ಡಾ.ಪದ್ಮಿನಿ ನಾಗರಾಜು
—-
ಅವಳು ಸತ್ತಿದ್ದಾಳೆ
………
ಹೌದೆ ಬದುಕಿದ್ದಳೆ?!
ಬದುಕಿದ್ದಳು ಅವಳು
ಅವರಿವರ ಬಾಯಿಗೆ ಸಿಲುಕದೆ
ಎಡಬಲಗಳ ಪಾಲಿಗೆ ನಿಲುಕದೆ
ತನ್ನ ನಾಲಿಗೆಯ ಜಡವಾಗಿಸಿ
ಬರೆದ ಸಾಲುಗಳ ಅಮರವಾಗಿಸಿ
ಇಂದು ಉಸಿರು ನಿಲ್ಲಿಸಿದ್ದಾಳೆ
ತನ್ನ ಕತೆಗಳ ನಾಯಕಿ
ತಾನೇ ಆಗಿ
ಕನಸಿನ ನಾಯಕನ
ಸೃಷ್ಟಿಸಿ
ಸುಖ ಸಂಸಾರದ
ಸೂತ್ರಗಳ ಪೋಣಿಸಿ
ಆದರ್ಶ ಕುಟುಂಬದ
ಕಾದಂಬರಿಗಳ
ಸೂತ್ರಧಾರಿಣಿಯ
ಕೊನೆಯಾತ್ರೆ ಇಂದು

ಆತ್ಮಕತೆ ಅರ್ಧಕ್ಕೆ
ನಿಂತಿದೆ
ಪೂರ್ಣಸತ್ಯವ ಗಂಟಲಲ್ಲಿ
ಗಕ್ಕನೆ ಕಟ್ಟಿಹಾಕಿ
ಹೇಳುವುದ ಹೇಳಲಾರದೆ
ಚಟ್ಟದಲ್ಲಿ ಮಲಗಿದ್ದಾಳೆ
ಬರೆಯುವುದ ಚಟವಾಗಿಸಿ
ಪ್ರಶಸ್ತಿ ಬಾರದಾಗ ದುಃಖಿಸಿ
ಬಂದಾಗ ಹಿಗ್ಗಿ
ಅವರಿವರ ಕಾಲು ಹಿಡಿದು
ದಕ್ಕಿಸಿಕೊಂಡ ಪಟ್ಟಗಳ
ಪಟ್ಟಿ ಮಾಡುತ್ತಾ
ಹೆಣವಾದ ಅವಳದ್ದೇ
ಗುಣಗಾನ
ಜನರ ಚಿತ್ತದಲಿ
ಮನೆಯವರ ಮನದಲ್ಲಿ
ಮರತೇ ಹೋಗಿದ್ದ ಅವಳು
ಹೇಳಬೇಕಾದ ಮಾತುಗಳು
ಗಂಟಲಲ್ಲೇ ಉಳಿದು
ಬರೆಯಬೇಕಾದ ಪದಗಳೆಲ್ಲಾ
ಅವಳ ಸಮಾಧಿಯ ಮೇಲಿನ
ಗಿಡಗಳಾಗಿ ಜೀವತಳೆಯಲಿವೆ
0 Comments