ಪಕ್ವತೆ ಇದ್ದ ಬಿಸಿ ರಕ್ತದ ಹುಡುಗ..

ರಾಜು ಹೆಗಡೆ

‘ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದು ಉಚಿತಂ
ಅದು ಕೆಟ್ಟೀಗಳ್
ನಿನಗೆ ಆಂ ಕುಡುವಂತಾದುದೆ
ತನೂಜ
ನೀಂ ಕ್ರಮ ವಿಪರ್ಯಯಂ ಮಾಡುವುದೇ’

ಇದು ರನ್ನನ ‘ಗದಾಯುದ್ಧ’ದಲ್ಲಿ ಬರುವ ಒಂದು ಪದ್ಯ. ಕೌರವ ಮಗ ಲಕ್ಷಣ ಕುಮಾರನ ಕಳೇಬರವನ್ನು ನೋಡಿದಾಗ ಹೇಳುವ ಮಾತು. ತಂದೆಗೆ ಮಗನಾದವನು ಜಲಾಂಜಲಿಯನ್ನು ಕೊಡುವುದು ಉಚಿತವಾದುದು. ಅದನ್ನು ಬಿಟ್ಟು ನಿನಗೆ ನಾನು ಕೊಡುವಂತಾಯಿತೇ. ಹೀಗೆ ನೀನು ಕ್ರಮವನ್ನು ಉಲ್ಲಂಘಿಸಬಹುದೇ, ಎನ್ನುವುದು ಇದರ ಭಾವಾರ್ಥ. ನನಗೆ ವಿಠ್ಠಲನ ಬಗ್ಗೆ ಈಗ ಬರೆಯುವಾಗ, ಮೇಲಿನ ಪದ್ಯಕ್ಕೆ ಹತ್ತಿರವಾದ ಭಾವವೆ ಉಂಟಾಗುತ್ತಿದೆ.

ಹಾಗೆ ನೋಡಿದರೆ ವಿಠ್ಠಲ ನನಗಿಂತ ಸಣ್ಣವನಲ್ಲ. ನನಗೆ ಅವನಿಗೆ ನಾಲ್ಕೈದು ವರ್ಷ ಪರಕ್ಕು ಅಷ್ಟೇ. ನಾನು ಎಂ.ಎ. ಮುಗಿಸಿ ಹೊನ್ನಾವರ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಸೇರಿದಾಗ ಅವನು ಬಿ.ಎ. ಕೊನೆಯ ವರ್ಷದ ವಿದ್ಯಾರ್ಥಿ. (ನಂತರ ಅವನೂ ಎಂ.ಎ. ಮುಗಿಸಿಕೊಂಡು ಬಂದು ನನ್ನ ಹಾಗೇ ಅಲ್ಲಿಯ ಉಪನ್ಯಾಸಕನಾದ. ನಂತರ ನನಗೆ ಬಂದಿದ್ದ ‘ಸಂದರ್ಭ’ ಅವನಿಗೂ ಬಂತು, ಅದು ಬೇರೆ ಕಥೆ! ಆಗಲೇ ನಾನು ದಾಂಡೇಲಿ ಕಾಲೇಜಿಗೆ ಹೋಗಿದ್ದೆ. ಶ್ರೀಪಾದ ಭಟ್ಟ, ಭಾಗ್ವತ, ಎಂ.ಎ.ನಾಯ್ಕ, ಭಂಡಾರಿ ಎಲ್ಲಾ ಅವನ ಸಹಪಾಠಿಗಳು.

ಈ ಎಲ್ಲರೂ, ನಂತರ ನನ್ನ ಮಾವನಾದ ಅವಧಾನಿಯವರ ಖಾಸಾ ಶಿಷ್ಯರು. ಇವರೆಲ್ಲರ ‘ಠೋಳಿ’ ಸಾಹಿತ್ಯ, ಸಾಕ್ಷರತೆ, ನಾಟಕ, ಹೋರಾಟ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿತ್ತು. ಕಾಲೇಜಿನ ಆವರಣ ಬಿಟ್ಟರೆ ಉಳಿದ ಸಂದರ್ಭಗಳಲ್ಲಿ, ಆರ್.ವಿ.ಭಂಡಾರಿಯವರು ನಮ್ಮ ಜೊತೆಗೆ ಇರುತ್ತಿದ್ದರು.) ನಾನು ಅದೇ ಕಾಲೇಜಿನಲ್ಲಿ ಅಧ್ಯಾಪಕನಾದ್ದರಿಂದ ಅವನಿಗೆ ನಾನು ಗುರುವೆನಿಸಿಕೊಂಡೆ. ಅದಕ್ಕಿಂತ ಹೆಚ್ಚಾಗಿ ನನಗವನು ಗೆಳೆಯ, ಹತ್ತಿರದವ. ಅದರೆ ವಿಠ್ಠಲ ಎಂದೂ ತಾನು ವಿದ್ಯಾರ್ಥಿ ಎಂಬ ವಿನಯವನ್ನು ಬಿಟ್ಟವನಲ್ಲ.

ಹಿರಿಯರಾದ ಆರ್.ವಿ.ಭಂಡಾರಿಯವರು ಚೆನ್ನಾಗಿ ಓಡಾಡುತ್ತಿರುವಾಗ ವಿಠ್ಠಲ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ ಅಥವ ನನಗೆ ಕಾಣಲಿಲ್ಲ. ಬಹುಶಃ ಭಂಡಾರಿಯವರಿಗೆ ದೇಹ ತ್ರಾಸು ಕೊಡತೊಡಗಿದಾಗ ವಿಠ್ಠಲ ವಿರಾಜಮಾನನಾದ! ಅವರಿದ್ದರೂ ಆಗದಿದ್ದ ಪ್ರಕಟನೆ ಇತ್ಯಾದಿ ಕೆಲಸ ಮಾಡಿದ. (ಮಾಡಿದ ಎಂದು ಈಗ ಹೇಳಬೇಕಾಗಿದೆ. ಆದರೆ ನಿಜವಾಗಿ ವಿಠ್ಠಲ ಮಾಡುತ್ತಲೇ ಇದ್ದ!) ಅವಧಾನಿಯವರ, ಆರ್.ವಿ. ಅವರ ಮನೆಗಳೆಲ್ಲ ಒಂದು ನಮೂನೆ ಕೂಡು ಕುಟುಂಬದಂತೆ ಇತ್ತು. ಏನನ್ನೊ ಸಾಧಿಸುವ, ಆಗಿಸುವ ಕನಸು, ಉಮೇದಿ ಅವರಲ್ಲಿ ಗೊಜಗುಡುತ್ತಿತ್ತು. ಆದರೆ ಕಾಲ ಎಲ್ಲವನ್ನು ಕಸಿಯುತ್ತ ಹೋಯಿತು: ಮೊದಲು ಅವಧಾನಿಯವರು ನಂತರ ಭಂಡಾರಿಯವರು ಈಗ, ಇವ…

ನನ್ನ ಎರಡು ಸಂಕಲನಗಳನ್ನು ತನ್ನ ಬಂಡಾಯ ಪ್ರಕಾಶನದಿಂದ ಪ್ರಕಟಿಸಿದ ವಿಠ್ಠಲ. ಅದು ಕವನ ಸಂಕಲನ ನೆನಪಿಡಿ! ಅವನು ಪ್ರಕಾಶನದಲ್ಲಿ ಪರಿಣಿತನಿದ್ದಂತಿರಲಿಲ್ಲ. ತನ್ನ ಪುಸ್ತಕ ತಕಳ್ಳಿ ಎಂದು ಯಾರಿಗೂ ದುಂಬಾಲು ಬೀಳುತ್ತಿರಲಿಲ್ಲ. ಅಷ್ಟಾಗಿ ವ್ಯವಾರಸ್ಥನೂ ಅಲ್ಲ. ಆದರೂ ಆರ್, ವಿ, ಯವರ ಕಾಲದಿಂದಲೂ ಇದ್ದ ‘ಬಂಡಾಯ ಪ್ರಕಾಶನ’ದ ಹೆಸರಿನಲ್ಲಿ ಒಂದಿಷ್ಟು ಪುಸ್ತಕಗಳನ್ನು ಪ್ರಕಟಿಸಿದ. ದುಡ್ಡು ಮಾಡುವ ಉದ್ದೇಶ ಹಾಗಿರಲಿ, ಅಲ್ಲಿಂದಲ್ಲಿಗೆ ಮಾಡಿಕೊಳ್ಳುವುದಕ್ಕೆ ಬೇಕಾದ ಚಕ್ಯತೆಯೂ ಅವನಿಗೆ ಇದ್ದಂತಿರಲಿಲ್ಲ.

ಒಮ್ಮೆ ಹೀಗೆ ಧಾರವಾಡದ ಮೌಲ್ಯಮಾಪನ ಕೇಂದ್ರದಲ್ಲಿ ಪೇಪರ್ ನೋಡ್ತಾ ಇದ್ದಾಗ ಪಕ್ಕದಲ್ಲಿ ಇದ್ದ ಅವನ ಕೇಳಿದೆ; ‘ನಂದೊಂದು ಕವನ ಸಂಕಲನ ಮಾಡೊ ಮಾರಾಯಾ’ ಎಂದು. ‘ಅಡ್ಡಿಲ್ರ, ಅದಕೇನು, ಮಾಡ್ವಾ, ಕವನ ಕಳಿಸಿ’ ಎಂದ. ಪುಸ್ತಕ ಪ್ರಕಟನೆ, ಮಾರಾಟ ಎಲ್ಲಾ ಎಷ್ಟು ಮೈಮೇಲೆ ಬರುತ್ತದೆ ಎಂದು ನನಗೆ ಗೊತ್ತಿತ್ತು. ಹೀಗಾಗಿ ಅವನು ಕೇಳದಿದ್ದರೂ ನಾನೇ, ‘ಪ್ರಿಂಟ್ ಚಾರ್ಜು ಕೊಡ್ತೇನೆ, ಕವರ್ ಪೇಜ್ ಡಿಜೈನ್ ಮಾಡಿಸ್ತೆ. ಮಾರಾಟವಾಗಿ ದುಡ್ಡು ಬಂದರೆ ಕೊಡು’ ಎಂದು ಹೇಳಿದೆ. ಪ್ರಕಟವಾಯ್ತು. ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಅವನು ಎಲ್ಲೊ ದೂರದ ಊರಿನಲ್ಲಿ ಇದ್ದ ನೆನಪು. ಎಲ್ಲಾ ಆಯ್ತು. ನಂತರ ಎರಡನೇ ಸಂಕಲನ ಮಾಡುವಾಗ, ‘ಹಿಂದಿನ ಸಂಕಲನ ಮಾರಿ ಬಂದ ದುಡ್ಡು ಸ್ವಲ್ಪ ಇದೆ, ಕಡಿಮೆ ಕೊಡಿ’ ಎಂದ. ಇದು ನನ್ನ ಅವನ ಸಂಬಂಧದ ಒಂದು ಎಳೆ ಮಾತ್ರ.

ವಿಠ್ಠಲನ ಸಿದ್ಧಾಂತ ವಿಚಾರವೆಲ್ಲ ನನಗೆ ಪೂರ್ತಿಯಾಗಿ ಹಿಡಿಸುತ್ತಿರಲಿಲ್ಲ. ಅದು ಅವನಿಗೆ ಗೊತ್ತಿದ್ದಂತಿತ್ತು. ಹೀಗಾಗಿ ಅವನು ಯಾವುದರಲ್ಲೂ ನನಗೆ ಒತ್ತಾಯ ಮಾಡುತ್ತಿರಲಿಲ್ಲ. ಅವನಿಗೆ ಕಾವ್ಯ ಕಲೆಗಳ ಗಾಢ ಸಂಪರ್ಕ- ಸಂಬಂಧ ಇರುವುದರಿಂದಲೊ ಏನೋ ಮನುಷ್ಯರ ‘ಹುಚ್ಚು ಮನಸ್ಸಿ’ನ ಬಗ್ಗೆ ಗೊತ್ತಿತ್ತು. ಗೀತಾ ಅವರು ಹೇಳಿದಂತೆ, ವಿಠ್ಠಲನಿಗೆ ತನ್ನ ವೈಚಾರಿಕತೆಯ ಬಗ್ಗೆ ಸ್ಫಷ್ಟತೆ ಇತ್ತು, ಹಠ ಇರಲಿಲ್ಲ. ಹೀಗಾಗಿ ಅವನು, ವೈಚಾರಿಕತೆಯಲ್ಲಿ ವಿರೋಧವಿದ್ದವರನ್ನೂ ಗಾಢವಾಗಿ ಪ್ರೀತಿಸುತ್ತಿದ್ದ. ಇದು ಅವನಿಗೆ ಅಪ್ಪ ಆರ್. ವಿ. ಭಂಡಾರಿಯವರಿಂದಲೇ ಬಂದಂತಿತ್ತು.

ತೀವ್ರ ಕ್ರಿಯಾಶೀಲನಾಗಿದ್ದ ವಿಠ್ಠಲ ಬೆಳಿಗ್ಗೆ ಸಿರ್ಸಿಯಲ್ಲಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಕಾರವಾರದಲ್ಲಿ ಇನ್ನೊಂದು ಏರ್ಪಡಿಸಿ, ರಾತ್ರೆ ಬಸ್ಸಿಗೆ ಬೆಂಗಳೂರಿಗೆ ಹೋಗಿ, ಅಲ್ಲಿ ಮಾರನೆ ದಿನ ಬೆಳಿಗ್ಗೆ ಯಾವುದಕ್ಕೋ ಎಟೆಂಡ್ ಆಗುತ್ತಿದ್ದ! ಯಾವ ಉದ್ವೇಗಕ್ಕೂ ಒಳಗಾಗದೇ ಇದನ್ನೆಲ್ಲ ಮಾಡುತ್ತಿದ್ದ. ಎಸ್.ಎಫ್.ಐ, ಬಂಡಾಯ, ಅಧ್ಯಾಪಕರ ಪರಿಷತ್ತು, ಕಾಲೇಜು, ಸಹಯಾನ, ನಾಟಕ….ಒ! ಅವನ ಚಟುವಟಿಕೆಗಳು ಎಷ್ಟೊಂದು. ಇಂಥ ಇಂತಹ ಪಕ್ವತೆ ಇರುವ ಬಿಸಿ ರಕ್ತದ ಹುಡುಗ ಹೀಗೆ ಇದ್ದಕ್ಕಿದ್ದಂತೆ ಇಲ್ಲವಾಗುವುದೆಂದರೆ…

ಅದರಿಂದಲೇ ರನ್ನ ಹೇಳಿದ ಮಾತು ನನಗೆ ಹೀಗೆ ಕೇಳತೊಡಗಿತು; ನನ್ನಂಥವರ ಬಗ್ಗೆ ನೀನು ಬರೆಯಬೇಕಾಗಿತ್ತು. ಆದರೆ ನಿನ್ನ ಬಗ್ಗೆ ನಾನು ಬರೆಯುವಂತಾಯಿತೇ… ಕ್ರಮ ವಿಪರ್ಯಯ ಮಾಡಬಹುದೇ, ವಿಠ್ಠಲ…

‍ಲೇಖಕರು Avadhi

May 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: