ಸಂಘಮಿತ್ರೆ ನಾಗರಘಟ್ಟ
**
ಊರುಕೇರಿಯ ಎದುರಾಗಿ
ಸೂರ ತೊರೆದು ಶೆಹರಕ್ಕೆ
ಬಂದ ನಿಮಗೆ ನಾನು ಕೇವಲ
ಗಾಳಿ ಊದಿದ ಬಲೂನ್ನಂತೆ.
ಚರ್ಮಕ್ಕೆ ಅಂಟಿಕೊಂಡಿದ್ದ
ಅಪ್ಪನ ನೆತ್ತರು ನೋವ ಸುಟ್ಟ
ಹಣೆಗೆ ಸವರಿದ ಅವ್ವನ
ವಿಭೂತಿ ಕಟ್ಟು ಕೆಸರಲ್ಲಾಡಿದ
ಎಮ್ಮೆಗೆ ಬಳಿದ ನಾಮದಂತೆ.
ಎಷ್ಟೇ ತಿದ್ದಿ ತೀಡಿದರೂ
ಹೊಡೆದು ಬಡಿದರೂ
ಬದಲಾಗದ ತೊಗಲಿನ
ಬಣ್ಣ, ಹರಿವ ರಕ್ತ
ಪಾಪದ ಹೂವಿನಂತೆ.
ತಪ್ಪಿಸಿಕೊಂಡು ಹೋಗಲು
ದಾರಿಗಳೇ ಇಲ್ಲ ಹೋದರೂ
ಯಾರಿಗೂ ಕಾಣದಂತೆ
ಹಿಡಿದು ಸರಪಳಿ ಹಾಕಿ
ಛಾಟಿ ಏಟ ಕೊಟ್ಟು, ಬರೆ
ಎಳೆದು, ಗಲ್ಲಿಗೂ ಏರಿಸುವಿರಿ.
ನೋಡುವವರ ಕಣ್ಗಳಿಗೆ
ಮೈಮೇಲಿನ ಗಾಯಗಳು
ಎದ್ದು ಕಾಣುತ್ತವೆ ಹೊರತು
ಮೆದುಳು- ಎದೆಯಲ್ಲೇ
ಉರಿದು ಬೂದಿಯಾಗುವ
ಮೌನದ ಹಾರ ನರನಾಡಿಗಳ
ಹಿಂಡಿ ಹೆಪ್ಪುಗಟ್ಟಿಸುವುದು
ಯಾರ ದೃಷ್ಟಿಗೂ ಬೀಳದ
ಮಿಂಚು ಹುಳುವಿನಂತೆ.
ಎಂದಾದರೊಂದು ದಿನ
ಮಾತನಾಡಿದರೆ, ಈ ಜೀವವ
ನೀವಿತ್ತ ಭಿಕ್ಷೆ ಎನ್ನುವಿರಿ.
0 ಪ್ರತಿಕ್ರಿಯೆಗಳು