ನಿವೇದಿತಾ ಎಚ್‌ ನೋಡಿದ ‘ಷೇಕ್ಸ್ ಪಿಯರನ ಶ್ರೀಮತಿ’

ನಿವೇದಿತಾ ಎಚ್‌

“ಪ್ರತೀ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ” ಎಂಬ ಆರ್ಷೇಯವಾದ ನಾಣ್ಣುಡಿಯನ್ನು ಸರಿಯಾದ ರೀತಿಯಲ್ಲಿ ಹೀಗೆ ಹೇಳಬಹುದೇನೋ, “ಪ್ರತೀ ಯಶಸ್ವೀ ಪುರುಷನ ಹಿಂದೆ, ಒಂದು ಹೆಣ್ಣಿನ ತ್ಯಾಗ, ಕಣ್ಣೀರು, ಸಮರ್ಪಣೆ, ನಿಸ್ಪೃಹತೆ, ಬೆಂಬಲ, ಕಾಳಜಿ ಇರುತ್ತದೆ.” ಇದು ಬಹುಶಃ ಎಲ್ಲರೂ ಒಪ್ಪಬಹುದಾದ ಮಾರ್ಪಾಟು ಎಂದುಕೊಳ್ಳುತ್ತೇನೆ.  

ಯಾವುದೇ ಲೋಕಪ್ರಿಯ ವ್ಯಕ್ತಿತ್ವದ ಬಗ್ಗೆ ಬರೆಯುವಾಗ, ಅವರ ಪತ್ನಿಯರ ಉಲ್ಲೇಖ ಗೌಣವೆನ್ನುವಷ್ಟು ಎಂಬುದು ನಿರ್ವಿವಾದ. ರಂಜನೀಯವೆನ್ನಿಸುವ, ಅನವಶ್ಯಕ ವಿವರಣೆಗಳಿಗೆ ಸಿಕ್ಕಷ್ಟು ಪ್ರಾಮುಖ್ಯತೆ, ಜೀವನವನ್ನು ಹಸನಾಗಿಸಿದ, ಹಗುರವಾಗಿಸಿದ ಅರ್ಧಾಂಗಿಯ ಬಗ್ಗೆ ಸಿಕ್ಕುವುದಿಲ್ಲ. ಸಾಹಿತ್ಯದ ಪ್ರಪಂಚದಲ್ಲಿ ಈ ತಾರತಮ್ಯ ಕಣ್ಣಿಗೆ ರಾಚುವಷ್ಟು. ನಮ್ಮಲ್ಲೇ ತೆಗೆದುಕೊಂಡರೆ, ನಮಗೆ ರನ್ನ, ಪಂಪ, ಜನ್ನ, ಲಕ್ಷ್ಮೀಶ ಇವರುಗಳ ಹೆಂಡತಿಯರ ಬಗ್ಗೆ ತಿಳಿದಿದೆ? ಹೆಸರು ತಿಳಿದಿದ್ದರೆ ಅದೇ ಹೆಚ್ಚು. ಇನ್ನು ಆಧುನಿಕ ಕಾಲದಲ್ಲಿ ಅಭಿನಂದನಾ ಗ್ರಂಥದ ಪರಿಪಾಠ ಬೆಳೆದಿದ್ದರಿಂದ ಸ್ವಲ್ಪ ಮಟ್ಟಿಗೆ ಪ್ರಸಿದ್ಧರ ಹೆಂಡತಿಯರ ಬಗ್ಗೆ ಅಷ್ಟಿಷ್ಟು ತಿಳಿಯುತ್ತಿದೆ. ಇದಕ್ಕೆ ಹೆಣ್ಣು ಕನಿಷ್ಠಳು ಎಂಬ ಎಂಬ ಪ್ರಾಚೀನ ನಂಬಿಕೆಯ ಜೊತೆಗೆ, ಗಂಡಿನ ಅಹಂ ಕೂಡಾ ಕಾರಣ. ಮತ್ತೆ ಇದು ಭಾರತದಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ. 

ಇದರ ಬಗೆಗಿನ ಚರ್ಚೆ ಮುಗಿಯುವಂತಹದ್ದಲ್ಲ. ಆದರೆ ಈ ಮನೋಭಾವ ಬದಲಾಗುತ್ತಿರುವುದೂ ಹೌದು. ಈ ʻಯಶಸ್ವೀ ಪುರುಷʼನ ಹಿಂದಿರುವ ಮಹಿಳೆಯ ಆಂತರ್ಯವನ್ನು ತಿಳಿಯುವ ಮನುಷ್ಯ ಸಹಜ ಕುತೂಹಲ, ಹಲವಾರು ಸಂಶೋಧನೆಗಳಿಗೆ, ಸಾಹಿತ್ಯಕ ಕೃತಿಗಳಿಗೆ, ಕಲಾ ಪ್ರದರ್ಶನಗಳಿಗೆ ಇಂಬು ನೀಡುತ್ತಿರುವುದು ಹೊಸ ಬೆಳವಣಿಗೆ.  

ಷೇಕ್ಸ್ ಪಿಯರ್‌ ಎಂಬ ಲೋಕ ಕಂಡ ಮಹಾನ್‌ ನಾಟಕಕಾರನ ಅಭೂತಪೂರ್ವ, ನ ಭೂತೋ ನ ಭವಿಷ್ಯತಿ ಎನ್ನುವಂತಹ ಯಶಸ್ಸಿನ ಹಿಂದೆ ಅವನ ಹೆಂಡತಿ ಆನಾ ಹಾತವೇ ಇದ್ದಾಳೆ ಎಂಬುದು ಬಹುತೇಕರಿಗೆ ತಿಳಿಯದ ವಿಚಾರ. ಷೇಕ್ಸ್ ಪಿಯರ್‌ ನಿಗಿಂತಾ ೮ ವರುಷ ದೊಡ್ಡವಳಾಗಿದ್ದ ಆನಾ ಹಾತ್ವೇ, ಲೋಕಾರೂಢಿಯ ನಂಬಿಕೆಯಂತ, ಗಯ್ಯಾಳಿಯಾಗಿದ್ದಿರಬಹುದು ಎಂಬುದೇ ಇತಿಹಾಸಕಾರರ ಆಂಬೋಣ.  

“ಕೆಟ್ಟ ಹೆಂಡತಿ ಸಿಕ್ಕರೆ ಗಂಡಸು  ತತ್ವಜ್ಞಾನಿ ಯಾಗುತ್ತಾನೆ” ಎಂಬ ಕ್ರೂರ ಹಾಸ್ಯದ ಮಾತಿನ ತರಹ, ಆನಾ ಳ ಗಯ್ಯಾಳಿತನ ಲೋಕಕ್ಕೆ, ಷೇಕ್ಸ್ಪಿಯರ್‌ ನಂತಹ ಧ್ಯಾನಸ್ಥ ನಾಟಕಕಾರನನ್ನು ಕೊಟ್ಟಿತು ಎಂಬುದು ಲೋಕದ ನಂಬಿಕೆ.  

ಅಂತಹಾ ಕಥಾಕಥಿತ ಇತಿಹಾಸದ ಮೇಲೆ ಸತ್ಯದ ಬೆಳಕು ಚೆಲ್ಲುವ ಪ್ರಯತ್ನ, ಪಶ್ಚಿಮದ ಅನೇಕ ಸಂಶೋಧನಾಕಾರರು ಮಾಡಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲಿಸಿ, ಚರ್ಚಿನ ಹಲವಾರು ದಾಖಲೆಗಳನ್ನು ಪರಾಮರ್ಶಿಸಿ ಸಂಶೋಧನಾ ಲೇಖನಗಳು, ಕಾದಂಬರಿಗಳು ಬರೆಯಲ್ಪಟ್ಟಿವೆ. ಅಂತಹಾ ವಾಸ್ತವವಾದಿ ವಿಚಾರಗಳನ್ನು ಇಟ್ಟುಕೊಂಡು, ಷೇಕ್ಸ್ ಪಿಯರ್‌ ನ ನಿಜ ವ್ಯಕ್ತಿತ್ವವನ್ನು ಅವನ ಹೆಂಡತಿ ಆನಾ ಹಾತ್ವೇ ಳ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ನಾಟಕಕಾರ ಉದಯ್‌ ಇಟಗಿ, ತಮ್ಮ  ಕೃತಿ, “ಷೇಕ್ಸ್ ಪಿಯರನ ಶ್ರೀಮತಿ” ಮೂಲಕ ಸಶಕ್ತವಾಗಿ ಮಾಡಿದ್ದಾರೆ. ಮೈಸೂರು ಲಿಟೆರರಿ ಅಸೋಸಿಯೇಷನ್ ನ ವತಿಯಿಂದ ಭಾನುವಾರ ಈ ನಾಟಕದ ಪ್ರದರ್ಶನ, ನಟನಾ ದಲ್ಲಿ ಏರ್ಪಾಡಾಗಿತ್ತು. 

ನಾಟಕ ಕೃತಿಯನ್ನು ಸಮರ್ಪಕವಾಗಿ ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ವಿಶ್ವರಾಜ್‌ ಪಾಟೀಲ್‌ ಗೆದ್ದಿದ್ದಾರೆ. ಕೃತಿಕಾರ ಹಾಗು ನಿರ್ದೇಶಕರ ಆನಾ ಳ ಬಗೆಗಿನ ಕಲ್ಪನೆಯನ್ನು ನೂರಕ್ಕೆ ನೂರು ಶೇಕಡಾ ಪ್ರೇಕ್ಷಕರಿಗೆ ದಾಟಿಸುವಲ್ಲಿ, ಎಂದಿನಂತೆ ಲಕ್ಷ್ಮೀ ಚಂದ್ರಶೇಖರ್‌ ಅವರ ಅತ್ಯಂತ ಸೂಕ್ಷ್ಮ ಹಾಗು ಸಹಜಾಭಿನಯ ಫಲಪ್ರದವಾಗಿದೆ. ಯಾವುದೇ ಭಾವಾತಿರೇಕವಿಲ್ಲದೆ, ಭಾಷೆಯನ್ನು ಅನಗತ್ಯವಾಗಿ ಭಾರವಾಗಿಸದೇ, ಹೆಚ್ಚು ಪಾತ್ರಗಳಿಂದ ವೇದಿಕೆಯನ್ನು ತುಂಬಿಸದೆ ರೂಪುಗೊಂಡಿರುವ ಈ ಏಕವ್ಯಕ್ತಿ ಪ್ರದರ್ಶನ, ಮಹಾನ್‌ ನಾಟಕಕಾರನನ್ನು, ರಕ್ತಮಾಂಸಗಳುಳ್ಳ, ಅರಿಷಡ್ವರ್ಗಗಳಿಗೆ ದಾಸನಾದ, ಹಲವು ಬಲಹೀನತೆಗಳಿಗೆ ಪಕ್ಕಾಗಿದ್ದ, ನಮ್ಮೊಳಗೊಬ್ಬನನ್ನಾಗಿಸಿ ಬಿಡುತ್ತದೆ. ಪ್ರಸಿದ್ಧಿ ತಂದುಕೊಡುವ ತಾತ್ಕಾಲಿಕ ಮರೆವುಗಳಿಗೆ ದಾಸನಾಗಿದ್ದ ಷೇಕ್ಸ್ಪಿಯರ್‌, ತಾನು ಕೆತ್ತಿದ, ಅಮೋಘ, ಅಪೂರ್ವ, ಆದರ್ಶಮಯ ಪಾತ್ರಗಳ ಹತ್ತಿರಕ್ಕೂ ಸುಳಿದವನಲ್ಲ ಎಂಬ ಸತ್ಯ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಹೆಣ್ಣಿನ ಹೃದಯವನ್ನು, ಅವಳ ಸ್ವಭಾವವನ್ನುಎಳೆಯೆಳೆಯಾಗಿ ಪೋಸ್ಟ್ಮಾರ್ಟಮ್‌ ಗೆ ಒಳಪಡಿಸಿರುವ ಷೇಕ್ಸ್ಪಿಯರ್‌, ತನ್ನ ಹೆಂಡತಿಯ ಆಂತರ್ಯವನ್ನು ಅರಿಯಲಾರದ ನಿರ್ಲಿಪ್ತನಾಗಿದ್ದ ಎನ್ನುವುದು, ದುರಂತವೆನಿಸುತ್ತದೆ. ಇವೆಲ್ಲವನ್ನೂ ನವಿರಾದ ಹಾಸ್ಯದೊಂದಿಗೆ ನಮ್ಮೊಂದಿಗೆ ಹಂಚಿಕೊಳ್ಳುವ ಆನಾ, ಪಕ್ಕದ ಮನೆಯ ಸಾಮಾನ್ಯ ಹೆಂಗಸೆನ್ನಿಸಿ ಬಿಡುತ್ತಾಳೆ. ಲೋಕದ ಯಾವುದೇ ಮೂಲೆಗೆ ಹೋದರೂ, ಹೆಣ್ಣಿನ ಕಷ್ಟ ಕಾರ್ಪಣ್ಯಗಳು ಒಂದೇ ಎನ್ನುವ ನಿರ್ಧಾರಕ್ಕೆ ಅನಾಯಾಸವಾಗಿ ಪ್ರೇಕ್ಷಕರು ಬಂದುಬಿಡುತ್ತಾರೆ. ಷೇಕ್ಸ್ ಪಿಯರನ ಆದ್ಧೂರಿ ವ್ಯಕ್ತಿತ್ವದ ತಳಹದಿಯಲ್ಲಿ, ಆನಾಳ ಸಮರ್ಪಿತ ಜೀವನವಿದೆ, ಕುಟುಂಬದ ಜವಬ್ದಾರಿಗೆ ಹೆಗಲಾದ ಛಾತಿಯಿದೆ, ನಿರ್ವಂಚನೆಯಿಂದ ಕೈಗೊಂಡ ತಪಸ್ಸಿದೆ ಎನ್ನುವುದು ಅರಿವಿಗೆ ಬರುತ್ತದೆ.  ಷೇಕ್ಸ್ ಪಿಯರನ ಮಕ್ಕಳು, ಮನೆ, ಊರು, ಹಿನ್ನೆಲೆ ಎಲ್ಲವನ್ನೂ ಬಿಚ್ಚಿಡುವ ನಾಟಕ, ಆ ಕಾಲದ ಲಂಡನ್ನಿನ ಸಾಮಾಜಿಕ ಜೀವನದ ಬಗ್ಗೆ ಕೆಲವು ಒಳಹುಗಳನ್ನು ಕೊಡುತ್ತದೆ.  

 ಈ ಆಧುನಿಕೋತ್ತರ ಕಾಲದಲ್ಲೂ, ಹೆಣ್ಣಿನ ಹಲವು ಸ್ವಭಾವಗಳನ್ನು ಕಾರಣವಾಗಿಸಿ, ಅವಳನ್ನು ಶೋಷಿಸುವ ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುವ ಸಮಾಜದ ಬಾಯಿಮುಚ್ಚಿಸುವಂತಿರುವ ಈ ನಾಟಕ, ಸಮಾಜ ಇಂದಿಗೂ ಅಂದಿಗೂ ಹೆಚ್ಚೇನೂ ಬದಲಾಗಿಲ್ಲ ಎನ್ನುವ ಅಪ್ರಿಯ ಕಟು ಸತ್ಯವನ್ನು ಅತ್ಯಂತ ಸಹಜವಾಗಿ  ಮುಂದಿಟ್ಟು, ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. 

ನಾಟಕದ ನಂತರ ಲಕ್ಷ್ಮೀ ಚಂದ್ರಶೇಖರ್‌ ಅವರೊಂದಿಗೆ ನಡೆದ ಸಂವಾದದಲ್ಲಿ ವ್ಯಕ್ತವಾದ ಗಾಢ ವಿಚಾರಗಳು, ಪ್ರೇಕ್ಷಕರನ್ನು ನಾಟಕ ಕಾಡಿದ್ದಕ್ಕೆ ಸಾಕ್ಷಿಯೆನ್ನುವಂತಿತ್ತು. ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆದಲ್ಲಿ ಸಮಾಜ ಚಿಂತನಮುಖಿಯಾಗುವುದರಲ್ಲಿ ಅನುಮಾನವೇ ಇಲ್ಲ. 

‍ಲೇಖಕರು Admin

July 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: