ಪಾರ್ವತಿ ಜಿ ಐತಾಳ್ ಓದಿದ ‘ಮೂಕ ತೋಳ’

ಪಾರ್ವತಿ ಜಿ ಐತಾಳ್

‘ಮೂಕ ತೋಳ’  ಮಲೆಯಾಳದಿಂದ ಕನ್ನಡಕ್ಕೆ ಅನುವಾದಗೊಂಡಿರುವ ಒಂದು ಕಿರು ಕಾದಂಬರಿ.(ಮೂಲ : ಜಯಮೋಹನ್). ಈಗಾಗಲೇ ಹನ್ನೆರಡಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಕೆ.ಪ್ರಭಾಕರನ್ ಇದನ್ನು ತಿಳಿಗನ್ನಡದಲ್ಲಿ ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ವಸಾಹತುಶಾಹಿ ಭಾರತದ ಗ್ರಾಮೀಣ ಪ್ರದೇಶವೊಂದರಲ್ಲಿ ನಡೆದ ಘಟನೆಗಳನ್ನು ವಸ್ತುವಾಗಿಸಿಕೊಂಡ ಈ ಕಾದಂಬರಿಯು ಬ್ರಿಟಿಷರು ಕೆಳವರ್ಗದ ಬುಡಕಟ್ಟಿಗೆ ಸೇರಿದ ಜನರನ್ನು ಗುಲಾಮರನ್ನಾಗಿ ಬಳಸಿಕೊಂಡು ಅತ್ಯಂತ ಅಮಾನುಷವಾಗಿ ಹೇಗೆ ನಡೆಸಿಕೊಳ್ಳುತ್ತಿದ್ದರು ಅನ್ನುವುದನ್ನು ಓದುಗರ ಕರುಳಿರಿಯುವಂತೆ ಚಿತ್ರಿಸುತ್ತದೆ.

ಮೂಕ ತೋಳನೇ ಕಥೆಯ ನಿರೂಪಕ.  ಅವನು ಬಿಳಿಯ ಅಧಿಕಾರಿಯ ಬೇಟೆ ಸಹಾಯಕ. ಕಾಡಿನಲ್ಲೇ ಹುಟ್ಟಿ ಬೆಳೆದ ಅವನಿಗೆ ಬೇಟೆಯ ವಿಚಾರಗಳೆಲ್ಲವೂ ಕರತಲಾಮಲಕ.  ಬೇಟೆಯಾಡುವವರಿಗೆ ಮೌನವೇ ಮುಖ್ಯವೆಂದು ಗೊತ್ತಿದ್ದರಿಂದ ಅವನು ಬೇಟೆ ನಾಯಿಯಂತೆ ನಿಷ್ಠೆಯಿಂದ ಕೆಲಸ ಮಾಡುತ್ತಾನೆಯೇ ವಿನಹ ಮಾತನಾಡುವುದಿಲ್ಲ. ಅತಿ ಅನಿವಾರ್ಯವಾದರೆ ತೋಳನಂತೆ ಗುರುಗುಟ್ಟುತ್ತಾನೆ. ಆದ್ದರಿಂದ ಯಜಮಾನ ಅವನಿಗೆ ಮೂಕ ತೋಳನೆಂದು ಹೆಸರಿಡುತ್ತಾನೆ.

ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನು ಕೆಲಸಕ್ಕಿಟ್ಟುಕೊಳ್ಳುವ ಬಿಳಿಯ ಅಧಿಕಾರಿ ತನ್ನ ಅಧಿಕಾರವನ್ನುಪಯೋಗಿಸಿಕೊಂಡು ತನ್ನೆಲ್ಲಾ ವೈಯಕ್ತಿಕ ಕೆಲಸಗಳನ್ನೂ ಅವರ ಹತ್ತಿರ ಮಾಡಿಸುವ ವಿಚಾರ ನಮಗೆ ಗೊತ್ತಾಗುವುದು ಮೂಕ ತೋಳನ ಮೂಲಕ. ಗುಲಾಮಗಿರಿಯನ್ನು ಒಪ್ಪಿಕೊಂಡ ಅವರೆಲ್ಲರೂ ಯಜಮಾನನ ನಿಷ್ಠಾವಂತ ಸೇವಕರೇ. ಅಡುಗೆ ಮಾಡುವ ತೋಮ ಬಿಳಿಯನ ಶೌಚದ ಕೆಲಸವನ್ನೂ ಮಾಡುತ್ತಾನೆ. ಬಿಳಿಯನಿಗೆ ಭೋಗಿಸಲು ಕಾಡಿನಿಂದ ಹೆಣ್ಣನ್ನೂ ತಂದು ಕೊಡುತ್ತಾನೆ. ಇಲ್ಲಿ ಬರುವ ಹೆಣ್ಣು ಚೋತಿ ಮಾತ್ರ ಬಿಳಿಯನೊಂದಿಗೆ ಸಹಕರಿಸದೆ ಓಡಿ ಹೋಗುತ್ತಾಳೆ.

ಆನೆ ಬೇಟೆಗೆ ಮೂಕನನ್ನು ಕಾಡಿಗೆ ಕರೆದುಕೊಂಡು ಹೋಗುವ ಬಿಳಿಯ ಅಧಿಕಾರಿ ತೊಂದರೆಗೀಡಾದಾಗ ಅವನನ್ನು ಮೂಕನೇ ರಕ್ಷಿಸುತ್ತಾನೆ.  ಬಿಳಿಯನಿಗೆ ಹಾವು ಕಚ್ಚಿದಾಗ ವಿಷವೇರದಂತೆ ಹಸಿರು ಮದ್ದು ಹಾಕಿ ಬದುಕಿಸುತ್ತಾನೆ. ಅವನು ತನ್ನ ಮೇಲಿಟ್ಟಿರುವ ನಿಷ್ಠೆಯನ್ನು ನೋಡಿ ಬೆರಗಾಗಿ  ಮನಸ್ಸು ಪರಿವರ್ತನೆ ಹೊಂದುವ ಬಿಳಿಯ ಅಧಿಕಾರಿ ಮೂಕನನ್ನು ಪ್ರೀತಿಯಿಂದ ಮಾತನಾಡಿಸಿ ‘ಏನು ಉಡುಗೊರೆ ಕೊಡಲಿ?’ ಎಂದು ಕೇಳುತ್ತಾನೆ.  ಆದರೆ ಮೂಕ   ಸ್ಥಿತಪ್ರಜ್ಞನಂತೆ  ಆಗಲೂ ಏನೂ ಹೇಳುವುದಿಲ್ಲ.

ಮುಂದೆ ತೋಳಗಳ ಆಕ್ರಮಣವಾದಾಗಲೂ ಯಜಮಾನನ್ನು ಮೂಕನೇ ರಕ್ಷಿಸುತ್ತಾನೆ. ಆದರೆ ತನ್ನನ್ನು ರಕ್ಷಿಸಿಕೊಳ್ಳುವ ದಾರಿಯಲ್ಲಿ ಅವನೇ ಜಾರಿ ಪ್ರಪಾತಕ್ಕೆ ಬೀಳುತ್ತಾನೆ ಎಂಬ ಸೂಚನೆ ಕಥೆಯ ಕೊನೆಯಲ್ಲಿದೆ. ಅವನು ಸಾಯುತ್ತಾನೋ ಇಲ್ಲವೋ ಅನ್ಪುವುದು ಓದುಗನ ಜಿಜ್ಞಾಸೆಗೆ ಬಿಟ್ಟದ್ದು. ಬೀಳುವುದಕ್ಕೆ ಮೊದಲು  ರಕ್ಷಣೆಯ ಉಪಾಯವನ್ನು ಯಜಮಾನ ಸೂಚಿಸಿದಾಗ  ಅದು ವ್ಯರ್ಥವೆಂದನ್ನಿಸಿ  ಅವನ ಮೇಲಿನ ಇದುವರೆಗಿನ ಸಿಟ್ಟು ಸ್ಫೋಟಿಸಿ  ‘ನರಕಕ್ಕೆ ಹೋಗು’ ಎಂದು ಚೀರುತ್ತಾನೆ. ಇದಕ್ಕೆ ಕಾರಣ ಪ್ರಾಯಶ  ‘ಲೇಖಕರ ಮಾತು ‘ಎಂಬ ಮೊದಲ ಲೇಖನದಲ್ಲಿ ಕಾಣಬಹುದು.

ಅಮ್ಮನಂಥ  ಸಹನೆಯನ್ನು ರೂಢಿಸಿಕೊಂಡವನು ಬೆಳೆಯುತ್ತಾನೆ ಎಂದು. ಹೌದು. ಮೂಕತೋಳ ತನ್ನ ಯಜಮಾನ ನೀಡಿದ ಎಲ್ಲ ಕಿರುಕುಳಗಳನ್ನು ಭೂಮಿತಾಯಿಯ ಸಹನೆಯಿಂದ ಸಹಿಸಿಕೊಂಡು ತನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಾನೆ.  ಹಾಗೆಯೇ ಎತ್ತರಕ್ಕೆ ಬೆಳೆದು ಜೀಸಸ್ ನಂತೆ  ತನ್ನನ್ನು ಶೋಷಿಸುತ್ತಿದ್ದ ಯಜಮಾನನನ್ನು ಅವನ  ಅಸಹಾಯಕ ಸ್ಥಿತಿಯಲ್ಲಿ  ಜೀವರಕ್ಷಣೆ ಮಾಡುತ್ತಾನೆ.  ಕೊನೆಗೆ ಒಬ್ಬ ಅಮ್ಮನಂತೆಯೇ ಅನ್ಯಾಯ  ಮಿತಿಮೀರಿದಾಗ ಅವನ ಸಹನೆಯ ಕಟ್ಟೆಯೊಡೆದು ಒಮ್ಮೆಲೇ  ಸ್ಫೋಟಿಸುತ್ತಾನೆ. ಈ ಚಿತ್ರಣಗಳು ಕಾದಂಬರಿಯಲ್ಲಿ ಅತ್ಯಂತ ಸಹಜವಾಗಿ ಬಂದಿವೆ.

ಇನ್ನೊಂದು ವಿಚಾರ ಮೂಕತೋಳನ ಹುಟ್ಟಿನ ಕುರಿತಾದದ್ದು. ಅವನ ತಾಯಿ ಬುಡಕಟ್ಟಿನವಳಾದರೂ ತಂದೆ ಒಬ್ಬ ಬಿಳಿಯ. ಅಪ್ಪ ಮಗನನ್ನು ತ್ಯಜಿಸಿ ಹೋಗಿದ್ದಾನೆ.  ಅವನ ಮೈಯ  ಬಣ್ಣ ಮತ್ತು ಸಾಮರ್ಥ್ಯಗಳಿಂದ ಈ ವಿಷಯ ಯಜಮಾನನಿಗೆ ಗೊತ್ತಿದೆ.  ಆದರೆ  ಯಜಮಾನ ಅವನಿಗೆ ಸಮಾನ ಸ್ಥಾನ ಕೊಡುವುದಿಲ್ಲ. ಅಲ್ಲದೆ  ಕೊನೆಯಲ್ಲಿ ಯಜಮಾನ ಹೇಳುತ್ತಾನೆ ಭಾರತಕ್ಕೆ ಪ್ರತಿನಿಧಿಗಳಾಗಿ ಬಂದ ಬಿಳಿಯರನ್ನು ಇಂಗ್ಲೆಂಡಿನಲ್ಲಿ ಕೀಳಾಗಿ ಕಾಣುತ್ತಾರೆ ಮತ್ತು ಆ ಅಸಮಾಧಾನವನ್ನು ಇಲ್ಲಿಗೆ ಬಂದ ಬಿಳಿಯರು ದೇಶೀಯರ ಮೇಲೆ ದಬ್ಬಾಳಿಕೆ ಮಾಡುವುದರ ಮೂಲಕ ತೀರಿಸಿಕೊಳ್ಳುತ್ತಾರೆ ಎಂದು.‌ ಹಾಗಾದರೆ ಈ ಕಥೆಯ ಮೂಲಕ ಲೇಖಕರು ಮನುಷ್ಯರಲ್ಲಿ ಬಲವಿದ್ದವರು ದುರ್ಬಲರನ್ನು ಶೋಷಿಸುತ್ತಾರೆ ಎಂಬ  ಕಾಡಿನ ನೀತಿ ಮನುಷ್ಯರಿಗೂ ಅನ್ವಯಿಸಿದಂತಾಗುತ್ತಿರುವುದು ಒಂದು ದುರಂತವೆಂದು ಸೂಚಿಸುತ್ತಿದ್ದಾರೆಯೆ? ಇದೊಂದು ಚಿಂತನಾರ್ಹ ಪ್ರಶ್ನೆ.

ಇನ್ನೊಂದು ಜಿಜ್ಞಾಸೆ ಕಥನ ತಂತ್ರದ ಕುರಿತಾದದ್ದು. ಇಲ್ಲಿ ಕಥೆಯನ್ನು ಮೂಕತೋಳನ ದೃಷ್ಟಿಯಿಂದ ನಿರೂಪಿಸಲಾಗಿದೆ. ಆದರೆ ಕೊನೆಯಲ್ಲಿ ಅವನು ಸಾಯುವುದೇ ಆಗಿದ್ದರೆ ಸತ್ತ ನಂತರ ಅವನು ಕಥೆಯನ್ನು ಹೇಗೆ ಹೇಳುತ್ತಾನೆ? ಕೆಲವು ಕಥೆಗಳಲ್ಲಿ ಸತ್ತ ನಂತರ ಆತ್ಮವು ಮೇಲಿನಿಂದ ಎಲ್ಲವನ್ನೂ ಗಮನಿಸುತ್ತ ಗತದ ನೆನಪಿನ ಮೂಲಕ ಕಥೆ ಹೇಳುವುದಿದೆ. ಅದು ಅವಾಸ್ತವ. ಇಲ್ಲಿ ವಾಸ್ತವ -ಅವಾಸ್ತವಗಳ  ಸಂಯೋಗವಿದೆಯೆ? ಇದೂ ಒಂದು  ಚಿಂತನೆಗೆ ಗ್ರಾಸವಾಗುವ ಪ್ರಶ್ನೆ.

ಕಥನ ಶೈಲಿ ಮನಮುಟ್ಟುವಂತಿದೆ. ನಿರೂಪಕನ ನಿರುದ್ವೇಗದಿಂದ ಕೂಡಿದ ಮಾತುಗಳು  ಅವನ ತಾಳ್ಮೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಪ್ರಭಾಕರನ್ ಅವರು ಇಂಥ ಒಂದು ವಿಶಿಷ್ಟ ಕಾದಂಬರಿಯನ್ನು ಅನುವಾದಿಸಿ ಕನ್ನಡಿಗರಿಗೆ ಒಂದು ಒಳ್ಳೆಯ ಕೃತಿಯನ್ನು ಕೊಟ್ಟಿದ್ದಾರೆ.

‍ಲೇಖಕರು Admin

October 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: