ನಾನೇ ಬರೆದ ನನ್ನ ಚರಮ ಗೀತೆ..

ಚರಮಗೀತೆ

ಡಾ ಎಂ ಎಸ್ ವಿದ್ಯಾ

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು
ತಿಂದು ನಿನ್ನನ್ನ ಋಣ ತೀರುತಲೆ ಪಯಣ
ಹಿಂದಾದಗೊಂದು ಚಣ, ಮುಂದುಕುಂ ಕಾದಿರದು
ಸಂದ ಲೆಕ್ಕವದೆಲ್ಲ –ಮಂಕುತಿಮ್ಮ

ಈ ಸಮಯದಲ್ಲಿ ಸಾವಿನ ಸುದ್ದಿಗಳನ್ನು ಕೇಳುತ್ತಿರುವಾಗ, ಮನಸ್ಸು ಭಾರವಾದರೂ ಡಿ.ವಿ.ಜಿ.ಯವರ ಈ ನುಡಿಗಳು ಎಷ್ಟು ಸತ್ಯ ಅಲ್ಲವೇ? ಕೆಲವರು ಮೊದಲು ಹೋಗುತ್ತಾರೆ, ಕೆಲವರು ನಂತರ. ಒಟ್ಟಿನಲ್ಲಿ ಸರದಿ ಬಂದಾಗ ಎಲ್ಲರೂ ಪಯಣಿಸಲೇಬೇಕು. ನೆನಪುಗಳು ಕಾಡುತ್ತವೆ. ನಿರಂತರ ಹರಿಯುವ ನದಿಯಂತೆ, ಅವೂ ಹರಿದುಕೊಂಡು ಮುಂದೆ ಸಾಗುತ್ತವೆ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಈ ಸಮಯದಲ್ಲಿ ನನ್ನ ‘ಚರಮಗೀತೆ’ ಲೇಖನವನ್ನು ಬರೆಯಬೇಕು ಅಂತ ಅನ್ನಿಸಿತು. ಭೋಜರಾಜನಿಗೆ ತಾನು ಜೀವಂತವಿರುವಾಗಲೇ ಮಹಾಕವಿ ಕಾಳಿದಾಸ ತನ್ನ ಚರಮಗೀತೆ ಹೇಳುವುದನ್ನು ಕೇಳಬೇಕೆಂದು ಆಸೆಯಾಯಿತಂತೆ. ಕಾಳಿದಾಸನು ಒಪ್ಪದೇ ಇದ್ದಾಗ, ತಾನು ಸತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹೇಳಿ, ಕಡೆಗೂ ಕಾಳಿದಾಸದ ಬಾಯಿಯಿಂದ ತನ್ನ ಚರಮಗೀತೆಯನ್ನು ಹಾಡಿಸಿ ಆಸೆ ತೀರಿಸಿಕೊಂಡ ಎಂದು ಪ್ರತೀತಿ ಇದೆ.

ನನ್ನ ಬಗ್ಗೆ ಚರಮಗೀತೆ ಯಾರೂ ಬರೆಯುವುದಿಲ್ಲ. ಅದು ಗೊತ್ತಿರುವ ವಿಷಯ. ಆದರೆ ಸ್ನೇಹಿತರು, ಬಂಧುಗಳು ನಾನು ಸತ್ತಮೇಲೆ ನನ್ನನ್ನು ಹೇಗೆ ನೆನೆಯಬಹುದು ಎಂಬ ಅನಿಸಿಕೆಗಳು ಧಾಳಿ ಮಾಡಲಾರಂಭಿಸಿದವು. ಒಂದು ದಿನ ನನ್ನ ಮಿತ್ರ-ಸದಾ ಕೆಲಸದಲ್ಲಿ ನಿರತನಾಗಿರುವವನು, ಫೋನ್ ಮಾಡಿದರೂ ಸಿಗುವುದಿಲ್ಲ ಅಂಥವನಿಂದ ಒಂದು ದಿನ ಇದ್ದಕ್ಕಿದ್ದ ಹಾಗೆ ನನಗೆ ಫೋನ್ ಬಂದಿತು. ಆಗ ‘ಅಬ್ಬ ನನಗೆ ಹೃದಯಾಘಾತ ಆಗುತ್ತಿದೆ, ನಿನಗೆ ತೊಂದರೆ ಕೊಡುತ್ತಿರುವವರು ಒಬ್ಬರು ಕಡಿಮೆ ಆಗುತ್ತಾರಲ್ಲ’ ಎಂದು ರೇಗಿಸಿದೆ. ಮಾತಿಗೆ ಮಾತು ಬೆಳೆದು, ‘ನಾನು ಸತ್ತರೆ ನನ್ನ ಶ್ರದ್ಧಾಂಜಲಿ ಹೇಗೆ ಆಗುವುದು?’ ಎಂಬ ಚರ್ಚೆ ಆರಂಭವಾಯಿತು. ಇದೆಲ್ಲಾ ನಡೆದದ್ದು ಕೊರೊನಾ ಹೊಡೆತದ ಮೊದಲು. ಈ ‘ಅಣಕು ಬರಹ’ಕ್ಕೆ ಅದೇ ನಾಂದಿ.

ನಾನು ಹೋದ ಕೂಡಲೇ ಮೊದಲು ಎಲ್ಲರಿಂದ ಫೋನಿನಲ್ಲಿ ಸುದ್ದಿ ಪ್ರಸಾರ, ನಂತರ ವಾಟ್ಸಪ್, ಎಫ್‌ಬಿ ಹೀಗೆ.. ನಂತರ ನಾನು ಅಭಿನಯಿಸಿದ ನಾಟಕ ತಂಡಗಳು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಬಹುದು. ಈ ಸಮಯದಲ್ಲಿ ಅದೂ ಸಾಧ್ಯವಿಲ್ಲ ಅನ್ನಿ. ಆದರೆ ಕಲ್ಪಿಸಿಕೊಳ್ಳುವುದಕ್ಕೆ ತೊಂದರೆ ಇಲ್ಲವಲ್ಲ!

ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ. ೧೯೮೭ರಲ್ಲಿ ಪ್ರತಿಭಾವಂತ ನಟ ಸತ್ಯಸಂಧ ನಿಧನರಾದಾಗ ರವೀಂದ್ರ ಕಲಾಕ್ಷೇತ್ರದ ಲೌಂಜ್‌ನಲ್ಲಿ ವಿಶಿಷ್ಟವಾದ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಅವರು ಅಭಿನಯಿಸಿದ ನಾಟಕಗಳ ಛಾಯಾಚಿತ್ರಗಳ ಜೊತೆಗೆ ಅವರು ಉಪಯೋಗಿಸುತ್ತಿದ್ದ ಸಾಮಗ್ರಿಗಳು, ಹೆಲ್ಮೆಟ್, ವಸ್ತುಗಳು.. ಹೀಗೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಗ ನಾನಿನ್ನೂ ಪದವಿ ತರಗತಿಯಲ್ಲಿ ಓದುತ್ತಿದ್ದೆ. ನನಗೆ ಆಗಲೇ ಈ ಯೋಚನೆ ಬಂದಿತ್ತು. ‘ಅಕಸ್ಮಾತ್ ನಾನು ಸತ್ತರೆ ನಾನು ಉಪಯೋಗಿಸುವ ಸಾಮಗ್ರಿಗಳನ್ನು ಮೊದಲೇ ಎತ್ತಿಟ್ಟಿರುತ್ತೇನೆ, ಇದೇ ರೀತಿ ವಿಶಿಷ್ಟವಾಗಿ ಶ್ರದ್ಧಾಂಜಲಿ ಮಾಡಬೇಕು’ ಎಂದು ಅಂದಿನ ಸಭೆಯ ಸಂಚಾಲಕರಿಗೆ ಹೇಳಿದ್ದೆ. ನಾನೇನು ಅಂಥ ದೊಡ್ಡ ಕಲಾವಿದೆ ಅಲ್ಲ, ಆದರೆ ಆಸೆ ಎನ್ನುವುದು ಇದೆಯಲ್ಲ…

ಇನ್ನು ಶ್ರದ್ಧಾಂಜಲಿ ಸಭೆಯಲ್ಲಿ ಬಹುತೇಕ ಯಾರೂ ನನ್ನನ್ನು ತೆಗಳುವುದಿಲ್ಲ ಎನ್ನುವುದು ಖಂಡಿತಾ. ಜೀವಂತವಿರುವಾಗ ಎಷ್ಟೇ ಹೀಗೆಳೆದರೂ ಸತ್ತ ಮೇಲೆ ಸ್ತುತಿಸುವುದು ಒಂದು ಪದ್ಧತಿ. ನಾನು ಹಲವಾರು ನಾಟಕ ತಂಡಗಳಲ್ಲಿ ನಟಿಯಾಗಿ ಭಾಗವಹಿಸಿರುವುದರಿಂದ, ಎಲ್ಲಾ ತಂಡದವರೂ ಸಭೆಯಲ್ಲಿ ಸೇರಬಹುದೆಂಬ ನಂಬಿಕೆ. ಅವರಾಡುವ ಮಾತುಗಳು ಹೀಗಿರಬಹುದು.. ‘ಇತ್ತೀಚೆಗೆ ತಾನೇ ಈಕೆಯ ಒಂದು ಪುಸ್ತಕ ಬಿಡುಗಡೆ ಆಗಿತ್ತು. ಇನ್ನೂ ಬರೆಯಬಹುದಿತ್ತು. ಆದರೆ ಸೋಮಾರಿತನದಿಂದ ಹೆಚ್ಚಾಗಿ ಬರೆಯಲು ಹೋಗಲಿಲ್ಲ. ನಾಟಕಗಳನ್ನು ನಿರ್ದೇಶಿಸಬಹುದಿತ್ತು, ಕೇವಲ ಅಭಿನಯಕ್ಕೆ ಸೀಮಿತವಾದಳು..’ ಹೀಗೆ ಹೇಳಬಹುದು. ಇನ್ನು ಕೆಲವರು ‘ಅತಿಯಾಗಿ ಮೆರೀತಾ ಇದ್ಲು, ಕಡೆಗೆ ಹೀಗಾಯ್ತು’ ಎಂದು ಮನಸ್ಸಿನಲ್ಲಿ ಅಂದುಕೊಳ್ಳಬಹುದು. ಈ ರೀತಿಯ ಸ್ನೇಹಿತರು ನನಗಿಲ್ಲ. ಆದರೂ ಒಂದು ಅನಿಸಿಕೆ ಅಷ್ಟೇ.

ಭಾರತಯಾತ್ರ ಕೇಂದ್ರದವರು ಅಂತರ ಕಾಲೇಜು ನಾಟಕ ಸ್ಪರ್ಧೆಗಳನ್ನು ನಡೆಸುತ್ತಿದ್ದಿದ್ದರೆ ನನ್ನ ಹೆಸರಿನಲ್ಲಿ ಒಂದು ಪ್ರಶಸ್ತಿ ಕೊಡುತ್ತಿದ್ದರು. ಈಗ ಅದೂ ಇಲ್ಲ. ಹೋಗಲಿ ಬಿಡಿ, ಅತಿಯಾಸೆ ಸಲ್ಲದು.

ಕಾಲೇಜಿನಲ್ಲಿ ಒಂದು ಶ್ರದ್ಧಾಂಜಲಿ ಸಭೆ ನಡೆಸುತ್ತಾರೆ. ಆಡಳಿತ ಮಂಡಲಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರೆಲ್ಲಾ ಒಂದು ನಿಮಿಷ ಮೌನ ಆಚರಿಸುತ್ತಾರೆ. ಒಬ್ಬಿಬ್ಬರು ಕಣ್ಣೀರು ಮಿಡಿಯಬಹುದು. ವಿದ್ಯಾರ್ಥಿಗಳೂ ಶೋಕಿಸುತ್ತಾರೆ. ನಮ್ಮ ಕಾಲೇಜಿನಲ್ಲಿ ನಿವೃತ್ತಿಯಾದಾಗಲೇ ಅಳುತ್ತಾರೆ, ಇನ್ನು ಬಾರದ ಲೋಕಕ್ಕೆ ಹೋದರೆ ಗ್ಯಾರಂಟಿ ಅಳುತ್ತಾರೆ. ಶೋಕಸಭೆಯಲ್ಲಿ ‘ಕನ್ನಡ ಹಬ್ಬವನ್ನಲ್ಲದೆ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಸತತವಾಗಿ ಮಾಡುತ್ತಿದ್ದಳು, ‘ನ್ಯಾಕ್’ಗಾಗಿ ಕೆಲಸ ಮಾಡಿದ್ದರು. ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಒತ್ತಾಯಿಸುತ್ತಿದ್ದಳು.. ಆಗಾಗ ಸಿಡುಕುತ್ತಿದ್ದಳು..’ ವಗೈರೆ.. ವಗೈರೆ ಮಾತುಗಳು ಬರಬಹುದು.

ಕಾಲೇಜಿನ ನಿಯತಕಾಲಿಕೆ ಮತ್ತು ಉರ್ದು ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗುತ್ತದೆ. ಒಂದು ಸಂತೋಷದ ವಿಚಾರ ಎಂದರೆ ನನ್ನ ಉಪನ್ಯಾಸಕ ಸ್ಥಾನವು ಇನ್ನೊಬ್ಬರಿಗೆ ಸಿಗುತ್ತದೆ. ಎಷ್ಟೋ ಕನ್ನಡ ಉಪನ್ಯಾಸಕರಿಗೆ ಅರ್ಹತೆ ಇದ್ದರೂ ಪೂರ್ಣಾವಧಿ ಕೆಲಸ ಇಲ್ಲದೆ ಒದ್ದಾಡಿರುವುದನ್ನು ನೋಡಿರುತ್ತೇವೆ. ಅಂಥವರಿಗೆ ಸದವಕಾಶ. ‘ನೀನ್ಯಾರಿಗಾದೆಯೋ..’ ಎನ್ನುವಂತಿಲ್ಲ. ಒಬ್ಬ ನಿರುದ್ಯೋಗಿಗೆ ಉದ್ಯೋಗ ದೊರಕಿದಂತಾಗುತ್ತದೆ. ಇನ್ನು ಕನ್ನಡ ಅಧ್ಯಾಪಕರ ಸಂಘದವರು ಮೌಲ್ಯಮಾಪನದ ಸಮಯದಲ್ಲಿ ಒಂದು ಶ್ರದ್ಧಾಂಜಲಿ ಸಭೆ ನಡೆಸುತ್ತಾರೆ.

ಒಂದೆರಡು ದಿನ ಜನ ನನ್ನನ್ನು ಸ್ಮರಿಸಿಕೊಳ್ಳುತ್ತಾರೆ. ಈ ಮಾತು ಸುಳ್ಳಲ್ಲ. ಆದರೆ ಟೀವಿ ಮತ್ತು ದಿನಪತ್ರಿಕೆಗಳಲ್ಲಿ ಸುದ್ದಿಯಾಗುವಷ್ಟು ನಾನು ಜನಪ್ರಿಯಳಲ್ಲ. ನಾನು ಸದಸ್ಯೆ ಆಗಿರುವ ಸಂಘಗಳ ಪತ್ರಿಕೆಗಳಲ್ಲಿ ಒಂದು ಶೋಕ ಸುದ್ದಿ ಕೊಡುತ್ತಾರೆ.

ನನ್ನ ಎಷ್ಟೋ ಕೆಲಸಗಳನ್ನು ಮತ್ತು ಬಾಕಿ ಇರುವ ಯೋಜನೆಗಳನ್ನು ‘ಹ್ಯಾಮ್ಲೆಟ್’ ಪಾತ್ರದಂತೆ ಮುಂದೆ ಹಾಕುವಲ್ಲಿ ನಾನು ನಿಸ್ಸೀಮಳು. ನಾನು ಹೇಳಬೇಕೆಂದಿರುವ ಎಷ್ಟೋ ವಿಚಾರಗಳು ನನ್ನಲ್ಲಿಯೇ ಅಡಗಿಹೋಗುತ್ತವೆ. ಅದರಿಂದ ಯಾರಿಗೂ ನಷ್ಟ ಇಲ್ಲ. ನಾನು ಸಮಾಜಮುಖಿ ಕೆಲಸಗಳಲ್ಲಿ ಭಾಗಿ ಆಗುವುದಿಲ್ಲ ಎನ್ನುವ ಸಮಾಜಕ್ಕೆ ನನ್ನ ಸಾವಿನಿಂದ ತೊಂದರೆ ಇಲ್ಲ.

ಆದರೆ ಒಂದಂತೂ ಸತ್ಯ. ಸಾವು ನಮ್ಮ ಕೈಯಲ್ಲಿ ಇರದಿದ್ದರೂ ಈ ಸಮಯದಲ್ಲಿ ಮಾತ್ರ ಯಾರೂ ಸಾಯಬಾರದು ಎಂದು ನನ್ನ ಆಸೆ. ಒಂದು ಆಂಬ್ಯುಲೆನ್ಸ್, ಶವವಾಹನ, ಶವಾಗಾರಗಳಿಗೆ ಕಾಯುವ ಪರಿಸ್ಥಿತಿ ಯಾರಿಗೂ ಬರಬಾರದು. ಸತ್ತಮೇಲೂ ದೇಹಕ್ಕೆ ಮುಕ್ತಿಯಿಲ್ಲ ಎಂದರೆ ಅದರಂತಹ ದುರಂತ ಮತ್ತೊಂದಿಲ್ಲ.

ಒಟ್ಟಿನಲ್ಲಿ ನಾನು ಭೋಜರಾಜನಲ್ಲ, ನನಗೆ ಕವಿ ಕಾಳಿದಾಸನಂತಹ ಮಿತ್ರರೂ ಇಲ್ಲ. ಹೀಗಾಗಿ ನನ್ನ ‘ಚರಮಗೀತೆ’ಯನ್ನು ನಾನೇ ಬರೆದುಕೊಂಡು, ನನ್ನಿಷ್ಟವನ್ನು ನಾನೇ ಪೂರೈಸಿಕೊಂಡಿರುವೆ. ಇಂತಹ ಭೀಕರ ಸಮಯದಲ್ಲಿ ಈ ಬರಹ ಹೊರಬಂದಿದೆ. ಕಳೆದ ತಿಂಗಳು ನನ್ನಲ್ಲಿ ಹುದುಗಿದ್ದ ಅನ್ನಿಸಿಕೆಗಳು ಈಗ ಕೃತಿರೂಪ ಪಡೆದಿವೆ. ಸಾವು ವಿನೋದವಲ್ಲ, ಆದರೆ ಅನಿವಾರ್ಯ.

‍ಲೇಖಕರು Avadhi

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

 1. Vasundhara k m

  ಓದುವಾಗ ತಮಾಶೆ ಅನ್ಸಿದ್ರೂ… ಮನಸ್ಸು ಕಸಿವಿಸಿಗೆ ಒಳಗಾಯ್ತು…

  ಪ್ರತಿಕ್ರಿಯೆ
  • ಎಂ ಎಸ್ ವಿದ್ಯಾ

   ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ,ಸಾವು ಅನಿವಾರ್ಯ ಅಲ್ಲವೇ??

   ಪ್ರತಿಕ್ರಿಯೆ
 2. Sumathi

  What is this ವಿದ್ಯಾ ಅಕ್ಕಾ.. ಆಕಾಶವಾಣಿಯ ಕಲಾವಿದೆ ಆಗಿ..
  ಪಾರ್ವತಿ ಶ್ರೀಹರಿ ಮಗಳಾಗಿ.. ಆಕಾಶವಾಣಿಯ ಸುದ್ದಿಯಲ್ಲಿ ಹೇಳಬಹುದು.. ಅನ್ನಿಸಲಿಲ್ವಾ…
  ದೇಹಕ್ಕೆ ಮುಕ್ತಿ ಸಿಗುತ್ತೋ ಇಲ್ಲವೋ.. ನಮ್ಮ ಆಸೆಗಳು ಸಾವಿನ ಆಚೆಗೂ ಇರುತ್ತವೆ ನೋಡಿ..
  (LIGHTER VEIN PLEASE.)

  ಎಲ್ಲರಿಗೂ ಒಳಿತಾಗಲಿ.

  ಪ್ರತಿಕ್ರಿಯೆ
  • ಎಂ ಎಸ್ ವಿದ್ಯಾ

   ಸುಮತಿ,ನನಗೆ ಕುತೂಹಲ ಅಷ್ಟೇ,ಸಾವಿನ ಆಚೆಗೆ ಖಂಡಿತ ಏನನ್ನೂ ಬಯಸುವುದಿಲ್ಲnನಾವೇ ಇಲ್ಲವಾದ್ದ ಮೇಲೆ ಆಸೆ ಎಂಥದ್ದು

   ಪ್ರತಿಕ್ರಿಯೆ
 3. Sugandhi Gadadhar

  Very touching – and very witty. You made me smile and teary-eyed at the same time. Beautifully written, Dr. Vidya. It has got me thinking of a lot of things – about you, about the people who mean a lot to me, about life itself. Thank you for writing this!

  ಪ್ರತಿಕ್ರಿಯೆ
  • Sowmya

   ಬಹಳ ಚೆನ್ನಾಗಿದೆ ಮೇಡಂ….. ನೀವು ನೂರು ಕಾಲ ಚೆನ್ನಾಗಿರಬೇಕು ಎಂದು ಬಯಸುವೆ…

   ಪ್ರತಿಕ್ರಿಯೆ
   • Vinutha Simha

    Very nice
    ಎಲ್ಲೆಲ್ಲೂ ಸಾವಿನ ಸುದ್ದಿಯನ್ನೇ ಕೇಳುತ್ತಿರುವ ಈ ಸಮಯದಲ್ಲಿ, ಸಾವಿನ ಬಗೆಗಿನ ಬೇರೆ ಆಯಾಮವನ್ನು ಬಹಳ ತಿಳಿಯಾಗಿ ಚಿತ್ರಿಸಿದ್ದೀರಿ….a light-hearted easy read

    ಪ್ರತಿಕ್ರಿಯೆ
 4. Purushothama

  ಹೀಗೂ ಉಂಟೆ. ಅಲ್ಲ, ಬರಿಬೇಕು ಅಂತ ಹೇಳಿದ್ದರೆ ನಾ ಮುಂದು ಅಂತ ಕ್ಯೂ ನಿಲ್ಲಕ್ಕೆ ಬೇಜಾನ್ ಜನ ಇದ್ದಾಗ ನೀವೇ ಬರಕೊಂಡು ಬಿಟ್ಟರೆ ಹ್ಯಾಗೆ.

  Anyway this gives hint for those who are interested in writing. I am sure you will not give them the opportunity for that any time soon.

  ಪ್ರತಿಕ್ರಿಯೆ
 5. Padmashree Belavadi

  Vidya, ಚರಮ ಗೀತೆ is very heart touching ofcourse I felt a tinge of naughtiness in it!

  ಪ್ರತಿಕ್ರಿಯೆ
 6. Lokeshwarappa KB

  ಓದಿದೆ. ಚೆನ್ನಾಗಿದೆ. ಚುರುಕಾದ, ಲವಲವಿಕೆಯ ಭಾಷೆ. ಅಭಿನಂದನೆಗಳು.
  ನೀವು ಭೋಜರಾಜನ ವಂಶಸ್ಥರಾ? ,

  ಪ್ರತಿಕ್ರಿಯೆ
  • ಡಾ.ಎಂ.ಎಸ್.ವಿದ್ಯಾ

   ಎಲ್ಲರಿಗೂ ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.ನನ್ನ ಲೇಖನವನ್ನು ಪ್ರಕಟಿಸಿದ ಅವಧಿ ತಂಡದವರಿಗೂ ದೀರ್ಘ ದಂಡ ಪ್ರಣಾಮಗಳು

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: