ಜಗದೀಶ್ ಕೊಪ್ಪ
ಇದು ಸುಮಾರು 16 ವರ್ಷಗಳ ಹಿಂದಿನ ಘಟನೆ. ನಾನಿನ್ನೂ ಉದಯ ಟಿ.ವಿ. ಸೇರಿರಲಿಲ್ಲ. ಪತ್ರಿಕೋದ್ಯಮ ಬಿಟ್ಟು ನನ್ನೂರು ಕೊಪ್ಪದಲ್ಲಿ ವಾಸವಾಗಿದ್ದೆ. ಮಗನ ಹೆಸರಿನಲ್ಲಿ ಅನನ್ಯ ಪ್ರಿಂಟರ್ಸ್ ಎಂಬ ಪ್ರಿಂಟಿಂಗ್ ಪ್ರೆಸ್ ಹಾಕಿಕೊಂಡಿದ್ದೆ. ( ಅದು ಈಗಲೂ ಇದೆ) ಒಂದು ದಿನ ಬೆಳಿಗ್ಗೆ ನನ್ನ ಗೆಳೆಯ ಜೋಗೀಗೌಡ ಎಂಬುವರ ಅಂಗಡಿಯಲ್ಲಿ ಚಹಾ ಕುಡಿದು ಸಿಗರೇಟ್ ಸೇದುತ್ತಾ ಕುಳಿತಿದ್ದೆ. ದಲಿತ ಜನಾಂಗದ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ತಂಬೂರಿ ಮೀಟುತ್ತಾ, ಭಿಕ್ಷೆ ಬೇಡುತ್ತಾ ಅಂಗಡಿ ಬಳಿ ಬಂದವನು” ಶಿವನೇ ನಿನ್ನಾಟ ಬಲ್ಲವರ್ ಯಾರೋ ” ಎನ್ನುವ ತತ್ವ ಪದವನ್ನು ಹಾಡತೊಡಗಿದ.
ನನಗೆ ಆ ದಂಪತಿಗಳ ತತ್ವ ಪದ ಕೇಳಿ ರೋಮಾಂಚನವಾಯಿತು. ಅವರಿಬ್ಬರನ್ನೂ ಮನೆಗೆ ಕರೆದೊಯ್ದು ಒಂದಿಷ್ಟು ತತ್ವ ಪದಗಳನ್ನು ಹಾಡಿಸಿ,, ಊಟ ಹಾಕಿಸಿ, ಕೈಗೆ 50 ರೂಪಾಯಿ ಕೊಟ್ಟು ಕಳಿಸಿದ್ದೆ. ಅವರಿಬ್ಬರ ಫೋಟೊ ತೆಗೆದುಕೊಂಡು, ಮುಂದಿನ ಗುರುವಾರ ಮಂಡ್ಯ ನಗರಕ್ಕ್ಕೆ ಬನ್ನಿ ನಿಮ್ಮನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಕಾಳೇಗೌಡ ನಾಗವಾರರಿಗೆ ಪರಿಚಯ ಮಾಡಿಸಿಕೊಡುತ್ತೀನಿ ಎಂದು ಹೇಳಿ ಕಳಿಸಿಕೊಟ್ಟೆ.
ಮಂಡ್ಯ ನಗರದಲ್ಲಿ ಜಾನಪದ ಅಕಾಡೆಮಿಯ ಸಮಾರಂಭ ಇದ್ದ ದಿನಕ್ಕೆ ಸರಿಯಾಗಿ ಪ್ರಕಟವಾಗುವಂತೆ ” ಆಂದೋಲನ ದಿನಪತ್ರಿಕೆ”ಯಲ್ಲಿ “ಹಾಡುವ ಹಕ್ಕಿಗಳಿಗೆ ಗೂಡಿಲ್ಲ”ಎಂಬ ಲೇಖನವನ್ನು ಬರೆದಿದ್ದೆ. ಸಂಪಾದಕರಾದ ರಾಜಶೇಖರಕೋಟಿಯವರು ಲೇಖನವನ್ನು ಮಂಡ್ಯ, ಮೈಸೂರು, ಮತ್ತು ಚಾಮರಾಜನಗರ ಆವೃತ್ತಿಗಳ ಮುಖಪುಟದಲ್ಲಿ ಆ ಲೇಖನವನ್ನು ಪ್ರಕಟಿಸಿದ್ದರು.
ಪ್ರಶಸ್ತಿ ಸಮಾರಂಭದ ದಿನ . ಮಂಡ್ಯನಗರಕ್ಕೆ ಹೋಗಿ ಪ್ರವಾಸಿ ಮಂದಿರದಲ್ಲಿದ್ದ ಕಾಳೇಗೌಡರಿಗೆ ಬಸರಾಳು ಗ್ರಾಮದ ಹರಿಜನಕೇರಿಯ ಗುಡಿಸಲೊಂದರಲ್ಲಿ ವಾಸಿಸುತ್ತಾ, ಗುರುಬೋಧನೆ ತೆಗೆದುಕೊಂಡ ಫಲವಾಗಿ ಮದ್ಯ- ಮಾಂಸಹಾರ ತ್ಯೆಜಿಸಿ ಹಣೆಗೆ ವಿಭೂತಿ ಬಳಿದುಕೊಂಡು, ಊರೂರು ಅಲೆದು ಬದುಕುತ್ತಿರುವ ದಂಪತಿಗಳ ಕಂಠಸಿರಿ ಮತ್ತು ಅವರ ಎದೆಯೊಳಗೆ ಇದ್ದ ಅಸಂಖ್ಯಾತ ಹಾಡುಗಳ ಬಗ್ಗೆ ವಿವರಿಸಿದೆ. ಗೌಡರು ಆಗಲೇ ಪತ್ರಿಕೆಯಲ್ಲಿ ವರದಿಯನ್ನು ಓದಿದ್ದರು. ಅವರ ಮುಂದೆ ಒಂದೆರಡು ಹಾಡು ಹಾಡಿದಾಗ ಕಾಳೇಗೌಡರಿಗೆ ಅರಿವಿಲ್ಲದಂತೆ ಕಣ್ಣಿನಲ್ಲಿ ನೀರು ಸುರಿಯತೊಡಗಿತು.
ದಂಪತಿಗಳನ್ನು ಸಮಾರಂಭಕ್ಕೆ ಕರೆದೊಯ್ದು ಅವರಿಂದ ಪ್ರಾರ್ಥನೆ ಗೀತೆ ಹಾಡಿಸಿದರು. ಅವರ ಕೈಗೆ ಒಂದು ಸಾವಿರ ರೂಪಾಯಿ ನೀಡಿದರು. ಅದೇ ವರ್ಷ ತಂಬೂರಿ ಜವರಯ್ಯ ದಂಪತಿಗಳಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಿಸಿದರು. ಪ್ರಶಸ್ತಿ ಬಂದ ನಂತರ ಈ ದಂಪತಿಗಳಿಗೆ ಭಿಕ್ಷೆ ಬೇಡುವ ಕಾಯಕ ಕಡಿಮೆಯಾಯಿತು. ಕಾರ್ಯಕ್ರಮಗಳಿಗೆ ಆಹ್ವಾನ ಬರತೊಡಗಿತು. ಇದೀಗ ಅವರು ಓಂದಿಷ್ಟು ನೆಮ್ಮದಿಯ ಬದುಕನ್ನು ಸಹ ಕಟ್ಟಿಕೊಂಡಿದ್ದಾರಂತೆ.
ಈ ದಿನ ಸಂಜೆ ವಾಕ್ ಮುಗಿಸಿ ಮನೆಗೆ ಬಂದು ಸ್ನಾನ ಮಾಡಿ, ಚಹಾ ಕುಡಿಯುತ್ತಿದಂತೆ ಮೊಬೈಲ್ ಕರೆ ಬಂತು’ ಹಲೋ ಎನ್ನುತ್ತಿದ್ದಂತೆ ” ನಾನು ಸೋಮಿ ತಂಬೂರಿ ಜವರಯ್ಯ ಬೆಂಗಳುರಿನಿಂದ ಮಾತನಾಡ್ತಾ ಇದ್ದೀನಿ. ಕೃಷಿ ಇಲಾಖೆ ಕಾರ್ಯಕ್ರಮಕ್ಕೆ ಹಾಡಕ್ಕೆ ಬಂದಿದ್ದೆ. ಇಲ್ಲಿ ಅಧಿಕಾರಿಗಳ ಜೊತೆ ಮಾತಾಡ್ತಾ ನಿಮ್ಮೆಸರು ಹೇಳ್ದೆ ಅವರು ನಿಮ್ಮ ನಂಬರ್ ಕೊಟ್ರು” ಎಂದಾಗ ನನಗೆ ಆಶ್ಚರ್ಯವಾಯಿತು. ಹೇಗಿದ್ದೀಯಾ ಜವರಯ್ಯ? ಎಂದೆ. ನಿಮ್ಮೆಸ್ರು ಹೇಳ್ಕಂಡು ಅನ್ನ ಉಣ್ತಾ ಇವ್ನಿ ಸೋಮಿ” ಎಂದಾಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ಬಂತು.
ಯಾವ ಜನ್ಮದ ಋಣವೋ ಕಾಣೆ ನನ್ನ ಕಷ್ಟ ಮತ್ತು ಹೋರಾಟದ ಬದುಕಿನ ನಡೆವೆಯೂ ಹಲವರಿಗೆ ನಾನು ನೆರವಾಗಿದ್ದುಂಟು. ಅವರೆಲ್ಲರ ಇಂತಹ ಹಾರೈಕೆಯ ಫಲವಾಗಿ ನನ್ನ ಬದುಕಿನ ಈ ಮುಸ್ಸಂಜೆಯ ದಿನಗಳಲ್ಲಿ ನಾನು ಮತ್ತು ನನ್ನ ಕುಟುಂಬ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಾಗಿದೆ.
0 ಪ್ರತಿಕ್ರಿಯೆಗಳು