ನಾ ದಿವಾಕರ
ಹೆಜ್ಜೆ ಗುರುತುಗಳೆಲ್ಲ ಚದುರಿಹೋಗಿವೆ
ಛಿದ್ರ ಭಾವಗಳ ನೆನಪಿನ ರಾಶಿಯಲಿ
ಅಂತರ್ದೀಪ ನಂದಿ ಹೋಗುವ ಆತಂಕ…
ಮೂಡಿದ ಅಕ್ಷರಗಳ ನಡುವೆ
ಮರುಕಳಿಸುತಿಹ ಹಳೆಯ ಚಹರೆಗಳು;
ಕತ್ತಲ ಅಣಕಿಸುವ ಬೆಳಕಿಂಡಿಗಳು
ಕಾರ್ಗತ್ತಲ ಹಾದಿಬೇಲಿಯ ಮುಳ್ಳುಗಳು
ಸವೆದ ಹಾದಿಯ ಮೈಲಿಗಲ್ಲುಗಳಾಗಿವೆ
ಜೀವಭಾವದ ಘರ್ಷಣೆಯಲಿ
ಶಿಥಿಲವಾದ ಸಂಬಂಧದ ಸೇತುವೆಗಳು;

ಸುಡುವ ಹಣತೆಯ ಬಿಂಬದಲಿ
ಅನಾಥ ತರಗೆಲೆಗಳು ಸಂಭಾಷಿಸುತ್ತಿವೆ
ತೊಗಲಿಗಂಟಿದ ಹೆಗಲ ಹೆಗ್ಗುರುತು
ಹೆಜ್ಜೇನಿನಂತೆ ಕುಟುಕುತ್ತಿರುವಾಗ
ಬತ್ತಿ ಹೋದಂತಿವೆ ವಾತ್ಸಲ್ಯದ ಚಿಲುಮೆಗಳು;
ಎದೆಯ ಚಿತೆಯಲಿ ಬೆಂದ ಭಾವನೆಗಳು
ನಿರ್ವಾತದಲಿ ಪುಟಿದೇಳುವಾಗ
ಕಳೆದು ಹೋದ ಮುಖ ಚಹರೆಗಳಿಗೆ ಅಸ್ತಿತ್ವದ
ಹುಡುಕಾಟ; ದಿಕ್ಕುಗಾಣದ
ಪಯಣದಲಿ ವಿಸ್ಮೃತಿಯ ತುಣುಕುಗಳು!
0 ಪ್ರತಿಕ್ರಿಯೆಗಳು