ ಮನೆಬಿಟ್ಟು ಹೋದ ಮೇಲೆ ಅವರಿಬ್ಬರೂ ಚೆನ್ನಾಗಿ ಮಾತಾಡುತ್ತಿದ್ದರು. ಅಮ್ಮ ಧೈರ್ಯವಾಗಿ ತನ್ನ ಅಭಿಪ್ರಾಯವನ್ನು ಹೇಳಬಲ್ಲವಳಾಗಿದ್ದಳು. ಅಜ್ಜಿ ಅದನ್ನು ಕೇಳುತ್ತಿದ್ದಳು.
ಈ ನಡುವೆ ಸತೀಶ ನನಗೆ ತೀರಾ ಹತ್ತಿರವಾಗ ತೊಡಗಿದ. ಹತ್ತಿರವಾದಷ್ಟೂ ಹೆಚ್ಚಾಗುತ್ತಿದ್ದ ಗೌರವ, ಮತ್ತಷ್ಟು ಹತ್ತಿರವಾಗಬೇಕೆನ್ನುವ ಅಭೀಪ್ಸೆಯನ್ನು ಹುಟ್ಟುಹಾಕುತ್ತಿತ್ತು. ಒಮ್ಮೆ ನಾನು ಅವನನ್ನು ಸಾರ್ ಎಂದು ಕರೆದಾಗ, ʻಇಲ್ಲಿ ಯಾರು ಯಾರಿಗೂ ಗೌರವಕೊಡಬೇಕಿಲ್ಲ ನಮಗೆ ಬೇಕಿರುವುದು ಪ್ರೀತಿ ಮಾತ್ರ. ಇನ್ನುಮುಂದೆ ನನ್ನ ಸತೀಶ ಎಂದು ಕರೆದರೆ ಅಷ್ಟೇ ಸಾಕುʼ ಎಂದಿದ್ದ. ಮೊದಮೊದಲು ಸಂಕೋಚ ಅನ್ನಿಸಿದರೂ ನಂತರ ಅವನನ್ನು ಹಾಗೇ ಕರೆಯಲು ಶುರು ಮಾಡಿದೆ. ನಮ್ಮಿಬ್ಬರ ನಡುವೆ ಇನ್ನೂ ಮೂರ್ತವಾಗದ ಯಾವುದೋ ಆತ್ಮೀಯತೆಯ ಸುಳಿವು ಸಿಕ್ಕಿದ್ದು ಆಗಲೇ.
ಮನಸನ್ನು ತಿಳಿಮಾಡಿ ನಮ್ಮನ್ನು ಹಗುರಾಗಿಸಬಲ್ಲ ಯಾವ ಸಂಬಂಧಕ್ಕೂ ತುಂಬಾ ದೊಡ್ಡಶಕ್ತಿ ಇದೆ. ಅಂಥಾ ಸಂಬಂಧಗಳಿಗೆ ಆತುಕೊಳ್ಳುತ್ತಾ ಹೋಗುತ್ತೇವೆ. ನನ್ನ ಸತೀಶನ ವಿಷಯದಲ್ಲಿ ಆಗಿದ್ದು ಹೀಗೆ. ತುಂಬಾ ಬೇಗ ನಾವಿಬ್ಬರೂ ಹತ್ತಿರ ಆದೆವು. ʻಸಂಪ್ರದಾಯದ ಹಾಡು ಹಾಡುತ್ತಿದ್ದವಳನ್ನು ಕರೆತಂದು ಕ್ರಾಂತಿ ಮಾಡಿಸಿದ ಕೀರ್ತಿಮಾತ್ರ ನನ್ನದೇʼ ಎಂದು ಎಷ್ಟೋ ಬಾರಿ ತಮಾಷೆಯಾಗಿ ರೇಗಿಸುತ್ತಿದ್ದ ಸತೀಶ. ಈ ವಿಷಯವನ್ನು ಸಹಾರ ಹತ್ತಿರ ಕೂಡಾ ಹೇಳಿದ್ದ. ಅವರು ನನ್ನ ನೋಡಿ, ʻಹೌದಾ ಚೈತನ್ಯಾ?ʼ ಎಂದಿದ್ದರು. ಸತೀಶನ ಸಂಪರ್ಕದಿಂದ ನನಗೇ ನನ್ನ ಹೆಸರು ಮರೆತು ಹೋಗಿತ್ತು. ಅಜ್ಜಿ ಪ್ರೀತಿಯಿಂದ ಇಟ್ಟ ಹೆಸರು, ಬಾಲ್ಯದಲ್ಲಿ ಮನೆ ತುಂಬಾ ನಲಿದಾಡಿದ ಹೆಸರು, ತಾತ ಪ್ರೀತಿಯಿಂದ ಎದೆಗೊರಗಿಸಿಕೊಂಡು ಉಸುರುತ್ತಿದ್ದ ಹೆಸರು. ಅದು ಹೇಳಹೆಸರಿಲ್ಲದೆ ಹೊರಟು ಹೋಗಿತ್ತು.
ʻರಾಜ್ಯಲಕ್ಷ್ಮೀ, ಅದು ಇನ್ನೊಬ್ಬರನ್ನು ಶೋಷಿಸಲು ಇರುವ ಹೆಸರು. ಇನ್ನು ಲಕ್ಷ್ಮೀಯೋ ಚಂಚಲ. ಅದಕ್ಕೆ ನೀನು ಇನ್ನುಮುಂದೆ ರಾಜ್ಯ ಅಲ್ಲ ಚೈತನ್ಯʼ ಎಂದಿದ್ದ ಸತೀಶ ಒಂದು ದಿನ. ನಾನು ಒಪ್ಪಿದ್ದೆ. ಕಾರಣ ಪ್ರೀತಿಯಲ್ಲಿ ಬಿದ್ದಿದ್ದೆ. ಸತೀಶನ ಉದ್ದೇಶ ನನಗೆ ಆ ಕ್ಷಣಕ್ಕೆ ಅರ್ಥ ಆಗಿರಲಿಲ್ಲ. ʻರಾಜ್ಯಕ್ಕೆ ಅಧಿಕಾರದ ದಾಹ, ಜನರ ಬದುಕಲ್ಲ. ಮನುಷ್ಯರ ಎಲುಬುಗಳ ಮೇಲೆ ಕಟ್ಟುವ ಅಧಿಕಾರ ಅಂತಃಕರಣದ ಹಾದಿಯಿಂದ ದೂರʼ ಎಂದಾಗ, ʻನನ್ನ ಹೆಸರು ಅಷ್ಟು ಕೆಟ್ಟದಾಗಿತ್ತಾ?ʼ ಎನ್ನುವ ಪ್ರಶ್ನೆ ಎದ್ದು ಕೂತಿತ್ತು. ʻಅದು ಹಾಗಲ್ಲ, ಹೆಸರು ಬರೀ ಹೆಸರಷ್ಟೇ ಆದರೆ ಸಮಸ್ಯೆ ಇಲ್ಲ, ಅದು ಇನ್ನೇನನ್ನೋ ಸೂಚಿಸಬಾರದುʼ ಎಂದಿದ್ದ. ಇರಬಹುದು ನನ್ನೊಳಗಿನ ಚೈತನ್ಯಕ್ಕೆ ಅವನು ಬಾರದೆ ಸ್ಥಿರತೆ ಸಿಗುವುದು ಸಾಧ್ಯವೇ ಇರಲಿಲ್ಲ – ಅವನಿಟ್ಟ ಹೆಸರಿಗೂ ಕೂಡಾ.
| ಇನ್ನು ಮುಂದಿನ ವಾರಕ್ಕೆ |
0 ಪ್ರತಿಕ್ರಿಯೆಗಳು