ನಾ ದಿವಾಕರ
**
ಖ್ಯಾತ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಅವರ ಕೃತಿ ‘ಗ್ರಾಮ ಭಾರತ’.
ಈ ಕೃತಿಯನ್ನು ‘ಸಿ ವಿ ಜಿ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಯ ಕುರಿತು ಅಂಕಣಕಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ.
**
ಭಾರತದ ಜೀವನಾಡಿ ಗ್ರಾಮಗಳಲ್ಲಿದೆ ಅದರ ಸಾಂಸ್ಕೃತಿಕ ಅಂತರಾತ್ಮ ಗ್ರಾಮೀಣ ಬದುಕಿನಲ್ಲಿದೆ.
ಭಾರತ ಹಳ್ಳಿಗಳ ದೇಶ. ಭಾರತೀಯ ಸಂಸ್ಕೃತಿ ಎಂದರೆ ಅದು ಗ್ರಾಮೀಣ ಸಂಸ್ಕೃತಿ. ವರ್ತಮಾನ ಭಾರತವೂ ಸಹ ಇದನ್ನೇ ಸಾಕ್ಷೀಕರಿಸುತ್ತದೆ. ಒಂದು ಅಧಿಕೃತ ಸಮೀಕ್ಷೆಯ ಪ್ರಕಾರ 2022ರಲ್ಲಿ ಭಾರತದ ಗ್ರಾಮೀಣ ಜನಸಂಖ್ಯೆ 90.88 ಕೋಟಿ ಇದೆ. 2021ಕ್ಕೆ ಹೋಲಿಸಿದರೆ ಇದು ಶೇಕಡಾ 0.06ರಷ್ಟು ಕಡಿಮೆಯಾಗಿದೆ. ಆದರೆ 2019ರಲ್ಲಿದ್ದ ಗ್ರಾಮೀಣ ಜನಸಂಖ್ಯೆ 90.63 ಕೋಟಿ, ಅಂದರೆ ಕಳೆದ ಮೂರು ವರ್ಷಗಳಲ್ಲಿ ಹಳ್ಳಿಗಳಲ್ಲಿ ವಾಸಿಸುವವರು ಕೊಂಚಮಟ್ಟಿಗೆ ಹೆಚ್ಚಾಗಿದ್ದಾರೆ. ಅತಿವೇಗದ ನಗರೀಕರಣ ಮತ್ತು ಜೀವನೋಪಾಯದ ಮಾರ್ಗಗಳನ್ನರಸುತ್ತಾ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಇದಕ್ಕೆ ಸಮಾನಾಂತರವಾಗಿ ನಗರಗಳಲ್ಲಿ ಬದುಕು ಸವೆಸಲಾಗದೆ ಮರಳಿ ಗ್ರಾಮಗಳತ್ತ ಹೋಗುತ್ತಿರುವ ಜನರೂ ನಮ್ಮ ನಡುವೆ ಇದ್ದಾರೆ. ಆಳ್ವಿಕೆಯ ನೀತಿಗಳಿಗೆ, ಆಡಳಿತ ಯೋಜನೆಗಳಿಗೆ ಜನಸಂಖ್ಯಾ ಶಾಸ್ತ್ರದ ಈ ದತ್ತಾಂಶಗಳು ಅತ್ಯವಶ್ಯವಾಗುತ್ತವೆ. ಈ ವಾಸ್ತವಗಳ ನಡುವೆಯೇ ಸಮಕಾಲೀನ ಭಾರತದ ಸಾಮಾಜಿಕ ಚರ್ಚೆಗಳು ಮತ್ತು ಸಾಂಸ್ಕೃತಿಕ ಸಂಕಥನಗಳು ಬಹುಮಟ್ಟಿಗೆ ಗ್ರಾಮೀಣ ಬದುಕು ಮತ್ತು ಅಲ್ಲಿನ ಮೂಲ ಸಾಂಸ್ಕೃತಿಕ ನೆಲೆಗಳಿಂದ ವಿಮುಖವಾಗುತ್ತಿರುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ.
ಬಂಡವಾಳಶಾಹಿ ಆರ್ಥಿಕತೆ ಮತ್ತು ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆಯ ಅಭಿವೃದ್ಧಿ ಮಾದರಿಗಳಲ್ಲಿ ದೇಶದ ಸಕಲ ನೈಸರ್ಗಿಕ ಸಂಪನ್ಮೂಲಗಳನ್ನೂ ಲಾಭದಾಯಕ ವಾಣಿಜ್ಯ ಸರಕುಗಳಾಗಿ ಪರಿವರ್ತಿಸಬಹುದಾದ ಕಚ್ಚಾವಸ್ತುಗಳಂತೆಯೇ ಪರಿಗಣಿಸುವುದರಿಂದ, ಗ್ರಾಮೀಣ ಬದುಕಿನ ಕೃಷಿ ಮತ್ತು ಕೃಷಿಯೇತರ ಸಂಪನ್ಮೂಲಗಳೂ ಸಹ, ಮಾನವ ಸಂಪನ್ಮೂಲಗಳನ್ನೂ ಒಳಗೊಂಡಂತೆ, ಮಾರುಕಟ್ಟೆಯ ಸರಕುಗಳಾಗುತ್ತವೆ. ಈ ಸರಕೀಕರಣ (Commodification) ಪ್ರಕ್ರಿಯೆಯಲ್ಲಿ ಭಾರತದ ಬಹುಸಾಂಸ್ಕೃತಿಕ ನೆಲಬೇರುಗಳನ್ನು ಇಂದಿಗೂ ಗಟ್ಟಿಯಾಗಿ ಹಿಡಿದಿಟ್ಟಿರುವ ಗ್ರಾಮೀಣ ಸಂಸ್ಕೃತಿಯೂ ಸಹ ಮಾರುಕಟ್ಟೆಯ ಒಂದು ಭಾಗವಾಗಿರುವುದು ವಾಸ್ತವ. ಇಂತಹ ಒಂದು ವಾತಾವರಣದಲ್ಲಿ ಭಾರತದ ಗ್ರಾಮೀಣ ಸಂಸ್ಕೃತಿಯನ್ನು ವಿಭಿನ್ನ ಹಾಗೂ ವೈವಿಧ್ಯಮಯ ಪ್ರಾದೇಶಿಕ ನೆಲೆಗಳಲ್ಲಿ ಅನಾವರಣಗೊಳಿಸುವ ಅವಶ್ಯಕತೆ ಇಂದು ಹೆಚ್ಚಾಗಿಯೇ ಇದೆ.
ಏಕೆಂದರೆ ಭಾರತದ ಸಾಮಾಜಿಕ ಸಂಕಥನಗಳನ್ನು ನಿರ್ದೇಶಿಸುತ್ತಿರುವ ಒಂದು ಹಿತವಲಯದ ಮಧ್ಯಮ ವರ್ಗ ಹಾಗೂ ಇದನ್ನು ನಿಯಂತ್ರಿಸುವ ನಗರಕೇಂದ್ರಿತ-ಮಾರುಕಟ್ಟೆ ಪ್ರೇರಿತ ಸಂವಹನ ಸಾಧನಗಳು “ನಗರೀಕರಣಕ್ಕೊಳಗಾದ ಭಾರತ” ವನ್ನೇ ಆಧುನಿಕ ಭಾರತ ಎಂದು ಬಿಂಬಿಸುವ ಮೂಲಕ, ಇಂದಿಗೂ ತನ್ನ ಸಾಂಸ್ಕೃತಿಕ ಸಮನ್ವಯತೆ- ಸೌಹಾರ್ದತೆಯನ್ನು ಉಳಿಸಿಕೊಂಡು ಬಂದಿರುವ ಗ್ರಾಮೀಣ ಭಾರತವನ್ನು ನೇಪಥ್ಯಕ್ಕೆ ಸರಿಸುತ್ತಿವೆ. “ವಿಕಸಿತ ಭಾರತ”ದತ್ತ ಧಾವಿಸುತ್ತಿರುವ ಅಮೃತ ಕಾಲದ ನವಭಾರತವನ್ನು ಜಗತ್ತಿಗೆ ಬಿಂಬಿಸುವ ಹೊತ್ತಿನಲ್ಲಿ ಇಲ್ಲಿನ ನೆಲಮೂಲ ಸಾಂಸ್ಕೃತಿಕ ಬೇರುಗಳನ್ನು ನಿರ್ಲಕ್ಷಿಸಲಾಗುತ್ತಿದೆ ಅಥವಾ ಮರೆಮಾಚಲಾಗುತ್ತಿದೆ.
ಗ್ರಾಮಭಾರತದ ವಿಹಂಗಮ ಒಳನೋಟ
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಕಾಲೀನ ಭಾರತೀಯ ಸಮಾಜವನ್ನು ಗ್ರಾಮೀಣ ಮಸೂರದ ಮೂಲಕ ನೋಡುವ ಒಂದು ಸಾಹಿತ್ಯಕ ಪ್ರಯತ್ನವನ್ನು ಶ್ರೀಯುತ ಕೇಶವರೆಡ್ಡಿ ಹಂದ್ರಾಳ ಅವರು ತಮ್ಮ “ಗ್ರಾಮಭಾರತ” ಕೃತಿಯಲ್ಲಿ ಮಾಡಿರುವುದು ಹೆಮ್ಮೆಯ ವಿಚಾರ. (ಗ್ರಾಮಭಾರತ – ಸಿವಿಜಿ ಪಬ್ಲಿಕೇ಼ಷನ್ಸ್ ಬೆಂಗಳೂರು -2017). ಗ್ರಾಮೀಣ ಜನಜೀವನ ಮತ್ತು ಸಾಮಾನ್ಯರ ಬದುಕು ಹಾಗೂ ಅಲ್ಲಿನ
ನಿತ್ಯ ಬದುಕಿನ ಸಾಂಸ್ಕೃತಿಕ ನೆಲೆಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ ಬಹುಶಃ ಭಾರತ ನಮಗೆ ಅರ್ಥವಾಗುವುದಿಲ್ಲ. ಈ ಸುಡು
ವಾಸ್ತವವನ್ನು ಹಂದ್ರಾಳ ಅವರು ತಮ್ಮ ಅನುಭವ ಮತ್ತು ಅನುಭಾವದ ನೆಲೆಗಳಲ್ಲಿ ತೆರೆದಿಡುತ್ತಾ ಹೋಗುತ್ತಾರೆ. ತಾವು ಬಾಳಿ ಬದುಕಿದ
ಗ್ರಾಮೀಣ ಪರಿಸರದಲ್ಲಿ ಕಂಡಂತಹ ವ್ಯಕ್ತಿಗಳು, ವ್ಯಕ್ತಿತ್ವಗಳು, ಸಮಾಜ ಹಾಗೂ ಇವೆಲ್ಲವುಗಳನ್ನೊಳಗೊಂಡ ಒಂದು ವಿಶಾಲ ಜಗತ್ತನ್ನು
ಹಂದ್ರಾಳ ಅವರು 83 ಅಧ್ಯಾಯಗಳಲ್ಲಿ ತೆರೆದಿಟ್ಟಿದ್ದಾರೆ. ಇಂದಿಗೂ ಕೃಷಿ ಪ್ರಧಾನವಾಗೇ ಇರುವ ಭಾರತವನ್ನು ಅರ್ಥಮಾಡಿಕೊಳ್ಳುವುದೆಂದರೆ ಈ ದೇಶದ ಗ್ರಾಮೀಣ ಜನತೆಯ ಬದುಕು, ಬವಣೆ ಮತ್ತು ಜೀವನೋಪಾಯದ ಮಾರ್ಗಗಳನ್ನು ಅರಿಯುವುದೇ ಆಗಿದೆ. ತಮ್ಮ ʼಗ್ರಾಮಭಾರತʼ ದ ಮೂಲಕ ಹಂದ್ರಾಳ ಅವರು ಈ ಪ್ರಯತ್ನವನ್ನು ಮಾಡಿದ್ದಾರೆ.
ತಮ್ಮದೇ ಬಾಲ್ಯದ ಬದುಕನ್ನು ಹಳ್ಳಿಗಾಡಿನ ಸಾಂಸ್ಕೃತಿಕ ವಾತಾವರಣದ ನಡುವೆ ಕಟ್ಟಿಕೊಂಡಿರುವ ಲೇಖಕರು ತಮ್ಮ ಸ್ವಾನುಭವದೊಂದಿಗೇ ಅನುಭಾವದ ನೆಲೆಯಲ್ಲಿ ಸಹ ಕಂಡಂತಹ ಬಡತನ, ಹಸಿವು, ನಿರ್ವಸಿತಕತೆ ಮತ್ತು ಹಿಂದುಳಿಯುವಿಕೆಯ ಜನಜೀವನವನ್ನು ಕೃತಿಯುದ್ದಕ್ಕೂ ಕಟ್ಟಿಕೊಟ್ಟಿರುವುದು ಸ್ತುತ್ಯಾರ್ಹ. ಆರಂಭದ “ಬೆಂಗಳೂರು ಅತ್ತೆಮ್ಮನ ಫಳಾರ” ಅಧ್ಯಾಯದಲ್ಲಿ ತಮ್ಮ ಈ ಜೀವನಗಾಥೆಯ ಮೂಲ ಉದ್ದಿಶ್ಯ ಮತ್ತು ಅಂತಃಸತ್ವವನ್ನು ಹಂದ್ರಾಳರು “ನಾನೊಬ್ಬ ಹಳ್ಳಿ ಗಮಾರನೆಂದೋ, ಮ್ಯಾನರ್ಸ್ ಇಲ್ಲದ ಒರಟನೆಂದೋ, ನಾಜೂಕಿಲ್ಲದ ಹಳ್ಳಿ ಹೆಡ್ಡನೆಂದೋ ಕರೆಯಿಸಿಕೊಳ್ಳುವುದಕ್ಕೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಆ ಮೂಲಕ ನಮ್ಮ ಮೂಲಭೂತ ಆಶ್ರಯ ಸಂಸ್ಕೃತಿ ನಮ್ಮಲ್ಲಿ ಅಷ್ಟಿಷ್ಟು
ಉಸಿರಾಡುತ್ತಿದೆಯೆಂಬ ಸಮಾಧಾನ. ಹಳ್ಳಿಗರಲ್ಲಿರುವಷ್ಟು, ಒರಟರಲ್ಲಿರುವಷ್ಟು ಮಾನವೀಯತೆ, ಅಂತಃಕರಣ, ದೇಶೀಯತೆ ನಿಜವಾಗಿಯೂ
ನಗರದ ನಯ-ನಾಜೂಕಿನ ಸಂಸ್ಕೃತಿಯಲ್ಲಿ ಇಲ್ಲವೆಂದು ಎದೆ ತಟ್ಟಿಕೊಂಡು ಯಾರ ಮುಂದೆ ಬೇಕಾದರೂ ಹೇಳುತ್ತೇನೆ.” ಎಂಬ ಮಾತುಗಳಲ್ಲಿ ದಾಖಲಿಸುತ್ತಾರೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳ ಯುಗದಲ್ಲೂ ಈ ಮಾತುಗಳು ಒಂದು ಹಿರಿಯ ಪೀಳಿಗೆಯ ಎದೆಯಲ್ಲಿ ಮತ್ತೆ ಮತ್ತೆ ಧ್ವನಿಸಲೇಬೇಕು. ಏಕೆಂದರೆ ಶಿಷ್ಟ ಭಾಷೆ, ಶಿಷ್ಟ ಸಂಪ್ರದಾಯಗಳೊಡನೆ ವಿಕ್ಟೋರಿಯನ್ ಶಿಸ್ತಿನ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಸಮಕಾಲೀನ ಭಾರತದಲ್ಲಿ ಗ್ರಾಮ್ಯ ಭಾಷೆ, ಗ್ರಾಮೀಣ ಜೀವನಶೈಲಿ, ಸಾಂಪ್ರದಾಯಿಕ ಉಡುಪು ಮತ್ತು ಸಾಂಸ್ಕೃತಿಕ ನಡೆನುಡಿಗಳೆಲ್ಲವೂ ನಗರವಾಸಿಗಳ ದೃಷ್ಟಿಯಲ್ಲಿ ಒಂದೋ ಹಿಂದುಳಿಯುವಿಕೆಯಾಗಿ ಕಾಣುತ್ತದೆ ಅಥವಾ ಆಧುನಿಕತೆಗೆ ಹೊರತಾಗಿ ಕಾಣುತ್ತದೆ.
ಒಂದು ಸುಂದರ ಜಗತ್ತಿನ ನೋಟ
ಸಾಮಾನ್ಯವಾಗಿ ಯಾವುದೇ ಸಮಾಜದ ಒಳಸುಳಿಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ನಾವು ಚರಿತ್ರೆಯ ಪುಟಗಳಿಗಿಂತಲೂ ಹೆಚ್ಚಾಗಿ
ಸೃಜನಶೀಲ-ಸೃಜನೇತರ ಸಾಹಿತ್ಯದಲ್ಲಿ ಕಾಣಲು ಸಾಧ್ಯವಾಗುತ್ತದೆ. ಹಂದ್ರಾಳರ ʼಗ್ರಾಮಭಾರತʼ ಪೂರ್ಣ ಪ್ರಮಾಣದ ಆತ್ಮಕತೆ ಅಲ್ಲದೆ
ಹೋದರೂ, ಅವರ ಬಾಲ್ಯ, ಯೌವ್ವನ ಮತ್ತು ಹಿರಿತನದ ವ್ಯಕ್ತಿತ್ವವನ್ನು ರೂಪಿಸಿದ ಗ್ರಾಮೀಣ ಪರಿಸರವನ್ನು ವಿಭಿನ್ನ ಮಜಲುಗಳಲ್ಲಿ ದಾಖಲಿಸುತ್ತದೆ. ತನ್ಮೂಲಕ ಕೇಶವರೆಡ್ಡಿ ಹಂದ್ರಾಳ ಅವರು ಗ್ರಾಮ್ಯ ಭಾರತದ ಒಂದು ವಿಶಿಷ್ಟ ಮುಖವನ್ನೂ ಓದುಗರಿಗೆ ಪರಿಚಯಿಸುತ್ತಾ
ಹೋಗುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಭಾರತದ ಜಾತಿ ವ್ಯವಸ್ಥೆಯ ಮೂಲವನ್ನು ಗ್ರಾಮೀಣ ಭಾರತದ ಜನಜೀವನದ
ನಡುವೆ ಇಂದಿಗೂ ಗುರುತಿಸಬಹುದಾದರೂ, ಈ ಗ್ರಾಮ್ಯ ಬದುಕಿನಲ್ಲಿ ಕಾಣಬಹುದಾದ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ
ಸೌಂದರ್ಯವನ್ನು ಗಮನಿಸಿದಾಗ, ನಗರಗಳ ಬಣ್ಣದ ಬದುಕಿಗಿಂತಲೂ ಭಿನ್ನವಾದ ಒಂದು ಸಮನ್ವಯದ ವಾತಾವರಣವನ್ನು ಗುರುತಿಸಲು
ಸಾಧ್ಯ. ಹಂದ್ರಾಳ ಅವರ ಕೃತಿಯು 1960-70ರ ದಶಕದ ಭಾರತವನ್ನು ಗ್ರಾಮೀಣ ಬದುಕಿನ ಮೂಲಕ ಪರಿಚಯಿಸುತ್ತದೆ. ಅಂದು ಭಾರತ
ಎದುರಿಸುತ್ತಿದ್ದ ಬಡತನ, ಹಸಿವು, ನಿರುದ್ಯೋಗ ಮತ್ತು ನೆರೆಯ ಪಟ್ಟಣವನ್ನೂ ಕಂಡಿರದಂತಹ ಅಪಾರ ಜನಸಂಖ್ಯೆಯ ಸೀಮಿತವಾದ ಬದುಕಿನ
ಹಲವು ಮಜಲುಗಳನ್ನು ಹಂದ್ರಾಳ ಅವರು ವಿವಿಧ ಆಯಾಮಗಳಲ್ಲಿ ಕಟ್ಟಿಕೊಡುತ್ತಾರೆ.
ವರ್ತಮಾನ ಭಾರತದ ಗ್ರಾಮ್ಯ ಬದುಕಿಗೆ ಮುಖಾಮುಖಿಯಾಗಿಸಿದಾಗ ಅಂದಿನ ಭಾರತದ ಈ ಚಿತ್ರಣಗಳು ತುಸು ಉತ್ಪ್ರೇಕ್ಷಿತವೇನೋ ಎನಿಸುವುದು ಸಹಜ. ಏಕೆಂದರೆ ಇಂದಿನ ತಲೆಮಾರಿಗೆ, ವಿಶೇಷವಾಗಿ ಮಿಲೆನಿಯಂ ತಲೆಮಾರಿಗೆ ಈ ಒಂದು ಬದುಕಿನ ವಾಸ್ತವಗಳ ಅರಿವು ಸುತರಾಂ ಇರುವುದಿಲ್ಲ. ಆದರೆ ಭಾರತ ನಡೆದುಬಂದ ಹಾದಿ ಇದೇ ಎನ್ನುವುದನ್ನು ಹಂದ್ರಾಳ ಅವರು ತಮ್ಮ ಬದುಕಿನ ಪುಟಗಳಿಂದಲೇ ಹೆಕ್ಕಿ ತೆಗೆದು ಓದುಗರ ಮುಂದಿಡುತ್ತಾರೆ. ಐದಾರು ದಶಕಗಳ ಹಿಂದೆ ಭಾರತದ ಶೋಷಿತ ವರ್ಗಗಳು ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳಲಾರಂಭಿಸಿದ್ದವು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ನೆಹರೂ ಆಳ್ವಿಕೆಯ ಬಹುಮುಖ್ಯ ಕೊಡುಗೆ ಎಂದರೆ ಶೋಷಿತ, ತಳಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವ ಮೂಲಕ ಸಬಲೀಕರಣದತ್ತ ಸಾಗಿದ್ದು. ವರ್ತಮಾನ ಭಾರತದಲ್ಲಿ ದಲಿತ-ಮಹಿಳೆ-ಒಬಿಸಿ ಸಮುದಾಯಗಳು ಗಳಿಸಿರುವ ರಾಜಕೀಯ-ಸಾಮಾಜಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಮುನ್ನಡೆಯನ್ನು ನೆಹರೂ ಆಳ್ವಿಕೆಯ ಉಪಕ್ರಮಗಳಲ್ಲೇ ಗುರುತಿಸಬೇಕಾಗುತ್ತದೆ.
ಈ ಗ್ರಹಿಕೆಯ ನಡುವೆಯೇ ಹಂದ್ರಾಳರು ತಮ್ಮ ಗ್ರಾಮೀಣ ಬಾಲ್ಯ ಜೀವನದ ದಿನಗಳನ್ನು ಮೆಲುಕು ಹಾಕುತ್ತಾ ತಾವು ಶಾಲಾ ಶಿಕ್ಷಣದಲ್ಲಿ ಕಂಡಂತಹ ಸ್ವಾರಸ್ಯಕರ ಪ್ರಸಂಗಗಳನ್ನು ವಿವಿಧ ಹರವುಗಳಲ್ಲಿ ತೆರೆದಿಡುತ್ತಾ ಹೋಗುತ್ತಾರೆ. ಈ ಪಯಣದಲ್ಲಿ ನಮಗೆ ಎದುರಾಗುವ ಸೀನಪ್ಪ ಮಾಸ್ತರ, ಬೆಂಗ್ಳೂರು ಅತ್ತೆಮ್ಮ, ಚನ್ನಾಬೋವಿ, ಬಸವೇಗೌಡ, ಶ್ಯಾನುಭೋಗರು, ಕೆಂಪಚೌಡಮ್ಮ, ಹುಚ್ಚೇಗೌಡ, ಅಕ್ಕಯ್ಯಮ್ಮ, ವೆಂಕಮ್ಮಜ್ಜಿ, ನಿಂಗಮ್ಮಜ್ಜಿ, ತೇಪೆ ಬೂಬಮ್ಮ, ರಾಣಿ ರಂಗಮ್ಮ, ತೋಕೆ ಹನುಮಂತ, ಬುಲಾಕು ಬಸ್ತೆಮ್ಮ ಈ ಎಲ್ಲ ವ್ಯಕ್ತಿತ್ವಗಳೂ ಗ್ರಾಮೀಣ ಬದುಕಿನ ಸೌಂದರ್ಯವನ್ನು ಅದರ ನಿತ್ಯ ಜಂಜಾಟದ ನಡುವೆಯೇ ನಮ್ಮ ಮುಂದೆ ಅನಾವರಣಗೊಳಿಸುತ್ತವೆ. ಹಂದ್ರಾಳರು ಈ ವ್ಯಕ್ತಿಗಳನ್ನೊಳಗೊಂಡ ಕೆಲವು ಪ್ರಸಂಗಗಳ ಮೂಲಕ ಅಲ್ಲಿ ಅಡಗಿರಬಹುದಾದ ಮನುಜ ಸೂಕ್ಷ್ಮತೆ, ಸಂವೇದನೆ, ಸಹಬಾಳ್ವೆಯ ತಾತ್ವಿಕತೆ ಮತ್ತು ಸಮನ್ವಯತೆಯ ಔದಾತ್ಯಗಳನ್ನು ವರ್ತಮಾನದ ಸಮಾಜದ ಮುಂದಿಡುತ್ತಾರೆ. ಈ ವ್ಯಕ್ತಿಗಳ ಚಿತ್ರಣದ ಮೂಲಕವೇ ಇವತ್ತಿನ ಹಿರಿಯ ಪೀಳಿಗೆಯ ಹಿರೀಕರ ಬದುಕಿನಲ್ಲಿ ಗುರುತಿಸಬಹುದಾದ ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನೂ ಹಂದ್ರಾಳರು ಹಲವು ಪ್ರಸಂಗಗಳ ಮೂಲಕ ದಾಖಲಿಸುತ್ತಾರೆ.
ಸಮಾಜ ಸಮುದಾಯ ಮತ್ತು ವ್ಯಕ್ತಿತ್ವಗಳು
ಕ್ಷೌರಿಕ ವೃತ್ತಿಯ ಪುಟ್ಟಯ್ಯನಲ್ಲಿದ್ದ ಅಂತಃಕರಣವನ್ನು ಪ್ರತ್ಯಕ್ಷದರ್ಶಿಯಾಗಿ ದಾಖಲಿಸುವ ಹಂದ್ರಾಳರು ಕುದುರೆಗಳಿಗೆ ಲಾಳ ಹಾಕುತ್ತಿದ್ದ ಲಾಳ ಸಾಬಿ, ಹಳೆಯ ಸವಕಲು ಪಾತ್ರೆಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪಾಕಂಪಪ್ಪು ನೀಡುತ್ತಿದ್ದ ಪಾಕಂಪಪ್ಪುಸಾಬಿ, ಇವರುಗಳ ಮೂಲಕ ಒಂದು ಗ್ರಾಮ್ಯ ಜೀವನದಲ್ಲಿ ಗುರುತಿಸಬಹುದಾಗಿದ್ದ ಅಸ್ಮಿತೆಗಳಿಂದಾಚೆಗಿನ ಮನುಜ ಸಂಬಂಧಗಳನ್ನು ಸ್ವಾರಸ್ಯಕರ ಪ್ರಸಂಗಗಳ ಮೂಲಕ ಓದುಗರ ಮುಂದಿಡುತ್ತಾರೆ. ಇಂದಿಗೂ ಸಹ ನಗರೀಕರಣಕ್ಕೊಳಗಾದ ಗ್ರಾಮೀಣ ಜನರನ್ನೂ ಸೇರಿದಂತೆ, ಆಧುನಿಕತೆಗೆ ಒಗ್ಗಿಕೊಂಡ ಜನರ ನಡುವೆ ಗ್ರಾಮ್ಯ ಭಾಷೆ ಅಥವಾ ಗ್ರಾಮ್ಯ ಮಾದರಿಯ ನಡೆನುಡಿಗಳು ಅಪಥ್ಯವಾಗಿಯೇ ಕಾಣುತ್ತದೆ. ಸುಶಿಕ್ಷಿತ ಎನಿಸಿಕೊಳ್ಳುವವರ ಮನೆಗಳಲ್ಲಿ, ವಿಶೇಷವಾಗಿ ಮೇಲ್ಜಾತಿಯವರಲ್ಲಿ “ಅದೇನ್ ಹಳ್ಳಿಯವನ ಥರ ಮಾತಾಡ್ತೀಯ” ಎನ್ನುವ ಮೂದಲಿಕೆಯ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆಧುನಿಕ ನಗರ ಜೀವನದ ಹಿತವಲಯದ ಸಮಾಜದಲ್ಲಿ “ಹಳ್ಳಿಯವರು” ಎನ್ನುವುದು ಒಂದು ಪ್ರತ್ಯೇಕಿಸಬಹುದಾದ ಮಾನವ ಪ್ರಭೇದವಾಗಿಯೇ ಕಾಣಲ್ಪಡುವುದನ್ನು ಇಂದಿಗೂ ಗುರುತಿಸಬಹುದು.
ಆಧುನಿಕತೆಯನ್ನು ರೂಢಿಸಿಕೊಂಡ ಸಮಾಜವೊಂದು ತನ್ನ ಜನರ ವೇಷಭೂಷಣ, ಉಡುಪಿನ ಆಯ್ಕೆ, ನಿತ್ಯಬಳಕೆಯ ಭಾಷೆ ಮತ್ತು ಸಾಮಾಜಿಕ ಚಟುವಟಿಕೆ ಈ ಎಲ್ಲ ಆಯಾಮಗಳಲ್ಲೂ ಒಂದು ಕೃತ್ರಿಮತೆಯನ್ನು ಮೈಗೂಡಿಸಿಕೊಂಡಿರುತ್ತದೆ. ಶಿಷ್ಟ ಭಾಷೆ ಮತ್ತು ಸಂಪ್ರದಾಯಗಳನ್ನೇ ಜನಜೀವನದ ಅಧಿಕೃತ ಮಾದರಿ ಅಥವಾ ಅನುಸರಿಸತಕ್ಕ ವಿಧಾನ ಎಂಬ ನಿರೂಪಣೆಯನ್ನು (Narrative) ಶೈಕ್ಷಣಿಕ ವಲಯದಲ್ಲೂ ಯಶಸ್ವಿಯಾಗಿ ಬಿತ್ತಲಾಗಿರುತ್ತದೆ. ಇದನ್ನು ದಾಟುವ ಯಾವುದೇ ಜೀವನ ವಿಧಾನವನ್ನು ಹೊರಗಿಟ್ಟು ಅಥವಾ ಪ್ರತ್ಯೇಕಿಸಿ ನೋಡುವ ಒಂದು ಬೌದ್ಧಿಕ ಪ್ರವೃತ್ತಿಯನ್ನೂ ಸೃಷ್ಟಿಸಲಾಗಿರುತ್ತದೆ. ಹಂದ್ರಾಳರ “ಗ್ರಾಮ ಭಾರತ” ಈ ನಿರೂಪಣೆಯನ್ನು ಮುರಿಯುತ್ತದೆ. ಈ ನಿರೂಪಣೆಗಳಿಂದಾಚೆಗೂ ಒಂದು ಭಾರತ ನಮ್ಮ ನಡುವೆ ಇದೆ ಎನ್ನುವುದನ್ನು ತಮ್ಮ ಬದುಕಿನ ಹೆಜ್ಜೆಗಳಲ್ಲಿ ಗುರುತಿಸುವ ಮೂಲಕ ಹಂದ್ರಾಳ ಅವರು ಭಾರತದ ಗ್ರಾಮೀಣ ಬದುಕಿನ ಭಾಷೆ, ಪರಿಭಾಷೆ, ಸಂಸ್ಕೃತಿ, ಧಾರ್ಮಿಕತೆ ಮತ್ತು ನಂಬಿಕೆಗಳನ್ನು ಅದರ ಎಲ್ಲ ಆಯಾಮಗಳಲ್ಲಿ ಕಟ್ಟಿಕೊಡುತ್ತಾರೆ.
60-70ರ ದಶಕದ ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲೂ ಸಹ ಬಾಲ್ಯ ಕಳೆದ ಯಾರಿಗೇ ಆದರೂ ನೆನಪಿರುವಂತಹ ಒಂದು ಲಕ್ಷಣ ಎಂದರೆ ಆಪ್ತ ಗೆಳೆಯರ ಹೆಸರುಗಳಿಗೆ ಒಂದು ಬಾಲ ಜೋಡಿಸಿ ಕರೆಯುವುದು. ತೋಕೆ ಹನುಮಂತ, ತೇಪೆ ಬೂಬಮ್ಮ ಮೊದಲಾದ ವ್ಯಕ್ತಿಗಳ ಮುಖೇನ ಹಂದ್ರಾಳರು ಈ ಸುಂದರ ಜಗತ್ತನ್ನು ನೆನಪಿಸುತ್ತಾರೆ. ಮನುಜ ಸಂಬಂಧಗಳನ್ನು ಆಪ್ತಗೊಳಿಸುವ ಇಂತಹ ವ್ಯಕ್ತಿಗಳನ್ನು ಪರಿಚಯಿಸುವುದೇ ಆಧುನಿಕ ಜಗತ್ತಿನ ಹೊಸ ತಲೆಮಾರಿನ ಕಣ್ಣು ತೆರೆಸುತ್ತದೆ. ಗ್ರಾಮೀಣ ಬಾಲ್ಯವನ್ನು ಕಳೆದು ಹೆಚ್ಚಿನ ಓದು-ವ್ಯಾಸಂಗಕ್ಕಾಗಿ ಅಥವಾ ಜೀವನೋಪಾಯಕ್ಕಾಗಿ ನಗರಗಳನ್ನು ಪ್ರವೇಶಿಸುವ ಯುವ ಜನತೆ ಇಂದಿಗೂ ಎದುರಿಸಬಹುದಾದ ಸವಾಲುಗಳು ಜಟಿಲವಾಗಿಯೇ ಇವೆ. ಮೂರ್ನಾಲ್ಕು ದಶಕಗಳ ಹಿಂದೆ ಈ ಸವಾಲುಗಳು ಇನ್ನೂ ಹೆಚ್ಚು ಜಟಿಲವಾಗಿದ್ದವು. ಒಂದು ಹೊಸ ಜಗತ್ತನ್ನು ಪ್ರವೇಶಿಸಿದಂತಹ ಅನುಭವವನ್ನು ಎದುರಿಸಿದ ಹಲವು ಪ್ರಸಂಗಗಳನ್ನು ಆ ಕಾಲದಲ್ಲಿ ಗುರುತಿಸಬಹುದು.
ಹಂದ್ರಾಳರು ತಮ್ಮ ಈ ಹರೆಯದ ಅನುಭವಗಳನ್ನೂ “ಗ್ರಾಮ ಭಾರತ” ಕೃತಿಯಲ್ಲಿ ದಾಖಲಿಸಿದ್ದಾರೆ. ನಗರ ಜೀವನದಲ್ಲಿ ಆಕರ್ಷಕವಾಗಿ ಕಾಣುವ ಹೋಟೆಲುಗಳು, ಚಿತ್ರಮಂದಿರಗಳು, ನವಿರು ರಸ್ತೆಗಳು, ಸುಂದರ ಉದ್ಯಾನಗಳು, ಗಗನಚುಂಬಿ ಕಟ್ಟಡಗಳು ಇವೆಲ್ಲವುಗಳನ್ನೂ ಮೀರಿಸುವ ಒಂದು ಜೀವನ ಸೌಂದರ್ಯ ಯಾವುದೇ ಹಳ್ಳಿಯ ಬದುಕಿನಲ್ಲಿರುತ್ತದೆ ಎನ್ನುವುದನ್ನು ಹಂದ್ರಾಳರು ಬಹಳ ಸಂವೇದನಾಶೀಲತೆಯಿಂದ ದಾಖಲಿಸುತ್ತಾರೆ. ಈ ಕೃತಿಯ ಮತ್ತೊಂದು ವೈಶಿಷ್ಟ್ಯ ನಿತ್ಯಬಳಕೆಯ ಗ್ರಾಮ್ಯ ಭಾಷೆಯಲ್ಲಿ ಕಾಣಬಹುದು. ಮನುಷ್ಯ ದೇಹದ ಅಂಗಾಂಗಳನ್ನು, ನಿತ್ಯಕರ್ಮಗಳನ್ನು ಬಣ್ಣಿಸುವಾಗಲೂ ಮಡಿವಂತಿಕೆಯಿಂದ ವರ್ತಿಸುವ ನಗರ ಸಂಸ್ಕೃತಿಗೆ ಭಿನ್ನವಾದ ಗ್ರಾಮೀಣ ಭಾಷಾ ಬಳಕೆಯನ್ನು ಯಥಾವತ್ತಾಗಿ ದಾಖಲಿಸುವ ಮೂಲಕ ಹಂದ್ರಾಳ ಅವರು ಗ್ರಾಮೀಣ ಸೊಗಡನ್ನು ಕೃತಿಯುದ್ದಕ್ಕೂ ಉಳಿಸಿಕೊಂಡಿದ್ದಾರೆ.
ನಗರೀಕರಣದ ವೈಪರೀತ್ಯಗಳ ನಡುವೆ
ನಗರೀಕರಣಕ್ಕೊಳಗಾದ ನಾಗರಿಕ ಸಮಾಜವೊಂದು ಗ್ರಾಮೀಣ ಬದುಕನ್ನು ನಿಕೃಷ್ಟವಾಗಿ ನೋಡುವ ಅಥವಾ ಅಲ್ಲಿನ ಜೀವನ ವಿಧಾನಗಳನ್ನು ಭಿನ್ನವಾಗಿ ನೋಡುವ ಒಂದು ಸಿನಿಕತೆ ಇಂದಿಗೂ ಕಾಣಬಹುದಾದ ವಿದ್ಯಮಾನ. ಸಮುದಾಯದ ನೋವು ಸಂಕಷ್ಟಗಳನ್ನು ತಮ್ಮದೆಂದು ಅನುಭಾವದ ನೆಲೆಯಲ್ಲಿ ಕಂಡುಕೊಳ್ಳುವ ಗ್ರಾಮೀಣ ಸಂಸ್ಕೃತಿ ನಗರೀಕರಣದ ಸಂದರ್ಭದಲ್ಲಿ ವಿಘಟನೆಗೊಳಗಾಗಿ ಛಿದ್ರವಾಗಿಬಿಡುತ್ತದೆ. ನಗರ ಜೀವನದಲ್ಲಿ ನಾಗರಿಕತೆಯ ಗೋಡೆಗಳು ಸಮುದಾಯಗಳ ನಡುವೆಯೂ ಬೇಲಿಗಳಾಗಿ ಪರಿಣಮಿಸಿಬಿಡುತ್ತವೆ. ಹಾಗಾಗಿಯೇ ʼತಮ್ಮವರುʼ ಎಂದರೆ ಕೇವಲ ತಮ್ಮ ಜಾತಿಯವರು, ಧರ್ಮದವರು, ಭಾಷಿಕರು ಎಂಬ ಸೀಮಿತ ಭಾವನೆಗಳೇ ಹೆಚ್ಚಾಗಿ ʼಸಮುದಾಯ ಸಮನ್ವಯತೆʼ ಹಿಂದಕ್ಕೆ ಸರಿಯುತ್ತದೆ. ಕೇಶವರೆಡ್ಡಿ ಹಂದ್ರಾಳರ “ಗ್ರಾಮ ಭಾರತ” ಈ ಸಿದ್ಧಮಾದರಿಯ ಚಿಂತನಾವಾಹಿನಿಯನ್ನು ಮುರಿದು ಮರಳಿ ನವೀನತೆಯೊಂದಿಗೆ ಕಟ್ಟುತ್ತದೆ.
ಈ ಕಾರಣದಿಂದಲೇ ವರ್ತಮಾನದ ಸಮಾಜದಲ್ಲಿ ಪರರ ನೋವು ತನ್ನ ನೋವು ಎಂದು ಪರಿಭಾವಿಸುವ ಮನಸ್ಥಿತಿಯನ್ನೂ ಗುರುತಿಸಲಾಗುವುದಿಲ್ಲ. ಭಾರತದ ಗ್ರಾಮೀಣ ಬದುಕು ಇಂತಹ ಒಂದು ಮನಸ್ಥಿತಿಯಲ್ಲೇ ತನ್ನ ಮುನ್ನಡೆಯನ್ನು ಕಂಡುಕೊಳ್ಳುವುದನ್ನು ಕೇಶವರೆಡ್ಡಿ ಹಂದ್ರಾಳರು ತಮ್ಮ ʼಗ್ರಾಮ ಭಾರತ ʼದಲ್ಲಿ ಅನುಭವ-ಅನುಭಾವದ ನೆಲೆಯಲ್ಲಿ ದಾಖಲಿಸುತ್ತಾರೆ. ಈ ಸೂಕ್ಷ್ಮ ಸಂವೇದನೆಯ ಕೊರತೆ ಮತ್ತು ನವ ಉದಾರವಾದ-ಬಂಡವಾಳಶಾಹಿ-ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸುತ್ತಿರುವ ಅಸಮಾನತೆಗಳು ನವ ಭಾರತದಲ್ಲಿ ಬೇರೂರುತ್ತಿರುವ ಮತದ್ವೇಷ, ಜಾತಿದ್ವೇಷ ಮತ್ತು ಸಾಂಸ್ಕೃತಿಕ ಸಂಕುಚಿತತೆಗೆ ಕಾರಣವಾಗುತ್ತಿದೆ. ವರ್ತಮಾನ ಭಾರತದ ಯುವ ಸಮಾಜ, ವಿಶೇಷವಾಗಿ ಮಿಲೆನಿಯಂ ಯುಗದ ಯುವ ಜನತೆ ಈ ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಳ್ಳಬೇಕಾದರೆ “ಗ್ರಾಮ ಭಾರತ”ದಂತಹ ಅಮೂಲ್ಯ ಕೃತಿಗಳನ್ನು ಓದಬೇಕಾಗುತ್ತದೆ.
ಒಂದು ಸಮಾಜವು ತನ್ನ ಭೌತಿಕ ಮುನ್ನಡೆ ಮತ್ತು ತಾತ್ವಿಕ ಪ್ರಗತಿಯನ್ನು ಸಾಧಿಸಬೇಕಾದರೆ ಅದು ತನ್ನ ಗತ ಹೆಜ್ಜೆಗಳನ್ನು ತಿರುತಿರುಗಿ ನೋಡುತ್ತಲೇ ಇರಬೇಕಾಗುತ್ತದೆ. ತಾನು ನಡೆದು ಬಂದ ಹಾದಿಯನ್ನು ಮತ್ತೆಮತ್ತೆ ನೆನಪಿಸಿಕೊಳ್ಳುತ್ತಲೇ ಅಲ್ಲಿ ನಡೆದ ತಪ್ಪುಗಳನ್ನು
ಸರಿಪಡಿಸಿಕೊಳ್ಳುತ್ತಾ, ಅಲ್ಲಿರಬಹುದಾದ ಔದಾತ್ಯಗಳನ್ನು ಮತ್ತೊಮ್ಮೆ ಮೈಗೂಡಿಸಿಕೊಳ್ಳುತ್ತಾ ಸಾಗಬೇಕಾಗುತ್ತದೆ. ಇದು ಸಾಧ್ಯವಾಗುವುದು
ನಮ್ಮ ನೆಲದ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಾಗ ಮಾತ್ರ. ಇಂದು ನಾವು ನಿರ್ಮಿಸಿಕೊಂಡಿರುವ ಅಸ್ಮಿತೆಗಳಿಂದಾಚೆ ನಿಂತು ನೋಡಿದಾಗ ಆಧುನಿಕ ಭಾರತದೊಳಗಿನ ಒಂದು “ಗ್ರಾಮ ಭಾರತ” ನಮಗೆ ಹೊಸ ಹಾದಿಗಳನ್ನು ತೋರಲೂಬಹುದು. ಅಲ್ಲಿ ಅಥವಾ ಅಂದು ಎಲ್ಲವೂ ಸುಂದರವಾಗಿತ್ತು ಎಂಬ ಆತ್ಮರತಿಗೆ ಒಳಗಾಗದೆ, ವಸ್ತುನಿಷ್ಠವಾಗಿ ನೆಲಮೂಲ ಸಾಂಸ್ಕೃತಿಕ ಬೇರುಗಳನ್ನು ಮರುಶೋಧಿಸುವ ಮೂಲಕ ಈ
ಹಾದಿಗಳನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಾಗಬಹುದು. ಕೇಶವರೆಡ್ಡಿ ಹಂದ್ರಾಳ ಅವರ “ಗ್ರಾಮ ಭಾರತ” ಇಂತಹ ಒಂದು ಬೌದ್ಧಿಕ ಚಿಂತನಾ ಲಹರಿಗೆ ಮೇವು ಒದಗಿಸುವಂತಹ ಒಂದು ಅಮೂಲ್ಯ ಕೃತಿ. ನವ ಭಾರತದ ಯುವ ಪೀಳಿಗೆ ಓದಲೇಬೇಕಾದ ಈ ಕೃತಿ ಹಿರಿಯ ತಲೆಮಾರಿನ ಮರುಓದಿಗೂ ಅಷ್ಟೇ ಅಪ್ಯಾಯಮಾನವಾಗಿ ಕಾಣುತ್ತದೆ.
0 ಪ್ರತಿಕ್ರಿಯೆಗಳು