‘ನೋಡು, ಕೂದಲನ್ನು ವಾಪಸ್ ಕೊಡು. ಇಲ್ಲ ದಂಡ ತೆರಬೇಕು’

ಟಿ ಆರ್ ಅನಂತರಾಮು

‘ನೋಡು, ಕೂದಲನ್ನು ವಾಪಸ್ ಕೊಡು. ಇಲ್ಲ ದಂಡ ತೆರಬೇಕು’

‘ಈಗ ಕೂದಲು ನನ್ನ ಬಳಿ ಇಲ್ಲ. ದಂಡ ಕಟ್ಟುವೆ’

‘ನಾನು ವಿಳಾಸ ಕೊಡುತ್ತೇನೆ. ಆ ಚಾರಿಟಿ ಸಂಸ್ಥೆಗೆ ಮೂರು ಸಾವಿರ ಡಾಲರ್ ಕೊಡು’

‘ಆಗಲಿ’

ಇದು ಯಾರ ಸಂಭಾಷಣೆ? ಇದೆಂಥ ಶರತ್ತು? –

ಇದು ಚಂದ್ರನ ಮೇಲೆ ಮೊದಲು ಕಾಲಿಟ್ಟು ಇತಿಹಾಸ ನಿರ್ಮಿಸಿದ ನೀಲ್ ಆರ್ಮ್ ಸ್ಟ್ರಾಂಗ್ ಹಾಕಿದ ಶರತ್ತು. ಶರತ್ತು ಹಾಕಿದ್ದು ಅವನ ಕ್ಷೌರಿಕನಿಗೆ.

ಆದದ್ದು ಇಷ್ಟು: 1969ರ ಜುಲೈ 20ರಂದು ಚಂದ್ರನ ಮೇಲೆ ಇಳಿದು ಮರಳಿ ಬಂದಾಗ ಆರ್ಮ್ ಸ್ಟ್ರಾಂಗ್ ವಿಶ್ವ ಪ್ರಸಿದ್ಧನಾಗಿದ್ದ. 27 ದೇಶಗಳು ಅವನನ್ನು ಸನ್ಮಾನಿಸಿದ್ದವು. ಭಾರತದ ಮುಂಬೈಗೂ ಆ ಮೂರೂ ಅಪೊಲೋ -11 ಯಾತ್ರಿಕರು ಬಂದಿದ್ದರು. ಅದರಲ್ಲೂ ಆರ್ಮ್ ಸ್ಟ್ರಾಂಗ್ ಖ್ಯಾತಿಯ ಶಿಖರದಲ್ಲಿದ್ದ. ಅವನ ಹೆಸರು ಕೇಳಿದರೇ ಜನ ರೋಮಾಂಚನಗೊಳ್ಳುತ್ತಿದ್ದ ಸಮಯ.

ಈ ಸಂದರ್ಭ ಬಳಸಿಕೊಂಡು ಅವನ ಕ್ಷೌರಿಕ ಆರ್ಮ್ ಸ್ಟ್ರಾಂಗ್ ನ ತಲೆಕೂದಲು ಕತ್ತರಿಸಿದ ಮೇಲೆ ಒಂದು ಐಡಿಯಾ ಬಂದು ಕಸದ ಬುಟ್ಟಿಗೆ ಒಯ್ಯದೆ ಜೋಪಾನಪಡಿಸಿದ. ಅಭಿಮಾನಿಯೊಬ್ಬನಿಗೆ 3000 ಡಾಲರ್ ಗೆ ಮಾರಿಕೊಂಡಿದ್ದ.

ಆರ್ಮ್ ಸ್ಟ್ರಾಂಗ್ ಕೋಪಿಷ್ಠನೇನಲ್ಲ, ಸಭ್ಯ. ಮಿತಭಾಷಿ, ನಿಗರ್ವಿ. ಆದರೆ ಅವನ ಹೆಸರು ಹೇಳಿ ಯಾರು ಯಾರೋ ದುಡ್ಡು ಮಾಡಿಕೊಳ್ಳುತ್ತಿದ್ದುದರ ವಿಚಾರ ತಿಳಿದು ಅದನ್ನು ತಡೆಯಲು ಯೋಚಿಸುತ್ತಿದ್ದ. ಅವನ ಹಸ್ತಾಕ್ಷರಕ್ಕೆ ಜನ ಮುಗಿಬೀಳುತ್ತಿದ್ದರು. ಕೆಲವು ಕಿಲಾಡಿಗಳು ಅದನ್ನೇ ಹರಾಜು ಹಾಕಿ ದುಡ್ಡುಮಾಡಿಕೊಳ್ಳುತ್ತಿದ್ದರು. ಇದು ಅವನ ಗಮನಕ್ಕೆ ಬಂದು 1994ರಲ್ಲಿ ಹಸ್ತಾಕ್ಷರ ಕೊಡುವುದನ್ನೇ ನಿಲ್ಲಿಸಿಬಿಟ್ಟ.

ಚಂದ್ರನ ಮೇಲೆ ಕಾಲೂರುವ ಮುನ್ನ ಅವನ ತಯಾರಿ ಸಾಮಾನ್ಯದ್ದೇನೂ ಆಗಿರಲಿಲ್ಲ. ಅಮೆರಿಕದ ನೇವಿಯಲ್ಲಿ ಪೈಲಟ್ ಆಗಿದ್ದ. ಕೊರಿಯದ ಯುದ್ಧ ವಿಮಾನ ನಡೆಸಿದ್ದ. ಒಮ್ಮೆ ವಿಮಾನಕ್ಕೆ ಕೇಬಲ್ ಸುತ್ತು ಹಾಕಿಕೊಂಡು ಅಪಘಾತವಾಗಿ ಅದರಿಂದಲೂ ಪಾರಾಗಿ ಬಂದಿದ್ದ. ಜೆಮಿನಿ-8 ಮತ್ತು 11 ಅಂತರಿಕ್ಷ ನೌಕೆಯಲ್ಲಿ ಅನುಭವ ಪಡೆದ ಮೇಲಷ್ಟೇ ಚಂದ್ರಯಾನಕ್ಕೆ ಸಿದ್ಧನಾಗಿದ್ದ.

ನಾರ್ತ್ ಅಮೆರಿಕನ ಸಿರೀಸ್-ಎಕ್ಸ್ 15 ಎಂಬ ರಾಕೆಟ್ ಚಾಲಿತ ವಿಮಾನವನ್ನು ಐದು ಬಾರಿ ನಡೆಸಿ ಅತಿ ವೇಗದ ಪೈಲಟ್ ಗಳ ಸಾಲಿಗೆ ಇವನೂ ಸೇರಿದ್ದ. ಅಪೊಲೋ-೧೧ರ ಯಾನಕ್ಕೆ ನೀನು ಸಾರಥಿಯಾಗಬೇಕು’ಎಂದಾಗ, ಒಂದು ತಿಂಗಳು ಟೈಂಕೊಡಿ ಹೇಳುತ್ತೇನೆ’ ಎಂದಿದ್ದ. ಜೆನೆಟ್ ಶೆವಾನ್ ಇವನಿಗೆ ಸಂಪೂರ್ಣವಾಗಿ ಬೆಂಬಲ ನೀಡಿದ ಪತ್ನಿ. 1962ರಲ್ಲಿ ಎರಡನೆಯ ಮಗಳು ಇವರ ವಿವಾಹದ ವಾರ್ಷಿಕೋತ್ಸವದ ದಿನವೇ ಮೃತಳಾದಾಗ, ಮುಂದೆ ವಾರ್ಷಿಕೋತ್ಸವ ಆಚರಿಸುವುದನ್ನೇ ಕೈಬಿಟ್ಟರು. ಆ ಸಾವನ್ನು ಎದೆಯಲ್ಲಿ ಇಟ್ಟುಕೊಂಡೇ ಈ ಭೂಪ ಚಂದ್ರನನ್ನು ಮೆಟ್ಟಿನಿಂತಿದ್ದ. ಚಂದ್ರಯಾನದಿಂದ ಮರಳಿಬಂದಾಗ ಜನ ಬಗೆಬಗೆಯ ತಲೆಹರಟೆ ಪ್ರಶ್ನೆಗಳನ್ನು ಕೇಳುತ್ತಿದ್ದರು.

That’s one small step for man One giant leap for mankind’ ಎಂದು ಹೇಳಿದ್ದು ಮೊದಲೇ ರೆಕಾರ್ಡ್ ಆಗಿತ್ತಲ್ಲವೇ ಎಂದು ಕೇಳಿದಾಗಲೂ ಅವನು ಕೋಪಗೊಳ್ಳಲಿಲ್ಲ, ಸಿಡಿಮಿಡಿಗೊಳ್ಳಲಿಲ್ಲ. ನಾನು ಇಡೀ ಯಾನದ ಚರಿತ್ರೆಯನ್ನು ದಾಖಲಿಸಿದ್ದೇನೆ. ಅದರಲ್ಲಿರುವುದೆಲ್ಲ ಸತ್ಯ. ಬೇಕಾದರೆ ಓದಿಕೊಳ್ಳಿ’ ಎಂದು ನಿರ್ಭಾವುಕನಾಗಿ ಹೇಳಿಬಿಟ್ಟ.

ವಾಸ್ತವವಾಗಿ ರೆಕಾರ್ಡ್ ಆಗಿದ್ದು ಬೇರೆಯ ವಿಚಾರವೇ. ಜಗತ್ತಿಗೆ ಅದು ಗೊತ್ತಿರುವುದು ಕಡಿಮೆ. ಆಗಿನ ಅಧ್ಯಕ್ಷ ನಿಕ್ಸನ್ ಒಂದು ಸಂದೇಶ ಸಿದ್ದಪಡಿಸಿದ್ದರು. ಒಂದುವೇಳೆ ಅಪೊಲೋ-11ರ ಮೂರೂ ಜನ ಯಾನಿಗಳು ಹಿಂತಿರುಗಿ ಬರಲಾಗದಿದ್ದರೆ ಅವರ ಕುಟುಂಬವನ್ನು ಹೇಗೆ ಸಂತೈಸುವುದು ಎಂದು ಯೋಚಿಸಿ ಒಂದು ದುಃಖದ ಸಂದೇಶವನ್ನು ಸಿದ್ಧಪಡಿಸಿದ್ದರು.

ವಿಧಿ ತನ್ನ ಲಿಖಿತವನ್ನೇ ಬರೆದಿದೆ. ಚಂದ್ರನ ಮೇಲೆ ನಡೆಯಲು ಹೋದವರು ಶಾಂತಚಿತ್ತರಾಗಿದ್ದರು. ಅಷ್ಟೇ ಶಾಂತವಾಗಿ ಅವರ ಪಾರ್ಥಿವ ಶರೀರ ಅಲ್ಲೇ ಉಳಿದಿದೆ’ – ಇದು ಸಂದೇಶದ ಪಾಠ. ಕಂಟ್ರೋಲ್ ರೂಂನಲ್ಲಿ ಸಂಪರ್ಕ ತಪ್ಪಿಹೋದ ಕೆಲವು ತಾಸುಗಳ ನಂತರ ಈ ಸಂದೇಶವನ್ನು ಅವರ ಕುಟುಂಬಕ್ಕೆ ರವಾನಿಸಬೇಕೆಂದು ಯೋಜಿಸಲಾಗಿತ್ತು. ಸದ್ಯ ಈ ಸಂದರ್ಭ ಬರಲಿಲ್ಲ.

ಇಂಥ ಹಲವು ಸಂಗತಿಗಳು 2019ರಲ್ಲಿ ಚಂದ್ರಯಾನಕ್ಕೆ 50 ವರ್ಷವಾದಾಗ ಬೆಳಕಿಗೆ ಬಂದವು. ಮತ್ತೆ ಚಂದ್ರನ ಮೇಲೆ ಹೋಗಲು ಇಷ್ಟಪಡುವಿರಾ? ಎಂದು ಕೇಳಿದ ಪ್ರಶ್ನೆಗೆ ‘ಇಲ್ಲ’ ಎಂದಷ್ಟೇ ಉತ್ತರ ಹೇಳಿದ್ದ. ನಾಸಾ ಸಂಸ್ಥೆಯನ್ನು ಬಿಟ್ಟ ಮೇಲೆ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ತರಗತಿಗಳಿಗೆ ಬೋಧಿಸುವಲ್ಲಿ ಉತ್ಸಾಹ ತೋರಿದ. ಅತ್ಯುತ್ತಮ ಬೋಧಕ ಎಂಬ ಹೆಸರನ್ನೂ ಪಡೆದ. ಆದರೆ ಮಾರ್ಕ್ಸ್ ಕೊಡುವಾಗ ಕೈ ಹಿಡಿಯುತ್ತಿದ್ದನಂತೆ.

1985ರಲ್ಲಿ ಎಡ್ಮಂಡ್ ಹಿಲೇರಿ, ಅವನ ಮಗ ಮತ್ತು ಇನ್ನಿಬ್ಬರು ಸಾಧಕರ ಜೊತೆ ಸದ್ದಿಲ್ಲದೆ ಉತ್ತರ ಧ್ರುವ ಯಾತ್ರೆಯನ್ನು ಮಾಡಿಬಂದ. ಅನಂತರವಷ್ಟೇ ಸುದ್ದಿ ಮಾಧ್ಯಮಗಳಿಗೆ ಗೊತ್ತಾಗಿದ್ದು. ಇದಕ್ಕೆಲ್ಲ ಪ್ರಚಾರ ಏಕೆ ಬೇಕು’ ಎನ್ನುತ್ತಿದ್ದ. ಆದರೆ ಹೆಸರು ಎಂಬ ಶನಿ ಬಿಡಬೇಕಲ್ಲ. ಅವನು ಸುಮ್ಮನಿದ್ದರೂ ಅದಕ್ಕೂ ಪ್ರಚಾರ ದೊರೆಯುತ್ತಿತ್ತು.

2012ರ ಆಗಸ್ಟ್ 25ರಂದು ಕ್ಯಾನ್ಸರ್ ನಿಂದ ಮೃತನಾದ. ಕ್ಯಾನ್ಸರ್ ಅವನನ್ನೇನೋ ಒಯ್ದಿತು, ಆದರೆ ಅವನ ಕೀರ್ತಿಯನ್ನು ಇಲ್ಲೇ ಬಿಟ್ಟು ಹೋಯಿತು. ಬಹುಶಃ ಇಂಥ ಸಂದರ್ಭವನ್ನೇ ನೆನದು ರಾಷ್ಟ್ರಕವಿ ಕುವೆಂಪು ಅವರು ಕೀರ್ತಿಯನ್ನು ಕುರಿತು ‘ಕೀರ್ತಿ ಶನಿ’ ಎಂದಿರಬೇಕು.

‍ಲೇಖಕರು Avadhi

May 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: