ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಸಂಬಂಧಕ್ಕೊಂದು ಸುಂದರ ಚೌಕಟ್ಟು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

29

ʻಅಮ್ಮಾ ಪಪ್ಪನ ಪ್ಯಾಂಟೂ ಷರಟುಗಳನ್ನು ಐರನ್‌ಗೆ ಕೊಡುʼ ಎಂದು ಆಶಾ ಕೂಗಿದಾಗಲೇ ವಲ್ಲಿಯ ವಿಷಯದಿಂದ ಹೊರಬಂದದ್ದು. ಒಲೆಯ ಮೇಲೆ ಮೀನಿನ ಸಾರು ಕುದಿಯುತ್ತಿತ್ತು. ಅವಳು ಯಾಕೆ ಕೇಳುತ್ತಿದ್ದಾಳೆ ಎನ್ನುವುದು ಗೊತ್ತು. ಆದರೆ ಅದು ಆಗುವುದಿಲ್ಲ ಎನ್ನುವುದನ್ನು ಮಾತ್ರ ನಾನು ಅವಳಿಗೆ ಹೇಳಲಾರೆ. ಆಶಾ ಮಾತ್ರ ಬೀರುವಿನಲ್ಲಿದ್ದ ಎಲ್ಲ ಬಟ್ಟೆಗಳನ್ನೂ ಕಲ್ಲಾಬಿಲ್ಲಿ ಮಾಡಿ, ʻಅಮ್ಮಾ ಪಪ್ಪಾಗೆ ಒಂದು ಜೊತೆ ಒಳ್ಳೆಯ ಬಟ್ಟೆ ಕೊಡಿಸಬೇಕುʼ ಎನ್ನುತ್ತಾ ಅಡುಗೆಮನೆಗೆ ಬಂದಳು. ನಾನು ಖೇದದಿಂದ, ʻನಿಮ್ಮ ಪಪ್ಪನಿಗೆ ನೀನು ಒಳ್ಳೆ ಬಟ್ಟೆ ಕೊಡಿಸಿದ ದಿನ ಒಂದು ದೊಡ್ಡ ಪ್ರಳಯ ಆಗಿಬಿಡುತ್ತೆʼ ಎಂದೆ. ʻಅಮ್ಮ ಪಪ್ಪಗೇ ಏನು ಕಡಿಮೆ? ಯಾಕಿಂತ ಬಟ್ಟೆಗಳನ್ನ ಹಾಕಿಕೊಳ್ತಾರೆ? ಇರೋಕ್ಕೆ ಒಳ್ಳೆಮನೆ ಬೇಕು, ತಿನ್ನೋಕ್ಕೆ ಒಳ್ಳೆ ಊಟ. ಆದ್ರೆ ಬಟ್ಟೆ ಮಾತ್ರ ಈ ಥರದ್ದಾ? ಯಾವಾಗ ನೋಡಿದ್ರೂ ಅವೇ ಬಟ್ಟೆಗಳೇ, ಹರಿಯೋದೇ ಇಲ್ಲ! ಪಪ್ಪನ್ನ ಯಾವುದಾದರೂ ಬಟ್ಟೆ ಕಂಪನಿಯ ಬ್ರ‍್ರಾಂಡ್ ಅಂಬ್ಯಾಸಿಡರ್ ಮಾಡಿಬಿಡಬೇಕು. ಆಗ ದೊಡ್ಡ ಪ್ರಚಾರ ಸಿಕ್ಕಿಬಿಡುತ್ತೆʼ ಎಂದಳು.

ನಾನು ನಗುತ್ತಾ, ʻಒಳ್ಳೆಯ ಆಲೋಚನೆ, ಇದನ್ನ ಯಾವುದಾದರೂ ಬಟ್ಟೆ ಕಂಪನಿಗೆ ನಾವೇ ಹೇಳಿಕೊಡಬೇಕುʼ ಎಂದೆ. ಆಶಾ ಗಲ್ಲ ಉಬ್ಬಿಸಿ, ʻಇಂಥಾ ಬಟ್ಟೆಯಲ್ಲೇ ಪಪ್ಪ ಪೇರೆಂಟ್ಸ್ ಮೀಟಿಂಗ್‌ಗೆ ಬರ್ತಾರಾ?ʼ ಎಂದಳು. ʻಇಲ್ಲʼ ಎಂದೆ ಗಂಭೀರವಾಗಿ. ʻಮತ್ತೆ ಹೊಸ ಬಟ್ಟೆ ಏನಾದರೂ ತಂದಿಟ್ಟಿದ್ದೀಯಾ?ʼ ಎಂದಳು ಖುಷಿಯಿಂದ. ಅವಳ ಖುಷಿಯನ್ನು ನೋಡುತ್ತಾ, ʻಪುಟ್ಟಾ ನಿನಗೇ ಗೊತ್ತು, ನಿನ್ನ ಪಪ್ಪನಿಗೆ ಹೊಸ ಬಟ್ಟೆ ಎಂದರೆ ಅಲರ್ಜಿ. ನೀನು ತಂದು ಕೊಡು ಬೇಕಿದ್ದರೆ, ಅದಕ್ಕೆ ಬಣ್ಣವನ್ನೋ, ಮಸಿಯನ್ನೋ ಬಳಿದು ಹಾಳು ಮಾಡಿಯೇ ಹಾಕಿಕೊಳ್ಳುವುದುʼ ಎಂದು.

ʻಅಮ್ಮಾ ಪಪ್ಪ ಯಾಕೆ ಹೀಗೆ?ʼ ಎಂದಳು ಆಶಾ. ʻನನಗೇನು ಗೊತ್ತು? ನಿನ್ನ ಪಪ್ಪಾನೇ ಬರ್ತಾರಲ್ಲ ಕೇಳುʼ ಎಂದೆ. ʻಮಾ ಪಪ್ಪ ನಿನ್ನ ಮಾತನ್ನ ಕೇಳ್ತಾರಾಲ್ಲಾ, ಅವ್ರನ್ನ ಬದಲಿಸೋಕ್ಕೆ ಯಾಕೆ ಪ್ರಯತ್ನ ಪಟ್ಟಿಲ್ಲ?ʼ ಎಂದಳು. ʻಪ್ರಯತ್ನ ಪಟ್ಟಿಲ್ಲವಾ ನಾನು? ಅರೆ ನಿಂಗೇನು ಗೊತ್ತು ಪುಟ್ಟಿ! ಒಂದಿನ ತುಂಬಾ ಆಸೆಯಿಂದ ಬಟ್ಟೆ ತಂದಿದ್ದೆ. ಕಾರ್ಯಕ್ರಮದಲ್ಲಿ ಎಲ್ಲಾರೂ ಏನ್ ಸಾರ್ ಹೊಸ ಬಟ್ಟೆ ಅಂದುಬಿಟ್ಟರು. ಅವರಿಗೆ ಏನು ಕಿರಿಕಿರಿಯಾಯಿತೋ ಗೊತ್ತಿಲ್ಲ. ಅಲ್ಲಿಂದ ಎದ್ದು ಹೊರಬಂದವರೇ ಸೀದಾ ಮನೆಗೆ ಹೋಗಿ ಹಳೆ ಅಂಗಿಯನ್ನು ಹಾಕಿಕೊಂಡು ಬಂದಿದ್ದರು. ಆಮೇಲೆ ನಾನು ತುಂಬ ಬಲವಂತ ಮಾಡ್ದೆ ಅಂತ ಆ ಹೊಸ ಅಂಗಿಯನ್ನು ಬಣ್ಣ ಹೋಗುವ ಬಟ್ಟೆಗಳ ಜೊತೆ ಹಾಕಿ ಅದರ ಮೇಲೆ ಇಂಕನ್ನು ಚೆಲ್ಲಿ ಅವತಾರ ಮಾಡಿಟ್ರು. ಅವತ್ತಿನಿಂದ ನಾನು ಮಾತ್ರ ನಿನ್ನ ಪಪ್ಪನಿಗೆ ಹೊಸ ಬಟ್ಟೆಯನ್ನು ತರಲೇ ಇಲ್ಲʼ ಎಂದೆ. ʻಹೌ ಕ್ರೇಜಿ? ಪಪ್ಪಗೇ ಈ ಕೆಲವು ಕಾಂಪ್ಲೆಕ್ಸ್‌ನಿಂದ ಹೊರಗೆ ಬರೋಕ್ಕೇ ಆಗೋದೇ ಇಲ್ವೇನೋʼ ಎಂದು ಬೈದುಕೊಂಡು ಒಳಗೆ ಹೋಗಿ ಅದೇ ಪ್ಯಾಂಟು ಶರ್ಟ್‌ನ್ನು ಐರನ್ ಮಾಡಿ, ಇದ್ದಿದ್ದರಲ್ಲಿ ನೀಟ್ ಆಗಿ ಕಾಣುವ ಹಾಗೆ ಮಾಡುತ್ತಿದ್ದಳು.

ʻಆಹಾ  ಘಮ್ಮಂತಾ ಇದೆʼ ಎನ್ನುತ್ತಾ ಒಳಗೆ ಬಂದ ಸಹಾ ಏನಿವತ್ತು ಎಂದರು. ʻಆಶಾನೇ ಮಾರ್ಕೆಟ್ಟಿಗೆ ಹೋಗಿ ಫ್ರೆಷ್ ಮೀನನ್ನು ತಂದಳು. ಅದಕ್ಕೆ ಮಾಡ್ತಾ ಇದೀನಿʼ ಎಂದೆ. ʻಹೌದಾ ಏನಿವತ್ತು ಸ್ಪೆಷಲ್ ಎಲ್ಲಿ ಆಶಾ?ʼ ಎಂದರು ಸಹಾ. ʻಹಾ ರೂಮಲ್ಲೇ ಇದ್ದಾಳೆʼ ಎಂದೆ. ʻಯಾಕೆ ಕಾಲೇಜಿಗೆ ಹೋಗುವ ಹೊತ್ತಾಗಲಿಲ್ಲವೇ? ಏನು ಮಾಡ್ತಾ ಇದ್ದಾಳೆ ರೂಮಲ್ಲಿʼ ಎಂದರು. ʻನಿಮ್ಮ ಜೀವಿತಾವಧಿಯ ಪ್ಯಾಂಟು ಶರ್ಟ್‌ನ್ನು ಹೊಸದಾಗಿ ಮಾಡ್ತಾ ಇದ್ದಾಳೆʼ ಎಂದೆ ನಗುತ್ತಾ. ʻಏನು ಅಮ್ಮನವರು ಸಖತ್‌ ಮೂಡಲ್ಲಿದ್ದೀರ!?ʼ ಎಂದು ನನ್ನ ಹೆಗಲ ಮೇಲೆ ಕೈ ಹಾಕಿ, ʻನಿನ್ನ ಹೀಗೆ ಖುಷಿಯಾಗಿ ನೋಡಲಿಕ್ಕೆ ನನಗೆ ಇಷ್ಟವಾಗುತ್ತೆʼ ಎಂದು ಕಿವಿಯ ಹತ್ತಿರ ಬಗ್ಗಿ, ʻಎಷ್ಟು ಹೊತ್ತಿಗೆ ಹೊರಡುತ್ತಾಳೆ ಆಶಾ?ʼ ಎಂದರು. ʻಅವಳೀಗ ಹೋಗಲ್ಲ. ಮತ್ತೆ ಒಬ್ಬಳೇ ಹೋಗಲ್ಲʼ ಎಂದೆ. ʻಹೌದಾ ಯಾಕಂತೆ?ʼ ಎಂದು ಕೇಳಿದರು. ʻನನ್ನೇನು ಕೇಳ್ತೀರಾ ಅವಳನ್ನೇ ಕೇಳಿʼ ಎಂದೆ.

ಸಹಾ ಆಶಾಳನ್ನ ಹುಡುಕಿ ರೂಮಿಗೆ ಹೋದರು. ಮೊದ ಮೊದಲು ತುಂಬಾ ಕುಶಾಲಿಂದ ಶುರುವಾದ ಮಾತುಕತೆ ತಾರಕಕ್ಕೆ ಏರಿತ್ತು. ಆಶಾ ಕೋಪವನ್ನು ಪ್ರಕಟ ಮಾಡದಿದ್ದರೂ ಸ್ವಲ್ಪ ಏರುಧ್ವನಿಯಲ್ಲೇ, ʻನಾನು ಒಂದು ವಾರದ ಮುಂಚೇನೇ ಹೇಳಿದ್ದೆನಲ್ಲ! ಇವತ್ತು ಪೇರೆಂಟ್ಸ್ ಟೀಚರ್ ಮೀಟಿಂಗ್ ಇದೆ ಅಂತʼ ಎಂದಳು. ʻನನ್ನ ಬಂಗಾರ ಚೆನ್ನಾಗೇ ಓದ್ತಾಳೆ, ಮತ್ತೆ ನಾನ್ಯಾಕೆ ಬರಬೇಕು?ʼ ಎಂದರು. ʻಅಟ್ಲೀಸ್ಟ್ ನನ್ನ ಹೊಗಳೋದನ್ನ ಕೇಳೋಕ್ಕಾದ್ರೂ ಬರಬೇಕಲ್ವಾ?ʼ ಎಂದು ಮರುಪ್ರಶ್ನೆ ಹಾಕಿದ್ದಳು ಆಶಾ. ಸಹಾ ಅವಳನ್ನ ಸಮಾಧಾನ ಮಾಡಲಿಕ್ಕೆ ಹೋದರು. ಅದು ಅವರಿಂದ ಆಗದ್ದು ಎಂದು ಅವರಿಗೂ ಗೊತ್ತಿತ್ತು.

ಆಶಾಗೆ ಕೋಪ ತಡೆಯಲಾಗಲಿಲ್ಲ, ʻಪಪ್ಪ ಮಕ್ಕಳು ಒಂದು ಒಳ್ಳೆ ಮಾರ್ಕ್ಸ್‌ ತೆಗುದ್ರೆ ಪೇರೆಂಟ್ಸ್‌ಗೆ ಕಾಲೇಜಲ್ಲಿ ಎಂಥಾ ಬೆಲೆ ಇರುತ್ತೆ ಅಂತ ನೋಡಲಿಕ್ಕಾದ್ರೂ ಬನ್ನಿʼ ಎಂದಳು. ನನಗೆ ಇರುಸುಮುರುಸಾಯಿತು. ʻಮೂವತ್ತೈದು ಬಂದ್ರೂ ಒಂದೇ, ನೂರು ಬಂದ್ರೂ ಒಂದೇ. ಒಟ್ಟಿನಲ್ಲಿ ಪಾಸ್ ಅಲ್ವಾ ಪುಟ್ಟಿʼ ಎಂದರು. ಆಶಾ ವಾದ ಮಾಡುತ್ತಲೇ ಇದ್ದಳು. ಇಷ್ಟು ವರ್ಷಗಳಲ್ಲಿ ಸಹಾರ ಜೊತೆ ಇಷ್ಟು ಅವಳು ವಾದ ಮಾಡಿದ್ದು ಇದೇ ಮೊದಲು. ಕಡೆಗೆ, ʻಪಪ್ಪ ಅರುಣಕ್ಕನೋ, ಮಿಹಿರನೋ ಕರೆದಿದ್ರೆ ಹೋಗ್ತಾ ಇದ್ರಲ್ವಾ?ʼ ಎಂದಳು. ಸಹಾಗೆ ನಿಜಕ್ಕೂ ಈಗ ನೋವಾಗಿತ್ತು. ʻಆಶಾ ನನಗೆ ನೀನು ಬೇರೇನಾ ಕಂದಾ? ಹೀಗೆಲ್ಲಾ ಮಾತಾಡಿದ್ರೆ ನನಗೆ ನೋವಾಗಲ್ವಾ? ನಾನು ಆ ಮೂವರ ಜೊತೆ ಕೂಡಾ ಪೇರೆಂಟ್ಸ್ ಮೀಟಿಂಗ್‌ಗೆ ಹೋಗಿಲ್ಲ. ಅವರ ಅಮ್ಮನೇ ಹೋಗುವುದು. ಈಗ ನಿನ್ನ ಜೊತೆ ಬಂದರೆ, ಅವರಿಗೆ ಬೇಸರವಾಗುವುದಿಲ್ಲವೇ?ʼ ಎಂದಿದ್ದರು. ಇದೇ ಸತ್ಯ ಇದ್ದಿರಲೂಬಹುದು. ಆದರೆ ಆಶಾಳ ಜೊತೆ ಅವರ ಸಂಬಂಧ ತುಂಬಾ ಸಂಕೀರ್ಣವಾದದ್ದು. ಅವಳ ಬಗ್ಗೆ ಪ್ರೀತಿ ಇದ್ದರೂ, ಆಳದಲ್ಲಿ ನನ್ನ ದೇಹವನ್ನು ಒಪ್ಪಿಕೊಂಡ ಹಾಗೆ, ನನ್ನ ದೇಹದ ಜೊತೆ ಸಂಬಂಧವಾಗಿ ಬಂದಿರುವ ಅವಳನ್ನ ಒಪ್ಪಲಾರರೋ ಏನೋ? ನಮಗೆ ಗೊತ್ತಿರುವ ಮಗುವನ್ನು ಮುದ್ದಿಸಬಹುದು. ಆದರೆ ಜೀವಕ್ಕಂಟಿಕೊಂಡ ಜೀವದ ಹಾಗೆ ಪ್ರೀತಿಸಲಾರರು. ಆದರೆ ಅದನ್ನು ತೋರಿಸಿಕೊಳ್ಳಲಾರರು. ಸಹಾ ಇದನ್ನು ಬಾಯಿಬಿಟ್ಟು ಎಂದೂ ಹೇಳಲಿಲ್ಲ. ಒಮ್ಮೊಮ್ಮೆ ಅವರ ವರ್ತನೆಯಿಂದ ನನಗೆ ಹಾಗನ್ನಿಸಿತ್ತು.

ಕಾಲೇಜಿನಲ್ಲಿ ಅವಳ ಅಪ್ಲಿಕೇಷನ್‌ಗೆ ಇತರೆ ದಾಖಲೆಗಳಿಗೆ ನಾನೊಬ್ಬಳೆ ಸಹಿ ಹಾಕಿರುವವಳು. ಸಿಂಗಲ್ ಪೇರೆಂಟ್ ಅಂತ. ಆದರೆ ಪ್ರಿನ್ಸಿಪಾಲ್‌ಗೆ ನಮ್ಮ ವಿಷಯ ಹೀಗೆ ಗೊತ್ತಾಗಿ, ʻನಿಮ್ಮ ಪಪ್ಪನ್ನೂ ಕರಕೊಂಡು ಬಾ, ನಮ್ಮ ಕಾಲೇಜಿಗೆ ಅವರು ಬಂದರೆ ಕಾಲೇಜಿಗೂ ಗೌರವʼ ಎಂದಿದ್ದರಂತೆ. ʻಪಪ್ಪ ಪ್ಲೀಸ್ ಬನ್ನಿ, ನೀವು ಬರಲಿಲ್ಲ ಅಂದ್ರೆ ಕಾಲೇಜಲ್ಲಿ ನನ್ನ ಮರ್ಯಾದೆ ಹೋಗುತ್ತದೆʼ ಎಂದು ಆಶಾ ಕಡೆಗೆ ಬೇಡಿಕೊಂಡಳು. ಸಹಾ ಮಾತ್ರ ಒಪ್ಪಲಿಲ್ಲ. ಇನ್ನೊಮ್ಮೆ ಬರ್ತೀನಿ ಅಂತ ಪ್ರಿನ್ಸಿಪಾಲ್‌ಗೆ ಫೋನ್ ಮಾಡಿ ಹೇಳಿದ್ದರು. ಕಾಡಿನ ಜನರ ಮೇಲೆ ಅಭಿವೃದ್ಧಿಯ ಹೆಸರಲ್ಲಿ ಸ್ಥಳಾಂತರಿಸಿ ನಡೆಯುತ್ತಿರುವ ದಬ್ಬಾಳಿಕೆಯ ಕುರಿತಾದ ಮೀಟಿಂಗ್ ಇದೆಯೆಂದು. ಆಶಾ ಸಪ್ಪಗಾದಳು. ಅವಳನ್ನು ಮಾತಿಗೆಳೆಯುವಂತೆ, ʻನಿನಗೆ ಗೊತ್ತಾ ಪುಟ್ಟಿ, ಕಾಡನ್ನು ಬಿಟ್ಟ ಆ ಜನರಲ್ಲಿ ಈಗ ಮದುವೆಯೇ ನಡೆಯುತ್ತಿಲ್ಲವಂತೆ. ಅವರು ಕಾಡಿನಲ್ಲಿ ಮೂರು ದಿನಗಳು ತಲೆಮರೆಸಿಕೊಂಡು ಗಂಡು ಹೆಣ್ಣು ಇರಬೇಕಂತೆ. ಆ ಹೊತ್ತಲ್ಲಿ ಯಾರಾದರೂ ಅವರನ್ನು ಕಂಡರೆ, ಇಲ್ಲ ಹೆಣ್ಣನ್ನು ಕಾಪಾಡಿಕೊಳ್ಳಲಿಕ್ಕಾಗದೆ ಇದ್ದರೆ, ಅವರ ಮದುವೆಗೆ ಹಿರಿಯರು ಸಮ್ಮತಿಯನ್ನೇ ಕೊಡುತ್ತಿರಲಿಲ್ಲ. ಆಭಿವೃದ್ಧಿಯ ಹೆಸರಲ್ಲಿ ಅವರನ್ನು ಕಾಡನ್ನು ಬಿಡಿಸಿ ನಾಡಿಗೆ ತಂದು ಹಾಕುತ್ತಿದ್ದಾರೆ. ನಾಡಿನ ರೀತಿಗಳೇ ಗೊತ್ತಿರದ ಅವರು ಒದ್ದಾಡುತ್ತಿದ್ದಾರೆ. ಕಾಡನ್ನೇ ನಂಬಿದ ಕಾಡಿನ ಉತ್ಪನ್ನದಿಂದಲೇ ಬದುಕು ಸಾಗಿಸುತ್ತಿದ್ದವರಿಗೆ ಮದುವೆಯಿರಲಿ ಬದುಕುವುದೇ ಅಸಾಧ್ಯವಾಗಿದೆʼ ಎಂದೆಲ್ಲಾ ಮಾತಾಡುತ್ತಲೇ ಇದ್ದರು.

ಆಶಾಳನ್ನು ಪೂಸಿ ಹೊಡೆದು ಬಲವಂತವಾಗಿ ಊಟಕ್ಕೆ ಎಬ್ಬಿಸಿದರು ಸಹಾ. ನಿಜಕ್ಕೂ ಅವರು ಅವಳನ್ನು ಪ್ರೀತಿಸದೇ ಇದ್ದರೆ ಇಷ್ಟೆಲ್ಲಾ ಮಾಡುವ ಅಗತ್ಯವೇನು? ನಾನು ಗೊಂದಲಕ್ಕೆ ಬಿದ್ದೆ. ಇಬ್ಬರೂ ಕೂತು ಊಟ ಮಾಡಿದರು. ʻನಿನ್ನಮ್ಮ ಮೀನಿನಲ್ಲಿನ ಮುಳ್ಳನ್ನು ಸರಿಯಾಗಿ ತೆಗೆದಿಲ್ಲ, ತುಂಬಾ ಮಸಾಲೆ ಹಾಕಿಬಿಟ್ಟಿದ್ದಾಳೆ, ನಿನ್ನ ಬರ್ತಡೆಯ ದಿನ ಊರ ಹೊರಗಿರುವ ಕಂಟ್ರಿ ಕ್ಲಬ್‌ಗೆ ಕರಕೊಂಡು ಹೋಗುವೆ. ಅಲ್ಲಿ ಒಳ್ಳೆ ಪೊಗದಸ್ತಾದ ಮೀನಿನ ಭರ್ಜರಿ ಊಟ ಇರುತ್ತೆʼ ಎಂದೆಲ್ಲಾ ಹೇಳಿದರು. ಆಶಾ ಮಾತ್ರ ಒಂದೇ ಮಾತನ್ನು ಆಡಲಿಲ್ಲ. ಅವಳಿಗೆ ಅಸಹನೆಯೋ, ಕೋಪವೋ ಗೊತ್ತಾಗಲಿಲ್ಲ. ಸಹಾಗೂ ಇದೇ ಗೊಂದಲ, ʻಪ್ಲೀಸ್ ಪುಟ್ಟಿ ನೀನು ಹೀಗೆ ಮೌನವಾದರೆ ನನಗೆ ಕಷ್ಟ ಆಗುತ್ತೆ. ಹಟ ಮಾಡಬೇಡʼ ಎಂದು ಅವಳನ್ನು ಒಪ್ಪಿಸುವಂತೆ ಮಾತಾಡಿದರು. ಅವಳು ಒಪ್ಪಿದಳಾ? ಇಲ್ಲವಾ? ಅದು ಅವರಿಗೆ ಬೇಕಿಲ್ಲ. ಅವಳನ್ನು ಒಪ್ಪಿಸಿದೆ ಎಂದು ತಮಗನ್ನಿಸಿದರೆ ಸಾಕಾದಂತಿತ್ತು. ಅವರ ಇಂಥಾ ನಂಬಿಕೆಗಳೇ ಅವರನ್ನು ಯಾವಾಗಲೂ ಕಾಪಾಡುವುದು. ನಾನು ಹೇಳಲು ಪ್ರಯತ್ನಿಸಿದ್ದೆ, ಸಂಬಂಧಕ್ಕೊಂದು ಸುಂದರ ಚೌಕಟ್ಟು ಬೇಕೆಂದು. ಯಾರಿಗೆ ಯಾಕೆ ಹೇಳಲಿ? ಗೊತ್ತಾಗದೆ ಸುಮ್ಮನಾಗಿಬಿಟ್ಟೆ.   

ಆಶಾ ಅವತ್ತೆಲ್ಲಾ ಮಂಕಾಗೇ ಇದ್ದಳು. ಪೇರೆಂಟ್ಸ್ ಮೀಟಿಂಗ್‌ನಲ್ಲೂ ಕೂಡಾ. ನಾನೇ ಲವಲವಿಕೆ ತಂದುಕೊಂಡು ಅವರ ಲೆಕ್ಚರರ್ಸ್‌ ಮತ್ತು ಪ್ರಿನ್ಸಿಪಾಲ್ ಹತ್ತಿರ ಮಾತಾಡಿದೆ. ಪ್ರಿನ್ಸಿಪಾಲ್, ʻನಿಮ್ಮ ಅವರ ಸಂಬಂಧ ನನಗೆ ಗೊತ್ತಿರಲಿಲ್ಲ. ತುಂಬಾ ದೊಡ್ಡ ಮನುಷ್ಯ ನಿಮಗೆ ಲೈಫ್ ಕೊಟ್ಟಿದ್ದಾರೆʼ ಎಂದೆಲ್ಲ ಮಾತಾಡಿದರು. ಇಂಥಾ ಮಾತುಗಳು ಮುಜುಗರ ಕೊಡುತ್ತವೆ. ಕಾಲ ಬದಲಾಗಿದೆ ಇಂಥಾ ಸಂಬಂಧಗಳನ್ನು ಜನ ಒಪ್ಪುತ್ತಾರೆ ಅಂತಲೂ ಅಲ್ಲ. ಒಪ್ಪಂದ ಮಾಡಿಕೊಳ್ಳುವವರು ಕಡಿಮೆಯೂ ಇಲ್ಲ. ಸಮಾಜದ ಅಂಕಿತವಿಲ್ಲದ ಇಂತಾ ಸಂಬಂಧಗಳಲ್ಲಿ ಸಾಮಾನ್ಯನೊಬ್ಬ ಇದ್ದರೆ ಅದು ಅನೈತಿಕತೆ ಎಂದು ಅಳೆಯಲಾಗುತ್ತದೆ. ಅದೇ ಪ್ರಸಿದ್ಧರು ಮಾಡಿದರೆ ಘನವಾದ ಉದ್ದೇಶವಿರುತ್ತದೆ, ಲೀಲೆಯಾಗುತ್ತದೆ. ಇದಕ್ಕೇ ಮೈಉರಿದು ಬೈಯ್ಯಬೇಕು ಅನ್ನಿಸ್ತು. ಆದರೆ ಎದುರಿದ್ದವರು ನನ್ನ ಮಗಳ ಪ್ರಿನ್ಸಿಪಾಲ್ ಮತ್ತು ಅವಳ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನು ಆಡಿದ್ದರು. ಆದ್ದರಿಂದ ಸುಮ್ಮನೆ ನಗುವಂತೆ ನಟನೆ ಮಾಡಿ, ಖೇದಗೊಂಡಂವಳಂತೆ ಮುಖ ಮಾಡಿ, ಎಲ್ಲವನ್ನೂ ಸಹಿಸಿ ತಲೆ ಹಾಕಿದ್ದೆ. ನಾನು ಸಹಾರ ಮರ್ಜಿಯಲ್ಲಿ, ಕಾರುಣ್ಯದಲ್ಲಿ ಬದುಕುತ್ತಿರುವವಳ ಹಾಗೆ. ನಾನು ಹೊರಡುವಾಗ, ʻಒಂದು ಸಲ ಸರ್‌ನ ಕರಕೊಂಡು ಬನ್ನಿ ನಮ್ಮ ಕಾಲೇಜಿಗೆ. ಅದು ಗೌರವʼ ಎಂದು ನನ್ನ ಕೈಗಳನ್ನು ಹಿಡಕೊಂಡು ಕೇಳಿಕೊಂಡರು. ಇಷ್ಟೆಲ್ಲಾ ಹೇಳುತ್ತಿದ್ದವರಿಗೆ ನನ್ನ ಬಗ್ಗೆಯಾಗಲಿ, ನನ್ನ ಹಾಡಿನ ಬಗ್ಗೆಯಾಗಲೀ ತಿಳಿದುಕೊಳ್ಳುವ ಸಣ್ಣ ಆಸಕ್ತಿಯೂ ಇರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಅಥವಾ ಸಹಾರ ಪ್ರಭಾವಲಯ ಎಲ್ಲವನೂ ನುಂಗಿಬಿಟ್ಟಿತಾ?  

ಮನೆಗೆ ಬಂದವಳೇ ಆಶಾ ತಲೆ ನೋಯುವುದಾಗಿ ಹೇಳಿ ತನ್ನ ಕೋಣೆಗೆ ಹೋಗಿ ಮಲಗಿಬಿಟ್ಟಳು. ನಾನೇ ಅನ್ನ ಕಲಿಸಿ, ʻಒಂದು ತುತ್ತು ತಿಂದು ಮಲಗುʼ ಎಂದೆ. ನಾನು ಬಿಡುವುದಿಲ್ಲ ಎಂದು ಗೊತ್ತಿದ್ದರಿಂದ ಹಾಸಿಗೆಯ ಮೇಲೆ ಕೂತು ತುತ್ತು ತಿನ್ನುವ ಮೊದಲು ನನ್ನ ಒಂದು ಪ್ರಶ್ನೆ ಕೇಳಿದಳು, ʻಅಮ್ಮಾ ನಿಜವಾಗಿ ನನ್ನ ಅಪ್ಪ ಆಗಿದ್ದರೆ ಇವರು ಹೀಗೆ ಮಾಡುತ್ತಿದ್ದರಾ?ʼ ಎಂದು. ನನಗೆ ಕರುಳು ಕಿವುಚಿ ಬಂದಿತು. ʻಅದು ಹಾಗಲ್ಲ ಪುಟ್ಟಾ, ಅವರು ಅವರ ಮಕ್ಕಳ ಸಲುವಾಗಿ ಕೂಡಾ ಹೋಗುವುದಿಲ್ಲ ಎಂದು ಹೇಳಿದರಲ್ಲಾʼ ಎಂದೆ. ʻಅಮ್ಮ ಪಪ್ಪನ್ನ ನೀನೇ ಹಿಂದೆ ಹಾಕಿಕೊಂಡು ಬರುವುದು. ಇವರ ಮಕ್ಕಳಿಗೆ ಹೋಗದಿದ್ದರೆ ಅವರ ಪಪ್ಪ ಎಂದು ಪ್ರೂವ್ ಮಾಡುವ ಅಗತ್ಯ ಅಲ್ಲಿಲ್ಲ. ಅವರು ಇವರ ಮಕ್ಕಳಲ್ಲ ಅಂತ ಯಾರೂ ಹೇಳಲ್ಲ. ಆದರೆ ನನಗೆ ಆ ಜಾಗವನ್ನು ತುಂಬಬೇಕಾದ್ದು ಇವರೇ ತಾನೆ? ಅಮ್ಮ ನಿನಗೆ ಬೇಜಾರಾಗಬಹುದು, ಇದು ನನ್ನ ಐಡೆಂಟಿಟಿ ಕ್ರೈಸಿಸ್ ಅಂತ ಯಾಕರ್ಥ ಮಾಡ್ಕೊಳ್ತಾ ಇಲ್ಲ. ನಾನು ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದೀನಿ ಅಮ್ಮಾʼ ಎಂದಳು. ನಾನು ಮಾತಾಡಲಿಲ್ಲ. ನನ್ನಲ್ಲಿ ಮಾತುಗಳು ಇರಲಿಲ್ಲ. ಅವಳು ಜೀವನದಲ್ಲಿ ಏನನ್ನು ಕಳಕೊಂಡಿದ್ದಳೋ ಅದನ್ನು ತುಂಬಿಕೊಡಲಿಕ್ಕೆ ನಾನು ಪ್ರಯತ್ನಪಡಬಹುದು. ಆದರೆ ತೃಪ್ತಿ ಎನ್ನುವುದು ಅವಳದ್ದೇ ಪಾಲು. ಅದು ಅವಳ ಅನುಭವಕ್ಕೆ ಬಂದಿಲ್ಲ ಎಂದರೆ ನಾನು ಸೋತ ಹಾಗೆ. ಆಶಾ ತನ್ನ ಮಾತು ಮುಗಿಸಿದ್ದರಿಂದ ಮುಂದೆ ಮಾತಾಡಲಿಲ್ಲ. ನಾನು ಮಾತಿಲ್ಲದವಳಾದ್ದರಿಂದ ಮಾತು ಮುಂದುವರೆಯಲಿಲ್ಲ. ಅವಳು ತುಂಬಾ ಸೂಕ್ಷ್ಮ. ಯಾವ ಮಾತನ್ನು ಎಷ್ಟು ಆಡಬೇಕು, ಯಾರೊಂದಿಗೆ ಆಡುವಾಗ ಯಾವ ಧ್ವನಿಯಲ್ಲಿರಬೇಕು ಎಂದು ಅವಳಿಗೆ ಚೆನ್ನಾಗಿ ಗೊತ್ತು. ಯಾರು ಯಾರನ್ನು ಸಮಾಧಾನ ಪಡಿಸಬೇಕು!? ಅವಳದ್ದು ನನ್ನದೇ ರಕ್ತ ಮತ್ತು ದುಃಖ ಕೂಡಾ ನನ್ನದೇ. ಆದರೆ ಸ್ವಭಾವ ಮಾತ್ರ ತದ್ವಿರುದ್ಧ. ನಮ್ಮಿಬ್ಬರ ನೋವಿಗೆ ಸಹಾ ಮಾತ್ರ ಇದೆಲ್ಲ ತನಗಲ್ಲ ಎನ್ನುವಂತೆ ಇದ್ದುಬಿಡುತ್ತಾರೆ. ಬಹುಶಃ ವಲ್ಲಿಯ ವಿಷಯದಲ್ಲೂ ಇದೇ ಆಗಿದ್ದು ಅನ್ನಿಸುತ್ತೆ. ಅದಕ್ಕೆ ಅವಳು ಸಿಡಿದೆದ್ದಿರಬೇಕು.  

‍ಲೇಖಕರು avadhi

August 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: