ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಡಾ. ಪಾರ್ವತಿ ಜಿ.ಐತಾಳ್

ಪ್ರವರ್ಧಮಾನಕ್ಕೆ ಬರುತ್ತಿರುವ  ‘ಕಾವ್ಯಬೈರಾಗಿ’ ಕಾವ್ಯನಾಮದ  ಯುವ ಲೇಖಕ  ಶ್ರೀರಾಜ್ ವಕ್ವಾಡಿ. ಈಗಾಗಲೇ ಮೂರು ಕವನ ಸಂಕಲನಗಳು, ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ.  ‘ಅತ್ತ ನಕ್ಷತ್ರ ‘ ಇವರು ಇತ್ತೀಚೆಗೆ ಬಿಡುಗಡೆಯಾದ ಕಿರು ಕಾದಂಬರಿ. ಗದ್ಯಕ್ಕೂ ಮನಮುಟ್ಟುವ ಕಾವ್ಯಾತ್ಮಕ ಭಾಷೆಯನ್ನು ರೂಢಿಸಿಕೊಂಡದ್ದು ಇವರ ವಿಶಿಷ್ಟ ಶೈಲಿ.

ಹೊಸ ಕಥೆಯೇನೂ ಇಲ್ಲಿಲ್ಲ. ಲಾಗಾಯ್ತಿನಿಂದ ಸಾಹಿತಿಗಳ ಮೂಲಕ ಚರ್ವಿತ ಚರ್ವಣಗೊಂಡ ಅದೇ ಹಳೆಯ ಪ್ರೀತಿ-ಪ್ರೇಮದ ಕಥೆ. ಪ್ರಸ್ತುತ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಪ್ರೀತಿ ಪ್ರೇಮಗಳಿಗೆ ಇಂದಿನ ಯುವತಿಯರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನುವುದನ್ನು ಬೇರೆ ಬೇರೆ ಸಂಬಂಧಗಳ ಚಿತ್ರಣದ ಮೂಲಕ ಶ್ರೀರಾಜ್ ಕಟ್ಟಿ ಕೊಡುತ್ತಾರೆ.

ಕೃತಿಯ ಫೋಕಸ್ ಇರುವುದು ಅಭಿಜ್ಞಾ ಮತ್ತು ಸಾಕ್ಷಿಯರ ಮೇಲೆ. ಉಳಿದೆಲ್ಲರೂ ಅವರು ಸುತ್ತ ತಿರುಗುವ ಪಾತ್ರಗಳು. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರೀತಿಗೋಸ್ಕರ ಪ್ರೀತಿ ಮಾಡುವ ಅಭಿಜ್ಞಾ-ಸಾಕ್ಷಿಯರ ಭವಿಷ್ಯದ ಕನಸುಗಳನ್ನು ಅಂತರ್ಜಾತಿ ಎಂಬ ಭೂತ ಹೊಸಕಿ ಹಾಕುತ್ತಿದೆ. ಹಿರಿಯರನ್ನು ಎದುರಿಸುವ ಶಕ್ತಿಯಿಲ್ಲದೆ ಸಾಕ್ಷಿ ಅವರು ಹುಡುಕಿದ ವ್ಯಕ್ತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೂ ಹೇಗೋ ಹೊಂದಿಕೊಂಡು ಬದುಕನ್ನು ಅದು ಇದ್ದಂತೆ ಸ್ವೀಕರಿಸಿದರೂ ಬದುಕು ಅವಳನ್ನು ನಿರ್ದಯವಾಗಿ ವಂಚಿಸುತ್ತದೆ.  ಇಲ್ಲಿ ಸಾಕ್ಷಿಯು ಮದುವೆಯ ನಂತರ ಎದುರಿಸುವ ಸಮಸ್ಯೆ  ಸಮಾಜದಲ್ಲಿ ಸ್ತ್ರೀ ಶೋಷಣೆಯ ಒಂದು ಕರಾಳ ಮುಖ.

ಸಾಕ್ಷಿಯಿಲ್ಲದ ಬದುಕನ್ನು ಒಪ್ಪಿಕೊಳ್ಳಲಾಗದೆ ಖಿನ್ನತೆಗೆ ಜಾರಿದ ಅಭಿಜ್ಞ,  ಮನಶ್ಶಾಸ್ತ್ರಜ್ಞ ಡಾ.ನೇಹಿಗನ ಉಪದೇಶಗಳು ನಿಷ್ಪ್ರಯೋಜಕವಾಗಿ ತನ್ನ ನಲುವತ್ತಾರನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ.  ಜೀವನದಲ್ಲಿ ಸಂತೋಷ ಕೊಡಬೇಕಾದ ಪ್ರೀತಿಯು ಹೇಗೆ ಒಂದು ದೌರ್ಬಲ್ಯವಾಗಿ ಕಾಡುತ್ತದೆ ಅನ್ನುವುದಕ್ಕೆ ಅಭಿಜ್ಞನೇ ನಿದರ್ಶನ.

ಸ್ವಚ್ಛಂದ ಬದುಕಿಗೆ ತನ್ನನ್ನು ಒಡ್ಡಿಕೊಂಡು ಬೆಳೆದ ಸಹನಾ ಅಭಿಜ್ಞನ ಬಾಳಿನಲ್ಲಿ ಬರುವ ಇನ್ನೊಬ್ಬ ಹೆಣ್ಣು. ಬದುಕಿನಲ್ಲಿ ಸುಖ ಪಡಬೇಕಾದ ಕಾಲದಲ್ಲಿ ಅದಕ್ಕೆ ಹಿಂಜರಿಯುವುದು ಯಾಕೆಂದು ಕೇಳುವ  ಅವಳ Epicurean ಫಿಲಾಸಫಿ ದೇಹಕ್ಕಿಂತ ಹೆಚ್ಚು ಮನಸ್ಸಿನ ಸಂಬಂಧಕ್ಕೆ ಪ್ರಾಮುಖ್ಯ  ಕೊಡುವ  ಸೂಕ್ಷ್ಮಜ್ಞ ಮನಸ್ಸಿನ ಅಭಿಗೆ ಇಷ್ಟವಾಗುವುದಿಲ್ಲ ಹೇಳಿ ಅವರಿಬ್ಬರೂ ಬೇರೆಯಾಗುತ್ತಾರೆ.

ಡೈರಿ ತಂತ್ರದ ಮೂಲಕ ಈ ಕಥೆಯನ್ನು ನಿರೂಪಿಸುವ ವಳು ಅಭಿಜ್ಞನ ಅಕ್ಕ ಅನುಪ್ರಭಾ. ಅವಳ ವೈಯಕ್ತಿಕ ಬದುಕು ಅಭಿಜ್ಞನಿಗಿಂತ ಭಿನ್ನವಲ್ಲ. ಅವಳು ಪ್ರೀತಿಸಿದ ಸಂತೋಷ್ ಅವಳಿಂದ ದೂರವಾಗಿದ್ದರಿಂದ ಅವಳೂ ದುಃಖದಲ್ಲೇ ಇದ್ದಾಳೆ. ಹೀಗೆ ಕಥೆಯುದ್ದಕ್ಕೂಅಂತರ್ಧಾರೆಯಾಗಿ ವಿಷಾದದ ಛಾಯೆ ಹರಿಯುತ್ತದೆ. ಸಾಮಾನ್ಯ ಪ್ರೇಮ ಕಥೆಯನ್ನು ಯಾವುದೋ ಒಂದು ನಿಗೂಢ ಲೋಕದ ಒಳಗಿಟ್ಟು ಹೇಳುವ ರೊಮ್ಯಾಂಟಿಕ್ ಶೈಲಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.   ಅಭಿಜ್ಞನ  ಪ್ರೇಮ ನೈರಾಶ್ಯದ ತೊಳಲಾಟಗಳು ರೊಮ್ಯಾಂಟಿಕ್ ಕವಿ ಪಿ.ಬಿ.ಶೆಲ್ಲಿಯ ‘Ode to the West Wind’ ಕವಿತೆಯ

 ‘Save me oh West Wind’

I fall upon the thorn !  I bleed ! ಎಂಬ ಸಾಲುಗಳನ್ನು ನೆನಪಿಸುತ್ತವೆ. ಆದರೆ ಅಲ್ಲಿ ಶೆಲ್ಲಿಗೆ ಅಪಾರ ಶಕ್ತಿಯುಳ್ಳ ವೆಸ್ಟ್ ವಿಂಡ್ ತನ್ನ ಜೀವನದಲ್ಲಿ ಪರಿವರ್ತನೆಗಳನ್ನು ತಂದೇ ತರುತ್ತದೆ ಅನ್ನುವ optimism  ಇದೆ. ಇಲ್ಲಿ ಅದಿಲ್ಲ. ಮನಶ್ಶಾಸ್ತ್ರಜ್ಞನ ಮಾತುಗಳು ಏನೂ  ಫಲ ಕೊಡುವುದಿಲ್ಲ.

ಗಂಡು-ಹೆಣ್ಣಿನ ನಡುವಣ ಪ್ರೀತಿಯು ಬದುಕಿನ ಕೇವಲ ಒಂದು ಭಾಗ ಮಾತ್ರ. ಅಲ್ಲಿರುವುದು ‘ನನಗೆ ನೀನು ನಿನಗೆ ನಾನು’ ಎಂಬ ಒಂದು ಸಂಕುಚಿತ ಸಾಧ್ಯತೆಗಳ ಲೋಕ. ವರ್ಣರಂಜಿತ ಮಾಯಾಲೋಕ.   ಆದರೆ ಪ್ರೀತಿಸುವ ಒಳ್ಳೆಯ ಮನಸ್ಸು ಇದ್ದವರಿಗೆ ಜಗತ್ತು ವಿಶಾಲವಾಗಿದೆ. ಅಲ್ಲಿ ನಮ್ಮ ಸಂತೋಷವನ್ನು ನಾವು ಕಂಡುಕೊಳ್ಳಬಹುದು ಎಂಬ  ಸತ್ಯವನ್ನು ತಿಳಿಯದ ‘ನಕ್ಷತ್ರದ ಹೊಳಪುಳ್ಳ ಮುಗ್ಧ ಯುವಜನತೆಯು ‘  ಹಳ್ಳಕ್ಕೆ ಬಿದ್ದು ಅಳುತ್ತ ,ಅಲ್ಲಿಂದ ಏಳಲಾರದೆ ವಿಲವಿಲನೆ ಒದ್ದಾಡಿ  ಖಿನ್ನತೆ-ಆತ್ಮಹತ್ಯೆಗಳಂಥ ದುರಂತಗಳನ್ನು ತಮ್ಮ ಬದುಕಿನಲ್ಲಿ ತಂದುಕೊಳ್ಳುತ್ತದೆ.  ಇಂಥ ಸಂಬಂಧಗಳ ಆಚೆಯೂ ಕಟ್ಟಿಕೊಳ್ಳಬಹುದಾದ ಒಂದು ಸುಂದರ ಲೋಕವಿದೆ ಎಂಬ ಸಂದೇಶವನ್ನು ಈ ಕೃತಿ ಪರೋಕ್ಷವಾಗಿ ಸಾರುತ್ತದೆ.

ಕೆಲವು ಉಪಕಥೆಗಳನ್ನು ಇನ್ನಷ್ಟು ವಿಸ್ತರಿಸಿ ಬರೆದಿದ್ದರೆ ಕಾದಂಬರಿ ಪೂರ್ಣ ಪ್ರಮಾಣದ್ದಾಗುತ್ತಿತ್ತು. ಅಲ್ಲೊಂದು ಇಲ್ಲೊಂದು ಕಾಣುವ  ಸಣ್ಣ ಪುಟ್ಟ ಭಾಷಾ ದೋಷಗಳಿಂದ ಲೇಖಕರು ಮುಕ್ತರಾಗಬೇಕಾಗಿದೆ ಎಂಬುದನ್ನು ಬಿಟ್ಟರೆ, ಒಂದು ಭಿನ್ನ ಶೈಲಿಯ ಕೃತಿಯನ್ನು ಓದುಗರಿಗೆ ನೀಡಿದ ಹೆಗ್ಗಳಿಕೆ ಕೃತಿಕಾರರದ್ದು.

‍ಲೇಖಕರು avadhi

September 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: