ನಾ ದಿವಾಕರ ಓದಿದ ‘ಬರಿ ಕತೆಯಲ್ಲ’

ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ

ನಾ ದಿವಾಕರ

ಕೆ.ಎಸ್.‌ ಸುಚೇತ ಅವರ “ಬರಿ ಕತೆಯಲ್ಲ ಅಗ್ರಹಾರದ ಕಥನ” ಕೃತಿಯನ್ನು ಓದುತ್ತಾ ಹೋದಂತೆ ಮನದಾಳಕ್ಕೆ ಇಳಿಯುವ ಪಾತ್ರಗಳು, ಸನ್ನಿವೇಶಗಳು ಹಾಗೂ ಆ ಪಾತ್ರಗಳೊಳಗಿನ ವ್ಯಕ್ತಿಚಿತ್ರಣಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತವೆ. ಹಾಗೆಯೇ ಇದೇನು ಕಾದಂಬರಿಯೋ, ಆತ್ಮಕತೆಯೋ, ಬದುಕಿನ ದಿನಚರಿ ಪುಟಗಳಲ್ಲಿ ಬರೆದ ಟಿಪ್ಪಣಿಗಳೋ ಅಥವಾ ಲೇಖಕಿ ತಮ್ಮ ಸವೆದ ಹಾದಿಯನ್ನು ದಾಖಲಿಸುವಾಗ ಕಂಡುಕೊಂಡಂತಹ ಜೀವನದರ್ಶನದ ಭಾವನಾತ್ಮಕ ಸನ್ನಿವೇಶಗಳೋ ಎಂಬ ಜಿಜ್ಞಾಸೆಯೂ ಕಾಡುತ್ತಲೇ ಹೋಗುತ್ತದೆ. ಕೃತಿಯ ಆರಂಭದಲ್ಲಿ ಲೇಖಕಿಯೇ ಹೇಳಿರುವಂತೆ “ಇದು ಕಾದಂಬರಿಯಾದರೂ ಕಾದಂಬರಿಯಲ್ಲ ಹಲವು ವ್ಯಕ್ತಿತ್ವಗಳ ಕಥಾಗುಚ್ಚ” ಎಂಬ ಆತ್ಮವಿಶ್ವಾಸದ ಮಾತುಗಳು ನಿಜವೇನೋ ಎನಿಸುತ್ತದೆ.

ಸಮಾಜಶಾಸ್ತ್ರೀಯ, ಕುಲಶಾಸ್ತ್ರೀಯ, ಮನಃಶಾಸ್ತ್ರೀಯ, ಸ್ತ್ರೀವಾದಿ ನೆಲೆಯ ದೃಷ್ಟಿಕೋನಗಳ ಚೌಕಟ್ಟುಗಳಿಂದ ದಾಟಿ ಈ ಪುಸ್ತಕವನ್ನು ಓದುತ್ತಾ ಹೋದಂತೆ ಇಲ್ಲಿ ಬಿಚ್ಚಿಕೊಳ್ಳುವ ಕಥನಗಳು ಇವೆಲ್ಲವನ್ನೂ ಒಳಗೊಂಡಂತಹ ಒಂದು ಅಕ್ಷರ ಗುಚ್ಚದಂತೆ ಕಾಣುತ್ತದೆ. ಸಾಹಿತ್ಯ ಪ್ರಕಾರಗಳಲ್ಲಿ ನಿಶ್ಚಿತವಾಗಿ ವಿಮರ್ಶಿಸಲ್ಪಡುವ ಕೆಲವು ಬೌದ್ಧಿಕ ಚೌಕಟ್ಟುಗಳನ್ನು ಭೇದಿಸಿ ತೆರೆದುಕೊಳ್ಳುವ ಈ ಕೃತಿಯ ಕಥಾ ಹಂದರ ಒಂದು ಸಮಾನ ಎಳೆಯನ್ನು ಅನುಸರಿಸಿ ಆದಿಯಿಂದ ಅಂತ್ಯದವರೆಗೆ ವಿಸ್ತರಿಸುವುದೂ ಇಲ್ಲ. ಅಥವಾ ಕೆಲವು ವ್ಯಕ್ತಿಗಳು ಮುಖ್ಯ ಪಾತ್ರಗಳಾಗಿ ಕಂಡುಬಂದರೂ ಕಥನದ ಉದ್ದಕ್ಕೂ ಅವರ ಇರುವಿಕೆಯನ್ನು ಗುರುತಿಸಲೂ ಆಗುವುದಿಲ್ಲ. ಹತ್ತಾರು ವ್ಯಕ್ತಿತ್ವಗಳನ್ನು ಹಲವಾರು ಸನ್ನಿವೇಶಗಳಲ್ಲಿ ಪಾತ್ರಧಾರಿಗಳನ್ನಾಗಿ ಮಾಡಿ, ತಾವು ಕಂಡ ಬದುಕಿನ ಒಂದು ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಲೇಖಕಿ ಸುಚೇತಾ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ.

ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ೧೯೬೦-೭೦ರ ದಶಕವನ್ನು ಹಾದು ಬಂದ ಯಾರಿಗೇ ಆದರೂ ಭಾರತೀಯ ಸಮಾಜದೊಳಗಿನ ಸಾಂಸ್ಕೃತಿಕ ವೈಪರೀತ್ಯಗಳ ಪರಿಚಯ ಒಂದಲ್ಲಾ ಒಂದು ರೀತಿ ಆಗಿರುತ್ತದೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನಂತರ ಆರಂಭಿಕ ವರ್ಷಗಳಲ್ಲಿ ಸುಪ್ತವಾಗಿದ್ದ ಸಾಂಪ್ರದಾಯಿಕ ಸಮಾಜದ ತಲ್ಲಣಗಳು ಹಾಗೂ ಈ ಸಮಾಜದಿಂದ ಬಹುಮಟ್ಟಿಗೆ ಹೊರಗುಳಿದಿದ್ದ ತಳಸಮುದಾಯಗಳ ತುಮುಲಗಳು ಒಮ್ಮೆಲೇ ಸ್ಪೋಟಿಸಿ ಹೊರಬಂದಿದ್ದು ಈ ದಶಕಗಳಲ್ಲೇ. ಹಾಗಾಗಿ ಆ ಅವಧಿಯಲ್ಲಿ ತಮ್ಮ ಬದುಕಿನ ಹಾದಿಯನ್ನು ಕಟ್ಟಿಕೊಂಡಂತಹ ಸಂವೇದನಾಶೀಲ ಮನಸುಗಳಿಗೆ ನಮ್ಮ ಸಮಾಜದಲ್ಲಿ ಅಂರ‍್ಗತವಾಗಿರುವ (ಇಂದಿಗೂ ಜೀವಂತಿಕೆಯಿಂದಿರುವ) ಪಿತೃಪ್ರಧಾನತೆ, ಜಾತಿ ಭೇದ, ಮತ ಭಿನ್ನತೆ, ಲಿಂಗ ತಾರತಮ್ಯ, ಕುಲ ಶ್ರೇಷ್ಠತೆ, ಊಳಿಗಮಾನ್ಯ ದರ್ಪ ಇವೆಲ್ಲವೂ ಸಹ ಸವಾಲುಗಳಾಗಿಯೇ ಕಾಡಿರಲು ಸಾಧ್ಯ. ಈ ಅನುಭವಾತ್ಮಕ ನೆಲೆಯಲ್ಲೇ ನಾವು ನಡೆದುಬಂದ ಹಾದಿಯತ್ತ ಅಥವಾ ಸವೆಸಿದ ಬದುಕಿನತ್ತ  ಹಿಂದಿರುಗಿ ನೋಡಿದಾಗ ಅನುಭಾವದ ನೆಲೆಯಲ್ಲಿ ಹಲವು ಆಯಾಮಗಳ ಜೀವನ ದರ್ಶನಗಳು ತೆರೆದುಕೊಳ್ಳುತ್ತವೆ.

“ಬರಿ ಕತೆಯಲ್ಲ-ಅಗ್ರಹಾರದ ಕಥನ” ಕೃತಿಯ ಲೇಖಕಿ ಶ್ರೀಮತಿ ಸುಚೇತ ಇದೇ ಅನುಭವ-ಅನುಭಾವದ ವಿಶಿಷ್ಟ ಚಿತ್ರಣಗಳನ್ನು ತಮ್ಮ ಈ ಕೃತಿಯ ಮೂಲಕ ಸಾದೃಶಗೊಳಿಸಿದ್ದಾರೆ. ಸ್ವಾನುಭವದ ನೆಲೆಯಲ್ಲಿ ರಚಿತವಾಗಿರುವ ಈ ಕಥನದ ಶೈಲಿ ವಿಭಿನ್ನ ಎನಿಸಿದರೂ, ಪ್ರತಿಯೊಂದು ಅಧ್ಯಾಯದಲ್ಲೂ ಓದುಗರ ಮುಂದೆ ಒಂದು ಹೊಸ ಜೀವನ ದರ್ಶನ ತೆರೆದುಕೊಳ್ಳುತ್ತಾ ಹೋಗುವುದು ಇದರ ವೈಶಿಷ್ಟ್ಯ.  ಒಂದು ರೀತಿಯಲ್ಲಿ ಆತ್ಮಕತೆ ಎಂದೇ ಹೇಳಬಹುದಾದ ಕೃತಿಯುದ್ದಕ್ಕೂ ಬಂದು ಹೋಗುವ, ಕೊನೆಯವರೆಗೂ ಉಳಿಯುವ, ಇಣುಕಿ ನೋಡುವ ಪಾತ್ರಗಳು ಹಾಗೂ ಆ ಪಾತ್ರಗಳು ಪ್ರತಿನಿಧಿಸುವ ನಿರ್ದಿಷ್ಟ ಚೌಕಟ್ಟಿನ ಸಾಂಪ್ರದಾಯಿಕ ಸಮಾಜದ ವಿಭಿನ್ನ ಮಜಲುಗಳು ಕೆಲವೊಮ್ಮೆ ಓದುಗರನ್ನು ಆಳವಾದ ಚಿಂತೆಗೆ ದೂಡಿದರೆ ಇನ್ನು ಕೆಲವೊಮ್ಮೆ ʻಇದು ಹೀಗೂ ಆಗಿರಲಿಕ್ಕುಂಟೇ!ʼ ಎಂಬ ಮೌನ ಉದ್ಗಾರಕ್ಕೂ ಕಾರಣವಾಗುತ್ತದೆ.

ಭಾರತದ ತುತ್ತತುದಿಯಲ್ಲಿರುವ ಕಾಶ್ಮೀರದಿಂದ ದಕ್ಷಿಣದ ಪಶ್ಚಿಮಘಟ್ಟಗಳ ಸೆರಗಿನಲ್ಲಿ ಆಶ್ರಯ ಪಡೆದು ತಮ್ಮ ಬದುಕು ಸವೆಸುವ ಕಾಶ್ಮೀರಿ ಬ್ರಾಹ್ಮಣರ ಕುಟುಂಬಗಳು, ವಲಸೆ ಸಮುದಾಯವಾಗಿ ಕಂಡುಕೊಂಡ ಸುಭದ್ರ ನೆಲೆ ಮತ್ತು ತನ್ಮೂಲಕ ಚಾಚಿಕೊಂಡ ಸಾಂಪ್ರದಾಯಿಕ-ಸಾಂಸ್ಕೃತಿಕ ನೆಲೆಗಳು ಹೇಗೆ ಇಲ್ಲಿಯೇ ಬೇರುಬಿಟ್ಟಿರುವ ಇತರ ಎರಡು ಬ್ರಾಹ್ಮಣ ಸಮುದಾಯಗಳೊಂದಿಗೆ ಮುಖಾಮುಖಿಯಾಗುತ್ತವೆ ಎನ್ನುವುದನ್ನು ನಿರೂಪಿಸುತ್ತಲೇ, ಸ್ಥಳೀಯವೇ ಆದ ಹೊಯ್ಸಳ ಕರ್ನಾಟಕ ಮತ್ತು ಬಯಲುಸೀಮೆಯ ಮಾಧ್ವ ಕುಟುಂಬಗಳು ಎಲ್ಲಿಂದಲೋ ಬಂದ ಒಂದು ಸಮುದಾಯದೊಡನೆ ಮುಖಾಮುಖಿಯಾಗುತ್ತಾ, ಅನುಸಂಧಾನ ಮಾಡುತ್ತಾ ತಮ್ಮೊಳಗಿನ ವೈರುಧ್ಯಗಳನ್ನೂ ಹೊರಗೆಡಹುತ್ತಾ, ಸಂಸ್ಕೃತಿ ಎನ್ನುವ ವಿಶಾಲಾರ್ಥದ ನೆಲೆಯ ಮತ್ತೊಂದು ಮುಖವಾಡವನ್ನೂ ತೋರ್ಪಡಿಸಿಕೊಳ್ಳುವ ರೀತಿಯಲ್ಲಿ ಇಡೀ ಕೃತಿಯು ತೆರೆದುಕೊಳ್ಳುತ್ತದೆ.

ಯಾವುದೇ ಸಮಾಜಶಾಸ್ತ್ರದ ವಿದ್ಯಾರ್ಥಿಗೆ ಈ ಕೃತಿಯು ಉಪಯುಕ್ತವಾಗಿ ಕಾಣವುದಾದರೆ ಅದಕ್ಕೆ ಕಾರಣ ಕೃತಿಯುದ್ದಕ್ಕೂ ಎದುರಾಗುವ ಸ್ತ್ರೀ ಪಾತ್ರಗಳು ಹಾಗೂ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯರು ಎದುರಿಸಬಹುದಾದ ಎಲ್ಲ ರೀತಿಯ ಸವಾಲು ಮತ್ತು ಸಂಕೀರ್ಣತೆಗಳನ್ನು ಹೊರಗೆಡಹುವ ಆ ವ್ಯಕ್ತಿತ್ವಗಳು. ಉಚ್ಛ ಅಥವಾ ಪರಮೋಚ್ಛ ಎಂದು ಬೆನ್ನುತಟ್ಟಿಕೊಳ್ಳುವ ಸಂಸ್ಕೃತಿಯ ಚೌಕಟ್ಟಿನೊಳಗೂ ನಿತ್ಯಬದುಕಿನಲ್ಲಿ ಮಹಿಳೆ ಎದುರಿಸಬಹುದಾದ ಅಪಮಾನ, ತಾರತಮ್ಯ, ದೌರ್ಜನ್ಯ ಇವೆಲ್ಲವನ್ನೂ ಈ ಕೃತಿಯಲ್ಲಿ ವಿಭಿನ್ನ ಸನ್ನಿವೇಶಗಳಲ್ಲಿ ಕಾಣಬಹುದು. ಆಧುನಿಕೀಕರಣಕ್ಕೊಳಗಾಗಿ ಉತ್ಕೃಷ್ಟತೆಯ ಸೋಗಿನಲ್ಲಿ ಬದುಕುವ ಕುಟುಂಬಗಳಲ್ಲೂ ಸಂಪ್ರದಾಯ-ಪರಂಪರೆ ಹಾಗೂ ಶತಮಾನದ ನಂಬಿಕೆಗಳು ಹೇಗೆ ಪುರುಷಾಧಿಪತ್ಯವನ್ನು ಪೋಷಿಸುತ್ತವೆ ತನ್ಮೂಲಕ ಹೇಗೆ ಮಹಿಳೆಯನ್ನು ಶೋಷಣೆಗೊಳಪಡಿಸುತ್ತವೆ ಎನ್ನುವುದನ್ನು ಈ ಕೃತಿಯಲ್ಲಿನ ಸನ್ನಿವೇಶಗಳು, ವ್ಯಕ್ತಿತ್ವಗಳು ಹಾಗೂ ಬದುಕಿನ ಮಾರ್ಗಗಳು ನಿರೂಪಿಸುತ್ತಾ ಹೋಗುತ್ತವೆ.

ಭಾರತೀಯ ಸಮಾಜದಲ್ಲಿ ಜಾತಿ ಗುಂಪುಗಳನ್ನು ಏಕರೂಪಿಯಾಗಿ ನೋಡುವ ಒಂದು ಪರಿಪಾಠ ಇರುವುದಾದರೂ ಸಮಾಜದ ಒಳಹೊಕ್ಕು ನೋಡಿದಾಗ, ಪ್ರತಿಯೊಂದು ಜಾತಿಯಲ್ಲೂ ಸಂಪ್ರದಾಯ-ಆಚರಣೆ-ಶ್ರದ್ಧಾ ನಂಬಿಕೆಗಳಿಂದ ವಿಘಟಿತವಾದ ಪ್ರತ್ಯೇಕತೆಯ ಗೂಡುಗಳನ್ನು ಗುರುತಿಸುತ್ತಾ ಹೋಗಬಹುದು. ಸಮಾಜಶಾಸ್ತ್ರೀಯ ನೆಲೆಯಲ್ಲಿ ಇದನ್ನು ಉಪಜಾತಿಗಳ ಸ್ವರೂಪದಲ್ಲಿ ಗುರುತಿಸಬಹುದಾದರೂ, ವಾಸ್ತವ ಬದುಕಿನಲ್ಲಿ ಕೆಲವೊಮ್ಮೆ ಈ ಪ್ರತ್ಯೇಕತೆಯ ನೆಲೆಗಳೇ ವಿಭಜಕರೇಖೆಗಳಾಗಿ ಪರಿಣಮಿಸುವುದನ್ನು ವರ್ತಮಾನದ ಸಂದರ್ಭದಲ್ಲೂ ನೋಡುತ್ತಲೇ ಬಂದಿದ್ದೇವೆ. ತಮ್ಮ “ಬರಿ ಕತೆಯಲ್ಲ…” ಕೃತಿಯಲ್ಲಿ ಲೇಖಕಿ ಸುಚೇತಾ ಅವರು ಹರಡುತ್ತಾ ಹೋಗುವ ಕಥನಗಳಲ್ಲಿ ಈ ವೈವಿಧ್ಯತೆಗಳನ್ನು ಕಾಣುವುದಷ್ಟೇ ಅಲ್ಲದೆ, ಇದರಿಂದ ಮನುಜ ಸಂಬಂಧಗಳಲ್ಲಿ ಸೃಷ್ಟಿಯಾಗುವ ಪಲ್ಲಟಗಳು, ಸಂಘರ್ಷಗಳು ಹಾಗೂ ವ್ಯತ್ಯಯಗಳನ್ನೂ, ಅದರೊಳಗಿನ ಸುಪ್ತ ಕ್ರೌರ್ಯವನ್ನೂ ಕಾಣಬಹುದು. ಹಾಗೆ ನೋಡಿದರೆ ಲೇಖಕಿ ಹೇಳಿರುವಂತೆ ಇದು ಬರಿ ಕತೆಯಲ್ಲ ಹಾಗೆಯೇ ಬರಿ ಕಥನವೂ ಅಲ್ಲ. ಹಾಗಾದರೆ ಏನು ಎಂಬ ಪ್ರಶ್ನೆಗೆ ಉತ್ತರ: “ಇದು ಯಾವುದೇ ವ್ಯಕ್ತಿಯ ಜೀವನದಲ್ಲಿ ಕಾಣಬಹುದಾದ ಹೆಜ್ಜೆಗುರುತುಗಳು”. 

ಕಥನದ ನಿರೂಪಕಿಯಾಗಿ ಸಚ್ಚು ತೆರೆಯುತ್ತಾ ಹೋಗುವ ಅಗ್ರಹಾರದ ಬದುಕಿನ ವಿವಿಧ ಮಜಲುಗಳು ಶತಮಾನದ ಹಿಂದಿನ ಸನ್ನಿವೇಶದ್ದೇ ಆದರೂ ಸಹ, ವರ್ತಮಾನದ ಸಮಾಜದಲ್ಲೂ ಇಂತಹುದೇ ಪಾತ್ರವೈವಿಧ್ಯತೆಗಳನ್ನು ನಮ್ಮ ಸುತ್ತಲಿನ ಬದುಕಿನಲ್ಲಿ ಕಾಣಲು ಸಾಧ್ಯವಿದೆ. ಈ ಆಧುನಿಕ ಕಾಲದಲ್ಲೂ ಸಹ ಒಂದು ಕುಟುಂಬ ಹೊಸ ಬಡಾವಣೆಗೋ, ಅಪಾರ್ಟ್‌ಮೆಂಟ್‌ಗೋ ಅಥವಾ ಊರಿಗೋ ಹೋಗಿ ನೆಲೆಸಬೇಕೆಂದರೆ ಆ ಕುಟುಂಬವನ್ನು ಮೊಟ್ಟಮೊದಲು ಕಾಡುವುದೆಂದರೆ ಅಲ್ಲಿನ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಜಿಜ್ಞಾಸೆ. ʻನಮ್ಮದೇʼ ಪರಿಸರವನ್ನು ಹುಡುಕಿ ವಸತಿ ಬಯಸುವ ಮನಸ್ಸುಗಳೂ ನಮ್ಮ ನಡುವೆ ಇನ್ನೂ ಹೇರಳವಾಗಿವೆ. ಇಲ್ಲಿ ಪರಿಸರ ಎಂದರೆ ಸಂಪ್ರದಾಯ-ಆಚರಣೆ-ಆಚಾರವಿಚಾರಗಳಷ್ಟೇ ಎನ್ನುವುದು ನಿಸ್ಸಂದೇಹ ಸತ್ಯ.  ಮೇಲ್ಜಾತಿಗಳಲ್ಲಿ                         ʻತಮ್ಮ ಸಂಪ್ರದಾಯಸ್ಥರʼ ನಡುವೆಯೇ ನೆಲೆಸುವ ಇಚ್ಚೆಯೂ ಪ್ರಧಾನವಾಗಿ ಕೆಲಸ ಮಾಡುತ್ತದೆ. ಬೆಂಗಳೂರಿನ ಅತ್ಯಾಧುನಿಕ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲೂ ಈ ಪವೃತ್ತಿ ಢಾಳಾಗಿ ಕಾಣಬಹುದು. ಹೀಗಿರುವಾಗ ಶತಮಾನದ ಹಿಂದಿನ ಒಂದು ಸಮಾಜದಲ್ಲಿ ವಿಭಿನ್ನ ಸಂಪ್ರದಾಯಗಳ ನಡುವೆ ಸಂಘರ್ಷ ಏರ್ಪಡುವುದು ಅತಿರೇಕ ಎನಿಸುವುದಿಲ್ಲ.

ನಾವು ಭಾವಿಸಿಕೊಂಡು ಬಂದಿರುವ ಸಮಾಜದ ಅಂತರಂಗದಲ್ಲಿ ಇರಬಹುದಾದ ಅಗೋಚರ, ಸೂಕ್ಷ್ಮ ಹಾಗೂ ಸರಿಹೊಂದಲಾಗದ ಜಿಜ್ಞಾಸೆಗಳನ್ನು ಹೊಸ ಸಂಘರ್ಷಗಳು ಹೇಗೆ ಹುಟ್ಟುಹಾಕುತ್ತದೆ? ಬದುಕು ಸವೆಸುವ ಹಾದಿಯಲ್ಲಿ ಓರ್ವ ಹೆಣ್ಣು ಇದನ್ನು ಹೇಗೆ ನಿಭಾಯಿಸುತ್ತಾಳೆ? ತನ್ನ ಹೆಣ್ತನದ ಗತ್ತು, ಘನತೆ, ಗೌರವ ಹಾಗೂ ಸ್ವಾಭಿಮಾನವನ್ನು ಕಾಪಾಡಿಕೊಂಡೇ ಕೊನೆಯವರೆಗೂ ತನ್ನ ನಿಲುಮೆಗೆ ನಿಲುಕಲಾರದ ಗಂಡನೊಡನೆ ಬಾಳ್ವೆ ನಡೆಸುವ ಸುಶಮ್ಮಳನ್ನು ಇವತ್ತಿನ ಸಮಾಜದಲ್ಲೂ ಕಾಣಲು ಸಾಧ್ಯವಿದೆಯಲ್ಲವೇ? ಅದೇ ರೀತಿ ಪುರುಷಾಹಮಿಕೆಯ ಅಪರಾವತಾರವಾಗಿರುವ ಹರಿಶ್ಚಂದ್ರರಾಯನಂತಹ ಒಬ್ಬ ಗಂಡ ತನ್ನ ವಿವಿಧ ರೂಪಗಳಲ್ಲಿ ನಮ್ಮ ಸುತ್ತಲಿನ ಸಮಾಜದ ಕುಟುಂಬಗಳಲ್ಲಿ ಇರಲೂ ಸಾಧ್ಯವಲ್ಲವೇ? ಸರಿಸುಮಾರು ನಲವತ್ತಕ್ಕೂ ಹೆಚ್ಚು ಪಾತ್ರಧಾರಿಗಳ ನಡುವೆ ಕೆಲವೇ ವ್ಯಕ್ತಿತ್ವಗಳು, ಉದಾಹರಣೆಗೆ ಭೀಮಣ್ಣ, ತುಂಗಕ್ಕ ಮತ್ತು ಸುಶಮ್ಮ ಹಾಗೂ ನಿರೂಪಕಿ ಸಚ್ಚು, ಮಾತ್ರವೇ ಒಂದು ಸಂವೇದನಾಶೀಲ ಜಗತ್ತಿನ ಪ್ರತಿನಿಧಿಗಳಾಗಿ ಕಾಣುತ್ತಾರೆ. ಉಳಿದಂತೆ ಎಲ್ಲ ಪಾತ್ರಗಳಲ್ಲೂ ಒಂದಲ್ಲಾ ಒಂದು ರೀತಿಯ ಅಪಸವ್ಯಗಳನ್ನು ಕಾಣುತ್ತೇವೆ.

ಹಾಗೆ ನೋಡಿದಾಗ ಇದು ಶತಮಾನದ ಹಿಂದಿನ ಕಥನ ಎನಿಸುವುದೇ ಇಲ್ಲ. ಆರಂಭದಲ್ಲಿ ನಾನು ಹೇಳಿದಂತೆ ೧೯೬೦-೭೦ರ ದಶಕವನ್ನು ಹಾದುಬಂದಿರುವ ಯಾವುದೇ ವ್ಯಕ್ತಿ, ವಿಶೇಷವಾಗಿ ಮಹಿಳೆ, ತನ್ನ ಸವೆದ ಹಾದಿಯತ್ತ ತಿರುಗಿ ನೋಡಿದರೆ, ಈ ಕೃತಿಯಲ್ಲಿ ಕಂಡುಬರುವ ಸನ್ನಿವೇಶಗಳನ್ನು ಮರುಕಲ್ಪಿಸಿಕೊಳ್ಳಬಹುದು. ಸಾಂಪ್ರದಾಯಿಕ ಸಮಾಜದಲ್ಲಿ ಬೆಳೆದುಬಂದವರಿಗೆ ಇದು ಇನ್ನೂ ಹೆಚ್ಚು ಆಪ್ತತೆಯಿಂದ ತೆರೆದುಕೊಳ್ಳುತ್ತದೆ. ಇವತ್ತಿನ ಅತ್ಯಾಧುನಿಕ ಸಮಾಜದಲ್ಲೂ ಢಾಳಾಗಿ ಕಾಣಬಹುದಾದ ಅಸೂಕ್ಷ್ಮ ತರತಮಗಳ ವಾತಾವರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರ ಬೇರುಗಳನ್ನು ನಾವು ಬೆಳೆದುಬಂದ ಸಾಂಪ್ರದಾಯಿಕ ಸಮಾಜದಲ್ಲೇ ಗುರುತಿಸಲೂ ಸಾಧ್ಯ. ಆದರೆ ಅದನ್ನು ಗುರುತಿಸಿ ಒಪ್ಪಿಕೊಳ್ಳುವ ದಾರ್ಷ್ಟ್ಯ ಇರಬೇಕಷ್ಟೇ. ವ್ಯಕ್ತಿಗತವಾಗಿಯಾದರೂ, ಏಕಾಂತದಲ್ಲಿರುವಾಗಲಾದರೂ ಈ ವ್ಯತ್ಯಯಗಳ ನಡುವೆಯೇ ಬೆಳೆದಿರುವ ಒಂದು ಸಮಾಜವನ್ನು ನಾವು ನಿರಾಕರಿಸಲಾಗುವುದಿಲ್ಲ.

ಶ್ರೀಮತಿ ಸುಚೇತ ತಮ್ಮ ಜೀವನದ ನೆನಪಿನ ಗಣಿಯಲ್ಲಿ ಇದ್ದಿರಬಹುದಾದ ವಿಸ್ಮೃತಿಯ ಕಣಜಗಳನ್ನೆಲ್ಲಾ ಬರಿದು ಮಾಡಿ, ತಾವು ಸವೆದುಬಂದ ಹಾದಿಯಲ್ಲಿ ಕಂಡಂತಹ ಬದುಕಿನ ಚಿತ್ರಣವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕೃತಿಯ ಓದಿನ ಕೊನೆಯ ಹಂತ ತಲುಪಿದಾಗ ಹರಿಶ್ಚಂದ್ರರಾಯ ಎಂಬ ಬೇಜವಾಬ್ದಾರಿ ಅಪ್ಪ ಅಚ್ಚೊತ್ತಿ ನಿಲ್ಲುವಂತೆಯೇ ಸುಶಮ್ಮ ಎಂಬ ಕರ್ತವ್ಯಪ್ರಜ್ಞೆಯ ವಾತ್ಸಲ್ಯಮಯಿ ಅಮ್ಮನೂ ನಿಲ್ಲುವುದು ಈ ಕೃತಿಯ ಹಿರಿಮೆ ಎಂದೇ ಹೇಳಬೇಕು. ಏಕೆಂದರೆ ನಮ್ಮ ವರ್ತಮಾನದ ಸಮಾಜವೂ ಈ ಎರಡೂ  ರೀತಿಯ ವ್ಯಕ್ತಿತ್ವಗಳಿಂದ ಮುಕ್ತವಾಗಿಲ್ಲ. ಒಂದು ರೀತಿಯಲ್ಲಿ ಈ ಎರಡೂ ಪಾತ್ರಗಳು ಸಮಕಾಲೀನ ಸಮಾಜದ ರೂಪಕಗಳಾಗಿ, ಪ್ರತಿಮೆಗಳಾಗಿ ಕಾಣುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ “ಇದು ಬರಿ ಕತೆಯಲ್ಲ ಅಗ್ರಹಾರದ ಕಥನ”  ಒಂದು ಜೀವನ ದರ್ಶನದ ದರ್ಪಣವಾಗಿದ್ದು, ಯಾವುದೇ ಪೂರ್ವಗ್ರಹವಿಲ್ಲದೆ, ಮುಕ್ತ ಮನಸ್ಸಿನಿಂದ ಓದಬೇಕಾದ ಒಂದು ಕೃತಿಯಾಗಿರುತ್ತದೆ.

ಬದುಕಿನ ಸಂಕೀರ್ಣತೆಗಳು ಹಾಗೂ ನಿತ್ಯಜೀವನದ ಸಂಘರ್ಷಗಳ ನಡುವೆ ಒಂದು ನಿರ್ದಿಷ್ಟ ಸಾಮಾಜಿಕ ಚೌಕಟ್ಟಿನೊಳಗೆ, ಸಾಂಪ್ರದಾಯಿಕ ಆವರಣದೊಳಗೆ ಮನುಜ ಸಂಬಂಧಗಳು ಎದುರಿಸಬಹುದಾದ ಸಿಕ್ಕುಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಈ ಕೃತಿ ಮತ್ತೊಂದು ಮಜಲಿನಲ್ಲಿ ಇದೇ ಸಮಾಜವು ಸೃಷ್ಟಿಸುವ ಆತಂಕ, ಹತಾಶೆ, ಕ್ರೌರ್ಯ, ಸಾತ್ವಿಕ ಹಿಂಸೆ, ಮಾನಸಿಕ ತುಮುಲ, ತಲ್ಲಣಗಳನ್ನು ಸಹ ಬಿಚ್ಚಿಡುತ್ತದೆ. ಒಂದು ವಿಶಿಷ್ಟ ಕೃತಿಯನ್ನು ಕನ್ನಡಿಗರ ಮುಂದಿಟ್ಟಿರುವ ಲೇಖಕಿ ಕೆ.ಎಸ್.‌ ಸುಚೇತ ಅಭಿನಂದನಾರ್ಹರು.

‍ಲೇಖಕರು Adminm M

August 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: