ಡಾ ಪದ್ಮಿನಿ ನಾಗರಾಜು
ಕೈಯಲ್ಲೇ ಪರಿಚಯ
ಕಣ್ಣಳತೆಯಲ್ಲೆ ಸ್ಕ್ಯಾನಿಂಗ್
ಭದ್ರತಾ ಪರೀಕ್ಷೆಯಲಿ
ಅಳೆದು ಸುರಿದು ನೋಡಿ
ಒಳಬಂದರೆ ನಿಮ್ಮದೇ ಲೋಕ
ಆಕಾಶದಲ್ಲೇ ಅರಮನೆ
ವಾಯುಯಾನ ಎಂಬುದೀಗ
ದಿ ಜಾಯ್ ಆಫ್ ಫ್ಲೆöÊಯಿಂಗ್ !!
ಕೆಲವರಿಗೆ ಸದಾ ಹಾರುವ ತವಕ
ಹಲವರಿಗೆ ಮೊದಲ ಅನುಭವ
ಅದೇಂತಹದ್ದೋ ಮೌನ
ಮಾತಿಲ್ಲದೆ ಕಣ್ಣಲ್ಲೇ ಲೆಕ್ಕಾಚಾರ
ದುಗುಡ ದುಮ್ಮಾನಗಳ
ಮಾತಲ್ಲಿ ಹೊರಚೆಲ್ಲಲು
ಇದು ಬಸ್ ನಿಲ್ಧಾಣವಲ್ಲ
ತಡವಾದರೂ ಕಿರುಚಾಟವಿಲ್ಲ
ಅಂಡು ಸುಟ್ಟ ಬೆಕ್ಕಿನಂತೆ
ಅತ್ತಿತ್ತ ಓಡಾಟ
ಬಲೂನಿಗೆ ಹವಾ ಸಿಕ್ಕಿಸಿದ
ಬೇಗುದಿ
ಮೀನ ವಾಸನೆ ಇಲ್ಲ
ಬೆವರು ವಾಂತಿ ಇಲ್ಲ
ಮಾತಲ್ಲಿ ಸಂಬ೦ಧ ಬೆಸೆಯುವವರಿಲ್ಲ
ಜಾತ್ರೆ-ಸಂತೆಗೆ, ಮದುವೆ-ಮುಂಜಿಗೆ
ಕರೆದು ನಮ್ಮವರೇ ಆಗುವ
ಕುಟುಂಬ ಪ್ರೀತಿ ಇಲ್ಲವೇ ಇಲ್ಲ

ಮೊಬೈಲ್‌ನಲ್ಲೇ ಮುಖವುದುಗಿಸಿ
ಲ್ಯಾಪ್‌ಟಾಪ್‌ಗಳಲ್ಲಿ ಕಣ್ಣರಳಿಸಿ
ಮನವ ಸ್ಮಾರಕವಾಗಿಸಿ
ಮುಖದಲ್ಲಿ ಕಂಡರೂ ಕಾಣದ ನಗು
ತಡವಾದರೆ ಕೂಗದ ಕೆರಳದ
ಮುಂದೆ ಬಂದರೆ ಹಾಯದ ಕಾಮಧೇನಗಳು
ದುಗುಡವ ಮುಚ್ಚಿಟ್ಟು ಸಣ್ಣದನಿಯಲಿ
ಬರ್ಗರ್ ಸ್ಯಾಂಡ್‌ವಿಚ್‌ಗಳ ತುಟಿಗಿರಿಸಿ
ಅಪರಿಚಿತರಂತೆ ಮುಖಹೊತ್ತು
ಯಾರೊಂದಿಗೋ ಮಾತೋ ಮಾತು
ತಾಯಿಮನೆ ಬಿಟ್ಟು
ಹೋಗುತಿಹ ಹೊಸ
ಮದುವಣಗಿತ್ತಿ
ಕಣ್ಣ ನೀರ ತೊಟ್ಟಿಕ್ಕದಂತೆ
ಟಿಶ್ಯುವಿನಲೇ ಬಚ್ಚಿಟ್ಟು
ಗ್ರೂಪ್ ಫೋಟೋಗೆ
ಜೊತೆಗೂಡಿ ನಸುನಗುತಿಹಳು
ತನ್ನಮ್ಮನ ಮಡಿಲ ತೊರೆದು
ತನ್ನವರನ್ನೂ ಬಿಟ್ಟು
ತುಂಬಿದ ಬಸುರಿ
ವಿದೇಶ ನೆಲದಲ್ಲಿನ
ಪೌರತ್ವದ ಆಸೆಗೆ
ನೂರಾರು ಲೆಕ್ಕಾಚಾರಗಳಿಗೆ
ನಿಟ್ಟುಸಿರ ಜೊತೆಯಾಗಿಸಿಹಳು
ವೀಸಾ, ಟಿಕೇಟಿಗಾಗಿ
ಹೋರಾಡಿ ಅಂತೂ
ನೆಲದ ಋಣ ತೀರಿಸಲು
ತನ್ನ ಬರುವಿಕೆಗಾಗಿಯೇ
ಕಾದ ಅಪ್ಪನ ಹೆಣವ
ಮಣ್ಣು ಮಾಡಲು
ಅಶ್ರು ಕಂಗಳ ಮಗ
ಸೀಟಿಗೊರಗಿಹನು ಭಾರವಾಗಿ
ಕಫ್ತಾನನ ಕೈಚಳಕ
ಗಗನಸಖಿಯರ ಸಂಗದಲಿ
ಬೆಳಗು ಸಂಜೆ ರಾತ್ರೆಗಳ
ನಿಶ್ಚಲವಾಗಿಸಿ
ನಭದಲ್ಲೆ ಸ್ತಬ್ಧವಾಗಿದೆ ವಿಮಾನ
ಜೊತೆಗೆ ಬದುಕು
0 Comments