ನಾ ದಿವಾಕರ
ಹುಟ್ಟು-ಸಾವಿನ ಸೂಕ್ಷ್ಮ ಎಳೆಯೊಳಗೂ
ಗುಟ್ಟಾದ ಒಳಬಿರುಕುಗಳಿರಬಹುದು
ಕ್ರಮಿಸುವ ಹಾದಿಯುದ್ದಕೂ ಭೇದಿಸುವ
ಭಾವಾಸ್ತ್ರಗಳ ಬತ್ತಳಿಕೆಗಳಂತೂ ಇವೆ;
ಮಾತು-ಮೌನದ ಮುಖಾಮುಖಿಯಾದಾಗ
ಆಂತರ್ಯದಲೆಗಳು ಭೋರ್ಗರೆದೀತು
ಅನ್ಯತೆಯ ಅನನ್ಯ ಅನುಸಂಧಾನದ ಗಳಿಗೆಯಲಿ
ಒಡಲ ಒಳಪದರಗಳು ಪಲ್ಲವಿಸುತ್ತವೆ;

ಬೇಕು-ಬೇಡಗಳ ಕೊಡುಕೊಳ್ಳುವಿಕೆಯಲ್ಲಿ
ಸಂಬಂಧಗಳು ಸರಕುಗಳಾಗಲು ಸಾಧ್ಯ
ನಾ-ನೀ … ನೀ-ನಾ… ಹುಟುಕಾಟದ ನಡುವೆ
ಸಣ್ಣ ಕಂದಕಗಳು ಪಾತಾಳಗಳಾಗುತ್ತವೆ;
ಬೆಸೆವ ಪರಮಾಣುಗಳು ಎಸೆಯುವಂತಾದಾಗ
ಸೇತುವೆಗಳೂ ಕ್ಷಯಿಸಿ ಸೊರಗುತ್ತವೆ
ಸವೆದು ಅಳಿಸಿಹೋದ ಹೆಜ್ಜೆ ಗುರುತುಗಳು
ಮಸಣ ಮೌನದ ಸೆರೆಯಾಗುತ್ತವೆ!
0 ಪ್ರತಿಕ್ರಿಯೆಗಳು