ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಅಂತಃಕರಣಕ್ಕೊಂದು ಕಣ್ಣು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

30

ಎಲ್ಲವೂ ಮೇಲು ನೋಟಕ್ಕೆ ಸಣ್ಣ ಸಂಗತಿ ಎಂದು ಅನ್ನಿಸಿದರೂ, ಪರಿಣಾಮದಲ್ಲಿ ಅವ್ಯಾವುವೂ ಸಣ್ಣದಾಗಿರುವುದಿಲ್ಲ. ಎಲ್ಲವಾಗಲೂ ತೀವ್ರತೆ ಒಂದೇ ಬಗೆಯಲ್ಲೇ ಇರುತ್ತದೆ ಎಂದೂ ಹೇಳಲಾಗುವುದಿಲ್ಲ. ಮತ್ತು ಇವೆಲ್ಲವೂ ಹೀಗೆ, ಹೀಗೆ ಎನ್ನುವ ನಿರ್ದಿಷ್ಟ ಅಳತೆಗೋಲಿಗೆ ದಕ್ಕುವುದೂ ಅಲ್ಲ್ಲ. ಯಾಕೆಂದರೆ ನಮ್ಮ ಲೆಕ್ಕಾಚಾರಗಳಿಗೂ, ನಡೆಯುವ ಘಟನೆಗಳಿಗೂ ಸಂಬಂಧ ಹೀಗೇ ಎಂದು ಗೆರೆಕೊರೆದ ಹಾಗೆ ಇರುವುದಿಲ್ಲವಲ್ಲ. ವಲ್ಲಿ ಯಾರ ಜೊತೆಗೆ ಸಹಜೀವನ ನಡೆಸುತ್ತಿದ್ದಳು ಎಂದು ಹೇಳುತ್ತಿದ್ದರೋ ವ್ಯಕ್ತಿಯ ಸಹಾಯವನ್ನು ಅವಳು ತೆಗೆದುಕೊಂಡಳು. ಅಷ್ಟು ಮಾತ್ರವಲ್ಲ ಸಂಘಟನೆಯ ಒಳಗಿನ ತೀವ್ರವಾದಿಗಳ ಗುಂಪು ಸಹಾರನ್ನು ಆಗಾಗ ವಿರೋಧಿಸುತ್ತಲೇ ಬಂದಿತ್ತು. ಅದರಲ್ಲಿ ಮುಂಚೂಣಿಯಲ್ಲಿದ್ದವನೂ ಆಗಿದ್ದನು. ಸಹಾರನ್ನು ತಾತ್ವಿಕವಾಗಿ ಒಪ್ಪದ ಅವರ ನಾಯಕತ್ವವನ್ನು ಒಪ್ಪದೇ ಹೋಗಿತ್ತು. ಅಂಥಾ ಎಲ್ಲರನ್ನೂ ವಲ್ಲಿ ಒಂದೆಡೆಗೆ ಸೇರಿಸತೊಡಗಿದ್ದಳು.  ಸಂಘಟನೆಯ ಮೀಟಿಂಗ್‌ಗಳಲ್ಲಿ, ಸಮಾವೇಶಗಳಲ್ಲಿ ಬಹಿರಂಗವಾಗೇ ಸಹಾರ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ ಮುನಿಯಪ್ಪನ ನಿಲುವು ವಲ್ಲಿಯ ಸೇಡಿನ ಕಿಡಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರ ಸೂಚನೆಯಂತೂ ನೀಡಿಬಿಟ್ಟಿತ್ತು. ಎಲ್ಲರೂ ಸೇರಿ ಸಹಾರ ಜೊತೆಗಿನ ಅವರ ತಿಕ್ಕಾಟಕ್ಕೆ ನಿರ್ದಿಷ್ಟವಾದ ಸ್ವರೂಪವನ್ನು ನೀಡಲು ನಿರ್ಧರಿಸಿಬಿಟ್ಟಿದ್ದರು.

ಒಮ್ಮೆ ಸಹಾರನ್ನು ಹುಡುಕಿ ಒಬ್ಬ ಹಳ್ಳಿಯವ ಬಂದಿದ್ದ. ಹಿಂದೊಮ್ಮೆ ಆತನ ಹಳ್ಳಿಯ ಪಕ್ಕದಲ್ಲಿ ಹರಿಯುತ್ತಿದ್ದ ನದಿಯಲ್ಲಿ ಪ್ರವಾಹ ಬಂದು ಹಳ್ಳಿ ಹಳ್ಳಿಯೇ ಕೊಚ್ಚಿ ಹೋಗಿತ್ತು. ಪ್ರತಿಸಲ ನೆರೆ ಬಂದಾಗಲೂ, `ಏನಾದರೂ ವ್ಯವಸ್ಥೆ ಮಾಡಿಕೊಡಿ’ ಎಂದು ಆ ಊರವರು ಸರಕಾರದ ಎದುರು ಹೋಗುತ್ತಿದ್ದರು. `ಮನೆ ಖಾಲಿ ಮಾಡಿಬಿಡಿ’ ಎಂದರೆ ಜನ ಕೇಳುತ್ತಲೂ ಇರಲಿಲ್ಲ. `ನಾವು ನಂಬಿದ ತಾಯಿ ಈ ನದಿ. ಇವಳು ನಮ್ಮ ಬದುಕನ್ನು ಮುಳಿಗಿಸೊಲ್ಲ, ನಮಗೆ ಇಲ್ಲಿಂದ ಹೋಗುವಂತೆ ಹೇಳಬೇಡಿ’ ಎಂದು ಅಲವತ್ತುಕೊಳ್ಳುತ್ತಿದ್ದರು. ಆದರೆಭಯಂಕರ ನೆರೆಯಲ್ಲಿ ಊರಿಗೂರೇ ಕೊಚ್ಚಿಹೋದಾಗ ಇನ್ನು ನೀವು ಅಲ್ಲಿರೋದು ಬೇಡ ಎಂದು ಸರಕಾರದ ಜೊತೆ ಮಾತಾಡಿ ಸಹಾರೇ ಅವರಿಗೆಲ್ಲಾ ಸರಕಾರಿ ಜಾಗವನ್ನು ಕೊಡಿಸಿದ್ದರು. ಅದಕ್ಕೆ ಬೇಕಾದ  ಡಿನೋಟೀಸನ್ನೂ ಕೂಡಾ ಸರಕಾರದಿಂದ ಕೊಡಿಸಿಕೊಟ್ಟಿದ್ದರು. ಅದನ್ನು ನಂಬಿದ ಜನ ಪದೇ ಪದೆ ನದಿಯಪ್ರವಾಹಕ್ಕೆ ತುತ್ತಾಗುವ ಬದಲು ಸರಕಾರದ ಜಾಗದಲ್ಲಿ ಮನೆ ಕಟ್ಟಿಕೊಳ್ಳುವುದು ಲೇಸೆಂದು ಭಾವಿಸಿದರು. ಪರಿಣಾಮ ಇಂದು ಅದೊಂದು ಹಳ್ಳಿಯ್ಯೇ ಆಗಿಬಿಟ್ಟಿದೆ. ಇದೆಲ್ಲಾ ಆಗಿ ಬಹುಕಾಲವೇ ಕಳೆದುಹೋಗಿತ್ತು. ಆದರೆ ಈಗ ಆ ಹಳ್ಳಿಯವ ಬಂದದ್ದು ಬೇರೆಯದೇ ಕಾರಣಕ್ಕೆ. ಈಗ ಆ ಜಾಗವನ್ನೂ ಖಾಲಿ ಮಾಡುವಂತೆಯೂ ಅದನ್ನು ಸರಕಾರ ಫ್ಯಾಕ್ಟರಿಯೊಂದಕ್ಕೆ ಮಾರಿರುವುದಾಗಿಯೂ ಸುದ್ದಿಯಾಗಿಬಿಟ್ಟಿತ್ತು. ಒಂದು ನೋಟೀಸನ್ನು ಇಂಗ್ಲೀಷ್‌ನಲ್ಲಿ ಕಳಿಸಲಾಗಿತ್ತು. ಅಕ್ಷರ ಬಾರದ ಜನರಿಗೆೆ ಬಂಡವಾಳಶಾಹಿಗಳ ಜೊತೆ ಸೇರಿದ ಅಧಿಕಾರಿಗಳು ಬಡವರನ್ನು ತುಳಿಯುತ್ತಿದ್ದರು. ರಿಜಿಸ್ಟರ್ ಪತ್ರವಾದ್ದರಿಂದ ಸಹಿ ಹಾಕಲೇಬೇಕು. ಸಹಿ ಹಾಕಿದ ಮೇಲೆ ಪತ್ರ ತಲುಪಿದ ಲೆಕ್ಕವೇ. ಅದನ್ನ ಓದಿಸಲು ಜನರನ್ನು ಹುಡುಕಬೇಕು. ಅಷ್ಟರಲ್ಲಿ ಅಧಿಕಾರಿಗಳು ಜಾಗವನ್ನು ತೆರವು ಮಾಡಿಸತೊಡಗಿದ್ದರು. ಊರು ಕೇರಿ ಬಿಟ್ಟು ಬಂದ ಜನರಿಗೆ ಈಗ ತಾವಿರುವ ಜಾಗ ಕೂಡಾ ತಮ್ಮದಲ್ಲ ಅಂತಾಗಿಬಿಟ್ಟರೆ ಬದುಕುವುದಾದಾರೂ ಎಲ್ಲಿ? ಇದನ್ನು ಹೇಗಾದರೂ ಸರಿ ತಡೆಯುವುದು ಬೇಕಿತ್ತು. `ಅಧಿಕಾರಕ್ಕೆ ಕರುಣೆ ಬೇಡವೇ’ ಎಂದು ಸಹಾ ತಾನು ಮಾತನಾಡುವುದಾಗಿ ಆ ವ್ಯಕ್ತಿಗೆ ಹೇಳಿ ಕಳಿಸಿದ್ದರು.

ಹೀಗೆ ಶುರುವಾದ ಹೋರಾಟ ಬೇರೆಯದೇ ತಿರುವನ್ನು ತೆಗೆದುಕೊಂಡು ಬಿಟ್ಟಿತ್ತು. ಭೂಮಿಯ ಹೋರಾಟದ ಜೊತೆ ಜೊತೆಗೆ ಜನಕ್ಕೆ ಬಾರದ ಇಂಗ್ಲೀಷ್‌ನಲ್ಲಿ ಪತ್ರ ಬಂದಿದ್ದಕ್ಕೆ ಸಹಾ ಕೆಂಡಾ ಮಂಡಲ ಆಗಿದ್ದರು. `ಆಳುವವನ ಪುಂಡಾಟಕ್ಕೆ ಕಣ್ಣೀರಾಗಿದೆ ಹಳ್ಳಿ, ಕಾಣದ ಕೈಗಳಲ್ಲಿ ಕಾನೂನುಗಳು ಹುದುಗಿ ಮುಚ್ಚಿ ಹೋಗಿದೆ ಅಂತಃಕರಣದ ಕಣ್ಣು’ ಎಂದು ತಕ್ಷಣ ಪದ್ಯ ಬರೆದು ನನಗೆ ಇದಕ್ಕೆ ರಾಗ ಹಾಕು ಎಂದಿದ್ದರು. ನಾನು ಹಗಲು ರಾತ್ರಿ ಕೂತು ರಾಗ ಹಾಕಿ ಅವರ ಮುಂದೆ ಹಾಡಿದೆ. ಅವರಿಗೆ ಮೆಚ್ಚುಗೆಯಾಯಿತು. 

ಈ ಹೊತ್ತನ್ನು ಕಾಯುತ್ತಿದ್ದ ಸಹಾರನ್ನು ವಿರೋಧಿಸುವ ಗುಂಪು ಎದ್ದು ನಿಂತುಬಿಟ್ಟಿತ್ತು. ಯಾವ ಸರಕಾರಿ ವ್ಯವಸ್ಥೆ ಜನವಿರೋಧಿಯಾದಾಗ ಅದನ್ನು ದಾರಿಗೆ ತರಬೇಕಿದ್ದ ಸಂಘಟನೆಯ ಮುಖಂಡರು ವ್ಯವಸ್ಥೆಯ ಜೊತೆ ಶಾಮೀಲಾಗುತ್ತಾರೋ ಆಗೆಲ್ಲಾ ನಡೆಯುವುದು ಇಂಥಾದ್ದೇ ಘಟನೆ ಎಂದು ಹಬ್ಬಿಸತೊಡಗಿದ್ದರು. ಸಹಾ ಮತ್ತು ಮಿನಿಸ್ಟರ್ ಪ್ರಸಾದರ ನಡುವಣ ಗೆಳೆತನವೇ ಅವರನ್ನು ವಿರೋಧ ಮಾಡದಂತೆ ಮಾಡಿಬಿಟ್ಟಿದೆ ಎಂದು ಪುಕಾರನ್ನು ಹಬ್ಬಿಸಿಬಿಟ್ಟರು. ಇಲ್ಲದಿದ್ದರೆ ಭೂಮಿಯನ್ನು ಕೊಡಿಸಿದಂತೆ ಮಾಡಿದ ಸಹಾರಿಗೆ ಗೂತ್ತಿಲ್ಲದೆ ಸರಕಾರವೇ ಕಸಿದುಕೊಳ್ಳುವುದು, ಅದರಲ್ಲೂ ಹೋರಾಟದ ಮುಂಚೂಣಿಯಲ್ಲಿದ್ದವರಿಗೆ ಗೊತ್ತಾಗದೇ ಆಗಲು ಎಲ್ಲಾದರೂ ಸಾಧ್ಯವೇ? ಎಲ್ಲಾ ಗೊತ್ತಿದ್ದೂ ಸಹಾ ಸುಮ್ಮನಿದ್ದಾರೆ ಎಂದರೆ ತಮ್ಮ ಮತ್ತು ಮಿನಿಸ್ಟರ್ ನಡುವಣ ಸ್ನೇಹಕ್ಕೆ ಋಣಸಂದಾಯ ಮಾಡುತ್ತಿದ್ದರೆ ಎಂದಲ್ಲವೆ? ಎಂದೆಲ್ಲಾ ಮಾತನಾಡಿದ್ದರು. ಸಹಾರ ಮನಸ್ಸು ನೊಂದಿತ್ತು. ಖಂಡಿತಾ ಅವರಿಗೆ ಅಂಥಾ ಉದ್ದೇಶ ಇರಲಿಲ್ಲ. ಆದರೆ ವಿರೋಧಿಗಳಿಗೆ ಸಂಘಟನೆಯ ಅವರ ನಾಯಕತ್ವ ಪ್ರಶ್ನಾತೀತವಲ್ಲ ಎನ್ನುವುದನ್ನು ತಿಳಿಸಬೇಕಿತ್ತು. ಮತ್ತು ಸಹಾರ ನಾಯಕತ್ವದಲ್ಲಿ ಲೋಪದೋಷಗಳಿವೆ ಎಂದು ಜನತೆಗೆ ಹೇಳಬೇಕಿತ್ತು. ಒಂದು ಸಣ್ಣ ಕಿಡಿ ಹೊತ್ತುವುದನ್ನೇ ಕಾಯುತ್ತಾ ಗಾಳಿಯಾಡಲು ಅನುವು ಮಾಡಿಕೊಟ್ಟು ಬೆಂಕಿಯಾಗುವುದಕ್ಕೆ ಆಶಿಸುತ್ತಾ ಕುಳಿತಿದ್ದರು ಆ ಗುಂಪಿನ ಜನ.     

ಸಹಾಗೆ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಒಂದು ಕಡೆ ಮುಗ್ಧ ಜನರ ಭೂಮಿಯನ್ನು ಕಸಿದುಕೊಳ್ಳಲು ನಿಂತಿದ್ದ ಬಂಡವಾಳಶಾಹಿ ಜಗತ್ತು, ಮತ್ತೊಂದು ಕಡೆ ತಮ್ಮ ವಿರುದ್ಧ ತಮ್ಮದೇ ಸಂಘಟನೆಯ ಜನ ನಿಂತಿದ್ದು ಅವರನ್ನು ಹೈರಾಣಾಗಿಸಿತ್ತು. ಇದನ್ನು ಮಾತುಕಥೆಯಿಂದ ಬಗೆಹರಿಸಿಕೊಳ್ಳುವಂತೆ ಅನೇಕ ಸಲಹೆಗಳು ಬಂದವಾದರೂ, ಅದನ್ನು ತೆಗೆದುಕೊಳ್ಳಲಿಕ್ಕೆ ಸಹಾ ಮುಂದಾಗಲಿಲ್ಲ. ಸಂಘಟನೆ ಮತ್ತು ತನ್ನ ಅಸ್ತಿತ್ವದ ಪ್ರಶ್ನೆಗಳನ್ನು ಅವರು ಎಂದೂ ಪಕ್ಕಕ್ಕೆ ಸರಿಸಿದವರೇ ಅಲ್ಲ. ತೀರಾ ಖಾಸಗಿಯಾಗಿ ಭೇಟಿಯಾಗಿ ಎಲ್ಲವನ್ನೂ ಬಗೆಹರಿಸಿಕೊಂಡು ಬಿಟ್ಟರೆ ತಮ್ಮ ಮೇಲೆ ಬಂದ ಆರೋಪಕ್ಕೆ ಉತ್ತರ ಕೊಡುವವರು ಯಾರು? ಎನ್ನುವ ಕಾರಣಕ್ಕೆ ಮಿನಿಸ್ಟರ್ ಪ್ರಸಾದರ ಮನೆಯ ಮುಂದೆ ಧರಣಿ ಕುಳಿತುಬಿಟ್ಟರು. ಪತ್ರಿಕೆಗಳು ವರದಿ ಮಾಡಿದವು. ಪ್ರಸಾದರು ಇದರಿಂದ ಕೋಪಗೊಂಡಿದ್ದರು. `ನನ್ನ ಮನೆಯ ಮುಂದೆ ಧರಣಿ ಮಾಡ್ತ ಇದೀಯಲ್ಲಾ? ನಾನು ನಿಮಗೆಲ್ಲಾ ಎಷ್ಟು ಸಹಾಯ ಮಾಡಿದ್ದೀನಿ’ ಅಂತ ಕೇಳಿದರಂತೆ. ಸಹಾ ಬಗ್ಗಲಿಲ್ಲ. ಪ್ರಸಾದರ ಕೋಪ ಏರತೊಡಗಿತ್ತು. ಸ್ನೇಹಕ್ಕೆ ಅವನು ಬೆಲೆ ಕೊಟ್ಟಿಲ್ಲ ಅಂದಮೇಲೆ ನಾನ್ಯಾಕೆ ಕೊಡಬೇಕು ಎಂದರಂತೆ ತಿಳಿದವರ ಎದುರು. ಸಹಾ ದಿನಕ್ಕೊಂದು ಸ್ಲೋಗನ್, ದಿನಕ್ಕೊಂದು ಹಾಡು ಬರೆದೇ ಬರೆದರು. ಮಿನಿಸ್ಟರ್ ತಮಗೆ ಬೆಲೆ ಕೊಡದ ಕಾರಣ ತಮ್ಮೆಲ್ಲಾ ಅಧಿಕಾರವನ್ನು ಬಳಸಲಿಕ್ಕೆ ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದರು. ಅಧಿಕಾರವೇ ಹಾಗಲ್ಲವೇ ತಮ್ಮ ಸ್ಥಾನ ನೆನಪಿಸಿಕೊಂಡ ತಕ್ಷಣ ಅಹಂ ಎದ್ದು ಕುಳಿತುಬಿಡುತ್ತದೆ. ಜೊತೆಯಲ್ಲೇ ಇದ್ದವರು, ಒಂದೇ ಸಿದ್ಧಂತಕ್ಕೆ ದುಡಿದವರು, ಒಟ್ಟೊಟ್ಟಿಗೆ ನಕ್ಕವರು, ಅತ್ತವರು ಅಭಿಪ್ರಾಯ ಭೇದದಿಂದ ಹೀಗೇ ದ್ವೇಶಿಗಳೇ ಎನ್ನುವ ಹಾಗೆ ಆಗಿಬಿಡುತ್ತಾರೆ.

ಸಹಾ ಮತ್ತು ಪ್ರಸಾದರು ಸಂಬAಧ ಇಂದು ನೆನ್ನೆಯದಲ್ಲ. ಸಂಘಟನೆ ಆರಂಭವಾಗಿ ಕೈಲೇ ಬರೆಯುತ್ತಿದ್ದ ಕರಪತ್ರಗಳ ಕಾಲದಿಂದ ಪ್ರಿಂಟ್ ಮಾಡಿ ಹಂಚುವ ಕಾಲಾದವರೆಗೂ ಅವ್ಯಾಹತವಾಗೆ ನಡೆದೇ ಬಂದಿತ್ತು. ಪತ್ರಿಕೆ ಮಾಡಲು ಹೋಗಿ ಸಹಾ ಕೈ ಸುಟ್ಟುಕೊಂಡಾಗ ತನ್ನದೇ ಜನರು ತಮಗೆ ಗೊತ್ತಿಲ್ಲದಂತೆ ಮೋಸದ ಮೇಲೆ ಮೋಸ ಮಾಡಿ ಲಾಸ್ ಆದಾಗ, ಆದ  ಸಾಲಕ್ಕೆ ಸಹಾ ಮನೆಯನ್ನು ಅಡ ಇಡಲು ಮುಂದಾಗಿದ್ದರು. ಲಲಿತಕ್ಕ ಕೂಡಾ ಅದಕ್ಕೆ  ವಿರಿದ್ಧ ಹೇಳಿರಲಿಲ್ಲವಾದರೂ, ಗಂಡನನ್ನು ಸಂಕಷ್ಟದಿಂದ ತಪ್ಪಿಸಲಿಕ್ಕೆ ಪ್ರಸಾದರ ಮೊರೆ ಹೋಗಿದ್ದರು. `ಏನು ಮಾಡುವುದು ಪ್ರಸಾದೂ ನಮ್ಮ ನಂಬಿಕೆಗಳು ನಮಗೆ ಹೀಗೆ ಹೊಡೆತ ಕೊಡುತ್ತವೆ ಅಂದುಕೊಳ್ಳಲಿಲ್ಲ’ ಎಂದ ಸಹಾರಿಗೆ, ಧೈರ್ಯ ತುಂಬಿ ನಿನ್ನ ಕಷ್ಟಕ್ಕೆ ಸಹಾಯವಾಗುವಂತೆ ಮಾಡುತ್ತೇನೆ. ನೀನು ಸುಮ್ಮನೆ ಒಂದು ಸೈಟ್‌ಗಾಗಿ ಅರ್ಜಿ ಹಾಕು, ನನ್ನ ಹೆಸರಲ್ಲಿ ಮನೆ ಇಲ್ಲವೆಂದು ಮುಂದಿನದ್ದೆಲ್ಲ ನಾನು ನೋಡಿಕೊಳ್ಳುತ್ತೇನೆ ಎಂದಿದ್ದರು ಪ್ರಸಾದ್. ಅಂಥಾ ಸ್ನೇಹ ಅವರಿಬ್ಬರ ಮಧ್ಯೆ.

ಅರ್ಜಿ ಹಾಕಿ ಸರ್ಕಾರ ಕವಿ ಕಲಾವಿದರಿಗಾಗಿ ಮೀಸಲಿಟ್ಟು ಅತ್ಯಂತ ಕಡಿಮೆ ಬೆಲೆಗೆ  ಕೊಟ್ಟ ಸೈಟ್‌ಅನ್ನು ಮಾರದೆ ಸಹಾ ಹಾಗೇ ಉಳಿಸಿಕೊಂಡಿದ್ದರು. ಅದರ ಬ್ಬೆಲೆ ಇವತ್ತು ಏನಿಲ್ಲವದರೂ ಕೋಟಿಗಳಲ್ಲಿದೆ ಎಂದು ಯಾವಾಗಲಾದರೂ ಅವರು ಹೆಮ್ಮೆಯಿಂದ ಹೇಳುತ್ತಿದ್ದರು. ನಿಮಗೂ ಆಸ್ತಿ ಮಾಡುವ ಹುಚ್ಚು ಬಂತಾ? ಎಂದು ರೇಗಿಸಿದ್ದೆ. ಪೇಪರ್ಗಾಗಿ ಹೂಡಿಕೆ ಮಾಡಿದವರು ಹೋಗಲಿ ಎಂದು ಹಿಂದೆ ಸರಿದರು. ಮೋಸ ಮಾಡಿ ಹಣ ಮಾಡಿಕೊಂಡವರು ಮನೆಯ ಮೇಲೆ ಮನೆ ಕಟ್ಟಿದರು. `ಪತ್ರಿಕೆಯ  ಹೆಸರಲ್ಲಿ ಸುಳ್ಳು ಅಫಿಡವಿಟ್ಟ್ ಕೊಟ್ಟು, ಸಹಾ ಸೈಟು ಹೊಡೆದರು’ ಎಂದು ಎಲ್ಲರೂ ಆಡಿಕೊಂಡರು. ನನಗಿನ್ನೂ ಅಚ್ಚರಿಯೇ. ಸಂಘಟನೆ, ಹೋರಾಟದ ಮಧ್ಯೆಯಿಂದ ಎದ್ದು ಬಂದವರು ಆಸ್ತಿಗಾಗಿ ಹೀಗೆಲ್ಲಾ ಮಾಡುತ್ತಾರೆಯೇ? ತಮಗಾಗಿ ಏನನ್ನು ಮಡಿಕೊಳ್ಳದ ಕಡೇ ಪಕ್ಷ ಒಂದು ಸೈಟ್ ಕೂಡಾ ಇಲ್ಲದ ಎಷ್ಟು ಜನ ಕಾರ್ಯಕರ್ತರು ತಮ್ಮ ಬದುಕುಗಳನ್ನು ರೂಪಿಸಿಕೊಳ್ಲದೆ ಒದ್ದಾಡುತ್ತಿದ್ದಾರಲ್ಲಾ ಎಂದು. ತಪುö್ಪ ಸರಿಗಳು ಅವರವರ ಅಗತ್ಯ ಎಂದು ನಾನು ಭಾವಿಸಲ್ಲ. ಅದು ಏನಿದ್ದರೂ ನೈತಿಕತೆಯ ಪ್ರಶ್ನೆ. ಆದರೆ ಸಹಾರಾ ಸ್ಟಾçಟಜ್ಜಿಯೇ ಬೇರೆ. ಅವರಿಗೆ ಕೆಲವೊಮ್ಮೆ ಜಾಣ ಕಿವುಡು ಮತ್ತೆ ಕೆಲವೊಮ್ಮೆ ಜಾಣ ಕುರುಡು. ಹೀಗೆ ಮಾಡ್ತಾರಂತೆ ಹಾಗೇ ಮಾಡ್ತಾರಂತೆ ಇದನ್ನು ಕೋರ್ಟಿಗೆ ತೆಗೆದುಕೊಂಡು ಹೋಗುತ್ತಾರಂತೆ… ಹೆಂಡತಿಯ ಹೆಸರಲ್ಲಿ ಮನೆಯಿದ್ದೂ ತನಗೆ ಮನೆಯಿಲ್ಲ ಎಂದು ಸೈಟ್ ತೆಗೆದುಕೊಂಡರAತೆ… ಎಂದೆಲ್ಲಾ ಹೇಳುವಾಗ, `ಹೌದಾ ಏನಾಗುತ್ತೆ ಅಂತ ನೋಡಿ ನನಗೆ ಹೇಳಿ’ ಎಂದೆಲ್ಲಾ ಆಸಕ್ತಿಯಿಂದ ಕೇಳುತ್ತಿದ್ದರು. ಅದು ತನ್ನ ಮೇಲೆ ಏನಾದರೂ ಪರಿಣಾಮ ಬೀರುತ್ತದೆ ಎನ್ನುವ ಗಾಬರಿಯೋ ಕುತೂಹಲವೋ ತಿಳಿಯದು. ನಂತರ, `ಇರಲಿ ಬಿಡಿ, ಅದ್ಯಾವ ದೊಡ್ದ ವಿಷಯ??’ ಎಂದುಬಿಡುತ್ತಿದ್ದರು. ವಿಚಿತ್ರ ಅನ್ನಿಸುತ್ತಿತ್ತು. ಪ್ರಸಾದರಿಗೆ ಹೇಳಿಕೊಡುವವರೂ ಬಹುಮಂದಿ ಇದ್ದರು. ಸಹಾರ ವಿರೋಧಿ ಗುಂಪು ಮೆಲ್ಲಗೆ ಒಳಗೇ ಒಗ್ಗೂಡುತ್ತಿತ್ತಲ್ಲ, ಅವರು ಸುಮ್ಮನಿರುತ್ತಾರೆಯೇ? ಪರಿಣಾಮ `ನಾನಿವನಿಗೆ  ಇಂಥಾ ಸಹಾಯ ಮಾಡಿದರೂ ನನ್ನ ಮನೆಯ ಮುಂದೆ ಕುಳಿತು ನನ್ನ ಮರ್ಯಾದೆ ತೆಗೆಯುತ್ತಿದ್ದಾನಲ್ಲಾ?’ ಎನ್ನುವ  ಕೋಪ ಮುನ್ನೆಲೆಗೆ ಬಂದುಬಿಟ್ಟಿತ್ತು.           

ಮೂರನೆಯ ದಿನ ಬೆಳಬೆಳಗ್ಗೇನೆ ಪೊಲೀಸರಿಗೆ ಹೇಳಿ ಧರಣಿಗೆ ಕೂತವರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದರಂತೆ ಮಿನಿಸ್ಟರ್. ಸಹಾ ಅವತ್ತು ತಡಮಾಡಿ ಹೊರಟಿದ್ದರಿಂದ ಅಲ್ಲಿಗೆ ಹೋಗುವುದರ ಒಳಗೆ ಎಲ್ಲಾ ನಡೆದಿತ್ತ್ತು. ಹೊಡೆತ ತಿಂದವರು ಆಸ್ಪತ್ರೆಯಲ್ಲಿದ್ದರು, ಇನ್ನು ಸಣ್ಣ ಪುಟ್ಟ ಗಾಯಗಳಾದವರು ಮನೆಗೆ ಹೋಗಿದ್ದರು. ಮಿಕ್ಕವರು ಚೆಲ್ಲಾಪಿಲ್ಲಿಯಾಗಿದ್ದರು. ವಿಷಯ ತಿಳಿದು, `ಹೌದಾ ಪ್ರಸಾದು ಹಾಗೆಲ್ಲಾ ಮಾಡಿದನಾ? ನಡೀರೀ ನಾನೂ ನಿಮ್ಮ ಜೊತೆ ಧರಣಿ ಕೂಡ್ತೀನಿ, ನನ್ನನ್ನೂ ಹೊಡೆಸಲಿ ನೋಡ್ತೀನಿ’ ಎಂದಿದ್ದರು ಸಹಾ. `ನಾಳೆ ನಿಮ್ಮ ಪ್ರಸಾದರ ಸಂಬAಧ ಏನಾಗುತ್ತೆ? ಇದರ ಬದಲು ನೀವು ಅವರನ್ನ ಮಾತಾಡಿ ಎಲ್ಲವನ್ನೂ ಸರಿ ಮಾಡಬಹುದಲ್ಲಾ?’ ಎಂದು ಕೇಳಿದ್ದೆ. `ಚೈತನ್ಯ ಹೋರಾಟವೇ ಬೇರೆ ವೈಯಕ್ತಿಕ ಸಂಬAಧವೇ ಬೇರೆ. ಅವರು ಹಾಗೆ ಮಾತಾಡಿದ್ರೆ ಅದು ತಪ್ಪೇ. ವ್ಯವಸ್ಥೆಯ ಭಾಗವಾದ ಮೇಲೆ ಅಲ್ಲಿ ನಡಿಯುವ ಅನಾಚಾರಗಳಿಗೆ ಅವರೇ ತಾನೆ ಹೊಣೆ. ಯಾವತ್ತೋ ನಮ್ಮ÷ಜೊತೆ ಚೆನ್ನಾಗಿದ್ದೆ ಎಂದು ಹೇಳಿಬಿಟ್ಟರೆ ಈಗ ಮಾಡಿರುವ ತಪುö್ಪಗಳು ಅಳಿಸಿ ಹೋಗುತ್ತವೆಯೇ? ಇದು ಬರೀ ಅವನಿಗೆ ಮಾತ್ರವಲ್ಲ, ಎಲ್ಲ ರಾಜಕಾರಣಿಗಳಿಗೂ ಅರ್ಥವಾಗಬೇಕು’ ಎಂದಿದ್ದರು. ಈಗಲೂ ನನಗೆ ಆ ಮಾತುಗಳು ಕಿವಿಯಲ್ಲಿ ಗುಯ್‌ಗುಡುತ್ತಿವೆ.       

ಸಹಾ ಎಷ್ಟು ಇದರಲ್ಲಿ ಮುಳುಗಿದ್ದರು ಎಂದರೆ ಮಧ್ಯ ರಾತ್ರಿಯಾದರೂ ಎದ್ದೇ ಕುಳಿತಿರುತ್ತಿದ್ದರು. ಬೇಸಿಗೆಯಲ್ಲಿ ಕರೆಂಟು ಹೋಗಿ ನಾನು ಸೆಖೆ ಜಾಸ್ತಿಯಾದರೆ ಕಿಟಕಿ ತೆಗೆಯಲು, ಕತ್ತಲೆಗೆ ಕಣ್ಣು ಹೊಂದಿಸಿಕೊಳ್ಳುತ್ತಾ ಕಿಟಕಿ ತೆರೆಯಲು ಹೋಗುವಾಗ ಅವರು ಹಾಸಿಗೆಯ ಮೇಲೆ ವಿಗ್ರಹದ ಹಾಗೆ ಕೂತಿರುತ್ತಿದ್ದರು. ನಾನು ಗಾಬರಿಯಿಂದ, `ಸಹಾ ಏನಿದು? ಏನಾಯಿತು?’  ಎಂದು ಕೇಳಿದಾಗಲೇ ಅವರಿಗೆ ಮೈಮೇಲೆ ಜ್ಞಾನ. `ಹಾ ಚೇತು ಈಗ ಟೈಂ ಎಷ್ಟು? ನಾಳೆ ನಾನು ಹೀಗೆಲ್ಲಾ ಮಾತಾಡಿದರೆ ಆದೀತೇ’ ಎಂದು ಅಭಿಪ್ರಾಯ ಕೇಳುತ್ತಿದ್ದರು. ಸಹಾ ಇದೆಲ್ಲಾ ಬೆಳಗ್ಗೆ ಯೋಚಿಸಬಹುದಲ್ಲಾ ಈಗ ಮಲಗಿ ಎಂದು ಸಮಾಧಾನ ಮಾಡಿದ್ದೆ. ಅವತ್ತು ಅವರು ಮಗುವಿನ ಹಾಗೆ ನನ್ನ ಪಕ್ಕದಲ್ಲಿ ಮಲಗಿದ್ದರು.

ಸಹಾರ ವಾದವನ್ನು ಯಾರೂ ಅಲ್ಲಗಳೆಯಲು ಸಾಧ್ಯವಾಗ್ತಾ ಇರಲಿಲ್ಲ, ಡಿಸಿಯಾಯ್ತು ಎಂ ಎಲ್ ಎ ಆಯ್ತು ಮಂತ್ರಿ ಮತ್ತು ಮುಖ್ಯಮಂತ್ರಿಗಳ ತನಕವೂ ಹೋಗಿ ಮಾತಾಡಬಲ್ಲವರಾಗಿದ್ದರು. ಅವರದ್ದು ಒಂದೆ ಪಾಯಿಂಟ್ ಮೊದಲು ಇಂಗ್ಲೀಷ್ ಟೈಪ್ ರೈಟರ್‌ಅನ್ನು ತೆಗೆದು ನಮ್ಮ ತಾಯಿ ಭಾಷೆÉಯಲ್ಲಿ ವ್ಯವಹರಿಸಲು ಅನುವಾಗುವಂತೆ ಟೈಪ್‌ರೈಟರ್ ಅನ್ನು ಬದಲಿಸಿ ಎನ್ನುವುದು. ನಮ್ಮ ಹಳ್ಳಿಯಲ್ಲಿ ಈಗ ಚಿಕ್ಕ ಚಿಕ್ಕಮಕ್ಕಳಿಗೂ ಓದು ಬರಹ ಬರುತ್ತದೆ, ಎಲ್ಲಾ ಕಾನ್ವೆಂಟ್‌ನಲ್ಲೇ ಓದುತ್ತಿದ್ದಾರೆ ಎಂದು ಇದ್ಯಾವ ವಿಷಯ ಎಂದು ಯಾರು ಏನು ಹೇಳಿದರೂ ಸಹಾ ಮಾತ್ರಾ ತಮ್ಮ ನಿಲುವಿಗೇ ಅಂಟಿಕೊಂಡರು. ಚಿಕ್ಕ ಮಕ್ಕಳಿಗೆ ಅಕ್ಷರ ಗೊತ್ತು ಅರ್ಥವಲ್ಲ. ಅರ್ಥ ಮಾಡಿಸಲಿಕ್ಕೆ ಇನ್ನೂ ಸಮಯ ಬೇಕು ಎಂದು ವಾದಿಸಿದರು. `ಬರೀ ಟೈಪ್ ರೈಟರ್ ಬದಲಿಸಿದರೆ ಎಲ್ಲ ಸರಿಯಾಗುತ್ತಾ ಸಹಾ’ ಎಂದರೆ, `ಹಾ ಆಗುತ್ತೆ ಆಗೇ ಆಗುತ್ತೆ, ನಮ್ಮ ಜನರನ್ನು ಮೊದಲು ಭಾಷೆಯ ವೇಷದಲ್ಲಿ ವಂಚಿಸುವುದನ್ನು ಬಿಟ್ಟರೆ ಅರ್ಧ ಶೋಷಣೆ ತಪ್ಪಿದ ಹಾಗೇ. ದೇವರನ್ನು ದೊಡ್ದ ದೊಡ್ದ ಹೆಸರನ್ನು ಹೇಳಿ ದೂರವಿಟ್ಟರೆ ಭಯ ಬರುತ್ತೆ. ಅದೇ ಅಮ್ಮಾ ಅಪ್ಪ  ಅಂತ ಕರೀ ಪ್ರೀತಿ ಬರುತ್ತೆ. ಯಾವತ್ತೂ ಅಷ್ಟೇ ವಿಷಯಗಳು ಮೊದಲು ನಮಗೆ ಗೊತ್ತಾಗಬೇಕು, ಅರ್ಥ ಆಗಬೇಕು. ಆಗ ಕಾನೂನಿನ ಅರಿವೂ, ಅದನ್ನು ಬಳಸಿಕೊಳ್ಳುವ ದಾರಿಗಳೂ ಗೋಚರವಾಗುತ್ತದೆ. ಕ್ರಾಂತಿಯ ಮೊದಲ ಹೆಜ್ಜೆ ಇಂಥಾ ಕಡೆಗೇ ಶುರುವಾಗುವುದು’ ಎನ್ನುತ್ತಿದ್ದರು. ಅವರು ಯಾವಾಗಲೂ ಇಂಥಾದ್ದನ್ನೇ ನಿರೀಕ್ಷೆ ಮಾಡ್ತಾ ಇದ್ದರು. ಈ ನಾಡಿನಲ್ಲಿ ಯಾವ ಕಾನೂನೇ ಇರಲಿ, ಅದಿರುವುದೇ ಜನಗಳಿಗೋಸ್ಕರ ಅನ್ನುವುದು ಅವರ ನಿಲುವಾಗಿತ್ತು. ಅದಕ್ಕೇ ಮೂಲದಲ್ಲೇ ಬದಲಾವಣೆ ಆಗಬೇಕಿತ್ತು. ಹೀಗಾಗಿ ಸಹಾರ ಪಟ್ಟು  ದೊಡ್ಡ ಸುದ್ದಿಯಾಗಿಬಿಟ್ಟಿತ್ತು. ಅಧಿಕಾರಿಗಳು ಜನರನ್ನು ಮೋಸ  ಮಾಡಲಿಕ್ಕೆ ಹೇಗೆಲ್ಲಾ ದುರ್ಬಳಕೆ ಮಡುತ್ತಾರೆ ಎನ್ನುವ ಚರ್ಚೆ ಜನಸಾಮಾನ್ಯರ ಮಧ್ಯೆ ನಡೆಯತೊಡಗಿತ್ತು.

ಜನಕ್ಕೆ ದಕ್ಕುವ ಒಂದು ಗೆಲುವು ಎಲ್ಲರನ್ನೂ ಭಾವೋದ್ವೇಗಕ್ಕೆ ಒಳಗು ಮಾಡುತ್ತದೆ. ಸಹಾ, ಪ್ರಸಾದರ ಮನೆಯ ಮುಂದೆ ಮತ್ತೆ ಎಲ್ಲರ ಜೊತೆ ಧರಣಿ ಕುಳಿತರು. ಪ್ರಸಾದರು ಹೇಳಿಕಳಿಸಿದರು ಸಹಾ ಒಳಗೆ ಹೋಗಲಿಲ್ಲ. ಕಡೆಗೆ ಪ್ರಸಾದರು ಹೊರಗೆ ಬಂದು ಮಾತಾಡಿ, `ಅಲ್ಲಪ್ಪಾ ನೀನು ನಮ್ಮವನು ನೀನೂ ಹೀಗಾದ್ರೆ ಹೇಗೆ?’ ಎಂದಿದ್ದರು. `ನಾನು ಎಲ್ಲರಿಗೂ ಸೇರಿದವನು, ನೀನೂ ಕೂಡಾ. ಹೀಗಾಗಿ ನಾವು ಮಾತಾಡಬೇಕಾದ್ದು ಮುಕ್ತವಾಗಿ ಮತ್ತು ಎಲ್ಲರ ಒಳಿತನ್ನು ಕುರಿತು ಅನ್ನೋದನ್ನ ಮರೆಯಬಾರದು’ ಎಂದರು ಸಹಾ. ಇಬ್ಬರ ನಡುವಣ ಮಾತು ಜುಗಲ್‌ಬಂದಿಯ ಹಾಗೆ ಅನ್ನಿಸಿತ್ತು. ಕೊನೆಗೆ ಎಲ್ಲ ಸಾರ್ವಜನಿಕ ಪತ್ರವ್ಯವಹಾರಗಳೂ ನೆಲದ ಭಾಷೆಯಲ್ಲೇ ಆಗಬೇಕು ಎನ್ನುವ ಆದೇಶವನ್ನು ಹೊರಡಿಸಲು ಇದರಿಂದ ಸಾಧ್ಯವಾಯಿತು. ಮತ್ತು ಅಧಿವೇಶನದಲ್ಲಿ ದೊಡ್ಡ ಚರ್ಚೆಗಳೇ ನಡೆದು, ಕೈಗಾರಿಕೆಗಾಗಿ ಜನರ ಜಾಗವನ್ನು ಕೊಡುವುದೂ ರದ್ದಾಯಿತು. ಸಹಾರ ಈ ಒಂದು ನಿಲುವು ಹಿಂದೆಂದಿಗಿಂತಲೂ ಹೆಚ್ಚಾದ ಕಾವಂತಾಯಿತು. ಎಲ್ಲರೂ ಅವರ ಮಾನವೀಯತೆಯ ಮುಖವನ್ನು ಎತ್ತಿ ಹಿಡಿದು ಕೊಂಡಾಡತೊಡಗಿದರು. ಸಹಾರ ವಿರೋಧಿ ಬಣಕ್ಕೆ ಇದರಿಂದ ಮುಖಭಂಗವಾಗಿತ್ತು. ಅವರು ಯಾವುದಕ್ಕೆ ಕಾಯುತ್ತಿದ್ದರೋ ಅದಾಗದೆ ಮತ್ತೆ ಜನ ಸಹಾರನ್ನು ಬಯಸುತ್ತಿದ್ದುದು ಅವರಿಗೆ ನಿರಾಸೆಯನ್ನುಂಟು ಮಾಡಿತ್ತು.

‍ಲೇಖಕರು avadhi

September 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: