ಪಿರಿಯಾಪಟ್ಣ ಸತೀಶ್ ಇನ್ನು ನೆನಪಷ್ಟೇ..

ಗಾಣಧಾಳು ಶ್ರೀಕಂಠ

ಮೂರು ದಶಕಗಳ ಹಿಂದೆಯೇ ಸಿರಿಧಾನ್ಯಗಳ ಮಹತ್ವವನ್ನು ದೇಶದಾದ್ಯಂತ ಪಸರಿಸಿದ್ದ ಹೈದರಾಬಾದ್‌ನ ಡೆಕ್ಕನ್‌ ಡೆವಲಪ್‌ಮೆಂಟ್ ಸೊಸೈಟಿಯ ಮುಖ್ಯಸ್ಥರು ಹಾಗೂ ನನ್ನ ಆತ್ಮೀಯರಾದ ಪಿರಿಯಾಪಟ್ಟಣ ವಿ. ಸತೀಶ್ ಅವರು ನಿನ್ನೆ ರಾತ್ರಿ(ಶನಿವಾರ) ನಿಧನರಾಗಿದ್ದಾರೆ. ಬೆಳಿಗ್ಗೆ ಬೆಳಿಗ್ಗೆಯೇ ಇಂಥದ್ದೊಂದು ಸುದ್ದಿ ಮನಸ್ಸನ್ನು ತುಸು ಘಾಸಿಗೊಳಿಸಿದೆ.

ಕೃಷಿ ಚಿಂತಕ ದೇವೇಂದ್ರ ಶರ್ಮಾ Devinder Sharma ಅವರು ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಫೋಟೊ ಪೋಸ್ಟ್‌ ಮಾಡಿ ನಾಲ್ಕು ಸಾಲು ಬರೆದಿದ್ದಾಗ, ಅವರ ಆರೋಗ್ಯದಲ್ಲಿ ಚೇತರಿಕೆಯಾಗಿರಬಹುದು ಎಂದು ಖುಷಿಯಾಗಿದ್ದೆ. ನನ್ನ ನಂಬಿಕೆ ಹುಸಿಯಾಯಿತು.. ಕೃಷಿಕರ ಪರ– ದುರ್ಬಲ ವರ್ಗದ, ಗ್ರಾಮೀಣ ಮಹಿಳೆಯರ ಪರ ಹೋರಾಟದ ಧ್ವನಿಯೊಂದು ಸ್ತಬ್ಧವಾಯಿತು.

ಸತೀಶ್ ಸರ್ ಅವರೊಂದಿಗೆ ನನ್ನದು ಎರಡು ದಶಕಗಳ ಒಡನಾಟ. ಆರಂಭದಲ್ಲಿ ಇಮೇಲ್– ಫೋನ್ ಮೂಲಕವಿದ್ದ ಒಡನಾಟ, 2006ರ ನಂತರ ಮುಖಾಮುಖಿ ಭೇಟಿಯಾಗುವ ಅವಕಾಶ. ಸಿರಿಧಾನ್ಯಗಳೇ ನಮ್ಮಿಬ್ಬರ ಗೆಳೆತನದ ಕೊಂಡಿ.

ಪಿರಿಯಾಪಟ್ಟಣ ವಿ. ಸತೀಶ್– ಎಂಬ ಹೆಸರೇ ನನ್ನನ್ನು ಹೆಚ್ಚು ಆಕರ್ಷಿಸಿದ್ದು. ಡಿಡಿಎಸ್ ಸಂಸ್ಥೆಯ ಸಹಯೋಗದಲ್ಲಿ ತಯಾರಾದ ಬಿ.ಟಿ. ಹತ್ತಿ ಕುರಿತ ಅಧ್ಯಯನದ ವರದಿಯ ಬೆನ್ನು ಹತ್ತಿದಾಗಲೇ ಅವರಲ್ಲಿರುವ ಅಗಾಧವಾದ ಜ್ಞಾನ ಕಂಡಿದ್ದು. ಆಗಲೇ ಅವರನ್ನು ಹುಡುಕಿ, ಪರಿಚಯ ಮಾಡಿಕೊಂಡಿದ್ದೆ. ಜೊತೆಗೆ, ಕನ್ನಡಿಗರೊಬ್ಬರು ಆಂಧ್ರದ ಯಾವುದೋ ಒಂದು ಹಳ್ಳಿಯಲ್ಲಿ ದುರ್ಬಲವರ್ಗದವರ, ಅದರಲ್ಲೂ ಗ್ರಾಮೀಣ ಮಹಿಳೆಯರ ಬಲವರ್ಧನೆಗೆ ಶ್ರಮಿಸುವುದೆಂದರೆ ಅದು ಸುಲಭದ ವಿಷಯ ಎನ್ನಿಸಿರಲಿಲ್ಲ. ಇದೂ ಕೂಡ, ಅವರನ್ನು ಪರಿಚಯ ಮಾಡಿಕೊಳ್ಳಲು ಕಾರಣವಾಗಿತ್ತು.

ಅವರನ್ನು ಮೊದಲು ಭೇಟಿಯಾಗಿದ್ದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ. ಮೊದಲ ಮುಖಾಮುಖಿ ಭೇಟಿಯಲ್ಲೇ ಒಂದು ಪುಟ್ಟ ಸಂದರ್ಶನ. ಜೊತೆಗೆ, ‘ಭವಿಷ್ಯದ ಆಹಾರ ಸಿರಿಧಾನ್ಯಗಳು‘– ಕುರಿತ ಬರಹ. ಅಲ್ಲಿಂದ ಆತ್ಮೀಯತೆ ಇನ್ನಷ್ಟು ವಿಸ್ತಾರ. ಇದರ ಫಲವಾಗಿ ದೆಹಲಿಯಲ್ಲಿ ಡಿಡಿಎಸ್‌ ಆಯೋಜಿಸಿದ್ದ ರಾಷ್ಟ್ರಮಟ್ಟದ ಮೊದಲ ‘ಸಿರಿಧಾನ್ಯಗಳ ಕುರಿತ ವಿಚಾರ ಸಂಕಿರಣ‘ಕ್ಕೆ ಗೆಳೆಯ ಆನಂದತೀರ್ಥ ಪ್ಯಾಟಿ, ಕೃಷ್ಣಪ್ರಸಾದ್ ಅವರೊಂದಿಗೆ ಆಹ್ವಾನ. ವಿಚಾರ ಸಂಕಿರಣದಲ್ಲಿ ನಾವು ಭಾಗವಹಿಸಲು ಹಿಂಜರಿದರೂ, ನಮ್ಮನ್ನು ಹುರಿದುಂಬಿಸಿದ್ದು ಸತೀಶ್ ಅವರು. ಅಂದು ‘ಹದಿನೈದು ವರ್ಷಗಳಲ್ಲಿ ಸಿರಿಧಾನ್ಯಗಳ ಪ್ರಚಾರಕ್ಕೆ ಕರ್ನಾಟಕದ ಮಾಧ್ಯಮಗಳ ಕೊಡುಗೆ’ ಕುರಿತು ನಾನು ಮತ್ತು ಪ್ಯಾಟಿ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ್ದೆವು. ಅಲ್ಲಿಂದ ಅವರೊಂದಿಗಿನ ಗೆಳೆತನದ ಬಂಧ ಮತ್ತಷ್ಟು ಗಟ್ಟಿಯಾಯಿತು.

ಮಾಹಿತಿ ವಿನಿಮಯಕ್ಕೆ ಸದಾ ತೆರೆದುಕೊಳ್ಳುತ್ತಿದ್ದ ಸತೀಶ್ ಸರ್, ಒಮ್ಮೆ ಪ್ರತಿ ವರ್ಷ ಫೆಬ್ರುವರಿಯಲ್ಲಿ ಝಹೀರಾಬಾದ್‌ನ ಪಸ್ತಾಪುರದಲ್ಲಿ ನಡೆಯ ‘ಜೀವವೈವಿಧ್ಯ ಮೇಳಕ್ಕೆ‘ ಆಹ್ವಾನಿಸಿದ್ದರು. ನೂರಾರು ರೈತರು ಸಂರಕ್ಷಿಸಿರುವ ದೇಶಿ ಬೀಜಗಳ ಮೆರವಣಿಗೆಯೇ ಆ ಉತ್ಸವದ ಉದ್ದೇಶ. ದೇಸಿ ಬೀಜಗಳ ಭಂಡಾರವನ್ನೇ ಹೊತ್ತ ನೂರಾರು ಚಕ್ಕಡಿಗಳು ಸುಮಾರು ಇಪ್ಪತ್ತೆರಡು ಹಳ್ಳಿಗಳನ್ನು ಸುತ್ತಾಡಿಕೊಂಡ, ಪಸ್ತಾಪುರದಲ್ಲಿ ಸಮಾರೋಪಗೊಂಡು, ಕೊನೆಯಲ್ಲಿ ಎಲ್ಲ ಹಳ್ಳಿಗರೂ ಸೇರಿ ನಿರ್ಣಯವೊಂದನ್ನು ಮಾಡುವ ಕಾರ್ಯಕ್ರಮವದು. ಆ ಇಡೀ ಕಾರ್ಯಕ್ರಮ ಒಂದು ಅದ್ಭುತ ಪರಿಕಲ್ಪನೆ. ಅದೊಂದು ಭಾರತದ ಮಹಾ ಬೀಜ ವೈಭವವನ್ನೇ ತೆರೆದಿಡುವಂಥದ್ದು. ಅಂಥ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಆದರಿಸಿದ್ದನ್ನು ಮರೆಯಲಾಗದು.

ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಈಗ ವಿಶ್ವಸಂಸ್ಥೆ ಘೋಷಿಸಿದೆ. ಎಲ್ಲರೂ ಈಗ ಸಿರಿಧಾನ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಎರಡೂವರೆ ದಶಕಗಳ ಹಿಂದೆಯೇ, ಮರೆತು ಹೋಗಿದ್ದ ಸಿರಿಧಾನ್ಯವೆಂಬ ಬರಗಾಲದ ಮುತ್ತುಗಳನ್ನು ಪ್ರಚಾರಕ್ಕೆ ತಂದವರು ಇದೇ ಸತೀಶ್ ಅವರು. ಅದಕ್ಕಾಗಿ ಅವರು ದೇಶದಾದ್ಯಂತ ಸಿರಿಧಾನ್ಯಗಳ ಬಗ್ಗೆ ಕೆಲಸ ಮಾಡುವ ಸಂಘಟನೆ, ಸಂಸ್ಥೆಗಳು, ರೈತರು, ವಿಜ್ಞಾನಿಗಳು, ಸರ್ಕಾರದ ಅಧಿಕಾರಿಗಳು, ನೀತಿ ನಿರೂಪಕರನ್ನು ಒಟ್ಟುಗೂಡಿಸಿ, ಆಂದೋಲನವನ್ನೇ ರೂಪಿಸಿದ್ದರು.

‘ಒಣಭೂಮಿ‌ ಬೇಸಾಯಕ್ಕೆ ಹೊಂದುವ ಸಿರಿಧಾನ್ಯಗಳ, ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಪರೋಕ್ಷ ವಾಗಿ ಪೂರಕವಾಗುವ ಬೆಳೆಗಳು. ಇಂಥ ಸಿರಿಧಾನ್ಯಗಳನ್ನು‌ ಬೆಳೆಯುವ ಮೂಲಕ ಪರೋಕ್ಷವಾಗಿ ‘ಹವಾಮಾನ ಬದಲಾವಣೆ ನಿಯಂತ್ರಣ’ಕ್ಕೂ ಶ್ರಮಿಸುವ ರೈತರಿಗೆ, ಸರ್ಕಾರ ಪ್ರೋತ್ಸಾಹ ಧನ ನೀಡಬೇಕೆಂದು ಬಲವಾಗಿ ಪ್ರತಿಪಾದಿಸಿದ್ದವರು ಸತೀಶ್. ಸಮುದಾಯಗಳ‌ ಮೂಲಕ ಇದೇ ಒತ್ತಾಯದ ಧ್ವನಿಯನ್ನು ಸರ್ಕಾರಕ್ಕೆ, ನೀತಿ ನಿರೂಪಕರಿಗೂ ತಲುಪಿಸಿದ್ದರು. ಪರಿಣಾಮವಾಗಿ ಅಂದಿನ‌ ಆಂಧ್ರ‌ ಸರ್ಕಾರ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ಘೋಷಿಸಿತು. ಇದು ದೇಶದಲ್ಲೇ ಮೊದಲ ಪ್ರಯತ್ನ ಎಂಬುದು ನನ್ನ ನೆನಪು. ಇದರ ಜೊತೆಗೆ, ಸಿರಿಧಾನ್ಯಗಳನ್ನು ಪಡಿತರದಲ್ಲಿ ಸೇರಿಸಬೇಕೆಂಬ ಒತ್ತಾಯ ಸತೀಶ್‌ ಅವರದ್ದಾಗಿತ್ತು. ಅದೂ ಕೂಡ ಭಾಗಶಃ ಯಶಸ್ವಿಯಾಯಿತು. ಈಗ ಕೆಲವು ರಾಜ್ಯ ಸರ್ಕಾರಗಳು ಅಂಥದ್ದೊಂದು ಕಾರ್ಯಕ್ಕೆ ಮುಂದಾಗಿವೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಹಳ್ಳಿಯಿಂದ ಹಿಡಿದು ಜಾಗತಿಕಮಟ್ಟದ ಹೋರಾಟಗಳಲ್ಲಿ ಸತೀಶ್ ಸರ್ ಸಕ್ರಿಯವಾಗಿದ್ದರು. ಹಳ್ಳಿಗಳಲ್ಲಿ ರೈತರೊಟ್ಟಿಗೆ ಮಾತನಾಡುತ್ತಾ, ಹವಾಮಾನ ಬದಲಾವಣೆಗೆ ಅಗತ್ಯವಾದ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಲೇ, ಬಾಲಿ, ಕೋಪನ್ ಹೆಗನ್‌, ಪ್ಯಾರಿಸ್‌ನಂತಹ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಸಭೆಗಳಲ್ಲೂ ಭಾಗವಹಿಸಿ, ತಮ್ಮ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದರು. ಒಮ್ಮೆ ಕೋಪನ್‌ ಹೇಗನ್‌/ ಬಾಲಿ (ಸರಿಯಾಗಿ ನೆನಪಿಲ್ಲ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶರ್ ಸರ್, ಅಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ನಮ್ಮೊಡನೆ ಫೋನ್‌ನಲ್ಲೇ ಹಂಚಿಕೊಳ್ಳುತ್ತಿದ್ದರು. ಅದನ್ನು ವರದಿ ಮಾಡಿದ್ದ ನೆನಪುಗಳೂ ಇವೆ.

ಸತೀಶ್ ಸರ್, ಡಿಡಿಎಸ್ ಮೂಲಕ, ಗ್ರಾಮೀಣ ಮಹಿಳೆಯರ, ಅದರಲ್ಲೂ ದಲಿತ ಸಮುದಾಯದ ಮಹಿಳೆಯರ ಬಲವರ್ಧನೆಗೆ ಶ್ರಮಿಸಿದ್ದರು. ಮಹಿಳೆಯರಿಗೆ ವಿಡಿಯೊಗ್ರಫಿ ತರಬೇತಿ ನೀಡಿದರು. ಅಕ್ಷರ ಬಾರದ ಮಹಿಳೆಯರು, ಕ್ಯಾಮೆರಾ ಹಿಡಿದು ಜಗತ್ತನ್ನೇ ಸುತ್ತಿ ಬಂದರು.
ಮಹಿಳೆಯರೇ ನಡೆಸುತ್ತಿದ್ದ ‘ಸಂಗಮ್‘ ಸಮುದಾಯ ಬಾನುಲಿ, ಸತೀಶ್ ಅವರ ಮತ್ತೊಂದು ಕೊಡುಗೆ. ಧ್ವನಿ ವಂಚಿತ ಸಮುದಾಯಕ್ಕೆ ‘ಸಮುದಾಯ ರೇಡಿಯೊ‘ ಮೂಲಕ ಧ್ವನಿ ನೀಡಿದ್ದರು ಸತೀಶ್ ಸರ್..

ನನಗಿನ್ನೂ ನೆನಪಿದೆ, ಬೆಂಗಳೂರಿನಲ್ಲಿ ಅವರು ನಡೆಸಿದ ‘ರೈತ ತೀರ್ಪು‘ ಎಂಬ ವಿನೂತನ ಕಾರ್ಯಕ್ರಮ. ಅದು ಸತೀಶ್ ಅವರ ಮತ್ತೊಂದು ಅದ್ಭುತವಾದ ಪರಿಕಲ್ಪನೆ. ಕರ್ನಾಟಕದ ವಿವಿಧ ಪ್ರದೇಶಗಳ ರೈತರು, ರೈತ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳನ್ನು ಒಂದೇ ವೇದಿಕೆಯ ಮೇಲೆ ತಂದು, ವರ್ತಮಾನದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳಿಂದ ಅವರಿಗೆ ಆಗುತ್ತಿರುವ ಲಾಭವನ್ನು ಅವರೇ ಪರಾಮರ್ಶಿಸುವಂತೆ ಮಾಡುವ ಉದ್ದೇಶವನ್ನು ರೈತ ತೀರ್ಪು ಹೊಂದಿತ್ತು. ಕರ್ನಾಟಕದ ಹಲವು ಸಂಘಟನೆಗಳು ಸೇರಿ ಆಯೋಜಿಸಿದ್ದ ಈ ಕಾರ್ಯಕ್ರಮ, ಕೃಷಿ ಕ್ಷೇತ್ರದಲ್ಲಿ ಬಹುದೊಡ್ಡ ಲ್ಯಾಂಡ್‌ ಮಾರ್ಕ್ ಆಯಿತು.

ಇಂಗ್ಲಿಷ್, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಸಾಕಷ್ಟು ಲೇಖನಗಳನ್ನೂ ಬರೆಯುತ್ತಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಸಾಕಷ್ಟು ಓದಿಕೊಂಡಿದ್ದರು. ಒಮ್ಮೆ ಅವರನ್ನು ಸಂದರ್ಶನ ಮಾಡಿದ್ದೆ. ಅದು ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಪಟ್ಟು, ನನಗೆ ತರಾಸು ಅವರು ಕಂಬಿನ ಕೊಯ್ಲು, ರಕ್ತರಾತ್ರಿ, ತಿರುಗುಬಾಣ ಸೇರಿದಂತೆ ಆ ಸರಣಿಯ ಐದು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದರು. ‘ನೋಡ್ರಿ ತರಾಸು ನಿಮ್ಮೂರ ಹೆಸರನ್ನು ಕಾದಂಬರಿಯಲ್ಲಿ ತಂದಿದ್ದಾರೆ. ಅದರಲ್ಲಿ ಗಾಣಧಾಳು ಗೌಡ್ರು.. ಅಂತ ಒಂದು ಉಲ್ಲೇಖವಿದೆ‘ ಎಂದು ಹೇಳಿದ್ದರು. ಹೀಗೆ ಅವರಿಗೆ ನೆನಪಿನ ಶಕ್ತಿ ಅಗಾಧವಾಗಿತ್ತು.

ಇಂಥ ಆಪ್ತವಾಗಿದ್ದ ಸತೀಶ್ ಸರ್, ಐದಾರು ವರ್ಷಗಳ ಹಿಂದೆಯೇ ಇದ್ದಕ್ಕಿದ್ದಂತೆ ‘ಸಂವಹನ‘ ನಿಲ್ಲಿಸಿದರು. ಸುಮಾರು ಬಾರಿ, ಅವರಿಗೆ ಇಮೇಲ್‌ ಮಾಡಿ, ಫೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದೆ. ಯಾಕೋ ಸಾಧ್ಯವಾಗಲಿಲ್. ಆ ನಂತರ ತಿಳಿಯಿತು, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು. ನಂತರ ಸಂಪರ್ಕಿಸುವ ಪ್ರಯತ್ನ ನಿಲ್ಲಿಸಿದೆ. ‘ಒಮ್ಮೆ ಪಸ್ತಾಪುರಕ್ಕೇ ಹೋಗಿ ನೋಡಿ ಬರೋಣ‘ ಎಂದು ಗೆಳೆಯ ಗೋಪಾಲಕೃಷ್ಣನಿಗೂ ಹೇಳಿದ್ದೆ. ನಾವು ಹೋಗೋಣ ಎನ್ನುವುದರಲ್ಲೇ ಸತೀಶ್ ಪಸ್ತಾಪುರದಿಂದ ಎದ್ದು ಹೊರಟಿದ್ದಾರೆ. ಅವರೊಂದಿಗೆ ಮಾತನಾಡುವ ವಿಷಯಗಳು ಇನ್ನೂ ಬಹಳ ಇವೆ.. ಅವೆಲ್ಲವನ್ನು ಇನ್ನು ಯಾರಲ್ಲಿ ಕೇಳೋದು…

ಇತ್ತೀಚೆಗಷ್ಟೇ ಡಾ. ಜಿ.ಎನ್.ಎಸ್. ರೆಡ್ಡಿಯವರನ್ನು ಕಳೆದುಕೊಂಡಿದ್ದೆ. ಆ ದುಃಖವನ್ನು ಮರೆಯುವ ಮುನ್ನವೇ, ನೀವು ಹೊರಟುಬಿಟ್ಟಿರಿ.. ಹೋಗಿ ಬನ್ನಿ ಸರ್.. ನೀವೆಲ್ಲ ಹೇಳಿಕೊಟ್ಟಿರುವ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುತ್ತೇವೆ..

‍ಲೇಖಕರು avadhi

March 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: