ಸೌಮ್ಯ ದಯಾನಂದ
ನಿನ್ನ ನೆನಪೆಂಬುದು
ಕೊಳದಲೆಯ ಉಂಗುರವಲ್ಲ;
ಕಡಲೊಡಲಲಿ ಮೊರೆವ
ಅಲೆಗಳಂತೆ!
ನಿನ್ನ ನೆನಪೆಂಬುದು
ಆ ಕ್ಷಣದಲ್ಲಿ ಖುಷಿಪಟ್ಟು ಮರೆಯುವ ಡಿಜೆ ಹಾಡಲ್ಲ;
ಕಿವಿಯಲ್ಲೇ ಅಡಗಿ
ಗುಂಯ್ ಗುಡುವ ಮಧುರ ಗೀತೆ!
ನಿನ್ನ ನೆನಪೆಂಬುದು
ಸಿಟಿ ಬಸ್ಸಿನ ಪಯಣವಲ್ಲ;
ಮೈಸೂರ್ ಟು ಮಂಗ್ಳೂರ್
ರೈಲು ಹಾದಿ!

ನಿನ್ನ ನೆನಪೆಂಬುದು
ಬಾಳೆಎಲೆ ಮೇಲಿನ ಹೋಳಿಗೆಯಲ್ಲ;
ಮಕ್ಕಳ ಬಾಯಲ್ಲಿನ
ಲಾಲಿಪಾಪ್!
ನಿನ್ನ ನೆನಪೆಂಬುದು
ಭೋರ್ಗರೆವ ಜಲಪಾತವಲ್ಲ;
ಅರಣ್ಯದೊಳಗಣ
ಗುಪ್ತಗಾಮಿನಿ!
ನಿನ್ನ ನೆನಪೆಂಬುದು
ಹಕ್ಕಿಗಳ ಕಲರವವಲ್ಲ;
ಮಧುವಿನ ಸುಳಿವು ಹೇಳುವ
ದುಂಬಿಯ ಝೇಂಕಾರ!

ನಿನ್ನ ನೆನಪೆಂಬುದು
ಮದುವೆಯ ಓಲಗವಲ್ಲ;
ಹೃದಯದ ತಂತಿ ಮೀಟಿ
ತರಂಗವೆಬ್ಬಿಸುವ ವೀಣಾವಾದನ!
ನಿನ್ನ ನೆನಪೆಂಬುದು
ನಿನ್ನ ನೆನಪೇ ಹೊರತು
ಬೇರೆ ಉಪಮಾನವಿಲ್ಲ!!
0 ಪ್ರತಿಕ್ರಿಯೆಗಳು