‘ನಾರಿಹಳ್ಳದ ದಂಡೆ’ಯ ಹುಡುಗನ ಬಗ್ಗೆ…

ಚಂದ್ರಕಾಂತ ವಡ್ಡು ಅವರ ಸಮಕಾಲೀನ ಸಂಗತಿಗಳ ಕುರಿತ ಸಂಕಲನ ‘ಸಮಕಾಲೀನ’ ನಾಳೆ (ಭಾನುವಾರ) ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ವಡ್ಡು ಅವರ ಬಗ್ಗೆ ಜಿ ಎನ್ ಮೋಹನ್ ಅವರು ಸಲ್ಲಿಸಿದ ಅಫಿಡವಿಟ್ ಇಲ್ಲಿದೆ-

——

ಒಂದು ಅಫಿಡವಿಟ್

ನಾರಿಹಳ್ಳದ ದಂಡೆಯ ಹುಡುಗನ ಬಗ್ಗೆ…

+++

ಕ್ಷಮಿಸಿ, ಯುವರ್ ಆನರ್,
ನನಗೆ ಈ ದುಷ್ಕೃತ್ಯದಲ್ಲಿ ಭಾಗಿಯಾಗಬೇಕು ಎನ್ನುವ ಯಾವ ಹಂಬಲವೂ ಇರಲಿಲ್ಲ. ಪತ್ರಿಕೋದ್ಯಮಕ್ಕೆ ಮರೆತುಹೋಗಿರುವ ಒಂದಷ್ಟು ವಿಚಾರಗಳನ್ನು ಹೇಳುತ್ತಾ, ಸಾಕಷ್ಟು ಪುಸ್ತಕ ಓದುತ್ತಾ, ಆಗೀಗ ಬರೆಯುತ್ತಾ, ಫೇಸ್‌ಬುಕ್, ಇನ್ಸ್ಟಾ, ಟ್ವಿಟರ್, ತ್ರೆಡ್‌ನಲ್ಲಿ ಸಕ್ರಿಯವಾಗಿ ಇದ್ದವನು ನಾನು.

ಆದರೆ ಎರಡು ವಾರದ ಹಿಂದೆ ನನ್ನ ವಾಟ್ಸ್ಅ್ಯಪ್‌ಗೆ ಬಂದ ಮೆಸೇಜ್ ಒಂದು ಇಂತಹ ದುಷ್ಕೃತ್ಯಕ್ಕಿಳಿಸಿ ನನ್ನನ್ನು ಎರಡನೇ ಆರೋಪಿಯಾಗಿ ನಿಮ್ಮ ಮುಂದೆ ನಿಲ್ಲಿಸಿದೆ. ಮೊದಲ ಆರೋಪಿಯು, ‘ನಾನು ಇತ್ತೀಚೆಗೆ ಬರೆದ ಅಂಕಣ ಚೌಕಟ್ಟಿನ ಆಯ್ದ ಲೇಖನಗಳನ್ನು ಸಂಕಲಿಸಿ ಸಮಕಾಲೀನ ಹೆಸರಿನ ಪುಸ್ತಕ ಹೊರತರುವ ದುಷ್ಟ ಆಲೋಚನೆಯೊಂದು ಮೊಳೆತಿದೆ! ಈ ಕೃತಿಗೆ ಪ್ರವೇಶನುಡಿ ಬರೆಯುವ ಮೂಲಕ ನೀವೂ ದುಷ್ಕೃತ್ಯದಲ್ಲಿ ಭಾಗಿಯಾಗಿ A-2 ಸಾಲಿನಲ್ಲಿ ನಿಲ್ಲಬೇಕೆಂಬುದು ನನ್ನ ಅಪೇಕ್ಷೆ’ ಎಂದು ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ.

ಇವರು ‘ಪ್ರಜಾವಾಣಿ’ಗೆ ತಿಂಗಳೇಶ ಎನ್ನುವ ಪಾತ್ರವನ್ನು ಸೃಷ್ಟಿಸಿ ಮಿಡಿ ಮಿಡಿ ಸ್ವರೂಪದ ವಿಡಂಬನೆ ಬರೆಯುವುದು ಎಲ್ಲರಿಗೂ ಗೊತ್ತು. ಅದು ಕಾಮಿಡಿ ಎನ್ನುವ ಹೆಸರಿನಲ್ಲಿ ಕುಟುಕಬೇಕಾದವರಿಗೆ ಸರಿಯಾಗಿ ಕುಟುಕಿರುವುದೂ ಗೊತ್ತು. ಹಾಗಾಗಿ ನನಗೂ ತಮಾಷೆ ಮಾಡಿದ್ದಾರೆ ಎಂದೇ ಭಾವಿಸಿದ್ದೆ. ಆದರೆ ಯಾವಾಗ ಪದೇ ಪದೇ ನೆನಪಿಸಲು ಆರಂಭಿಸಿದರೋ ಆಗ ಹತಾರಗಳ ಸಮೇತ ಅವರ ದುಷ್ಕೃತ್ಯಕ್ಕೆ ಸಾಥ್ ಕೊಟ್ಟಿದ್ದೇನೆ ಸ್ವಾಮಿ.

ಒಂದನೇ ಆರೋಪಿ ಅಲಿಯಾಸ್ A-1 ನನಗೆ ಪರಿಚಯವಾದದ್ದು ಹೇಗೆ ಎಂದು ನಿಮ್ಮ ಮುಂದೆ ಬಿನ್ನವಿಸಿಕೊಳ್ಳುತ್ತೇನೆ. ನಾನು ‘ಪ್ರಜಾವಾಣಿ’ ಪತ್ರಿಕೆಯ ಬ್ಯೂರೋ ಮುಖ್ಯಸ್ಥನಾಗಿ ಕಲಬುರ್ಗಿಯಲ್ಲಿದ್ದಾಗ ಒಂದು ದಿನ ನನ್ನ ಮನೆಯ ಕದ ಬಡಿಯುವ ಶಬ್ದ ಕೇಳಿತು. ಬಾಗಿಲಲ್ಲಿ ನಿಂತವರ ದಟ್ಟ ಕೂದಲು, ಗಡ್ಡ, ಕನ್ನಡಕ, ಎಂದಿನ ಮುಗುಳ್ನಗು ತಮ್ಮನ್ನು ಚಂದ್ರಕಾಂತ ವಡ್ಡು ಎಂದು ಪರಿಚಯಿಸಿಕೊಳ್ಳುವ ಅಗತ್ಯವೇ ಬೀಳದಂತೆ ಮಾಡಿತ್ತು.

ಯುವರ್ ಆನರ್, ನನಗೆ ಆಗ ಆದ ಸಂತೋಷವನ್ನು ನಾನು ನಿಮ್ಮ ಮುಂದೆ ಬಿನ್ನವಿಸಿಕೊಳ್ಳಲೇಬೇಕು. ನನಗೆ ಇನ್ನೂ ಮೀಸೆ ಮೂಡುವ ಹೊತ್ತಿನಲ್ಲಿಯೇ ಇವರು ನನ್ನನ್ನು ಓದಿನ ಲೋಕಕ್ಕೆ, ಪತ್ರಿಕಾರಂಗಕ್ಕೆ, ಬರಹಲೋಕಕ್ಕೆ ಎಳೆದು ತಂದಿದ್ದರು. ಒಂದು, ಇವರ ‘ನಾರಿಹಳ್ಳದ ದಂಡೆಯಲ್ಲಿ’ ಕಥಾಸಂಕಲನ. ಇದರಲ್ಲಿನ ಕಥೆಗಳೋ ನಮಗೆ ಕಿಚ್ಚು ಹಚ್ಚಬೇಕು ಎನ್ನುವಂತೆಯೇ ಬರೆದಿದ್ದವು.

‘ಪ್ರೀತಿ ನೆಲದಡಿಯ ನದಿಯಂತೆ’ ಎಂದು ಬರೆದರೆ ನಮ್ಮೊಳಗೆ ಉಕ್ಕುತ್ತಿದ್ದ ನಾರಿಹಳ್ಳಕ್ಕೆ ಒಡ್ಡು ಕಟ್ಟುವವರು ಯಾರು? ಅವರ ಕಥೆಗಳ ಮೋಹಕ್ಕೆ ಬಿದ್ದ ನಾವು ಸಂಡೂರನ್ನು ಭುವಿಗೆ ಬಿದ್ದ ನಂದನದ ತುಣುಕು ಇರಬೇಕು ಎಂದೇ ಭಾವಿಸಿದ್ದೆವು. ಆದರೆ ಬಹುಶಃ ನಂದನದ ತುಣುಕೇ ಆಗಿದ್ದ ಆ ನೆಲವನ್ನು ಬಗೆದು ಹಾಕಿದ ರೀತಿ ನಮ್ಮ ಕಣ್ಣೆದುರಿಗಿದೆ. ಅಲ್ಲಿ ಹಸಿರಿಗಿಂತಲೂ ದೂಳು ಹೆಚ್ಚು, ಸಂಭ್ರಮಕ್ಕಿಂತಲೂ ಕಣ್ಣೀರು ಹೆಚ್ಚು. ಆದರೂ ನಮಗೆ ಚಂದ್ರಕಾಂತರು ನಮ್ಮ ಮನದಲ್ಲಿ ಮೂಡಿಸಿಬಿಟ್ಟ ಆ ನಾರಿಹಳ್ಳವೇ ಇಷ್ಟ. ಸಂಡೂರು ಮನುಷ್ಯನ ಒಳಗಿನ ದುರಾಸೆಗೆ ರೂಪಕವಾಗಿ ನಿಂತಿದೆ. ಆ ದುರಾಸೆ ರಾಜಕಾರಣವನ್ನು ಹೆಬ್ಬಾವಿನಂತೆ ಹೊಕ್ಕು ಮುಗಿಸುವುದನ್ನು ನೋಡುತ್ತಿದ್ದರೂ ಇವರು ಕಟ್ಟಿಕೊಟ್ಟ ನಾರಿಹಳ್ಳದ ದಂಡೆಯನ್ನು ನಾವು ಬಿಟ್ಟುಕೊಡಲು ಸಿದ್ಧರಿಲ್ಲ.

ಮಾನ್ಯರೇ, ಬೇರೆಯವರಿಗೆ ಇವರು ಚಂದ್ರಕಾಂತ ವಡ್ಡು ಎಂದೇ ಪರಿಚಿತರು. ಆದರೆ ನಮಗೆ ಇವರು ಆ ನಾರಿಹಳ್ಳದ ದಂಡೆಯ ಹುಡುಗನೇ. ನಾವು ಕವಿತೆಗಳನ್ನು ಬರೆಯುತ್ತಾ ಇದ್ದ ಸಮಯದಲ್ಲಿ ಇವರು ಏನನ್ನೇ ಮಾಡಿದರೂ ಕವಿತೆಯಂತೆ ಮಾಡುವುದನ್ನು ರೂಢಿಸಿಕೊಂಡುಬಿಟ್ಟಿದ್ದರು. ಒಂದು ಉದಾಹರಣೆ ನಿಮಗೆ ಹೇಳಬೇಕು. ಪಾ.ವೆಂ.ಆಚಾರ್ಯರು ಇವರ ಕಥಾಸಂಕಲನಕ್ಕೆ ಮುನ್ನುಡಿ ಬರೆಯಬೇಕಿತ್ತು, ಇವರ ಮದುವೆಗೆ ಮುಖ್ಯ ಅತಿಥಿಯಾಗಿಯೂ ಬರಬೇಕಿತ್ತು, ಆದರೆ ಅವರು ಬಾರದ ಲೋಕಕ್ಕೆ ಹೋದರು. ವಡ್ಡು ಅವರು ಕಥೆ ಬರೆದರೂ, ವಿಶ್ಲೇಷಣೆ ಬರೆದರೂ ಆಳದಲ್ಲಿ ಕವಿ ಹೃದಯ ಹೊಂದಿದವರು. ಹಾಗಾಗಿ ಅವರು ‘ಪಾ.ವೆಂ. ಬರೆಯದ ಮುನ್ನುಡಿ!’ ಎಂದು ಇಡೀ ಒಂದು ಪುಟ ಖಾಲಿ ಬಿಟ್ಟು ಕಥಾ ಸಂಕಲನ ಪ್ರಕಟಿಸಿಯೇಬಿಟ್ಟರು. ನಾವೆಲ್ಲಾ ಫಿದಾ ಆದದ್ದು ಇವರ ಇಂತಹ ಕಾರಣಗಳಿಗಾಗಿಯೇ.

ಅಂತಹ ನಾರಿಹಳ್ಳದ ದಂಡೆಯಿಂದ ಎದ್ದು, ಹಳ್ಳದ ಆಸುಪಾಸಿನಿಂದ ಕಥೆಗಳನ್ನು ಬಿಡಿಸಿಕೊಂಡು ಬಂದ ಚಂದ್ರಕಾಂತ ವಡ್ಡುಗೆ ಈಗ 60. ಈ ಆರು ದಶಕಗಳ ಸುದೀರ್ಘ ಪಯಣದಲ್ಲಿ ಅವರು ಪ್ರಕಟಿಸಿರುವುದು ಒಂದೇ ಕೃತಿ. ನಾನು ಒಂದೆರಡು ಮಾತುಗಳನ್ನು ಬರೆಯಲು ಕೈಗೆತ್ತಿಕೊಂಡಿರುವ ‘ಸಮಕಾಲೀನ’ವೇ ಅವರ ಎರಡನೆಯ ಕೃತಿ. ಇದು ನನಗೂ, ನನ್ನಂತೆಯೇ ಎಲ್ಲರಿಗೂ ಆಶ್ಚರ್ಯದ ಸಂಗತಿ. ಅರವತ್ತರ ನೆನಪಿಗೆ ಇರಲಿ ಎನ್ನುವ ಕಾರಣಕ್ಕೆ ಈ ಪುಸ್ತಕ ಹೊರತರುವ ಮನಸ್ಸು ಮಾಡಿದ್ದಾರೆ. ಇಲ್ಲದಿದ್ದಲ್ಲಿ ಬಹುಶಃ ಅವರು ‘ಏಕ ಪುಸ್ತಕ ವ್ರತಸ್ಥ’ ಆಗಿಯೇ ಉಳಿಯುತ್ತಿದ್ದರೇನೋ…

ನಾನು ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ ಮಹಾಸ್ವಾಮಿ. ಇವರು ಹುಟ್ಟುಹಾಕಿರುವ ಬರಹಗಾರರ ದಂಡು ಸಾಕಷ್ಟು ಬರಹಗಳನ್ನೂ, ಕೃತಿಗಳನ್ನೂ ಕೊಟ್ಟಿರುವಾಗ ಕೈಯಲ್ಲಿ ಬೆತ್ತ ಹಿಡಿದು ನಿಂತ ಈ ಗುರು ಎರಡನೇ ಪುಸ್ತಕಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎಂದು ನಿಮ್ಮಲ್ಲಿ ಮಾತ್ರವೇ ಹೇಳಿಕೊಳ್ಳಬೇಕು ಅಷ್ಟೇ.

ಆದರೆ ಈ ನಿಧಾನತನವೇ ಚಂದ್ರಕಾಂತರ ಮಹತ್ವದ ಗುಣವೂ ಹೌದೇನೋ! ಜಗತ್ತು ಅತಿವೇಗವಾಗಿ ಓಡುತ್ತಿರುವಾಗ ಪ್ರತಿಯೊಬ್ಬರಿಗೂ ಅವಸರವನ್ನೇ ಕಲಿಸಿರುವಾಗ, ಅತ್ಯಂತ ವ್ಯವಧಾನದಿಂದ ಹೆಜ್ಜೆ ಇಡುವುದಿದೆಯಲ್ಲ, ಅದು ಈಗ ಆಶ್ಚರ್ಯದ ಸಂಗತಿಯೇ. ಅದರ ಜೊತೆಗೆ ಇಂದಿನ ಸಾಮಾಜಿಕ ಜಾಲತಾಣಗಳು ಬರೆದು ಗುಡ್ಡೆ ಹಾಕುವುದನ್ನೇ ಕಲಿಸುತ್ತಿರುವಾಗ, ಬರೆದಿದ್ದೆಲ್ಲವೂ ಪ್ರಕಟಿಸಲು ಯೋಗ್ಯ ಎನ್ನುವ ಭ್ರಮೆ ಹುಟ್ಟಿಸಿರುವಾಗ ಚಂದ್ರಕಾಂತ ವಡ್ಡು ಅಲೆಯ ವಿರುದ್ಧ ಹೆಜ್ಜೆ ಹಾಕುತ್ತಿದ್ದಾರೆ. ತಾನು ಬರೆಯದೇ ಬೇರೆಯವರನ್ನು ಬರವಣಿಗೆಗೆ ಇಳಿಸುವುದಕ್ಕೆ ಒಂದು ಸಂತತನ ಬೇಕು. ಅದು ಅವರಲ್ಲಿದೆ.

ವಡ್ಡು ಅವರು ಹೊಸತನವನ್ನು ಧ್ಯಾನಿಸುವ ಜೀವ. ಸದ್ದಿಲ್ಲದೆ ಕಾಳೂರಿ ಮೊಳೆಯೊಡೆಯುವ ಪರಿಯೇ ಅಚ್ಚರಿ. ಅವರ ಕಥೆಗಳಾಗಲೀ, ಹಾಸ್ಯ ಬರಹಗಳಾಗಲಿ, ‘ಸಮಾಜಮುಖಿ’ ಸಂಪಾದಕತ್ವವಾಗಲೀ, ಅವರು ನಡೆಸುವ ಕಾರ್ಯಕ್ರಮಗಳಾಗಲೀ, ಈ ಹೊಸತನದ ಸ್ಪರ್ಶ ಹೊಂದಿರುತ್ತವೆ. ಆಲೋಚನೆಯ ಮಾತು ಬಂದಾಗಲೂ ಇದು ಅಷ್ಟೇ ನಿಜ. ಸಮಕಾಲೀನ ವಿಷಯಗಳನ್ನು ವಿಶ್ಲೇಷಿಸುವಾಗ ಅವರು ಎಂದೋ ಚಾಲ್ತಿ ಕಳೆದುಕೊಂಡ ಮಾನದಂಡಗಳನ್ನು ಬಳಸುವುದಿಲ್ಲ ಅಥವಾ ವಿಶ್ಲೇಷಣೆ ಎಂದರೆ ಅದಕ್ಕೆ ಇಂತಹದ್ದೇ ಚೌಕಟ್ಟಿರಬೇಕು ಎನ್ನುವುದನ್ನು ಮೀರಿ ಬರೆದವರು, ಅರ್ಥಾತ್ ವಡ್ಡು ಅವರಿಗೆ ಮುರಿದು ಕಟ್ಟುವುದು ಗೊತ್ತು.

ಇಡೀ ಬರಹಗಳನ್ನು ಓದಿದಾಗ ನನಗೆ ಅನಿಸಿದ್ದು- ಇದು ನಿಜಕ್ಕೂ ಒಬ್ಬ ಜನಸಾಮಾನ್ಯನ ಎಡಿಟೋರಿಯಲ್ ಎಂದು. ಆರ್.ಕೆ.ಲಕ್ಷ್ಮಣ್ ಅವರು ಮಿಸ್ಟರ್ ಸಿಟಿಜನ್ ಹುಟ್ಟುಹಾಕಿದರು. ಆತನ ಮೂಲಕ ಮಾಡಬೇಕಿದ್ದ ಸಮಾಜದ ವಿಶ್ಲೇಷಣೆ ಮಾಡಿದರು. ಇಲ್ಲಿ ಚಂದ್ರಕಾಂತ ವಡ್ಡು ಅವರು ನಮ್ಮಂತಹ ಮಿಸ್ಟರ್ ಸಿಟಿಜನ್‌ಗಳು ಸಮಕಾಲೀನ ಸಂಗತಿಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ತಮ್ಮ ಈ ಬರಹಗಳ ಮೂಲಕ ಮಾಡಿಬಿಟ್ಟಿದ್ದಾರೆ. ನನಗೆ ಅದರಷ್ಟೇ ಮುಖ್ಯ ಅನಿಸಿದ ಮತ್ತೊಂದು ಸಂಗತಿ ಅವರು ಅಜೆಂಡಾ ಸೆಟ್ ಮಾಡುವ ರೀತಿ.

ಯುವರ್ ಆನರ್, ನಾನು ಯಾವ ಕಾರಣಕ್ಕೆ ಇವರ ಬರಹಗಳನ್ನು ಜನಸಾಮಾನ್ಯರ ಎಡಿಟೋರಿಯಲ್ ಎಂದು ಕರೆದೆ ಎಂದರೆ ಇಲ್ಲಿ ಇವರು ಕೈಗೆತ್ತಿಕೊಂಡಿರುವ ಬಹುತೇಕ ಸಂಗತಿಗಳು ಜನಸಾಮಾನ್ಯರಿಗೆ ಸೇರಿದವು, ಯಾವುದೇ ಒಂದು ನಿಲುವಿನ ವಕಾಲತ್ತು ಮಾಡದೆ ಒಂದು ವಿಷಯವನ್ನು ಮಂಡಿಸಿ ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋಗುವುದು, ಆ ಮೂಲಕ ಓದಿದವರ ಮನಸ್ಸಿನಲ್ಲಿ ತಾವೂ ಆ ಸಮಸ್ಯೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೈ ಜೋಡಿಸುವಂತೆ ಮಾಡುವ ಕಾರಣಕ್ಕಾಗಿ.

ಇವತ್ತು ಸಾಮಾಜಿಕ ಜಾಲತಾಣದ ಕಾರಣಕ್ಕೇ ಇರಬೇಕು- ಅಬ್ಬರದ ದನಿ, ಕುಟುಕುವ ಗುಣ, ನಿಂದನೆ ಇವೇ ವಿಶ್ಲೇಷಣೆ ಎನ್ನುವ ಹೆಸರಿನಲ್ಲಿ ಪ್ರಧಾನ ರಂಗವನ್ನು ಆಕ್ರಮಿಸಿಕೊಂಡುಬಿಟ್ಟಿವೆ. ಸಮಸ್ಯೆಗಳನ್ನು ನಮ್ಮೆದುರು ಬಿಡಿಸಿಟ್ಟು ಅದರ ಆಗಾಧತೆಯತ್ತ, ಪರಿಣಾಮದತ್ತ ಸೆಳೆಯುವ ವಿಶ್ಲೇಷಣೆಗಳು ಹಿಂದೇಟು ಅನುಭವಿಸುತ್ತಿವೆ. ಎ.ನಾರಾಯಣ, ಡಿ.ಉಮಾಪತಿ, ರಾಜಾರಾಂ ತಲ್ಲೂರು, ಶಿವಸುಂದರ್, ಜಿ.ಎನ್.ನಾಗರಾಜ್, ನಟರಾಜ ಹುಳಿಯಾರ್, ಸಬಿತಾ ಬನ್ನಾಡಿ, ನಾಗೇಶ ಹೆಗಡೆ, ಹರೀಶ್ ಗಂಗಾಧರ, ಚ.ಹ.ರಘುನಾಥ್, ಸುರೇಶ್ ಕಂಜರ್ಪಣೆ, ಪ್ರಸಾದ್ ರಕ್ಷಿದಿ ಹೀಗೆ ಹಲವರ ವಿಶ್ಲೇಷಣೆಗಳು ನನಗೆ ಇಷ್ಟ. ಇದರ ಮಧ್ಯೆ ಚಂದ್ರಕಾಂತ ವಡ್ಡು ಅವರು ಪತ್ರಿಕೆಯ ಸಂಪಾದಕೀಯ ರೀತಿಯೇ ಒಂದು ವಿಷಯವನ್ನು ಹಲವು ಆಯಾಮಗಳಿಂದ ನೋಡುವುದೂ, ಕಿರುಚಾಟ ಇಲ್ಲದೆ ತಣ್ಣಗೆಯೇ ಸಮಸ್ಯೆಯ ಆಗಾಧತೆಯನ್ನು ಮುಟ್ಟಿಸುವುದು ಇಷ್ಟವಾಗುತ್ತದೆ.

ಈ ಕೃತಿಯಲ್ಲಿ ಹೇಳಬೇಕೆಂದರೆ ಯಾವ ಪಕ್ಷ ಅಧಿಕಾರದಲ್ಲಿದ್ದರೂ ತಾವು ವಿರೋಧ ಪಕ್ಷವೇ ಅನ್ನುವುದನ್ನು ಸಾಬೀತುಪಡಿಸಿಬಿಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಹೀಗೇ ಯಾವ ಪಕ್ಷ ಆಡಳಿತ ನಡೆಸುವಾಗಲೂ ಇವರು ಅವರ ಜವಾಬ್ದಾರಿಗಳೇನು, ಎಡವುತ್ತಿರುವುದು ಎಲ್ಲಿ ಅಥವಾ ಹೆಜ್ಜೆ ಹಾಕಬೇಕಾದದ್ದು ಹೇಗೆ ಎನ್ನುವುದನ್ನು ತೋರಿಸಿಕೊಡುವ ಮಿಣಿ ಮಿಣಿ ಬೆಳಕಾಗಿದ್ದಾರೆ.

ಯುವರ್ ಆನರ್,

ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಆಸ್ತಿ ಅಂದಿದ್ದನ್ನು ನೀವೂ ನಿಮ್ಮ ತೀರ್ಪುಗಳಲ್ಲಿ ಆಗೀಗ ನೆನಪಿಸುತ್ತಲೇ ಇರುತ್ತೀರಿ. ಇಂದು ಮಾಧ್ಯಮ ಪ್ರಜಾಪ್ರಭುತ್ವದ ರಕ್ಷಣೆಗೆ ನಿಜವಾಗಿಯೂ ನಿಂತಿದೆಯಾ ಎನ್ನುವ ಪ್ರಶ್ನೆ ನಾವು ಮಾಡಿಕೊಳ್ಳಲೇಬೇಕು. ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ಎಂದು ಯಾವುದೆಲ್ಲವನ್ನೂ ನಾವು ಗುರುತಿಸಿದ್ದೇವೋ ಅವೆಲ್ಲವೂ ಈ ಮೊದಲಿನಂತಿವೆಯೇ, ಪ್ರಜಾಪ್ರಭುತ್ವದ ಕಾವಲುದಾರರಾಗಿವೆಯೇ ಎನ್ನುವ ಪ್ರಶ್ನೆಗಳು ಎದ್ದಿದೆ. ನಾವು ಯಾವಾಗಲೂ ವ್ಯಂಗ್ಯಚಿತ್ರಗಳನ್ನು ಪತ್ರಿಕೆಯ ಸಂಪಾದಕೀಯ ಎಂದೇ ಗುರುತಿಸುತ್ತಾ ಬಂದಿದ್ದೇವೆ. ಹಾಗೆಯೇ ಮಾಧ್ಯಮದ ಸ್ವಾತಂತ್ರ್ಯದ ಬೆಳಕು ಮಬ್ಬಾಗುತ್ತಿರುವ ದಿನಗಳಲ್ಲಿ ಚಂದ್ರಕಾಂತ ವಡ್ಡು ಅವರಂತಹವರ ಈ ವಿಶ್ಲೇಷಣೆಗಳು, ಸಂಪಾದಕೀಯ ಪುಟದ ಲೇಖನಗಳು ಆ ಕೆಲಸವನ್ನು ಖಂಡಿತಾ ಮಾಡುತ್ತಿವೆ.

ನನಗೆ ಈ ಕೃತಿಯಲ್ಲಿ ಇಷ್ಟವಾದ ಲೇಖನಗಳ ಪೈಕಿ ‘ಹೊಸ ಪೀಳಿಗೆಗೆ ಹಳೆಯ ರಾಜಕೀಯ ಮಾದರಿ’ ಸಹ ಒಂದು. ಅದರಲ್ಲಿ ಅವರು ಬಾಚಿಗೊಂಡನಹಳ್ಳಿ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಆತ್ಮಕತೆಯನ್ನು ಉದಾಹರಣೆಯಾಗಿ ನೀಡುತ್ತಾ ಅಂದಿನ ರಾಜಕಾರಣದ ಮಾದರಿ ಹೇಗಿತ್ತು ಎನ್ನುವುದನ್ನು ಚರ್ಚಿಸುತ್ತಾರೆ. ತಮ್ಮ ಸುತ್ತಲ ಜಗತ್ತಿನಲ್ಲಿ ಆಗುವ ಬದಲಾವಣೆಗೆ ಅವರು ತೆರೆದ ಕಣ್ಣನ್ನು ಹೊಂದಿದ್ದಾರೆ. ಅವರು ಈ ಲೇಖನವನ್ನು ಮುಕ್ತಾಯ ಮಾಡುತ್ತಾ, ‘ಹೊಸ ತಲೆಮಾರಿಗೆ ಹಳೆಯ ರಾಜಕಾರಣದ ಮಾದರಿ ನಿಲುಕಲಿ ಎಂದು ಕನಸು ಕಾಣಲು ಕರ ತೆರಬೇಕಿಲ್ಲ ಎಂಬುದೇ ಒಂದಿಷ್ಟು ನೆಮ್ಮದಿಯ ವಿಚಾರ!’ ಎನ್ನುತ್ತಾರೆ.

ಈ ಕೃತಿಯನ್ನು ಓದುವಾಗಲೇ ನಾನು ಪಿ.ಸಾಯಿನಾಥ್ ಅವರ ಎರಡನೆಯ ಕೃತಿಯನ್ನು ಆಗತಾನೇ ಅನುವಾದಿಸಿ ಕುಳಿತಿದ್ದೆ. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊನೆಯ ಹೀರೋಗಳ ಕಥನ ಅದು. ಅದರೊಳಗೆ ಅವರು ಕಟ್ಟಿಕೊಟ್ಟಿದ್ದ ವ್ಯಕ್ತಿಚಿತ್ರಣಗಳೂ, ಚಂದ್ರಕಾಂತ ವಡ್ಡು ಅವರು ನೆನಪಿಸಲು ಇಚ್ಛಿಸುತ್ತಿರುವ ರಾಜಕಾರಣದ ಮಾದರಿಯೂ ಒಂದೇ ಆಗಿತ್ತು. ಪಿ.ಸಾಯಿನಾಥರಂತೆಯೇ ಚಂದ್ರಕಾಂತ ವಡ್ಡು ಅವರಿಗೂ ನಮ್ಮ ರಾಜಕಾರಣ ಸೇರುತ್ತಿರುವ ದಂಡೆಯ ಬಗ್ಗೆ ಆತಂಕವಿದೆ. ಅದನ್ನು ಉಳಿಸಿಕೊಳ್ಳಲು ಪರ್ಯಾಯವಾಗಿ ತೋರಿಸಬೇಕಾದ ದಾರಿಯ ಅರಿವಿದೆ. ಹಾಗಾಗಿಯೇ ಈ ಕೃತಿಯಲ್ಲಿ ವಡ್ಡು ಅವರು ಮೇಲಿಂದ ಮೇಲೆ ದೊಂದಿಯನ್ನು ಹಿಡಿಯುವ ಕೆಲಸ ಮಾಡಿದ್ದಾರೆ.
ವಡ್ಡು ಅವರು ಸಮಕಾಲೀನ ಸಂಗತಿಗಳ ಬಗ್ಗೆ ಸದಾ ಅಪ್ಡೇಟ್ ಆಗುವ ಪರಿಯೆ ನನಗೆ ಬೆರಗು ಹುಟ್ಟಿಸುವಂತಹದ್ದು. ಇದು ಅವರಿಗೆ ಹೇಗೆ ಬಂದಿರಬಹುದು ಎನ್ನುವ ಕುತೂಹಲವೂ. ಬಹುಶಃ ಇವರು 25 ವರ್ಷದ ಆಸುಪಾಸಿನಲ್ಲಿದ್ದಾಗಲೇ ‘ಬಿಸಿಲ ಬದುಕು’ ಪತ್ರಿಕೆಯನ್ನು ಹುಟ್ಟು ಹಾಕಿದವರು, ಸಂಪಾದಕರಾಗಿ ಮುನ್ನೆಡೆಸಿದವರು, ಜನರ ನಿರಂತರ ಒಡನಾಟ ಕಾದುಕೊಂಡವರು, ಪತ್ರಿಕೆಗಳಿಗೆ ಸತತವಾಗಿ ಬರೆದವರು. ಸಾಹಿತ್ಯದ ಕಡೆಗೇ ಹೆಚ್ಚು ವಾಲಿದ್ದ ನಮ್ಮನ್ನೂ ಸಮಕಾಲೀನ ವಿಷಯಗಳ ಬಗ್ಗೆ ಕಣ್ಣು ತೆರೆಯಲು ಕಾರಣವಾದವರು. ಆ ಬಗ್ಗೆ ಬರೆಸಿದವರು. ಹೀಗಾಗಿಯೇ ಇವರು ‘ಎಂದೋ ಕೇಳಿದ ಹಾಡಿಗೆ’ ಕಟ್ಟು ಬೀಳಲಿಲ್ಲ. ಇಂದಿನ ಕಾಲದಲ್ಲಿ ನಿಂತು ಸಮಾಜವನ್ನು ಅವಲೋಕಿಸುತ್ತಾರೆ.
ಯುವರ್ ಆನರ್, ಈ ‘ಸಮಕಾಲೀನ’ ನಿಜಕ್ಕೂ ಸಮಕಾಲೀನವೆ. ಇದರಲ್ಲಿ ರಾಜಕೀಯ ಬರಹಗಳ ಬಗ್ಗೆ ಎಷ್ಟು ಆದ್ಯತೆಯಿದೆಯೋ ಅಷ್ಟೇ ಆದ್ಯತೆ ಆರೋಗ್ಯ ಹಾಗೂ ಸಾಂಸ್ಕೃತಿಕ ಲೋಕದ ಬಗ್ಗೆಯೂ ಇದೆ. ಕಲಾಗ್ರಾಮವನ್ನು ಹಿರಿಯ ಸಾಹಿತಿಗಳ ಅಂತ್ಯಕ್ರಿಯೆ ಕೇಂದ್ರವನ್ನಾಗಿ ಮಾಡುತ್ತಿರುವುದರ ಬಗ್ಗೆ, ಬುದ್ಧಿಜೀವಿಗಳು ತಾವೇ ಸೃಷ್ಟಿಸಿಕೊಂಡಿರುವ ಬಿಕ್ಕಟ್ಟುಗಳ ಬಗ್ಗೆ, ಸಾಹಿತ್ಯ ಪರಿಷತ್ತು ಇನ್ನೂ ಪ್ರಾತಿನಿಧಿಕವಾಗಿ ಉಳಿದಿದೆಯೇ ಎನ್ನುವುದರ ಬಗ್ಗೆ, ಒಳಗಿನ ಟೀಕಾಕಾರರು ಹೊರಗೆ ಬರಬೇಕಾದದ್ದರ ಬಗ್ಗೆ, ಲಂಕೇಶ್ ಎನ್ನುವ ಅನುಕರಿಸಬಹುದಾದ ಆದರ್ಶದ ಬಗ್ಗೆ, ಅಂತೆಯೇ ಕೋಮು ಸಾಮರಸ್ಯಕ್ಕೆ ಒದಗಿರುವ ಆತಂಕದ ಬಗ್ಗೆ, ಪತ್ರಿಕಾರಂಗದ ಇಕ್ಕಟ್ಟುಗಳ ಬಗ್ಗೆ ನೋಟವಿದೆ.

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು ಅವರು ಸಾಧಾರಣವಾಗಿ ಬಹುತೇಕರು ಮಂಡಿಸುವ ಕಪ್ಪು ಅಥವಾ ಬಿಳುಪು ಎಂಬ ಎರಡರ ಲೋಕದಲ್ಲಿ ನಿಲ್ಲುವವರಲ್ಲ. ‘ಪರ್ಯಾಯ ಶೋಧಕರು ಸೋತಿದ್ದೆಲ್ಲಿ?’ ಎನ್ನುವ ಲೇಖನದಲ್ಲಿ ಇವರು ನೈತಿಕ ನೆಲೆಯ ಪ್ರತಿರಾಜಕಾರಣವನ್ನು ವಿಶ್ಲೇಷಿಸುತ್ತಾರೆ. ಪರ್ಯಾಯ ಶೋಧಕರ ಮಹತ್ವವನ್ನು ಗುರುತಿಸುತ್ತಾ ಅವರ ಅಗತ್ಯವನ್ನು ಸಾರುತ್ತಲೇ ಅವರ ಮಿತಿಯನ್ನು ತೆರೆದಿಡುತ್ತಾ ಹೋಗುತ್ತಾರೆ. ವಿಶ್ವವಿದ್ಯಾಲಯದ ಗಣ್ಯರು, ರಾಜಕೀಯ ಪಕ್ಷಗಳಂತೆ ದೈನಂದಿನ ಲೈಕು, ಶೇರು, ಕಾಮೆಂಟು, ಅಪಹಾಸ್ಯಗಳ ಸೃಷ್ಟಿಯಲ್ಲಿ ಮುಳುಗಿದರೆ ಆಗುವ ಅಪಾಯದ ಬಗ್ಗೆ ಎಚ್ಚರಿಸುತ್ತಾರೆ. ‘ಜನರನ್ನು ಪರಿಣಾಮಕಾರಿಯಾಗಿ ತಲುಪುವ ಪ್ರಾಮಾಣಿಕ ಮಾರ್ಗವನ್ನೇ ಅರಿಯದವರು ಕೇವಲ ಜನಪರ, ಜೀವಪರ ಘೋಷಣೆಗಳನ್ನು ತಾವೇ ಕೂಗಿ, ತಾವೇ ಕೇಳಿಸಿಕೊಳ್ಳುವ ವಿಪರ್ಯಾಸಕ್ಕೆ ಈಡಾಗುವುದು ಅನಿವಾರ್ಯ’ ಎಂದು ಎಚ್ಚರಿಸುತ್ತಾರೆ.

ವಡ್ಡು ಅವರಿಗೆ ಇರುವ ಸೂಕ್ಷ್ಮ ದೃಷ್ಟಿ ನನಗಿಷ್ಟವಾದ ಸಂಗತಿ. ಜಮೀರ್ ಅಹ್ಮದ್ ಮನೆಯಲ್ಲಿನ ಬಂಗಾರ ವರ್ಣದ ಕುರ್ಚಿಗಳು, ಜನಾರ್ದನ ರೆಡ್ಡಿ ತಿರುಪತಿಗೆ ಕೊಟ್ಟ ಕಿರೀಟ, ವಿನಯ್ ಕುಲಕರ್ಣಿ ಜೈಲಿನಿಂದ ಹೊರಬಂದಾಗ ಅವರಿಗೆ ತಿಲಕವಿಟ್ಟ ಲಕ್ಷ್ಮಿ ಹೆಬ್ಬಾಳ್ಕರ್… ಹೀಗೆ ವಡ್ಡು ಅವರು ತಾವು ಕಂಡ ಪ್ರತಿಯೊಂದನ್ನೂ ಪೋಣಿಸುತ್ತಲೇ ರಾಜಕಾರಣಕ್ಕೆ ಬೇಕಾದ ಮಾದರಿಯ ಬಗ್ಗೆ ಮಾತನಾಡಬಲ್ಲರು.

ವಡ್ಡು ಅವರಿಗೆ ಪ್ರಶ್ನೆ ಕೇಳುವ ಗುಣ, ಪ್ರಶ್ನಿಸಿಕೊಳ್ಳುವ ಗುಣ ತೀವ್ರವಾಗಿದೆ ಎನ್ನುವುದಕ್ಕೆ ‘ಸಮಕಾಲೀನ’ ವಿಶ್ಲೇಷಣಾ ಬರಹಗಳ ಸಂಗ್ರಹವೇ ಸಾಕ್ಷಿ. ನಮ್ಮನ್ನು ನಾವು ಪ್ರಶ್ನಿಸಿಕೊಳ್ಳದಿದ್ದರೆ, ನಮ್ಮ ಆಸುಪಾಸಿನವರನ್ನು ಪ್ರಶ್ನಿಸದಿದ್ದರೆ, ನಮ್ಮ ಊರುಕೇರಿಯನ್ನು ಪ್ರಶ್ನಿಸದಿದ್ದರೆ, ನಮ್ಮ ಸಮಾಜವನ್ನು ಪ್ರಶ್ನಿಸದಿದ್ದರೆ, ಬದಲಾವಣೆ ಸಾಧ್ಯವಿಲ್ಲ ಎಂದು ನಂಬಿದ ಅವರು ಸಮಾಜದ ಆಧಾರ ಎಂದು ಕರೆಸಿಕೊಂಡ ನಾಲ್ಕೂ ಸ್ತಂಭಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಅಧಿಕಾರಸ್ಥರನ್ನು ನಿರ್ಭಿಡೆಯಿಂದ ಪ್ರಶ್ನಿಸುತ್ತಾರೆ.

ಯುವರ್ ಆನರ್,

ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ ಎಂದಿದ್ದ ಬ್ರೆಕ್ಟ್. ನಮಗೆಲ್ಲಾ ನಾಟಕದ ಹುಚ್ಚು ಹಿಡಿಸಿದಾತ, ಸಮಾಜವನ್ನು ನಿಲೆ ಹಾಕಿಕೊಂಡು ಪ್ರಶ್ನೆ ಕೇಳುವಂತೆ ಮಾಡಿದ್ದಾತ. ಹಾಗೆ, ಥೇಟ್ ಹಾಗೆಯೇ ಸಮಾಜದ ಒಳಿತಿಗಾಗಿ ತಮ್ಮ ಬರಹದ ಮೂಲಕ ಪ್ರಶ್ನೆ ಕೇಳುತ್ತಿರುವ ಚಂದ್ರಕಾಂತ ವಡ್ಡು ಅವರ ಬಗ್ಗೆ ನನ್ನ ಮೆಚ್ಚುಗೆ ಸದಾ ಇದೆ.

ಯುವರ್ ಆನರ್, ಭಗವದ್ಗೀತೆಯ ಮೇಲಾಣೆ ಈ ಕೃತಿಯಲ್ಲಿರುವ ಲೇಖನಗಳನ್ನೆಲ್ಲಾ ನಾನು ಓದಿದ್ದೇನೆ ಹಾಗೂ ಆ ಬಗ್ಗೆ ಸಾಕಷ್ಟು ನೋಟ್ಸ್ ಮಾಡಿಕೊಂಡಿದ್ದೇನೆ. ಇಲ್ಲಿನ ಬರಹಗಳೆಲ್ಲವನ್ನೂ ಓದಿ ಮುಗಿಸಿದಾಗ ನನಗೆ ಒಂದು ಕುತೂಹಲ ಉಂಟಾಯಿತು. ಇವುಗಳನ್ನೆಲ್ಲಾ ಪ್ರಕಟಿಸಿರುವ ಪತ್ರಿಕೆಗಳಾದರೂ ಯಾವುವು ಅಂತ? ಆಶ್ಚರ್ಯ ಆದರೆ ನಿಜ. ಇವುಗಳನ್ನು ಪ್ರಕಟಿಸಿರುವುದು ಪ್ರಜಾವಾಣಿ, ಆಂದೋಲನ, ಈದಿನ ಹಾಗೂ ಅಪವಾದ ಎನ್ನುವಂತೆ ಒಂದೇ ಒಂದು ಲೇಖನವನ್ನು ವಿಜಯ ಕರ್ನಾಟಕ ಪ್ರಕಟಿಸಿದೆ. ಇವತ್ತು ಸಮಾಜವನ್ನು ವಿಶ್ಲೇಷಿಸುವ ಸವಾಲಿನಿಂದ ಪತ್ರಿಕೆಗಳು ದೂರ ಸರಿದುಬಿಟ್ಟಿವೆ ಎಂದು ಆತಂಕಪಡಬೇಕೋ ಅಥವಾ ಇಷ್ಟಾದರೂ ಪತ್ರಿಕೆಗಳು ಜನಮನದ ಅಭಿವ್ಯಕ್ತಿಗೆ ಜಾಗ ನೀಡಿವೆ ಎಂದು ಸಂತೋಷಪಡಬೇಕೋ?

ಅಂತಿಮವಾಗಿ,
ಇಂತಹ ದುಷ್ಕೃತ್ಯದಲ್ಲಿ ನಾನು ಪಾಲುದಾರನಾಗದೆ ಇರಲಿ ಹೇಗೆ ಹೇಳಿ?
ಇಂತಿ,


A-2

(ಸಹಿ)
ಜಿ.ಎನ್.ಮೋಹನ್

‍ಲೇಖಕರು avadhi

September 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: