‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
31
ಇಂಥಾದ್ದನ್ನೇ ಸಹಾ ಬಯಸುತ್ತಾರೆ, ರಮಿಸುತ್ತಾರೆ, ವಿರಮಿಸುತ್ತಾರೆ. ಅವರಿಗೆ ಅರಿವಿದ್ದೋ ಇಲ್ಲದೆಯೋ ಅವರ ಸ್ವಭಾವವೇ ಹಾಗೆ ಆಗಿಬಿಟ್ಟಿದೆಯೋ ಗೊತ್ತಿಲ್ಲ. ಯಾವಾಗ ಜಗತ್ತಿಗೆ ತಾನು ಮುಖ್ಯ ಅನ್ನಿಸುತ್ತದೋ ಆಗೆಲ್ಲಾ ದುಪ್ಪಟ್ಟು ಶಕ್ತಿಯಿಂದ ಎದ್ದು ಬರುತ್ತಾರೆ. ಹೊರಗೆ ಯಾರು ಏನಾದರೂ ಅನ್ನಲಿ ಅದಕ್ಕೆ ತಲೆ ಕೆಡಿಸಿಕೊಳ್ಳ್ಳುವುದಿಲ್ಲ, ಆತ್ಮಾಘಾತವಾದಾಗಲೂ. ಆದರೆ ಅವರಿಗೆ ಜಗತ್ತಿನ ಅನಿಸಿಕೆಯ ಮೇಲೆ ಕಣ್ಣಿದ್ದೇ ಇರುತ್ತದೆ. ಒಂದು ಸಂಘಟನೆಯನ್ನು ತೀವ್ರವಾಗಿ ಕಟ್ಟಬೇಕು ಎನ್ನುವವನಿಗೆ ಇಂಥಾ ಎಚ್ಚರವಿರಬೇಕು ಎನ್ನುವುದು ನಿಜವೇ. ತಾನು ಕಟ್ಟುತ್ತಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳಬೇಕು. ಆದರೆ ತನಗೆ ಅದರಿಂದ ಏನೂ ಆಗಬೇಕಿಲ್ಲ ಎನ್ನುವುದನ್ನೂ ತೋರಿಸಿಕೊಳ್ಳಬೇಕು. ತಮ್ಮ ಬರೆಯುವ ಕೈಗಳಿಗೆ ಯಾರಾದರೂ ಅಭಿಮಾನದಿಂದಲೋ ಭಾವುಕವಾಗಿಯೋ ಮುತ್ತಿಟ್ಟರೆ ಅದು ತನಗೇ ಎಂದು ಯಾಕೆ ಅಂದುಕೊಳ್ಳಬೇಕು? ಇಲ್ಲ ಸಹಾರ ಒಳಗೆ ದೊಡ್ಡ ಗೊಂದಲ ಇದೆ. ಅದು ಸಮೂಹದ ವಿಷಯಕ್ಕೆ ಬಂದಾಗ ಒಂದಾಗಿ ನೋಡುವ ಶಕ್ತಿ ಹೇಗೋ ದಕ್ಕುತ್ತದೆಯಾದರೂ ವೈಯಕ್ತಿಕ ಮಟ್ಟಕ್ಕೆ ಬಂದಾಗ ಅವರ ಬೇಕು, ಬೇಡಗಳಿಗೆ ಅವರ ವ್ಯಕ್ತಿಗತವಾದ ಸಂಬಂಧಗಳೇ ಮುಖ್ಯವಾಗುತ್ತವೆ
ನಾವು ಸರಿಯಾಗಿದ್ದರೆ ಯಾವುದೂ ನಮ್ಮನ್ನು ಏನೂ ಮಾಡಲಾರದು ಎನ್ನುವ ನಂಬಿಕೆ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ ನಿಜ. ಆದರೆ ಪ್ರತಿಯೊಂದು ಕಥೆಗೂ ಒಂದು ಊಹಿಸಲಾಗದ ತಿರುವಿರುತ್ತದೆ ಕಥೆಗೂ ಜೀವನಕ್ಕೂ ತುಂಬಾ ದೊಡ್ಡ ವ್ಯತ್ಯಾಸ ಇದೆಯೆಂದು ನನಗೆ ಅನ್ನಿಸಿಲ್ಲ. ಇನ್ನೊಂದು ಮತ್ತೊಂದು ಅದಕ್ಕೆ ವಿರುದ್ಧವಾದ ಶಕ್ತಿ ನಮ್ಮನ್ನು ಆವರಿಸಿಕೊಳ್ಳಲು ಕಾಯುತ್ತಿರುತ್ತದೆ. ಸಂಘಟನೆಯ ಶಕ್ತಿ ಬೆಳೆದಂತೆಲ್ಲಾ ಇಬ್ಭಾಗವಾಗಬೇಕಾಗಿರುವ ಅನಿವಾರ್ಯತೆ ಯಾವ ಯಾವ ಹೆಸರಿನಲ್ಲೋ ಎದ್ದು ಬರುತ್ತದೆ. ಎಲ್ಲ ಬಾಲ್ಯಕ್ಕೂ ಶೈಶವ, ಯೌವ್ವನ, ಮುಪ್ಪು, ಸಾವು ಸಹಜವೇ ಅಲ್ಲವೇ? ಹಾಗೆ ಪ್ರತಿ ಹೋರಾಟಕ್ಕೂ ಎಂದು ಈಗ ಅನ್ನಿಸುತ್ತದೆ. ಆದರೂ ಅದೆಂಥಾ ನೋವಿನ ದಿನಗಳು. ನಾವೇ ಕಟ್ಟಿ ಬೆಳೆಸಿದ ಹೋರಾಟ ದಿಕ್ಕಾಪಾಲಾದಾಗ ಎದೆಯಲ್ಲಿ ಚಳುಕು ಮೂಡಿಸಿತ್ತು. ವಲ್ಲಿ ಇವೆಲ್ಲಕ್ಕೂ ನೆಪವಾಗಿಬಿಟ್ಟಳೇನೋ ಎಂದು. ಈಗಲೂ ಅನ್ನಿಸುವುದು ಅವಳೂ ಸೂತ್ರದಗೊಂಬೆ. ಇಂಥಾ ದೊಡ್ದ ಹೋರಾಟದಲ್ಲೂ ನುಸುಳಿದ ಕ್ಷುದ್ರವಾಗುವ ಜಾತಿ ಎನ್ನುವ ಪ್ರಜ್ಞೆಗೆ ಬದಲಾವಣೆಯ ದೊಡ್ಡ ಹರವಿನಲ್ಲೂ ಜಾಗ ಮಾಡಿಕೊಳ್ಳುವ ತಾಕತ್ತು, ಉಳಿದುಬಿಡುವ ಜಾಣ್ಮೆ ಬಂದುಬಿಟ್ಟಿರುತ್ತದೆ. ಸಂಘಟನೆ ಇಬ್ಭಾಗವಾಗುವುದಕ್ಕೆ ಜಾತಿಯೂ ಕಾರಣವಾಗಿಬಿಟ್ಟಿತ್ತು.
ಸಹಾ ಬುದ್ಧಿಪೂರ್ವಕವಾಗಿಯೋ ಅಥವಾ ಅರಿವಿಗೆ ಬಾರದೆಯೋ ಅಥವಾ ಆಕಸ್ಮಿಕವಾಗಿಯೋ ಬೆಳೆಸಿಕೊಂಡು ಬಂದ ಸಂಬಂಧಗಳಲ್ಲಿ ತಮ್ಮ ಜಾತಿಯವರೇ ಹೆಚ್ಚು. ನನಗೆ ಇದು ಈಗಲೂ ಕಾಕತಾಳಿಯ ಎನ್ನುವ ನಂಬಿಕೆ ಇದೆ. ಸಹಾಯಕ್ಕೆ ಒದಗಿಬರುವವರಲ್ಲಿ ಜಾತಿ ನೋಡಬೇಕಾ? ಬೇಡವಾ? ಎನ್ನುವ ನಿರ್ಧಾರಕ್ಕೆ ಬರುವುದು ಕಷ್ಟ. ಅವರು ಸಂಘಟನೆಗೆ ಏನನ್ನು ಮಾಡುತ್ತಾರೆ ಎನ್ನುವುದು ಮುಖ್ಯ ಎಲ್ಲಾ ಜಾತಿಗಳಲ್ಲೂ ಒಳ್ಳೆಯವರು-ಕೆಟ್ಟವರು, ನಿಷ್ಠರು-ಮುಕ್ತರು ಇರುವುದು ಸಾಧಾರಣ. ಯಾವುದು ಕೇಡೆಂದು ದೂರ ಹೋಗ ಬಯಸುತ್ತೇವೆಯೋ ಅದರಿಂದಲೇ ನೋವನ್ನು ಸಂಕಟವನ್ನೂ ಅನುಭವಿಸಿಬಿಡುತ್ತೇವೆ…
ಈ ಘಟ್ಟದಲ್ಲೇ ವಲ್ಲಿಯ ನೇರ ಪ್ರವೇಶವಾಯಿತು. ಸಂಘಟನೆ, ಹೋರಾಟ, ಪರಿಹಾರಗಳು ಯಾವುವೂ ಕೊಡದ ಪರಿಣಾಮ ಕೊಟ್ಟಿದ್ದು ಜಾತಿಯೇ. ಸೃಜನತೆಯ ಎತ್ತರವೂ, ಹೋರಾಟದ ಆರದ ಕಸುವೂ ಸ್ವಜನ ಪಕ್ಷಪಾತಿ ಅನ್ನುವುದನ್ನು ಪಕ್ಕಕ್ಕೆ ಸರಿಸಲಿಲ್ಲ. ಆ ಅಭಿಪ್ರಾಯವನ್ನು ಬದಲಿಸಲೂ ಬೇಕಿಲ್ಲ. ಸಂಘಟನೆಯಲ್ಲಿ ಗಂಡ ಮಹದೇವಯ್ಯನ ಖಾಲಿಯಿದ್ದ ಜಾಗ ತನ್ನದಲ್ಲದೆ ಬೇರೆಯವರದ್ದು ಹೇಗಾಗುತ್ತದೆ? ಬಯಸಿದ ಸ್ಥಾನವನ್ನು ಕೊಡಲಿಕ್ಕೆ ಸಹಾ ಒಪ್ಪಲಿಲ್ಲ. ಅದಕ್ಕೆ ವಲ್ಲಿಗೆ ಶಕ್ತಿ ಇಲ್ಲವೆಂದು ಭಾವಿಸಿ, ಮಹದೇವಯ್ಯನ ಹೆಂಡತಿ ಎನ್ನುವ ಕಾರಣಕ್ಕೆ ಅಂಥಾ ಸ್ಥಾನವನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಿಬಿಟ್ಟಿದ್ದರು. ವಲ್ಲಿಗೆ ಅವಮಾನವಾಯಿತು. ಮತ್ತದನ್ನು ತೀರಾ ಗಂಭೀರವಾಗಿ ತೆಗೆದುಕೊಂಡ ವಲ್ಲಿ, ಬೆಂಕಿ ಕಾವಾಗುವ ಹೊತ್ತಿಗೆ ಕಾದಿದ್ದು ಸಹಾರ ವಿರುದ್ಧ ಸ್ಪಷ್ಟವಾಗಿ ತನ್ನ ಪ್ರತಿಭಟನೆಯನ್ನು ದಾಖಲು ಮಾಡಿಬಿಟ್ಟಿದ್ದಳು.
ವಲ್ಲಿಯಲ್ಲಿ ನಾಯಕತ್ವದ ಲಕ್ಷಣಗಳು ಗೋಚರವಾಗ ತೊಡಗಿದ್ದೇ ಆವಾಗ. ಮತ್ತದು ಅವಳ ಬದುಕು ಅನುಭವಗಳಿಂದ ಪಡೆದುಕೊಂಡವೇ ಆಗಿದ್ದವು. ಪೆಟ್ಟು ಬಿದ್ದಾಗಲೇ ಪೂರ್ಣತೆ ಸಿಗುವುದು, ಪೆಟ್ಟು ಬೀಳುತ್ತಾ ಬೀಳುತ್ತಲೇ ದಾರಿಗಳು ತೆರೆದುಕೊಳ್ಳುವುದು. ಏಟಿಗೆ ಒಡೆಯದೆ ಮತ್ತಷ್ಟು ಸ್ಪಷ್ಟವಾಗುವ ವಿಗ್ರಹದಂತೆ ಗೋಚರಿಸತೊಡಗಿದ್ದಳು. ನೋವು ಅವಳನ್ನು ಎದ್ದು ನಿಲ್ಲುವಂತೆ, ಅವಮಾನ ಅವಳನ್ನು ಕಾಡಿ ಹಠವನ್ನು ಛಲವನ್ನು ತುಂಬಿಬಿಟ್ಟಿತ್ತು.
ಅವಮಾನವನ್ನೇ ಅಸ್ತ್ರ ಮಾಡಿಕೊಂಡ ವಲ್ಲಿ ಅಖಾಡಕ್ಕೆ ಇಳಿದಿದ್ದಳು. ಅವಳ ಮೊದಲ ಹೆಜ್ಜೆಯಾಗಿ ಸಂಘಟನೆಯಲ್ಲಿ ತನ್ನ ಸ್ಥಾನ ಏನೆಂದು ಸಾಬೀತು ಪಡಿಸುವುದೇ ಆಗಿತ್ತು. ಪರಿಣಾಮ ʻನನ್ನ ಅನುಮತಿಯಿಲ್ಲದೆ ತನ್ನ ಗಂಡನ ಹಾಡುಗಳನ್ನು ಸಂಘಟನೆಯಲ್ಲಿ ಬಳಸಕೂಡದುʼ ಎಂದಳು. ಸಹಾಗೆ ಇದೆಲ್ಲಾ ತೀರಾ ಅತಿ ಅನ್ನಿಸಿ, `ಮಹದೇವಯ್ಯ ನಾಡಿನ ಆಸ್ತಿ, ಆತ ಹಾಡುಗಳನ್ನು ಬರೆದದ್ದೇ ಸಂಘಟನೆಗಾಗಿ. ಆತ ಅದಕ್ಕಾಗಿ ಅನುಮತಿ ಕೊಟ್ಟು ಹಾಡುಗಳಿಗೆ ರಾಗ ಹಾಕಿ ಅವನಿದ್ದಾಗಲೇ ಹಾಡಲಾಗಿದೆ. ಅದು ಹೋರಾಟಕ್ಕೆ ಬಲ ಕೊಟ್ಟಿದೆʼ ಎಂದಿದ್ದರು. ವಲ್ಲಿ ಕೇಳಲಿಲ್ಲ. ʻಅವರು ಬದುಕಿದ್ದಾಗ ಅವರ ಹಕ್ಕು. ಈಗ ಅದರ ಹಕ್ಕು ನನ್ನದುʼ ಎಂದು ಪಟ್ಟು ಹಿಡಿದು ಸಾಬೀತುಪಡಿಸಲು ಮುಂದಾಗಿದ್ದಳು. ಸಹಾ ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ʻಇದ್ದಕ್ಕಿದ್ದ ಹಾಗೆ ಹಾಡುಗಳನ್ನು ಹಾಡಬೇಡಿ ಎಂದರೆ ಹೇಗೆ? ಯಾವ ಯಾವ ಮೂಲೆಗಳಲ್ಲೋ, ಯಾವ ಯಾವ ಹಾಡುಗಾರರೋ, ಒಳಿತಿನ ಉದ್ದೇಶಕ್ಕೆ ಹಾಡುಗಳನ್ನು ಹಾಡುತ್ತಿದ್ದರೆ ತಡೆಯುವುದು ಹೇಗೆ?ʼ ಎಂದು ಯೋಚನೆ ಬಿದ್ದರು. ಈಗ ಸಹಾಗೆ ಯಾವ ದಾರಿಯೂ ಇರಲಿಲ್ಲ. ಈಗ ಸಂಘಟನೆಯ ಭಾಗವಾಗಿ ವಲ್ಲಿಯನ್ನು ಪರಿಗಣಿಸದೇ ಇರುವುದು ಅಸಾಧ್ಯದ ಮಾತಾಗಿತ್ತು. ಅದು ಅವಳಲ್ಲಿ ಅಸಾಧಾರಣವಾದ ಆತ್ಮವಿಶ್ವಾಸವೊಂದು ತಟ್ಟೆಂದು ಗೋಚರವಾಗುವಂತೆಯೂ ಮಾಡಿಬಿಟ್ಟಿತ್ತು. ಅವಳು ಕಾಲಕ್ಕಾಗಿ ಕಾಯತೊಡಗಿದ್ದಳು.
ಸಹಾರ ಪರಮಾಪ್ತ ಸ್ನೇಹಿತ ಲೋಕಪ್ಪ ತೋಟ ಮಾಡಲು ಸಾಲ ಮಾಡಿದ್ದರು. ಸಾಲ ಕೊಟ್ಟವರಿಗೆ ವಾಪಾಸು ಕೊಡದೆ ಸತಾಯಿಸಿದ್ದರು. ಕೊಟ್ಟವರು ಅವರ ಮನೆಯ ಮುಂದೆ ಹೋಗಿ ಗಲಾಟೆ ಮಾಡಿದಾಗ, ʻನೋಡಯ್ಯ, ನನ್ನ ಹತ್ತಿರ ನೀನು ಅಡಮಾನ ಇಟ್ಟುಕೊಳ್ಳುವ ವಸ್ತುಗಳು ಯಾವುವೂ ಇಲ್ಲ. ಇರೋದು ಇದೊಂದೇ ಬೇಕಿದ್ದರೆ ತೆಗೆದುಕೋʼ ಎಂದು ಹಳೆಯ ಲಡಾಸು ಸೈಕಲ್ ಅನ್ನು ತೋರಿಸಿದರಂತೆ. ಕಾಲೇಜಿನ ದಿನಗಳಿಂದಲೂ ರೂಮಿನಲ್ಲಿ ಒನ್ ಬೈಟು ಎನ್ನುವಂತೆ ಬೆಡ್ಡಿನಲ್ಲಿ ಬಾಟಲಿನಲ್ಲಿ ಭಾಗ ಮಾಡಿಕೊಂಡವರಿಗೆ ಲೋಕಪ್ಪನ ಬಗ್ಗೆ ಅಪಾರವಾದ ಪ್ರೀತಿ. ಇದೆಲ್ಲಾ ಗೊತ್ತಿದ್ದೇ ಆ ವ್ಯಕ್ತಿ ಸಹಾರ ಕಡೆಗೆ ಬಂದಿದ್ದು. ಸಹಾ ಮುಖದಲ್ಲಿ ಕಾಠಿಣ್ಯತೆ ಕಂಡಿತ್ತು. ʻಬಡ್ಡಿ ಕೊಡುವುದು ನಿನ್ನ ಬಿಸನೆಸ್. ಬಿಸನೆಸ್ ನಲ್ಲಿ ಲಾಭದ ಹಾಗೆ ಲಾಸೂ ಇರುತ್ತೆ. ಅದನ್ನ ತಡೆದುಕೊಳ್ಳಲಾಗದವನು ಈ ಕೆಲಸ ಹೇಗೆ ಮಾಡ್ತಿದ್ದೀಯಾ?ʼ ಎಂದಿದ್ದರು. ಹಣ ಕೊಟ್ಟವರಿಗಿಂತ ತೆಗೆದುಕೊಂಡವರ ಮೇಲೆ ಸಹಾ ಅನುಕಂಪ ಇಟ್ಟುಕೊಂಡಿದ್ದರು. ಒಂದೊಮ್ಮೆ ವಿಚಿತ್ರ ಅನ್ನಿಸುತ್ತಿತ್ತು. ಸಮಸಮಾಜದ ಕಲ್ಪನೆಯಲ್ಲಿ ಶ್ರೀಮಂತರಿಗೆ ಮೋಸ ಮಾಡಿದರೂ ತಪ್ಪಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದರಾ? ಎಂದು. ಬಾಯಿಬಿಟ್ಟು ಹೇಳುವುದಿಲ್ಲವಾದರೂ ಅವರ ನಿಲುವು ಹಾಗೇ ಇತ್ತು ಅನ್ನಿಸುತ್ತದೆ. ಕಸಿದಲ್ಲ ಅವರಾಗೇ ಕೊಡುವ ಹಾಗೆ ಮಾಡಬೇಕು ಎನ್ನುತ್ತಿದ್ದ ಸಹಾ ಮಾತಾಡಲಿಲ್ಲ. ಅವರ ಪ್ರತಿ ಮೌನಕ್ಕೂ ಬೇರೆ ಬೇರೆ ಅರ್ಥಗಳಿರುತ್ತಿದ್ದವು. ಅವು ನನಗೆ ಬಹುಬೇಗ ಗೊತ್ತಾಗುತ್ತಿದ್ದವು. ಈ ಸಲದ ಮೌನ ನಾನು ಈ ವಿಷಯದಲ್ಲಿ ತಲೆ ಹಾಕುವುದು ಇಷ್ಟವಿಲ್ಲ ಎನ್ನುವುದೇ ಆಗಿತ್ತು. ನನಗಾದರೆ ಏನು ಬೇಕಾದರೂ ಹೇಳಬಹುದಿತ್ತು, ಆದರೆ ಬೇರೆಯವರಿಗೆ ಇದರಲ್ಲಿ ತಲೆ ಹಾಕಬೇಡಿ ಎನ್ನುವುದಕ್ಕೆ ಆಗುವುದಿಲ್ಲವಲ್ಲಾ!?
ಲೋಕಪ್ಪನ ಎಡವಟ್ಟುಗಳು ಒಂದೆರಡಲ್ಲ. ಹತ್ತು ದಶಾವತಾರ ಎಂದು ಸಹಾ ಹೇಳಿಕೊಂಡು ನಗುತ್ತಿದ್ದರು. ʻಅಲಲಲಾ ನನ್ನ ಕೋಳಿಯಿಟ್ಟ ಮೊಟ್ಟೆಯನ್ನು ಕದ್ದು ತಿಂದವನೇ, ಆ ಕೋಳಿಯು ಇಡುತ್ತಿದ್ದ ಮೊಟ್ಟೆಯ ಸಹಿತವಾಗಿ, ಕೋಳಿಪಿಳ್ಳೆಗಳು ಅವುಗಳು ಇಡುತ್ತಿದ್ದ ಮೊಟ್ಟೆಗಳು ಅವುಗಳಿಂದ ಬಂದ ಮರಿಗಳು… ಹೀಗೆ ಲೆಕ್ಕವಿಡುತ್ತಲೇ ವಸೂಲಿ ಮಾಡಿ ನಗುತ್ತಿದ್ದನು. ತೋಟದಲ್ಲಿ ತೆಂಗಿನ ಸಸಿ ನೆಟ್ಟು ಮಧ್ಯದಲ್ಲಿ ಜೋಳ ಬೆಳೆದಿದ್ದರು. ಜೋಳ ತೆನೆ ಆಗಿ ಹಕ್ಕಿಗಳು ಬಂದು ಎಲ್ಲಾ ತಿಂದು ಬಿಡುತ್ತಿದ್ದವು. ಗಾಳಿಗೆ ಆಡುವಂತೆ ಬಟ್ಟೆ ಕಟ್ಟುತ್ತಿದ್ದನಾದರೂ, ನಮಗಿಂತ ಬುದ್ಧಿವಂತ ಪಕ್ಷಿಗಳಿಗೆ ಅರ್ಥವಾಗಿಬಿಡುತ್ತಿತ್ತು. ಸ್ವಲ್ಪದಿನ ಭಯದಿಂದ ದೂರ ಇರುತ್ತಿದ್ದ ಅವು, ಬಟ್ಟೆಯನ್ನು ಕೇರ್ ಮಾಡದೆ ತಮ್ಮ ಹಕ್ಕುಸ್ವಾಮ್ಯ ಎನ್ನುವಂತೆ ತಿಂದು ಹೋಗುತ್ತಿದ್ದವು. ಅವನ್ನು ಓಡಿಸಲು ಪಟಾಕಿಯನ್ನು ತಮ್ಮ ಕೈಲೇ ಹಚ್ಚಿ ಲೋಕಪ್ಪ ಮೇಲಕ್ಕೆ ಎಸೆದಿದ್ದರು. ಮೇಲಕ್ಕೆ ಎಸೆಯುವ ಮೊದಲೇ ಸಿಡಿದಿದ್ದರಿಂದ ಕೈ ಪೂರಾ ಸುಟ್ಟು, ಕಣ್ಣಲ್ಲಿ ನೀರು ಬರ್ತಾ ಇದ್ದರೂ ತೋರಿಸಿಕೊಳ್ಳದೆ ತಡಕೊಂಡೇ ಇದ್ದರು. ಆಗ ಸಹಾಗೆ ಎಂಥ ಮರುಕ ಎದೆಯಲ್ಲಿ ಎಂಥಾ ಕರುಣೆ! ಒಂದು ವಾರ ಲೋಕಪ್ಪನ ಕೈ ವಾಸಿಯಾಗುವವರೆಗೂ ಅವರ ಜೊತೆಯಲ್ಲೇ ಇದ್ದರು. ಆತನಿಗೆ ಊಟ ಮಾಡಿಸಿ, ನೋವು ಮರೆಸಲಿಕ್ಕೆ ಇಷ್ಟಿಷ್ಟೇ ಹೆಂಡ ಕುಡಿಸಿ, ದಿನಗಳನ್ನು ದೂಡಿದ್ದರು. ಕಾಲೇಜಿನಲ್ಲೂ ಇಬ್ಬರದ್ದೂ ಒಂದೇ ಕ್ಲಾಸು, ಒಂದೇ ಬೆಂಚ್. ಬೇಜಾರಾದರೆ ಕಿಟಕಿಗಳೇ ಬಾಗಿಲುಗಳಾಗುತ್ತಿದ್ದವು ಎಂದು ಹೇಳಿಕೊಂಡು ನನ್ನೆದುರೇ ನಕ್ಕಿದಿದೆ. ʻಹೊಲಪಲ ಎಲ್ಲ ಮಾಡಲಿಕ್ಕೆ ಆಗಲ್ಲ, ಧಿಡೀರನೆ ಹಣ ಮಾಡಲಿಕ್ಕೆ ಬೇರೆ ಏನನ್ನಾದರೂ ಮಾಡಬೇಕುʼ ಎಂದು ಜಮೀನಲ್ಲಿ ಲೋಕಪ್ಪ ಸುವಾಸನೆಯ ಎಣ್ಣೆ ತೆಗೆವ ಗಿಡಗಳನ್ನು ಹಾಕುವ ಹುಚ್ಚು ಹತ್ತಿಸಿಕೊಂಡು, ಯಾವುದೋ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಗಿಡ ಬೆಳೆಸುವುದು ಮಾತ್ರ ನಾವು. ಕಡೆಯಲ್ಲಿ ಪ್ರತಿ ಮರಕ್ಕೂ ಬೆಲೆ ಕಟ್ಟಿ ತೆಗೆದುಕೊಳ್ಳುವುದು ಅದರ ಒಪ್ಪಂದ. ಗಿಡ ಹಚ್ಚಿದ ಮೇಲೆ ನೀರೆರೆದು ಆರೈಕೆ ಮಾಡಬೇಕಲ್ಲವಾ? ಅದನ್ನ ಮಾಡಲಿಕ್ಕೆ ಲೋಕಪ್ಪನ ಹತ್ತಿರ ಸಮಯ ಇರಲಿಲ್ಲ. ಪಕ್ಕದ ತೋಟದವನಿಗೆ ಸ್ವಲ್ಪ ನೀರು ಹಾಕಿಬಿಡು ಎಂದು ಹೇಳಿದ್ದರಂತೆ. ಹಾಕಲಿಕ್ಕೆ ಎರಡು ಮೂರು ಗಿಡಗಳಾ ಇದ್ದದ್ದು? ನೂರಾರು ಗಿಡಗಳಿಗೆ ನೀರು ಹಾಕುವವನಿಗೆ ಹಣ ಕೊಡದೆ ಹೋದ್ದರಿಂದ, ಅವನೂ ನೀರು ಹಾಕುವುದನ್ನು ನಿಲ್ಲಿಸಿದ. ಅಲ್ಲಿಗೆ ಗಿಡಗಳ ಕಥೆ ಮುಗಿಯಿತು. ಈಗ ತೆಗೆದುಕೊಂಡ ಸಾಲ ಮಾತ್ರ ಮುಕ್ತಿಕಾಣದೆ ಅವರ ಕಿಸೆಯಲ್ಲೇ ಉಳಿದುಬಿಟ್ಟಿತ್ತು. ಕಂಪನಿ ಆತನ ಮೇಲೆ ಕೇಸು ಹಾಕಿತ್ತು. ಸಂಘಟನೆ ಇದೆಯೆಂದು ಏನು ಮಾಡಿದರೂ ಅದು ಮುಚ್ಚಿ ಹಾಕುತ್ತದೆಂದು ನಂಬುವುದು ಮೂರ್ಖತನವಲ್ಲವೇ? ಇಂಥಾ ಹರಕತ್ತುಗಳ ನಡುವೆ ಸಹಾ ಲೋಕಪ್ಪ ಓಡಾಡುವಾಗ ಮೆಲ್ಲನೆ ಶುರುವಾದದ್ದೇ ಜಾತಿಯ ಅಸ್ತ್ರ. ಲೋಕಪ್ಪನಿಗೆ ಹಣ ಕೊಟ್ಟವ ವಲ್ಲಿಯದ್ದೇ ಜಾತಿಯವ. ಅವಳಿಗೆ ಒಪ್ಪಿಸಿದ. ಅವನ ಪರವಾಗಿ ನಿಲ್ಲದೆ ಅವಳಿಗೆ ಬೇರೆ ದಾರಿಯಿರಲಿಲ್ಲ ಎಂದಲ್ಲ. ಸಹಾರ ವಿರುದ್ಧ ನಿಲ್ಲಲು ಇದು ಒಳ್ಳೆಯ ಅವಕಾಶವೇ ಆಗಿತ್ತು. ಎಲ್ಲವನ್ನೂ ಮೀರಿ ಕೊನೆಗೆ ಸಹಾಯ, ಅಂತಃಕರಣವನ್ನೂ ಸಮಾಜದ ಕಣ್ಣಿಂದ ಮರೆಯಾಗಿಸಿಬಿಟ್ಟಿತ್ತು. ʻಸಹಾ ಸ್ವಜನರಿಗಾಗಿ ಬೇರೆಯವರ ಮೇಲಾಗುವ ಕೇಡಿನ ಬಗ್ಗೆಯೂ ಯೋಚನೆ ಮಾಡುವುದಿಲ್ಲ. ನೋಡಿ ಲೋಕಪ್ಪನನ್ನು ಹೇಗೆಲ್ಲ ಕಾಪಾಡುತ್ತಿದ್ದಾರೆʼ ಎಂದೆಲ್ಲಾ ಹಬ್ಬಿಸಲಿಕ್ಕೆ ಶುರು ಮಾಡಿದರು. ಹೀಗೆ ಮಾಡಿದವರಿಗೂ ಮುಂದೊಂದು ದಿನ ಇದು ಬ್ರಹ್ಮಾಸ್ತ್ರ ಎಂದೂ, ಸಹಾರನ್ನು ಅಲುಗಾಡಿಸಿದರೆ ಸಾಕು, ಅವಮಾನ ಮಾಡಿದರೆ ಸಾಕು ಎಂದುಕೊಂಡವರಿಗೆ ಅದು ಅಸಹಾಯಕರಾಗುವಂತೆ ಮಾಡಬಲ್ಲದು ಎಂದು ಗೊತ್ತಿರಲಿಲ್ಲ. ವಲ್ಲಿಯೊಬ್ಬಳೇ ಇದನ್ನು ಮಾಡಿದಳು ಎಂತಲೂ ಅಲ್ಲ. ಆದರೆ ಹೇಗಾದರೂ ಸಹಾರನ್ನು ತುಳಿಯಬೇಕು ಎಂದು ಅಂದುಕೊಂಡ ಅವಳ ಜೊತೆ ಒಬ್ಬೊಬ್ಬರಾಗಿ ಸೇರುತ್ತಾ ಹೋದರು… ʻಸೈಟು, ಅಧಿಕಾರ, ರಾಜಕಾರಣದ ಒಡನಾಟ, ಸ್ಟೇಜು… ಹೀಗೆ ಎಲ್ಲ ಲಾಭಗಳನ್ನೂ ತೆಗೆದುಕೊಳ್ಳುವುದು ನೀವು. ನಾವು ಮಾತ್ರ ಸುಮ್ಮನೆ ದುಡಿಯುತ್ತಲೆ ಇರಬೇಕುʼ ಎನ್ನುವ ಮಾತುಗಳು ನನ್ನೊಳಗೆ ಆತಂಕವನ್ನು ಹುಟ್ಟುಹಾಕುತ್ತಿದ್ದವು.
ವಲ್ಲಿಯ ಬಗ್ಗೆ ಸಹಾಗೆ, ʻಏನೋ ನಡೆಯುತ್ತಿದೆʼ ಎಂದು ಅವರಿವರು ಹೇಳಿದಾಗಲೂ ಅವರದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಾನು, ʻದೊಡ್ಡದಾಗಲಿಕ್ಕೆ ಬಿಡಬೇಡಿ, ಬೇರು ಆಳಕ್ಕೆ ಇಳಿದಷ್ಟು ನಮಗೆ ತೊಂದರೆಯಾದೀತುʼ ಎಂದಾಗ, ʻನನ್ನ ಆನ್ನಲಿಕ್ಕೆ ನಾನು ಏನು ಮಾಡಿದ್ದೇನೆ ಅಂಥಾದ್ದು?ʼ ಎಂದಿದ್ದರು ತಿಳಿಯಾಗಿ.
ಮೈಮರೆವು ಕೆಟ್ಟದ್ದು ಅದರಲ್ಲೂ ಜವಾಬ್ದಾರಿ ಹೊತ್ತವರಿಗೆ ಅದು ಇರಲೇಬಾರದು. ಉತ್ತರಿಸುವುದು ತಾವೇ ಎನ್ನುವುದು ಅರ್ಥವಾಗುವುದರೊಳಗೆ ಏನೂ ಆಗಬಹುದು. ಸಹಾ ಕಾನೂನಿನ ಕೈಯಿಂದ ಸ್ನೇಹಿತನನ್ನು ಕಾಪಾಡಿಕೊಳ್ಳಲು ಏನು ಬೇಕೋ ಅದನ್ನೆಲ್ಲಾ ಮಾಡುತ್ತಾ ಅದರಲ್ಲಿ ಮುಳುಗಿ ಹೋಗಿದ್ದಾಗ, ಜಾತಿಯ ಅಸ್ತ್ರವನ್ನು ಬಳಸಿ ಅವರನ್ನು ಮಣಿಸಲು ಸಿದ್ಧಳಾಗಿದ್ದ ವಲ್ಲಿ ತಣ್ಣಗೆ ನಗುತ್ತಿದ್ದಳು. ಯಾರಾದರೂ ಹೀಗೆ ತಮ್ಮನ್ನು ನೋಡಬಹುದು ಎನ್ನುವ ಸಣ್ಣ ಯೋಚನೆಯೂ ಇಲ್ಲದ ಸಹಾ ಕನಲಿ ಹೋಗಿದ್ದರು. ತನ್ನದು ಎಂದರೆ ಹೇಗಾದರೂ ಆಗಲಿ ಕಾಪಾಡಿಕೊಂಡು ಬಿಡುತ್ತಿದ್ದ ಅವರು, ಯಾವ ಅತಿಗಳಿಗಾದರೂ ಹೋಗುತ್ತಿದ್ದುದನ್ನು ನೋಡಿದ್ದೇನೆ. ಆಗೆಲ್ಲಾ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದು ಗೊತ್ತಿದೆ. ಎಂಥಾ ಸಂಘರ್ಷವಾದರೂ ಎದುರಾಗಿ ಬಿಡುತ್ತಿದ್ದರು. ಅಂಥಾದ್ದರಲ್ಲಿ ಸಂಘಟನೆಯ ವಿಷಯಕ್ಕೆ ಬಂದಾಗ ತನ್ನದು ಅಂದುಕೊಳ್ಳದೆ ಇರುತ್ತಾರೆಯೇ? ಹೋರಾಟ ಹೋರಾಟವೇ ಆಗಿದ್ದಿದ್ದರೆ, ಅದು ನೇರಾನೇರವೇ ಆಗಿದ್ದರೆ, ಅವರನ್ನು ಬೀಳಿಸುವುದು ಯಾರಿಂದಲೂ ಆಗದ ಕೆಲಸ. ಯಾರನ್ನು ಹೇಗೆ ಹೊಡೆಯಬೇಕು ಎನ್ನುವ ಲೆಕ್ಕಾಚಾರದಲ್ಲಿ ಮುಳುಗುತ್ತಿದ್ದರು. ಆದರೆ ಆಗಿದ್ದು ಗೆರಿಲ್ಲಾ ಯುದ್ಧ ಮರೆಯಿಂದ ಬಾಣಗಳು ಬಂದು ತಾಕುತ್ತಿದ್ದರೆ ಸಹಾ, ಪ್ರತಿ ಮೊನೆಯ ತುದಿ ತಾಕಿದಾಗಲೂ ಹೈರಾಣಾಗುತ್ತಿದ್ದರು. ಯಾವ ಸಮಾನತೆಯ ಅಸ್ತ್ರವನ್ನು ಇಟ್ಟುಕೊಂಡು ಜಾತಿಯ ವಿರುದ್ಧ ಹೋರಾಟಕ್ಕೆ ಇಳಿದಿದ್ದರೋ, ಅದು ತನ್ನ ಅಸ್ತಿತ್ವ ಮತ್ತು ಹೋರಾಟದ ತಾದ್ಯಾತ್ಮವನ್ನೇ ಪ್ರಶ್ನಿಸುತ್ತದೆ ಎಂಬ ಊಹೆಯನ್ನೂ ಮಾಡಿರಲಿಲ್ಲ.
0 ಪ್ರತಿಕ್ರಿಯೆಗಳು