ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..

ಪಂಡಿತ್ ರಾಜೀವ್ ತಾರಾನಾಥರ ಗೌರವಾರ್ಥ ನಾಳೆ ಅಭಿನಂದನಾ ಕಚೇರಿ ಇದೆ.

ಈ ಹಿನ್ನೆಲೆಯಲ್ಲಿ ಅವರನ್ನು ಹತ್ತಿರದಿಂದ ಕಂಡ, ಅವರ ಬಗ್ಗೆ ಮಹತ್ವದ ಸಾಕ್ಷ್ಯಚಿತ್ರ ರೂಪುಗೊಳ್ಳಲು ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಬರೆದ ಲೇಖನ ಇಲ್ಲಿದೆ-

ಎನ್ ಆರ್ ವಿಶುಕುಮಾರ್

—–

ಸರೋದ್ ಎಂದರೆ ಥಟ್ಟನೆ ಪಂಡಿತ್ ರಾಜೀವ್ ತಾರಾನಾಥ್ ನೆನಪಾಗುತ್ತಾರೆ. ಅವರ ವಿದ್ವತ್ ಪೂರ್ಣ ಸಂಗೀತ ಕಚೇರಿಗಳು ಸ್ಮೃತಿ ಪಟಲದ ಮುಂದೆ ಹಾದು ಹೋಗುತ್ತವೆ. ಜಗತ್ತಿನ ಅಪ್ರತಿಮ ಸರೋದ್ ವಾದಕರ ಸಾಲಿನಲ್ಲಿ ರಾರಾಜಿಸುತ್ತಿರುವ ರಾಜೀವ್ ತಾರಾನಾಥ್ ಅವರ ಬಗ್ಗೆ ಕನ್ನಡಿಗರಾದ ನಮಗೆ ಹೆಮ್ಮೆ ಮೂಡುತ್ತದೆ.

ಭಾರತದ ಅಗ್ರಗಣ್ಯ ಸರೋದ್ ವಾದಕರಾದ ಅವರಿಗೆ ಈಗ 91ನೇ ವರ್ಷದ ಸಂಭ್ರಮ . ಅಕ್ಟೋಬರ್ 17 ಅವರ ಜನ್ಮದಿನ.

ಗುರು ಶಿಷ್ಯ ಪರಂಪರೆ ಮಸುಕಾಗುತ್ತಿರುವ ಈ ಕಾಲದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಅವರು ತಮ್ಮ ಗುರು ಉಸ್ತಾದ್ ಆಲಿ ಅಕ್ಬರ್ ಖಾನ್ ಅವರ ಬಗ್ಗೆ ಇಟ್ಟುಕೊಂಡಿರುವ ಗುರುಭಕ್ತಿ ಬಹಳ ದೊಡ್ಡದು .

“ ಉಸ್ತಾದ್ ಆಲಿ ಅಕ್ಬರ್ ಖಾನ್ ರ ಕೃಪೆಯಿಂದ ನಾನು ಇಲ್ಲಿ ಬದುಕಿದ್ದೇನೆ. ಖಾನ್ ಸಾಹೇಬರು ನನ್ನ ಬೆರಳ ತುದಿಗಳಲ್ಲಿ ಈಗಲೂ ಜೀವಂತವಾಗಿದ್ದಾರೆ .ಸರೋದ್ ವಾದನಕ್ಕೆ ಮುಂಚೆ ನಾನು ಕಣ್ಮುಚ್ಚಿ ಅವರನ್ನು ಧ್ಯಾನಿಸುತ್ತೇನೆ .ಮೇಲಿನಿಂದ ಅವರು ಆಶೀರ್ವದಿಸುತ್ತಾರೆ . ಅಲ್ಲಿಂದ ಅವರ ಸಂಗೀತದ ಒಂದು ಎಳೆಯನ್ನು ಸೆಳೆದುಕೊಂಡು ಸರೋದ್ ನುಡಿಸುತ್ತೇನೆ .ಅವರ ಸಂಗೀತ ನನ್ನ ಕೈ ಬೆರಳುಗಳ ಮೂಲಕ ನಿಮಗೆ ಹರಿಯುತ್ತದೆ. ಇದನ್ನು ನೀವು ಪವಾಡ ಎಂದು ಬೇಕಾದರೆ ಕರೆಯಿರಿ “ ಎಂದು ಭಾವ ತುಂಬಿ ತಮ್ಮ ಗುರು ಭಕ್ತಿಯನ್ನು ತುಳುಕಿಸುತ್ತಾರೆ .

ರಾಜೀವ್ ತಾರಾನಾಥ್ ಸರೋದ್ ವಾದ್ಯದ ಸೆಳವಿಗೆ ಆಕಸ್ಮಿಕವಾಗಿ ಸಿಲುಕಿದ ಘಟನೆ ಸ್ವಾರಸ್ಯವಾಗಿದೆ. ಒಮ್ಮೆ ಅವರು ತಮ್ಮ 19 ರ ಹರೆಯದಲ್ಲಿ ಬೆಂಗಳೂರಿನಲ್ಲಿ ಪಂಡಿತ್ ರವಿಶಂಕರ್ ಮತ್ತು ಆಲಿ ಅಕ್ಬರ್ ಖಾನ್ ಅವರ ಸಂಗೀತ ಕಚೇರಿಯನ್ನು ಕೇಳುತ್ತಾರೆ . ಆವರೆಗೂ ಸರೋದ್ ವಾದ್ಯದ ಬಗ್ಗೆ ಆಸಕ್ತಿಯೇ ಇಲ್ಲದಿದ್ದ ರಾಜೀವ್ ತಾರಾನಾಥ್ ಅವರಿಗೆ ಆಲಿ ಅಕ್ಬರ್ ಖಾನ್ ಅವರ ಸರೋದ್ ವಾದನ ಕೇಳಿದ ನಂತರ ಅವರ ಜೀವನದ ದಿಕ್ಕು ದೆಸೆಯೇ ಬದಲಾಗುತ್ತದೆ ‘ ಜಗತ್ತಿನಲ್ಲಿ ನನಗೆ ಏನೂ ಬೇಡ . ಖಾನ್ ಸಾಹೇಬರ ಕಾಲ ಬುಡದಲ್ಲಿ ಕುಳಿತು ನಾನು ಸರೋದ್ ಕಲಿಯಬೇಕು ‘ ಎನ್ನುವ ಉತ್ಕಟ ಇಚ್ಛೆ ಉಂಟಾಗುತ್ತದೆ.

ತಮ್ಮ ಆಪ್ತರ ಮೂಲಕ ಖಾನ್ ಸಾಹೇಬರನ್ನು ಸಂಪರ್ಕಿಸಿದ ರಾಜೀವ್ ತಾರಾನಾಥ್ ಕೋಲ್ಕೊತಾಗೆ ತೆರಳಿ ಖಾನ್ ಸಾಹೇಬರ ಬಳಿ ಶಿಷ್ಯರಾಗುತ್ತಾರೆ . ಈ ಶಿಷ್ಯ ವೃತ್ತಿಯ ಸಂದರ್ಭದಲ್ಲಿ ಖಾನ್ ಸಾಹೇಬರ ಸನಿಹದಲ್ಲಿಯೇ ಇದ್ದ ಪಂಡಿತ್ ರವಿಶಂಕರ್ ಮತ್ತು ವಿದುಷಿ ಅನ್ನಪೂರ್ಣ ದೇವಿಯವರ ಮಾರ್ಗದರ್ಶನವೂ ರಾಜೀವ್ ತಾರಾನಾಥ್ ಅವರಿಗೆ ದಕ್ಕುತ್ತದೆ. ಖಾನ್ ಸಾಹೇಬರ ಬಳಿ ಸರೋದ್ ಕಲಿತ ನಂತರ ರಾಜೀವ್ ತಾರಾನಾಥ್ ಮರಳಿ ಬೆಂಗಳೂರಿಗೆ ಬರುತ್ತಾರೆ .

ಸರೋದ್ ವಾದನದ ಜೊತೆಗೆ ಜೀವನ ನಿರ್ವಹಣೆಗಾಗಿ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗುತ್ತಾರೆ . ಉಪನ್ಯಾಸಕ ವೃತ್ತಿ ಮತ್ತು ಸರೋದ್ ವಾದನ ಎರಡರ ನಡುವೆ ಸಿಲುಕಿ ತೊಳಲಾಡುತ್ತಿದ್ದ ರಾಜೀವ್ ತಾರಾನಾಥ್ ಅವರಿಗೆ ಒಮ್ಮೆ ಪಂಡಿತ್ ರವಿಶಂಕರ್ ಅವರು ಕಟುವಾದ ಸಲಹೆ ನೀಡಿ ಉಪನ್ಯಾಸಕ ಹುದ್ದೆಯನ್ನು ತೊರೆಯುವಂತೆ ಹೇಳುತ್ತಾರೆ . ಪಂಡಿತ್ ಜಿ ಅವರ ಸೂಚನೆಯಂತೆ ರಾಜೀವ್ ತಾರಾನಾಥ್ ಉಪನ್ಯಾಸಕ ವೃತ್ತಿ ಬಿಟ್ಟು ಪೂರ್ಣ ಸಂಗೀತ ಕ್ಷೇತ್ರಕ್ಕೆ ತೊಡಗಿಸಿ ಕೊಳ್ಳುತ್ತಾರೆ .

ಮುಂದಿನದ್ದೆಲ್ಲವೂ ಈಗ ಇತಿಹಾಸ . ರಾಜೀವ್ ತಾರಾನಾಥ್ ಅವರು ಈಗ ಜಗದ್ವಿಖ್ಯಾತ ಸರೋದ್ ವಾದಕರು. ಅವರ ಸಂಗೀತ ಕಚೇರಿಗಳು ಅಮೇರಿಕ ,ಪ್ಯಾರಿಸ್, ಸಿಡ್ನಿ ಜರ್ಮನಿ , ಕೆನಡಾ ,ಯುರೋಪ್, ಮತ್ತು ಆಸ್ಟ್ರೇಲಿಯಾ ಖಂಡದ ಪ್ರಮುಖ ನಗರಗಳಲ್ಲಿ ಜಗತ್ತಿನಾದ್ಯಂತ ನಡೆದಿವೆ.ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಅವರು ಐದು ವರ್ಷಗಳ ಕಾಲ ಸಂದರ್ಶಕ ಸಂಗೀತ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ಅಮೇರಿಕಾದಲ್ಲಿ ಅವರ ಶಿಷ್ಯ ವೃಂದವೇ ಇದೆ.

ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಗೌರವ ದೊರಕಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸರ್ಕಾರದ ಚೌಡಯ್ಯ ಸ್ಮಾರಕ ಪ್ರಶಸ್ತಿ , ಆಸ್ಥಾನ ಸಂಗೀತ ವಿದ್ವಾನ್ ಪ್ರಶಸ್ತಿ , ನಾಡೋಜ ಗೌರವ ಪ್ರಶಸ್ತಿ ಹೀಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ .

‍ಲೇಖಕರು avadhi

October 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: