ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ತೀವ್ರವಾಗುವ ಕ್ಷಣಗಳು ನಮ್ಮ ಒಳಗೇ ಇವೆ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

26

ಹೌದು, ಆ ಹುಡುಗಿ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದ್ದಾಳೆ. ಎತ್ತರದ ನಿಲುವು, ಅಗಲವಾದ ದೇಹ, ದುಂಡಗಿಲ್ಲದಿದ್ದರೂ ತೆಳು ಎಂದು ಹೇಳಲಾಗದ ದೇಹಚರ್ಯೆ. ಹೆಸರು ವಲ್ಲಿ, ಆಸ್ಪತ್ರೆಯೊಂದರಲ್ಲಿ ನರ್ಸ್‌. ನೋಡಿ ಮಾಡಿದ ಸಂಬಂಧವೇ. ಅವನಿಗೂ ವಲ್ಲಿ ಇಷ್ಟವಾದ್ದರಿಂದ ಪದೇಪದೆ ಮನೆಗೆ ಹೋಗಿದ್ದಾನೆ. ಓದಿದ್ದಾನೆ ಇಂದಲ್ಲ ನಾಳೆ ಒಳ್ಳೆಯ ಕೆಲಸ ಸಿಗುತ್ತೆ ಎನ್ನುವ ಭರವಸೆಯಲ್ಲಿ ಮನೆಯವರೂ ಅವನನ್ನು ಒಲಿಸಿಕೊಂಡಿದ್ದಾರೆ. ಇದೆಲ್ಲಾ ಗೊತ್ತಾಗಿ ಸರೀಕರೆಲ್ಲಾ ಅವನನ್ನು ಇಡ್ಲಿ ಎಂದೇ ಕಿಚಾಯಿಸುವಾಗ ʻಯಾಕ್ರೋ…?ʼ ಎಂದು ಖುಷಿಯಿಂದಲೇ ಇವನೂ ರೇಗಿದ್ದಾನೆ.

ಈ ಘಟನೆಯ ನಂತರ ಮದುವೆಗೂ ಮುನ್ನ ತಮಾಷಿಯಾಗಿ ಕರೆಯುತ್ತಿದ್ದ ಇಡ್ಲಿ ಎನ್ನುವ ಅಭಿದಾನ ಅವನ ಹೆಸರಿನ ಜೊತೆ ಊರವರ ಬಾಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತ್ತು. ಸಹಾ ಕೂಡಾ ಒಮ್ಮೊಮ್ಮೆ ಇಡ್ಲಿ ಎಂದು ರೇಗಿಸಿದರೆ, ʻಸುಮ್ಮನಿರಿ ಸರ್ ನೀವೂನಾ?ʼ ಎನ್ನುತ್ತಿದ್ದ. ಮದುವೆಯೂ ಆಯಿತು, ಕೆಲಸವೂ ಸಿಕ್ಕಿತು. ಕೈತುಂಬಾ ಸಂಬಳ ಬೇರೆ. ಆದರೆ ಹತ್ತಿದ ಹೋರಾಟದ ಗೀಳು ಕೊನೆ ಮುಟ್ಟದೆ ಹೋಗಿ, ಕೈಲಿದ್ದ ಎಲ್ಲಾ ಕಾಸನ್ನೂ ಪರೋಪಕಾರಕ್ಕಾಗಿ ವೆಚ್ಚ ಮಾಡತೊಡಗಿದಾಗ ಸಹಾ, ʻಹೆಂಡತಿ ಮಕ್ಕಳಿಗೆ ಏನಾದರೂ ಉಳಿಸಿದ್ದೀಯೇನಯ್ಯಾ…?ʼ ಎನ್ನುತ್ತಿದ್ದರು. ಅದಕ್ಕವನು ʻಏನೂ ಇಲ್ದಾಗ ಹಸ್ಕೊಂಡೂ ಜೀವ್ನ ನಡೆಸಿಲ್ಲವಾ?ʼ ಎನ್ನುತ್ತಿದ್ದ. ದಿಕ್ಕು ತೋಚದ ಹುಡುಗಿ ಕೈಲಿದ್ದ ಪುಟ್ಟ ಕೂಸನ್ನು ಮನೆಯಲ್ಲಿ ಅತ್ತೆಗೆ ಬಿಟ್ಟುಕೊಟ್ಟು ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿದ್ದಳು.

ಮದುವೆಯಾದ ಹೊಸತರಲ್ಲಿ ತನ್ನ ಬಗ್ಗೆ ಪದ್ಯ ಬರೆದರೆ ಬೀಗುತ್ತಿದ್ದವಳಿಗೆ ತನ್ನ ಗಂಡ ಬೇರೆಯೇ ಎಂದು ಊಹೆ ಕೂಡಾ ಮಾಡಿರಲಿಲ್ಲ. ಯಾವಾಗಲಾದರೂ ಒಮ್ಮೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಅವನು ಜಗತ್ತೆಲ್ಲಾ ಹೊಗಳುವ ಒಳ್ಳೆಯ ಕವಿ ಎನ್ನುವ ಹೆಮ್ಮೆ ಬಹುಕಾಲ ಅವಳಲ್ಲಿ ಉಳಿಯಲಿಲ್ಲ. ಹೋರಾಟ ಅಂತೆಲ್ಲಾ ಬರೆಯುತ್ತಿದ್ದವನ ಮನಸ್ಸು ಅರ್ಥ ಆಗತೊಡಗಿದ್ದು ಮಗುವಿನ ಮುಖದಲ್ಲಿ ತನ್ನ ಚಹರೆಯನ್ನು ಹುಡುಕಲು ತೊಡಗಿದಾಗಲೇ. ಅಷ್ಟು ಹೊತ್ತಿಗೆ ಅವನು ಸಹಾಗೆ ತುಂಬಾ ಹತ್ತಿರ ಆಗಿದ್ದ. ಬರೆಯುತ್ತಿದ್ದ ಕವಿತೆಗಳು ಸಹಾಗೆ ತುಂಬಾ ಇಷ್ಟವೇ. ನನ್ನ ಹತ್ತಿರವೇ ಅದಕ್ಕೆ ಟ್ಯೂನ್ ಮಾಡಿ ಹಾಡಿಸಿದ್ದರು. ಮಹದೇವ ಕೂಡಾ ಇದು ನನ್ನ ಕವಿತೆ ಅನ್ನುವುದನ್ನು ಮರೆತು ಹೋಗುವ ಹಾಗೆ ಹಾಡಿದಿರಿ ಎಂದಿದ್ದ. ಸಹಾ ಸ್ಟೇಜ್ ಮೇಲೆ ಭಾವುಕರಾಗಿ ಅವನನ್ನು ಹೊಗಳಿದ್ದರು. ನಾವು ನಮ್ಮ ಹೋರಾಟವನ್ನು ಮುಂದೆ ಕರೆದೊಯ್ಯಲಿಕ್ಕೆ ಇಂಥಾ ಹರಿಗೋಲುಗಳು ಬೇಕು. ಪದದಲ್ಲಿ ಪ್ರಾಣ ಇಟ್ಟು ಬರೆಯುವುದು ಎಂದರೆ ಇದೇ ಎಂದಿದ್ದರು. ಮುಂದಿನ ದಿನಗಳಲ್ಲಿ ಸಹಾ ನಂಬುವ ತುಂಬಾ ಪ್ರೀತಿಸುವ ವ್ಯಕ್ತಿಗಳಲ್ಲಿ ಒಬ್ಬನಾಗಿಬಿಟ್ಟಿದ್ದ.

ದಿನಕಳೆದಂತೆ ಗಂಡ – ಹೆಂಡಿರ ಮಧ್ಯೆ ಜಗಳ ನಡೆಯುತ್ತಲೇ ಇತ್ತು. ಸಹಾರ ಹತ್ತಿರ ಬಂದು ಹೇಳುವಾಗ ನೀನೇ ಸರಿ ಎನ್ನುವಂತೆ ಪ್ರಚೋದನಕಾರಿಯಾಗಿ ಮಾತಾಡಿಬಿಡುತ್ತಿದ್ದರು. ಅವರ ಸ್ವಭಾವವೇ ವಿಚಿತ್ರ. ಒಮ್ಮೊಮ್ಮೆ ಎಲ್ಲವೂ ಒಡೆದು ಹೋಗಬೇಕು – ಅದು ತಮ್ಮ ಬಗೆಗಿನ ಇಮೇಜಾದರೂ ಅಷ್ಟೇ. ʻಮತ್ತೆ ಶೂನ್ಯದಿಂದ ಹುಟ್ಟಿಕೊಳ್ಳುವುದೇ ಚಂದ ಅಲ್ಲವಾ ಚೈತನ್ಯ…?ʼ ಎನ್ನುತ್ತಿದ್ದರು.

ಒಂದು ದಿನ ಕಾರ್ಯಕ್ರಮ ಮುಗಿಸಿ ನಾನು ಊರಿನ ಕಡೆಗೆ ಹೊರಟಿದ್ದೆ. ಸಹಾ ನನ್ನೊಂದಿಗೆ ಮಾತಾಡುವ ಉತ್ಸಾಹವನ್ನು ತೋರುತ್ತಿದ್ದರು. ಅವರಿಗೆ ನನಗೆ ಹೇಳಲಿಕ್ಕೆ ಮಾತುಗಳಿದೆ ಎನ್ನುವುದು ಅರ್ಥವಾಗಿತ್ತು. ʻಸಾರ್ ಹೇಳಿʼ ಎಂದೆ. ʻಹೇಗೆ ಜೀವನ ನಡೆಸುತ್ತಿದ್ದೀಯಾ ಚೈತನ್ಯ?ʼ ಎಂದರು. ʻಬದುಕಲಿಕ್ಕೆ ಹಾಡಿದೆ, ನನ್ನ ಪ್ರೀತಿಗೆ ಆಶಾ ಇದ್ದಾಳೆ, ನನಗ್ಯಾವ ಕೊರತೆ? ನೀವಿದ್ದೀರಲ್ಲಾ!ʼ ಎಂದೆ. ʻಹಾ ನಾನಿದ್ದೀನಿ ಎಲ್ಲದಕ್ಕೂʼ ಎಂದರು. ನಾನು ಅರ್ಥವಾಗದವಳಂತೆ ಅವರ ಕಡೆಗೆ ನೋಡಿದೆ. ಸಹಾ ಕಣ್ಣುಗಳಲ್ಲಿ ಯಾವುದೋ ತುಂಟತನದ ಮಿಂಚು ಹರಿದಾಡುತ್ತಿತ್ತು.

ನಲವತ್ರೈದರ ಪ್ರಾಯದ ಗಂಡಸಿಗೆ ಇಷ್ಟು ದೊಡ್ಡ ಹೆಸರು ಸರ್ಕಾರದ ಗೌರವ, ರಾಜಕೀಯವಾದ ಬಹುದೊಡ್ದ ನಂಟು, ಸಂಘಟನೆಯನ್ನು ಮುನ್ನಡೆಸುವ ಜವಾಬ್ದಾರಿ ಎಲ್ಲಾ ಇರುವಾಗ ಬೇರೆ ಏನನ್ನು ಬಯಸಲು ಸಾಧ್ಯ? ನನ್ನ ಕುತೂಹಲಕ್ಕೆ ಮತ್ತೊಂದೇ ತಿರುವು ಸಿಕ್ಕಿತ್ತು. ಸಹಾ ಮಾತಾಡುತ್ತಿದ್ದರು, ʻಅವತ್ತೊಂದು ದಿನ ನೀನು ನನ್ನ ಎದೆಗೊರಗಿ ಏನು ಹೇಳಿದ್ದೆ ಗೊತ್ತಾ?ʼ ಎಂದರು. ಯಾವತ್ತು ನಾನವರ ಎದೆಗೆ ಒರಗಿದ್ದೆ? ಯೋಚಿಸಿದೆ. ಹೌದು ತನ್ನನು ಪೊಲೀಸರ ಮುಷ್ಟಿಯಿಂದ ಬಿಡಿಸಿ ಮನೆಗೆ ಕರೆತಂದಿದ್ದರಲ್ಲ ಅವತ್ತು ಭಾವುಕಳಾಗಿದ್ದೆ. ನನ್ನೊಳಗೆ ಅವರೆಡೆಗೆ ಕೃತಜ್ಞತೆಯ ಮಹಾಪೂರವೇ ಹರಿದಿತ್ತು. ಆದರೆ ಅದಕ್ಕೂ ಸಹಾ ಮಾತಾಡುತ್ತಿರುವ ಮಾತಿಗೂ ಏನು ಸಂಬಂಧ ಎನ್ನಿಸಿತು. ʻನೆನಪಾಯಿತೇ? ನಾನು ನಿಮ್ಮ ಮಗಳ ಹಾಗೆ ಎಂದಿದ್ದೇ ಅಲ್ವಾ?ʼ ಎಂದರು.

ನಾನು ಅವರ ಕಡೆಗೆ ನೋಡುತ್ತಾ ಅದರಲ್ಲಿ ತಪ್ಪು ಏನಿದೆ ಎನ್ನುವ ಹಾಗೆ, ʻಈಗಲೂ ಹಾಗೆ ಅಂದುಕೊಳ್ಳುತ್ತೇನೆ ಸಾರ್ʼ ಎಂದೆ. ಅವರ ಮುಖದಲ್ಲಿ ಆಗುವ ಬದಲಾವಣೆಗಳನ್ನೂ ಅವರ ಮಾತಿನ ಹಿಂದಿನ ಕಾರಣಗಳನ್ನೂ ಹುಡುಕತೊಡಗಿದೆ. ಸಹಾ ಗಹನವಾದ ಏನನ್ನೋ ಹೇಳುವಂತೆ ʻನಾನು ಏನು ಹೇಳಿದರೂ ತಪ್ಪು ತಿಳಿಯಬಾರದುʼ ಎಂದು ಒತ್ತಿ ಒತ್ತಿ ಹೇಳಿದರು. ಅರೆ ಇದೆಲ್ಲಾ ಯಾವುದಕ್ಕೆ ಪೀಠಿಕೆ? ನನ್ನ ತಾಳ್ಮೆ ಮೀರಿ ಹೋಗುತ್ತಿತ್ತು. ʻಪ್ಲೀಸ್ ಸಾರ್ ಹೇಳಿʼ ಎಂದೆ. ʻಹೇಳ್ತೇನೆ ಹೇಳೇ ಬಿಡ್ತೇನೆ. ಹಾ ಅವತ್ತು ನನಗೆ ಚೆನ್ನಾಗಿ ನೆನಪಿದೆ. ನಿನ್ನ ಮಾತುಗಳನ್ನೇ ಮೆಲುಕು ಹಾಕುತ್ತಾ ಮನೆಗೆ ಹೋದೆನಾ! ನನ್ನ ಚಿಕ್ಕಮಗಳು ಅವಗೆ ಐದು ವರ್ಷಗಳಿರಬೇಕು. ಸುಸೂ ಮಾಡಿಕೊಂಡು ಬಂದು, ʻಅಪ್ಪಾ ಚಡ್ಡಿಯನ್ನು ಚೇಂಜ್ ಮಾಡುʼ ಎಂದಿದ್ದಳು. ಥಟ್ಟೆಂದು ನೀನು ನೆನಪಾದೆ…ʼ ಎಂದು ನಕ್ಕರು. ಮೊದಲು ಅರ್ಥ ಆಗಲಿಲ್ಲ. ನಂತರ ʻಛೀʼ ಎಂದು ಮುಖ ಸಿಂಡರಿಸಿದೆ. ʻಬೇಸರ ಆಯ್ತಾ?ʼ ಎಂದು ಕೇಳಿದರು. ʻಮಗುವಿಗೂ ನನಗೂ ವ್ಯತ್ಯಾಸವಿಲ್ಲವಾ? ನನ್ನೊಂದಿಗೆ ಮಾತಾಡುವ ಮಾತಾ ಇದು?ʼ ಎಂದು ಸಿಡುಕಿದೆ.

ಸಹಾ ಏನೂ ಮಾತಾಡಲಿಲ್ಲ. ಮುಖದಲ್ಲಿ ಮಾತ್ರ ನಿಗೂಢವಾದ ನಗುವಿತ್ತು. ಅಂಥಾ ಗಂಭೀರವಾದ ಮಾತುಗಳನ್ನಾಡುವ ಸಹಾ ಹೀಗೂ ಮಾತಾಡಬಹುದು ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಅಳು ಕೂಡಾ ಬಂದಿತ್ತು. ಇವರು ನನ್ನ ದೇಹವನ್ನು ನೋಡುತ್ತಿದ್ದಾರೆ ಅನ್ನಿಸಿತು. ಬರೀ ದೇಹವನ್ನಾಗಿ ನೋಡಿದಾಗ ಮುಜುಗರ ಶುರುವಾಗುತ್ತದಲ್ಲಾ ಆಗ ಆಗುವ ಹಿಂಸೆ ಯಾರಿಗೂ ಬೇಡ. ಅವತ್ತು ಯಾಕೆ ಹಾಗೆ ಮಾತಾಡಿದರು ಅದನ್ನು ಹೇಳುವ ಉದ್ದೇಶವಾದರೂ ಏನಿತ್ತು? ಎಂದು ತುಂಬಾ ಸಲ ಯೋಚಿಸಿದ್ದೇನೆ. ಆಗ ಹೊಳೆದಿರಲಿಲ್ಲ. ಸಹಾ ತುಂಬಾ ಸಲ ಹೀಗೆ, ಯಾರಾದರೂ ಒಂದು ಇಮೇಜನ್ನು ಕಟ್ಟಿಕೊಂಡರೆ ಅದನ್ನು ಒಡೆಯಲೇ ನೋಡುತ್ತಾರೆ. ʻನಿನ್ನ ವಿಷಯದಲ್ಲೂ ಹಾಗೇ ಮಾಡಿದೆʼ ಎಂದಿದ್ದರು. ಯಾರು ಏನು ಅಂದುಕೊಳ್ಳುತ್ತಾರೋ ಅದಕ್ಕಿಂತ ಬೇರೆಯದು ಇರುತ್ತೆ ಎಂದು ಹೇಳುವ ಉದ್ದೇಶ ಅವರದ್ದು. ಅವರಿಗೆ ಬಯಾಲಜಿಕಲ್ ಅಲ್ಲದ ಸಂಬಂಧಗಳಲ್ಲಿ ನಂಬಿಕೆ ಇರಲಿಲ್ಲ. ನಾನು ಅವರನ್ನು ಹಾಗೆ ನೋಡುವುದು ಹಾಗೆ, ಎಮೋಷನಲ್ ಆಗಿ ಯೋಚನೆ ಮಾಡುವುದು ಬೇಡ ಅನ್ನಿಸಿತ್ತೇನೋ.

ಸಹಾರ ವರ್ತನೆ ಬಹಳಷ್ಟು ಸಲ ಹಾಗೇ ಇರುತ್ತಿತ್ತು. ಯಾರಾದರೂ ಸಿಕ್ಕರೆ ಅವರ ಭವಿಷ್ಯ ಹೇಳುವವರಂತೆ, ʻಏನಯ್ಯಾ ನೀನು ಮುಂದೆ ಪ್ರೊಫೆಸರ್ ಆಗಿ ಪ್ರಮೋಷನ್ ಪಡೀತೀಯʼ ಎಂದು ಖುಷಿಯಿಂದ ಹೇಳಿಬಿಡುತ್ತಿದ್ದರು. ಅವರ ಮಾತನ್ನ ಕೇಳಿ, ʻಹೌದಾ! ಇನ್ನೊಮ್ಮೆ ಹೇಳಿʼ ಅಂತ ಅವರೇನಾದರೂ ಆಸಕ್ತಿ ತೋರಿದರೆ ಆಯಿತು. ʻನಿನ್ನ ಇವತ್ತಿನ ಡ್ರಸ್ ತುಂಬಾ ಚೆನ್ನಾಗಿದೆ, ಇದರಲ್ಲಿ ತುಂಬಾ ಚೆನ್ನಾಗಿ ಕಾಣ್ತಾದೀಯʼ ಎಂದು ಬಿಡುತ್ತಿದ್ದರು. ನಾನು ಎಷ್ಟೋ ಸಲ ಅವರನ್ನ ಕೇಳಿದ್ದೇನೆ, ʻಯಾಕೆ ನೀವು ಹೀಗೆ ಮಾತಾಡುತ್ತೀರಾ?ʼ ಎಂದು. ನಸುನಕ್ಕು ಸುಮ್ಮನಾಗಿಬಿಡುತ್ತಿದ್ದರು. ತನ್ನ ಬಗ್ಗೆ ಬೇರೆಯವರು, ಬೇರೆಯವರ ಬಗ್ಗೆ ತನಗಿರುವ ಯೋಚನೆಗಳೇನಿವೆ ಅವುಗಳನ್ನು ಬದಲಿಸುವುದುದರಲ್ಲೇ ಅವರಿಗೆ ಒಂದು ಆನಂದ ಇತ್ತು.   

ನನ್ನೊಳಗೆ ಸಹಾರ ಈ ನಡತೆಯಿಂದ ಸಣ್ಣದಾಗಿ ಹೆಡೆ ಎತ್ತಿದ್ದ ಅಸಹನೆ ದಿನಕಳೆದಂತೆ ಜಾಸ್ತಿ ಆಗಲಾರಂಭಿಸಿತು. ಸಹಾ, ʻಇನ್ನೊಬ್ಬರ ಸಂಸಾರದಲ್ಲಿ ನಾವು ಹೇಗೆ ಮಾತಾಡುವುದು?ʼ ಎಂದರು. ʻಹಾಗಿದ್ದರೆ ಕೇಳಿಸಿಕೊಳ್ಳಬೇಡಿ, ನನಗೆ ಸಲಹೆ ಕೊಡಲಿಕ್ಕೆ ಆಗಲ್ಲ ಎನ್ನಬೇಕುʼ ಎಂದೆ. ಸಹಾ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದು ನನ್ನ ಜೀವವನ್ನು ಹಿಂಡಲಾರಂಭಿಸಿತು. ಸಹಾ ಇಲ್ಯಾವ ಆಟ ಆಡುತ್ತಿದ್ದಾರೆ? ಮಹದೇವಯ್ಯ ತನ್ನ ಹೆಂಡತಿಯನ್ನು ನೋಡಲಿಕ್ಕೆ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ಹೋದಾಗ ಅವಳು ಡಾಕ್ಟರ್ ಹತ್ತಿರ ನಗುತ್ತಾ ಮಾತಾಡುತ್ತಿದ್ದಳಂತೆ. ʻನಗುತ್ತಾ ಮಾತಾಡುವಂಥದ್ದು ಏನಿತ್ತುʼ ಎಂದನಂತೆ. ʻಅರೆ ಕೆಲಸದ ಜಾಗ ಏನೂ ಮಾತಾಡಬಾರದಾ? ನಾನು ಮಾತಾಡುತ್ತಿದ್ದುದು ಕೆಲಸದ ಕಾರಣಕ್ಕೆ, ಪೇಶಂಟ್ ವಿಷಯದಲ್ಲಿ ಆದ ವಿನೋದವನ್ನೂ ಹೇಳಿಕೊಳ್ಳಬಾರದಾ?. ಇಂಥಾದ್ದೆಲ್ಲಾ ಎಲ್ಲ ಪ್ರೊಫೆಷನ್ನಲ್ಲೂ ಇದ್ದೇ ಇರುತ್ತೆʼ ಎಂದಳಂತೆ. ತಾನು ಮಾತ್ರ ಯಾವ ಹೆಂಗಸಿನ ಜೊತೆಗೂ ಮಾತಾಡುವುದೇ ಇಲ್ಲ ಎಂದು ಪ್ರತಿವಾದ ಮಾಡಿನಂತೆ, ಸಹಾ ಇದನ್ನೆಲ್ಲಾ ಕೇಳಿಸಿಕೊಂಡು ʻಛೇ ಹೀಗೆ ಆಗಬಾರದಿತ್ತುʼ ಎಂದಿದ್ದರು. ಅಂದದ್ದು ಯಾರ ಬಗ್ಗೆ ಎಂದು ಯೋಚಿಸಿದ್ದೆ.

`ತಪ್ಪು ಮಾಡ್ತಾ ಇದೀರʼ ಎಂದು ಸಾಕಷ್ಟು ಸಲ ಎಚ್ಚರಿಸಿದ್ದೆ. ಅದಕ್ಕೆ ಸಹಾ, ʻಅವನಿಗೆ ಅನುಕಂಪದ ಅವಶ್ಯಕತೆ ಇದೆ. ಅವನು ವಿಕ್ಷಿಪ್ತವಾಗಿದ್ದಾನೆ. ಅವನಂತೆ ಮಾತಾಡಿ ಅವನನ್ನು ಸರಿದಾರಿಗೆ ತರಬೇಕುʼ ಎಂದರು. ಆಗದಿದ್ದರೆ? ಎಂದದ್ದಕ್ಕೆ ನೋಡ್ತಾ ಇರಿ ಎಂದಿದ್ದರು. ಪರಿಣಾಮ ಒಂದು ದಿನ ಆ ಹುಡುಗಿ ವಲ್ಲಿ ಮನೆಗೆ ಹುಡುಕಿ ಬಂದಿದ್ದಳು. ʻಸರ್ ನೀವೂ ಹೀಗೆ  ಹೇಳುವುದಾ?ʼ ಎನ್ನುತ್ತಾ ಅವನ ಕಥೆಯನ್ನು ಎಳೆಎಳೆಯಾಗಿ  ಹೇಳುತ್ತಿದ್ದರೆ, ಸಹಾ ಮಾತೇ ಆಡಲಿಲ್ಲ. ʻಸರ್ ನನ್ನ ವಿಷಯ ಇರಲಿ ಅವನ ತಾಯಿಯ ಬಗ್ಗೆ ಎಂಥಾ ಮಾತಾಡುತ್ತಾನೆ ಗೊತ್ತಾ? ಹೊರಗೆ ಕಾಯುತ್ತಾ ನಿಂತಿದ್ದರೆ, ʻಯಾರಿಗೆ?ʼ ಎಂದು ಪ್ರಶ್ನಿಸುತ್ತಾನೆ. ಇಂಥವನು ನಿಮ್ಮ ಪರಮಾಪ್ತʼ ಎಂದಿದ್ದಳು ವಿಷಾದದಿಂದ. ಅವನ ಪದ್ಯದಲ್ಲಿ ಇಂಥಾದ್ದೊಂದು ಇಮೇಜೂ ಪದೆಪದೆ ಬರುತ್ತದೆ ಎನ್ನುವುದೂ ನನಗೆ ನೆನಪಾಯಿತು.

ಛೇ ಹೆಣ್ಣುಮಕ್ಕಳು ಬಿಟ್ಟಿ ಸಿಗುತ್ತಾರಾ? ತಾಯಿ, ಹೆಂಡತಿ ಎನ್ನುವ ಅನುಕಂಪವಾದರೂ ಬೇಡವಾ? ಏನಿದು ಅನುಮಾನದ ಭೂತ? ಇನ್ನು ಬೇರೆ  ಹೆಣ್ಣುಮಕ್ಕಳ ಬಗ್ಗೆ ಇನ್ನೇನು ಯೋಚಿಸಬಹುದು? ಎಲ್ಲಾ ದೊಡ್ಡವರೇ ಪ್ರಜ್ಞಾವಂತರೆ ಎಂದುಕೊಂಡೆ. ಸಹಾ ಅವನಿಗೆ ಬುದ್ದಿ ಹೇಳುವೆ ಎನ್ನಲೇ ಇಲ್ಲ. ಬದಲಿಗೆ, ʻಅವನ ಹಿನ್ನೆಲೆ ಹಾಗಿದೆ, ಹೊಂದಿಕೊಂಡು ಹೋಗು. ಅವನೊಬ್ಬ ಅದ್ಭುತ ಕವಿ. ಜಗತ್ತಿಗೆ ಭೇಕಾದವನು, ಕಾಪಾಡುವ ಜವಾಬ್ದಾರಿ ನಿನ್ನದುʼ ಎಂದಿದ್ದರು. ʻಅದ್ಭುತ ಕವಿಯಾದ ಮಾತ್ರಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾ? ನನ್ನ ನೋವನ್ನು ಯಾರು ಹಂಚಿಕೊಳ್ಳುತ್ತಾರೆ?ʼ ಎನ್ನುವ ಅವಳ ಪ್ರಶ್ನೆಗೆ ಸಹಾರಲ್ಲಿ ಉತ್ತರವಿರಲಿಲ್ಲ. ಹುಡುಗಿ, ʻಬದುಕುವ ಇಚ್ಚೆಯನ್ನೇ ಕೊಂದುಕೊಂಡಿದ್ದೇನೆʼ ಎನ್ನುತ್ತಾ ಹೊರಟಳು. ನನಗೆ ಕೆಡುಕೆನ್ನಿಸಿತು, ಅವಳ ಬಗಲಲ್ಲಿನ ಕಂದಮ್ಮನಲ್ಲಿ ಆಶಾ ಕಂಡಂತಾಗಿ, ನಾನು ಹಿಂದೇ ಹೋಗಿ ಅವಳನ್ನು ಸಮಾಧಾನ ಪಡಿಸಿದೆ. ʻಒಂದು ಸಲ ಗಿಡವನ್ನು ಕತ್ತರಿಸಿದರೆ ನಂಜಾಗಿ ಸತ್ತೇ ಹೋಗಬಹುದು. ಆದರೆ ಅದು ಬದುಕಿ ಬಿಟ್ಟರೆ ಹತ್ತಾರು ಕವಲುಗಳಿಂದ ಜೀವಂತವಾಗುತ್ತದೆ. ಜೀವನವೇ ಹಾಗೆ ಬದುಕಲಿಕ್ಕೆ ಕಾರಣಗಳನ್ನು ಮುಂದೊಡ್ಡುತ್ತಲೇ ಇರುತ್ತದೆ. ಒಮ್ಮೆ ಬದುಕಬೇಕು ಅನ್ನಿಸಿಬಿಟ್ಟರೆ ಬದುಕು ಅದ್ಭುತವಾಗಿಬಿಡುತ್ತದೆ. ಕೊಂದುಕೊಳ್ಳುವ ಮಾತಾಡಬೇಡ. ಇದು ಜೀವನ ರಹಸ್ಯʼ ಎಂದೆಲ್ಲಾ ಹೇಳಿದೆ. ಮಡಿಲಲ್ಲಿ ಪಿಳಿಪಿಳಿ ಎಂದು ಕಣ್ಣು ಬಿಡುತ್ತಾ ಮುಗ್ಧವಾಗಿ ನೋಡುತ್ತಿದ್ದ ಮಗೂನ ತೋರುತ್ತಾ, ʻಇದಕ್ಕೆ ನೀನೇ ಎಲ್ಲಾ ಆಗಬೇಕು, ಅದು ಅತ್ತಾಗ ಅತ್ತು, ನಕ್ಕಾಗ ನಕ್ಕು, ನಿನ್ನೇ ನೀನು ಮರೆಯಬೇಕು. ಎಷ್ಟೊಂದು ಸವಾಲುಗಳು! ಈಗ ಪಾತ್ರ ಬದಲಾಗಲಿ ಪರವಾಗಿಲ್ಲ. ನಾನು ಯಾರ ಹೆಂಡತಿಯೂ ಅಲ್ಲ, ಕೇವಲ ತಾಯಿ ಮಾತ್ರ ಎಂದುಕೋ. ಹೊಸ  ಜೀವನ ಆರಂಭವಾಗುತ್ತೆʼ ಎಂದೆಲ್ಲಾ ಉಪದೇಶ ಮಾಡಿದೆ. ಅವಳು ತಲೆ ಆಡಿಸಿ ಹೊರಟಳು. ನಾಲ್ಕಾರು ಬಾರಿ ನಾನು ನೋಡಿದ್ದೆನಾದರೂ ಆ ಕ್ಷಣ ಬರುವವರೆಗೂ ಅವಳೊಂದು ಬಿರುಗಾಳಿ ಅಂತ ಅನ್ನಿಸಿಲಿಲ್ಲ. ಬದಲಿಗೆ ತೀವ್ರವಾದ ಕ್ಷಣಗಳು ನಮ್ಮೊಳಗೇ ಇದೆ ಎಂದು ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುವ ಹುಡುಗಿಯಾಗಿ ಕಂಡಿದ್ದಳು.

ಅಂದು ಮೀಟಿಂಗ್ ಮುಗಿಸಿ ಮನೆಗಳಿಗೆ ಹೊರಟಿದ್ದೆವು. ಮಹದೇವಯ್ಯನೂ ಬಸ್ಸಿಗಾಗಿ ಕಾಯುತ್ತಿದ್ದ. ಅವನ ಹೆಂಡತಿ ದಿನಾ ಓಡಾಡುವುದು ಕಷ್ಟ ಎಂದು ಆಸ್ಪತ್ರೆಯ ಹತ್ತಿರ ಮನೆ ಮಾಡಿದ್ದಳಂತೆ. ಅವನ ಅನುಮಾನಗಳಿಂದಲೇ ಜರ್ಜರಿತನಾಗಿ ಹೋಗಿದ್ದ.  ಅವಳಿಗೊಬ್ಬ ಬಾಯ್‌ಫ್ರಂಡ್ ಇದ್ದಾನೆ ಎನ್ನುತ್ತಿದ್ದ. ನೋಡಿರದಿದ್ದರೂ ಕಲ್ಪಿಸಿಕೊಳ್ಳುತ್ತಿದ್ದ. ಭ್ರಮಾಧೀನನಾಗಿದ್ದ ಅವನಿಗೆ ಹೆಂಡತಿ ಹಾದರ ಮಾಡುತ್ತಿದ್ದಾಳೆ ಎನ್ನಿಸಿಬಿಟ್ಟಿತ್ತು. ಸಹಾಗೆ ಗೊತ್ತಾಗದಂತೆ ನಾನವನಿಗೆ ಬುದ್ಧಿ ಹೇಳಿದ್ದೆ. ʻಅವಳು ಹಾಗೆ ಮಾಡುತ್ತಾಳೆ ಅಂದುಕೋ. ಅದಕ್ಕೆ ಕಾರಣ ಅವಳೊಬ್ಬಳೇನಾ? ನಿನ್ನ ನಂಬಿ ಬಂದ ಅವಳ ಆಸೆಯನ್ನು ಎಂದಾದರೂ ಕೇಳಿದ್ದೀಯಾ? ಅವಳಿಗೆ ಬೇಕಾದ ಹಾಗೆ ಕೆಲವೇ ಕ್ಷಣಗಳಾದರೂ ಬದುಕುವ ಪ್ರಯತ್ನ ಮಾಡಿದ್ದೀಯಾ? ಇಲ್ಲ, ಒಂದೇ ಒಂದು ಕ್ಷಣ ಅವಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಪ್ರಯತ್ನಿಸಿದ್ದೀಯಾ? ತಪ್ಪು ನಿನ್ನದೂ ಇರಬಹುದಲ್ಲವಾ? ಅವಳು ಮಾತ್ರ ನಿನ್ನ ಇಚ್ಚೆಯ ಹಾಗೆ ಬದುಕಬೇಕು ಎಂದು ಬಯಸುತ್ತೀಯಾ?ʼ ಎಂದೆ. ಅದವನಿಗೆ ಪಥ್ಯವಾಗಲಿಲ್ಲ. ʻಅವಳಿಗೆ ಅವಳ ದೇಹ, ಅವಳ ಸುಖ ಮಾತ್ರ ಮುಖ್ಯʼ ಅಂದ. ʻಅದರಲ್ಲಿ ತಪ್ಪೇನು? ನಿನ್ನ ಸುಖವನ್ನು ನೀನು ಹುಡುಕಿಕೊಂಡ ಹಾಗೆ ಅವಳೂ ಅಲ್ಲವಾ? ಅನುಕಂಪದಿಂದ ನೋಡು. ಒಮ್ಮೆ ಪ್ರೀತಿ ಹುಟ್ಟಿಬಿಟ್ಟರೆ ಇದೆಲ್ಲಾ ಗೌಣವಾಗುತ್ತೆʼ ಎಂದೆ. ಅವನು ಒಪ್ಪಲಿಲ್ಲ. ನಾನು ಒಪ್ಪಿಸುವ ಹಠಕ್ಕೆ ಬಿದ್ದಿದ್ದೆ.              

ಹೆಣ್ಣು ಯಾವತ್ತೂ ದೇಹ-ಮನಸ್ಸುಗಳನ್ನು ಸಂಬಾಳಿಸುವ ಆಟಕ್ಕೆ ಬಿದ್ದವಳೇ ಅಲ್ಲ. ತಾಳಿಕೊಳ್ಳುವ ಶಕ್ತಿ ಅವಳಿಗೆ ಸಹಜವಾಗೇ ಸಿಕ್ಕಿಬಿಟ್ಟಿರುತ್ತೆ. ಸಹಾ ನನ್ನ ಜೀವನದಲ್ಲಿ ಬರುತ್ತಾರೆ ಎನ್ನುವ ಸೂಚನೆ ಸಿಕ್ಕಾಗಲೇ ನನಗೊಂದು ದೇಹವಿದೆ, ಅದಕ್ಕೆ ಆಕಾಶದಷ್ಟು ದೊಡ್ಡ ಆಸೆಯಿದೆ, ಅದನ್ನ ತುಂಬಿಸದಿದ್ದರೆ ಮೊಂಡುತನ ಮಾಡುತ್ತದೆ ಎಂದು ಗೊತ್ತಾಗಿದ್ದು. ಇದು ಸೋಜಿಗ. ಚಳಿಯಲ್ಲಿ ಬೆಂಕಿ ಕಾಯಿಸುತ್ತಾ ಕೂತರೆ, ಹಿಂಭಾಗದಲ್ಲಿ ನಡುಕ, ತಿರುಗಿದರೆ ಮುಂಭಾಗದಲ್ಲಿ ಕೊರೆತ ಏನಿದರ ಮರ್ಮ? ಕಾಮಕ್ಕೆ ಇಷ್ಟೊಂದು ತೀವ್ರತೆಯಾ? ಹುಟ್ಟುವಾಗಲೇ ಇದ್ದ ಅಂಗಗಳಲ್ಲಿ ಇಷ್ಟೆಲ್ಲಾ ಹುದುಗಿಕೊಂಡಿದ್ದು ಯಾವಾಗ? ಬೇಕು ಬೇಕು ಅನ್ನಿಸಲಿಕ್ಕೆ ಶುರುವಾಗುತ್ತೋ ಆಗ ತಡೆಯುವುದು ಎಷ್ಟು ಕಷ್ಟ ಎಂದು ಅರ್ಥವಾಗಿತ್ತು. ವಲ್ಲಿ ಕೂಡಾ ನನಗಿಂತ ಬೇರೆ ಆಗಲಿಕ್ಕೆ ಹೇಗೆ ಸಾಧ್ಯ? ಅದನ್ನು ಅವನರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಪರಿಣಾಮ ಕುಡಿತದ ಚಟಕ್ಕೆ ಬಿದ್ದುಬಿಟ್ಟಿದ್ದ – ಜಗತ್ತಿನ ಪರಿವೆ ಇಲ್ಲದಂತೆ.

‍ಲೇಖಕರು avadhi

August 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: