ದೀಕ್ಷಿತ್ ನಾಯರ್
**
ರಾತ್ರೋರಾತ್ರಿ ಹತ್ತಾರು ಮಿಸ್ಡ್ ಕಾಲ್ ಗಳು ಬರುತ್ತವೆ
ನೀವು ಗೊಣಗಬೇಡಿ, ಶಪಿಸಬೇಡಿ ನಿರ್ಲಕ್ಷಿಸಲೇಬೇಡಿ
ಕನಿಕರದಿಂದ ಒಮ್ಮೆ ಫೋನನ್ನು ಕೈಗೆತ್ತಿಕೊಳ್ಳಿ;
ಅತ್ತ ಕಡೆಯ ದನಿ ರೇಜಿಗೆ ಹುಟ್ಟಿಸುತ್ತದೆ
ಕವಿತೆಗಳನ್ನು ಕಿರುಚಿ ಹೇಳುತ್ತದೆ
ಕರ್ಕಶವಾಗಿ ಹಾಡುತ್ತದೆ
ನೀವು ಸಿಟ್ಟಿಗೇಳಬೇಡಿ ತುಸು ಎದೆಯ ಕದವನ್ನು ತೆರೆದು ಕೂರಿ ;
ಸಾಧ್ಯವಾದರೆ ಸಾಂತ್ವನದ ಮಾತುಗಳನ್ನು ಗಾಳಿಯಲ್ಲಿ ತೂರಿಬಿಡಿ
ಆ ಒಂಟಿ ಜೀವ ಮತ್ತಷ್ಟು ದಿನ ಬದುಕಿಕೊಳ್ಳಲಿ!
ಆ ಕವಿಯನ್ನು ‘ಕಳ್ಳ’ ಎನ್ನದಿರಿ
ನಾವೂ ಕದ್ದಿದ್ದೇವೆ
ನಮ್ಮದೂ ಎಂಜಲು ಕವಿತೆಗಳು ;
ಅವನ ದೌರ್ಬಲ್ಯಗಳನ್ನು ಹೀಯಾಳಿಸಬೇಡಿ
ಅವನ ಅಸಹಾಯಕತೆಯ ಬಗ್ಗೆ ಸಾಲು ಸಾಲು ಒಣ ಕವಿತೆಗಳನ್ನು ಬರೆಯಬೇಡಿ
ನಾವೂ ರಸ್ತೆಯಲ್ಲಿ ಬಿದ್ದು ತುಟಿ ಒಡೆದುಕೊಂಡು ಎದ್ದವರು;
ಅರೆ! ಫೋನು ಒಂದೇ ಸಮನೆ ಮೊರೆಯುತ್ತಿದೆ ಒಮ್ಮೆ ಎತ್ತಿಕೊಳ್ಳಿ
ಜೋರು ಮಾತುಗಳನ್ನು ಆಡಿಬಿಡಿ
ನಾಳೆ ಆ ಜೀವ ಬೀದಿ ಹೆಣವಾದಾಗ
ನಿಮ್ಮ ಮರುಕದ ಮಾತುಗಳಿಗೆ ಕಿಮ್ಮತ್ತು ಇರುವುದಿಲ್ಲ!
ಆ ಕವಿಯನ್ನು ಸಾಯಲು ಬಿಡಬೇಡಿ
ಹಿಡಿದು ತನ್ನಿ
ಕುಡಿಸಿ ಕವಿತೆಯ ಶರಾಬು
ಬಿಡಿಸಿ ಅವನ ಹಾಳು ಚಟ
ಒರೆಸಿ ಅವನ ಬಿಸಿಯ ಕಣ್ಣೀರು
ಸವರಿ ಅವನ ಚಕ್ಕಳದ ಹಣೆ
ಅಂಟಿಸಿ ಅವನ ತುಟಿಗೆ ನಾಕಾಣೆ ನಗು
ಹಾಕಿರಿ ತೋಳಮೇಲೆ ನಿಮ್ಮದೊಂದು ಕೈ
ಜೋರಾಗಿ ಊದಿರಿ ಪ್ರೀತಿಯ ಗಾಳಿ
ಆ ಪಾಪದ ಕವಿ ಬದುಕಲಿ
ಅಂಗಳದ ತುಂಬೆಲ್ಲಾ ಸುಡು ಕವಿತೆಗಳು ಚಿಗುರಲಿ
ಜಗತ್ತು ಕವಿತೆಗಳಿಗೆ ಅಡ್ಡ ಬೀಳಲಿ!
0 ಪ್ರತಿಕ್ರಿಯೆಗಳು