ವಿ ಎಲ್ ನರಸಿಂಹಮೂರ್ತಿ
ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳು ಇದ್ದಾಗ್ಯೂ ಕೆಲವು ವಲಯಗಳಿಗೆ ಹೆಚ್ಚಿನ ಗಮನ, ಆದ್ಯತೆ ನೀಡಬೇಕಾಗುವುದರಿಂದ ಸಮರ್ಪಕವಾದ ಅಧ್ಯಯನ ನಡೆಸಿ ಅಧ್ಯಯನದಿಂದ ದೊರಕುವ ಅಂಶಗಳನ್ನು ಪರಿಗಣಿಸಿ ಆದ್ಯತೆಯ ಮೇಲೆ ನಿಗಮ, ಮಂಡಳಿ ಸ್ಥಾಪಸುವುದು ರೂಢಿ.
ಆದರೆ ನಮ್ಮ ಸರ್ಕಾರಗಳು ‘ಸಾಮಾಜಿಕ ನ್ಯಾಯ’ ಅನ್ನುವ ಕಲ್ಪನೆಯನ್ನು ಓಟು ಗಳಿಸುವ ಅಸ್ತ್ರವನ್ನಾಗಿ ಮಾಡಿಕೊಂಡ ಮೇಲೆ ಜಾತಿಗೊಂದು ನಿಗಮ (ಅವಶ್ಯಕತೆ ಇದೆಯೊ ಇಲ್ಲವೊ ಅನ್ನುವುದನ್ನು ನೋಡದೆ), ಜಾತಿಗೊಬ್ಬ ಸಾಂಸ್ಕೃತಿಕ ನಾಯಕನನ್ನು ಹುಟ್ಟುಹಾಕಿ ಆ ನಾಯಕನ ಹುಟ್ಟುಹಬ್ಬ ಆಚರಿಸುವುದು, ಸಾರ್ವಜನಿಕ ರಜೆ ಘೋಷಿಸುವುದನ್ನು ಶುರುಮಾಡಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ದೊಡ್ಡ ದೊಡ್ಡ ಸಾಂಸ್ಕೃತಿಕ ವ್ಯಕ್ತಿತ್ವಗಳನ್ನೆಲ್ಲ ಆಯಾ ಜಾತಿಗಳ ನಾಯಕನನ್ನಾಗಿ ಬದಲಾಯಿಸಿಬಿಟ್ಟಿವೆ.
ಆ ಮೂಲಕ ಜಾತ್ಯಾತೀತ ಸಮಾಜದ ನಿರ್ಮಾಣದ ಕನಸನ್ನು ಎತ್ತಿ ತಿಪ್ಪೆಗೆ ಬಿಸಾಡಿವೆ. ಈಗ ರಾಜ್ಯ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದ ಜಾತಿಗಳ ‘ಅಭಿವೃದ್ಧಿ’ಗೂ ನಿಗಮಗಳ ಸ್ಥಾಪನೆ ಮಾಡುವ ಮೂಲಕ ಸರ್ಕಾರದ ‘ಅಭಿವೃದ್ಧಿ’ ಪರಿಕಲ್ಪನೆ ಯಾವುದು ಅನ್ನುವುದನ್ನ ಸಾಬೀತುಪಡಿಸುತ್ತಿದೆ.
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಅಳವಡಿಸಿಕೊಂಡಿರುವ ‘ಜಾತ್ಯಾತೀತ’ ರಾಷ್ಟ್ರ ಅನ್ನುವ ಪರಿಕಲ್ಪನೆಯ ಅರ್ಥವೇನು, ಅದನ್ನ ಅಳವಡಿಸಿಕೊಂಡಿರುವ ಉದ್ದೇಶವಾದರೂ ಏನು ಅನ್ನುವ ಕನಿಷ್ಠ ಜ್ಞಾನವೂ ಇಲ್ಲದ ಜನ ಪ್ರತಿನಿಧಿಗಳು (ಇವರು ಸಂವಿಧಾನಕ್ಕೆ ಬದ್ಧವಾಗಿ ಸೇವೆ ಸಲ್ಲಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿರುತ್ತಾರೆ) ಜಾತಿಯನ್ನೆ ಚುನಾವಣೆಯಲ್ಲಿ ಗೆಲ್ಲುವ ಪ್ರಮುಖ ದಾರಿಯನ್ನಾಗಿಸಿಕೊಂಡು ಜಾತಿ ಜಾತಿಗಳ ನಡುವೆ ಕಂದರವನ್ನು ಹೆಚ್ಚಿಸಿ ಬಿಟ್ಟಿದ್ದಾರೆ.
ಎಲ್ಲಿಯವರೆಗೆ ಜಾತಿ ಗಟ್ಟಿಯಾಗಿರುತ್ತದೊ ಅಲ್ಲಿಯವರೆಗೆ ಮಾತ್ರ ಇವರ ಅಸ್ತಿತ್ವವೂ ಇರುವುದರಿಂದ ಜಾತಿ ವಿನಾಶದ ಕಡೆಯಾಗಲಿ, ಜಾತ್ಯಾತೀತ ಸಮಾಜದ ನಿರ್ಮಾಣದ ಕಡೆಗಾಗಲಿ ಕನಸಿನಲ್ಲಿಯೂ ಗಮನ ಕೊಡುವುದಿಲ್ಲ. ಸರಿ, ಜಾತಿಗೊಂದು ನಿಗಮ ಮಾಡಿದ ಮೇಲೆ ಜಾತಿ ವ್ಯವಸ್ಥೆಗೆ ಸವಾಲು ಹಾಕಿ ಅಂತರ್ಜಾತಿ ಮದುವೆಯಾಗಿ ಜಾತ್ಯಸ್ಥರಿಂದ ಹಲಬಗೆಯ ಹಿಂಸೆ, ಅವಮಾನ, ಶೋಷಣೆಗಳಿಗೆ ಒಳಗಾಗುವ ‘ನಿಜವಾದ ಜಾತ್ಯಾತೀತ’ರ ಅಭಿವೃದ್ಧಿಗೆ ಯಾಕೆ ಸರ್ಕಾರ ಒಂದು ನಿಗಮ ಸ್ಥಾಪಿಸಬಾರದು.
ಕವಿ ಡಾ.ಸಿದ್ದಲಿಂಗಯ್ಯನವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಅಂತರ್ಜಾತಿ ವಿವಾಹವಾದವರಿಗೆ ನೌಕರಿಯಲ್ಲಿ ಮತ್ತು ಅವರ ಮಕ್ಕಳಿಗೆ ಒಂದು ತಲೆಮಾರಿಗೆ ವಿಧ್ಯಾಭ್ಯಾಸದಲ್ಲೂ ಐದು ಪರ್ಸೆಂಟ್ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಹಿರಿಯ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಸೇರಿದಂತೆ ರಾಜ್ಯದ ಹಲವಾರು ಲೇಖಕರು, ಹೊರಾಟಗಾರರು ಬೆಂಬಲ ನೀಡಿದ್ದರಾದರೂ ಅದನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲವಾದ್ದರಿಂದ ಸಿದ್ದಲಿಂಗಯ್ಯನವರು ಸಲ್ಲಿಸಿದ್ದ ಪ್ರಸ್ತಾವನೆ ಕಸದ ಬುಟ್ಟಿ ಸೇರಿತು.
ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಬೇರುಗಳು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿವೆ. ಜಾತಿಯನ್ನು ಮೀರಿ ಮದುವೆಯಾದವರನ್ನು ‘ಮರ್ಯಾದೆಯ’ ಹೆಸರಲ್ಲಿ ಭೀಕರವಾಗಿ ಕೊಲ್ಲುವ ಮಟ್ಟಕ್ಕೆ ನಮ್ಮ ಸಮಾಜದ ಜಾತಿ ವಿಕೃತಿ ತಲುಪಿದೆ. ಈ ನಡುವೆಯೂ ಸದ್ದಿಲ್ಲದೆ ದೊಡ್ಡ ಪ್ರಮಾಣದಲ್ಲಿ ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ. ಅಂತರ್ಜಾತಿ ವಿವಾಹ ಆದವರು ಸಮಾಜದಿಂದ ಅನೇಕ ರೀತಿಯ ಶೋಷಣೆ, ಅವಮಾನಗಳನ್ನು ಅನುಭವಿಸಬೇಕಾಗುತ್ತದೆ.
ಯಾವ ಕಾರಣಕ್ಕೆ ಮದುವೆಯಾದರೂ ಅಂತರ್ಜಾತಿ ವಿವಾಹಗಳಿಂದ ನಮ್ಮ ಜಾತಿ ವ್ಯವಸ್ಥೆಯ ಬುಡ ಅಷ್ಟೊ ಇಷ್ಟೊ ಅಲ್ಲಾಡುತ್ತದೆ. ಈ ಅರ್ಥದಲ್ಲಿ ನಮ್ಮ ದೇಶದ ನಿಜವಾದ ಜಾತ್ಯಾತೀತರು ಅಂತರ್ಜಾತಿ ವಿವಾಹವಾದವರು. ಆದರೆ ಇವರು ಜಾತಿಯನ್ನು ಮೀರಬೇಕು ಎನ್ನುವ ಆದರ್ಶವಿಟ್ಟುಕೊಂಡು ವಿವಾಹವಾಗುವವರಾದ್ದರಿಂದ ಇವರೇ ಒಂದು ಪ್ರತ್ಯೇಕ ಜಾತಿಯಾಗಿಯೋ, ಸಮುದಾಯವಾಗಿಯೋ ಒಂದುಗೂಡಿ ಧ್ವನಿ ಎತ್ತದಿರುವುದರಿಂದ ಇವರಿಗೆ ಪ್ರತ್ಯೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಕೊಡಬೇಕು ಅನ್ನುವ ಆಲೋಚನೆ ಸರ್ಕಾರಕ್ಕಾಗಲೀ, ಸಮಾಜಕ್ಕಾಗಲೀ ಇಲ್ಲ.
ಯಾರ ಅಭಿವೃದ್ದಿಗೆ ನಿಜವಾಗಿಯೂ ಪ್ರತ್ಯೇಕ ನಿಗಮದ ಅಗತ್ಯವಿದೆಯೋ ಅಂತಹ ಹಿಂದುಳಿದವರನ್ನು ಗೇಲಿ ಮಾಡುವ ರೀತಿಯಲ್ಲಿ ಮುಂದುವರೆದ ಜಾತಿಗಳಿಗೂ ನಿಗಮ ಸ್ಥಾಪಿಸುವ ಅಡ್ಡಕಸುಬಿ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಈ ಸರ್ಕಾರಕ್ಕೆ ನಿಜವಾಗಿಯೂ ಸಮಾಜದ ಎಲ್ಲ ಸಮುದಾಯಗಳ ಅಭಿವೃದ್ಧಿ ಮಾಡುವ ಇಚ್ಛೆಯಿದ್ದರೆ ಮೊದಲು ಅಂತರ್ಜಾತಿ ವಿವಾಹ ಆದವರಿಗೆ ವಿಶೇಷ ಮೀಸಲಾತಿ ನೀಡಲಿ ಅದಾಗದಿದ್ದರೆ ಮೀಸಲಾತಿ ಜಾರಿಯಾಗುವವರೆಗೂ ಕೂಡಲೇ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಿ ಅವರ ಅಭಿವೃದ್ಧಿಯ ಕಡೆಗೂ ಗಮನ ಹರಿಸಲಿ.
ಇಡೀ ಸಮಾಜ ನೀರೆರೆದು ಪೋಷಿಸುತ್ತಿರುವ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವ ಅಂತರ್ಜಾತಿ ವಿವಾಹಿತರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದರ ಮೂಲಕ ಸರ್ಕಾರ ಈ ಸಮುದಾಯಕ್ಕೆ ಗೌರವ ಸೂಚಿಸಲಿ.
0 ಪ್ರತಿಕ್ರಿಯೆಗಳು