ಬಿ. ಎನ್. ಶಶಿಕಲಾ, ರಂಗಾಯಣ, ಮೈಸೂರು
**
ಶಶಿಕಲಾ ಅವರ ಏಕವ್ಯಕ್ತಿ ಪ್ರಯೋಗ ‘ಕಸ್ತೂರಬಾ’ ಅತ್ಯಂತ ಜನಪ್ರಿಯವಾಗಿದೆ.
ಇಲ್ಲಿ ಅವರು ಈ ಪ್ರಯೋಗ ಹುಟ್ಟಿದ ಹಿನ್ನೆಲೆಯನ್ನು ಕುರಿತು ಮನ ಬಿಚ್ಚಿದ್ದಾರೆ
**
ಗೆಳೆಯನಾಗಿ ವೃತ್ತಿಯಲ್ಲಿ ಜೊತೆಯಾಗಿ ಬದುಕಿನಲಿ ಒಂದಾಗಿ ನನ್ನೊಂದಿಗಿದ್ದು ಇಪ್ಪತ್ತೆರಡು ವರ್ಷದ ಹಿಂದೆ ನೆನಪಿನ ಗಿಡ ನೆಟ್ಟುಹೋದವನು ಬಸವರಾಜ ಕೊಡಗೆ. ಅವನ ನೆನಪಿಗೆ ಏನಾದರೂ ಮಾಡಬೇಕು ಅನಿಸಿದಾಗ ತೋಚಿದ್ದು, ನಾನೊಬ್ಬಳೆ ಅಭಿನಯಿಸುವ ಏಕವ್ಯಕ್ತಿ ಪ್ರದರ್ಶನ. ಹೀಗೆ ೨೦೦೩ರಿಂದ ಅವನ ನೆನಪಿನ ದಿನಕ್ಕೆ ಏಕವ್ಯಕ್ತಿ ಪ್ರದರ್ಶನ ಮಾಡಲು ಪ್ರಾರಂಭಿಸಿದೆ. ಹೀಗೆ ಅನೇಕ ನಾಟಕಗಳನ್ನು ಪ್ರದರ್ಶಿಸಿದೆ. ಆದರೆ ಅದೇನು ಸುಲಭದ್ದಾಗಿರಲಿಲ್ಲ. ಏಕೆಂದರೆ ಮೈಸೂರು ರಂಗಾಯಣದ ಕಲಾವಿದೆಯಾದ ನಾನು ರಂಗಾಯಣದಲ್ಲಿ ೨೪ ನಟ-ನಟಿಯರೊಂದಿಗೆ ಅಭಿನಯಿಸುತ್ತಿದ್ದೆ. ಆದರೆ ಈಗ ನಾನು ಏಕವ್ಯಕ್ತಿಯಾಗಿ ಅಭಿನಯಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಆದರೆ ಕೊಡಗೆಗಾಗಿ ನಾನು ಅಭಿನಯಿಸಲೇ ಬೇಕು ಎಂದು ಅಂದುಕೊಂಡಾಗ ಸ್ವಲ್ಪ ಮಟ್ಟಿಗೆ ಸುಲಭವಾಗಿಸಿತು. ನಾನು ಎಲ್ಲರ ಜೊತೆ ಅಭಿನಯಿಸುವಾಗ ಅವರೆಲ್ಲರ ನೈತಿಕ ಬೆಂಬಲ ನನ್ನೊಟ್ಟಿಗಿರುತ್ತದೆ. ಈಗ ನಾನೊಬ್ಬಳೆ ಅಭಿನಯಿಸುವಾಗ ಅದು ಒಂದು ಸವಾಲಾಗಿತ್ತು. ನನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಸ್ತೂರಬಾ ಏಕವ್ಯಕ್ತಿ ಪ್ರದರ್ಶನದ ಒಂದು ದೃಶ್ಯ
ಇಡೀ ನಾಟಕದ ಜವಾಬ್ದಾರಿ ಒಬ್ಬಳ ಮೇಲೆ ಇರುತ್ತದೆ. ಒಮ್ಮೆ ರಂಗದ ಮೇಲೆ ಬಂದರೆ ಮುಗಿಯುವವರೆಗೆ ನಿರ್ಗಮಿಸಲು ಸಾಧ್ಯವಿಲ್ಲ. ನಾಟಕವನ್ನು ಹಿಡಿದಿಡುವ ಶಕ್ತಿ ಹೊಂದಿರಬೇಕು. ಏಕವ್ಯಕ್ತಿ ಪ್ರದರ್ಶನ ಒಂದು ಜವಾಬ್ದಾರಿಯಾಗಿರುತ್ತದೆ. ನಾನು ನನ್ನ ಈ ರಂಗಯಾನದಲ್ಲಿ ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಕಸ್ತೂರಬಾ ವಿಶಿಷ್ಟವಾಗಿತ್ತು. ಗಾಂಧೀಜಿಯವರ ನೆರಳಾಗಿಯೇ ಅವರ ಬದುಕಿನುದ್ದಕ್ಕೂ ತಮ್ಮ ಬಾಳನ್ನು ರೂಢಿಸಿಕೊಂಡ `ಕಸ್ತೂರಬಾ’ ಅವರನ್ನು ಗಾಂಧೀಜಿಯವರ ಪತ್ನಿ ಕೆಲವೊಮ್ಮೆ ಗಾಂಧೀಜಿಯವರ ತೀರ್ಮಾನಗಳಲ್ಲಿ ಅವರ ವಿರೋಧವಿದ್ದರೂ ಒಪ್ಪಿಕೊಂಡು ಬದುಕಿದ ಸಾಧ್ವಿ ಶಿರೋಮಣಿ ಎಂಬುದಷ್ಟೇ ಎಂದು ತಿಳಿದಿರುವವರೇ ಬಹಳ ಮಂದಿ. ಆದರೆ ಕಸ್ತೂರಬಾ ಬಗ್ಗೆ ಅಧ್ಯಯನ ಮಾಡುತ್ತಾ ಹೋದಂತೆ ಅವರ ಬಹುಮುಖಿ ವ್ಯಕ್ತಿತ್ವ, ಅವರ ಬದುಕಿನ ಸಂಕೀರ್ಣತೆ,ಅವರು ಎದುರಿಸಿದ ಸವಾಲುಗಳು, ತಮ್ಮ ಸಾಂಸಾರಿಕ ಬದುಕಿನಲ್ಲಿ ಅವರು ನಿಭಾಯಿಸಿದ ಸಮಸ್ಯೆಗಳು, ಸುಖ, ಸಂತೋಷಗಳು, ಸಂತೃಪ್ತ ಬದುಕಿನ ಕ್ಷಣಗಳನ್ನು ಒಟ್ಟಾರೆಯಾಗಿ ಹಿಡಿದಿಡುವ ಒಂದು ಪ್ರಯತ್ನವಾಗಿ ಕಸ್ತೂರಬಾ ರೂಪಗೊಳ್ಳತೊಡಗಿತು. ಒಟ್ಟು `ಕಸ್ತೂರಬಾ’ ನಾಟಕದ ಬಂಧದಲ್ಲಿ `ಕಸ್ತೂರಬಾ ಹಾಗೂ ನಟಿ’
ಮುಖಾಮುಖಿಯಾಗುತ್ತಾ ಭಾರತೀಯ ಮಹಿಳೆಯ ಅನೇಕ ಸ್ಥಿತ್ಯಂತರಗಳನ್ನು ದೃಶ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನಮಾಡಿದ್ದೇನೆ.
ಕಸ್ತೂರಬಾ ಪಾತ್ರದಲ್ಲಿ ತಲ್ಲೀನವಾಗಿರುವ ಕಲಾವಿದೆ ಬಿ ಎನ್ ಶಶಿಕಲಾ
ಆಧುನಿಕ ಪ್ರಜ್ಞೆಯ ಮಹಿಳೆ ೭೦-೮೦ ವರ್ಷಗಳ ಹಿಂದಷ್ಟೆ ಬದುಕಿದ ಒಬ್ಬ ಮಹಾನ್ ಮಹಿಳೆಯ ಶಕ್ತಿ ದೌರ್ಬಲ್ಯಗಳನ್ನು, ನಿರೂಪಿಸುವ ನಿಟ್ಟಿನಲ್ಲಿ, ತಾನು, ತನ್ನ ಬದುಕು, ಸಂಸಾರ, ಗೆಳೆತನ, ಯಶಸ್ಸು ಎಲ್ಲದರಲ್ಲೂ ಕಸ್ತೂರಬಾ ಅವರ ಮುಂದೆ ಮಂಡಿಯೂರಿ ಅರ್ಥೈಸುವ ಪ್ರಯತ್ನಕ್ಕೆ ತೊಡಗುತ್ತಾಳೆ. ಸಾಂಪ್ರದಾಯಿಕ ಹಿನ್ನೆಲೆಯ ಪುರಾಣ ಜನ್ಯ ಮನಸ್ಥಿತಿಯ ಕಸ್ತೂರಬಾ ಇಂದಿನ ಸಂದರ್ಭದಲ್ಲಿ ಒಬ್ಬ ಕ್ರಾಂತಿಕಾರಿ ಮಹಿಳೆಯಾಗಿ ಕಂಡುಬರುತ್ತಾರೆ. `ಕಸ್ತೂರಬಾ’ ಪಾತ್ರವನ್ನು ಅರಿಯುವ ಪ್ರಯತ್ನಕ್ಕೆ ಒಡ್ಡಿಕೊಳ್ಳುವ ನಟಿ, `ಹೊಂದಾಣಿಕೆಯ ಬದುಕು ಸಹ್ಯ ಬದುಕು’ ಎಂಬ ತಿಳಿವಳಿಕೆ ಪಡೆಯುತ್ತಾ `ಕಳೆದುಕೊಳ್ಳುತ್ತಾ ಹೋದಂತೆ ಬದುಕು ಕೂಡುತ್ತಾ ಹೋಗುತ್ತದೆ’ ಎಂಬುದರ ಬಗ್ಗೆ ಯೋಚಿಸತೊಡಗುತ್ತಾಳೆ. ಒಂದು ಉದ್ದೇಶಕ್ಕಾಗಿ ನಾನು ಏಕವ್ಯಕ್ತಿ ನಾಟಕವನ್ನು ಅಭಿನಯಿಸಲು ಪ್ರಾರಂಭಿಸಿದೆ. ಇದು ನನಗೆ ಬದುಕಿನಲ್ಲಿ ಆತ್ಮವಿಶ್ವಾಸ, ನಂಬಿಕೆ ಮತ್ತು ಸಕಾರಾತ್ಮಕ ನಿಲುವನ್ನು ತಂದುಕೊಟ್ಟಿದೆ. ನನ್ನ ನೆನಪಿನ ಮರಕ್ಕೆ ನೀರೆರೆಯುವಲ್ಲಿ ನೆರವಾಗುತ್ತಿರುವ ಎಲ್ಲರ ವಿಶ್ವಾಸ, ಸ್ನೇಹ, ಪ್ರೀತಿಗೆ ನಾನು ಎಂದೆಂದೂ ಆಭಾರಿ.
0 ಪ್ರತಿಕ್ರಿಯೆಗಳು