
ಪಿ.ಆರ್.ವೆಂಕಟೇಶ್
—–
ತಿಕ್ಕಿದಷ್ಟೂ ಸವೆಯುತ್ತಿ
ಮುಷ್ಪಿಗೆ ಸಿಗದಂತೆ.
ಇನ್ನೇನು ಕರಗಿಹೋದೆ ಎನ್ನುವಾಗ
ಮತ್ತೊಂದು ರೂಪ ಪಡೆದು
ಪುಟ್ಟ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಕೊಳ್ಳುತ್ತಿ
ಗುಹೆ ಹೊಕ್ಕ ಧ್ಯಾನಿಯಂತೆ.
ಕೊಳಕೊ, ಬೆವರಾಡಿದ ಬಸಿಯೋ
ನಾತಿಟ್ಟ ಕಿಲುಬೋ ಯಾವ ಮೈಯಾದರೇನು
ಜಾತಿ. ಧರ್ಮ, ಮತದ ಬೇಧವಿಲ್ಲದೆ
ಕೊಳೆ ಕಿಳುವುದಷ್ಪೆ ನಿನ್ನ ನಡೆ.
ಕೊಳಕನೆಲ್ಲ ತಿಂದು ಕೋಮಲತೆಯನೆರೆದ
ಯಾವ ಬಿಂಕವಿಲ್ಲದ ಬುದ್ಧನಗೆ ನಕ್ಕ ನಿನಗೆ
ನಾನೇನು ಕೊಡಲಿ ?
ಪೂಜೆಗೊಗ್ಗದ ಜೀವಿ ನೀನು
ಕಣ್ಣಿಗೊತ್ತಿಕೊಂಡರೆ ಬೆಂಕಿಯುರಿ.
ಮೈತುಂಬ ಬುರಗೆಬ್ಬಿಸಿ
ಬದುಕಿನ ಅರ್ಥಕ್ಕೆ ಹೊಸ ಭಾಷ್ಯ ಬರೆದ ಕವಿ.
ನಿನ್ನ ಬಗೆ ಎದುರು ನನ್ನ ಸೋಲು ಸಬೂನೆ

ಮೂಗುಮುಚ್ಚಿಕೊಳ್ಳುವ ಗುಪ್ತಗಳ ಹೊಕ್ಕಾಡಿ ತೊಳೆದಷ್ಟೂ ಪಳಪಳನೆ ಹೊಳೆಯುತ್ತಿ
ನನ್ನನ್ನೂ ಹೊಳೆಪಿಸಿ.
ನಾಚಿಕೆ ಎಂಬುದೇ ಇಲ್ಲ
ನನ್ನ ಕೊಳೆಗೆ ನಾನೆ ನಾಚುತ್ತೇನೆ.
ಸಾಬೂನೆ
ಅದೆಷ್ಟು ಬಣ್ಣಗಳೆ ನಿನ್ನವು
ಕಪ್ಪು ಬಿಳಿ ಕೆಂಪು ಹಸಿರು ಲೆಖಕ್ಕೆ ಸಿಗದಷ್ಟು
ಯಾರಿಗೂ ಅಂಟಿಸದ ಜಾಣಪಟ್ಟು.
ತಿಕ್ಕಿದವರ ಮೈ ಬಣ್ಣ ಅಳಿಸದ ಸೌರ್ಹಾದೆ,
ಅಂಟಿಸಿದ್ದು ನಿನ್ನೊಡಲ ಘಮ ಮಾತ್ರ
ತಿಕ್ಕಿದಾಗ ಗಾಯಕೊರೆದಿಲ್ಲ ಮೈ ಗಾಯಗಳ ತೊಳೆದು ಉರಿತಗಳ ಕಳೆದೆ.
ಕ್ಷಮಿಸು ಸೋಪೆ,
ನನ್ನ ಕೊಳಕೆಲ್ಲ ನಿನಗಂಟಿಸುವ ಸ್ವಾರ್ಥಿ ನಾನು.
ಸಾಬೂನೆ
ನಾನಾಗ ವರಟು
ನೀನು ಸವಳ ಮರಳಿನ ಹರಳು.
ಬಡವನ ಪಾಲಿಗೆ ಅಂಬ್ಲಿಯಾಗಿದ್ದೆ.
ಕಾಲಕಳೆದಂತೆ ಅರಸೊತ್ತಿಗೆಯ ನೆತ್ತಿಗೂ
ಮರದಲ್ಲರಳಿದ ಅಂಟಾಳಕಾಯಿ,
ಯಂತ್ರಗಳನಪ್ಪಿದಾಗ ನೀನು ನನ್ನಷ್ಟೇ ನುಣುಪು
ಅದೆಷ್ಟು ಯುಗಗಳ ಹೊಲಸ ತೊಳೆದೆ ತಾಯಿ.
ಅದೆಷ್ಟು ನೀರು ಕುಡಿದೆ.
ಎಲ್ಲರ ಮೈ ಕೊಳಕೇ ನಿನ್ನ ಊಟ
ಯಾವ ಪ್ರಶಸ್ತಿಗೂ ಹಪಹಪಿಸಿಲ್ಲ.
ಮೈ ಮೆತ್ತಗಿರಲಿ, ಕಲ್ಲಾಗಿರಲಿ, ಬಟ್ಟೆಯಂತೆ
ನುಣುಪಿರಲಿ
ತಿಕ್ಕಿ ತೊಳೆವ ಧನ್ಯತೆಯ ಮೆರೆದೆ.
ಕಾಯಕದ ನಿನ್ನ ಬಟ್ಟೆಯಲ್ಲಿ
ಎಷ್ಟೊಂದು ನದಿಗಳ ಹರಿವು
ಅದೆಷ್ಟು ದೋಣಿಗಳ ಪಯಣ
ಎಲ್ಲ ಹೆಜ್ಜೆಗಳ ಕೆನೆಮುದ್ದೆ ನೀನು
ಲೋಕವೇ ಬೆರಗಾಗುವ ಬೆವರಲ್ಲೇ ಹುಟ್ಟಿ
ಬೆವರಲ್ಲೇ ಕರಗುವ ಬೆವರ ಬಂಧಿ, ಬೆವರ ಗಂಧಿ.
ದೇವರೇ
ಇನ್ನೊಂದು ಜನ್ಮ ವಿದ್ದರೆ
ನೀನು ಸತ್ಯವಾಗಿದ್ದರೆ
ನನಗೆ ಸೋಪಿನ ಜನ್ಮ ನೀಡು
ತೊಳೆದಾಟದ ಋಣಕ್ಕೆ ಅಣಿಯಾಗಬೇಕು.
0 ಪ್ರತಿಕ್ರಿಯೆಗಳು