ಪಂ ರಾಜೀವ ತಾರಾನಾಥ ಕಂಡಂತೆ ‘ಮುಗಿದ ಹಾಡಿನ ಖಾಲಿ ರಾಗʼ

ಪಂ.ರಾಜೀವ ತಾರಾನಾಥ

ಇತ್ತ ಬಾ, ಕಾವ್ಯ ಓದು ಎನ್ನುತ್ತದೆ ಈ ಕಾವ್ಯ
ಪಂ.ರಾಜೀವ ತಾರಾನಾಥರ ಓದಿನ ಮಾತು

ಕಾವ್ಯ ಯಾಕೆ ನಮಗೆ ಮುಖ್ಯ, ಯಾಕೆ ನಾವು ಕಾವ್ಯಕ್ಕೆ ಹಿಂದಿರುಗಿ ಬರಬೇಕು ಎಂಬುದಕ್ಕೆ ಜಿ.ಪಿ.ಬಸವರಾಜರ ʼಮುಗಿದ ಹಾಡಿನ ಖಾಲಿ ರಾಗʼ ಉತ್ತರ ಹೇಳುತ್ತದೆ.
ಈ ಕಾಲದಲ್ಲೂ ನಾವು ಕವನ ಯಾಕಯ್ಯ ಓದುಬೇಕು ಎಂದರೆ ಈ ಪುಸ್ತಕ ಹೇಳುತ್ತದೆ: ತಿರುಗಿ ಇತ್ತ ಬಾ, ಕಾವ್ಯ ಓದು, ಅದರ ಸುಖಗಳನ್ನು ಪಡಿ ಅನ್ನುತ್ತದೆ. ಕಾವ್ಯ ಕಾಣಬೇಕು, ಕೇಳಬೇಕು, ನಾವು ಕಣ್ಣು ಮುಚ್ಚಿಕೊಂಡರೂ ತಲೆಯಲ್ಲಿ ಅದೆಲ್ಲ ಆಡಬೇಕು. ಇದೆಲ್ಲ ಈ ಸಂಕಲನದಲ್ಲಿ ಆಗುತ್ತದೆ. ಇತ್ತ ಬಾ, ಕವನ ಓದು, ಗಮನಿಸು ಎನ್ನುತ್ತದೆ. ಇದರ ಮುಖ್ಯತೆಯೇ ಅದು. ಇದೇ ಔಷಧೀ ಪ್ರಾಯವಾಗಿ ತೋರ್ತಾ ಇರೋದು. ಇದು ಬಹಳ ದೊಡ್ಡದು.

ನಮ್ಮ ಸಂವೇದನೆ ಇವತ್ತು ಬಹಳ ದೊರಗಾಗ್ತಾ ಇದೆ. ನಮ್ಮ ಸಂವೇದನೆ ಬೆಳೀಬೇಕು, ನವಿರಾಗಬೇಕು. ಇದಕ್ಕೆ ಔಷಧ ಬೇಕು. ಈ ಔಷಧವನ್ನು ಈ ಕಾವ್ಯ ಕೊಟ್ಟಿದೆ. ಔಷಧದ, ಚಿಕಿತ್ಸೆಯ ಬೆಲೆ ದೊಡ್ಡದು.

ಇವಾಗ ನಮಗೆ ಕನ್ನಡದಲ್ಲಿ ಸಾಹಿತ್ಯಕ ಚರ್ಚೆ ಚಿಂತನೆಗಳ ನಾಣ್ಯಗಳು ಬೇರೇನೇ ಇವೆ. ಕತೆ, ಕಾದಂಬರಿಯ ನಾಣ್ಯಗಳೇ ನಡೀತಿವೆ. ಕವನಗಳನ್ನು ಯಾರೂ ಕೇಳಲ್ಲ. ಇದರಿಂದ ನಾನು ಒಂದು ದೊಡ್ಡ ಪಾಠ ತಗೊಳ್ತೀನಿ. ವೈಯಕ್ತಿಕ ಹಾಗೂ ಸಾಮಾಜಿ ಸಂವೇದನೆ, ಬೆಲೆಬಾಳುವ ನೋಟ, ಇವು ದೊರಗಾಗಿಬಿಟ್ಟಿವೆ. ಕಾವ್ಯ ಕವನದಲ್ಲಿರುವ, ಕವನ ಕೇಳುವ ಚೂಪುತನ- ನೋಟದ ಚೂಪು, ಶಬ್ದಗಳ ಓಟ, ಪ್ರಾಸ ಗೀಸ ಅಂತಾರಲ್ಲ ಅದು, ಪ್ರತಿಮೆಗಳ ಆಟ, ಅವೆರಡರ ಮುಖ್ಯತೆ ಕವನಕ್ಕೆ.

ಯಾರೋ ಒಬ್ಬ, ನಮ್ಮ ಕಾಲದ ಅಮೆರಿಕನ್‌ ಕ್ರಿಟಿಕ್‌ , ಹೆರಾಲ್ಡ್‌ ಬ್ಲೂಮ್‌ ಮಾತಾಡ್ತಾನೆ: ಕವನ ಅಂತಂದ್ರೆ, ಗ್ರಹಿಕೆ, ಸಂಪೂರ್ಣವಾದ ಗ್ರಹಿಕೆ ಅನ್ತಾನೆ. ದಿ ಯೂಸ್‌ ಆಫ್‌ ದಿ ಫಿಗರೇಟಿವ್‌ ಲ್ಯಾಂಗ್ವೇಜ್‌. ಅದೇ ಕವನಕ್ಕೂ ಕವನವಲ್ಲದ ಸಾಹಿತ್ಯಕ್ಕೂ ಇರುವ ವ್ಯತ್ಯಾಸ. ಬ್ಲೂಮ್ ಹೇಳಿದ ಅಂತ ಅಲ್ಲ, ಕಾದಂಬರಿಗೂ, ಕವನಕ್ಕೂ ಇದೆ ವ್ಯತ್ಯಾಸ. ಆ ಫಿಗರೇಟಿವ್‌ ಲ್ಯಾಂಗ್ವೇಜ್‌ ಅದನ್ನು ಇಟ್ಟುಕೊಂಡೇ ನಾವು ಬೆಳೆಯತಕ್ಕದ್ದು, ಅದನ್ನು ನವಿರುಗೊಳಿಸತಕ್ಕದ್ದು, ಅದನ್ನು ಹಸನುಗೊಳಿಸತಕ್ಕದ್ದು; ಸಣ್ಣವರಿದ್ದಾಗಿನಿಂದಲೂ ನಾವು ಹೀಗೆ ಬೆಳೆದು ಬಂದಿರ್ತೀವಿ. ಅದು ಒಂದು ರೀತಿ. ಇನ್ನೊಂದು ಅದನ್ನು ಮರೆತುಬಿಡ್‌ತದೆ; ಸುಮ್ನೆ ಅದರ ಹಿಂದೆ ಇರುತ್ತದೆ.

ಯಾವುದೋ ಒಂದು ಸ್ಥೂಲವಾದ ಮಸುಕು ಮುಸುಕಾದ ಒಂದು ಕಥೆಯನ್ನು ಹುಡುಕಿಕೊಂಡೇ ಹೊರಟುಬಿಡುತ್ತೆ. ಎಲ್ಲೆಲ್ಲೋ ಹೋಗಿಬಿಡುತ್ತೆ.ಅದಕ್ಕೇ ಅದು ಕಾದಂಬರಿ; ಟೈಮ್‌ ಟೇಬಲ್‌ ಅಲ್ಲ ಅದು. ಅದೇ ಬೇರೆ. ಇವಾಗ ನಮ್ಮ ಕಾದಂಬರಿಯ ಓದಿಗೂ, ನ್ಯೂಸ್‌ ಪೇಪರ್‌ ಓದಿಗೂ ಅಂಥ ವ್ಯತ್ಯಾಸ ಇಲ್ಲ. ಕಾದಂಬರಿ ನ್ಯೂಸ್‌ ಪೇಪರ್‌ ಐಟಂ ಅಲ್ಲ;
ʼಮುಗಿದ ಹಾಡಿನ ಖಾಲಿರಾಗʼದಲ್ಲಿ ಕಾವ್ಯ, ಅದರ ಪ್ರಯತ್ನ. ಎಲ್ಲ ಕಡೆಯೂ ಗೆದ್ದಿದೆ ಅಂತ ಅಲ್ಲ. ಕೆಲವು ಕಡೆ ಶಿಥಿಲವಾಗಿ, ಆಯಾಸದ ಬರಹವಾಗಿ ಕಾಣಬಹುದು. ಆದರೆ ಅನೇಕ ಕಡೆಗಳಲ್ಲಿ ಇದು ಬಹಳ ತೀಕ್ಷ್ಣವಾಗಿದೆ. ಅದಕ್ಕೇ ಇದು ಬಹಳ ಮುಖ್ಯ ಸಂಕಲನ. ನಾನೂ ಕನ್ನಡದಲ್ಲಿ ಬಹಳ ಸಂಕಲನಗಳನ್ನು, ಸಮಗ್ರಗಳನ್ನು ಓದಿದೀನಿ.

ಭಾಷೆಯ ರೆಟರಿಕ್‌ ಮತ್ತು ಮಾಮೂಲುತನ ಇವನ್ನು ಜೋಡಿಸುವ ರೀತಿ, ಇಟ್ಟು ನೋಡುವ ರೀತಿ, ಎಕ್ಸ್‌ಪರ್ಟ್‌ ಮ್ಯಾನೇಜ್‌ಮೆಂಟ್‌, ಅಟ್ಟಹಾಸದ, ಆಟೋಪದ ಮಾತುಗಳನ್ನು ಹೇಳುತ್ತಲೇ ತಟ್ಟನೆ ಒಗ್ಗರಣೆ ಹಾಕಿದಂತೆ ಸಾಧಾರಣ ಮಾಮೂಲಿ ಮಾತನ್ನು ಬಳಸಿ ಮೂಡನ್ನು ಬದಲಾಯಿಸುವುದು, ಪರಿಣಾಮವನ್ನು ಹೆಚ್ಚಿಸುವುದು ಇತ್ಯಾದಿ ತಂತ್ರಗಳನ್ನು, ಸಂವೇದನೆಯನ್ನು ಈ ಸಂಕಲನದ ಬಹಳಷ್ಟು ಪದ್ಯಗಳಲ್ಲಿ ಕಾಣ್ತೀವಿ.

ನಮ್ಮ ದಿನದ ಆಗುಹೋಗುಗಳೆಲ್ಲ ಸಾಧಾರಣವಾದವೇ; ಭಾಷೆ, ಭಾವ, ಅನುಭವ ತಟ್ಟುವುದು ಎಲ್ಲವೂ ಈ ಸಾಧಾರಣದಲ್ಲಿಯೇ, ಅಂದರೆ ಮಾಮೂಲಿನಲ್ಲಿಯೇ. ಎತ್ತರವಾದ ಸ್ಥಿತಿಯಲ್ಲಿ, ಉತ್ಕಟ ಸ್ಥಿತಿಯಲ್ಲಿ ಯಾವುದೋ ಒಂದು ಗಳಿಗೆ ಇರಬಹುದು ಅಷ್ಟೆ. ಅಲ್ಲಿಯೇ ಬಹಳ ಹೊತ್ತು ಇರೋಕೆ ಆಗಲ್ಲ. ಇದ್ದರೆ ಸತ್ತು ಹೋಗ್ತೀವಿ.

ಮಾಮೂಲಿತನದಲ್ಲಿಯೇ ನಾವು ಬದುಕ್ತೀವಿ. ಮಾಮೂಲಿತನ ನಮ್ಮನ್ನು ಉಸಿರಾಡಲು, ಬದುಕಲು ಬಿಡುತ್ತೆ. ಗರಿಷ್ಠ ಮತ್ತು ಕನಿಷ್ಠಗಳನ್ನು ಹಿಡಿಯುವುದು, ಭಾಷೆಯಲ್ಲಿ ಅವುಗಳನ್ನು ಜೋಡಿಸುವುದು ತಂತ್ರಕ್ಕೆ ಮತ್ತು ಸಂವೇದನೆಗೆ ಸಂಬಂಧಿಸಿದ್ದು. ಈ ಗುಣ ಈ ಸಂಕಲನದಲ್ಲಿದೆ. ಇದು ತಂತ್ರದ್ದೊ, ಸಂವೇದನೆಯದೊ; ತಂತ್ರ-ಸಂವೇದನೆ ಎರಡೂ ಒಂದೇ ಆಗಿದ್ದರೆ ಇನ್ನೂ ಒಳ್ಳೆಯದೇ.

ದೊಡ್ಡದನ್ನು ಹೇಳಲು ಹೋಗಿ ಅದನ್ನು ಸಣ್ಣದು ಮಾಡುವುದು. ಹೀಗೆ ಸಣ್ಣದು ಮಾಡುವಲ್ಲಿ ಐರನಿ ಇಲ್ಲ. ಇದು ಈ ಕಾವ್ಯದ ಗುಣ.

ಇಲ್ಲಿ ʼಮರದ ಮಾತುʼ ಎನ್ನುವ ಒಂದು ಕವನ ಇದೆ. ಇಲ್ಲಿ ಬರುವುದೆಲ್ಲ ಮನೆ ಮಾತು. ಸಾಧಾರಣ-ಸಾಧಾರಣದಲ್ಲಿ ಆಗುವ ಮಾತುಕತೆ. ಅತ್ಯುತ್ತಮ ಗದ್ಯ ಎನ್ನಬಹುದಾದ ಸಾಲುಗಳೂ ಇಲ್ಲಿವೆ. ನಾವು ಬರೆಯುವ ಕಾಗದದಲ್ಲಿನ-ಹಿಂದಿನ ಕಾಲದ ಕಾಗದದಲ್ಲಿನ ಮಾತುಗಳ ಹಾಗೆ. ಆದರೆ ಅದು ಕಾಗದ ಅಲ್ಲ. ಥಟ್ಟನೆ ಒಗ್ಗರಣೆ ಹಾಕಿದಂತೆ ಪರಿಣಾಮ ಬದಲಾಗಿಬಿಡುತ್ತೆ. ʼಉಮೇದು ಉಕ್ಕಿ ಹರಿದು ಬಡಬಡ/ ಒದರಿದೆ-ಭಾಷೆ ಬೆದರುವಂತೆ, ಎದೆಯ ಗುಟ್ಟುಗಳನೆಲ್ಲ ಸುರಿದೆ ಅವನ/ ಮಡಿಲಿಗೆ….ʼ

ಇದು ಬೆಸ್ಟ್‌ ಮ್ಯಾನೇಜ್‌ಮೆಂಟ್‌ ಆಫ್‌ ರೆಟರಿಕ್‌ ಲ್ಯಾಂಗ್ವೆಜ್‌. ಮೂಡನ್ನು ಬದಲಾಯಿಸಿಬಿಡುತ್ತೆ.
ಅಲೆಕ್ಸಾಂಡರ್‌ ಗಳಗಳ ಅತ್ತುಬಿಟ್ಟನಂತೆ. ನಾವು ಅಲೆಕ್ಸಾಂಡರನನ್ನು ನೋಡಿಲ್ಲ. ಆದರೆ ಅವನ ಅಳು ಗೊತ್ತು, ನೋವು ಗೊತ್ತು, ಸಂಕಟ ಗೊತ್ತು. ಅದನ್ನು ಹಿಡಿಯುತ್ತೆ ಕವಿತೆ. ಅಬ್ಬರದಲ್ಲಿ ಶುರುವಾಗಿ, ಸಾಧಾರಣ-ಸಾಧಾರಣರ ಮಾತುಕತೆಯಾಗಿ, ಕೊನೆಯಲ್ಲಿ ಕೊಯಟ್‌ನೆಸ್‌ಗೆ ಬಂದು ನಿಂತುಬಿಡುತ್ತದೆ. ಈ ಕೊಯೆಟ್‌ನೆಸ್‌ಗೆ ಕನ್ನಡದಲ್ಲಿ ಸರಿಯಾದ ಪದ ಇಲ್ಲ. ಸಂಸ್ಕೃತದಲ್ಲಿ ಇರಬಹುದು. ಆದರೆ ಅದನ್ನು ಹುಡುಕುವುದೆಂದರೆ ಸ್ನಾನ ಮಾಡಿಕೊಂಡು ಬರಬೇಕಾಗುತ್ತೆ. ಇಂಗ್ಲಿಷ್‌ನ ಈ ಪದಕ್ಕೆ ಹತ್ತಿರ ಹತ್ತಿರ ಪದವನ್ನು ಹುಡುಕುವುದಾದರೆ, ʼಬಾಯಿ ಮುಚ್ಚಿಕೊಂಡು ಕೇಳುʼ ಎನ್ನುವ ಸ್ಥಿತಿ. ಬಸವರಾಜರ ಎಷ್ಟೋ ಕವನಗಳಲ್ಲಿ ಈ ಗುಣ ಕಾಣುತ್ತೇವೆ. ಆಟೋಪ ತೋರಿಸಬೇಕಾದರೆ ಸಣ್ಣಮಾತು ಬೇಕಾಗುತ್ತದೆ. ಸಣ್ಣಮಾತು, ಹೇಳುವವರು ಮತ್ತು ಕೇಳುವವರ ನಡುವಿನ ಮಾತುಕತೆ ಅದು.

ಈ ಸಂಕಲನದ ಇನ್ನೊಂದು ಪದ್ಯ-ಸುಡುವ ಬೆಂಕಿಯ ಒಡಲಲ್ಲಿ.
ʼಗಾಳಿಯಲಿ ತೇಲಿಬಂದ ಮಾತು ಎದೆಯೊಳಗೆ
ಮಂಥನಗೊಳ್ಳಲಿಲ್ಲ, ಅವಸರಕೆ ಬಲಿಯಾದವಳು
ಸೀತೆ, ರಾಮ ಬೀಗಿದ, ಪ್ರಜೆಗಳಿಗೆ ತಲೆಬಾಗಿದ
ಅಮಲಿನಲ್ಲಿ,….
ಎಕ್ಸಲೆಂಟ್‌, ಎಕ್ಸಲೆಂಟ್‌
ಪ್ರಜೆಗಳಿಗೆ ತಲೆಬಾಗಿದೆನಲ್ಲ, ಜನರ ಮಾತು ಕೇಳಿದೆನಲ್ಲ ಎಂಬುದೊಂದು ಅಮಲು ರಾಮನಿಗೆ, ಇದು ಒಂದು ರೀತಿಯ ಇಂಟಾಕ್ಸಿಕೇಷನ್‌.

ʼನಮ್ಮೂರ ದೇವರುʼ ಎನ್ನುವ ಇನ್ನೊಂದು ಪದ್ಯ ಇಲ್ಲಿದೆ. ನಾಟಕೀಯ ಗುಣವನ್ನು ಪಡೆದುಕೊಂಡ ಕವಿತೆ ಇದು. ಇಲ್ಲಿ ಹೆಚ್ಚಿನದೇನೋ ಇಲ್ಲ. ಸಾಧಾರಣವಾದದ್ದನ್ನೇ ವಿಡಿಯೋ ದೃಶ್ಯದಲ್ಲಿ ತೋರಿಸುವಂತೆ ತೋರಿಸುವುದು. ಮಾಮೂಲಿತನದಲ್ಲಿಯೇ ಕವಿತೆ ಗೆದ್ದುಬಿಡುತ್ತೆ.
ಇನ್ನೊಂದು ಪದ್ಯವಿದೆ, ʼದಂಡೆಯಲ್ಲಿʼ. ಇದರ ಟೋನ್‌ ಬಹಳ ಆಪ್ತವಾದದ್ದು. ʼತಣ್ಣಗೆ ಕುಳಿತಿದ್ದಳು ಕಾದು ಆರಿದ ಹಾಗೆʼ ಎನ್ನುವ ಮಾತು ಬರುತ್ತದೆ ಈ ಕವನದಲ್ಲಿ. ಇದು ಇದು ನಮಗೆ ಬೇಕಾದದ್ದು. ಇಡೀ ಕವನದಲ್ಲಿ ಇಂಥ ಆಪ್ತತೆ ಇದೆ.
ಗೌರೀ ಶಂಕರ ದೊಡ್ಡದು, ಹೇಳುವುದರಲ್ಲಿಯೇ ಅದು ನಮಗಲ್ಲ ಎಂಬುದು ಗೊತ್ತಾಗುತ್ತೆ. ನಮ್ಮ ಕೈ ಎಟುಕಿಗೆ ಸಿಕ್ಕುವುದು ಸಾಧಾರಣವಾದದ್ದು; ಮಾಮೂಲಿಯಾದದ್ದು. ಈ ಮಾಮೂಲಿತನವೇ ಮುಖ್ಯವಾದದ್ದು. ಅದೇ ಈ ಸಂಕಲನದ ಬಹಳ ಮುಖ್ಯವಾದ ಗುಣ.

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: