ಪರಮೇಶ್ವರ್ ಗುರುಸ್ವಾಮಿ ನೋಡಿದ ‘ದ ವರ್ಡ್ಸ್’

ಪರಮೇಶ್ವರ್ ಗುರುಸ್ವಾಮಿ

ಎರಡು ಹಸ್ತಪ್ರತಿಗಳು ತಿರಸ್ಕೃತಗೊಂಡಿದ್ದ ಯುವ ಕಾದಂಬರಿಕಾರನಿಗೆ ಅವನ ಹೆಂಡತಿ ಹಳೆ ವಸ್ತುಗಳ ಅಂಗಡಿಯಲ್ಲಿ ಹಳೆಯ, ಒಂದು ಚರ್ಮದ ಫ಼ೈಲ್‌ಕೇಸ್ ಕೊಡಿಸುತ್ತಾಳೆ. ಅದರೊಳಗೆ ಅಡಕವಾಗಿದ್ದ ಒಂದು ಹಳೆಯ ಟೈಪ್‌ ರೈಟರ್ ಪ್ರತಿಯ ಕಾದಂಬರಿ ಸಿಗುತ್ತದೆ ಅವನಿಗೆ ಆಕಸ್ಮಿಕವಾಗಿ.

ಆ ಪ್ರತಿಯಲ್ಲಿರುವ ಸ್ಪೆಲ್ಲಿಂಗ್ ತಪ್ಪುಗಳನ್ನೂ ಸರಿಪಡಿಸದೆ ಈ ಯುವ ಕಾದಂಬರಿಕಾರ ಲ್ಯಾಪ್‌ಟಾಪ್‌ನಲ್ಲಿ ಕೀ ಮಾಡುತ್ತಾನೆ. ಅದನ್ನು ಕೀ ಮಾಡುವ ಅನುಭವಕ್ಕಾಗಿ. ಅದರೆ ಇವನೇ ಬರೆದಿದ್ದಾನೆಂದು ಭಾವಿಸಿ ಹೆಂಡತಿ ಪಬ್ಲಿಷರ್‌ಗೆ ಕೊಡಲು ಹೇಳುತ್ತಾಳೆ. ಇವನ ಹೆಸರಿನಲ್ಲಿ ಕಾದಂಬರಿ ಪ್ರಕಟವಾಗುತ್ತದೆ. ಇವನು ಪ್ರಸಿದ್ಧನಾಗುತ್ತಾನೆ. ಇದು ಪ್ರತಿಷ್ಠಿತ ಹಿರಿಯ ಪ್ರಸಿದ್ಧ ಕಾದಂಬರಿಕಾರನೊಬ್ಬ, ತನ್ನ ಹೊಸ ಕಾದಂಬರಿಯಿಂದ ಆಯ್ದು ಓದಿದ ಒಂದು ಭಾಗ.

ಇನ್ನೊಂದು ಭಾಗ ಓದಬೇಕಾದ ನಡುವಿನ ಬಿಡುವಿನಲ್ಲಿ ಒಬ್ಬ ಸಾಹಿತ್ಯಾಸಕ್ತ ತರುಣಿ ಸಂದರ್ಶನಕ್ಕಾಗಿ ಈ ಲೇಖಕನ ಬೇಟಿ ಮಾಡುತ್ತಾಳೆ. ಮಾತಿನ ನಡುವೆ ಲೇಖಕ ಮದುವೆಯ ಉಂಗುರ ತೊಟ್ಟಿದ್ದರೂ ಇವನು ಒಬ್ಬಂಟಿ. ಹೆಂಡತಿ ಬಿಟ್ಟು ಹೋಗಿದ್ದಾಳೆ ಎಂಬ ವಿಷಯ ಗೊತ್ತಾಗುತ್ತದೆ. ಕಾದಂಬರಿಯ ಎರಡನೆಯ ಭಾಗದಲ್ಲಿ ಯುವ ಕಾದಂಬರಿಕಾರನಿಗೆ ಟೈಪ್‌ ರೈಟರ್ ಪ್ರತಿ ಬರೆದಿರುವ ಮೂಲ ಕಾದಂಬರಿಕಾರ ಸಿಗುತ್ತಾನೆ.

ನಿನ್ನ ಕಾದಂಬರಿಯ ಆ ಕಾಲದ ಪ್ಯಾರಿಸ್, ಆ ತರುಣಿಯೊಡನಾಟ, ಕುಡಿದ‌ ವೈನ್, ಎಲ್ಲಾ ನಾನೇ ಅನಿಸಿತು. ಎಂಬಂಥ ಮಾತುಗಳಿಂದ ಆರಂಬಿಸಿ ತನ್ನ ಪ್ರೇಮ, ಮದುವೆ, ಮಗುವಿನ ಸಾವನ್ನು ಅಸಹಾಯಕನಾಗಿ ನೋಡಿದ್ದು, ಜಗಳ, ಹೆಂಡತಿ ತಂದೆಯ ಊರಿಗೆ ಹೋಗುವುದು. ಅವಳು ಹೋಗುತ್ತೇನೆಂದು ಬರೆದಿಟ್ಟ ಪತ್ರದ ಹಿಂಬದಿಯಲ್ಲೇ ಟೈಪು ಮಾಡಲು ಆರಂಭಿಸಿ ತನ್ನ ಬದುಕನ್ನು ಕಾದಂಬರಿಯಾಗಿ ಬರೆದಿದ್ದು, ಅದನ್ನು ಓದಿ ಅವಳು ಇವನನ್ನು ಸೇರಲು ಪ್ಯಾರಿಸ್‌ಗೆ ಬರುವಾಗ ರೈಲಿನಲ್ಲೇ ಆ ಟೈಪ್‌ ರೈಟರ್ ಪ್ರತಿಯನ್ನು ಕಳೆದುಕೊಂಡಿದ್ದು, ಅದರಿಂದ ಇವನು ವ್ಯಗ್ರನಾದದ್ದು, ಪುನಃ ಅವರಿಬ್ಬರ ಬೇರ್ಪಡೆ. ಎಲ್ಲವನ್ನೂ ಹೇಳುತ್ತಾನೆ.

‘ಅವು ನನ್ನ ಪದಗಳು, ನನ್ನ ಕತೆಗಳು, ನನ್ನ ಬದುಕು, ನನ್ನ ಹೆಂಡತಿ, ನನ್ನ ಮಗುವಿನ ಸಾವು… ನೀನು ನನ್ನ ಪದಗಳನ್ನು ತೆಗೆದುಕೊಂಡಿದ್ದೀಯೇ. ನನ್ನ ನೋವನ್ನೂ ತೆಗೆದುಕೊಳ್ಳಬೇಕು’ ಎಂದು ಹೇಳಿ ಹೊರಟುಬಿಡುತ್ತಾನೆ. ಇಷ್ಟು ಓದಿ, ಮುಂದಿನ ಕತೆ ತಿಳಿಯಲು ಪುಸ್ತಕ ಕೊಳ್ಳಿ, ಎಂದು ಪ್ರತಿಷ್ಠಿತ ಕಾದಂಬರಿಕಾರ ವಿರಮಿಸುತ್ತಾನೆ.

ಇವನನ್ನು ಸಂದರ್ಶಿಸಲೆಂದು ಬಂದಿದ್ದ ತರುಣಿ ಇವನ ಜೊತೆಯೆ ಇವನ ಮನೆಗೆ ಬಂದು ಮುಂದಿನ ಕತೆ ಹೇಳು ಎಂದು ಒತ್ತಾಯಿಸುತ್ತಾಳೆ. ಇವನು ಮುಂದಿನ ಕತೆ ಹೇಳುತ್ತಾನೆ: ಆ ಯುವ ಕಾದಂಬರಿಕಾರ ಹೆಂಡತಿಗೆ ತನ್ನ ಅನುದ್ದೇಶಿತ ಕೃತಿಚೌರ್ಯ ತಿಳಿಸುತ್ತಾನೆ. ಅವಳಿಗೆ ಸಿಟ್ಟು ಬರುತ್ತದೆ.

ಪ್ರಕಾಶಕನ ಬಳಿ ಹೋಗಿ ವಿಷಯ ತಿಳಿಸಿ ಪುಸ್ತಕದಿಂದ ತನ್ನ ಹೆಸರು ತೆಗೆಯಬೇಕೆಂದು ಕೋರುತ್ತಾನೆ. ಅವನು ಒಪ್ಪುವುದಿಲ್ಲ. ಮೂಲ ಲೇಖಕನ ಬಳಿ ಹೋಗುತ್ತಾನೆ. ಯುವ ಕಾದಂಬರಿಕಾರನ ಯಾವ ಮಾತುಗಳನ್ನೂ ಕೇಳಲು ಮೂಲ ಲೇಖಕ ಇಷ್ಟ ಪಡುವುದಿಲ್ಲ. ಹೊರಡು… ಹೊರಡು… ಎನ್ನುತ್ತಲೇ ತನ್ನ ಹೆಂಡತಿಯಾಗಿದ್ದವಳು ರೈಲ್ವೇ ಸ್ಟೇಷನ್ ಒಂದರಲ್ಲಿ ತನ್ನ ಹೊಸ ಗಂಡ ಮಗುವಿನೊಂದಿಗೆ ಖುಷಿಯಾಗಿ ಇರುವುದನ್ನು ತಾನು ಚಲಿಸುತ್ತಿರುವ ರೈಲಿನಲ್ಲಿ ಕುಳಿತು ಕಂಡದ್ದನ್ನೂ ಹೊರಟ ರೈಲಿನೊಳಗಿದ್ದ ತನಗೆ ಅವಳು ಕೈ ಆಡಿಸಿದ್ದನ್ನೂ ತಿಳಿಸುತ್ತಾನೆ.

ಕೊನೆಗೆ ಅವನು ಹೇಳುವ ಮಾತುಗಳು ಇವು: ‘ನನ್ನ ದುರಂತ ಏನೆಂದರೆ, ನಾನು ಪ್ರೀತಿಸಿದ ಹೆಣ್ಣಿಗಿಂತ, ಯಾರು ಆ ಪದಗಳನ್ನು ಬರೆಯಲು ಸ್ಪೂರ್ತಿಯಾಗಿದ್ದಳೋ ಅವಳಿಗಿಂತ ಆ ಪದಗಳನ್ನು ಹೆಚ್ಚು ಪ್ರೀತಿಸಿದೆ. ಬದುಕಿನಲ್ಲಿ ನಾವು ಎಲ್ಲರೂ ಆಯ್ಕೆ ಮಾಡುತ್ತೇವೆ. ಅದರೊಂದಿಗೆ ಬದುಕುವುದೇ ಕಠಿಣವಾದ್ದು. ಅಲ್ಲಿ ಸಹಾಯ ಮಾಡಲು ಯಾರೂ ಇರುವುದಿಲ್ಲ.’

ಹೆಮಿಂಗ್ವೆಯ ಹೆಂಡತಿಯೂ ಅವನ ಹಸ್ತಪ್ರತಿಗಳಿರುವ ಬ್ರೀಫ಼್‌ಕೇಸನ್ನು ರೈಲಿನಲ್ಲಿ ಕಳೆದು ಬಿಟ್ಟಳಂತೆ. ಇದು ತಿಳಿದಾಗಿಂದ ಈ ಸಿನೆಮಾವನ್ನು ಪುನಃ ನೋಡಬೇಕೆನಿಸುತ್ತಿದೆ. ಅದ್ಭುತವಾದ ಸಿನೆಮಾ ಏನಲ್ಲ. ಒಂದು ಸರಳ ಸಿನೇಕಥನ ಶೈಲಿ. ಕತೆಯೊಳಗೊಂದು ಕತೆ. ಆ ಕತೆಯೊಳಗೊಂದು ಕತೆ. ಮಧ್ಯದ ಕತೆ ಮೊದಲಿನ ಕತೆಯೊಂದಿಗೆ ಕೊನೆಯಲ್ಲಿ ತಳುಕು ಹಾಕಿಕೊಳ್ಳುವುದನ್ನು ತಿಳಿಯಲು ಸಿನೆಮಾ ನೋಡಿ. ನೆಟ್‌ಫ಼್ಲಿಕ್ಸ್‌ನಲ್ಲಿ ಲಭ್ಯವಿದೆ.

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಸರ್, ಅಮೆಜಾನ್ ಪ್ರೈಮಿನಲ್ಲಿ Revolutionary Road ಅಂತ ಫಿಲ್ಮ್ ‌ಒಂದಿದೆ. ನೋಡಿ. ನೀವು ನೋಡಿಯೇ ಇರಬಹುದು. ಅದೂ ಹೀಗೇ ಸುಂದರ ದಾಂಪತ್ಯ ‌ಕಥೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: