ಮಾಂತ್ರಿಕ ಶಕ್ತಿಯ ಚಳವಳಿಗಳ ಕಾಲ..
ಚಂದ್ರಕಾಂತ ವಡ್ಡು
**
ಎಂಬತ್ತರ ದಶಕದ ಆರಂಭಿಕ ಕಾಲ. ಗುಂಡೂರಾಯರು ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದರು. ಸರ್ಕಾರದ, ವ್ಯವಸ್ಥೆಯ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ದಲಿತ, ರೈತ, ಕನ್ನಡ ಚಳವಳಿಗಳು ನಿಗಿನಿಗಿ ಕೆಂಡದಂತಿದ್ದವು. ನಾನು ಬಳ್ಳಾರಿಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ; ಲಂಕೇಶ್, ಕಾರಂತ, ತೇಜಸ್ವಿ ಹಾಗೂ ಅಗ್ಗದ ಬೆಲೆಯ ಸೋವಿಯತ್ ಪ್ರಕಟಣೆಗಳ ಓದುಗ. ಭಾವಗೀತೆಗಳ ಕೇಳುಗ, ವಾಚಕರ ವಾಣಿ ಲೇಖಕ!
ಈಗ ಸುದ್ದಿಯಲ್ಲಿರುವ ಬಳ್ಳಾರಿ ಸೆಂಟ್ರಲ್ ಜೈಲ್
ಒಂದು ದಿನ ಕಾಲೇಜಿನಿಂದ ಹಿಂದಿರುಗುವಾಗ ಮಾರ್ಗಮಧ್ಯೆ ಕನ್ನಡ ಹೋರಾಟಗಾರರ ಗುಂಪು ಗೋಕಾಕ್ ವರದಿ ಜಾರಿಗಾಗಿ ಘೋಷಣೆ ಕೂಗುತ್ತಿದ್ದರು. ನನ್ನ ನಿರ್ದೇಶನದ ಹಂಗಿಲ್ಲದೇ ನನ್ನ ನೀಲವರ್ಣದ ಅಟ್ಲಾಸ್ ಸೈಕಲ್ಲು ಸತ್ಯಾಗ್ರಹದ ಶಾಮಿಯಾನ ತಲುಪಿತು. ನಾನೂ ಗೋಕಾಕ್ ಚಳವಳಿಯ ಭಾಗವಾದೆ. ಒಂದು ಹಂತದಲ್ಲಿ ಪೊಲೀಸರು ಪ್ರತಿಭಟನಾಕಾರರ ಬಂಧನಕ್ಕೆ ಮುಂದಾದರು. ನಮ್ಮನ್ನೆಲ್ಲ ತುಂಬಿಕೊಂಡ ಪೊಲೀಸ್ ವ್ಯಾನು ಕೋರ್ಟು ಮುಂದೆ ನಿಂತಿತು. ನ್ಯಾಯಾಧೀಶರು ಮೂರು ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿದಾಗ ಒಳಗೊಳಗೆ ಎಂತಹದೋ ದುಗುಡ, ತಳಮಳ, ಅವ್ಯಕ್ತ ಹೆಮ್ಮೆಯ ಭಾವ. ಮುಂದೆ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿದ್ದಾಯ್ತು.
ಅದೇ ವೇಳೆ ಶಿವಮೊಗ್ಗ ಭಾಗದ ರೈತ ಹೋರಾಟಗಾರರನ್ನು ಬಂಧಿಸಿದ ಸರ್ಕಾರ ಅವರನ್ನೂ ನಮ್ಮ ಜೈಲಿನಲ್ಲೇ ಇರಿಸಿತ್ತು. ಆ ತಂಡದಲ್ಲಿದ್ದರು ಕಡಿದಾಳು ಶಾಮಣ್ಣ. ಬಳ್ಳಾರಿಯ ಬಯಲು ಭೂಮಿಯಲ್ಲಾಗಲೀ, ಬೆಟ್ಟಗುಡ್ಡಗಳಲ್ಲಾಗಲೀ, ರೈತರ ಹೆಗಲ ಮೇಲಾಗಲೀ ಹಸಿರನ್ನೇ ಕಂಡರಿಯದ ನಮಗೆ ಈ ರೈತ ಸಂಘದ ಸಂಗಾತಿಗಳ ಸಂಪರ್ಕ ಹೊಸ ಅನುಭವ, ಬೆರಗು, ಕುತೂಹಲಕ್ಕೆ ಕಾರಣವಾಗಿತ್ತು. ಅವರ ತರ್ಕಬದ್ಧ ಮಾತುಗಾರಿಕೆ, ಸಂಘಟನೆಯ ತಾತ್ವಿಕ ತಳಹದಿ, ದಿಟ್ಟ ನಿರ್ಧಾರಗಳು ತಿಳಿಯುತ್ತಾ ಹೋದಂತೆ ನಾನಂತೂ ಶಾಮಣ್ಣನವರ ಅಭಿಮಾನಿಯೇ ಆಗಿಹೋದೆ.
ರೈತ ಮುಖಂಡ ಕಡಿದಾಳು ಶಾಮಣ್ಣ
ನಂತರ ಶಿವಮೊಗ್ಗೆಯ ಹೊಂಬಾಳೆ ತಂಡದ ರೈತಗೀತೆಗಳ ಕ್ಯಾಸೆಟ್ಟುಗಳನ್ನು ತರಿಸಿಕೊಂಡೆ. ದಲಿತ ಹೋರಾಟದ ಹಾಡುಗಳೂ ದಕ್ಕಿದವು. ನಾರಿಹಳ್ಳದ ದಂಡೆ ಮೇಲಿನ ನನ್ನೂರಿನಲ್ಲಿ ಸಮಯ ಸಂದರ್ಭ ಯಾವುದೇ ಇರಲಿ, ಧ್ವನಿವರ್ಧಕಗಳಲ್ಲಿ ಈ ಹಾಡುಗಳನ್ನು ಹಾಕಿಸಿ ರೋಮಾಂಚನಗೊಳ್ಳುತ್ತಿದ್ದೆ. ಹೋರಾಟದ ಯಾವ ಹಿನ್ನೆಲೆ ಮುನ್ನೆಲೆ ಇಲ್ಲದ ನನ್ನಂತಹ ಸಾಮಾನ್ಯ ವಿದ್ಯಾರ್ಥಿಯನ್ನೂ ಈ ಪರಿ ಆವರಿಸುವ ಮಾಂತ್ರಿಕ ಶಕ್ತಿ ಆಗಿನ ಚಳವಳಿಗಳಿಗೆ ಇತ್ತು. ಆ ಚಳವಳಿಗಳ ಅಂತಹ ಕಾವು ನಮ್ಮೆದುರೇ ತಣ್ಣಗಾದ, ಸೆಳೆತ ಕಳೆದುಹೋದ ವಿಚಿತ್ರ ಸನ್ನಿವೇಶಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಒಂದು ಪೀಳಿಗೆಯ ಮನಸ್ಸುಗಳನ್ನು ಬಳಿಸೆಳೆದು ಪ್ರಭಾವಿಸಿದ ದಿಟ್ಟ ನಾಯಕತ್ವ, ತಾಯಿ ಕರುಳಿನ ಸಂಘಟನೆಗಳು ಇಷ್ಟು ವೇಗದಲ್ಲಿ ಇತಿಹಾಸ ಸೇರಿದ್ದು ಅಥವಾ ಹೀನ ಸ್ಥಿತಿ ತಲುಪಿರುವುದು ದುರಂತ!
0 ಪ್ರತಿಕ್ರಿಯೆಗಳು