ಪಿ ಚಂದ್ರಿಕಾ ಅಂಕಣ – ಕತೆಗಾರರಿಲ್ಲ ಅಂದ್ರೂ ಸಿನೆಮಾ ಆಗಲ್ಲ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

28

ಪುಟ್ಟಣ್ಣನ ಜೊತೆ ಅಶೋಕ್‌ಗೆ ಜಗಳ ಆಗಿತ್ತಲ್ಲ, ಅವತ್ತು ಮಾರನೆಯ ದಿನ ನಮ್ಮ ಪಾಡಿಗೆ ನಾವು ಬೆಳಗ್ಗೆ ತಿಂಡಿ ಮುಗಿಸಿ ಶೂಟಿಂಗ್‌ಗೆ ಹೊರಡುತಿದ್ದೆವು. ಮನಸ್ಸು ಭಾರವೇ ಇತ್ತು. ನಮ್ಮ ಹತಾರಗಳನ್ನು ತೆಗೆದುಕೊಂಡು ಬಂದು ಗಾಡಿಯಲ್ಲಿ ತುಂಬುತ್ತಿದ್ದೆವು. ಅಷ್ಟರಲ್ಲಿ ರಾಮಣ್ಣ ನನ್ನ ಹತ್ತಿರಕ್ಕೆ ಬಂದರು. ನಾನು ಅವರನ್ನು ನೋಡಿ ನಕ್ಕು ‘ಏನು ಸರ್’ ಎಂದೆ. ಕುಡಿದದ್ದು ಇನ್ನೂ ಇಳಿದ ಹಾಗಿರಲಿಲ್ಲ, ಮುಖವನ್ನೂ ತೊಳೆದಿರಲಿಲ್ಲ. ಊದಿಕೊಂಡಿದ್ದ ಮುಖವನ್ನು ಮತ್ತಷ್ಟು ಕಠಿಣ ಮಾಡಿಕೊಂಡು, ‘ಇದು ಪ್ರಕೃತಿಗಿಂತ ಒಳ್ಳೆಯ ಸ್ಕ್ರಿಪ್ಟಾ’ ಎಂದರು.

ನಾನು ಅವರ ಮುಖವನ್ನು ದಿಟ್ಟಿಸಿದೆ ಕೋಪ ರವರವ ಅನ್ನುತ್ತಿತ್ತು. ಅಚ್ಚರಿಯಾಯಿತು ಅರೆ ನನಗೂ ಇವರಿಗೂ ಈ ಮಾತಿಗೂ ಏನು ಸಂಬಂಧ ಎಂದು. ಆದರೆ ಅವರು ಮಾತ್ರ ಬಿಡಲು ತಯಾರಿರಲಿಲ್ಲ. ಮತ್ತೆ ಮತ್ತೆ ಅದನ್ನೇ ಕೇಳಿದರು.’ಅದನ್ನ ಮಾಡಿದ್ದೂ ನಾನೇ ಇದನ್ನು ಮಾಡಿದ್ದೂ ನಾನೇ. ಏನೀಗ?’ ಎಂದೆ ಸಹಜವಾಗಿ. ರಾಮಣ್ಣನಿಗೆ ಎಲ್ಲಿತ್ತೋ ಕೋಪ ಗೊತ್ತಿಲ್ಲ. ‘ನೀವೇ ದೊಡ್ಡವರು ಅಂದುಕೊಂಡು ಬಿಡಬೇಡಿ. ಕ್ಯಾಮೆರಾ ಮನ್ ಇಲ್ಲದಿದ್ದರೆ ಸಿನೆಮಾ ಆಗೊಲ್ಲ, ಅವರ ಜೊತೆ ಜಗಳಮಾಡುತ್ತೀರಲ್ಲಾ?’ ಅಂದರು. ಆ ಕ್ಷಣ ಬಿಟ್ಟರೆ ನನಗೂ ಅಶೋಕ್‌ ಯಾವ ಜಗಳವೂ ಇಲ್ಲ. ಕೆಲಸದ ಮಧ್ಯೆ ಬರುವ ಮಾತು ಸ್ವಲ್ಪ ಜಾಸ್ತಿ ಆಯಿತು ಅನ್ನುವುದನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಕೆಲಸದಲ್ಲಿ ಇದೆಲ್ಲಾ ಮಾಮೂಲಿ. ನನಗೆ ಅವರು ಕೇಳಿದ್ದು ಕೋಪ ತರಿಸಿತು, ಆದರೂ ಸೌಮ್ಯವಾಗೇ, ಇದೊಳ್ಳೆ ಕಥೆಯಾಯಿತಲ್ಲಾ? ಕತೆಗಾರರಿಲ್ಲ ಅಂದ್ರೂ ಸಿನೆಮಾ ಆಗಲ್ಲ, ಕಡೆಗೆ ಊಟ ಬಡಿಸುವವರೂ ಇರಲೇ ಬೇಕು. ಎಲ್ಲರೂ ಸೇರಿದ್ರೇನೇ ಸಿನೆಮಾ’ ಎಂದೆ.

‘ಅಲ್ಲಾ ಕಥೆಯನ್ನು ಹದಿಮೂರು ವರ್ಷನ್ ಬರೆದುಕೊಂಡೆವು ಅಂದಿದ್ದಿರಲ್ಲಾ ಏನಿದೆ ಅಂಥಾದ್ದು ಇದರಲ್ಲಿ?’ ಎಂದರು ಮತ್ತೆ. ಅಷ್ಟರಲ್ಲಿ ಪಂಚಾಕ್ಷರಿ ಅಲ್ಲಿಗೆ ಬಂದರು.’ ಏನಿದೆ ಅನ್ನುವುದನ್ನು ನೀವು ಕೇಳುವುದು ಬೇಡ. ಕಥೆ ಕೆಟ್ಟದಾಗಿದ್ದರೆ ನೀವ್ಯಾಕೆ ಒಪ್ಪಿಕೊಂಡಿರಿ? ಕಥೆ ಕೇಳದೆ ನಟನೆ ಮಾಡಲಿಕ್ಕೆ ಬಂದಿದ್ದೀರಾ?’ ಎಂದೆ ನಾನೂ ಸ್ವಲ್ಪಖಾರವಾಗಿ. ಪಂಚಾಕ್ಷರಿ ಏನಾಯಿತು?’ ಎಂದರು. ‘ನೋಡಿ ಏನೆಲ್ಲಾ ಮಾತಾಡುತ್ತಿದ್ದಾರೆ’ ಎಂದೆ. ಅವರು ರಾಮಣ್ಣನಿಗೆ ಏನೂ ಹೇಳಲಿಲ್ಲ ನನಗೆ. ‘ನೀವ್ಯಾಕೆ ಇದನ್ನೆಲ್ಲ ಹೇಳಿದ್ರಿ?’ ಎಂದು ನನ್ನೆ ಬದಲಿ ಪ್ರಶ್ನೆ ಕೇಳಿಬಿಟ್ಟರು. ನನಗೆ ನಿಜಕ್ಕೂ ಕೋಪ ಬಂತು. ಇವರ ಹತ್ತಿರ ನಾನು ಹೇಳಲು ಹೋಗಿಲ್ಲ’ ಎಂದೆ. ಮತ್ತೆ ಹೇಗೆ ಗೊತ್ತಾಯಿತು?’ ಎಂದು ಅವರು ನನ್ನೇ ಕೇಳಿದರು.

ಹೀಗೆ ಮಾತಿನ ವರಸೆಯಲ್ಲಿ ಯಾರೋ ಏನೋ ಕೇಳಿದ್ದಕ್ಕೆ ಹೇಳಿದ್ದ ಮಾತು ಅದಾಗಿತ್ತು. ರಾಮಣ್ಣ ಕೂಡಾ ನನ್ನ ಮಾತನ್ನ ಕೇಳಿಸಿಕೊಳ್ಳಲಿಕ್ಕೆ ಸಿದ್ಧವಿರಲಿಲ್ಲ. ಅವರಿಗೆ ಬರಹಗಾರರ ಬಗ್ಗೆ ಒಳ್ಳೆಯ ಭಾವನೆ ಇರಲಿಲ್ಲ. ಪೆನ್ನು ಪೇರ‍್ರು ಕೈಲಿದ್ರೆ ಏನು ಬೇಕಾದ್ರೂ ಬರೀಬಹ್ದು ಅದನ್ನ ದೃಶ್ಯಕ್ಕೆ ಇಳಿಸುವಾಗ ತಾಕತ್ತು ಬೇಕು’ ಎಂದು ನಮ್ಮ ಕೆಲಸವನ್ನು ಕಡೆಗಣಿಸಿ ಮಾತನಾಡಿದ್ದರು. ಅವರು ಮಾತ್ರವಲ್ಲ ಸುಮಾರು ಜನ, ನಿಮಗೇನ್ರು ಹೆಚ್ಚು ಖರ್ಚಾಗಲ್ಲ ಅಬ್ಬಬ್ಬಾ ಅಂದ್ರೆ ಹಾಳೆ ಒಂದು ಪೆನ್ನು ಅಷ್ಟೇ’ ಎಂದಿದ್ದು ನೆನಪಿಗೆ ಬಂತು. ಪಂಚಾಕ್ಷರಿ ನನ್ನ ನೆರವಿಗೆ ಬಾರದೆ ಜಾರಿಕೊಂಡರು. ಅದಕ್ಕೆ ಕಾರಣ ಏನು ಎಂದು ಗೊತ್ತಾಗಲಿಲ್ಲ. ಇಂಥಾಮಾತುಗಳಿಂದ ಪ್ರಯೋಜನವಿಲ್ಲ ಅನ್ನುವುದೂ ಇರಬಹುದು. ಆದರೆ ನನ್ನನ್ನೇ ನಿಲ್ಲಿಸಿಕೊಂಡು ಗುರಿ ಮಾಡಿ ಪ್ರಶ್ನಿಸುತ್ತಿದ್ದರೆ ಹಾಗೆ ಹೋಗುವುದಾದರೂ ಹೇಗೆ?

ನಾನು ಸ್ಕ್ರಿಪ್ಟ್‌ ಗಾಗಿ ಕಷ್ಟ ಪಟ್ಟಿದ್ದು ನಿಜ. ಒಂದು ಕತೆ ಚಿತ್ರ ಕಥೆ ಆಗುವಾಗ ಏನೆಲ್ಲಾ ಅಡೆತಡೆಗಳು ಇರುತ್ತೆ ಅನ್ನುವುದು ಚಿತ್ರ ಕಥೆ ಮಾಡುವವರಿಗೇ ಗೊತ್ತು. ಅದೇ ಒಂದು ಪಯಣ. ಸವಾಲುಗಳ ಕತ್ತಿಯಲುಗಿನ ಮೇಲೆ ಓಡಾಡುವಾಗ ನಮ್ಮ ಕಾಲಿಗೆ ಗಾಯವೂ ಆಗದ ಹಾಗೆ ನೋಡಿಕೊಳ್ಳಬೇಕು. ಈ ಪಯಣದಲ್ಲಿ ಕೊನೆಗೆ ನಾವೆ ಹುಡುಕಿಕೊಳ್ಳುವ ಅಥವಾ ಅಚಾನಕ್ ಆಗಿ ಸಿಗುವ ಸತ್ಯಗಳು ನಮ್ಮೊಳಗೆ ಒಂದು ಆನಂದವನ್ನು ತಂದೊಡ್ಡುತ್ತದೆ. ಅದೇ ಮಂತ್ರಿಕತೆ. ಕಥೆಯಲ್ಲಿ ಅದನ್ನ ಸಾಧಿಸಲಿಕ್ಕೆ ಪ್ರತಿಯೊಬ್ಬ ಬರಹಗಾರನ ತುಡಿತವೂ ಇರುತ್ತದೆ. ಹಾಗೆ ಸದ್ಯದ ಸತ್ಯಗಳಿಗೆ ಶಾಶ್ವತ ಪರಿಹಾರವಾಗಿ ಮಾನವೀಯತೆಯನ್ನು ಬೆಸೆಯುವ ಹಾಗೆ ಬಿದ್ದ ಮಸೀದಿಯ ಗೋಡೆ ನಮ್ಮ ಧಾರ್ಮಿಕತೆಗೆ ಪಾಪಪ್ರಜ್ಞೆಯನ್ನು ಹೆಚ್ಚಿಸಬೇಕಿತ್ತು.

ತಪ್ಪುಗಳನ್ನು ಮರುಕಳಿಸದ ಹಾಗೆ ನೋಡಬೇಕಿತ್ತು. ಆದರೆ ಅದು ವಿಜಯದ ಸಂಕೇತವಾಗಿಬಿಟ್ಟಿತ್ತು. ಒಳಗೂ ಹೊರಗೂ ಕಾಡಬೇಕಿದ್ದ ಈ ಸಂಗತಿಯ ಬಗ್ಗೆ ಹೇಳುವವರು ಯಾರು? ನನಗೆ ಕಥೆಯಾಗಿ ಅದರ ಬಗ್ಗೆ ಅಪಾರವಾದ ಪ್ರೀತಿಯಿದೆ. ಅದು ನನ್ನೊಳಗಿನ ಅನಂತ ಅವಕಾಶಕ್ಕೆ ಬಾಗಿಲನ್ನು ತೆರೆದುಬಿಟ್ಟಿತ್ತು. ನಾನೇ ನನ್ನ ಯವ್ವನದ ದಿನಗಲಲ್ಲಿ ಬರೆದ ಸರಯೂ ನದಿಯಾಳದಲ್ಲಿ ಕವಿತೆಯಲ್ಲು ಅದನ್ನೇ ಹೇಳಹೊರಟಿದ್ದೆ.

ಪಕ್ಕದ ಮನೆಯ ಪಾತಿಮಾಳ ಜೊತೆ ಆಡುವತಂಗಿಯನ್ನು ಪ್ರಶ್ನಿಸಿದಾಗ ಅವಳು ಕುಂಟಾ ಬಿಲ್ಲೆಯನ್ನು ನಾನು ಆಡಿದಹಾಗೆ ಆಡುತ್ತಾಳೆ, ಅವಳ ಜೊತೆ ಆಡಿದರೆತಪ್ಪೇನು ಎಂದು ಪ್ರಶ್ನಿಸುವ ಅವಳು ಈ ಸಮಾಜ ಪಡೆದುಕೊಳ್ಳಬೇಕಿರುವ ಪ್ರಜ್ಞಾವಂತಿಕೆಗೆ ಸಾಕ್ಷಿಯಾಗುತ್ತಾಳೆ. ಅದನ್ನೇ ಈ ಕಥೆಯಲ್ಲು ಹೇಳಬಯಸಿದ್ದೆ. ಸಿನಿಮಾ ಆಗಿ ಏನಾಯಿತೋ ಬಿಟ್ಟಿತೋ ಅದು ಬೇರೆ ಮಾತು. ಆದರೆ ಶುದ್ಧ ಮಾನವೀಯ ತುಡಿತಗಳನ್ನು ಕಥೆಯಲ್ಲಿಯೂ, ನಾವಿದ್ದ ಮುಕ್ಕಚೇರಿಯ ಕೇರಿಗಳಲ್ಲಿಯೂ, ಮನೆಗಳಲ್ಲೂ ಮನಸ್ಸುಗಳಲ್ಲೂ ಕಾಣುತ್ತಾ ಹೋದೆ.

ಈ ಕತೆ ಆಗಿದ್ದರ ಬಗ್ಗೆ ಕೂಡಾ ಒಂದೆರಡು ಮಾತನ್ನ ಹೇಳಬೇಕು. ‘ಸಿಟಿ ಆಫ್ ಗಾಡ್ಸ್’ ಎನ್ನುವ ಸಿನೆಮಾವನ್ನು ನೋಡಿದ ನನ್ನ ಮತ್ತು ಪಂಚಾಕ್ಷರಿಯ ಮನಸ್ಸಿನಲ್ಲಿ ಮಕ್ಕಳು ಹೀಗೆ ಯಾಕೆ ರೌಡಿಸಂನ ಹಿಂದೆ ಬೀಳುತ್ತಾರೆ ಎನ್ನುವ ಪ್ರಶ್ನೆಕಾಡತೊಡಗಿತ್ತು. ಸಮದ್ ಎನ್ನುವ ಹುಡುಗನನ್ನು ಇಟ್ಟುಕೊಂಡು ಮೊದಲು ಕಥೆ ಮಾಡಿಕೊಂಡಿದ್ದೆವು. ಇಂಥಾ ಮಕ್ಕಳನ್ನು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ ಎನ್ನುವ ನಂಬಿಕೆ ನಮ್ಮದಾಗಿತ್ತು. ಅಂಥಾ ಪ್ರೀತಿಯನ್ನು ಕೊಡುವ ಪಾತ್ರವನ್ನು ನಮ್ಮ ಕಥೆಯ ನಾಯಕಿಯನ್ನಾಗಿಸಿಕೊಂಡಿದ್ದೆವು.

ನಮ್ಮ ಉದ್ದೇಶ ಆರಂಭದಲ್ಲಿ ಇದ್ದದ್ದು ವಿಶ್ವವನ್ನೇ ಕಾಡುತ್ತಿರುವ ತ್ಯಾಜ್ಯದ ಸಮಸ್ಯೆಯನ್ನು ಹೇಳುವುದು. ಮಗು ಹಿಡಿದ ಚಿಪ್ಸ್ ಪ್ಯಾಕೇಯಿನ ಮೇಲೆ ಇಟಾಲಿಯದ್ದೋ ಅಮೇರಿಕನ್ ಪ್ಲೇವರ್‌ನ ಹೆಸರಿತ್ತು. ಅಂಥಾದ್ದನ್ನೇಲ್ಲಾ ಪಾತುಮ್ಮಳ ಸೈಟಿನಲ್ಲಿ ತಂದು ಹಾಕುತ್ತಿದ್ದರು. ಅದರ ವಿರುದ್ಧದ ಹೋರಾಟದ ಕಥೆಯನ್ನು ಮಾಡಿಕೊಂಡಿದ್ದೆವು. ಅಲ್ಲಿ ಮಗಳ ತಲ್ಲಾಖಿನ ಕಥೆಯಿತ್ತು.

ತಲ್ಲಾಖಿನ ಹಿಂದೆ ಬರೀ ಹೆಣ್ಣುಮಕ್ಕಳು ಹುಟ್ಟಿದ ಕಾರಣವಿತ್ತು. ಅದೊಂದು ಕಥೆಯಾಗಿ ಚೆನ್ನಾಗೇ ಇತ್ತು. ಆದರೆ ಒಂದು ತುಂಡು ಗೋಡೆಯನ್ನು ಓದಿದಾಗ ನಮ್ಮ ಪಾತ್ರಗಳು ಇನ್ನಷ್ಟು ಶಕ್ತಿಯುತವಾಗಿ ಕಾಣಲು ತೊಡಗಿತು. ನಾವಂದುಕೊಂಡಿದ್ದ ಕಥೆಯನ್ನು ಭರಿಸುವ ಶಕ್ತಿ ಈ ಒಂದು ತುಂಡು ಗೋಡೆಗೆ ಇದೆ ಎಂದೆನ್ನಿಸಿದ್ದರಿಂದ ಆ ಕಥೆಯನ್ನು ನಮ್ಮ ಸಿನೆಮಾಗೆ ಆಯ್ಕೆ ಮಾಡಿಕೊಂಡೆವು.

ಇಂಥಾ ಕಥೆಯ ಬಗ್ಗೆ ರಾಮಣ್ಣ ಆಡಿದ ಮಾತು ನನ್ನಲ್ಲಿ ನೋವುಂಟು ಮಾಡಿತ್ತು. ಅರ್ಥವಾಗಲಿಲ್ಲ ಅಂದ ಮಾತ್ರಕ್ಕೆ ಪಯಣದ ಹಾದಿಯೇ ಸುಳ್ಳು ಅಂದುಬಿಟ್ಟರೆ? ಒಳ್ಳೆಯದ್ದೊ, ಕೆಟ್ಟದ್ದೋ, ಪ್ರತಿಯೊಂದು ಕಥೆಗೂ ಅದರದ್ದೆ ಆದ ಪಯಣ ಇರುತ್ತದೆ ಅನುಭವ ಜಗತ್ತು ಇರುತ್ತದೆ. ಸಮಾಜಕ್ಕೆ ಒದಗುವ ಆತಂಕವನ್ನು ಎತ್ತಿ ತೋರಿಸಿ ಅದನ್ನು ಗುಣಪಡಿಸುವ ಜರೂರು ಇರುತ್ತದೆ.

ಮತ್ತೆ ನಾನು ರಾಮಣ್ಣ ಅವರನ್ನು ಮಾತಾಡಿಸಲಿಲ್ಲ ನನ್ನೊಳಗೆ ಇದ್ದ ಚಿಕ್ಕಪ್ಪನಂಥಾ ರಾಮಣ್ಣ ಮರೆಯಾಗಿಬಿಟ್ಟರು. ಆಯ್ಕೆ ಕಲಾವಿದನದ್ದು. ಅಂಮ್ಥಾ ಎಚ್ಚರಿಕೆ ಇಲ್ಲದೆ ನಂತರ ಮಾತಾಡುವವರ ಬಗ್ಗೆ ಏನು ಹೇಳುವುದು? ನನಗೆ ಬೇಸರವಾಗಿದ್ದು ಅವರು ನಾವು ಮಾಡಿದ್ದ ಕಥೆಯನ್ನು ಹೀಗಳೆದರು ಅನ್ನುವುದಕ್ಕೆ ಅಲ್ಲ. ಸಂಬಂಧವೇ ಇಲ್ಲದ ವಿಷಯಕ್ಕೆ ಮಾತಾಡಿದರು ಅಂತಲೂ ಅಲ್ಲ. ಅದೊಂದು ಗೆಸ್ಛರ್. ಒಳಗೆ ಪ್ರೀತಿಯ ಬಂಧವನ್ನು ನಂಟು ಮಾಡುವಾಗ ತೊಡಕಾಗುತ್ತಲ್ಲಾ ಅಂಥಾದ್ದು. ಅದು ತಾನು ಮಾಡುವ ಪಾತ್ರದ ಜೊತೆ ಕಲಾವಿದ ಸಾಧಿಸಿಕೊಳ್ಳಬೇಕು. ಅವನಿಗೆ ಅವಕಾಶ ಮಾತ್ರವಲ್ಲ ಗಾಢವಾದ ನಂಬುಕೆಯೂ ಬೇಕಾಗುತ್ತದೆ.

ಆದರೂ ನನ್ನ ಕಾಡಿಸಿದ್ದು, ಸಂಬಂಧಗಳು ಯಾಕೆ ಹುಟ್ಟುತ್ತವೋ ಗೊತ್ತಿಲ್ಲ ಮಧುರತೆ ಮಾತ್ರ ಕಳೆದರೆ ಅದು ತೇವ ಆರಿಸಿಕೊಂಡು ಕಟುಕಲಾದ ನೆಲವಾಗುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: