ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’

ನಾ ದಿವಾಕರ

**

ಬಹಳ ವರ್ಷಗಳ ಹಿಂದಿನ ಒಂದು ಪ್ರಸಂಗ. ಬಹುಶಃ 1989. ನನ್ನೂರಿನಲ್ಲಿದ್ದಾಗ (ಬಂಗಾರಪೇಟೆ) ಸ್ನೇಹಿತನೊಬ್ಬ ಗಂಡುಮಗುವಿನ ತಂದೆಯಾಗಿದ್ದ. ಅವನನ್ನು ಅಭಿನಂದಿಸಲು ನನ್ನ ಸೋದರನೊಡನೆ ಹೋದೆ. ಈ ನನ್ನ ಸೋದರ ಉತ್ಕಟ ಕನ್ನಡಾಭಿಮಾನಿ, ಅಂದರೆ ಇತರ
ಯಾವುದೇ ಭಾಷೆಯನ್ನೂ ಪೂರ್ತಿಯಾಗಿ ಕಲಿಯುವ ಇಚ್ಛೆ ಇಲ್ಲದವ ಎನ್ನಬಹುದು. ಅಂಗಡಿಯಲ್ಲಿ ಕುಳಿತಿದ್ದ ಗೆಳೆಯನನ್ನು ಕಂಡೊಡನೆಯೇ
ನನ್ನ ಸೋದರ “ಈದ್‌ ಮುಬಾರಕ್‌ ಜೀ” ಎಂದು ಅಭಿನಂದಿಸಿದ. “ಕ್ಯಾ ಜೀ ಆಜ್‌ ಕೌನ್‌ ಸಾ ಈದ್‌ ಹೈ?” ಎಂಬ ಗೆಳೆಯನ ಅಚ್ಚರಿಯ ಮಾತಿಗೆ ಕೂಡಲೇ ಸ್ಪಂದಿಸಿದ ನನ್ನ ಸೋದರ “ಸಾರಿ ಅಷ್ಫಾಖ್‌ ಭಾಯ್‌, ಈದಿದ್ದಕ್ಕೆ ಮುಬಾರಕ್‌ ”ಎಂದಾಗ ಅವನ ನಗು ಕಣ್ಣೀರಿನಲ್ಲಿ ಕೊನೆಯಾಗಿತ್ತು. (ಹಸುಗಳು ಕರು ಹಾಕಿದಾಗ ಈಯುವುದು ಎನ್ನುತ್ತಾರೆ). ಹೀಗೆ ಪ್ರತಿಯೊಂದು ಮಾತಿನಲ್ಲೂ ನಗೆಚಿಮ್ಮಿಸುವ ಒಂದು ವ್ಯಕ್ತಿತ್ವದ ನನ್ನ ಸೋದರ ನಾಗರಾಜ, ಅಂತಿಮ ನಗೆ ಬೀರಿ ಚಿರಶಾಂತಿಗೆ ಜಾರಿ ಇಂದಿಗೆ 23 ವರ್ಷಗಳು ಕಳೆದವು .

ಅವನು ಹಾಸ್ಯ ಚಟಾಕಿಯ ಶೂರ ಆಗಿರಲಿಲ್ಲ. Constructed Jokes ಅವನಿಗೆ ಗೊತ್ತೇ ಇರಲಿಲ್ಲ. ಆದರೆ ಅವನ ಐದು ಮಾತುಗಳಲ್ಲಿ ಒಂದು ಉಳಿದವರಲ್ಲಿ ನಗೆ ಉಕ್ಕಿಸುತ್ತಿತ್ತು. ಅವನೂ ನನ್ನ ಜೊತೆಯೇ ಕೆನರಾ ಬ್ಯಾಂಕ್‌ ಸೇರಿದ್ದ. ದಾವಣಗೆರೆ ಮಂಡಿಪೇಟೆ ಶಾಖೆಯಲ್ಲಿ ಮೊದಲ ಮಹಡಿಯಲ್ಲಿ ಅವನ ಟೇಬಲ್. ನೆಲ ಮಹಡಿಯಲ್ಲಿದ್ದ ಅವನ ಸಹೋದ್ಯೋಗಿಯೊಬ್ಬರು (ಮಹಿಳೆ ಎಂದು ನೆನಪು) ಏನನ್ನೋ ಕೇಳಲೆಂದು ಇಂಟರ್‌ ಕಾಮ್‌ ಮೂಲಕ ಕರೆ ಮಾಡಿದರು. ಸಂಭಾಷಣೆ ಹೀಗಿತ್ತು.
“ನಾಗರಾಜ್‌ ಹೇಗಿದ್ದೀರಿ? ನಿಮ್ಮಿಂದ ಒಂದು ಕೆಲಸ ಆಗಬೇಕಿತ್ತು, ಅರ್ಜೆಂಟಾಗಿದೆ,”
“ಅರ್ಜೆಂಟಾಗಿದ್ರೆ ಆ ಕೆಲಸ ಮುಗಿಸಿ ಫೋನ್ ಮಾಡಬಾರದೇ? ಎಲ್ಲಿಂದ ಮಾತಾಡ್ತಿದೀರಿ?”
“ಕೆಳಗಿನಿಂದ ಮಾತಾಡ್ತಿದೀನಿ ನಾಗರಾಜ್‌ , ತಮಾಷೆ ವಿಷಯ ಅಲ್ಲ.”
“ಈ ಅಭ್ಯಾಸ ಯಾವಾಗ್ಲಿಂದ ಶುರು ಮಾಡ್ಕೊಂಡ್ರೀ?”
ಅಷ್ಟೇ ಸಂಭಾಷಣೆ ಮತ್ತೊಂದು ನಗುವಿನಲ್ಲಿ ಸಮಾಪ್ತಿಯಾಗಿತ್ತು.

ಅಶ್ಲೀಲ ಎನಿಸದ, ಅಸಭ್ಯ ಎನಿಸದ, ನೋವುಂಟು ಮಾಡದ ಮಾತುಗಳ ಮೂಲಕವೇ ಒಂದು ರೀತಿಯಲ್ಲಿ ಅಣಕಿಸುವ/ನಗೆಯುಕ್ಕಿಸುವ
ಮಾತುಗಳು ಅವನಿಂದ ಪುಂಖಾನುಪುಂಖವಾಗಿ ಹೊರಬೀಳುತ್ತಿದ್ದವು. ಇಂತಹ ನೂರಾರು ಪ್ರಸಂಗಗಳು ನೆನಪಿನ ಭಂಡಾರದಲ್ಲಿ ದಾಖಲಾಗಿವೆ.
ವಿಶೇಷ ಎಂದರೆ ಅವನು ಜೋರಾಗಿ ನಕ್ಕಿದ್ದನ್ನು ನಾನು ಕಂಡೇ ಇಲ್ಲ. ಒಮ್ಮೆ ನನ್ನ ಅಕ್ಕನ ಮನೆಯಲ್ಲಿದ್ದಾಗ ಅವಳ ಗೆಳತಿಯ ಮಗಳು ಮನೆಗೆ ಬಂದಳು. ಮೊದಲ ಬಾರಿ ಸೀರೆ ಉಟ್ಟ ಸಂಭ್ರಮ ಅವಳದು. ಇವನು ಸುಮ್ಮನಿರಬಾರದೇ! “ಏನೇ ಪುಟ್ಟಿ ಇವತ್ತು ಸೀರೆ ಉಟ್ಟು ಬಂದಿದೀಯಾ?” ಎಂದು ಕೇಳಿದ. ಆ ಹುಡುಗಿ ಏನು ಹೇಳಿಯಾಳು “ಮುಂದೆ ಉಡಬೇಕಾಗುತ್ತಲ್ವಾ ಅಂಕಲ್‌?” ಎನ್ನುವಷ್ಟರಲ್ಲೇ ಅವಳ ಮಾತನ್ನು ಮೊಟಕುಗೊಳಿಸಿದ ಇವನು “ಸೀರೆ ಹಿಂದೇನೂ ಉಡಬೇಕಮ್ಮಾ ಇಲ್ಲಾಂದ್ರೆ ಚೆನ್ನಾಗಿರಲ್ಲ.” ಎಂದ ಕೂಡಲೇ ಆ ಹುಡುಗಿ ನಗು ತಾಳಲಾರದೆ ಕೋಣೆ ಸೇರಿಕೊಂಡಿದ್ದಳು. ಇಂತಹ ಹಲವು ಪ್ರಸಂಗಗಳಿಗೆ ಸಾಕ್ಷಿಯಾದ ನನ್ನ ಸೋದರ ನನಗಿಂತ ಒಂದುವರ್ಷ ಹಿರಿಯ.

ಚಿಕ್ಕಂದಿನಲ್ಲಿ ಲವ-ಕುಶ ಎಂದೇ ನಮ್ಮಿಬ್ಬರ ಅಸ್ಮಿತೆ. ಸದಾ ನಗಿಸುತ್ತಲೇ ಇದ್ದ ಅವನಿಗೆ ಹೃದಯದಲ್ಲಿ ಒಂದು ರಂಧ್ರ ಇತ್ತು. (VSD Patient) ಪ್ರಸಿದ್ಧ ಹೃದ್ರೋಗ ತಜ್ಞರೂ ಸಹ ಅವನ ಆಯಸ್ಸು 40 ಮೀರುವುದಿಲ್ಲ ಎಂದು ಖಚಿತವಾಗಿ ಹೇಳಿಬಿಟ್ಟಿದ್ದರು. ವಿಶೇಷ ಎಂದರೆ ಅವನಿಗೂ ಅದು ಗೊತ್ತಿತ್ತು. ಒಮ್ಮೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿದ್ದ ಸಿಂಧಿ ಆಸ್ಪತ್ರೆಯಲ್ಲಿ ಅವನಿಗೆ Echocardiogram ಮಾಡಿಸಲು ಹೋಗಿದ್ದೆವು.
ಎಂದಿನಂತೆ ಕಾಯಬೇಕಾಯಿತು. ಮೂಲೆಯ ಕೋಣೆ ಬಾಗಿಲ ಮೇಲೆ ಒಂದು ಬೋರ್ಡ್ ಹೀಗಿತ್ತು “Generator Room No Admission.” ನಾನು ಪೇಪರ್‌ ಓದುತ್ತಾ ಕುಳಿತಿದ್ದೆ ನರ್ಸ್ ಒಬ್ಬರು ಇವನನ್ನು ಕರೆದೊಯ್ಯಲು ಬರುವ ವೇಳೆಗೆ ಇವನು “ಏ ದಿವಿ ನೋಡೋ “Administrator Room No Generation.” ಎಂದು ಆ ಬೋರ್ಡ್ ತೋರಿಸಿದಾಗ ಬಂದಿದ್ದ ನರ್ಸ್ ನಗು ತಡೆಯಲಾರದೆ
ಒಳಗೆ ಹೋಗಿ, ಅರ್ಧ ಗಂಟೆಯ ನಂತರ ಇವನನ್ನು ಕರೆದೊಯ್ದಳು.

ಬ್ಯಾಂಕಿಗೆ ಸೇರಿದಾಗಲೇ ಅವನಿಗೆ ತನ್ನ ಆಯಸ್ಸು 40 ಎಂದು ತಿಳಿದಿತ್ತು. ಡಾ.ರಮೇಶ್‌ ಎಂಬ ಹೃದ್ರೋಗ ತಜ್ಞರು ಹೇಳಿಬಿಟ್ಟಿದ್ದರು.
ಅವರ ಅಭಿಪ್ರಾಯ ಪಡೆದು ನಮ್ಮ ಫ್ಯಾಮಿಲಿ ಡಾಕ್ಟರ್‌ ಬಳಿ ಈ ವಿಚಾರ ಮಾತನಾಡುವಾಗ ನನ್ನ ಮಾತುಗಳೆಲ್ಲವೂ ಕಣ್ಣೀರಿನಲ್ಲಿ ಮುಳುಗಿಹೋಗಿದ್ದವು. ಮಾತೇ ಬರದಂತಾಯಿತು. ಅಳುತ್ತಲೇ ನಮ್ಮ ಫ್ಯಾಮಿಲಿ ವೈದ್ಯರ ಬಳಿ ವಿಷಯ ಹೇಳಿದೆ. ಇವನನ್ನು ಒಳಗೆ ಕರೆದಾಗ
ಅವನ ಮುಖದಲ್ಲಿ ಗಾಬರಿಯಾಗಲೀ, ಖೇದವಾಗಲೀ, ಬೇಸರವಾಗಲೀ ಇರಲಿಲ್ಲ. “ಏನಯ್ಯಾ ಹೇಗಿದ್ದೀಯ?” ವೈದ್ಯರ ಪ್ರಶ್ನೆಗೆ ಅವನ ಉತ್ತರ ಮೌನವಾಗಿತ್ತು. ಆ ಮೌನದ ಹಿಂದೆ ಆತಂಕವೇ ಇತ್ತೋ, ಭೀತಿಯೇ ಇತ್ತೋ ಇಂದಿಗೂ ನನಗೆ ಅರ್ಥವಾಗಿಲ್ಲ. ಕೆಲಹೊತ್ತು ಉಭಯಕುಶಲೋಪರಿ ಆದ ಮೇಲೆ “ನನಗೂ ಹೃದಯ ಇದೆ ಅಂತ confirm ಆಯ್ತು ಭಾವ, ಒಂದು ತೂತು extra ಇದೆ ಅಷ್ಟೆ. (ಅವರನ್ನು ನಾವು ಭಾವ ಎಂದೇ ಕರೆಯುತ್ತಿದ್ದುದು)” ಅಂದಾಗ ಗಂಭೀರ ರೂಪಿ ವೈದ್ಯರೂ ನಗುತ್ತಾ ಸುಮ್ಮನಾಗಬೇಕಾಯಿತು.

ದಾವಣಗೆರೆಯಲ್ಲಿ ಒಮ್ಮೆ ಬ್ಯಾಂಕ್‌ ಮೂಲಕ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಇಬ್ಬರೂ ಆಡುತ್ತಿದ್ದೆವು. ಅವನಿಗೆ ಓಡಿದರೆ
ಏದುಸಿರು ಬರುತ್ತಿತ್ತು. ಹಾಗಾಗಿ close in fielding ಮಾತ್ರ ಆಗುತ್ತಿತ್ತು. ಅವನು ಬ್ಯಾಟ್‌ ಮಾಡುವಾಗ ನಾನು Runner ಆಗಿರುತ್ತಿದ್ದೆ.
ಎಡಚರ ಅಂದರೆ ಕಮ್ಯುನಿಸ್ಟ್‌ ಅಲ್ಲ, ಎಡಗೈವೀರ. ಪಂದ್ಯ ಶುರುವಾಗುವ ಮುನ್ನ ಉದ್ಘಾಟನೆಗಾಗಿ ಬಂದ ಅವನ ಶಾಖೆಯ ಸೀನಿಯರ್‌
ಮೇನೇಜರ್‌ (ಕೆ.ಆರ್.‌ ಲಿಂಗಪ್ಪ-ಈಗ ನಿವೃತ್ತ) “ರೀ ನಾಗರಾಜ್‌ , ದಿವಾಕರ್‌ ನಿಮ್ಮ ಬ್ರದರ್‌ ಅಂತ ಗೊತ್ತೇ ಇರಲಿಲ್ಲ ರೀ , “I thought you are relatives”ಎಂದರು. ಇವನು ಕೂಡಲೇ “ಹೌದಾ ಸರ್‌, ಈಗಲೂ ರಿಲೇಟೀವೇ.” ಎಂದಾಗ ಎಂದೂ ನಗದ ಆ ಮೇನೇಜರ್‌ ನಕ್ಕು ಸುಸ್ತಾಗಿದ್ದರು.

ಅವನನ್ನು ನೆನಪಿಸಿಕೊಳ್ಳುವುದೆಂದರೆ ಇಂತಹ ನೂರಾರು ಪ್ರಸಂಗಗಳೇ ನೆನಪಿನಂಗಳದಿಂದ ಹೊರಬರುತ್ತವೆ. ಹೃದಯದಲ್ಲಿದ್ದ ಒಂದು
ರಂಧ್ರ ಅವನ ಬದುಕನ್ನು ಕಸಿದುಕೊಂಡಿತ್ತು. ಕೆನರಾಬ್ಯಾಂಕಿಗೆ ಸೇರುವಾಗ ಅವನಿಗೆ ವೈದ್ಯಕೀಯ ಪ್ರಮಾಣ ಪತ್ರ ಕೊಡಬೇಕಿತ್ತು. ಇರುವ
ಸಮಸ್ಯೆಯನ್ನೇ ನಮೂದಿಸಿದರೆ ಬ್ಯಾಂಕಿನವರು ಬಹುಶಃ ನಿರಾಕರಿಸುತ್ತಿದ್ದರೋ ಏನೋ ಗೊತ್ತಿಲ್ಲ. ನಮಗಂತೂ ಆತಂಕವಿತ್ತು. ನಮ್ಮಿಬ್ಬರ
ನೌಕರಿ ಏಳು ಜನರ ಕುಟುಂಬದ ಆಧಾರ ಸ್ತಂಭವಾಗಬೇಕಿತ್ತು. ಬ್ಯಾಂಕ್‌ ಸೂಚಿಸಿದ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಹೋಗಿ ಕೊಂಚ ಅನುಕೂಲಕರವಾದ Medical certificate ನೀಡುವಂತೆ ಕೋರಿಕೊಂಡೆವು. ಅವರು ಸ್ಪಷ್ಟವಾಗಿ ನಿರಾಕರಿಸಿಬಿಟ್ಟರು. ಅವರಿಗೆ ನಮ್ಮ
ಹೀನಾಯ ಸ್ಥಿತಿಯನ್ನು ಮನದಟ್ಟು ಮಾಡಲು ಹರಸಾಹಸ ಮಾಡಿದೆವು. ಕೊನೆಗೆ ಅವರು “He can perform clerical duties.” ಎಂದು ಅರ್ಥ ಬರುವಂತೆ ಪ್ರಮಾಣಪತ್ರ ನೀಡಿದರು.

ಅವರು ಹೀಗೆ ಪ್ರಮಾಣ ಪತ್ರ ನೀಡಲು ಕಾರಣವೂ ಇತ್ತು. “ಸರ್‌ ನೀವು ಬರೆದು ಕೊಡುವ ಹಾಳೆ ನನಗಿಂತಲೂ ಹೆಚ್ಚು ಕಾಲ ಇರುತ್ತೆ , ಕೊಡಿ ಸರ್‌ ಪರವಾಗಿಲ್ಲ”ಎಂಬ ಇವನ ಮಾತುಗಳು ಬಹುಶಃ ಆ ವೈದ್ಯರ ಅಂತಃಕರಣವನ್ನು ತಟ್ಟಿತ್ತು ಎನಿಸುತ್ತದೆ. ಬೆನ್ನು ತಟ್ಟಿ ಕೊಟ್ಟು ಕಳಿಸಿದರು. ಅವರ ಕಣ್ಣಂಚಿನ ಹನಿ ನನಗೆ ಇನ್ನೂ ನೆನಪಿದೆ. ಹೀಗೆ ಅಣ್ಣ ನಾಗರಾಜನ ಬದುಕು ಸಾವಿನ ನಿರೀಕ್ಷೆಯಲ್ಲೇ ಸಾಗುತ್ತಿದ್ದರೂ ಅವನ ಲವಲವಿಕೆ, ಲಘು ಹಾಸ್ಯ, ನಗೆಚಟಾಕಿ, ಕೆಲವೊಮ್ಮೆ ವ್ಯಂಗ್ಯ ಎನಿಸಿದರೂ ನೋವುಂಟುಮಾಡದ ಮಾತುಗಳು ಇವೆಲ್ಲದರ ನಡುವೆ ಅವನು 17 ವರ್ಷ ಬ್ಯಾಂಕ್‌ ಸೇವೆಯನ್ನೂ ಮುಗಿಸಿದ್ದ. ಒಮ್ಮೆ ಬಂಗಾರಪೇಟೆ ಶಾಖೆಯಲ್ಲಿದ್ದಾಗ ಬೇಗ್ (ಅವರ ಪೂರ್ಣ ಹೆಸರು ಮರೆತಿದ್ದೇನೆ) ಹೆಸರಿನ ಗ್ರಾಹಕರೊಬ್ಬರನ್ನು ಮೇನೇಜರ್‌ ಇವನಿಗೆ ಪರಿಚಯಿಸಿದರು. ತಲೆತಗ್ಗಿಸಿ ಕೆಲಸ ಮಾಡುತ್ತಿದ್ದ ಇವನ ಬಳಿ ಬಂದು “ನಾಗರಾಜ್‌ ಇಲ್ಲಿ ನೋಡಿ ಬೇಗ್ ಬಂದಿದ್ದಾರೆ.” ಎಂದರು. ಇವನು ಎದ್ದು ನಿಂತು ಹ್ಯಾಂಡ್‌ ಶೇಕ್‌ ಮಾಡಿ “ಯಾಕೆ ಸರ್‌ ನಿಧಾನಕ್ಕೇ ಬರಬಹುದಿತ್ತಲ್ಲ?” ಎಂದಾಗ ಆ ಗ್ರಾಹಕರಿಗೂ ನಗು ತಡೆಯಲಾಗಲಿಲ್ಲ.

ಮತ್ತೋರ್ವ ಗ್ರಾಹಕರು ಯಂತ್ರಗಳ ಬಿಡಿಭಾಗಗಳನ್ನು ತಯಾರಿಸುವ ಘಟಕ ನಡೆಸುತ್ತಿದ್ದರು. ಅವರು ಸ್ವತಃ ಪರಿಚಯಿಸಿಕೊಳ್ಳುತ್ತಾ , “ಸರ್‌ ನನ್ನದೊಂದು ಫ್ಯಾಕ್ಟರಿ ಇದೆ. Srinivasa engineering works” ಎಂದು ಹೇಳಿದ ಕೂಡಲೇ ಇವನ ಉತ್ತರ “ ಗೊತ್ತಾಯ್ತು ಸರ್‌, “Srinivasa engineering seldom works” ಎನ್ನಬೇಕೇ ? ಹೀಗೆ ತನ್ನೊಳಗೆ ಒಂದು ಮಾರಣಾಂತಿಕ ಲೋಪ ಇದೆ ಎಂಬ ಅರಿವು ಇದ್ದುಕೊಂಡೇ ಅವನು ಜೀವನ ಸವೆಸಿದ್ದು ಇಂದಿಗೂ ನನಗೆ ಅಚ್ಚರಿಯೇ. ಎಷ್ಟೋ ಬಾರಿ ಮಳೆಯಲ್ಲಿ ನೆಂದಾಗ ಅವನ ಇಡೀ ದೇಹಭಾರವನ್ನು ನನ್ನ ಹೆಗಲ ಮೇಲೆ ಹೇರಿಕೊಂಡು ನಡೆಸಿದ್ದೂ ಇದೆ. ದೂರ ನಡೆದರೆ ಸುಸ್ತಾಗಿ ಬಿಡುತ್ತಿದ್ದ. ಅವನ ಎದೆಬಡಿತದ ಸದ್ದು ಎರಡು-ಮೂರು ಅಡಿ ದೂರಕ್ಕೂ ಕೇಳಿಸುತ್ತಿದ್ದು. ಕೆಲಕಾಲ ಕುಳಿತು ಸುಧಾರಿಸಿಕೊಳ್ಳುತ್ತಿದ್ದ. ಇಡೀ ವಿದ್ಯಾಭ್ಯಾಸವನ್ನು ಇಬ್ಬರೂ ಒಂದೇ ಶಾಲೆಗಳಲ್ಲಿ ಮಾಡಿದ್ದರಿಂದ ಅವನ ಬಗ್ಗೆ ಎಚ್ಚರ ವಹಿಸುವ ಜವಾಬ್ದಾರಿಯೂ ನನ್ನದಾಗಿತ್ತು.

ಇಬ್ಬರೂ ಹೈದರಾಬಾದ್‌ಗೆ ದೊಡ್ಡಣ್ಣನನ್ನು ನೋಡಲು ಹೋದಾಗ ನನ್ನ ಒಂದು ಹೆಗಲು ಮೂರ್ನಾಲ್ಕು ಲಗೇಜ್‌ಗೆ ಆದರೆ ಮತ್ತೊಂದು ಅವನ ಕೈಗಳಿಗೆ ಆಸರೆಯಾಗುತ್ತಿತ್ತು. ಅಲ್ಲಿ ಮೆಕ್‌ಡೋವೆಲ್ಸ್‌ನಲ್ಲಿ ಕೆಲಸದಲ್ಲಿದ್ದ ದೊಡ್ಡಣ್ಣ ಬಂದು ಪಿಕ್‌ ಮಾಡುವವರೆಗೂ ಸಮಯ ಕಳೆಯುವ ಸಮಸ್ಯೆ ಎದುರಾಯಿತು. ಯಾವುದೋ ಒಂದು ಥಿಯೇಟರ್‌ಗೆ ನುಗ್ಗಿದೆವು. ಟಿಕೆಟ್‌ ಪಡೆಯಬೇಕಿತ್ತು. ಕನ್ನಡ ಹೊರತಾಗಿ ಇತರ ಎಲ್ಲ ಭಾಷೆಗಳನ್ನೂ ಅರೆಬರೆ ಮಾತನಾಡುತ್ತಿದ್ದ ಇವನು ಸುಮ್ಮನಿರಲಾರದೆ ಕೌಂಟರ್‌ಗೆ ಹೋಗಿ “ರೆಂಡು ಬಜೇಕೋ ಟಿಕೆಟ್‌ ದೇತಾರಾ” ಎಂದು ಕೇಳಿದ. ಅಲ್ಲಿದ್ದ ಸಿಬ್ಬಂದಿ ತಬ್ಬಿಬ್ಬಾಗಿಹೋದರು. ನಿಮಗೆ ಏನು ಬೇಕು ಎಂದು ತೆಲುಗಿನಲ್ಲೇ ಕೇಳಿದರು . ನಾನು ಇವನ ಮಾತನ್ನು Decipher ಮಾಡಬೇಕಾಯಿತು. ‘ರೆಂಡು’ ಅಂದರೆ ತೆಲುಗಿನಲ್ಲಿ ಎರಡು, ‘ಬಜೆ’ ಅಂದರೆ ಉರ್ದುವಿನಲ್ಲಿ ಗಂಟೆ. ಟಿಕೆಟ್‌ ಇಂಗ್ಲಿಷ್‌, ‘ದೇತಾರಾ’ ಅಂದರೆ ಹಿಂದಿಯ ದೇ, ಕೊನೆಯ ಪದ ಹಿಂದಿ ತೆಲುಗು ಮಿಶ್ರಣ ತೆಲುಗಿನಲ್ಲಿ ಇಸ್ತಾರ ಎಂದರೆ ಕೊಡುತ್ತೀರಾ? ಎಂದರ್ಥ.

ಇಂತಹ ಪ್ರಸಂಗಗಳಿಗೆ ಕೊನೆ ಮೊದಲಿಲ್ಲ. ಕೊನೆ ಹಾಡಿದ್ದು13 ಫೆಬ್ರವರಿ 2001 ನಡು ರಾತ್ರಿ ಅವನು ಚಿರನಿದ್ರೆಗೆ ಜಾರಿದಾಗ.
ಇನ್ನೊಂದು ಪ್ರಸಂಗವನ್ನು ಹೇಳಲೇಬೇಕು. 1983 ರಲ್ಲಿ ಬ್ಯಾಂಕ್‌ ಟೆಸ್ಟ್‌ ಬರೆದಿದ್ದರೂ ನೌಕರಿಯ ಭರವಸೆ ಇಲ್ಲದೆ ಇಡೀ ಬೆಂಗಳೂರನ್ನು
ಕೆಲಸಕ್ಕಾಗಿ ಇಬ್ಬರೂ ಅಂಡಲೆಯುತ್ತಿದ್ದ ಕಾಲ. ಒಂದು ದಿನ ಸಂಜೆ ಏಳೂವರೆ ಅಷ್ಟೊತ್ತಿಗೆ ಸುತ್ತಾಡಿ ಹೊರಟಾಗ ಕೈಯ್ಯಲ್ಲಿದ್ದುದು ಎರಡು
ರೂ ಮಾತ್ರ. ಪ್ರಸನ್ನ ಚಿತ್ರಮಂದಿರದ ಬಳಿ ಒಂದು ಬೇಕರಿಯಲ್ಲಿ ಎರಡು ಬನ್‌ ಕೊಂಡು ತಿಂದು, ಅಲ್ಲಿಂದ ಬಸವೇಶ್ವರ ನಗರದವರೆಗೂ
ನಡೆದೆವು. ಮಲಗಲು ಒಂದು ಸೋಪ್‌ ತಯಾರಿಕೆ ಘಟಕದಲ್ಲಿ ಜಾಗ ಕೊಟ್ಟಿದ್ದರು, ಯಾರೋ ಗೆಳೆಯರು. ಅಲ್ಲಿ ಬಿದ್ದುಕೊಳ್ಳಲು (ಮಲಗುವುದು ಎನ್ನಲಾಗುವುದಿಲ್ಲ) ಇದ್ದುದು ಬಿಚ್ಚಿ ಹರಡಿದ ರಟ್ಟಿನ ಬಾಕ್ಸ್‌ಗಳು.ಅ (Carton boxes) ಅಲ್ಲೊಂದು ದೊಡ್ಡ ಒಲೆ, ಸೋಪ್‌ ಬೆರೆಸುವ ದೊಡ್ಡ ಬಾಣಲೆ, ಗೋವಿನ ಕಬ್ಬು, ಚೆಲ್ಲಾಡಿದ ಬೂದಿ, ಕೆಂಡ ಮೂರು-ನಾಲ್ಕು ಅಡಿ ದೇಹ ಚಾಚುವ ಜಾಗ. ಹೊಟ್ಟೆಯಂತೂ ಖಾಲಿ, ಅಲ್ಲೇ ಒರಗಿದೆವು. ಒಂದು ಪುಟ್ಟ ನಾಯಿಮರಿ ಒಳಗೆ ಬಂತು, ಬೂದಿಯನ್ನು ಕೆದಕಲು ಮುಂದಾಯಿತು. ಏನು ತಿಂದಿತೋ ವಿಲವಿಲನೆ ಒದ್ದಾಡಿ ಥಟ್ಟನೆ ಸತ್ತುಹೋಯಿತು. ಅದನ್ನು ಹೊರಗೆ ಸಾಗಿಸುವ ಬಗ್ಗೆ ನನ್ನ ಚಿಂತೆ. ಆದರೆ ಇವನ ಬಾಯಿಂದ ಹೊರಟ ಮಾತು “ಲೋ ದಿವಿ, ನಮಗೂ ಒಂದು ದಿನ ಇದೇ ಗತಿ ಬರಬೋದಲ್ವಾ? ಏನಂತ ಹೇಳುವುದು. ಒಂದೆರಡು ಕಂಬನಿಯನ್ನು ನಗು ಮರೆಸಿತ್ತು.

ಹೀಗೆ ಹುಟ್ಟಿದಾಗಿನಿಂದ ಲವ-ಕುಶರಂತೆ ಇದ್ದ ನಮ್ಮ ಬಾಂಧವ್ಯಕ್ಕೂ ಒಂದು ಕೊನೆ ಎದುರಾಗಿತ್ತು. ಅದಕ್ಕಾಗಿ ಒಬ್ಬ ಮಂಥರೆ ರೂಪಿ ಬರಬೇಕಾಯಿತು. ತೆಳ್ಳಗಿನ ಗೋಡೆ ನಮ್ಮ ದಶಕಗಳ ಸೋದರ ಬಾಂಧವ್ಯವನ್ನೆಲ್ಲಾ ಒಂದೇ ಏಟಿಗೆ ನುಂಗಿ ಹಾಕಿತ್ತು. ನಂತರದ ನನ್ನ ಬದುಕು
ಬೇರೆ. ಹಸಿವು, ಬಡತನ, ಉಡುಪು ಹೀನತೆ, ಸೂರಿಲ್ಲದ ದಿನಗಳು, ದಿನಗಟ್ಟಲೆ ಉಪವಾಸ ಇವೆಲ್ಲದರಲ್ಲೂ ನನ್ನ ಜೀವಕ್ಕೆ ಜೀವವಾಗಿ ನಿಂತ
ಅವನಿಗೆ ಏನನಿಸಿತೋ ಗೊತ್ತಿಲ್ಲ. ಅವನ ಬದುಕು ಮುಖ್ಯ ಎನಿಸಿರಬೇಕು. ಅವನ ಸೂಕ್ಷ್ಮಮತಿಯೂ ವೈದ್ಯಕೀಯ ಸಲಹೆಯನ್ನು ಲೆಕ್ಕಿಸದೆ
ವಿವಾಹವಾಗುವ ನಿರ್ಧಾರವನ್ನು ಬದಲಿಸಲಾಗಲಿಲ್ಲ. ಸಾವಿನ ನಿರೀಕ್ಷೆಯಲ್ಲಿರುವವರಿಗೆ ಹೀಗಾಗುತ್ತದೆ. ಒಂದೋ ಎಲ್ಲವನ್ನೂ ತೊರೆದು
ವಿರಾಗಿಗಳಾಗುವುದು ಅಥವಾ ದಕ್ಕಬೇಕಾದ್ದನ್ನು ಇರುವಷ್ಟು ದಿನಗಳಲ್ಲೇ ದಕ್ಕಿಸಿಕೊಳ್ಳುವುದು. ಅವನು ಆಯ್ಕೆ ಮಾಡಿಕೊಂಡಿದ್ದು ಎರಡನೆಯದನ್ನು.

ಮೂವತ್ತು ವರ್ಷಗಳ ಹಿಂದೆ ಅವನು ಬೆನ್ನಿಗೆ ಇರಿದ ನೋವು ಇಂದೂ ಕಾಡುತ್ತದೆ. ಆದರೆ ವಿಶ್ವಾಸಘಾತುಕತನದ ಒಂದೊಂದು ಹೆಜ್ಜೆಯನ್ನೂ ಮರೆಯುವಂತೆ ಮಾಡುವ, ನಾವು ಒಟ್ಟಿಗೆ ಕಳೆದ ಹಸಿವೆಯ ಅನಾಥ ಬದುಕಿನ ಹೆಜ್ಜೆಗಳು ಅವನನ್ನು ಸದಾ ಆಪ್ತನನ್ನಾಗಿಯೇ ಉಳಿಸುತ್ತದೆ. ಅವನು ಉಕ್ಕಿಸುತ್ತಿದ್ದ ನಗೆಹೊನಲು ಅಸಾಧಾರಣವಾದದ್ದು ಅಷ್ಟೇ ಸ್ಮರಣೀಯವಾದದ್ದು. 23 ವರ್ಷಗಳೇ ಸಂದು ಹೋದವು. ಅವನ ನಂತರ ಇಲ್ಲವಾದ ಬಾಂಧವರ ಪಟ್ಟಿಯೂ ದೊಡ್ಡದಿದೆ. ಎಲ್ಲರೂ ನೆನಪಾಗುತ್ತಾರೆ. ಆದರೆ ನಾಗರಾಜನ ನೆನಪಿನಲ್ಲಿ ಮಿಡಿಯುವ ಕಂಬನಿಯ ಹನಿಗಳಿಗೆ ಅವನ ಹಾಸ್ಯದ ಮಾತುಗಳೇ ಬೊಗಸೆಯಾಗಿ ಅವನನ್ನು ಚಿರಸ್ಮರಣೀಯನನ್ನಾಗಿ ಮಾಡುತ್ತದೆ. ಎಂದೂ ಅವನನ್ನು ಅಣ್ಣ ಎಂದಿಲ್ಲ. ನಾಗಿ ಎಂದಷ್ಟೇ ಅಭ್ಯಾಸ. ಇಂದಿಗೂ ಅಷ್ಟೇ. “ಹೋಗಿ ಬಾ ನಾಗಿ.” ಕಣ್ಣು ಕಂಬನಿಗೂಡಿ ಮಂಜಾಗುವ ಮುನ್ನ ಅಂತಿಮ ಸಲಾಂ.

‍ಲೇಖಕರು Admin MM

February 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

೧ ಪ್ರತಿಕ್ರಿಯೆ

  1. ರತ್ನಾ‌ ಮೂರ್ತಿ

    ಹೃದಯ ದ್ರವಿಸಿ ಕಣ್ಣು ಆರ್ದ್ರವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This