ಪಿ ಚಂದ್ರಿಕಾ ಅಂಕಣ – ಸುಖೇಶ್ ನಕ್ಕ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

22

ಮುಲ್ಕಿಯ ಮನೆಯಲ್ಲಿ ಸೆಖೆ ಇದ್ದರೂ ಮುಕ್ಕಚೇರಿಯಲ್ಲಿದ್ದಷ್ಟು ಇರಲಿಲ್ಲ. ಮುಕ್ಕಚೇರಿಯಲ್ಲಿ ಮನುಷ್ಯರೇ ಕರಗಿಹೋಗುತ್ತೀವಿ ಇಲ್ಲಾಂದ್ರೆ ಸೀದು ಹೋಗುತ್ತೀವಿ ಎನ್ನುವಷ್ಟು ಬಿಸಿಲು ಸೆಖೆ ಇತ್ತು. ಬೆಂಗಳೂರಿನಿಂದ ಮಂಗಳೂರಿಗೆ ಹೊರಟಾಗ ಮಾರ್ಕೆಟ್‌ನಲ್ಲಿ ನಮಗೆ ಬೇಕಾದ ವಸ್ತುಗಳ ಖರೀದಿಗೆ ಹೋದಾಗ ಐದು ಒಂದೇ ಥರದ ಹ್ಯಾಟ್‌ಗಳನ್ನು ತಂದಿದ್ದೆ, ಆರ್ಟ್ ವಿಭಾಗದ ನಮ್ಮ ಮೂವರಿಗೆ, ಡೈರೆಕ್ಟರ್‌ಗೆ ಮತ್ತು ಇನ್ನೊಂದು ಯಾರು ಬೇಕಾದರೂ ಬಳಸಲಿ ಎಂದು. ಆದರೆ ಮೊದಲ ದಿನವೇ ಆ ಹ್ಯಾಟುಗಳು ಎಲ್ಲೆಲ್ಲೋ ಹೋಗಿ ಕಡೆಗೆ ಮಕ್ಕಳ ಆಟಿಕೆಯಾಗಿ ಅದರಲ್ಲಿ ಮರಳನ್ನು ತುಂಬಿಸಿಟ್ಟುಬಿಟ್ಟಿದ್ದರು.

ಬಿಸಿಲನ್ನು ತಡೆಯಲಾಗದೆ, ಸೆಖೆಯಾದರೂ ಪರವಾಗಿಲ್ಲ ನನಗೊಂದು ಮಕ್ಕಣೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದೆ. ‘ನೀವು ಹಾಕ್ತೀರಾ ನಮ್ಮ ಹಾಗೆ? ಅಲ್ಲ ಇಲ್ಲಿಗೆ ಬಂದು ನಮ್ಮವರೇ ಆಗಿಬಿಡುತ್ತಿದ್ದೀರಲ್ಲಾ!ಎಂದು ಹಸೀನಮ್ಮ ನಕ್ಕಿದ್ದಳು. ‘ಏನು ಮಾಡುವುದು? ಈ ಬಿಸಿಲು ಸೆಖೆ ತಡಿಲಿಕ್ಕಾಗುವುದಿಲ್ಲಎಂದು ಅಲವತ್ತುಕೊಂಡಿದ್ದೆ. ‘ದೊಡ್ಡ ಷಾಪ್ ಗೆ ಹೋದರೆ ಸಿಗುತ್ತೆ. ನಿಮಗೆ ಸಮಯವೇ ಇಲ್ಲವಲ್ಲ?! ಏನುಮಾಡ್ತೀರಾ?’ ಎಂದು ಹಸೀನಮ್ಮ ಬೇಸರಿಸಿಕೊಂಡಿದ್ದಳು. ‘ಹೋದಾಗ ತಂದುಕೊಟ್ಟುಬಿಡಿ. ಇಲ್ಲಿನ ನೆನಪಿಗೆ ಇರಿಸಿಕೊಳ್ಳುತ್ತೇನೆಎಂದಿದ್ದೆ. ನೆನಪು ವಸ್ತುಗಳಲ್ಲಿ ಇರಲ್ಲ ಇಲ್ಲಿ ಇರುತ್ತೆ ಅಂತ ತನ್ನ ಹೃದಯವನ್ನು ಮುಟ್ಟಿ ಹೇಳಿದ್ದಳು ಹಸೀನಮ್ಮಾ. ನಿಜ ಅನ್ನಿಸಿದರೂ ಕಣ್ಣಿಗೆ ಕಾಣುವುದರಲ್ಲೇ ಎಲ್ಲವನ್ನೂ ಹುಡುಕುವ ದೃಶ್ಯ ಮಾಧ್ಯಮದವರಿಗೆ ಹುಡುಕಾಟ ಕಾಣುವುದರಲ್ಲಿ ಮಾತ್ರವೇ ಇರುತ್ತದೆ.

ನಮ್ಮ ಈ ಮಾತು ಕಥೆಗಳ ನಡುವೆ ಆಚೆ ಮನೆಯ ಹುಡುಗಿ ಜರಿನಾಬೀ ಬಂದು ನಾನು ಹೊದ್ದುಕೊಂಡಿದ್ದ ವೇಲ್‌ನಲ್ಲೆ ಹೇಗೆ ಮುಖವನ್ನು ಪೂರ್ಣವಾಗಿ ಮುಚ್ಚಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಳು. ವೇಲ್ ಅನ್ನು ವಿ ಆಕಾರದಲ್ಲಿ ಮಡಚಿ ಹಣೆಯ ಮೇಲುಭಾಗ ಮುಚ್ಚುವಂತೆ ಹೊದ್ದು, ಮಿಕ್ಕ ಬಟ್ಟೆಯನ್ನು ಕಣ್ಣುಗಳನ್ನು ಮಾತ್ರ ಬಿಟ್ಟು ಮಿಕ್ಕೆಲ್ಲಾ ಕವರ್ ಆಗುವಂತೆ ತಂದು ನಂತರ ತುದಿಗಳನ್ನು ತಲೆಯ ಹಿಂಭಾಗಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಬಿಟ್ಟಳು. ನನಗದು ಅಚ್ಚರಿ, ಹೀಗೆ ಇದರಿಂದ ಮುಖವನ್ನು ಮುಚ್ಚಿಕೊಳ್ಳಬಹುದು ಎಂದು. ಎಷ್ಟು ಸಲ ಪ್ರಯತ್ನಪಟ್ಟಿದ್ದೆನೋ ನನಗೆ ಗೊತ್ತಿಲ್ಲ. ಹೊಟೇಲ್ ರೂಂಗೆ ಬಂದ ಮೇಲೂ ಪ್ರಯತ್ನಪಡುತ್ತಿದ್ದೆ. ಕಡೆಗೆ ಒಮ್ಮೆ ಬಂದೇ ಬಿಟ್ಟಿತು.

ನಂತರದ ದಿನಗಳಲ್ಲಿ ಅದು ನನಗೆ ತುಂಬಾ ಉಪಯೋಗಕ್ಕೆ ಬಂತು ಮತ್ತು ಮಕ್ಕಣೆಯನ್ನು ಕೊಳ್ಳುವ ಅವಶ್ಯಕತೆ ಕೂಡಾ ಬೀಳಲಿಲ್ಲ. ನಾನು ಹಾಗೆ ವೇಲ್‌ನಿಂದ ಮುಖವನ್ನು ಮುಚ್ಚಿಕೊಂಡಾಗ, ಎಲ್ಲರೂ ‘ನೀವೀಗ ಟೆರರಿಸ್ಟ್ ಕೂಡಾ ಆಗಬಹುದು, ಯಾರೂ ನಿಮ್ಮನ್ನು ಗುರುತು ಹಿಡಿಯೊಲ್ಲಎಂದು ರೇಗಿಸುತ್ತಿದ್ದರು. ಪುಟ್ರಾಜು, ‘ಹೆಣ್ಣುಮಕ್ಕಳು ನೀವು ಹೇಗೋ ದಾರಿಗಳನ್ನು ಕಂಡುಕೊಳ್ಳುತ್ತೀರಿ ನಮಗೆ ಮಾತ್ರ ಏನೂ ಇರಲ್ಲ ನೋಡಿಎಂದಿದ್ದ.

ಎರಡನೇ ದಿನದ ಮುಕ್ಕಚ್ಚೇರಿಯ ಶೂಟಿಂಗ್ ಹೊತ್ತಿಗೆ (ದಿನಾ ಒಂದೇ ಕಡೆ ಶೂಟಿಂಗ್ ಮಾಡುತ್ತಿರಲಿಲ್ಲವಾದ್ದರಿಂದ ಅದು ನಾಲ್ಕೋ ಐದನೇ ದಿನವೋ ಆಗಿತ್ತು) ದೊಡ್ಡ ಸಮಸ್ಯೆ ಬಂತು. ಬಳಸುತ್ತಿದ್ದ ರೆಡ್ ಎಪಿಕ್ ಕ್ಯಾಮೆರಾ ಸಣ್ಣ ವಿವರಗಳನ್ನೂ ಸಮರ್ಥವಾಗಿ ತೋರಿಸಬಲ್ಲದ್ದಾಗಿತ್ತು. ಕ್ಲೋಸ್‌ಅಪ್‌ನಲ್ಲಂತೂ ಸೆಖೆಗೆ ಇದ್ದಿದ್ದೂ ಮುಖವೆಲ್ಲಾ ಎಣ್ಣೆ ಎಣ್ಣೆಯಾಗಿ ಕ್ಯಾಮೆರಾದಲ್ಲಿ ಹೊಳೆಯುವಂತೆ ಕಾಣಿಸತೊಡಗಿತು. ಕ್ಯಾಮೆರಾ ಮನ್ ಅಶೋಕ್ ವಿ ರಾಮನ್ ‘ಟಚ್ ಅಪ್ ಕೊಡಿಎಂದು ಪ್ರತಿ ಶಾಟ್‌ಗೂ ಕೇಳತೊಡಗಿದರು. ಕೊಡುವವರು ಯಾರು? ಎಲ್ಲವನ್ನೂ ಸಹಜವಾಗಿಯೇ ಶೂಟ್ ಮಾಡುವ ಉದ್ದೇಶವಿದ್ದಿದ್ದರಿಂದ ನಮಗೆ ಮೇಕಪ್‌ಮನ್ ನ ಅವಶ್ಯಕತೆ ಇಲ್ಲ ಎಂದು ಭಾವಿಸಿದ್ದೆವು.

ಹಾಗೇನಾದರೂ ಆದರೆ ಇರಲಿ ಎಂದು ಒಂದಿಷ್ಟು ಸಾಫ್ಟ್ ಟಿಷ್ಯೂಗಳನು, ವೆಟ್ ಟಿಶ್ಯೂಗಳನ್ನು ತಂದಿರಿಸಿಕೊಂಡಿದ್ದೆವು. ಅದನ್ನೆ ಜಯಶ್ರೀಯವರಿಗೆ ಕೊಟ್ಟೆವು. ಅವರೇ ಹೇಗೆ ತೆಗೆದುಕೊಳ್ಳುತ್ತಾರೆ? ಅವರು ಒತ್ತಿ ತೆಗೆದರೂ ಪೂರ್ತಿ ಹೋಗುತ್ತಿರಲಿಲ್ಲ. ಅದನ್ನು ತೆಗೆಯಲಿಕ್ಕೆ ನಾವೇ ಯಾರಾದರೂ ಹೋಗಬೇಕಿತ್ತು. ಇದೆಲ್ಲಾ ಆಗದ ಕೆಲಸ, ನಾವು ನಮ್ಮ ಕೆಲಸ ಮಾಡಿದರೆ ಸಾಕು ಎನ್ನುವಷ್ಟಿತ್ತು. ಟೆನ್ಷನ್‌ಗಳಲ್ಲಿ ಇದನ್ನು ಬಿಟ್ಟು ಬಂದೆವು ಅದನ್ನು ತರಲಿಲ್ಲ, ಈಗಲೇ ಬೇಕು ಎನ್ನುವ ಅನೇಕ ವಸ್ತುಗಳನ್ನು ಜೋಡಿಸುವಲ್ಲೇ ಹೈರಾಣಾಗುತ್ತಿದ್ದೆವು.

ಪ್ರತಿ ಸಲ ಕಂಟಿನ್ಯುಟಿಗಾಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರೂ ಕೆಲ ಸಂಗತಿಗಳು ಮಿಸ್ ಆಗಿಬಿಡುತ್ತಿದ್ದವು. ಮೇಲಾಗಿ ಎಡಬಿಡಂಗಿಗಳು. ನಾನೇ ಕಟ್ ಎಂದ ಪ್ರತಿಸಲ ಓಡಿಹೋಗಿ ಸ್ವೆಟ್ ತೆಗೆಯುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಒಂದೇ ದಿನಕ್ಕೆ ಅರ್ಥವಾಗಿಬಿಟ್ಟಿತ್ತು. ನನ್ನಿಂದಾಗಿ ಜಯಶ್ರೀಯವರೂ ಸಾಕಷ್ಟು ಒದ್ದಾಡಿದರು. ಯಾಕೆಂದರೆ ಆ ಪ್ರೊಫೆಷನ್ ಗೊತ್ತಿರದ ನಾನು ಅವರಿಗೆ ಜೋರಾಗಿ ಒತ್ತಿ ಮುಖದಲ್ಲಿನ ಪಸೆಯನ್ನು ತೆಗೆಯುವಾಗ ನೋವುಂಟು ಮಾಡಿದ್ದೆ. ‘ನಾನೇ ಮಾಡಿಕೊಳ್ಳುತ್ತೇನೆ ಬಿಡಿಎಂದಿದ್ದರು ಬೇಸರವನ್ನು ತೋರಿಸಿಕೊಳ್ಳದೆ.

‘ಸ್ವೆಟ್ ತೆಗೀಲಿಕ್ಕೆ ಮಾತ್ರ ಬೇರೇನೂ ಮೇಕಪ್ ಬೇಡಎಂದು ಪಂಚಾಕ್ಷರಿ ಜಿತೇಂದ್ರರಲ್ಲಿ ಹೇಳಿದ್ದರು. ಜಿತೇಂದ್ರರಿಗೆ ಲೋಕ ಸಂಪರ್ಕ ತುಂಬಾ ಇದ್ದಿದ್ದರಿಂದ ಮಾರನೆಯ ದಿನಕ್ಕೇ ವ್ಯವಸ್ಥೆ ಮಾಡಿಕೊಟ್ಟರು. ತುಳು ಸಿನಿಮಾಗಳಿಗೆ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸುಖೇಶ್ ನಮ್ಮ ತಂಡವನ್ನು ಸೇರಿಕೊಂಡಿದ್ದ. ದಿನಕ್ಕೆ ಸಾವಿರ ರೂಪಾಯಿಗಳನ್ನು ಎಣಿಸುತ್ತಿದ್ದ ಅವನು ನಮ್ಮಲ್ಲಿ ಬರೀ ಐನೂರಕ್ಕೆ ಒಪ್ಪಿ ಬಂದಿದ್ದ. ಅಬ್ಬಬ್ಬಾ ಎಂದರೆ ಅವನಿಗೆ ಇಪ್ಪತ್ತೆರಡರ ಆಸುಪಾಸು. ಅವರ ಅಪ್ಪನದ್ದು ಸಣ್ಣ ಬಿಸನೆಸ್. ಅದನ್ನ ನೋಡಿಕೊಂಡರೆ ಸಾಕು ಎಂದು ಹೇಳಿದ್ದರೂ, ಸಿನಿಮಾ ಹುಚ್ಚಿಗೆ ಬಿದ್ದು, ಮೇಕಪ್ ಕಿಟ್ ಅನ್ನು ಹೆಗಲಿಗೆ ಹಾಕಿಕೊಂಡು, ಕೈಲೊಂದು ಕನ್ನಡಿ ಹಿಡಿದು ಹೊರಟುಬಿಟ್ಟಿದ್ದ. ತುಂಬಾ ಸ್ಟೈಲಿಷ್ ಆಗಿದ್ದ ಆ ಹುಡುಗ ಜಿತೇಂದ್ರರಿಗೆ ತುಂಬಾ ಹತ್ತಿರದವ ಅನ್ನಿಸಿದ್ದು ಅವನು ಅವರ ಜೊತೆ ನಡೆದುಕೊಳ್ಳುತ್ತಿದ್ದ ರೀತಿಯಿಂದ. ಹೀಗೆ ನಮ್ಮ ಸೆಟ್‌ನಲ್ಲಿ ನಾವು ಬೇಡ ಅಂದುಕೊಂಡಿದ್ದ ಮೇಕಪ್ ಮನ್ ಕನ್ನಡಿಯ ಸಮೇತ ಪ್ರತ್ಯಕ್ಷವಾಗಿ ಶೂಟಿಂಗ್ ಕಳೆಯನ್ನು ಹೆಚ್ಚು ಮಾಡಿದ್ದ.

ಸುಖೇಶ್ ತಲೆಕೂದಲಿಗೆ ಎರಡು ಮೂರು ಥರದ ಬಣ್ಣ ಹಚ್ಚಿದ್ದರಿಂದ ಒಂದೊಂದು ಆಂಗಲ್‌ನಲ್ಲಿ ಒಂದೊಂದು ಥರಾ ಕಾಣ್ತೀಯ ಎಂದು ರೇಗಿಸುತ್ತಿದ್ದೆವು. ನಮ್ಮ ರೇಗಿಸುವಿಕೆಗೆ ಸಣ್ಣಗೆ ನಕ್ಕು ಸುಮ್ಮನಾಗುತ್ತಿದ್ದ. ಬೆಳಗ್ಗೆ ಬಂದರೆ ಹೆಚ್ಚು ಮಾತಾಡದೆ ತನ್ನ ಪಾಡಿಗೆ ತಾನು ಸುಮ್ಮನೆ ಕೆಲಸ ಮಾಡುತ್ತಾ ಇದ್ದು ಬಿಡುತ್ತಿದ್ದ. ಕೂಗಿದ ತಕ್ಷಣ ಓಡಿಬರುತ್ತಿದ್ದ, ಸ್ವಲ್ಪ ತಡ ಆದರೂ ಏನಾದರೂ ಅನ್ನಬಹುದು ಎನ್ನುವ ಅತಂಕದಲ್ಲಿ. ಅವನ ತಲೆಯನ್ನೇ ಗಮನಿಸಿದರೆ ಕೋಳಿ ಪುಕ್ಕದ ಹಾಗೆ ಕಾಣುತ್ತಿತ್ತು. ಕಡೆಗೆ ಎಲ್ಲರೂ ಅವನನ್ನು ಸ್ಟೈಲಿಷ್ ಸುಖೇಶ್, ಕೋಳಿಪುಕ್ಕ ಎಂದೆಲ್ಲಾ ಕರೆಯುತ್ತಿದ್ದರು. ಅದು ಗೊತ್ತಾದಾಗ ಮಾತ್ರ, ‘ನಿಮ್ಮ ತಂಟೆಗೆ ನಾನು ಬಂದಿದ್ದೇನಾ ನೀವೆಂತಕ್ಕೆ ನನ್ನ ಹಂಗಿಸುವುದು? ನನ್ನ ಕೂದಲು ನನ್ನಿಷ್ಟ. ನಿಮಗಿಷ್ಟ ಆದರೆ ಹತ್ತು ಬಣ್ಣ ಹಾಕಿಕೊಳ್ಳಿ, ನೀವು ಹೇಗೆ ಕಾಣಬೇಕು ಎನ್ನುವುದನ್ನು ನೀವು ನಿರ್ಧಾರ ಮಾಡಿಕೊಳ್ಳಿಎಂದು ಸುಖೇಶ್ ರೇಗಿದ್ದ.

ನಾನೊಮ್ಮೆ ಆತನನ್ನು ‘ಯಾಕೆ ಸುಖೇಶ್ ನಿಮ್ಮ ತಂದೆಯ ಬಿಸನೆಸ್ ಮುಂದುವರೆಸಲಿಲ್ಲ?’ ಎಂದು ಕೇಳಿದ್ದಕ್ಕೆ, ‘ಅದರ ಪಾಡಿಗೆ ಅದು ನಡಿತಾ ಇದೆ. ಅದರಲ್ಲಿ ನನಗೆ ಸುಖ ಕಂಡಿಲ್ಲ. ನಾನೂ ಅಲ್ಲೇ ಹೋದರೆ ಸ್ವಲ್ಪ ವ್ಯಾಪಾರ ಜಾಸ್ತಿಯಾಗಬಹುದು, ಆದರೆ ಎಂದಾದರೂ ಮಾತಿಗೆ ಮಾತು ಬಂದು ‘ನೀನೇನು ಮಾಡಿದೆ? ನಾನು ಮಾಡಿದ್ದನ್ನು ಮುಂದುವರಿಸಿದೆ’ ಎಂದು ಅಪ್ಪ ಹೇಳುವುದು ಗ್ಯಾರೆಂಟಿ. ಹಾಗೆ ಹೇಳಿಸಿಕೊಳ್ಳಬಾರದು ಎಂದರೆ ನನ್ನದೂ ಒಂದು ಪ್ರಯತ್ನ ಇರಬೇಕು. ಇವತ್ತು ಅಸಿಸ್ಟೆಂಟ್, ನಾಳೆ ಮೇಕಪ್‌ಮನ್. ಅದೃಷ್ಟ ಚಂದ ಇದ್ದರೆ ನಾಳೆ ಬಾಂಬೆಗೆ ಹೋದೆ ಅಂದುಕೊಳ್ಳಿ ಬೇಕಾದಷ್ಟು ಹಣಎಂದಿದ್ದ. ನಾನು ರೇಗಿಸುವವಳಂತೆ ‘ಅಂತೂ ಹಣ ಮಾಡಲಿಕ್ಕೆ ಇಲ್ಲಿಗೆ ಬಂದಿದ್ದಾ?’ ಎಂದೆ.

‘ಹಣ ಯಾರಿಗೆ ಬೇಡ ಹೇಳಿ? ಅಪ್ಪನ ಬಿಸನೆಸ್ಸಿನಲ್ಲೂ ಇದೆ. ಆದರೆ ಅದಕ್ಕೆ ಪ್ರತಿಭೆ ಬೇಡ, ಬುದ್ಧಿವಂತಿಕೆ ಇದ್ದರೆ ಸಾಕು. ನನಗೆ ಏನಾದರೂ ಆಗಬೇಕು ಎನ್ನುವ ಆಸೆಯಿದೆ. ಇಲ್ಲಿ ಒಂದು ಸಿನೆಮಾ ಗೆದ್ದರೆ ಆ ಟೀಂನಲ್ಲಿರುವವರ ಎಲ್ಲರ ಅದೃಷ್ಟ ಖುಲಾಯಿಸುತ್ತೆ. ಆಗ ಅಪ್ಪ ದುಡಿಯದೇಯೂ ಅರಾಮಾಗಿರಬಹುದು. ಭಗವಂತ ಯಾರ ಹಣೇಲಿ ಏನು ಬರೆದಿದ್ದಾನೋ ಗೊತ್ತಾಗುವುದು ಹೇಗೆ? ಅದಕ್ಕೆ ನಮ್ಮ ಪ್ರಯತ್ನ ಆಗಲೇಬೇಕಲ್ಲಎಂದಿದ್ದ. ಕೊನೆಯ ದಿನದವರೆಗೂ ಯಾವ ನಖರವೂ ಇಲ್ಲ. ಹಣ ಪಡೆದು ‘ಹೋಗಿಬರ್ತೇನೆ ಮೇಡಂಎಂದು ಹೇಳಿದ್ದ. ‘ಸರಿ ನಿನ್ನನ್ನು ಬಾಲಿವುಡ್‌ನಲ್ಲಿ ನೋಡ್ತೇನೆಎಂದೆ. ‘ಖಂಡಿತಾ ಮೇಡಂ, ಆಗಲಾರದ್ದು ಏನಿದೆ ಹೇಳಿ?’ ಎಂದ.

ಅವನ ಕಣ್ಣುಗಳ ಮಿಂಚು ನೋಡಿದರೆ ಈ ಹುಡುಗ ಪ್ರಯತ್ನಪಟ್ಟು ಅಲ್ಲಿಗೆ ಹೋಗಿ ಮುಟ್ಟಬಹುದು ಎನ್ನಿಸಿತು. ‘ಸುಖೇಶ್ ಖಂಡಿತಾ ಆಗಲಿ. ಆದರೆ ಯಾವುದೇ ಕಾರಣಕ್ಕೂ ನಿನ್ನ ಅಪ್ಪನನ್ನು ಮರೀಬೇಡಎಂದೆ. ಸುಖೇಶ್ ನಕ್ಕ. ನಕ್ಕಿದ್ದು ನೀವೇನು ಹೇಳುವುದು ಅದು ನನಗೆ ಗೊತ್ತಿದೆ ಅವರು ನನ್ನ ಅಪ್ಪ ಅಂತಲಾ? ಅಥವಾ ತನ್ನ ಆತ್ಮವಿಶ್ವಾಸದ ಹೆಜ್ಜೆ ಗುರುತುಗಳನ್ನು ನೀವೂ ನೋಡುತ್ತೀರಾ ಅಂತಲಾ? ಇಷ್ಟಕ್ಕೂ ಅರ್ಥ ಹುಡುಕುವುದು ಯಾಕೆ? ಎಂದಾದರೂ ಅವನ ಹೆಸರು ನನಗೆ ಬಾಲಿವುಡ್ ಟೈಟಲ್‌ಗಳಲ್ಲಿ ಕಾಣಲಿ ಎನ್ನುವ ಆಸೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: