ರೇಣುಕಾರಾಧ್ಯ ಎಚ್ ಎಸ್
ಗಂಡನಾದವನು ಹೆಂಡತಿಗೆ ಹೆದರಿ ತನ್ನ ಗೆಳತಿಯರ ವಿವರಗಳನ್ನು ಬಚ್ಚಿಡಲು ಏನೆಲ್ಲಾ ದಾರಿಗಳನ್ನು ಹುಡುಕುತ್ತಾನಲ್ಲವೆ…ಈ ಸಮಸ್ಯೆ ಇವತ್ತಿನದಲ್ಲ.
ಪುರಾಣಕಾಲದ್ದು.
ಗಂಡಸಿನ ಮೋಸದ ನಡವಳಿಕೆಯನ್ನು ಚಿತ್ರಿಸುವ ಬಹು ಸುಂದರವಾದ ಪದ್ಯವೊಂದು ಪಂಪಭಾರತದಲ್ಲಿದೆ.
ಇದು ಇಂದ್ರಕೀಲಪರ್ವತಕ್ಕೆ ಗುಹ್ಯಕನೊಡನೆ ಬರುವ ಅರ್ಜುನನು ಮುಂದೆ ಕಾಣುವ ಹಿಮವತ್ಪರ್ವತ ಯಾವುದೆಂದು ಕೇಳಿದಾಗ,ಗುಹ್ಯಕನು ಆ ಹಿಮವತ್ಪರ್ವತ (ಕೈಲಾಸ ಪರ್ವತ) ದ ಎಲ್ಲಾ ಪ್ರದೇಶಗಳ ಪರಿಚಯವನ್ನು ಮಾಡಿಕೊಡುವ ಸಂದರ್ಭದಲ್ಲಿ ಬರುವ ಪದ್ಯವಿದು.
“ತೊರೆ ತೊರೆಯೆಂಬ ಮಾತ್ ಇನಿತು ಅಲ್ಲದೊಡೆ ಆಂ ತೊರೆವೆಂ ದಲ್ ಎಂದೊಡೆ ಆ ತೊರೆಯೊಳೆ ಪೋಯ್ತು ಸೂರುಳನೆ ಸೂರೂಳ್ ಅವು ಏವುವೊ ನಂಬೆನ್ ಎಂಬುದುಂ ಕರಿಗೊರಲನ್ ಆತನ್ ಆತ್ಮ ವಿಟತತ್ವಮನ್ ಉಂಟ್ ಒಡೆತಾಗಿ ಮಾಡಿ ಬಾನ್ ತೊರೆಯೆನೆ ಪೊತ್ತು ಗೌರಿಗೆ ಕವಲ್ ತೊರೆ ಗೆಯ್ಸಿಸದನ್ ಈ ಪ್ರದೇಶದೊಳ್ ” (ಏಳನೇ ಆಶ್ವಾಸ 75ನೇ ಪದ್ಯ)
ಪದ್ಯದ ಪದಶಃ ಅರ್ಥ :
ಪಾರ್ವತಿಯು ಶಿವನಿಗೆ ತೊರೆಯೆಂಬ ಮಾತನ್ನು ಅಂದರೆ ಗಂಗೆಯನ್ನು (ನದಿ) ಬಿಟ್ಟುಬಿಡು ನೀನು, ಇಲ್ಲದಿದ್ದರೆ ನಾನು ನಿನ್ನನ್ನು ನಿಶ್ಚಿತವಾಹಿಯೂ ಬಿಡುತ್ತೇನೆ ಎಂದಾಗ, ಶಿವನು ಆ ನದಿಯ ಜೊತೆಯಲ್ಲೆ ನಿನ್ನ ಶಪತವೂ ಹೋಯ್ತು ನೋಡು, ಪ್ರತಿಜ್ಞೆಯನ್ನು ನಾನು ನಂಬುವುದಿಲ್ಲ ಎಂದು ನೀಲಕಂಠನಾದ ಶಿವನು, ತನ್ನೊಳಗಿನ ವಿಟವಿದ್ಯೆಯ ತೋರಿಸುವವನಂತೆ ತನ್ನ ಜಟೆಯಲ್ಲಿ ಗಂಗೆಯನ್ನು ಮರೆಮಾಡಿಟ್ಟುಕೊಂಡು ಪಾರ್ವತಿಯನ್ನು ನಂಬಿಸುವ ಸಲುವಾಗಿ ಈ ಜಾಗದಲ್ಲಿ ಕವಲಾಗಿ ಒಡೆದ ನದಿಯನ್ನುಂಟು ಮಾಡಿದನು.
(ಪಾರ್ವತಿಗೆ ಗಂಗೆಯ ಮೇಲೆ ಸವತಿ ಮಾತ್ಸರ್ಯ ನೀನು ಅವಳನ್ನು ಈಗಲೇ ಬಿಡಬೇಕು ಇಲ್ಲದಿದ್ದರೆ ನಾನು ನಿನ್ನನ್ನು ಖಂಡಿತಾ ಬಿಡುತ್ತೇನೆ ಎನ್ನುತ್ತಾಳೆ. ಆಗ ಶಿವನು ನಿನ್ನ ಶಪತ ಆಗಲೆ ನದಿಯಾಗಿ ಹರಿದು ಹೋಗಿದೆ ನೋಡು ಎಂದು ಅವಳನ್ನು ನಂಬಿಸಲು, ದೇವಗಂಗೆಯನ್ನು ತನ್ನ ಜಟೆಯಲ್ಲಿ ಮರೆಮಾಡಿ, ಅಂದರೆ ತಲೆಯಲ್ಲೆ ಇಟ್ಟುಕೊಂಡು, ಅದನ್ನು ತೊರೆದು ಬಿಟ್ಟ ಹಾಗೆ, ಅದರ ಒಂದೆರಡು ಕವಲನ್ನು ಹೊಳೆಗಳಾಗಿ ಹೊರಕ್ಕೆ ಬಿಡುತ್ತಾನೆ ಶಿವ. ಅಂತಹ ಸ್ಥಳವೇ ಇದು ಎಂದು ಗುಹ್ಯಕನು ಅರ್ಜುನನಿಗೆ ಕೈಲಾಸಪರ್ವತದ ಸ್ಥಳ ಪರಿಚಯ ಮಾಡುತ್ತಾನೆ.)
0 ಪ್ರತಿಕ್ರಿಯೆಗಳು