ಪದ್ಮಿನಿ ನಾಗರಾಜು ಅವರ ‘ಬದುಕು ಜಟಕಾ ಬಂಡಿ’

ಡಾ.ಪದ್ಮಿನಿ ನಾಗರಾಜು

ಮರಣ ಮೃದಂಗದ ದನಿಗೆ
ಒಳಸೇರಿದ್ದೇವೆ
ಸಾವ ಸಾಗರದ
ಅಬ್ಬರದ ಲೆಕ್ಕಾಚಾರಕ್ಕೆ
ಆತಂಕ ಪ್ರತಿ ಮುಖದಲ್ಲೂ
ಸಾವ ಹೊತ್ತ ಕರಗಗಳಂತೆ
ಅನುಮಾನದ ಅಮಾಸೆ
ಸುತ್ತಲೂ ಮುತ್ತಿದೆ ಕೋಟೆಯಂತೆ

ಪರಿಚಿತರು ಅಪರಿಚಿತರಾಗಿ
ಹತ್ತಿರದವರ ದೂರವಿರಿಸಿ
ಗೂಡು ಸೇರಿವೆ ಮನ
ಕಾಣದ ಜೀವಿಗೆ ಬೆದರಿ
ಕತ್ತಿಯಿಲ್ಲದೆ ಕಣ್ಣು ಇರಿಯುತ್ತಿವೆ

ನಿರ್ಜಿವ ರಸ್ತೆ
ಚಲಿಸುವ
ಕಾಲುಗಳಿಲ್ಲದೆ ಸ್ಥಬ್ಧವಾಗಿದೆ
ಬದುಕು
ಕೊಳ್ಳುವ
ಕೈಗಳಿಲ್ಲದೆ ಸೊರಗಿದೆ
ಬಣ್ಣದ
ಕಾಮನಬಿಲ್ಲು
ಕಾಣದಂತೆ ಮರೆಯಾಗಿದೆ
ಸೂಳೆ
ಗಿರಾಕಿಗಳಿಲ್ಲದೆ
ತನ್ನದೆಲ್ಲವ ಗೂಟಕ್ಕೇರಿಸಿದ್ದಾಳೆ

ಮುಖಕ್ಕೊಂದು ಕವಚ
ಸ್ವಚ್ಛತೆಗೊಂದು ಪಾಠ
ಮೈಕೈಗೊಂದು ಮಡಿ
ಯ ಮಂದಹಾಸ
ಅಂತರದ ಮಂತ್ರ
ಸುತ್ತ ಬಾಯ್ತೆರೆದ ಬಡಬಡಿಕೆ
ಸತ್ತವರ
ಹೊತ್ತವರ
ಸಮಾಧಿಯಾದವರ
ಬೀದಿ ಹೆಣವಾದವರ
ಇದ್ದು ಇಲ್ಲವಾದವರ
ಅಲೆದು ಹೊತ್ತವರ
ಕರಳು ಕತ್ತರಿಸಿದವರ
ನೆರಳು ಕಾಣದವರ
ತುತ್ತಿಗಾಗಿ ಮುತ್ತಾದವರ
ಲೆಕ್ಕಗಳು ರಾರಾಜಿಸುತ್ತಿವೆ

ಮಾರಿ ಮಸಣಿ ರಣಕೇಕೆ
ರಣಚಂಡಿ ಶವಗಳ ಮೇಲಾಟ
ಹೊಸ ಪದಗಳ ನಾಮಕರಣ
ಪ್ರತಿಕ್ಷಣದ ಸಾವಿನ
ಟಿಆರ್‍ಪಿಗಾಗಿ ಹಪಾಹಪಿ
ಬದುಕಿದವರ ದನಿ ಕ್ಷೀಣವಾಗಿ
ಕೇಳುವವರಾರೂ ಇಲ್ಲ

ನಿರ್ಜೀವ ರಸ್ತೆಗಳಲ್ಲಿ
ಜನರಿಲ್ಲ ದನವಿಲ್ಲ
ಬೀದಿ ನಾಯಿಗಳೂ ಇಲ್ಲ
ಅಂಬುಲೆನ್ಸ್‍ಗಳ ಸೈರನ್
ದಿನವಿಡೀ ಕೂಗುತ್ತಿವೆ
ಸಾವಿನ ಕರೆಗಂಟೆಯಂತೆ

ಅಕಾಶ ಕಳಚಿ
ಕಾಯ್ವ ನೆಲ ಬಿರಿದು
ತಿನ್ನುವ ತುತ್ತು ವಿಷ
ಕುಡಿವ ಜಲ ಹಾಲಾಹಲ
ಉರಿವ ಸೂರ್ಯ ಖಿನ್ನ
ಮಂಜಿನ ಚಂದ್ರ ಕೆಂಡದುರಿ
ವರ್ತಮಾನ ಭೂತವಾಗಿ
ಭೂತ ಭವಿಷ್ಯವಾಗಿ
ನೆಲವೆಲ್ಲ ನಿರ್ಜಿವವಾಗಿ
ಫ್ಯಾಕ್ಟರಿ ಮೋಡಿಗೆ
ಸೆಟ್ ಮಾಡಿದಂತೆ
ನಿಲ್ಲುವುದೇ ಬದುಕು?

ಕತ್ತಲ ಹಟ್ಟಿಯಿಂದ
ಸಣ್ಣ ಬೆಳಕೊಂದು
ಬೃಹತಾಗಿ ಮಹತಾಗುವ
ಹೊತ್ತು
ನಿಡಿದಾದ ನಿಟ್ಟುಸಿರ
ಇತಿಹಾಸದ ಚಿಂದಿ
ಆಯುತ್ತಿದ್ದಾಳೆ ಆಕೆ
ಕೌದಿಗಾಗಿ
ಕತ್ತರಿಸಿ ಜೋಡಿಸಿ
ಸೂಜಿ ದಾರದಾಟಕೆ
ಕೌದಿ ಕೌತುಕದಿ ವಿಸ್ತರಿಸಿದೆ
ಬೆಚ್ಚನೆಯ ಭವಿಷ್ಯವ
ಹೊದ್ದು ನಡೆಯಲು
ಭರವಸೆಯಲಿ
ಕಾಯುತ್ತಲಿದೆಯೊಂದು
ಕೂಸು

ಬದುಕು ನಂಬಿಕೆಯ
ನೇಗಿಲಾಗಿ
ಮೋಸದ ಕಸವ
ಕಿತ್ತೆಸೆದು
ಸಾವಿನ ಮನೆಯಲ್ಲಿ
ಗಳ ಎಳೆಯುವವರ
ಸತ್ತವರ ಹೆಸರಲ್ಲಿ
ಕಿತ್ತು ತಿನ್ನುವವರ
ಉಂಡ ಮನೆಯ
ಒಡೆದುರುಳಿಸುವವರ
ಬಂಧಿಯಾಗಿಸುವ ದಂಧೆಗೆ
ದೊಂದಿಯಾಗಿ
ಮಾಯದಾಟದ ದಾಳಕ್ಕೆ
ಬಲಿಯಾಗುವ ಅಮಾಯಕರ
ಕಾಳಕೂಟದ ನಾಯಕರ
ಚದುರಂಗದಾಟವ
ಕೊನೆಗಾಣಿಸಲು
ಮನದ ಮರಕ್ಕೆ
ಪ್ರೀತಿಯ ಉಯ್ಯಾಲೆ ಕಟ್ಟಿ
ಜೀಕುವ
ಜೀವನ ಪ್ರೀತಿಯ
ಜತನದಿ ಕಾಪಾಡುವ

ಬದುಕು ಜಟಕಾ ಬಂಡಿ

‍ಲೇಖಕರು nalike

July 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದಣಿವು…

ದಣಿವು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಪ್ರಸ್ತುತ ಕರಾಳ ಪರಿಸ್ಥಿತಿಯನ್ನು ಕವನದಲ್ಲಿ ಪ್ರತಿಮೆಗಳಾಗಿ ನಿರೂಪಿತವಾಗಿದೆ. ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: