ಡಿ ಎಸ್ ರಾಮಸ್ವಾಮಿ
ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಯದ ಆಡಳಿತ ಮಂಡಳಿಗೆ ಮಾನ ಮರ್ಯಾದೆಗಳೂ ಘನತೆ ಗೌರವಗಳೂ ಇಲ್ಲದಿರುವುದು ಮತ್ತೆ ಶೃತವಾಗಿದೆ.
ನಿನ್ನೆ ಪರಿಷತ್ತು ಐವರು ಹಿರಿಯರಿಗೆ ಗೌರವ ಸದಸ್ಯತ್ವವನ್ನು ಕೊಡಮಾಡಿರುವುದಾಗಿಯೂ ಮತ್ತು ಹಾಗೆ ಆಯ್ಕೆ ಆಗಿರುವವರಿಗೆ ತಲಾ ರೂ ಒಂದು ಲಕ್ಷದ ಗೌರವ ಸಂಭಾವನೆಯನ್ನೂ ಪ್ರಕಟಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಮತ್ತು ಅದರ ಸದಸ್ಯನಾಗುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯವೂ ಆಗಿದೆ.
ನಿನ್ನೆ ಪರಿಷತ್ತು ಪ್ರಕಟಿಸಿರುವ ಹಿರಿಯರೆಲ್ಲರೂ ಈಗಾಗಲೇ ಪರಿಷತ್ತಿನ ಸದಸ್ಯರಾಗಿ ಇರುವವರೇ ಆಗಿದ್ದಾರೆ. ಆಗಿರಬೇಕು ಕೂಡ. ಆದರೆ ಮತ್ತೆ ಗೌರವ ಸದಸ್ಯತ್ವದ ಅವಶ್ಯಕತೆ ಏನಿದೆ ಮತ್ತು ಅದಕ್ಕೆ ಗೌರವ ಸಂಭಾವನೆ ಏಕಾಗಿ ಕೊಡಲಾಗುತ್ತಿದೆ?
ಈವರೆಗೂ ಇಲ್ಲದಿದ್ದ ಹೊಸತನ್ನು ಮಾಡಬೇಕು, ನಿಜ. ಆದರೆ ಅದು ವಿನಾ ಕಾರಣ ಹೆಚ್ಚಿನ ಖರ್ಚು ಮತ್ತು ಸದ್ಯದ ಆಡಳಿತ ಮಂಡಳಿಗೆ ಚುನಾವಣಾ ಸಾಮಗ್ರಿಯಾಗಿ ಬದಲಾಗುತ್ತಿರುವುದನ್ನು ಯಾರೂ ವಿರೋಧಿಸದೇ ಇರುವುದು ನಾಚಿಕೆಗೇಡಿನ ವಿಷಯ.
ಅಲ್ಲದೇ ಪ್ರಕಟಿಸಿರುವ ಆ ಎಲ್ಲ ಹೆಸರುಗಳೂ ಈಗಾಗಲೇ ಸಮಾಜವು ಕೊಡಮಾಡಿದ ಹಲವು ಹತ್ತು ಗೌರವ ಆದರಗಳಿಗೆ ಭಾಜನರಾಗಿದ್ದಾರೆ. ಇವರಲ್ಲೇ ಯಾರಾದರೂ ತಾವು ಗೌರವ ಸದಸ್ಯತ್ವ ಪಡೆಯುತ್ತೇನೆ ಆದರೆ ಗೌರವ ಸಂಭಾವನೆ ಏಕೆ ಕೊಡುತ್ತಿದ್ದೀರ ಅದನ್ನು ನಿರಾಕರಿಸಿ ಸರ್ಕಾರದ ಕೋವಿಡ್ ನಿಧಿಗೆ ಕೊಡುತ್ತಿದ್ದೇನೆ ಎಂದು ಹೇಳಿಲ್ಲ. ವ್ಯಥೆಯೊಂದೇ ಕಾಡುವ ಸಂಗತಿಯಾಗಿದೆ.
ಈ ಹಿಂದೆ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊ ರು ಚ ಮತ್ತು ಹಂ ಪ ನಾ ಹೆಸರಿರುವುದು ಮುಂದೆ ನಡೆಯಲಿರುವ ಪರಿಷತ್ತಿನ ಚುನಾವಣೆಯ ತಯಾರಿಯಲ್ಲದೆ ಮತ್ತೇನು?
ವರ್ತಮಾನದ ಸಂಕಟದ ಸಂದರ್ಭದಲ್ಲಿ ಅನ್ಯಥಾ ಖರ್ಚು ವೆಚ್ಚ ತಗ್ಗಿಸಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಪರಿಷತ್ತಿನ ಈ ನಿರ್ಧಾರವನ್ನು ಪರಿಷತ್ತಿನ ಸಾಮಾನ್ಯ ಸದಸ್ಯನಾಗಿ ಮತ್ತು ತಾಲ್ಲೂಕು ಸಮ್ಮೇಳನವೊಂದರ ಅಧ್ಯಕ್ಷನಾಗಿದ್ದ ಕಾರಣಕ್ಕೂ ವಿರೋಧಿಸುತ್ತೇನೆ.
ಗೌರವ ಸದಸ್ಯತ್ವ ಎಂದರೆ ಇಂತಹ ಸಂಘಟನೆಯ ಸದಸ್ಯನಾಗಿರದವರಿಗೆ ಕೊಡಲ್ಪಡುವ ಸದಸ್ಯತ್ವ. ಹಾಲಿ ಇರುವ ಸದಸ್ಯರಿಗೆ ಗೌರವ ಸದಸ್ಯತ್ವ ನೀಡುವುದು ಸೂಕ್ತವಲ್ಲ. ಇದು ನಾನು ನಿನ್ನನ್ನು ಸನ್ಮಾನಿಸುವೆ, ನೀನು ನನ್ನನ್ನು ಸನ್ಮಾನಿಸು ಎಂದೇ ಪ್ರಕಟವಾಗುತ್ತದೆ. ತಿಳಿವಳಿಕೆ ಇದ್ದವರು ಸರಿಯಾಗಿ ಯೋಚಿಸಬೇಕು.
ನಾನು ಆಗಸ್ಟ ೨೦೨೨ ರಲ್ಲಿ ಕ.ಸಾ.ಪ. ಸದಸ್ಯತ್ವಕ್ಕಾಗಿ ಹಾಗೂ ಪುಸ್ತಕಗಳಿಗಾಗಿ ಫೋನ್ ಪೇ ಮೂಲಕ ಹಣವನ್ನು ಪಾವತಿಸಿದ್ದೆ. ಆದರೆ ಮೂರು ತಿಂಗಳಾಯಿತು.. ಯಾವುದೇ ಸುದ್ದಿಯಿಲ್ಲ ಕ.ಸಾ. ಪ ಈ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರಬಹುದೇ.. ಅನುಮಾನ ಬರುತ್ತಿದೆ.
ಈ ಸೇವೆ ಸಾಧ್ಯವಿಲ್ಲವೆಂದರೆ ಹಣವನ್ನು ಸುಲಿಗೆ ಮಾಡುವ ವಿಧಾನವನ್ನು ಇವರೇ ಹೇಳಿಕೊಟ್ಟಂತಾಗುತ್ತದೆ.
– ಮಹಮ್ಮದ್ ರಪೀಕ್ ಕೊಟ್ಟೂರು