ಪಾಲಹಳ್ಳಿ ವಿಶ್ವನಾಥ ಕಥೆ- ಬೀಳ್ಕೊಡುಗೆ…

 ಡಾನ್ ಕ್ಯಾಮಿಲೊ ಕಥೆಗಳು -2

ಪಾಲಹಳ್ಳಿ ವಿಶ್ವನಾಥ

(ಇಟಲಿಯ ಪ್ರಸಿದ್ಧ ಲೇಖಕ ಜೊವಾನಿ ಗ್ವರೇಶಿ (1908 – 1968) ಯ ಅವರ ಖ್ಯಾತ ಸೃಷ್ಟಿ ಪಾದ್ರಿ ಡಾನ್ ಕ್ಯಾಮಿಲೊ ಮತ್ತು ಅವನ ಎದುರಾಳಿ ಊರಿನ ಮಹಾಪೌರ ಪೆಪ್ಪೋನ್. ಪಾದ್ರಿ ಮತ್ತು ಪೆಪ್ಪೋನಿನ ರಾಜಕೀಯ ನಂಬಿಕೆಗಳು ಬೇರೆ ಬೇರೆ ಇದ್ದರೂ ಊರಿನ ಒಳಿತು ಅವರ ಮುಖ್ಯಕಾಳಜಿ. ಇವರ ಪುಟ್ಟ ಪ್ರಪಂಚ ಇರುವುದು ಉತ್ತರ ಇಟಲಿಯ ಪೋ ನದಿಯ ಕಣಿವೆಯಲ್ಲಿ. ಕಥೆಗಳ ಮೂರನೆಯ ಪಾತ್ರ ಏಸು ಕ್ರಿಸ್ತ. ಕ್ಯಾಮಿಲೊಗೆ ಕ್ರಿಸ್ತನ ಜೊತೆ ಮಾತನಾಡುವ ಅಭ್ಯಾಸ. ಒಂದೊಂದು ಬಾರಿ ಕ್ರಿಸ್ತ ಉತ್ತರವನ್ನೂ ಕೊಡುತ್ತಾನೆ. ಇದು ಕ್ಯಾಮಿಲೊ ಕಥೆಯೊಂದರ ಭಾವಾನುವಾದ.)

ಒಂದು ದಿನ ಬೆಳಿಗ್ಗೆ ಡಾನ್ ಕ್ಯಾಮಿಲೋವಿಗೆ ಅವನ ಮೇಲಿನವರಿಂದ ನಗರಕ್ಕೆ ಬರಲು ಆದೇಶ ಬಂದಿತು. ಕ್ಯಾಮಿಲೊ ಇತ್ತೀಚೆಗೆ ಬಹು ಭಾವುಕನಾಗುತ್ತಿದ್ದಾನೆ ಎಂದು ಅವರಿಗೆ ವರ್ತಮಾನ ಹೋಗಿತ್ತು. ಆಗಾಗ್ಗೆ ಸಣ್ಣ ಪುಟ್ಟ ಘರ್ಷಣೆಗಳಿಗೂ ಕಾರಣವಾಗುತ್ತಿದ್ದಾನೆ ಎಂದು ತಿಳಿಯಿತು. ಕ್ಯಾಮಿಲೋ ನಗರಕ್ಕೆ ಹೋಗಿ ಅಲ್ಲಿಯ ಕ್ಯಾಥೆಡ್ರಲಿನಲ್ಲಿ ದೊಡ್ಡವರನ್ನು ನೋಡಿದ. ಅವರಿಗೆ ಬಹಳ ವಯಸ್ಸಾಗಿತ್ತು. ಅವರು ನಿಧಾನವಾಗಿ ಕ್ಯಾಮಿಲೊಗೆ, “ನೋಡು ಕ್ಯಾಮಿಲೊ ಈಗ ನೀನು ಬೇರೆ ಊರಿಗೆ ಹೋಗುವುದು ವಾಸಿ. ಬೇರೆ ಹವ ನಿನಗೆ ಒಳ್ಳೆಯದನ್ನು ಮಾಡುತ್ತದೆ. ಬರೇ ಕೆಲವು ತಿಂಗಳು ಮಾತ್ರ. ಬೆಟ್ಟದ ಮೇಲಿನ ಊರು ಗೊತ್ತಲ್ಲವೆ? ಆ ಊರಿನ ಪಾದ್ರಿ ಹಿರಿಯರೊಬ್ಬರಿದ್ದರು. ಅವರು ತೀರಿಹೋಗಿದ್ದು ನಿನಗೆಗೊತ್ತಲ್ಲವೆ ? ಅಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ. ನೀನು ಹೋಗಿ ಎಲ್ಲಾ ಸರಿಮಾಡಿಬಿಟ್ಟು ಬಾ. ಮೂರು-ನಾಲ್ಕು 3-4 ತಿಂಗಳುಗಳು ತೆಗೆದುಕೊಳ್ಳಬಹುದು…”

“ಬೇರೆಯ ಪಾದ್ರಿಗಳು ಸಿಗಬಹುದಲ್ಲವೇ?’

“ಹೋಗಲು ನಿನಗೆ ಇಷ್ಟವಿಲ್ಲ ಎಂದು ನನಗೆ ಗೊತ್ತು, ಆದರೆ ಜೀವನದಲ್ಲಿ ಇಷ್ಟವಾಗದ ಕೆಲಸಗಳನ್ನೂ ಮಾಡಬೇಕಾಗಿಬರುತ್ತದಲ್ಲವೇ?” ಎಂದು ಹಿರಿಯರು ನಿಧಾನವಾಗಿ ಬುದ್ಧಿ ಹೇಳಿದಾಗ ಕ್ಯಾಮಿಲೊ ಬೇರೆ ದಾರಿ ಇಲ್ಲದೆ ಒಪ್ಪಿಕೊಂಡ.

“ನನಗೆ ಇಷ್ಟವಿರಲಿ, ಇಲ್ಲದಿರಲಿ. ಹಿರಿಯರ ಆದೇಶವನ್ನು ನಾನು ಪಾಲಿಸಬೇಕು.”

“ಬಹಳ ಸಂತೋಷ,” ಎಂದು ಆ ಹಿರಿಯ ಬಿಷಪ್ ಪಾದ್ರಿ ಡಾನ್ ಕ್ಯಾಮಿಲೊವನ್ನು ಆಶೀರ್ವದಿಸಿ ಕಳಿಸಿದರು.

ಕ್ಯಾಮಿಲೊ ವಾಪಸ್ಸು ಊರಿಗೆ ಬಂದು ಹೊಸ ಜಾಗಕ್ಕೆ ಹೋಗಲು ತಯಾರಿ ಮಾಡಿಕೊಳ್ಳಲು ಶುರುಮಾಡಿದ. ನಿಧಾನವಾಗಿ ಎಲ್ಲ ತರಹದ ಸುದ್ದಿಗಳೂ ಶುರುವಾದವು. “ಡಾನ್‌ ಕ್ಯಾಮಿಲೊಗೆ ಬೇರೆ ಊರಿಗೆ ವರ್ಗಾವಣೆಯಾಗಿದೆ!” “ಪಾದ್ರಿಗೆ ಅವನ ಉದ್ಧಟತನಕ್ಕೆ ಅವನ ಹಿರಿಯರು ಶಿಕ್ಷೆ ಕೊಟ್ಟಿದ್ದಾರೆ!” “ಯಾವುದೋ ಕೊಂಪೆ ಊರಿಗೆ ಕಳಿಸುತ್ತಿದ್ದಾರೆ!“ ಹೀಗೆಯೇ ಊರಿನಲ್ಲಿ ಹಲವಾರು ಗಾಳಿ ಸುದ್ದಿಗಳು ತೇಲಾಡುತ್ತಿದ್ದವು.

ಅವರ ಯೋಜನೆಗಳನ್ನು ವಿರೋಧಿಸುತ್ತಿದ್ದ ವ್ಯಕ್ತಿ ಊರು ಬಿಡುತ್ತಿರುವುದು ಪೆಪ್ಪೋನಿನ ಕಡೆಯವರಿಗೆ ಸಂತೋಷವಾಯಿತು. “ಈಗೀಗಂತೂ ಇವನು ಪೋಪರ ತರಹ ಆಡುತ್ತಾನೆ. ಊರಿಗೆ ರಾಜನ ತರಹವೂ ಆಡ್ತಾ ಇದ್ದ. ನಾವುಗಳು ಅವನಿಗೆ ಬುದ್ದಿ ಕಲಿಸುವ ಮುಂಚೆಯೇ ಅವನ ಕಡೆಯವರೇ ಅವನಿಗೆ ಶಿಕ್ಷೆ ಕೊಡುತ್ತಿದ್ದಾರೆ,” ಎಂದ ಪೆಪ್ಪೋನ್. “ಸದ್ಯ ಹೋಗುತ್ತಿದ್ದಾನಲ್ಲ. ತೊಂದರೆ ಕೊಡೋರಿಗೆ ಏನಾಗುತ್ತೆ ಅಂತ ಊರಿನವರಿಗೆ ಗೊತ್ತಾಗ್ತಿದೆ,” ಎಂದ ಪಕ್ಷದ ಇನ್ನೊಬ್ಬ ಸದಸ್ಯ.

ಡಾನ್ ಕ್ಯಾಮಿಲೊ ಊರು ಬಿಡುವ ದಿನ ಬಂತು. ಹೊರಡುವ ಮುನ್ನ ತಲೆಯೆತ್ತಿ ಶಿಲುಬೆಯ ಕ್ರಿಸ್ತನತ್ತ ನೋಡಿದ. “ನಿಮ್ಮನ್ನೂ ತೆಗೆದುಕೊಂಡು ಹೋಗಬೇಕು ಅನ್ನಿಸುತ್ತಿದೆ ಪ್ರಭು,ʼ ಎಂದು ಹೇಳಿದ ಕ್ಯಾಮಿಲೊವಿಗೆ, “ನಾನು ಯಾವಾಗಲೂ ನಿನ್ನ ಜೊತೆಯೇ ಇರುತ್ತೇನೆ. ಕ್ಯಾಮಿಲೊ.. ನೀನು ಆ ಊರು ಸೇರುವ ಮೊದಲೇ ನಾನು ಅಲ್ಲಿ ಹೋಗಿ ನಿನಗೆ ಕಾಯುತ್ತ ಇರುತ್ತೇನೆ,” ಎಂದು ಕ್ರಿಸ್ತನಿಂದ ಆಶ್ವಾಸನೆ ಬಂದಿತು.

ಕ್ಯಾಮಿಲೊ ಊರಿನ ರೈಲ್ವೆ ನಿಲ್ದಾಣಕ್ಕೆ ಹೋದ. ಪುಟ್ಟ ಊರಲ್ಲವೆ! ವೇಗದ ರೈಲುಗಳಾವುವೂ ಈ ಊರಿನಲ್ಲಿ ನಿಲ್ಲುತ್ತಿರಲಿಲ್ಲ. ಎಲ್ಲಾ ಕಡೆಯೂ ನಿಂತುಹೋಗುವ ಶಟಲ್ ಮಾತ್ರ ಬರುತ್ತಿತ್ತು. ನಿಲ್ದಾಣದಲ್ಲಿ ಒಂದಿಬ್ಬರು ರೈಲ್ವೆ ಅಧಿಕಾರಿಗಳಲ್ಲದೆ ಬೇರೆ ಯಾರೂ ಇರಲಿಲ್ಲ. ‘ನಾನು ಯಾರಿಗೂ ಬೇಡವಾಗಿಬಿಟ್ಟಿದ್ದೇನೆ,’ ಎಂದುಕೊಂಡ ಕ್ಯಾಮಿಲೊ. ‘ಎಲ್ಲರೂ ನನ್ನನ್ನು ಕೆಟ್ಟವನ ತರಹ ನೋಡುತ್ತಿದ್ದಾರೆ,’ ಎಂದು ವ್ಯಥೆ ಪಟ್ಟ. ರೈಲು ನಿಲ್ದಾಣದಿಂದ ಹೊರಟಾಗ ರೈಲುಬೋಗಿಯ ಬಾಗಿಲಲ್ಲಿ ನಿಂತು ಖಾಲಿ ಪ್ಲಾಟ್‌ಫಾರಂ ನೋಡುತ್ತಾ ಕ್ಯಾಮಿಲೊ ಬೇಸರಗೊಂಡ.

ಇನ್ನು ಸುಮಾರು 20 ಕಿಮೀ ದೂರದಲ್ಲಿ ಮುಂದಿನ ಊರು. ಅದೂ ಚಿಕ್ಕ ಊರೇ. ರೈಲು ಹತ್ತಿರ ಹತ್ತಿರ ಹೋಗುತ್ತಾ ಬಹಳ ಶಬ್ದ ಕೇಳಿಸಿತು. ಪ್ಲಾಟ್‌ಫಾರಂ ಮೇಲೆ ಸುಮಾರು ಜನ. ಹತ್ತಿರದಲ್ಲಿದ್ದ ಮರಗಳ ಮೇಲೂ ಜನ. ರೈಲು ನಿಲ್ಲುತ್ತಿದ್ದಂತೆ ಅನೇಕ ಜನ ಡಾನ್ ಕ್ಯಾಮಿಲೊವಿನ ರೈಲುಬೋಗಿಯ ಒಳಗೆ ಬಂದರು. ಅವರಲ್ಲಿ ಹಲವರು ಬಂದು ಕ್ಯಾಮಿಲೊವಿನ ಕೈಯ್ಯನ್ನು ಕುಲುಕಿದರು. ಕೆಲವರು ಅವನಿಗೆ ಉಡುಗರೆಗಳನ್ನು ಕೊಟ್ಟರು. ಯಾರಿವರು? ಎಲ್ಲರೂ ಅವನ ಊರಿನ ಜನರೇ! ಖುಷಿಯಾದ ಡಾನ್ ಕ್ಯಾಮಿಲೊವಿಗೆ ಒಬ್ಬ ಹೇಳಿದ, ’ಪಾದ್ರಿ! ನೀನು ಹೋಗುತ್ತಿರುವುದು ನಮಗೆಲ್ಲಾ ಬೇಜಾರು. ಪೆಪ್ಪೋನಿನ ಕಡೆಯವರು ಯಾರೂ ಪಾದ್ರಿಯನ್ನು ಬೀಳ್ಕೊಡಲು ಹೋಗಬಾರದು ಎಂದು ಹೇಳಿದ್ದರು. ಹೋದರೆ ಅದರ ಪರಿಣಾಮ ಏನಾದರೂ ಆಗಬಹುದು ಎಂದು ಬೇರೆ ಹೆದರಿಸಿದ್ದರು. ಅದಕ್ಕೇ ನಾವು ಯಾರೂ ಅಲ್ಲಿಯ ರೈಲ್ವೆ ನಿಲ್ದಾಣಕ್ಕೆ ಬರಲ್ಲಿಲ್ಲ. ಎಲ್ಲಾ ಇಲ್ಲಿಗೆ ಬಂದಿದ್ದೇವೆ.” ಕ್ಯಾಮಿಲೊ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದ. ಅವರೆಲ್ಲಾ ಇಳಿದು ರೈಲು ಹೊರಟ ನಂತರ ಅವರು ಕೊಟ್ಟಿದ್ದ ಉಡುಗೆರೆಗಳನ್ನೆಲ್ಲಾ ನೋಡಿದ.

ಕ್ಯಾಮಿಲೊ ಮುಖದಲ್ಲಿ ನಗೆ ಇತ್ತು. ಆದರೂ ಇನ್ನೂ ಎಷ್ಟೋ ಜನ ಬರಲೇ ಇಲ್ವಲ್ಲ ಎಂದುಕೊಂಡ. ಅವನ ಏಸು ಅಲ್ಲಿದ್ದದ್ದರೆ, ‘ಕ್ಯಾಮಿಲೊ, ದುರಾಸೆ ಬೇಡ,’ ಎನ್ನುತ್ತಿದ್ದನೋ ಏನೋ! ರೈಲಿನ ವೇಗ ಹೆಚ್ಚಾಯಿತು. ಕ್ಯಾಮಿಲೊ ತೂಕಡಿಸಲು ಶುರುಮಾಡಿದ. ಆದರೆ ಮತ್ತೆ ಜನರ ಶಬ್ದ ಕೇಳಿಸಿತು. ಹೌದು, ಮತ್ತೊಂದು ಊರು ಬರುತ್ತಿತ್ತು. ಅಲ್ಲೂ ಜನ ನೆರೆದಿದ್ದರು. ಊರಿನ ಜನವಲ್ಲವೇ ಎಂದುಕೊಂಡ. ಆದರೆ ಇವರು ಪೆಪ್ಪೋ ಕಡೆಯವರು! ರೈಲು ನಿಲ್ಲುತ್ತಲೇ ಕ್ಯಾಮಿಲೊ ಬೋಗಿಯ ಬಾಗಿಲಿಗೆ ಬಂದು ನೋಡಿದ. ಸ್ವತ: ಪೆಪ್ಪೋನೇ ಮುಂದೆ ನಿಂತಿದ್ದ. “ಪಾದ್ರಿ ಹೋಗಿ ಬಾ! ನಾವು ನಿನ್ನನ್ನು ಮರೆಯುವುದಿಲ್ಲ. ನಿನ್ನ ಕೆಲಸಗಳನ್ನು ಮುಗಿಸಿಕೊಂಡು ಬೇಗ ಬಾ,” ಎಂದು ಪೆಪ್ಪೋನ್ ಪುಟ್ಟ ಭಾಷಣವನ್ನು ಕೊಟ್ಟ. ರೈಲು ಹೊರಟಿತು. ಗೌರವದಿಂದ ಪೆಪ್ಪೋನ್ ತನ್ನ ಹ್ಯಾಟು ತೆಗೆದು ತಲೆ ಬಗ್ಗಿಸಿದ. ಬಾಗಿಲಲ್ಲಿ ನಿಂತಿದ್ದ ಪಾದ್ರಿಯೂ ತನ್ನ ಟೋಪಿಯನ್ನು ತೆಗೆದು ತಲೆ ಬಾಗಿಸಿದ.

‍ಲೇಖಕರು Admin

November 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: