ಪನ್ನೀರ ರಾಮನಿಗೆ ಪಂಕಜಾಕ್ಷಿಯರೆರೆದು…

– ಗಣಪತಿ ದಿವಾಣ

ರಾಮ ಇಷ್ಟವೋ ಕೃಷ್ಣ ಇಷ್ಟವೋ ಎಂಬ ಬಗ್ಗೆ ಶೈಲಜಕ್ಕನ ಬಳಿ ಕೆಲವು ಬಾರಿ ಮಾತು ಬೆಳೆದದ್ದಿದೆ. ಅವರು ಕೃಷ್ಣ ಇಷ್ಟ ಅಂತ ಹೇಳಿಬಿಡುತ್ತಾರೆ. “ನಂಗೆ ರಾಮ ಇಷ್ಟ” ಎಂಬ ಮಾತು ಹೊರಡುವ ಮೊದಲಿನ ಸಣ್ಣ ತುಂಡು ಸಮಯದಲ್ಲಿ, ಮನಸ್ಸು ರಾಮನನ್ನು ನೆನೆಯಲು ತೊಡಗುತ್ತದೆ.

ರಾಮ ಹೀಗೆಯೇ ನಿಲ್ಲಬಹುದು. ರಾಮ ಹೀಗೆಯೇ ನಗಬಹುದು. ರಾಮ ಎಷ್ಟು ಸಾವಧಾನಿಯಾಗಿರಬಹುದು. ರಾಮ ಎಷ್ಟು ಕರುಣಾಳು ಆಗಿರಬಹುದು. ರಾಮನ ಎದುರು ನಿಂತು ವಿರೋಧಿಸಲೂ ಬರಬಹುದೆ? ಇದೊಂದು ಭಾವುಕ ಪ್ರೀತಿ.

“ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು…” ಎಂಬ ಹೊಸ್ತೋಟ ಮಂಜುನಾಥ ಭಾಗವತರ, ರಾಮ ನಿರ್ಯಾಣದ ಸಾಲುಗಳು ಎಂದೂ ನೆನಪಾಗುತ್ತದೆ. ಅದನ್ನು ಅರ್ಥವಾಗಿಸಿದ, ನಾನು ಕೇಳಿದ ವಾಸುದೇವ ರಂಗಾ ಭಟ್ರ ರಾಮ ಕಣ್ಣು ಕಟ್ಟಲು ತೊಡಗುತ್ತಾನೆ. ಆ ರಾಮನನ್ನು ನೆನಪಲ್ಲಿ ಉಳಿಸಿದ ಕೀರ್ತಿ ಎದುರಿಗೆ ದುರ್ವಾಸನಾಗಿದ್ದ ವಾಸುದೇವ ಸಾಮಗರಿಗೂ ಸಲ್ಲುತ್ತದೆ. ಮತ್ತು ಭಾಗವತಿಗೆ ಮಾಡಿದ ವಿದ್ವಾನ್ ಗಣಪತಿ ಭಟ್ಟರಿಗೂ ಮದ್ದಳೆ ಹಿಡಿದು ಸುಂದರವಾಗಿ ಕುಳಿತಿದ್ದ ಶಂಕರ ಭಾಗವತರಿಗೂ.

ಆಹ್! ಆ ಇಡೀ ಪ್ರಸಂಗವೇ ಎಷ್ಟು ವಿಚಿತ್ರ, ವಿಶೇಷ. ರಾಮನನ್ನು ಭೂಲೋಕದಿಂದ ಕೊಂಡು ಹೋಗಲು, ಅವತಾರ ಮುಗಿಸು ಎಂದು ನೆನಪಿಸಲು ಬರುವುದು ಯಾರು? ಕಾಲಪುರುಷ, ದುರ್ವಾಸ.. ಇಡೀ ರಾಮ ರಾಜ್ಯವೇ ಸ್ವರ್ಗ ರೂಪ ತಳೆದು ಇನ್ನೂ ಹೀಗೆಯೇ ಬಿಟ್ಟರೆ ನಮ್ಮ ದೇವಲೋಕವನ್ನೇ ಇದು ಮೀರಿಸಿತು ಎಂಬ ಭಾವ ಅವರಿಗೆ.

ಒಂದು ಮಾತು, ಒಂದು ಊಟದ ನೆಪದಲ್ಲಿ ರಾಮನನ್ನು ಕೊಂಡುಹೋಗಿಬಿಟ್ಟರಲ್ಲ. ಮಡದಿ ಸೀತೆ, ಅನುಜ ಲಕ್ಷ್ಮಣ ಇಬ್ಬರನ್ನೂ ಕಳಕೊಂಡ ಮೇಲೆ ಇಲ್ಲಿ ಇದ್ದೇನು ಬಂತು ಉಪಯೋಗ ಎಂದು ರಾಮ ಸರಯೂ ನದಿಗೆ ನಡೆದು ಹೋದನಂತೆ. ರಾಮ ಸುಳ್ಳೇ ದುಃಖಿಸಿದ್ದಲ್ಲವೆ? ರಾಮರಾಜ್ಯದ ಅಳುವ ಪ್ರಜೆಗಳನ್ನು ಸರಯೂ ತಟದಲ್ಲಿ ನಿಲ್ಲಿಸಿಬಿಟ್ಟು, ರಾಮ ನದಿಯ ತಂಪಿಗೆ ಮೈಯೊಡ್ಡಿ ನೀರಿಗಿಳಿದದ್ದು.. ಹಲವರು ನೀರಿನಲ್ಲಿ ರಾಮನನ್ನು ಹಿಂಬಾಲಿಸಿದರಂತೆ. ರಾಮ ನೇರವಾಗಿ, ನಿಖರವಾಗಿ, ನಿಶ್ಚಲವಾಗಿ ಹೇಗೆ ನಡೆದಿರಬಹುದು.. ಒಂದು ಬಾರಿಯೂ ತಿರುಗಿ ನೋಡದೆ ಹೋದನೇ? ರಾಮನಾಮವನ್ನು ಜಪಿಸಿದ, ಆ ರಾಮರಾಜ್ಯದ ಪ್ರಜೆಗಳ ಬಾಯಿ, ಎದೆ, ಮನಗಳಲ್ಲಿ ಒಂದು ಹಿಡಿ ಕೆಡುಕೂ ಇರಲಾರದು.

ವಾಲಿ ವಧೆಯ ಕೊರ್ಗಿ ವೆಂಕಟೇಶ ಉಪಾಧ್ಯಾಯರ ರಾಮ ಅಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ. ಅದು ಸಣ್ಣ ವಯಸ್ಸು. ಸಣ್ಣ ನೆನಪು. ಮಾಸದೇ ಉಳಿದ ಬಣ್ಣದ ಹಾಳೆಯಂತೆ. ಮತ್ತೆ ಜೊತೆಯಾಗುವವನು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಮಾನಿಸದದಲ್ಲಿ, ವಾಲ್ಮೀಕಿ ಮಹರ್ಷಿಗೆ ಬ್ರಹ್ಮ ತೋರಿಸುವ ಶ್ರೀರಾಮ. ವಾಲ್ಮೀಕಿ ತನ್ನ ಕಥಾನಾಯಕನನ್ನು ನೋಡುವ ಬಗೆಯಲ್ಲಿ ಎಷ್ಟು ಆನಂದ ತುಂಬಿರಬಹುದು. ಅದನ್ನು ಬ್ರಹ್ಮ ತೋರುವುದು ಹೇಗೆ? “ಇವಕಣಾ ಶ್ರೀರಾಮ…” ಎಷ್ಟು ಸರಳ. ನಾನು ನೋಡಬೇಕೆಂದು ಅನವರತ ಕಾದ ಅಥವಾ ನೋಡುವೆನೆಂದು ಅಂದುಕೊಂಡಿರದ ಹೃದಯದಾಳದ ರಾಮ ಅವನು. ಅಂಥವನನ್ನು ಇವಕಣಾ ಶ್ರೀರಾಮ ಎಂದು ಬೆರಳೆತ್ತಿ ತೋರಿಸಿದಂತೆ ತೋರಿಸಿಬಿಟ್ಟರೆ. ಏನು ಸ್ವಾಮಿ ಇದು. ರಾಮನೇ? ನಾನು ನೋಡುತ್ತಿರುವೆನೇ? ಇಷ್ಟು ಸಹಜವಾಗಿ ತೋರಿಸಿಬಿಟ್ಟಿರೇ? ರಾಮ ಎಷ್ಟು ಪ್ರಸನ್ನವದನನಾಗಿ ಸುಮ್ಮನೇ ಕುಳಿತಿದ್ದಿರಬಹುದು. ಮಲಗಿದ್ದಿರಬಹುದು. ರಾಮ ಮಾತೇ ಆಡಿರಲಿಕ್ಕಿಲ್ಲ. ಅದು ಎಂಥಾ ಪುಳಕೋತ್ಸವ ಆಗಿರಬಹುದು. ಹೀಗೆ ರಾಮನ ಜೊತೆಗೆ ವಾಲ್ಮೀಕಿಯೂ ಆವರಿಸಿಕೊಳ್ಳುತ್ತಾನೆ. ರಾಮನಷ್ಟು ರಾಮನ ಭಕ್ತರೂ ಕಾಡುತ್ತಾರೆ. ಹನುಮನೋ ಶಬರಿಯೋ ಕಪಿಗಳೋ ಮತ್ತೆಲ್ಲರೂ.

ಕೃಷ್ಣ ಪ್ರಾಕ್ಟಿಕಲ್ ಬದುಕ ಕಳೆದ. ಅವನು ವಿರೋಧಿಗಳನ್ನು ಮಣಿಸಲು ತಂತ್ರ ಹೂಡಿದ. ಜನರ ಜೊತೆಯಾಗುವ, ಮನವ ಅರ್ಥೈಸಿ ಆಗಬೇಕಾದ್ದನ್ನು ಮಾಡುವ ಜಾಣನಾಗಿದ್ದ. ಹಾಡಿದ, ಹೂಡಿದ, ಕುಣಿದ, ಗೆದ್ದ, ಬೋಧಿಸಿದ… ಲೈಕ್, ಹಿ ಇಸ್ ಪ್ರಾಕ್ಟಿಕಲ್ ಐ ಫೀಲ್. ಮೊರ್ ಹ್ಯೂಮನ್ ಯೆಟ್ ಡಿವೈನ್. ಇದೆಲ್ಲಾ ನೋಡಿದ್ರೆ ಕೃಷ್ಣನೇ ಹೆಚ್ಚು ಇಷ್ಟವಾಗುತ್ತಾನೆ. ಹೀಗೆಂದು ಶೈಲಜಕ್ಕ ಎರಡು ಸಾಲಿನಲ್ಲಿ ಹೇಳುತ್ತಾರೆ.

ಹೌದು, ಕೃಷ್ಣ ಕಲಿಯುಗಕ್ಕೆ ಹತ್ತಿರದವನು. ರಾಮ ಸ್ವಲ್ಪ ಹಳಬ. ಅವನು ತ್ರೇತೆಯವನು. ಈ ಕುರಿತು ಶೇಣಿ ಗೋಪಾಲಕೃಷ್ಣ ಭಟ್ಟರು ಹೇಳಿದ ಮಾತುಗಳನ್ನು ಯಾರಿಂದಲೋ ಕೇಳಿದ ನೆನಪಾಗುತ್ತದೆ.

ರಾಮ ತ್ರೇತಾಯುಗದವನು. ಕೃಷ್ಣ ದ್ವಾಪರಯುಗದವನು. ಈಗ ಕಲಿಯುಗ. ರಾಮನ ಯುಗದಲ್ಲಿ ಅಷ್ಟು ನೀತಿ ಇತ್ತು. ಅದು ಮನಃಸಾಕ್ಷಿಯ ಕಾಲ. ಅಲ್ಲಿ ಕಪಟವೋ, ಕೃತ್ರಿಮವೋ ಕಡಿಮೆ. ಅದಕ್ಕಾಗೇ ದಂಡು ದಂಡು ಕಪಿಗಳೂ ಮನುಜರು ಮಾತನಾಡಿಕೊಂಡದ್ದು. ಕರಡಿಯೊಂದು ಜೊತೆಯಾದದ್ದು. ದ್ವಾಪರವು ನಂತರದ ಯುಗ. ಅಲ್ಲಿ ನಿಧಾನವಾಗಿ ಕಪಟ, ಕೃತ್ರಿಮ ಕಾಣಿಸಿಕೊಂಡದ್ದು. ಇದು ಕಲಿಯುಗ ಸ್ವಾಮಿ. ಎರಡು ಯುಗ ಮುಂದೆ. ನನಗೆ ರಾಮನೇ ಇಷ್ಟ. ಒಂದು ನಗು, ಇಷ್ಟು ವಿಷಯ. ಇಲ್ಲಿಗೆ ನಮ್ಮ ಮಾತು ನಿಂತು ಹೋದದ್ದೇ ಹೆಚ್ಚು. ಬಳಿಕ ವಿಷಯಾಂತರವೋ ಮತ್ತೊಂದೋ ಮಗದೊಂದೋ ಆಗುತ್ತದೆ.

ಕೆಲವೊಮ್ಮೆ ಬೆರಗಾಗುತ್ತದೆ. ರಾಮ ಹೇಗೆ ಮನದಲ್ಲಿ ಇದ್ದಾನೆ. ಯಾವ ಮೂರ್ತಿ ಕಣ್ಣತುಂಬುತ್ತಾನೆ. ಊಹ್ಞೂಂ. ರಾಮನೆಂದರೆ ಮೂಡುವುದು ಒಂದು ರಾಮನಲ್ಲ. ಅದು ಮೂರ್ತಿಯ, ಧಾರಾವಾಹಿಯ, ಸಿನಿಮಾದ ಅಥವಾ ಫೋಟೋ ಫ್ರೇಮಿನ ರಾಮನೂ ಅಲ್ಲ. ರಾಮನೆಂದರೆ ಕಾಡುವುದು ಸಿದ್ದಕಟ್ಟೆ ಚೆನ್ನಪ್ಪ ಶೆಟ್ರ ರಾಮ, ಸುಣ್ಣಂಬಳರ ರಾಮ, ಕಲ್ಚಾರರ ರಾಮ, ರಂಗಾ ಭಟ್ರ ರಾಮ, ತೋಟಿಮನೆಯವರ ರಾಮ, ವೀಡಿಯೋದಲ್ಲಿ ನೋಡಿದ ಶಂಭು ಹೆಗಡೆಯವರ ರಾಮ… ಹೀಗೆ ಹಲವರು ತುಂಬಿದ ರಾಮ. ಪಾರ್ತಿಸುಬ್ಬನೋ ಹೊಸ್ತೋಟ ಭಾಗವತರೋ ಬರೆದ ರಾಮ. ನೆಬ್ಬೂರರೋ ವಿದ್ವಾನರೋ ಅಮ್ಮಣ್ಣಾಯರೋ ಬಲಿಪರೋ ಹೊಳ್ಳರೋ ಪದ್ಯಾಣರೋ ಹಾಡಿದ ರಾಮ.

ರಾಮನೆಂದರೆ ರಾಮನೊಬ್ಬನೇ ಅಲ್ಲ. ಅದು ಸೀತೆ, ಭರತ, ಲಕ್ಷ್ಮಣ, ಕೈಕೆ, ಮಂಥರೆ, ದಶರಥ ಬೆಳೆಸಿದ್ದು. ಶಬರಿ, ಗುಹ, ರಾಮರಾಜ್ಯದ ಪುರಜನರು ಆರಾಧಿಸಿದ್ದು. ಹನುಮಂತನೂ ಸೇರಿ ಮೈಂದ ದ್ವಿವಿದ ಮುಂತಾದ ಮುಗ್ದ ಕಪಿಗಳಿಗೆ ಸಿಕ್ಕಿದ್ದು. ರಾವಣ, ಅತಿಕಾಯ ವಿರೋಧಿಸಿ ಪಡೆದದ್ದು.

ಇದೆಲ್ಲವೂ ಒಟ್ಟಾಗಿ ನೆಲೆಗೊಂಡು ಪ್ರೀತಿ ಹರಿದಾಗ ಶ್ರೀರಾಮ ಪಟ್ಟಾಭಿಷೇಕದ ಸಾಲುಗಳು ನೆನಪಾಗುತ್ತದೆ.

ಪನ್ನೀರ ರಾಮನಿಗೆ | ಪಂಕಜಾಕ್ಷಿಯರೆರೆದು |
ಚಿನ್ನಗಳ ತೊಡಿಸಿದರು | ಚಿನ್ಮಯಾತ್ಮಕಗೆ ||
ಅಗರು ಚಂದನ ಗಂಧ | ಕಸ್ತೂರಿ ಲೇಪನವ |
ಸೊಗಸಾಗಿ ರಚಿಸಿದರು | ಶೃಂಗಾರದಿಂದ ||

‍ಲೇಖಕರು nalike

August 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ವಿವೇಕಾನಂದ ಕಾಮತ್

    ತುಂಬಾ ಚೆನ್ನಾಗಿದೆ ಬರಹ..

    ಪ್ರತಿಕ್ರಿಯೆ
  2. Vasundhara K M

    ಬರಹ ಚೆನ್ನಾಗಿದೆ. ರಾಮನನ್ನೂ ಕೃಷ್ಣನನ್ನು ರೂಪಿಸಿದವರು ಮಾನವರೇ ಆಗಿರುವುದರಿಂದ ರಾಮ-ಕೃಷ್ಣರು ಮಾನವರ ಮಿತಿಗಳನ್ನು ಮೀರುವುದಿಲ್ಲ. ಗಂಭೀರ ಸ್ವರೂಪದ ಬರಹ. ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: