ಶ್ರೀದೇವಿ ಕೆರೆಮನೆ
ನನ್ನ ನೆನಪಾದಾಗ
ಎದೆ ಒದ್ದೆಯಾಗುವುದಿಲ್ಲವೇ
ಅಮಾಯಕನಂತೆ ನೀನು ಕೇಳುವ ಪ್ರಶ್ನೆಗೆ
ಏನೆಂದು ಉತ್ತರಿಸಲಿ
ನಿನ್ನ ನೆನಪಾದರೆ ಕೇವಲ ಒದ್ದೆಯಾಗುವ
ಮಾತಷ್ಟೇ ಅಲ್ಲವೇ ಅಲ್ಲ
ನೋಡು ಎಂದಾದರೂ ಒಮ್ಮೆ
ಕಾಳಿಗೆ ಕಟ್ಟಿದ
ಆಣೆಕಟ್ಟಿನ ಹಿನ್ನೀರಿನ ಜೌಗು ಜಾಗವನ್ನು
ಎಂದೂ ಒಣಗದ
ಸದಾ ಹಸಿಯಾಗಿರುವ
ಎಂದೆಂದಿಗೂ ಹಸಿರಾಗಿರುವ ನೆಲವನ್ನು
ನಿನ್ನ ನೆನಪಾದರೆ
ಸುಮ್ಮನೆ ಒದ್ದೆಯಾಗುವುದಿಲ್ಲ
ನನ್ನ ಎದೆಯೊಳಗೆ
ಅರಳಿ ನಗುತ್ತದೆ ಕಮಲ.
ಚಂಡೆ ಹೇರುತ್ತವೆ ಗಿಡದ ತುಂಬ
ದಾಸವಾಳ, ಅಬ್ಬಲಿಗೆ, ನಿತ್ಯಪುಷ್ಪ
ಹಿತ್ತಲಿನ ಮಲ್ಲಿಗೆ, ಜಾಜಿ ಸಂಪಿಗೆಗಳು
ಒಮ್ಮೆಲೆ ಅರಳಿ
ಸೂಸುವ ಘಮಕ್ಕೆ ಅಮಲೇರಿದಂತಾಗುತ್ತದೆ.
ನಿನ್ನ ನೆನಪಾದರೆ ಬರಿ
ಒದ್ದೆಯಷ್ಟೇ ಆಗುವುದಿಲ್ಲ ಮನಸು
ಅಲ್ಲಿ ಹುಲ್ಲು ಹಾಸು ಬೆಳೆಯುತ್ತದೆ
ತಣ್ಣನೆಯ ನೆಲದಲ್ಲಿ ಗರಿಕೆ ಜೊಂಪೇರಿದಂತೆ
ನನಗೆ ನಾನೇ ಮೈಮರೆತು
ನಿನ್ನ ನೆನಪಲ್ಲಿ ಒದ್ದೆ ಅನುಭವಿಸುತ್ತೇನೆ
ನಿನ್ನ ನೆನಪಾದರೆ ಎದೆಯೊಳಗೆ
ಬರಿದೇ ಒದ್ದೆಯಾಗುವುದಿಲ್ಲ
ಆಣೆ ಕಟ್ಟಿನಿಂದ ಹರಿದದಾಸವಾಳ, ಅಬ್ಬಲಿಗೆಗಳು ಕಾಳಿ ಸೊಕ್ಕೇರಿ
ಧುಮ್ಮಿಕ್ಕಿ ಜಲಪಾತವಾಗುತ್ತಾಳೆ
ಎದೆಯೊಳಗೆ ಅರಳಿದ ಹೂದೋಟದಲ್ಲಿ
ಹಕ್ಕಿಗಳು ಚಿಲಿಪಿಲಿಗುಟ್ಟುತ್ತದೆ
ಕೋಗಿಲೆ ಸದಾ ನಿನ್ನ ಹೆಸರನ್ನೇ ಉಲಿಯುತ್ತದೆ.
nice
ಒಳ್ಳೆಯ ಕವಿತೆ.