ನಾ ದಿವಾಕರ
ಚಂದಿರನ ಅಂಗಳ
ಸುಂದರವಾಗಿದೆ
ಮಲಗುಂಡಿಯ ತಳ
ಭೀಕರವಾಗಿದೆ ;
ನವಗ್ರಹದ ಕೂಟ
ಮುಕ್ಕಾಗಿದೆ
ಕುಂಡಲಿಗಳ ಆಟ
ಮಂಕಾಗಿದೆ ;
ವಿಜ್ಞಾನದ ಹೆಜ್ಜೆಗಳು
ಲಂಬವಾಗಿವೆ
ಅಜ್ಞಾನದ ಕೂಪಗಳು
ಆಳವಾಗಿವೆ ;
ಜ್ಞಾನವಾಹಕ ತೇರು
ವಿಕ್ರಮನಲ್ಲಿದೆ
ಅಂಧಕಾರದ ಬೇರು
ಪೃಥ್ವಿಯಲ್ಲಿದೆ ;
ಮನುಜನಿಲ್ಲದ ನೌಕೆ
ವ್ಯೋಮದಲ್ಲಿದೆ
ಮಾನವತೆಯ ನೌಕೆ
ಸೆರೆಮನೆಯಲ್ಲಿದೆ ;
ಸಂಭ್ರಮದ ಘೋಷ
ಪರದೆಯಲ್ಲಿದೆ
ಬೆತ್ತಲಾದವರ ನೋವು
ಎದೆಯಾಳದಲ್ಲಿದೆ !
ReplyForward |
0 ಪ್ರತಿಕ್ರಿಯೆಗಳು