ನಾ ದಾಮೋದರ ಶೆಟ್ಟಿ ಕಂಡಂತೆ ‘ಕನಸುಗಣ್ಣಿನ ಕಪ್ಪಣ್ಣ’

ಡಾ ನಾ ದಾಮೋದರ ಶೆಟ್ಟಿ

ಖ್ಯಾತ ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ ಅವರಿಗೆ 75 ತುಂಬಿದ ಸಂದರ್ಭದಲ್ಲಿ ‘ಕನಸುಗಣ್ಣಿನ ಕಪ್ಪಣ್ಣ’ ಕೃತಿ ಮಾರ್ಚ್ 4 ರಂದು ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ಈ ಕೃತಿಯ ಪ್ರಧಾನ ಸಂಪಾದಕರಾದ ಡಾ ನಾ ದಾಮೋದರ ಶೆಟ್ಟಿ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿವೆ.

ಕರ್ನಾಟಕದ ಕಲಾ ಜಗತ್ತಿನ ಸರ್ವಾಂತರ್ಯಾಮೀ ಶಕ್ತಿ ಶ್ರೀನಿವಾಸ್‌ ಜಿ.ಕಪ್ಪಣ್ಣ ಅವರಿಗೆ ಎಪ್ಪತ್ತೈದು ವಸಂತಗಳು ತುಂಬಿದಾಗ ಅದನ್ನು ಸಂಭ್ರಮಿಸುವುದು ಅವರಿಗಷ್ಟೇ ಅಲ್ಲ; ಅವರ ಅಭಿಮಾನಿಗಳಾದ ನಮಗೂ ಹೆಮ್ಮೆಯ ಸಂಗತಿ. ಕಲೆ, ಸಾಹಿತ್ಯ ಸಂಸ್ಕೃತಿಗಳಿಗೆ ಸಂಬಂಧ ಪಟ್ಟ ಕರ್ನಾಟಕದ ಹಿರಿಕಿರಿಯ ತಲೆಮಾರಿನ ಸರ್ವರನ್ನೂ ಜೊತೆಗೊಯ್ದು ಕನ್ನಡಾಂಬೆಯನ್ನು ಸ್ಫುರದ್ರೂಪಿಗೊಳಿಸುವ ಕೈಂಕರ್ಯಗೈದ ಮೇರು ವ್ಯಕ್ತಿತ್ವ ಕಪ್ಪಣ್ಣ ಅವರದು. ನಾಗರಿಕ ಸಮಾಜದತ್ತ ಕಣ್ದೆರೆಯಲು ಅವಕಾಶವನ್ನೇ ಪಡೆದಿರದ ನಿಮ್ನವರ್ಗದ ಮಂದಿಯಲ್ಲಿ ಹುದುಗಿದ ಅನರ್ಘ್ಯಕಲಾರತ್ನವನ್ನು ಹೊರತೆಗೆದು ಲೋಕದ ಮುಂದಿರಿಸಿದವರು ಕಪ್ಪಣ್ಣ.

ಅವರ ದೃಷ್ಟಿಯಲ್ಲಿ ಅಮೇರಿಕವೋ ಸಿಂಗಾಪುರವೋ ನಮ್ಮ ʻಒಂಟಿಕೊಪ್ಪಲೋʼ ಎಲ್ಲವೂ ಒಂದೇ. ಈ ಮೂಲಭೂತ ಸತ್ಯದಲ್ಲಿ ಅವರು ಇರಿಸಿಕೊಂಡ ನಂಬಿಕೆಯೇ ಮುಂದೆ ಅವರಿಂದ ಅಸಾಧ್ಯ ಎಂದೆನಿಸಬಹುದಾದ ಕೆಲಸಗಳನ್ನೂ ಸಾಧ್ಯವಾಗಿಸಿತು. ತಮ್ಮ ಮಾತು, ಕೃತಿಗಳ ಮಟ್ಟದಲ್ಲಿ ಯಾವತ್ತೂ ಶ್ರೀಮಂತರಿಗೊಂದು ಬಡವರಿಗೊಂದು ಎಂಬ ತರತಮ ಮಾಡಲೇ ಇಲ್ಲ.

ಶ್ರೀಮಂತರಿಂದ ಬಡವರಿಗೆ ಒಂದಷ್ಟು ಉಪಕಾರವಾಗುವುದಿದ್ದರೆ ಅದನ್ನು ಕೊಡಿಸುವುದು ಹೇಗೆ ಎಂದೂ ಶ್ರೀಮಂತರಷ್ಟೇ ʻಸರ್ವವಿದ್ಯೆʼಯನ್ನು ಬಡವರು, ಕೆಳವರ್ಗದವರು ಪಡೆಯುವುದು ಹೇಗೆ ಎಂಬುದನ್ನು ಸತತ ಯೋಚಿಸುತ್ತಿದ್ದ ಕಪ್ಪಣ್ಣ, ಸಮಾಜದಲ್ಲಿ ತಮ್ಮ ನಿಷ್ಕಲ್ಮಷ ವ್ಯಕ್ತಿತ್ವವನ್ನು ಮೊದಲು ಸ್ಥಾಪಿಸಿದರು. ಬಳಿಕ ತನ್ನ ಧ್ಯೇಯಕ್ಕೆ ಮಿಕ್ಕವರು ಹೊಂದಿಕೊಳ್ಳುವಂತೆ ನೋಡಿಕೊಂಡವರು.

೭೫ರ ಸಂಭ್ರಮವನ್ನು ಆಚರಿಸುವ ಮಾತು ಬಂದಾಗ ನಾವು -ಕಪ್ಪಣ್ಣನವರ ಹಿತೈಷಿಗಳು- ಪುಟ್ಟ ಸಮಿತಿಯೊಂದನ್ನು ರಚಿಸಿ, ಚಟುವಟಿಕೆಯಲ್ಲಿ ತೊಡಗಿದೆವು. ಕಪ್ಪಣ್ಣನವರು ತಮ್ಮ ೭೫ರ ಹುಟ್ಟುಹಬ್ಬವನ್ನು ವಿಭಿನ್ನ ರೂಪದಲ್ಲಿ ಆಚರಿಸುವ ಆಸೆಯುಳ್ಳವರಾಗಿದ್ದರು. ಅದು ಅವರ ಹಬ್ಬವಷ್ಟೇ ಆಗಿರದೆ ಅದನ್ನೊಂದು ನೆಪವಾಗಿಟ್ಟುಕೊಂಡು ಅವರು ಎಲ್ಲೆಲ್ಲಿ ಯಾವ್ಯಾವ ಪ್ರಕಾರಗಳಲ್ಲಿ ದುಡಿದಿದ್ದರೋ ಆಯಾ ಪ್ರಕಾರಗಳಿಗೆ ಸಂಬಂಧಿಸಿದ ಒಂದೊಂದು ಕಾರ್ಯಕ್ರಮವನ್ನು ರಾಜ್ಯದ ಆಯಾ ಭಾಗಗಳಲ್ಲಿ ನಡೆಸುವುದು. ಅಂತೆಯೇ ಕಳೆದೊಂದು ವರ್ಷದಲ್ಲಿ ರಾಜ್ಯದ ಹಲವೆಡೆಗಳಲ್ಲಿ ಕಪ್ಪಣ್ಣ-೭೫ ಕಾರ್ಯಕ್ರಮ ನಡೆಯಿತು.

ಫೆಬ್ರವರಿ ೧೩ ಅವರ ಹುಟ್ಟುದಿನವಾದರೂ ಕಾರ್ಯಕ್ರಮಕ್ಕೆ ನಿಗದಿತ ದಿನಾಂಕದ ಕಟ್ಟುಪಾಡು ಇರಲಿಲ್ಲ. ಸಮಿತಿ ಕೈಹಾಕಿದ ಮತ್ತೊಂದು ಕೆಲಸವೆಂದರೆ ಒಂದು ನೆನಪಿನ ಗ್ರಂಥ ಸಿದ್ಧಗೊಳಿಸುವುದು. ಗ್ರಂಥ ಸಂಪಾದನೆಯ ಜವಾಬ್ದಾರಿಯನ್ನು ನಾನು ಹಾಗೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಕಪ್ಪಣ್ಣನವರ ನೆರೆಯವರೂ ಅವರ ಕಟ್ಟಾಭಿಮಾನಿಯೂ ಆದ ಕೆ. ನಟರಾಜ್‌ ಅವರೂ ವಹಿಸಿಕೊಂಡೆವು. ಲೇಖನಗಳನ್ನು ಆಮಂತ್ರಿಸಲೆಂದು ಕಪ್ಪಣ್ಣನವರ ಹಿತೈಷಿಗಳ ಪಟ್ಟಿ ಮಾಡಹೊರಟೆವು. ಸ್ವಲ್ಪದರಲ್ಲೇ ಗೊತ್ತಾಗಿಬಿಟ್ಟಿತು; ಅದು ಪೂರ್ತಿಮಾಡಲಾಗದ ಕೆಲಸ ಎಂದು. ಅಂತೂ ಅವರ ಬಳಗದಲ್ಲಿ ನಮಗೆ ಕೈಗೆಟಕಿದಷ್ಟು ಮಂದಿಯನ್ನು ಸಂಪರ್ಕಿಸಿದೆವು. ಉಳಿದವರನ್ನು ಸಂಪರ್ಕಿಸಲು ಸಾಧ್ಯವಾಗದ್ದು ಸಂಪಾದಕ ಮಂಡಲಿಯ ತಪ್ಪು ಎಂದೆನಿಸಿದರೂ ಅದು ಆಗದ ಹೋಗದ ಕೆಲಸ ಎಂದುಕೊಂಡೆವು.

ಕಪ್ಪಣ್ಣನವರಿಗೆ ಅರುವತ್ತಾದಾಗ ಸುಂದರ ಪ್ರಕಾಶನವು ʻಕಪ್ಪಣ್ಣ, ರಂಗಾವತರಣ-ಅವರಿವರು ಕಂಡಂತೆʼ ಎಂಬ ಗ್ರಂಥವನ್ನು ಹೊರತಂದಿತ್ತು. ಕರ್ನಾಟಕ ನಾಟಕ ಅಕಾಡೆಮಿಗಾಗಿ ಶಶಿಧರ ಭಾರೀಘಾಟ್‌ ʻಶ್ರೀನಿವಾಸ ಜಿ.ಕಪ್ಪಣ್ಣʼ ಎಂಬ ಕೃತಿಯನ್ನು ಬರೆದುಕೊಟ್ಟಿದ್ದರು. ಬಿ.ಎಸ್.‌ ವಿದ್ಯಾರಣ್ಯ ಅವರ ಸಂಪಾದಕತ್ವದಲ್ಲಿ ಹೊರತರಲಾದ ʻರಂಗಸಂಗತʼ ಎಂಬ ಕೃತಿಯಲ್ಲಿ ಕಪ್ಪಣ್ಣ- ಎಪ್ಪತ್ತು ಪ್ರಕಾಶಮಾನವಾಗಿತ್ತು. ʻಕಡಲಾಚೆಯ ರಂಗಧ್ವನಿʼ ಎಂಬ ಲಕ್ಷ್ಮಣ ಕೊಡಸೆ ಸಂಪಾದಿಸಿದ ಕೃತಿಯಲ್ಲಿ ಕಪ್ಪಣ್ಣನವರ ಜೀವಮಾನ ರಂಗಸಾಧನೆಯ ಕುರಿತು ಸೌಮ್ಯ ಚೇತನ್‌ ಬರೆದಿದ್ದರು.- ಹೀಗೆ ಶ್ರೀನಿವಾಸ್‌ ಜಿ. ಕಪ್ಪಣ್ಣ ಈಗಾಗಲೇ ದಾಖಲೆಗೆ ಸೇರಿಹೋಗಿದ್ದಾರೆ. ಇದೀಗ ಕಪ್ಪಣ್ಣ ಎಪ್ಪತ್ತೈದು ವಸಂತಗಳನ್ನು ಪೂರೈಸಿದ ಹೊತ್ತಿನಲ್ಲಿ ಒಮ್ಮೆ ಸಿಂಹಾವಲೋಕನ ಮಾಡಬೇಕಾದುದು ಹಾಗೂ ಇದುತನಕ ನಡೆದ ದಾಖಲಾತಿಯನ್ನು ಇನ್ನಷ್ಟು ವಿಸ್ತರಿಸುವುದು ಅವರಿಗೂ ಕನ್ನಡ ಸಾಂಸ್ಕೃತಿಕ ಲೋಕಕ್ಕೂ ಅನಿವಾರ್ಯ.

ʻಕಪ್ಪಣ್ಣ ರಂಗಾವತರಣʼ ಕೃತಿಯಲ್ಲಿನ ಕೆಲವು ಲೇಖನಗಳನ್ನು ನಾವು ಅಲ್ಲಿಂದ ಎರವಲು ಪಡೆದಿದ್ದೇವೆ. ಪ್ರಸ್ತುತ ಗ್ರಂಥದಲ್ಲಿ ಅವುಗಳ ಇರುವಿಕೆ ಅಗತ್ಯ. ಗತಿಸಿದ ಹಲವು ರಂಗಕರ್ಮಿಗಳು ಕಪ್ಪಣ್ಣನವರ ಬಗ್ಗೆ ಹೇಳಿದ ಮಾತುಗಳು ಮತ್ತೆ ದೊರಕದೆ ಹೋಗಬಾರದಲ್ಲವೆ? ಸಮಗ್ರವಾಗಿ ಕಪ್ಪಣ್ಣ ಕಣ್ಣೆದುರಿಗೆ ಬರುವುದು ಆವಾಗಲೇ. ಗಿರೀಶ್‌ ಕಾರ್ನಾಡ್‌, ಸಿ ಆರ್.‌ ಸಿಂಹ, ಸಿ. ಅಶ್ವತ್ಥ್‌, ಸೋಮಶೇಖರರಾವ್‌ ಮೊದಲಾದವರು ಕಪ್ಪಣ್ಣನವರ ಜೀವದ ಗೆಳೆಯರು ಅಲ್ಲಿ ದೊರಕಿದರು.

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಕಪ್ಪಣ್ಣನವರ ಬಗ್ಗೆ ಬರೆದ ಮಾತುಗಳು ನಮ್ಮ ಅಭಿನಂದನ ಗ್ರಂಥಕ್ಕೆ ಕಳಶಪ್ರಾಯವಾಗಿರುವುದರಿಂದ ಅದು ಮುನ್ನುಡಿಯ ಮುಡಿಗೇರಿತು. ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ, ಚಿತ್ರಕಲೆ ಮುಂತಾದ ವಿವಿಧ ವಲಯಗಳ ಅನುಭವಿಗಳೆಲ್ಲರೂ ಲೇಖನ ಬರೆದಿದ್ದಾರೆ. ನೂರಾ ಮೂವತ್ತಕ್ಕೂ ಅಧಿಕ ಲೇಖನಗಳಿರುವ ಬೃಹತ್‌ ಸಂಪುಟ ಇದಾಗಿರುವುದರಿಂದ ಒಬ್ಬಬ್ಬರನ್ನೂ ಹೆಸರೆತ್ತಿ ದಾಖಲಿಸುವುದು ಆಗುವ ಬಾಬತ್ತಲ್ಲ. ಅವರೆಲ್ಲರನ್ನು ಸಂಪಾದಕನ ನೆಲೆಯಲ್ಲಿ ಗೌರವಿಸುವೆ. ಹಾಗೆ ನೋಡಿದರೆ ಇಲ್ಲಿನ ಎಲ್ಲ ಲೇಖನಗಳೂ ಹೃದಯದಿಂದ ಬಂದವುಗಳು. ಇಲ್ಲಿರುವುದು ಒಂದು + ಒಂದು ಸಂಬಂಧ. ಕೆಲವೊಮ್ಮೆ ಒಬ್ಬರ ಅನುಭವದಂತೆಯೇ ಇನ್ನೊಬ್ಬರದೂ ಇದ್ದಿರಬಹುದು. ಅಲ್ಲಿಯೂ ಕೆಲವಾದರೂ ಹೊಸ ಹೊಳಹು ಇದ್ದೇ ಇರುತ್ತದೆ. ಕೆಲವರು ನೇಪಥ್ಯದ ಕಪ್ಪಣ್ಣನಂತೆ. ಬರೆದು ಬಲ್ಲವರಲ್ಲ; ಆದರೂ ಹೃದಯದ ಭಾಷೆಯಲ್ಲಿ ಸರಳವಾಗಿ ಬರೆದರು. ಚಾಮರಾಜನಗರದ ನರಸಿಂಹಮೂರ್ತಿ, ನಗಾರಿ ಮಂಜು, ಸವಿತಾ ಗಣೇಶ್‌ ಪ್ರಸಾದ್‌ ಮೊದಲಾದವರು ಕಪ್ಪಣ್ಣನವರನ್ನು ಅವರ ಪಾಲಿನ ದೇವರು ಎಂದುಕೊಂಡಿದ್ದಾರೆ. ಅದ್ಯಾಕೆ ಹಾಗೆ ಬರೆದಿರಿ? ಎಂದು ಪ್ರಶ್ನಿಸಲಿಲ್ಲ.

ಬದುಕಿನ ಕತ್ತಲೆಯಲ್ಲಿ ಹೊಸಬೆಳಕು ಕೊಟ್ಟವರನ್ನು ಇನ್ನು ಹೇಗೆ ಸಂಬೋಧಿಸುತ್ತಾರೆ? ಅಲ್ಲವೆ?
ಕಪ್ಪಣ್ಣ-೭೫ ಆಚರಣೆಯನ್ನು ನಮ್ಮಂತೆ ಕಪ್ಪಣ್ಣನವರ ಸಂಸಾರವೂ ಹೆಮ್ಮೆಯಿಂದ ಸ್ವೀಕರಿಸಿದೆ. ಕಪ್ಪಣ್ಣನವರ ಸಾಧನೆ ಹಂತಹಂತವಾಗಿ ಸಾಹಿತಿಗಳ ಮೂಲಕ, ಕಲಾವಿದರ ಮೂಲಕ, ಕ್ರೀಡಾ ಪಟುಗಳ ಅನಾವರಣಗೊಳ್ಳುತ್ತಿರುವಾಗ ಅವರ ಮನೆಯವರು ಧನ್ಯತೆಯ ಕ್ಷಣಗಳನ್ನು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ಪುತ್ರ ಜಯದೇವ್‌ ಲೇಖನ ಬರೆದು ತನ್ನ ಮನದಿಂಗಿತವನ್ನು ʻthe worldʼ ಎಂದು ಲೋಕವನ್ನು ಕೂಗಿ ಕರೆದು ನಿವೇದಿಸಿದ್ದಾರೆ. ಕಪ್ಪಣ್ಣನವರ ಧರ್ಮಪತ್ನಿ ಲಲಿತಾ ಮೇಡಂ, ಪುತ್ರಿ ಸ್ನೇಹಾ ಹಾಗೂ ಕುಮಾರ ಕಂಠೀರವ ಚಿರಾಯು ʻಕಪ್ಪಣ್ಣ-೭೫ʼ ಎಂಬುದನ್ನು ಒಂದು ಹಬ್ಬದ ರೂಪದಲ್ಲಿ ಮನೆತುಂಬ ಆಚರಿಸಿಕೊಂಡು ಸಂಭ್ರಮ ಪಟ್ಟಿದ್ದಾರೆ.

ಕಪ್ಪಣ್ಣನವರ ಸಾಂಸ್ಕೃತಿಕ ಸಂಸಾರ ಬಲು ದೊಡ್ಡದು. ಒಂದೊಮ್ಮೆ ನೇಪಥ್ಯ ಕಲಾವಿದರಿಗೆ ಮುಖವಿರಲಿಲ್ಲ. ಪರದೆಯ ಹಿಂದಿನವರು ಪರದೆಯ ಮುಂದೆ ಅಗೋಚರರಾಗಿದ್ದೂ ಗೋಚರಿಸುವುದು ಹೇಗೆ? ಎಂಬುದನ್ನು ತಮ್ಮ ಕೈಚಳಕದಿಂದ, ಬುದ್ಧಿಮತ್ತತೆಯಿಂದ ತೋರಿಸಿಕೊಟ್ಟವರು ಕಪ್ಪಣ್ಣ. ಬಳಿಕದ ಪೀಳಿಗೆಯಲ್ಲಿ ಹಲವರು ಬೆಳಕು, ರಂಗಸಜ್ಜಿಕೆ ಮುಂತಾದ ವಲಯಗಳಲ್ಲಿ ಬಹು ಪ್ರಸಿದ್ಧರಾದರು ಎಂಬುದರಲ್ಲಿಯೂ ಕಪ್ಪಣ್ಣನವರ ದೃಶ್ಯಾದೃಶ್ಯ ಪಾತ್ರ ಇದ್ದೇ ಇದೆ. ಪ್ರಸ್ತುತ ಗ್ರಂಥವು ಕಪ್ಪಣ್ಣನವರ ಹಲವು ಮುಖಗಳನ್ನು ಸೆರೆಹಿಡಿಯುವ ಪ್ರಯತ್ನ ಮಾಡಿದೆ. ನಿಜವೆಂದರೆ ಸಾಣೆಹಳ್ಳಿ ಗುರುಗಳು ಹೇಳಿದಂತೆ ಕುರುಡರು ಮುಟ್ಟಿದ ಆನೆಯಂತೆ ಕಪ್ಪಣ್ಣ. ಅವರು ಯಾವಯಾವ ವಲಯದಲ್ಲಿ ಕರ್ತವ್ಯ ನಿಭಾಯಿಸಿದ್ದಾರೋ ಆಯಾ ವಿಭಾಗದ ಅವರ ಒಡನಾಡಿ ಮಿತ್ರರೆಲ್ಲ ಇಲ್ಲಿ ಲೇಖನ ಬರೆದಿದ್ದಾರೆ. ಕಪ್ಪಣ್ಣನವರನ್ನು ವಿಭಜಿಸಿ ಯಾವ್ಯಾವ ವಿಭಾಗಕ್ಕೆ ಹಾಕೋಣ ಎಂಬುದನ್ನು ಹೇಗೆ ಊಹಿಸಲು ಸಾಧ್ಯವಿಲ್ಲವೋ ಹಾಗೆಯೇ ಇಲ್ಲಿ ಅವರ ಕುರಿತು ಲೇಖನ ಬರೆದವರನ್ನೂ ವಿಭಜಿಸಿ ತೋರಿಸಿಲ್ಲ.

ಕಪ್ಪಣ್ಣ ಹೇಗೆ ಚೌ ಚೌ ಬಾತೋ ಹಾಗೆಯೇ ಇಲ್ಲಿನ ಲೇಖನಗಳೂ ಚೌ ಚೌ ಬಾತ್!‌ ನಾವು ಮಾಡಿದ ಕೆಲಸವೆಂದರೆ. ಇಲ್ಲಿನ ಲೇಖನಗಳನ್ನು ಸ್ಥೂಲ ವಿಭಜನೆಗೆ ಒಡ್ಡುವುದು. ಮೊದಲನೆಯ ʻಸಾಹಿತ್ಯ- ಸಂಸ್ಕೃತಿಯ ಕಲರವʼದಲ್ಲಿ ಬರೆದವರೆಲ್ಲರೂ ಕಪ್ಪಣ್ಣನವರು ಯಾವ್ಯಾವ ವಲಯದಲ್ಲಿ ಕೈಂಕರ್ಯ ನಿರ್ವಹಿಸಿದ್ದರೋ ಆ ಎಲ್ಲ ವಲಯಗಳಿಗೆ ಸಂಬಂಧಪಟ್ಟವರು. ಕಪ್ಪಣ್ಣನವರೊಂದಿಗೆ ಒಡನಾಡುತ್ತಾ ಪಡೆದ ಅನುಭವವನ್ನು ಅಕ್ಷರಕ್ಕಿಳಿಸಿದವರು. ಎರಡನೆಯ ಪುಟ್ಟ ವಿಭಾಗ ʻಕವಿಗಳು ಬಂದರು ದಾರಿಕೊಡಿʼ ಎಂಬುದು. ಕಪ್ಪಣ್ಣನವರ ಕುರಿತು ಚಿರಂಜೀವ್‌ ಸಿಂಘ್‌ ಕವನ ಬರೆದಿದ್ದಾರೆ ಎಂದ ಮೇಲೆ ಇನ್ನೇನು? ಅಂತೆಯ ಎಚ್.‌ ಎಲ್.‌ ಪುಷ್ಪಾ, ಮಮತಾ ಸಾಗರ ಮೊದಲಾದವರು ಕಪ್ಪಣ್ಣನವರನ್ನು ಕವನದ ಮೂಲಕ ಕಂಡರಿಸಿಕೊಟ್ಟರು.

ಮೂರನೆಯ ಭಾಗದಲ್ಲಿ ಕೆಲವು ʻದೀರ್ಘ ಕಂಡರಿಕೆʼಯಿವೆ. ಸಂದರ್ಶನಗಳಿವೆ. ಮಲ್ಲಿಕಾರ್ಜುನ ಮಹಾಮನೆ, ನಟರಂಗದ ಧೀರೇಂದ್ರ, ಸಂದರ್ಶಕಿ ಮೀನಾ ಮೈಸೂರು, ಎ ಆರ್‌ ಮಣಿಕಾಂತ್ ಅಲ್ಲಿ ಬರೆದಿದ್ದಾರೆ. ನಾಲ್ಕನೆಯ ಭಾಗವೆಂಬುದು ಇಂಗ್ಲಿಷ್‌ ಲೇಖನಗಳ ಸಂಗ್ರಹ. ʻಬಿಳಿಯರ ಭಾಷೆಯಲ್ಲಿ ಕಪ್ಪಣ್ಣʼ ಎಂಬುದು ಅದರ ಶೀರೋನಾಮೆ. ಕೊನೆಯ ಭಾಗದಲ್ಲಿ ನಮ್ಮ ಜಗತ್ತಿನಿಂದ ನಿರ್ಗಮಿಸಿದ ಕಪ್ಪಣ್ಣನ ಅಭಿಮಾನಿಗಳು ಅಂದು ಅವರಿಗೆ ಅರುವತ್ತಾದ ಕಾಲಘಟ್ಟದಲ್ಲಿ ಬರೆದ ಲೇಖನಗಳು. ಅವುಗಳ ಮೌಲ್ಯ ಗಮನಿಸಲಾಗಿ ಕೆಲವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಅದುವೇ ಇಲ್ಲಿನ ʻಅಳಿದುಳಿದವರುʼ ವಿಭಾಗ. ಕಪ್ಪಣ್ಣನವರ ಅಭಿನಂದನ ಗ್ರಂಥಕ್ಕೆ ಒಂದೆರಡು ಪದಗಳಲ್ಲಿ ಸಮಗ್ರ ಅರ್ಥವನ್ನು ಗ್ರಹಿಸಿ ಹಿಡಿದಿಟ್ಟುಕೊಡಬಲ್ಲ ಶಿರೋನಾಮೆಯೊಂದು ಬೇಕಿತ್ತು. ಅದಕ್ಕಾಗಿ ಬಹುದಿನಗಳ ತನಕ ಹುಡುಕಾಟ ನಡೆಸಿದೆವು.

ಎಚ್.ಎಸ್.‌ವೆಂಕಟೇಶಮೂರ್ತಿಯವರ ಸಲಹೆಯನ್ನೂ ಪಡೆದು ʻಕನಸುಗಣ್ಣಿನ ಕಪ್ಪಣ್ಣʼ ವನ್ನು ಅಂತಿಮಗೊಳಿಸಿದೆವು. ಮುಖಪುಟಕ್ಕಾಗಿ ನವ್ಯೋತ್ತರ ಯೋಚನೆಗಳೊಂದಿಗೆ ವಿಹರಿಸಬಲ್ಲ ಡಾ. ಎಂ. ಎಸ್.‌ ಮೂರ್ತಿ ಸಿಕ್ಕರು. ಮುಖಪುಟವೆಂದರೆ ಹಾಗಿರಬೇಕು ಎಂಬಂತಿದೆ ಅವರ ಕಾಣ್ಕೆ. ಅದಲ್ಲದೆ ಅವರ ಕೆಲವು ಲೈನ್‌ ಸ್ಕೆಚ್ಚುಗಳು ಗ್ರಂಥದ ಅಂದವನ್ನು ಹೆಚ್ಚಿಸಿದುವು. ನೆಳಲು-ಬೆಳಕಿನಾಟ ಮನೆಮಾಡಿದಂತಿದ್ದ ಶ್ರೀಧರ ಮೂರ್ತಿಯವರ ಛಾಯಾಚಿತ್ರಗಳು ಮೂರ್ತಿಯವರ ಚಿತ್ರಕ್ಕೆ ಸ್ಫೂರ್ತಿ ಬೆಸೆಯಿತು. ವ್ಯಂಗ್ಯಚಿತ್ರದಲ್ಲಿ ಖ್ಯಾತನಾಮರಾದ ಪ್ರಕಾಶ್‌ ಶೆಟ್ಟಿ ಕಪ್ಪಣ್ಣನವರನ್ನು ʻವಿರೂಪʼ (ವಿಶೇಷ ರೂಪ)ಗೊಳಿಸಿದರು! ನಮ್ಮ ಜನಪ್ರಿಯ ಹನಿಕವಿ ಡುಂಡಿರಾಜ್‌ ರಂಗಭೂಮಿ ಸಂಬಂಧವಾದ ಫಿಲ್ಲರ್‌ ಗಳನ್ನು ದಯಪಾಲಿಸಿದರು. ದಿವ್ಯಾ ಪ್ರಿಂಟ್ರೋನಿಕ್ಸ್‌ನ ರಾಮಕೃಷ್ಣ ಹಾಗೂ ಗೌತಮಿ ಅಕ್ಕರ ಸೊಗಸಿಗೆ, ಪುಟನೋಟದ ಸೌಂದರ್ಯಕ್ಕೆ ಕಾರಣರಾದರು. ಅದಕ್ಕೆಲ್ಲ ಕಳಶವಿಟ್ಟಂತೆ ಐ ಬಿ ಎಚ್‌ ಪ್ರಕಾಶನದ ಸಂಜಯ ಅಡಿಗರು ತಮ್ಮ ಪ್ರಕಾಶನದ ಮೂಲಕ ಕಪ್ಪಣ್ಣನವರ ಕನಸುಗಣ್ಣುಗಳನ್ನು ಮನಮೋಹಕವಾಗಿ ತೆರೆದು ಕೊಟ್ಟರು.

ಪ್ರಧಾನ ಸಂಪಾದಕನಾಗಿ ನಾನು ಹಾಗೂ ಸಂಪಾದಕರಾಗಿ ಆತ್ಮೀಯ ಮಿತ್ರ ನಟರಾಜ್‌ ಕೊನೆಯ ನಿಮಿಷದ ತನಕ ಲೇಖನಗಳನ್ನು ತರಿಸುವುದರಲ್ಲೂ ತಪ್ಪುಗಳನ್ನು ತಿದ್ದುವುದರಲ್ಲೂ ತಲ್ಲೀನರಾಗಿದ್ದರೂ ಅಲ್ಲಲ್ಲಿ ನಮ್ಮನ್ನು ಸೋಲಿಸಿ ಕೆಲವು ತಾಪತ್ರಯಗಳು ಮೇಲುಗೈ ಸಾಧಿಸಿರಬಹುದು. ಅದಕ್ಕೆ ಕ್ಷಮೆ ನೀಡಿರೆಂದು ಭಿನ್ನವಿಸುತ್ತಾ ಇಂತಹ ಸುಂದರ ಅನುಭವದ ಅವಕಾಶವನ್ನು ಕಲ್ಪಿಸಿಕೊಟ್ಟ ಕಪ್ಪಣ್ಣನವರಿಗೂ ಸಮಿತಿಯ ಎಲ್ಲ ಸದಸ್ಯರಿಗೂ ಕಪ್ಪಣ್ಣನವರ ಅಭಿಮಾನಿ ಬಳಗಕ್ಕೂ ಶಿರಬಾಗುತ್ತೇನೆ. ಕಪ್ಪಣ್ಣನವರ ಸಾಧನೆಯು ಮುಂದಿನ ತಲೆಮಾರಿಗೆ ದಾರಿದೀಪವಾಗಲಿ ಅದಕ್ಕೆ ಈ ಹೊತ್ತಗೆಯೂ ಪೂರಕವಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

March 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: