ನಿವೇದಿತಾ ಎಚ್ ಓದಿದ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’

ನಿವೇದಿತಾ ಎಚ್

ಜಗತ್ತಿನಲ್ಲಿ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ. ಒಂದಾದ ಮೇಲೆ ಒಂದರಂತೆ ಮನುಷ್ಯನ ತಾಳ್ಮೆ-ಸಹಿಷ್ಣುತೆಯನ್ನು ಪರೀಕ್ಷಿಸುವಂತೆ ಬರುತ್ತಲೇ ಇರುತ್ತವೆ. ಸಮಸ್ಯೆಗಳು ಮನುಷ್ಯನನ್ನು ಗಟ್ಟಿಯಾಗಿಸುತ್ತವೆ, ವಾಸ್ತವವನ್ನು ಎದುರಿಸಲು ಸಜ್ಜು ಮಾಡುತ್ತವೆ ಇತ್ಯಾದಿ ಕ್ಲೀಷೆಗಳು ಕಿವಿಗಳನ್ನು ತೂತು ಮಾಡಿರುವ ಸಮಯದಲ್ಲಿ, ಪ್ರಪಂಚ ಕಂಡು ಕೇಳರಿಯದ ಸಮಸ್ಯೆಯೊಂದು ಧುತ್‌ ಎಂದು ಅವಿರ್ಭವಿಸಿ ಸಮಸ್ತ ಸರ್ವರನ್ನೂ ನಡುಗಿಸಿ ಬಿಟ್ಟಿತು. 

ʻಕರೋನʼ! ಬಹುಷಃ ಎಲ್ಲ ವರ್ಗದ ಜನರಿಗೆ ಬದುಕಿನ ಕರಾಳತೆಯ ದರ್ಶನ ಮಾಡಿಸಿದ ಏಕೈಕ ಸಂದರ್ಭ, ಕೋವಿಡ್‌ ಕಾಲ. ಕ್ವಾರಂಟೈನ್‌, ಸೀಲ್‌ ಡೌನ್‌, ಐಸೋಲೇಷನ್‌, ಇಮ್ಯೂನಿಟಿ ಈ ಎಲ್ಲಾ ಪದಗಳು ಎಲ್ಲಿದ್ದವೋ, ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬಿಟ್ಟವು. ಈ ಎಲ್ಲ ಪದಗಳಿಗಿಂತಾ ನಮ್ಮನ್ನು ಹೆದರಿಸಿ ನಡುಗಿಸಿದ್ದು, ʻಲಾಕ್‌ ಡೌನ್‌ʼ ಎಂಬ ಎರಡು ಪದಗಳ ಗುಚ್ಛ. 

ಕರೋನಾ ತಡೆಗಾಗಿ, ಹೆಚ್ಚಿನ ಸಿದ್ಧತೆಗಾಗಿ, ಸರ್ಕಾರ ಆರಂಭದಲ್ಲಿ ೨೧ ದಿನಗಳಿಗಾಗಿ ಘೋಷಿಸಿದ ಲಾಕ್‌ ಡೌನ್‌ ೩ ತಿಂಗಳುಗಳ ವರೆಗೆ ವಿಸ್ತರಿಸಿತು. ನಗರಗಳಿಗೆ ಕೆಲಸಕ್ಕಾಗಿ ವಲಸೆ ಬಂದ ದೂರ ಪ್ರದೇಶದ ಜನರು, ಈ ಧೀಡೀರ್‌ ನಿರ್ಧಾರದಿಂದಾಗಿ ಮಾಡಲು ಕೆಲಸವಿಲ್ಲದೆ, ಜೀವನ ಯಾಪನೆ ಮಾಡಲು ಹೆಚ್ಚಿನ ಹಣವಿಲ್ಲದೆ, ಒಪ್ಪೊತ್ತಿನ ಊಟಕ್ಕೆ ತತ್ವಾರ ಇರುವುದಿಲ್ಲವೆಂದು ತಮ್ಮ ತಮ್ಮ ಊರಿನ ಕಡೆ ಹೊರಟರು.

ಭಾರತ ವಿಭಜನೆಯ ಸಮಯದಲ್ಲಿ ನಡೆದ ವಲಸೆಯ ನಂತರ ನಡೆದ ಮತ್ತೊಂದು ʻಮಹಾವಲಸೆʼ ಎಂದು ಸಮಾಜ ಶಾಸ್ತ್ರಜ್ಞರು ಗುರುತಿಸುವ ಈ ವಲಸೆ, ಕಂಡು ಕೇಳರಿಯದ್ದು. ಮಾರ್ಚ್ ಏಪ್ರಿಲ್ ನ ಉರಿಬಿಸಿಲಲ್ಲಿ, ಸಮರ್ಪಕವಾದ ಊಟ-ತಿಂಡಿ ಇಲ್ಲದೆ, ಯಾವುದೇ ಬಸ್ಸು ಲಾರಿ ಟ್ರಕ್ಕುಗಳ ಸಹಾಯವಿಲ್ಲದೆ, ನಡೆದೇ ಊರು ಸೇರಿದ ಜನರ ಸಾಹಸಗಾಥೆ ಆಧುನಿಕೋತ್ತರ ಯುಗದ ದುರಂತಗಾಥೆಗಳಲ್ಲಿ ಒಂದು.

ಇಂತಹ ʻಮಹಾವಲಸೆʼಯ ಸಂದರ್ಭದಲ್ಲಿ ದಣಿವರಿಯದೆ ಛಲದಿಂದ ನಡೆದು ಊರು ಸೇರಿದವರ ಯಶಸ್ವೀ ಕಥೆಗಳು ಒಂದುಕಡೆಯಿದ್ದರೆ, ಊರು ಸೇರಲಾರದೆ, ಮಾರ್ಗ ಮಧ್ಯದಲ್ಲಿಯೇ ಬಸವಳಿದು ಕೊನೆಯುಸಿರೆಳೆದವರ ಸಂಖ್ಯೆಯೂ ನಾಗರೀಕ ಸಮಾಜ ನಾಚುವಷ್ಟಿದೆ. ಅಂತಹಾ ಒಂದು ದುರಂತದ ಕತೆ, ಸಮೀನಾ ಮಿಶ್ರಾ ರ ಇಂಗ್ಲಿಷ್‌ ಕೃತಿ, ʻಜಮ್ಲೊ ವಾಕ್ಸ್‌ʼ. ಇದನ್ನು ಯಶಸ್ವಿಯಾಗಿ “ಜಮ್ಲೊ ಹೆಜ್ಜೆ ಹಾಕುತ್ತಾಳೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಕನ್ನಡಕ್ಕೆ ತಂದಿರುವವರು ಬೇದ್ರೆ ಮಂಜುನಾಥ.

ಕೆಲಸಕ್ಕಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಗುಳೆ ಹೋಗುವುದು ಸರ್ವೇ ಸಾಮಾನ್ಯ. ಹಾಗೆ, ಛತ್ತೀಸ್‌ ಗಢ ದಿಂದ ತೆಲಂಗಾಣದ ಮೆಣಸಿನ ಕಾಯಿಯ ಹೊಲಗಳಲ್ಲಿ ದುಡಿಯಲು ಬಂದ ಜಮ್ಲೊ ಎಂಬ ಹನ್ನೆರಡರ ಪುಟ್ಟ ಹುಡುಗಿ, ಲಾಕ್‌ ಡೌನ್‌ ಘೋಷಣೆಯಾದಾಗ ಮನೆ ಸೇರಲು ನಡೆಯುತ್ತಾ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆಯ ನಿರೂಪಣೆಯೇ ʻಜಮ್ಲೊ ಹೆಜ್ಜೆ ಹಾಕುತ್ತಾಳೆʼ.

ಲಾಕ್‌ ಡೌನ್‌ ನಿಂದಾಗಿ ಸಾವಿರಾರು ಜನ ತೊಂದರೆಗೆ ಸಿಲುಕಿದ್ದು, ಅವರ ಜೀವನದ ಹರಿವು ದಿಕ್ಕು ಬದಲಾದುದ್ದನ್ನು ನಾವು ಓದಿ ಕೇಳಿ ತಿಳಿದಿದ್ದೇವೆ. ಅದಲ್ಲದೆ ದೂರದೂರಿಗೆ ಪಯಣಿಸಿದ್ದನ್ನು ಕೇಳಿದ್ದೇವೆ. ಅಂತಹವರಲ್ಲಿ ಜಮ್ಲೊ ಒಬ್ಬಳಾದರೂ. ಆಕೆ ಎಳೆಯ ಹುಡುಗಿ. ಮನೆಗೆ ಸಹಾಯವಾಗುತ್ತದೆ ಎಂಬ ಕಾರಣಕ್ಕೆ, ಅಷ್ಟು ದೂರದ ಊರಿನಿಂದ ಏಕಾಂಗಿಯಾಗಿ ಬಂದು, ಮೆಣಸಿನಕಾಯಿಯ ಹೊಲಗಳಲ್ಲಿ ದುಡಿಯುತ್ತಿರುತ್ತಾಳೆ. ಲಾಕ್ ಡೌನ್ ನಿಂದಾಗಿ ಕೆಲಸ ನಿಂತು, ಅರ್ಧಕ್ಕೇ ಮನೆಗೆ ಹಿಂತಿರುಗುವಾಗ ಸಾವನ್ನಪ್ಪುತ್ತಾಳೆ.

ಸಮನಾಂತರವಾಗಿ, ಅವಳದೇ ವಯಸ್ಸಿನ ತಾರ, ರಾಹುಲ್‌ ಮತ್ತು ಆಮಿರ್‌ ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಲಾಕ್‌ ಡೌನ್‌ ಅನ್ನು ಸಂತಸ ಹಾಗು ಹೆಚ್ಚಾದ ಸುಖದಿಂದ  ಬೇಸರಗೊಂಡು ಕಳೆಯುತ್ತಿದ್ದರೆ, ಇತ್ತಕಡೆ ಜಮ್ಲೊ, ನೂರಾರು ಮೈಲಿ ಊಟ ನಿದ್ರೆ ವಿಶ್ರಾಂತಿ ಇಲ್ಲದೆ ಕ್ರಮಿಸುತ್ತಿದ್ದಾಳೆ. ಆಮಿರ್‌ ಗೆ ಶಾಲೆಯಲ್ಲಿ ತುಂಟತನ-ತರಲೆ ಮಾಡಿದ ಹಾಗೆ ಝೂಮ್‌ ತರಗತಿಯಲ್ಲಿ ಮಾಡಲಾಗುತ್ತಿಲ್ಲ ಎಂಬ ಬೇಸರವಿದ್ದರೆ, ಜಮ್ಲೊಗೆ, ತಾನು ಕೊಂಡೊಯ್ದ ಮೆಣಸಿನಕಾಯಿಯನ್ನು ನೋಡಿ ತನ್ನ ತಂದೆ ತಾಯಿ ಅದೆಷ್ಟು ಖುಷಿ ಪಡಬಹುದು ಎಂಬ ಕುತೂಹಲ.

ತಿನ್ನುವುದಕ್ಕೆ ಬೇಸರವೆಂದು ದೋಸೆ ಬೇಡವೆನ್ನುವ ತಾರಾ ಒಂದುಕಡೆಯಾದರೆ, ದೋಸೆ ಬರೆಯುವಾಗ ಉಂಟಾಗುವ ʻಚೊಯ್‌ʼ ಎಂಬ ಸದ್ದನ್ನು ಮಾತ್ರ ಆಸ್ವಾದಿಸುವ ಭಾಗ್ಯ ಜಮ್ಲೊಳಿಗೆ. ಬಿಸಿಲಿಗೆ ಕಪ್ಪಾಗಿ, ತಮ್ಮ ತಮ್ಮ ಗಂಟುಗಳೊಂದಿಗೆ ನಡೆಯುತ್ತಿರುವವರನ್ನು ತನ್ನ ರಾಜಕುಮಾರಿಯಂತಹ ಮಗಳು ತಾರಾ ನೋಡಲೂಬಾರದೆಂದು ಥಟ್ಟನೆ ಲ್ಯಾಪ್‌ ಟಾಪ್‌ ಮುಚ್ಚುವಂತಹ ಅಮ್ಮ ಒಂದು ಕಡೆಯಾದರೆ, ದುಡಿಮೆಗಾಗಿ ಅದೇ ವಯಸ್ಸಿನ ಮಗಳನ್ನು ನೂರಾರು ಮೈಲಿ ದೂರ ಕಳುಹಿಸಿರುವ ಅಮ್ಮ ಒಂದು ಕಡೆ.

ಉಳ್ಳವರು ಮತ್ತು ಇಲ್ಲದಿರುವವರ ನಡುವಿನ ಅಂತರವನ್ನು ಬಹಳ ಸೂಕ್ಷ್ಮವಾಗಿ, ಈ ವೈರುಧ್ಯಮಯ ಪಾತ್ರಗಳ ಮೂಲಕ ಸಮೀನಾ ನಿರೂಪಿಸುತ್ತಾರೆ . ಅದು ತೀವ್ರವಾಗಿ ಓದುಗರನ್ನು ಕಾಡುತ್ತದೆ.  ತಾನು ಕ್ರಮಿಸುವ ದಾರಿಯಲ್ಲಿ ಮೈನಾಗೆ ತಾನು ಸಂಪಾದಿಸಿರುವ ಮೆಣಸಿನಕಾಯಿಯನ್ನು ತಿನ್ನಲು ನೀಡುವ ಸಹೃದಯಿ ಜಮ್ಲೊ, ಖಾಲಿಯಾಗುತ್ತಿರುವ ನೀರಿನ ಬಾಟಲಿಯನ್ನು ಆತಂಕದಿಂದ ಗಮನಿಸಿಕೊಳ್ಳುವುದು ನಮ್ಮಲ್ಲೂ ಆತಂಕ ಮೂಡಿಸುತ್ತದೆ.   ವಿಶ್ರಮಿಸುತ್ತಲೇ ಕೊನೆಯುಸಿರೆಳೆವ ಜಮ್ಲೋ ನೋಡನೋಡುತ್ತಲೇ ಚಿತ್ರ ದಿಂದ ಮರೆಯಾಗುವುದು, ಸಮೀನ ಅದನ್ನು ಬರೆದು ತಿಳಿಸದಿರುವುದು ಸಮಾಜದ,  ಹೃದಯಹೀನತೆಗೆ, ಜಾಣಕುರುಡಿಗೆ ಸಾಕ್ಷಿಯಂತಿದೆ. 

ತಾರೀಖ್‌ ಅಜೀಜ್‌ ಅವರು ಪುಸ್ತಕಕ್ಕಾಗಿ ರಚಿಸಿರುವ ಚಿತ್ರಗಳು ನಮಗೆ ಜಮ್ಲೊಳನ್ನು, ಅವಳ ಪ್ರಯಾಣವನ್ನು ಬಹಳ ಆಪ್ತವಾಗಿ ಕಟ್ಟಿಕೊಡುವಲ್ಲಿ ಸಹಾಯಕವಾಗಿವೆ. ಇಡೀ ನಿರೂಪಣೆ ಸರಳವಾಗಿದ್ದರೂ, ಸಶಕ್ತವಾಗಿ ಮನಮುಟ್ಟುವ ಶೈಲಿಯಲ್ಲಿದ್ದು, ಇದಕ್ಕಾಗಿ ಅನುವಾದಿಸಿರುವ ಬೇದ್ರೆ ಮಂಜುನಾಥರನ್ನು ಅಭಿನಂದಿಸಬೇಕು.

ಸಹೃದಯತೆ, ಕರುಣೆ, ಸ್ಪಂದನೆ, ಸಹಾಯಪರತೆಯನ್ನು ಇಂದಿನ ಮಕ್ಕಳು ಪಾಠದಲ್ಲಿ ಮಾತ್ರ ಓದುವಷ್ಟು ವ್ಯವಹಾರಿಗಳಾಗಿ ಬದಲಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಕೃತಕ ಸುಂದರ ಲೋಕದ ಸುಳಿಯಲ್ಲಿ ಸಿಲುಕಿರುವ ಮಕ್ಕಳಿಗೆ ಪ್ರಪಂಚದಲ್ಲಿನ ಕಠೋರತಮ ಮುಖದ ಪರಿಚಯವಿಲ್ಲ. ಅಂತಹ ಮಕ್ಕಳಿಗೆ ಜಮ್ಲೊ ಜೀವನದ ದರ್ಶನ ಮಾಡಿಸುತ್ತಾಳೆ.

ಲಾಕ್‌ ಡೌನ್‌ ಸಮಯದಲ್ಲಿ ಜಮ್ಲೊಳ ದುರಂತ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ. ಅದನ್ನು ಹೊರತು ಪಡಿಸಿಯೂ ಜಮ್ಲೊ ಬಾಲ ಕಾರ್ಮಿಕಳಾಗಿ ಅಷ್ಟು ದೂರದೂರಿನಿಂದ ಬಂದು ದುಡಿಯುತ್ತಿದ್ದಾಳೆ ಎಂಬುದು, ಕರೋನಾ ಕಾಲದ್ದಷೇ ಅಲ್ಲದೆ, ಸಾರ್ವಕಾಲಿಕ ಸತ್ಯ. ಅವಳಂತಹ ಮಕ್ಕಳು ವಿದ್ಯಾಭ್ಯಾಸ ಬಿಟ್ಟು ದುಡಿಮೆಗೆ ನಿಂತಿದ್ದಾರೆ ಎಂಬ ಅಂಶ ನಮಗೆ ಹೊಳೆಯಬೇಕು. ಅಂತಹ ಸಾವಿರಾರು ಮಕ್ಕಳ ಪ್ರತಿನಿಧಿಯಾಗಿ ಜಮ್ಲೊ ನಮ್ಮನ್ನು ಎಚ್ಚರಿಸುತ್ತಾಳೆ. ಕೇವಲ ೩೨ ಪುಟಗಳ ಜಮ್ಲೊಳ ಕಥನ ಹಲವು ಆಯಾಮಗಳುಳ್ಳದ್ದು. ಇಂತಹ ಬಹುಮುಖೀ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡಿದ ನವಕರ್ನಾಟಕ ಪ್ರಕಾಶನ ಹಾಗು ಅನುವಾದಿಸಿದ ಬೇದ್ರೆ ಮಂಜುನಾಥ ರಿಗೆ ಅಭಿನಂದನೆಗಳು

‍ಲೇಖಕರು Admin

June 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: