ಚೈತ್ರಾ ಶಿವಯೋಗಿಮಠ
ನನಗೊಂದು ರೀತಿಯ ಆನಂದ
ನಿನ್ನ ಮೌನ ಮತ್ತು ಭಯ.
ಇರಲಿ, ನೀನು ಮೃದುವಾದಷ್ಟು
ನಿನಗೆ ನನ್ನ ಅಭಯ!
ಯಾರನ್ನೂ ಮಾತನಾಡಿಸದಷ್ಟು
ನೀನು ಕೆಲಸದಲ್ಲಿ ಮಗ್ನ
ಕಡೆ ಪಕ್ಷ ನಿನ್ನಂತರತಮದ ಧ್ವನಿಗೂ
ಆಗಲಿಲ್ಲ ನಿನ್ನ ತಾಂತ್ರಿಕ ಪ್ರಗತಿಯ ತಪೋ ಭಗ್ನ!
ಉಡುವ ಬಟ್ಟೆಗೆ, ತಿನ್ನುವ ಹೊಟ್ಟೆಗೆ
ಅಂಕೆಯೇ ಇಲ್ಲದಷ್ಟು ಆಧುನಿಕತೆ!
ಮನಸ್ಸಿಗೂ ಮುಖವಾಡ, ನೂರಾರು.
ನಿನ್ನ ಪದಕೋಶದಿಂದಲೇ ಮಾಯವಾದ ಸಿನಿಕತೆ!
ಸದಾ ಚಡಪಡಿಕೆಯ ಮನಸ್ಸು
ಏನು ಮಾಡಲಿ ಏನು ಬಿಡಲಿ!
ಒಳಗೇ ಬೆಳೆದ ಕಳೆಯನ್ನ ಕೀಳಲೂ
ಪುರುಸೊತ್ತು ಇರಲಿಲ್ಲ, ಈಗ ನೋಡಿಲ್ಲಿ
ಪುರವೇ ಸತ್ತು ಹೋಗುವಂತಹ ಸ್ಥಿತಿ
ಕೀಳಬೇಕಾದನ್ನ ಕಿತ್ತು, ನೆಡಬೇಕಾದನ್ನ
ನೆಟ್ಟು, ನಿಜವಾದ ಔನ್ನತ್ಯವಾಗಲಿ
ಬೆಸೆಯಲಿ ದುರಿತ ಕಾಲ ಮನಸ್ಸುಗಳನ್ನ
ನನಗೆ ನೀಡಬೇಕಾದ ಕಾಣಿಕೆ
ಇದೇ ಮಗು! ನಿನ್ನನ್ನು ಕಾಡಿ
ಹೆದರಿಸಿ ಮನೆಯೊಳಗೆ ಬಂಧಿಸಿದ್ದೆ
ಈ ಕಾರಣಕ್ಕೆ! ನನ್ನನ್ನೂ ಪ್ರೀತಿ ಮಾಡಿ
ನಿನ್ನೊಡನಾಡಿಗಳನೂ ಪ್ರೀತಿಸು!
ಸಾಕು ನಿನ್ನ ಆವೇಗ ಮತ್ತು ಆ ವೇಗ
ಎರಡನ್ನೂ ನಿಧಾನಿಸು!
ಚೆಂದ…